ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪ್ರೀತಿ ಮತ್ತು ಸಹಾನುಭೂತಿಯ ಕಾವ್ಯ

Last Updated 21 ಸೆಪ್ಟೆಂಬರ್ 2020, 7:19 IST
ಅಕ್ಷರ ಗಾತ್ರ

ಯೋಗೇಶ್‌ ಮೈತ್ರೇಯ ಅವರ ಇಂಗ್ಲಿಷ್‌ ಕವಿತೆಗಳನ್ನು ಸಂವರ್ತ ‘ಸಾಹಿಲ್‌’ ಕನ್ನಡಕ್ಕೆ ತಂದಿದ್ದಾರೆ. ಮರಾಠಿ ಭಾಷೆಯ ಯೋಗೇಶ್‌ ಇಂಗ್ಲಿಷ್‌ನಲ್ಲಿ ಕವಿತೆಗಳನ್ನು ಬರೆಯುವುದು ಇಂಗ್ಲಿಷ್‌ ಭಾಷೆಯ ಅನಿವಾರ್ಯತೆ ಮತ್ತು ಅದರ ರಾಜಕಾರಣವನ್ನು ಬಲ್ಲವರಿಗೆ ಹಲವು ಸಂಗತಿಗಳನ್ನು ಹೇಳಬಲ್ಲದು. ಭಾರತದ ದಲಿತ ಲೇಖಕನೊಬ್ಬ ಇಂಗ್ಲಿಷ್‌ನಲ್ಲಿ ಬರವಣಿಗೆ ಮಾಡುತ್ತಿರುವುದು ಬಹುಮುಖ್ಯವಾದ ವಿದ್ಯಮಾನವೇ ಆಗಿದೆ. ತಮ್ಮದೊಂದು ಕವಿತೆಯಲ್ಲಿ – ‘ರಾಜಕೀಯ:/ ಎಲ್ಲರಿಗೂ ತಮ್ಮತಮ್ಮ ಆತ್ಮರಕ್ಷಣೆಗೆಂದು/ ಮತ್ತು ಅಗತ್ಯ ಬಿದ್ದಲ್ಲಿ/ ದಾಳಿ ಮಾಡುವ ಹಕ್ಕಿದೆ./ಹಾಗಾಗಿ ನಾನು ಬರೆಯುತ್ತೇನೆ/ ಆದರೆ ನನ್ನ ಮಾತೃಭಾಷೆಯಲ್ಲಲ್ಲ.’ (ಕವಿತೆ–31) ಎನ್ನುವ ಕವಿ ತಮ್ಮ ಇನ್ನೊಂದು ಕವಿತೆಯಲ್ಲಿ ತನ್ನ ಅಪ್ಪ ಅವನ ಅಪ್ಪ ಕಲಿಸಿದ ಭಾಷೆಯಲ್ಲಿ ಹಾಡುತ್ತಿದ್ದ. ಆದರೆ, ಇಂಗ್ಲಿಷ್‌ನಲ್ಲಿ ಬರೆದ ನಾನು ಅವನ ಹಾಡನ್ನು ಕೇಳಿಸಿಕೊಳ್ಳದೇ ಹೋದೆ. ನನಗೆ ಮುಂದೆ ಮಕ್ಕಳು ಹುಟ್ಟಿದರೆ ಯಾವ ಭಾಷೆಯಲ್ಲಿ ಹಾಡಲಿ?(ಕವಿತೆ–44) ಎಂದು ಕೇಳುತ್ತಾರೆ. ಇದು ಹಾಡು ಕಳೆದುಕೊಂಡ ಕವಿಯ ಸಂಕಟವೆ? ಅಥವಾ ಇಂಗ್ಲಿಷ್‌ಗೆ ತಮ್ಮನ್ನು ಅಡವಿಟ್ಟ, ಆ ಮೂಲಕ ತಮ್ಮ ಭಾವಕೋಶ ಮತ್ತು ಹಾಡುಗಳನ್ನು ಕಳೆದುಕೊಂಡ ಎಲ್ಲರ ನೋವೆ? ಕವಿ ಇದ್ಯಾವುದಕ್ಕೂ ಕವಿತೆಯಲ್ಲಿ ಉತ್ತರ ಕೊಡುವುದಿಲ್ಲ ಮಾತ್ರವಲ್ಲ, ಅದಕ್ಕೆ ಮುಖಾಮುಖಿಯಾಗುವುದೂ ಇಲ್ಲ. ಅವೆಲ್ಲ ಸದ್ಯದ ಪ್ರತಿಕ್ರಿಯೆ, ಸ್ಪಂದನೆಗಳಾಗಿ ಮಾತ್ರ ದಾಖಲಾಗುತ್ತವೆ. ಇದನ್ನು ಈ ಕಾಲದ ವೈರುದ್ಧ್ಯವನ್ನಾಗಿಯೂ ನೋಡಬಹುದು.

ದಲಿತ ಕಾವ್ಯ ಎಂದೊಡನೆ ಶೋಷಣೆ, ತುಳಿತ, ಅವಮಾನ, ಅಸಮಾನತೆ ಇತ್ಯಾದಿ ಪದಗಳು ಕಣ್ಣಮುಂದೆ ಬಂದುಹೋಗಬಹುದು. ಹಾಗೆ ಸಿದ್ಧ ವ್ಯಾಖ್ಯಾನಕ್ಕೆ ಸಿಗಬಹುದಾದ ಕವಿತೆಗಳು ಇಲ್ಲಿ ಇಲ್ಲ. ಯೋಗೇಶ್‌ ಕಾವ್ಯ ತಲೆಮಾರುಗಳ ನೆನಪುಗಳನ್ನು, ನೆನಪಿನ ಇತಿಹಾಸವನ್ನು ದಾಖಲಿಸುತ್ತದೆ. ಮಾನವೀಯವಾದ ಅವರ ಕಾವ್ಯವು ಪ್ರೀತಿ, ತಾಯ್ತನವನ್ನು ಹೆಚ್ಚಾಗಿ ಹುಡುಕುತ್ತದೆ. ಪ್ರೀತಿ ಮತ್ತು ಸಹಾನುಭೂತಿಯೇ ಅವರ ಕಾವ್ಯವನ್ನು ಕಟ್ಟಿದ ಎಳೆಗಳು ಎನ್ನಬಹುದು.

‘ನನ್ನಜ್ಜನ ಬಳಿ ಸುತ್ತಿಗೆ ಇತ್ತು

ನನ್ನಪ್ಪನ ಕೈಯಲ್ಲಿ ಗಾಲಿ

ನನ್ನ ಕೈಯಲ್ಲಿ ಲೇಖನಿ ಇದೆ

ಆದರೆ ನಾವು ಬರೆಯುತ್ತಿರುವುದು ಮಾತ್ರ ಅದನ್ನೇ...

ನಮ್ಮ ನಮ್ಮ ತಾಯಿಯಿಂದ ಪಡೆದ ದನಿ

ನಮ್ಮ ಬದುಕಿನ ಇತಿಹಾಸದಲ್ಲಿ ಕಾಣೆಯಾದ ದನಿ.’(ಕವಿತೆ–54) ಎನ್ನುತ್ತಾರೆ. ತಾಯಿಯಿಂದ ಪಡೆದ ದನಿ ಕಾವ್ಯದಲ್ಲಿ ಮುಂದುವರಿಯುವುದಾದರೆ ಅದರ ಸ್ವರೂಪ ಬೇರೆಯಾಗಿರುವುದು ಸಾಧ್ಯ. ಹಾಗೆ ಯೋಗೇಶ್‌ ಕಾವ್ಯ ಬೇರೆ ಬಗೆಯದೂ ಆಗಿದೆ, ಬೇರೊಂದು ನುಡಿಗಟ್ಟಿನಲ್ಲಿಯೂ ಮಾತನಾಡುತ್ತದೆ.

ಇಲ್ಲಿನ 55 ಕವಿತೆಗಳಿಗೂ ತಲೆಬರಹಗಳಿಲ್ಲ. ತಲೆಬರಹಗಳನ್ನು ನಾವು ಗುರುತಿಗಾಗಿ ಮತ್ತು ಸಾಂಕೇತಿಕವಾಗಿ ಕೊಡುವುದರಿಂದ ಇಲ್ಲಿನ ಎಲ್ಲ ಕವಿತೆಗಳೂ ಕಾವ್ಯದ ಗುರುತುಗಳೇ ಆಗಿವೆ. ಒಂದೇ ಬಗೆಯ ಗುರುತನ್ನು ನಿರಾಕರಿಸುವುದು, ಅದಕ್ಕೇ ಕಟ್ಟುಬೀಳದಿರುವುದು ಈ ತಲೆಬರಹ ನಿರಾಕರಣೆಯ ಹಿಂದಿರಬಹುದು.

ಸಂಕಲನದ ತಲೆಬರಹ ‘ಓದುವುದೆಂದರೆ ಸ್ಪರ್ಶಿಸಿದಂತೆ’ ಎಂಬುದು ಪಂಚೇಂದ್ರಿಯಗಳ ಅನುಭವಗಳಲ್ಲಿ ಮುಟ್ಟುವುದನ್ನು ಮಾತ್ರ ಹೇಳುತ್ತಿಲ್ಲ. ಮುಟ್ಟುವುದಕ್ಕೆ ಮತ್ತು ಮುಟ್ಟದೇ ಇರುವುದಕ್ಕೆ ದೊಡ್ಡ ಇತಿಹಾಸವೇ ಇದೆ. ಮತ್ತು ಪ್ರತಿ ಓದೂ ಬೇರೊಂದು ಭಾವಲೋಕ ಅಥವಾ ಸಂವೇದನೆಗಳನ್ನು ಸ್ಪರ್ಶಿಸುವುದಕ್ಕಾಗಿ ಮಾಡುವ ಪ್ರಯತ್ನವೇ ಆಗಿದೆ. ಕವಿಯ ಭಾಷೆಯಲ್ಲಿ ಹೇಳುವುದಾದರೆ ಅದು – ‘ಸ್ಪರ್ಶವೇ ಬಾಗಿಲು’ (ಕವಿತೆ–16). ಆ ಬಾಗಿಲು ತೆರೆದಾಗ ಕಾಣುವ ಲೋಕ ಕಾಮದ್ದೂ ಆಗಿರಬಹುದು, ಪ್ರೇಮದ್ದೂ ಆಗಿರಬಹುದು. ಭಾಷೆಗೆ ಮೀರಿದ ಬೇರೆ ಏನೋ ಆಗಿರಬಹುದು. ಮತ್ತು ಆಗದೆಯೂ ಇರಬಹುದು.

‘ಅಲ್ಲಾಹುವಿನ ನಾಮಸ್ಮರಣೆ

ಮಾಡಲಿಲ್ಲ. ಅಷ್ಟಕ್ಕೇ

ನನ್ನನ್ನು ಧರ್ಮಭ್ರಷ್ಟ ಎನ್ನುತ್ತಿದ್ದಾರೆ.

ಗೊತ್ತಿಲ್ಲ ಅವರಿಗೆ

ದೇವರು

ಒಂದು ಅಪೂರ್ಣ ಕಾವ್ಯವಾಗಿ ನೆಲೆಸಿರುವ

ಕಣ್ಣು ಮತ್ತು ತುಟಿಗಳನ್ನು

ನಾನು ಚುಂಬಿಸಿದ್ದೇನೆ.’

(ಕವಿತೆ–3)

ಮನುಷ್ಯನ ಚುಂಬಿಸುವ, ಪ್ರೀತಿಸುವ ಸಹಜ ವ್ಯಾಪಾರವೇ ನಿಜವಾದ ಧಾರ್ಮಿಕತೆ ಎನ್ನುವ ಜೀವಪರ ನಿಲುವು ಇಲ್ಲಿದೆ. ಇಂತಹ ನೋಟಗಳು ಯೋಗೇಶರ ಹಲವು ಕವಿತೆಗಳಲ್ಲಿ ಕಾಣುತ್ತವೆ.

ಯೋಗೇಶರ ಕಾವ್ಯದಲ್ಲಿ ನಮ್ಮ ಈಚಿನ ಬರಹಗಾರರಿಗೆ ಹಲವು ಪಾಠಗಳಿವೆ. ಯಾವುದೇ ಅಬ್ಬರ, ಪ್ರದರ್ಶನವಿಲ್ಲದೆ ನೋವನ್ನು ಪ್ರೀತಿ ಮತ್ತು ಸಹಾನುಭೂತಿಯಿಂದ ಕಂಡು ಅದನ್ನು ತಣ್ಣಗೆ ಅಭಿವ್ಯಕ್ತಿಸಬಹುದು ಮತ್ತು ದಲಿತ ಅನುಭವ ಬೇರೊಂದು ರೀತಿಯಲ್ಲಿ ಟಿಸಿಲೊಡೆಯಬಹುದು ಎಂಬುದನ್ನು ಈ ಕಾವ್ಯ ನಿಚ್ಚಳವಾಗಿ ತೋರುವಂತಿದೆ.

ಯೋಗೇಶ್‌ ತೀರ ಮಹತ್ವಾಕಾಂಕ್ಷೆಯಿಂದ ಬರವಣಿಗೆ ಮಾಡಲು ಹೊರಟ ಕವಿಯಲ್ಲ. ಜಗತ್ತಿನ ಹಲವು ತಲ್ಲಣಗಳಿಗೆ ಅವರು ಮುಖಾಮುಖಿಯಾಗುತ್ತಾರೆ ಎಂದೂ ಅಲ್ಲ. ಅದು ಅವರ ಕಾವ್ಯದ ಉದ್ದೇಶವೂ ಅಲ್ಲ. ಜಗತ್ತನ್ನು ಮಮತೆಯಿಂದ, ವಿಷಾದದಿಂದ ನೋಡುವ ಮತ್ತು ಪೂರ್ವಜರ ನೆನಪು, ಸಂವೇದನೆಯನ್ನು ಆಳದಲ್ಲಿ ಇಟ್ಟುಕೊಂಡ ಕಾವ್ಯ ಇದು. ಗಿಲೀಟುಗಳಿಲ್ಲದ ಪ್ರಾಮಾಣಿಕ ಕಾವ್ಯವಾದ್ದರಿಂದಲೇ ಇದು ವರ್ತಮಾನದ ಕಾವ್ಯ ಕೂಡ.

ಸಂವರ್ತ ‘ಸಾಹಿಲ್‌’ ಇಲ್ಲಿನ ಕವಿತೆಗಳನ್ನು ಗಾಢ ಅನುರಕ್ತಿಯಿಂದ ಕನ್ನಡಕ್ಕೆ ತಂದಿದ್ದಾರೆ. ಕನ್ನಡಕ್ಕೆ ಬೇಕಾದ ಹೊಸ ನುಡಿಗಟ್ಟು, ಅನುಭವಲೋಕ ಮತ್ತು ಪ್ರಯೋಗ ಅವರ ಈ ಅನುವಾದದಲ್ಲಿದೆ.

ಓದುವುದೆಂದರೆ ಸ್ಪರ್ಶಿಸಿದಂತೆ

ಕವಿತೆಗಳು

ಇಂಗ್ಲಿಷ್‌ ಮೂಲ: ಯೋಗೇಶ್‌ ಮೈತ್ರೇಯ

ಕನ್ನಡಕ್ಕೆ: ಸಂವರ್ತ ‘ಸಾಹಿಲ್‌’

ಪ್ರ: ಆಕೃತಿ ಪುಸ್ತಕ,

#31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್‌

ಭಾಷ್ಯಂ ವೃತ್ತದ ಬಳಿ, ರಾಜಾಜಿನಗರ,

ಬೆಂಗಳೂರು – 560 010

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT