ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಬಂಡ್ ಒಡೆದ ಮರಳು ದಂಧೆಕೋರರು

ಕುಡಿಯುವ ನೀರಿಗೆ ತೊಂದರೆ ಆಗದಂತೆ ಪುರಸಭೆಯಿಂದ ದುರಸ್ತಿ
Last Updated 4 ಜೂನ್ 2018, 8:36 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಾಗಿಣಾ ನದಿಗೆ ಪುರಸಭೆ ನಿರ್ಮಿಸಿದ್ದ  ಮರಳು ಚೀಲದ ತಾತ್ಕಾಲಿಕ ಬಂಡ್ ಅನ್ನು ಅಕ್ರಮ ಮರಳು ದಂಧೆಕೋರರು ಶನಿವಾರ ಒಡೆದು ಹಾನಿ ಮಾಡಿದ್ದಾರೆ. ಅದನ್ನು ಭಾನುವಾರ ದುರಸ್ತಿ ಮಾಡಲಾಗಿದೆ.

ಬೇಸಿಗೆಯಲ್ಲಿ ಕಾಗಿಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ನದಿ ದಂಡೆಯಲ್ಲಿರುವ ಪಂಪ್ ಹೌಸ್ ಮೂಲಕ ಚಿತ್ತಾಪುರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ತೊಂದರೆ ಆಗದಿರಲಿ ಎಂದು ಪಂಪ್ ಹೌಸ್ ಬಳಿ ನದಿಯಲ್ಲಿ ಪುರಸಭೆಯಿಂದ ತಾತ್ಕಾಲಿಕ ಬಂಡ್ ನಿರ್ಮಾಣ ಮಾಡಲಾಗಿತ್ತು. ಅದನ್ನು ಮರಳು ದಂಧೆಕೋರರು ಮರಳು ಸಾಗಾಟಕ್ಕೆ ಅನುಕೂಲ ಮಾಡಿಕೊಳ್ಳಲು ರಾತ್ರಿ ಒಡೆದು ಕೆಲ ಭಾಗ ತೆರವು ಮಾಡಿದ್ದಾರೆ.

ಬಂಡ್‌ನಲ್ಲಿ ಸಂಗ್ರಹವಾಗಿದ್ದ ನೀರು ಇದರಿಂದಾಗಿ ಹರಿದು ಹೋಗತೊಡಗಿದೆ. ಅದನ್ನು ತಕ್ಷಣ ಗಮನಿಸಿದ ಪುರಸಭೆ ಆಡಳಿತ  ಹೊಸದಾಗಿ ಮರಳು ತುಂಬಿದ ಚೀಲಗಳಿಂದ ಬಂಡ್ ದುರಸ್ತಿ ಕೆಲಸ ಮಾಡಿದೆ. ಪಟ್ಟಣಕ್ಕೆ ಎದುರಾಗಲಿದ್ದ ನೀರಿನ ಗಂಭೀರ ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ.

‘ಮರಳು ಅಕ್ರಮ ಸಾಗಣೆದಾರರು ಬಂಡ್ ಬಳಿಯೇ ಮರಳು ತೆಗೆದು ಸಾಗಿಸಿದ್ದಾರೆ. ಬಂಡ್ ಒಳಗೆ ನೀರು ಸಂಗ್ರಹವಾಗಿದ್ದರಿಂದ ಮರಳು ಸಾಗಾಟಕ್ಕೆ ತೊಂದರೆ ಆಗಿದೆ ಎಂದು ಬಂಡ್ ಒಡೆದಿದ್ದಾರೆ. ಪಟ್ಟಣದ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ಶೀಘ್ರ ಕ್ರಮ ಕೈಗೊಂಡು ದುರಸ್ತಿ ಮಾಡಿಸಲಾಗಿದೆ‘ ಎಂದು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಭೀಮರಾಯ ಹೋತಿನಮಡಿ ಅವರು ಭಾನುವಾರ ‘ಪ್ರಜಾವಾಣಿ’ಗೆ ತಿಳಿದರು.

‘ಬಂಡ್‌ನ ತಾತ್ಕಾಲಿಕ ದುರಸ್ತಿ ಕೆಲಸ ನಡೆಯುತ್ತಿರುವಾಗಲೇ ಬಂಡ್ ಸಮೀಪದಲ್ಲೇ ಟ್ರ್ಯಾಕ್ಟರ್ ಮೂಲಕ ಮರಳು ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಏಕಾಏಕಿ ಯಾರೋ ಬೈಕ್‌ನಲ್ಲಿ  ಬಂದು ಮರಳು ತುಂಬಿದ್ದ ಎರಡು ಟ್ರ್ಯಾಕ್ಟರ್‌ಗಳನ್ನು ಸಾಗಿಸಿದರು’ ಎಂದು ದುರಸ್ತಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಿಳಿಸಿದರು.

ಚಿತ್ತಾಪುರ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಬಂಡ್ ದುರಸ್ತಿ ಕೆಲಸ ನಡೆಯುವ ಸ್ಥಳಕ್ಕೆ ಬರುವಷ್ಟರಲ್ಲಿ  ಎರಡು ಟ್ರ್ಯಾಕ್ಟರ್‌ಗಳು  ಸ್ಥಳದಿಂದ ತೆರಳಿದ್ದವು. ‘ಈ ಕುರಿತು ಮೇಲಧಿಕಾರಿ ಗಮನಕ್ಕೆ ತಂದು ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸ್ ಸಿಬ್ಬಂದಿ ಹೇಳಿದರು.

‘ಪಂಪ್ ಹೌಸ್ ಬಳಿಯೇ ನದಿಯಲ್ಲಿ ಮರಳು ಸಾಗಾಟ ನಡೆಯುತ್ತಿರುವಾಗ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುತ್ತೇವೆ. ಮಾಹಿತಿ ನೀಡಿದ ತಕ್ಷಣ ಮರಳು ತುಂಬಿದ ಟ್ರ್ಯಾಕ್ಟರ್ಗಳು ಮರಳು ಖಾಲಿ ಮಾಡಿ ತೆರಳುತ್ತವೆ. ಮರಳು ತುಂಬುವ ಕಾರ್ಮಿಕರು ತರಾತುರಿಯಲ್ಲಿ ಗಿಡಗಂಟಿಯಲ್ಲಿ ಆಸರೆ ಪಡೆಯುತ್ತಾರೆ. ಅಧಿಕಾರಿಗಳಿಂದಲೇ ಮರಳುದಂಧೆಕೋರರಿಗೆ ಮಾಹಿತಿ ರವಾನೆಯಾಗುತ್ತದೆ. ಈ ಬೆಳವಣಿಗೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ’ ಎಂದು ಪುರಸಭೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

**
ಕಾಗಿಣಾ ನದಿಯಲ್ಲಿನ ತಾತ್ಕಾಲಿಕ ಬಂಡ್ ಒಡೆದು ಹಾಳು ಮಾಡಲಾಗಿತ್ತು. ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಿರಲಿ ಎಂದು ಕೂಡಲೇ ದುರಸ್ತಿ ಮಾಡಿಸಲಾಗಿದೆ
ಅನ್ನಪೂರ್ಣ, ಅಧ್ಯಕ್ಷೆ, ಪುರಸಭೆ ಚಿತ್ತಾಪುರ

–ಮಲ್ಲಿಕಾರ್ಜುನ ಎಚ್. ಮುಡಬೂಳಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT