ಸೋಮವಾರ, ಮಾರ್ಚ್ 30, 2020
19 °C

ಹಾಡು ಮೂರೇ ಮೂರು...ಹೆಜ್ಜೆ ನೂರಾರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಶೇಷಾದ್ರಿಪುರ ಪಿ.ಯು ಕಾಲೇಜಿನಲ್ಲಿ ನಡೆದ ‘ಎಫ್‌ಬಿಬಿ ಸ್ಟೈಲ್ ಬಡಿ ಕಾಲೇಜ್ ರೆಡಿ’ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ಚಂದನ್... ಚಂದನ್... ಚಂದನ್... ತಿರುಗಿ ನೋಡುವವರೆಗೂ ಹುಡುಗಿ–ಹುಡುಗಿಯರು ಕಂಠ ಸಿಗಿದು ಬರುವಂತೆ ಕಿರುಚುತ್ತಿದ್ದರು. ಚಂದನ್‌ ಶೆಟ್ಟಿಯ ಒಂದೇ ಒಂದು ನೋಟಕ್ಕೆ, ಆರಾಧಕರು ಮುಗಿಬಿದ್ದು ನೋಡುತ್ತಿದ್ದರು.

ನಗರದ ಶೇಷಾದ್ರಿಪುರ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ಅಭಿಮಾನಿಗಳ ನಡುವೆ, ಆರಾಧಕರ ನಡುವೆ ರ‍್ಯಾಪ್ ಸ್ಟಾರ್ ಚಂದನ್‌ ಶೆಟ್ಟಿ ಕುಣಿದು ಕುಪ್ಪಳಿಸಿದರೆ ಇಡೀ ವಾತಾವರಣದಲ್ಲಿ ಮತ್ತದೇ ಧ್ವನಿಯ ಅನುರಣನ. 

ಕಾಲೇಜು ವಿದ್ಯಾರ್ಥಿಗಳಲ್ಲಿ ಫ್ಯಾಷನ್ ಪ್ರಜ್ಞೆಯನ್ನು ಹೆಚ್ಚಿಸುವ ಸಲುವಾಗಿ ಫ್ಯಾಷನ್ ಬಿಗ್‌ಬಜಾರ್ ಈಚೆಗೆ ಪ್ರಾರಂಭಿಸಿದ ‘ಎಫ್‌ಬಿಬಿ ಸ್ಟೈಲ್ ಬಡಿ, ಕಾಲೇಜ್ ರೆಡಿ’ ಅಂತಿಮ ಸ್ಪರ್ಧೆಯನ್ನು ಈ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. 

ಯುವ ಜನಾಂಗ ಹಾಡಿಗೆ ಹೆಜ್ಜೆ ಹಾಕುತ್ತಿತ್ತು. ಹುಡುಗಿಯರು ಮಾರ್ಜಾಲ ನಡಿಗೆಯಲ್ಲಿ ಮಿಂಚಿದರು. ಇನ್ನೂ ಕೆಲವರು ತಮ್ಮ ಕಂಠಸಿರಿಯಿಂದ ಮೋಡಿ ಮಾಡಿದರು. ತಮ್ಮನ್ನೇ ತಾವು ಸಂಭ್ರಮಿಸಲು ಲತಾಂಗಿಯರೇ ಆಗಬೇಕಾಗಿಲ್ಲ ಎಂಬ ಆತ್ಮವಿಶ್ವಾಸಿಗಳೂ ಅಲ್ಲಿದ್ದರು. ಸ್ಪರ್ಧೆಯ ನಿರ್ಣಾಯಕರಲ್ಲಿ ಒಬ್ಬರಾಗಿದ್ದವರು ಚಂದನ್‌ ಶೆಟ್ಟಿ.

ಚಂದನ್, ಮದುವೆ ಯಾವಾಗ ಎಂಬ ಪ್ರಶ್ನೆ ಮಾಧ್ಯಮದವರಿಂದ ತೂರಿಬಂತು. ಹೌದೆನ್ನದೆ, ಇಲ್ಲನ್ನದೆ, ಜಾಣ್ಮೆಯ ಉತ್ತರ ನೀಡಿದ ಚಂದನ್‌ಗೆ ಅಲ್ಲಿದ್ದ ಹುಡುಗಿಯರಿಂದಲೂ ಪ್ರಸ್ತಾವಗಳು ಹಾರಿ ಬಂದವು. ಅವರೆಲ್ಲರ ಪ್ರೀತಿಗೆ, ಅವರ ರೀತಿಗೆ ಚಂದದ ನಗೆಯೊಂದೇ ಚಂದನ್ ಅವರ ಉತ್ತರವಾಯಿತು. 

ಸಾಂಪ್ರದಾಯಿಕ ಮತ್ತು ಸಮಕಾಲೀನದ ಸ್ಪರ್ಶವಿರುವ ಉಡುಗೆ ತೊಟ್ಟು ಜೈನ್ ಕಾಲೇಜಿನ ನೃತ್ಯದ ತಂಡ ಮೊದಲ ಬಹುಮಾನ 25 ಸಾವಿರ ರೂಪಾಯಿ ಬಾಚಿಕೊಂಡಿತು.

ಇಡೀ ವಾತಾವರಣದಲ್ಲಿ ಗೌಜು, ಗದ್ದಲ. ಕೆಲವೊಮ್ಮೆ ಸಂಗೀತ ಕ್ಷೀಣಿಸಿದಂತೆನಿಸಿದರೆ ಇನ್ನೂ ಕೆಲವೊಮ್ಮೆ ಅಬ್ಬರಿಸಿದಂತೆ ಇತ್ತು. ಹುಡುಗರ, ಹುಡುಗಿಯರ ನೂಕುನುಗ್ಗಲಿನಿಂದ ಚಂದನ್‌ ಅವರನ್ನು ಹೊರತರುವುದೇ ಅವರೊಟ್ಟಿಗಿದ್ದ ಬೌನ್ಸರ್‌ಗಳಿಗೆ ಸಾಹಸವೆನಿಸಿತು.

ಹಂಗೂ ಹಿಂಗೂ ಈ ಚಂದನ್‌ ಶೆಟ್ಟಿ, ಕಾರ್ಯಕ್ರಮ ಮುಗಿಸಿ ಹೊರಟರೂ ಅಲ್ಲಿರುವವರ ತಲೆ ಮಾತ್ರವಲ್ಲ ಹೆಜ್ಜೆಗಳೂ ಗಿರಗಿರನೆ ತಿರುಗುತ್ತಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು