ಸೋಮವಾರ, ಮಾರ್ಚ್ 30, 2020
19 °C

ಪ್ರಗಲ್ಭಾ ಘಟಿಗಾರ್‌ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕಾದ ಫೀನಿಕ್ಸ್‌ನ ಖ್ಯಾತ ‘ನಟೇಶ್ವರಿ’ ನೃತ್ಯ ಸಂಸ್ಥೆಯ ನುರಿತ ನಾಟ್ಯಗುರು, ಕಲಾವಿದೆ ಮತ್ತು ನೃತ್ಯ ಸಂಯೋಜಕಿ ಮಧುಶಾಲಿನಿ ಘಟಿಗಾರ್ ಅವರ ಸಮರ್ಥ ಗರಡಿಯಲ್ಲಿ ರೂಪುಗೊಂಡವಳು ಉದಯೋನ್ಮುಖ ಭರತನಾಟ್ಯ ನೃತ್ಯವಿದ್ಯಾರ್ಥಿನಿ ಪ್ರಗಲ್ಭ ಪ್ರಸಾದ್ ಘಟಿಗಾರ್. ‘ಜನನಿ ತಾನೇ ಮೊದಲ ಗುರುವು’ ಎಂಬ ಆರ್ಯೋಕ್ತಿಯಂತೆ ತಮ್ಮ ಎರಡು ವರ್ಷದ ಮಗಳಲ್ಲಿ ಹುದುಗಿದ್ದ ಪ್ರತಿಭಾಸೆಲೆಯನ್ನು ಮೊದಲು ಗುರುತಿಸಿದವರು ತಾಯಿಯೇ. ಪ್ರಸಿದ್ಧ ಭರತನಾಟ್ಯ ಕೋವಿದೆ ಮಧುಶಾಲಿನಿ ಮಗಳಿಗೆ ಆಗಲೇ ನಾಟ್ಯಶಿಕ್ಷಣ ನೀಡಲಾರಂಭಿಸಿದರು. ಈಗ ಹನ್ನೆರೆಡರ ಬಾಲಕಿ ಕಳೆದ ಹತ್ತು ವರ್ಷಗಳಿಂದ ತಾಯಿ-ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ನೃತ್ಯವನ್ನು ಬಹು ಆಸಕ್ತಿ ಮತ್ತು ಬದ್ಧತೆಯಿಂದ ಕಲಿತು ಈಗ ‘ರಂಗಾರೋಹಣ ’ ಮಾಡಲು ಅಣಿಯಾಗಿ ನಿಂತಿರುವುದು ಪ್ರಗಲ್ಭಳ ವೈಶಿಷ್ಟ್ಯ.

ಅಮೆರಿಕಾದ ಆರಿಜೋನಾ- ಫಿನಿಕ್ಸ್‌ನಲ್ಲಿ ಏಳನೆಯ ತರಗತಿಗೆ ಅಡಿಯಿಟ್ಟಿರುವ ಪ್ರಗಲ್ಭಾ ಬಹುಮುಖ ಪ್ರತಿಭೆ. ರಂಗದ ಮೇಲೆ ಆತ್ಮವಿಶ್ವಾಸದಿಂದ ಎರಡು ಗಂಟೆ ನೃತ್ಯಪ್ರದರ್ಶನ ನೀಡಲು ಸನ್ನದ್ಧಳಾಗಿರುವ ಇವಳು, ಶಾಲಾ ಆಟ-ಪಾಠಗಳೊಡನೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳ ಆರಾಧಕಳೂ ಕೂಡ. ತನ್ನ 5 ನೆಯ ವರ್ಷಕ್ಕೇ ಮೊದಲ ನೃತ್ಯ ಪ್ರದರ್ಶನ ನೀಡಲಾರಂಭಿಸಿದವಳು ಇದುವರೆಗೂ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಬಂದಿರುವ ಹಿರಿಮೆ ಇವಳದು.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದು, ಚಿತ್ರಕಲೆಯಲ್ಲೂ ಅನೇಕ ಬಹುಮಾನಗಳನ್ನು ಗೆದ್ದವಳು. ‘ ಟ್ವೈಕಾಂಡೋ’ ನಲ್ಲಿ ‘ಬ್ಲಾಕ್ ಬೆಲ್ಟ್’ , ವಾಲಿಬಾಲ್ ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನಿತಳು. ಅಮೆರಿಕಾದಲ್ಲಿದ್ದು ಭಾರತೀಯ ಕಲೆಗಳ ಬಗ್ಗೆ ಅಪಾರ ಒಲವುಳ್ಳ ಇವಳು ಬೆಂಗಳೂರಿನಲ್ಲಿ ಕರ್ನಾಟಕ ಕಲಾಶ್ರೀ ರೇವತಿ ನರಸಿಂಹನ್ ಬಳಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದು, ರಂಗಪ್ರವೇಶ ಮಾಡಲಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)