ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲಿ ನೃತ್ಯ ಸಾಂತ್ವನ

Last Updated 24 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಕೋವಿಡ್‌-19 ವಾಣಿಜ್ಯ ಚಟುವಟಿಕೆಗಳ ಮೇಲಷ್ಟೇ ಅಲ್ಲ ಕಲಾ ಕ್ಷೇತ್ರದ ಮೇಲೂ ಬೀರಿದ ಪರಿಣಾಮ ಅಗಾಧ. ಒಂದೆಡೆ ಸಂಗೀತ, ನೃತ್ಯ, ಯಕ್ಷಗಾನ, ರಂಗ ಚಟುವಟಿಕೆಗಳನ್ನೇ ನಂಬಿಕೊಂಡವರಿಗೆ ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದ್ದರೆ, ಮತ್ತೊಂದೆಡೆ ಮಕ್ಕಳು ಸೇರಿದಂತೆ ಹಿರಿಯರ ಮೇಲೂ ದೈಹಿಕ- ಮಾನಸಿಕವಾಗಿ ಪರಿಣಾಮ ಬೀರಿತು.

ಮೊದಲ ಅಲೆಯಲ್ಲಿ ತಮ್ಮ ನೃತ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದನ್ನು ನಗರದ ನೃತ್ಯ ಕಲಾವಿದ ಜನಾರ್ದನ್‌ ರಾಜ್‌ ಅರಸ್‌ ಅವರು ಎದುರಿಸಿದ ರೀತಿ ಭಿನ್ನ ಪ್ರಯೋಗಕ್ಕೆ ಎಡೆಮಾಡಿಕೊಟ್ಟಿದೆ.

ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಪ್ರಕಾರಗಳಲ್ಲಿ ಪರಿಣತರಾಗಿರುವ ಜನಾರ್ದನ್‌ ಅವರು ಖ್ಯಾತ ಕಥಕ್‌ ನೃತ್ಯಕಲಾವಿದೆ ಡಾ.ಮಾಯಾರಾವ್‌ ಅವರ ಶಿಷ್ಯ. ಮಲ್ಲೇಶ್ವರದಲ್ಲಿರುವ ತಮ್ಮ ‘ಕಾರ್ನುಕೋಪಿಯಾ’ ನೃತ್ಯ ಸಂಸ್ಥೆಯ ಮೂಲಕ 17 ದೇಶಗಳಲ್ಲಿ ನೂರಾರು ನೃತ್ಯ ಪ್ರದರ್ಶನ ನೀಡಿರುವ ಅವರು ನೃತ್ಯ ನಿರ್ದೇಶಕರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.

ಮೊದಲ ಲಾಕ್‌ಡೌನ್‌ ಸಮಯದಲ್ಲಿ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಇತರರನ್ನು ಭೇಟಿಯಾಗಲು ಸಾಧ್ಯವಾಗದ ಸಮಯದಲ್ಲಿ ತಮ್ಮ ಮಕ್ಕಳು, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಗಮನಿಸಿದ್ದ ಅವರು, ಮನೋದೈಹಿಕ ಆರೋಗ್ಯಕ್ಕೆ ನೃತ್ಯ ಪರಿಣಾಮಕಾರಿಯಾಗಬಲ್ಲದು ಎಂಬುದನ್ನು ಕಂಡುಕೊಂಡರು.

ಆರಂಭದಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ನೃತ್ಯ ಮಾಡಲು ಪ್ರೇರೇಪಿಸುತ್ತಿದ್ದ ಅವರ ಪ್ರಯೋಗ ಕ್ರಮೇಣ ಅಕ್ಕಪಕ್ಕದ ಮನೆಯವರೂ ಜತೆಗೂಡಿ ಹೆಜ್ಜೆ ಹಾಕುವಷ್ಟು ಯಶಸ್ಸು ಪಡೆಯಿತು. ಮನಸಿಗೆ ಉಲ್ಲಾಸ ನೀಡುತ್ತಿದ್ದ ಈ ಚಟುವಟಿಕೆಯಿಂದ ಇತರರೂ ಲಾಭ ಪಡೆಯಬೇಕೆಂಬ ಉದ್ದೇಶದಿಂದ ‘ಉಲ್ಲಾಸ’ ಹೆಸರಿನಡಿ ನೃತ್ಯ ತರಗತಿ ಆರಂಭಿಸಲು ಪ್ರೇರಣೆಯಾಯಿತು.

ಲಾಕ್‌ಡೌನ್‌ ಸಮಯದಲ್ಲಿ ನೃತ್ಯ ಕಾರ್ಯಕ್ರಮ, ತರಗತಿಗಳಿಲ್ಲದೇ ನಿರುದ್ಯೋಗಿಯಾಗಿದ್ದಾಗ ಜನಾರ್ದನ್‌ ಅವರ ಕೈಹಿಡಿದದ್ದು ತಂತ್ರಜ್ಞಾನ ಕೌಶಲ ಮತ್ತು ನೃತ್ಯಕಲೆ. ಶಾಲೆಗಳಿಂದ ಭೌತಿಕವಾಗಿ ದೂರವಾಗಿದ್ದ ಮಕ್ಕಳ ಮನಸು ಮುದುಡದಂತೆ ಕಾಪಾಡುವ ಮದ್ದು ನೃತ್ಯ ಎಂದರಿತ ಅವರು, ಆನ್‌ಲೈನ್ ಮೂಲಕ ನೃತ್ಯ ತರಗತಿ ಆರಂಭಿಸಿದರು. ಮಕ್ಕಳು ಉತ್ಸಾಹದಿಂದ ತರಗತಿಗಳಲ್ಲಿ ತೊಡಗಿಕೊಂಡಾಗ ಪೋಷಕರನ್ನೂ ಒಳಗೊಂಡಲ್ಲಿ ಕೋವಿಡ್‌ ಭೀತಿ ಹೋಗಲಾಡಿಸಲು ಹಾಗೂ ಕುಟುಂಬದಲ್ಲಿ ಪರಸ್ಪರರ ಬಾಂಧವ್ಯ ಬೆಸೆಯುವಲ್ಲಿ ನೃತ್ಯ ಪೂರಕ ಎಂಬುದನ್ನು ಮನಗಂಡರು. ‘ಮಕ್ಕಳ ಜತೆಗೆ ತರಗತಿಯ ಚಟುವಟಿಕೆಗಳಲ್ಲಿ ಪೋಷಕರನ್ನೂ ಒಳಗೊಂಡಾಗ ಬೀರಿದ ಪರಿಣಾಮ ಅದ್ಭುತ’ ಎಂಬುದು ಜನಾರ್ದನ್‌ ಅವರ ಅಭಿಮತ.

ಈ ಹಿಂದೆ ಆಫ್‌ಲೈನ್‌ನಲ್ಲಿ ಜಾಗತಿಕವಾಗಿ ಎಲ್ಲರನ್ನೂ ಏಕಕಾಲಕ್ಕೆ ತಲುಪಲು ಸಾಧ್ಯವಾಗದೇ ಇದ್ದದ್ದು ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ಮೂಲಕ ಸಾಧ್ಯವಾಯಿತು. ಸೌದಿ, ಅಮೆರಿಕ, ಕೆನಡಾ ದೇಶಗಳ ಜತೆಗೆ ದೇಶದ ಮಣಿಪುರ, ಮಹಾರಾಷ್ಟ್ರ ಹಾಗೂ ಕರ್ನಾಟಕ ವಿದ್ಯಾರ್ಥಿಗಳ ಸಮಾಗಮ ಒಂದೇ ವೇದಿಕೆ ಅಡಿ ಅಗಿದ್ದು ಅವರ ಸಂತಸಕ್ಕೆ ಕಾರಣವಾಗಿದೆ.

ತರಗತಿಯಲ್ಲಿ ನೃತ್ಯವಷ್ಟೇ ಅಲ್ಲದೆ, ಕಥೆ ಹೇಳುವುದು, ಚಿತ್ರಕಲೆಯ ಅಭ್ಯಾಸ ಸೇರಿದಂತೆ ಇತರ ಚಟುವಟಿಕೆಗಳ ಮೂಲಕ ಮಕ್ಕಳ ಮನಸ್ಸನ್ನು ಸೃಜನಾತ್ಮಕವಾಗಿ ರೂಪಿಸುವಲ್ಲಿ ಜನಾರ್ದನ್‌ ಅರಸ್‌ ಅವರ ಪರಿಶ್ರಮವಿದೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಓಡಾಡಲು ಆಗದವರಿಗೆ ಆನ್‌ಲೈನ್‌ ನೃತ್ಯ ತರಗತಿ ವರವಾಗಿ ಪರಿಣಮಿಸಿದೆ. ಈ ಹಿಂದೆ ವಾರಾಂತ್ಯದಲ್ಲಿ ಮಾತ್ರ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಯಾವುದಾದರೂ ಒಂದು ದಿನ ತರಗತಿ ತಪ್ಪಿದಾಗ ಕಲಿಕೆಯಲ್ಲಿ ಹಿಂದುಳಿಯುವಂತಾಗುತ್ತಿತ್ತು. ಆದರೆ ಈಗ ಜೂಮ್‌ನಂಥ ತಂತ್ರಜ್ಞಾನದಿಂದ ವಾರದಲ್ಲಿ ಯಾವ ಎರಡು ದಿನವಾದರೂ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತರಗತಿ ಹಾಜರಾಗುವ ಅನುಕೂಲ ಕಲ್ಪಿಸಲಾಗಿದೆ.

ಕೋವಿಡ್‌ ಕಾಲದ ಒಂದು ವರ್ಷದಲ್ಲಿ ವಿದ್ಯಾರ್ಥಿಗಳು- ಪೋಷಕರು ಪರಸ್ಪರ ಬೆರೆಯುವಲ್ಲಿ ಜನಾರ್ದನ್‌ ಅವರ ಆನ್‌ಲೈನ್‌ ನೃತ್ಯ ತರಗತಿ ಬೀರಿದ ಪ್ರಭಾವ ಅಪಾರವಾದದ್ದು ಎನ್ನುವುದು ಪೋಷಕರ ಅಭಿಪ್ರಾಯ.

ದೈಹಿಕ ಅಂತರ ಪಾಲಿಸಬೇಕಾದ ಸಮಯದಲ್ಲಿ ಪರಸ್ಪರ ಭೌತಿಕವಾಗಿ ದೂರವಿದ್ದರೂ, ಆನ್‌ಲೈನ್‌ ಮೂಲಕವೇ ವಿದ್ಯಾರ್ಥಿಗಳು ದಸರಾ ಹಬ್ಬದ ನಿಮಿತ್ತ ನೀಡಿದ ನೃತ್ಯ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿತು. ತಾಂತ್ರಿಕ ಕೌಶಲವಿದ್ದರೆ ಆನ್‌ಲೈನ್‌ನಲ್ಲೂ ನೃತ್ಯ ಪ್ರದರ್ಶನ ನೀಡಬಹುದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸುವಲ್ಲಿ ಜನಾರ್ದನ್‌ ಯಶಸ್ವಿಯಾದರು.

ಗ್ರೀನ್‌ ಸ್ಟುಡಿಯೊದ ಮೂಲಕ ಕಥಕ್‌ನ ವಿವಿಧ ಘರಾಣೆಗಳು, ಮಾರ್ಷಲ್‌ ಅರ್ಟ್‌, ಮಂಡಲ-ಯಂತ್ರದ ಮೂಲಕ ಜಾಮಿಟ್ರಿಯ ವಿವಿಧ ಪ್ರಯೋಗಗಳು ಅವರಿಗೆ ಹೆಸರು ತಂದುಕೊಟ್ಟಿವೆ.
ಹೆಚ್ಚಿನ ಮಾಹಿತಿಗೆ:98860 85680.
ಯುಟ್ಯೂಬ್ ಲಿಂಕ್‌:

ನೃತ್ಯದಿಂದ ಮನಸು ನಿರಾಳ

‘ಮೊದಲ ಲಾಕ್‌ಡೌನ್‌ ವೇಳೆ ಮಗಳು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಳು. ಒಂದೆಡೆ ಸ್ನೇಹಿತರನ್ನು ಭೇಟಿಯಾಗದೇ ಇರುವುದು, ಮತ್ತೊಂದೆಡೆ ಶಾಲೆಯೂ ಇರಲಿಲ್ಲ. ಅಂಥ ಸಮಯದಲ್ಲಿ ಆಕೆಗೆ ಮಾನಸಿಕ ಒತ್ತಡ ಉಂಟಾಗುತ್ತಿತ್ತು. ಜನಾರ್ದನ್‌ ಅವರ ನೃತ್ಯ ತರಗತಿಗಳಿಗೆ ಹಾಜರಾದ ಮೇಲೆ ಅವಳಿಗೆ ಮಾನಸಿಕವಾಗಿ ರೀಲ್ಯಾಕ್ಸ್‌ ಅನಿಸಿತು. ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಉದ್ಯೋಗಸ್ಥರು. ಮಗಳ ಜತೆಗೆ ನಾವೂ ಆನ್‌ಲೈನ್‌ನಲ್ಲೂ ನೃತ್ಯದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಸಂತಸ ನೀಡಿತು. ಸದಾ ಬ್ಯುಸಿಯಾಗಿರುತ್ತಿದ್ದ ನಮಗೆ ನೃತ್ಯದ ಮೂಲಕ ಕೌಟುಂಬಿಕ ಬೆಸುಗೆಗೂ ಸಹಕಾರಿಯಾಯಿತು’ ಎನ್ನುತ್ತಾರೆ ಅರುಣ್‌ ನಾರಾಯಣನ್.‌

‘ಈಗಲೂ ಆನ್‌ಲೈನ್‌ನಲ್ಲೇ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ವರ್ಚ್ಯುವಲ್‌ ರಿಯಾಲಿಟಿ ತಂತ್ರಜ್ಞಾನದಿಂದ ಮುಂದಿನ ದಿನಗಳಲ್ಲಿ ಕಲಿಕಾ ವಿಧಾನದಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ. ತಂತ್ರಜ್ಞಾನದ ವಿಚಾರದಲ್ಲಿ ಕಲಾವಿದರೂ ಅಪ್‌ಡೇಟ್‌ ಆಗುವ ಅಗತ್ಯವಿದೆ. ರೂಪಾಂತರದ ಈ ಪ್ರಕ್ರಿಯೆಯು ನೃತ್ಯ ಕ್ಷೇತ್ರಕ್ಕೆ ವರವಾಯಿತು’ ಎನ್ನುತ್ತಾರೆ ಜನಾರ್ದನ್‌ ರಾಜ್‌ ಅರಸ್.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT