ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಗುರುಗಳ ಕಾಲ

ಶಾಲೆಗಳಲ್ಲೀಗ ಡಾನ್ಸ್‌ ಡಾನ್ಸ್‌
Last Updated 10 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ನಗರದ ಶಾಲೆ–ಕಾಲೇಜುಗಳಲ್ಲಿ ವಾರ್ಷಿಕೋತ್ಸವಗಳ ಸೀಸನ್‌ ಆರಂಭವಾಗಿದೆ. ಮಕ್ಕಳಿಗೆ ಡಾನ್ಸ್, ನಾಟಕ, ಹಾಡು ಕಲಿಯುವ, ಪ್ರದರ್ಶಿಸುವ ಸಡಗರ. ಓದು–ಬರಹದ ಒತ್ತಡದ ನಡುವೆ ಅವರಿಗಿದು ಕುಣಿದು ಕುಪ್ಪಳಿಸುವ ಅವಕಾಶ. ಡಾನ್ಸ್‌ ಕ್ಲಾಸ್‌ ಹಾಗೂ ಕಲಾವಿದರು ಕೈತುಂಬಾ ಕೆಲಸ–ಹಣ ಹೊಂದುವ ಕಾಲ.

ಮಕ್ಕಳ ಡಾನ್ಸ್‌ ಅನ್ನೇ ಪ್ರಧಾನವಾಗಿಸಿಕೊಂಡ ರಿಯಾಲಿಟಿ ಷೋ ಜನಪ್ರಿಯವಾಗಿರುವುದರಿಂದ ಜನರಿಗೆ ತಮ್ಮ ಮಕ್ಕಳೂ ಹಾಗೆಯೇ ನರ್ತಿಸಲಿ, ಚಂದದ ವಸ್ತ್ರ ಧರಿಸಿ ಮುದ್ದಾಗಿ ಕಾಣಲಿ ಎಂಬ ಹಂಬಲ ಹುಟ್ಟುವುದು ಸಹಜ. ಹೀಗಾಗಿ ಶಾಲಾ ವಾರ್ಷಿಕೋತ್ಸವಗಳಲ್ಲಿ ಪ್ರತಿ ಮಕ್ಕಳೂ ಯಾವುದಾದರೊಂದು ಡಾನ್ಸ್‌ ಕಾರ್ಯಕ್ರಮದಲ್ಲಿ ಇದ್ದೇ ಇರುತ್ತಾರೆ. ಕೆಲವು ಶಾಲೆಗಳಲ್ಲಿ ಶಿಕ್ಷಕರೇ ತಮಗೆ ತಿಳಿದಷ್ಟು ಕಲಿಸುತ್ತಾರೆ. ಡಾನ್ಸ್‌ ಕ್ಲಾಸ್‌ಗಳ ಟೀಚರ್‌ಗಳನ್ನು ಕರೆಸಿ ಅಥವಾ ಕೋರಿಯೋಗ್ರಾಫರ್‌ಗಳನ್ನು ಕರೆಸಿ ವಿವಿಧ ಶೈಲಿಯ ಡಾನ್ಸ್‌ಗಳನ್ನು ಮಕ್ಕಳಿಗೆ ಹೇಳಿಕೊಟ್ಟು ವಾರ್ಷಿಕೋತ್ಸವವನ್ನು ಕಳೆಗಟ್ಟುವಂತೆ ಮಾಡುತ್ತಿರುವುದು ಈಗಿನ ಟ್ರೆಂಡ್‌ ಆಗಿದೆ. ಯೂಟ್ಯೂಬ್‌ ಹಾಗೂ ಆನ್‌ಲೈನ್‌ಗಳಲ್ಲಿ ಲಭ್ಯವಿರುವ ಡಾನ್ಸ್‌ ವಿಡಿಯೊಗಳನ್ನು ನೋಡಿಕೊಂಡು ಮಕ್ಕಳಿಗೆ ಹೇಳಿಕೊಡುವ ರೂಢಿ ಸಹ ಶುರುವಾಗಿದೆ.

ಮೈಸೂರಿನಲ್ಲಿರುವ ಹಲವು ಡಾನ್ಸ್‌ ಕ್ಲಾಸ್‌ಗಳು ನೃತ್ಯ ಹೇಳಿಕೊಡುವುದು, ಅದಕ್ಕೆ ಬೇಕಾದ ವಸ್ತ್ರ ವಿನ್ಯಾಸ ಸಿದ್ಧಪಡಿಸಿಕೊಡುವ ಕಾರ್ಯವನ್ನು ಮಾಡುತ್ತಿವೆ. ಗುಂಪುನೃತ್ಯಕ್ಕೆ ಬೇಕಾದ 20–30 ಡ್ರೆಸ್‌ ಸೆಟ್‌ಗಳು ಇವರ ಬಳಿ ಸಿದ್ಧವಿರುತ್ತವೆ. ಹೀಗಾಗಿ ಹಲವು ಖಾಸಗಿ ಶಾಲೆಗಳು ಈ ಡಾನ್ಸ್‌ ಕ್ಲಾಸ್‌ಗಳನ್ನು ಸಂಪರ್ಕಿಸಿ ಡಾನ್ಸ್ ಕಲಿಸುವ ಹಾಗೂ ಅದನ್ನು ಸೂಕ್ತ ವಸ್ತ್ರ ವಿನ್ಯಾಸದೊಂದಿಗೆ ಪ್ರದರ್ಶಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸುತ್ತವೆ. ಇದು ವೆಚ್ಚದಾಯಕವಾದರೂ ಮಕ್ಕಳಿಗೆ ಉತ್ತಮ ನೃತ್ಯವೊಂದನ್ನು ಕಲಿಯುವ ಅವಕಾಶವಂತೂ ಹೌದು.

ವಾರ್ಷಿಕೋತ್ಸವದ ನೃತ್ಯಕ್ಕಾಗಿ ಹೊಸ ಬಟ್ಟೆ ಖರೀದಿಸುವುದು ಹಲವು ಪೋಷಕರಿಗೆ ಖುಷಿಯ ಸಂಗತಿಯೂ ಹೌದು. ಹೀಗಾಗಿ ಕೆಲವು ಶಾಲೆಗಳು ನೃತ್ಯ ಕಲಿಕೆಯನ್ನು ಮಾತ್ರ ಡಾನ್ಸ್‌ ಕ್ಲಾಸ್‌ಗಳಿಗೆ ವಹಿಸಿ ಬಟ್ಟೆ ತರುವ ಜವಾಬ್ದಾರಿಯನ್ನು ಪೋಷಕರಿಗೆ ಬಿಡುತ್ತವೆ. ಇಲ್ಲವಾದರೆ ಶಾಲೆಯ ವತಿಯಿಂದ ಹೊಸ ವಸ್ತ್ರಗಳನ್ನು ಖರೀದಿಸಲಾಗುತ್ತದೆ. ಆದರೆ ಕೆಲವು ವಿಶೇಷ ಶೈಲಿಯ ನೃತ್ಯಗಳಿಗೆ ಹಾಕುವ ಗ್ಲಿಟರಿಂಗ್‌ ಡ್ರೆಸ್‌, ಚೈನೀಸ್‌ ಶೈಲಿಯ ಡಾನ್ಸ್‌ಗಳಿಗೆ ಹಾಕುವ ಬಟ್ಟೆಗಳನ್ನು ಉಳಿದ ದಿನಗಳಲ್ಲಿ ಹಾಕಲು ಬರುವುದಿಲ್ಲ. ಆಗ ಡಾನ್ಸ್‌ ಶಾಲೆಗಳಿಂದಲೇ ಬಾಡಿಗೆಗೆ ಪಡೆಯಬೇಕಾಗುತ್ತದೆ ಎಂದು ಸರಸ್ವತಿಪುರಂನ ‘ಮೈಸೂರು ಮಿರಾಕಲ್ಸ್‌’ ಡಾನ್ಸ್‌ ಶಾಲೆಯ ಸಿರಿ ತಿಳಿಸಿದರು.

‘ಡಿಸೆಂಬರ್‌ನಿಂದ ಫೆಬ್ರುವರಿಯವರೆಗೆ ಪ್ರಿಸ್ಕೂಲ್‌, ಶಾಲೆ, ಪ್ರೌಢಶಾಲೆಗಳ ವಾರ್ಷಿಕೋತ್ಸವಗಳ ಸೀಸನ್‌ ಆದರೆ, ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳುಗಳಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ವಾರ್ಷಿಕೋತ್ಸವಗಳ ಸಮಯ. ವಿವಿಧ ಫೆಸ್ಟ್‌ಗಳನ್ನು ಆಯೋಜಿಸುವ ಕಾಲೇಜು ವಿದ್ಯಾರ್ಥಿಗಳು ಡಾನ್ಸ್‌ ಕ್ಲಾಸ್‌ಗಳನ್ನು ಹುಡುಕಿಕೊಂಡು ಬಂದು ಡಾನ್ಸ್‌ ಕಲಿತು ಹೋಗುತ್ತಾರೆ. ಇವುಗಳಲ್ಲಿ ವೆಸ್ಟರ್ನ್‌ ಬಾಲಿವುಡ್‌ ಶೈಲಿಯ ನೃತ್ಯಗಳನ್ನೇ ಯುವಜನತೆ ಹೆಚ್ಚಾಗಿ ಕಲಿಯಲು ಬಯಸುವುದು’ ಎಂದು ಅವರು ತಿಳಿಸಿದರು.

‘ನಾವು ಕಳೆದ ಐದು ವರ್ಷಗಳಿಂದ ನೃತ್ಯ ಶಾಲೆ ನಡೆಸುತ್ತಿದ್ದು ಎಲ್ಲ ರೀತಿಯ ನೃತ್ಯಗಳಿಗೆ, ಫ್ಯಾನ್ಸಿ ಡ್ರೆಸ್‌ಗಳಿಗೆ ವಸ್ತ್ರ ವಿನ್ಯಾಸ ಮಾಡಿ ಬಟ್ಟೆಗಳನ್ನು ಬಾಡಿಗೆಗೆ ಕೊಡುತ್ತೇವೆ. ಶಾಲಾ ವಾರ್ಷಿಕೋತ್ಸವಗಳ ಸಮಯದಲ್ಲಿ ಈ ಬಟ್ಟೆಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗುತ್ತದೆ. ಈಚೆಗೆ ಕೋರಿಯೋಗ್ರಾಫರ್‌ಗಳೇ ನೇರವಾಗಿ ಶಾಲೆಗೆ ಹೋಗಿ ಡಾನ್ಸ್‌ ಕಲಿಸುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಶಾಲೆಗಳಲ್ಲಿ ಡಾನ್ಸ್‌ ಕಲಿಸಲು ಹೋಗುವುದು ಸ್ವಲ್ಪ ಕಡಿಮೆಯಾಗಿದೆ’ ಎಂದು ಶಾರದಾದೇವಿ ನಗರದ ‘ಪದಂ ಡಾನ್ಸ್‌ ಸ್ಕೂಲ್‌’ನ ರಾಜೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT