ಶನಿವಾರ, ಡಿಸೆಂಬರ್ 4, 2021
24 °C

ಜರ್ಮನಿಯಿಂದ ತಿರುಗಿ ಬಂದ ಕಥಕ್‌ ‘ಚಕ್ಕರ್‌’ ದುರ್ಗಾ ಆರ್ಯ

ಚಿತ್ರಾ ವೆಂಕಟರಾಜು Updated:

ಅಕ್ಷರ ಗಾತ್ರ : | |

Prajavani

ಒಂದು ಸ್ಫೂರ್ತಿ ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಕಲಾ ಜೀವನ ಯಾವೆಲ್ಲಾ ತಿರುವುಗಳನ್ನು ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಲಖನೌ ಘರಾಣೆಯ ಪ್ರಸಿದ್ಧ ಕಥಕ್ ಕಲಾವಿದೆ ದುರ್ಗಾ ಆರ್ಯ.

ದುರ್ಗಾ ಆರ್ಯ ಅವರೊಡನೆ ಇತ್ತೀಚೆಗೆ ನಡೆಸಿದ ಸಂವಾದವೊಂದು ಈ ನೃತ್ಯದ ವಿಸ್ತಾರವನ್ನು ನಿರೂಪಿಸಿತು.  ಈ ಸಂವಾದ ಆಯೋಜಿಸಿದ್ದು ಬೆಂಗಳೂರಿನ ‘ಮಾನಸ ಜೋಶಿ’ಸ್ ಕಥಕ್’ ಅಕಾಡೆಮಿಯ ಮುಖ್ಯಸ್ಥೆ, ನೃತ್ಯ ಕಲಾವಿದೆ ಹಾಗೂ ನಟಿ ಮಾನಸಾ ಜೋಶಿ.

ಕಥಕ್ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುತ್ತಿರುವ ಗುರುಗಳ ಮತ್ತು ಅವರ ನೃತ್ಯಪದ್ಧತಿ ಹಾಗೂ ನೃತ್ಯದ ಬಗೆಗಿನ ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಮಾನಸಾ ಅವರು ‘ವಚನ –ವಿಚಾರ’ ಎಂಬ ಸಂವಾದ ಸರಣಿ ಆರಂಭಿಸಿದ್ದಾರೆ.

ದುರ್ಗಾ ಆರ್ಯ ಅವರು, ತಮ್ಮ ಮೊನಚಾದ ಚಕ್ಕರ್ (ಕಥಕ್ ನೃತ್ಯದಲ್ಲಿ ತಿರುಗುವುದು), ಭಾವಪೂರ್ಣ ಅಭಿನಯ, ಸಂಕೀರ್ಣವಾದ ತಾಳಗಳ ಮೇಲಿನ ಹಿಡಿತಕ್ಕೆ ಪ್ರಸಿದ್ಧಿ. ಭಾರತೀಯರಲ್ಲದೇ ಅನೇಕ ವಿದೇಶಿಯರಿಗೂ ಕಥಕ್ ನೃತ್ಯವನ್ನು ಕಲಿಸುತ್ತಿದ್ದಾರೆ. ಪ್ರತಿ ವರ್ಷವೂ ಕೆಲವು ತಿಂಗಳು ಭಾರತಕ್ಕೆ ಬಂದು ಕಾರ್ಯಾಗಾರಗಳನ್ನು, ನೃತ್ಯದ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ತಾಳಗಳ ಜತೆ ಮುಖಭಾವದ ಮೂಲಕವೇ ಕತೆಗಳನ್ನು ಹೇಳುವುದು ಅಲ್ಲೇ ಕತೆಯನ್ನು ಕಟ್ಟುವುದು ಒಂದು ಕಡೆಯಾದರೆ ಎದ್ದು ನಿಂತು ಲಯಕ್ಕೆ ತಕ್ಕಂತೆ ನಿಖರವಾದ ಹೆಜ್ಜೆ ಹಾಕುತ್ತಾ ತಮ್ಮ ಭಾವ-ಭಂಗಿಯ ಮೂಲಕ ಪ್ರೇಕ್ಷಕರನ್ನು ಸಮ್ಮೋಹಗೊಳಿಸುವ ಕಲೆ ಇನ್ನೊಂದು ಕಡೆ. ಒಂದೇ ಸಾಲನ್ನು ಹತ್ತು ಹಲವು ಬಗೆಯಲ್ಲಿ ನಿರೂಪಿಸುತ್ತಾರೆ.

ದುರ್ಗಾ ಹೆಜ್ಜೆಗಳ ಹಿಂದೆ...

ನೈನಿತಾಲ್‌ನಲ್ಲಿದ್ದ ದುರ್ಗಾ ಆರ್ಯ ಅವರ ಕುಟುಂಬ ದೆಹಲಿಗೆ ಬಂದು ನೆಲೆಸಿತು. ಆಗ ಅವರಿಗೆ 6 ವರ್ಷ. ಮನೆಯಲ್ಲಿ ಬಡತನ. ಮೂವರು ಮಕ್ಕಳು. ತಂದೆ ತಾಯಿ ಅನಕ್ಷರಸ್ಥರು. ತಂದೆ ಅಡುಗೆ ಕೆಲಸ ಮಾಡಿ ದಿನಕ್ಕೆ ನೂರು ರೂಪಾಯಿ ಸಂಪಾದಿಸುತ್ತಿದ್ದರು, ತಾಯಿ ಅವರಿವರ ಮನೆ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ತಮ್ಮ ಮೂವರು ಮಕ್ಕಳನ್ನೂ ಸರ್ಕಾರಿ ಶಾಲೆಗೆ ಸೇರಿಸಿದ್ದರು. 

ದುರ್ಗಾ ಅವರು ಶಾಲೆಯಲ್ಲಿ ಸಂಗೀತ, ನೃತ್ಯ, ಖವ್ವಾಲಿ ಹೀಗೆ ಎಲ್ಲಾ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಇದನ್ನು ನೋಡಿದ ಸಂಗೀತ ಶಿಕ್ಷಕರು ಅವರನ್ನು ದೆಹಲಿಯ ಕಥಕ್ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಪದ್ಮವಿಭೂಷಣ ಬಿರ್ಜು ಮಹಾರಾಜ್ ಅವರು ಕಲಿಸುತ್ತಿದ್ದರು. ಪುಟ್ಟ ದುರ್ಗಾರನ್ನು ನೋಡಿ, ‘ನೀನು ಯಾವ ನೃತ್ಯ ಮಾಡುತ್ತೀಯ?’ ಎಂದು ಕೇಳಿದಾಗ, ಹಿಂದಿಯ ಪ್ರಸಿದ್ಧ ‘ಝೂಮ್ಕಾ ಗಿರಾ ರೇ’ ಎಂಬ ಹಾಡಿಗೆ ನೃತ್ಯ ಮಾಡಿ ತೋರಿಸಿದರು. ಅಲ್ಲಿಂದ ಅವರು ಬಿರ್ಜು ಮಹಾರಾಜ್ ಅವರಿಂದ ನೃತ್ಯ ಶಿಕ್ಷಣವನ್ನು ಪ್ರಾರಂಭಿಸಿದರು.

ಮನೆಯ ಆರ್ಥಿಕ ಪರಿಸ್ಥಿತಿ ತಿಳಿದ ಗುರುಗಳು ಯಾವ ವೆಚ್ಚವೂ ಇಲ್ಲದೇ ನೃತ್ಯವನ್ನು ಕಲಿಸಲು ಪ್ರಾರಂಭಿಸಿದರು. ಸಣ್ಣ ವಯಸ್ಸಿನಿಂದಲೂ ಬಿರ್ಜು ಮಹಾರಾಜ್ ಅವರಲ್ಲಿ ಕಲಿತ ಹೆಮ್ಮೆ ದುರ್ಗಾ ಆರ್ಯ ಅವರದ್ದು.

ಕಥಕ್ ಕೇಂದ್ರದಲ್ಲಿ…

ಕಾಲೇಜು ಮುಗಿಸುವ ಹೊತ್ತಿಗೆ ದುರ್ಗ ಆರ್ಯ ಅವರಿಗೆ ತಮ್ಮ ದಾರಿ ತಿಳಿದುಹೋಗಿತ್ತು. ಇನ್ನು ಮುಂದೆ ಶಿಕ್ಷಣ ಪಡೆಯುವುದಿದ್ದರೆ ಅದು ನೃತ್ಯದಲ್ಲಿ ಮಾತ್ರ ಎಂದು ನಿರ್ಧರಿಸಿ, ಪೂರ್ಣಪ್ರಮಾಣದಲ್ಲಿ ಕಥಕ್ ನೃತ್ಯದಲ್ಲಿ ತೊಡಗಿಕೊಂಡರು. ಕಥಕ್ ಕೇಂದ್ರದ ತರಗತಿಗಳನ್ನು ತೆಗೆದುಕೊಳ್ಳುವುದರಲ್ಲಿ ತಮ್ಮ ಗುರುಗಳಿಗೆ ಜತೆಯಾದರು. ಯಾವುದೇ ಬ್ಯಾಚ್‌ಗಳಿಗೆ ಗುರುಗಳು ತರಗತಿ ತೆಗೆದುಕೊಂಡರೂ ದುರ್ಗಾ ಅವರ ಜತೆ ಕೆಲವು ಶಿಷ್ಯರು ಅಲ್ಲಿರುತ್ತಿದ್ದರು. ಉಳಿದ ಶಿಷ್ಯರುಗಳಿಗೆ ಕಲಿಸುವಾಗಲೂ ತಾವು ಅವರಿಗೂ ಕಲಿಸುತ್ತಾ ತಾವು ತಾಲೀಮು ಮಾಡುತ್ತಿದ್ದರು. ಹಲವು ಬಾರಿ ಕಥಕ್ ಕೇಂದ್ರದ ಆವರಣದಲ್ಲಿ ತತ್ಕಾರ್ (ಕಥಕ್ ನೃತ್ಯದಲ್ಲಿ ಹೆಜ್ಜೆ ಹಾಕುವ ವಿಶೇಷ ಪದ್ಧತಿ)ಹಾಗೂ ಚಕ್ಕರ್‌ಗಳನ್ನು ಅಭ್ಯಾಸ ಮಾಡುತ್ತಿದ್ದರು. ಕಥಕ್ ಕೇಂದ್ರ ಹಾಗೂ ರಾಷ್ಟ್ರೀಯ ನಾಟಕ ಶಾಲೆ ಒಂದೇ ಆವರಣದಲ್ಲಿರುವುದರಿಂದ ಒಂದು ಕಡೆ ನಟರು ತಮ್ಮ ಸಂಭಾಷಣೆಯನ್ನು ಅಭ್ಯಾಸ ಮಾಡುತ್ತಿದ್ದರೆ ಒಂದು ಕಡೆ ಇವರೆಲ್ಲ ನೃತ್ಯಾಭ್ಯಾಸ ಮಾಡುತ್ತಿದ್ದರು. ಬೆಳಗ್ಗೆ ಬಂದು ಗೆಜ್ಜೆ ಕಟ್ಟಿದರೆ ರಾತ್ರಿಯವರೆಗೂ ಒಂದಲ್ಲಾ ಒಂದು ಅಭ್ಯಾಸ ನಡೆಯುತ್ತಲೇ ಇರುತ್ತಿತ್ತು. ಇವರ ಕ್ಲಾಸ್ ಮುಗಿಯುವ ಹೊತ್ತಿಗೆ ರಾತ್ರಿಯೇ ಆಗುತ್ತಿತ್ತು. ಅಷ್ಟು ರಾತ್ರಿಯಲ್ಲಿ ಮನೆಗೆ ಹೋಗಬೇಕಾದಾಗ ನೆಂಟರಿಂದ, ನೆರೆಹೊರೆಯವರಿಂದ ಅನೇಕ ಮಾತುಗಳನ್ನು ಕೇಳಬೇಕಾಗಿ ಬರುತ್ತಿತ್ತು. ಮನಸ್ಸಿಗೆ ನೋವಾಗುತ್ತಿತ್ತು. ಅವರಿಗ್ಯಾರಿಗೂ ನೃತ್ಯದ ಬಗ್ಗೆ ತಿಳಿದಿರಲಿಲ್ಲ. ನನ್ನ ತಂದೆ ತಾಯಿ ಇಟ್ಟ ನಂಬಿಕೆಯಿಂದ ಎಲ್ಲಾ ಅಡೆತಡೆಗಳನ್ನು ದಾಟಿ ಅಂದುಕೊಂಡ ದಾರಿಯಲ್ಲಿ ನಡೆಯಲು ಸಹಾಯವಾಯಿತು ಎಂದು ನೆನಪಿಸಿಕೊಂಡರು ದುರ್ಗಾ.

ಮದುವೆಯಾಗಿ ಜರ್ಮನಿಗೆ ಬಂದ ನಂತರ, ಎಲ್ಲಾ ಹೊಸದು. ಇಲ್ಲಿ ಹೇಗೆ ನೃತ್ಯವನ್ನು ಮುಂದುವರಿಸುವುದು ತಿಳಿಯುತ್ತಿರಲಿಲ್ಲ. ಮನಸ್ಸು ಮುದುಡಿಹೋಗುತ್ತಿತ್ತು. ಅಲ್ಲಿಯ ಭಾಷೆಯಾಗಲೀ, ಇಂಗ್ಲಿಷ್‌ ಭಾಷೆಯಲ್ಲಾಗಲೀ ವ್ಯವಹರಿಸುವುದು ಮೊದಮೊದಲು ಸವಾಲೆನಿಸಿತು. ಅಲ್ಲಿ ಭಾರತದ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ ಕಲಾವಿದರ ಪರಿಚಯವಾದ ಮೇಲೆ ಅಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡಿದರು. ಜರ್ಮನಿಯಲ್ಲಿ ಕೆಲವು ನೃತ್ಯದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಬಿರ್ಜು ಮಹಾರಾಜ್ ಅವರು ನೃತ್ಯ ಸಂಯೋಜನೆ ಮಾಡಿದ ರೂಪಕಗಳಾದ ‘ಅಂಗ್ ತರಂಗ್’, ‘ರಾಮಾಯಣ್’, ‘ಕೃಷ್ಣಾಯಣ್’, ‘ಕುಮಾರ್ ಸಂಭವ್’ ಮುಂತಾದ ಪ್ರದರ್ಶನಗಳನ್ನು ಹಲವಾರು ದೇಶಗಳಲ್ಲಿ ನೀಡಿದ್ದಾರೆ. ಜರ್ಮನಿಗೆ ಹೋದ ನಂತರದ 20 ವರ್ಷ ಅವರು ಭಾರತದಲ್ಲಿ ನೃತ್ಯದೊಂದಿಗೆ ಸಂಪರ್ಕವೇ ಇಲ್ಲದಂತೆ ಇದ್ದರು.

ಮತ್ತೆ ಗೆಜ್ಜೆಯ ಹೆಜ್ಜೆ...

ಸುಮಾರು 20 ವರ್ಷಗಳ ನಂತರ ಭಾರತದಲ್ಲಿ 2017 ನೃತ್ಯದ ಕಾರ್ಯಾಗಾರಗಳನ್ನು ಪ್ರಾರಂಭಿಸಿದರು. ದುರ್ಗಾ ಆರ್ಯ ಅವರು ಬೆಂಗಳೂರಿನಲ್ಲಿ ನಡೆಸಿದ ಮೊದಲ ಕಾರ್ಯಾಗಾರದಲ್ಲೇ ಮಾನಸಾ ಜೋಶಿಯವರು ಭಾಗವಹಿಸಿದ್ದರು ಮತ್ತು ಅಂದಿನಿಂದ ಅವರ ಮಾರ್ಗದರ್ಶನದಲ್ಲೇ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ದುರ್ಗಾ ಆರ್ಯ ಅವರು ಭಾರತದಲ್ಲಿ ಮತ್ತೆ ತರಗತಿಗಳನ್ನು ಆರಂಭಿಸಿದಾಗ ಅವರ ಬಳಿ ಬ್ರೋಷರ್, ವಿಸಿಟಿಂಗ್ ಕಾರ್ಡ್ ಯಾವುದೂ ಇರಲಿಲ್ಲ. ಅವರು ಅಷ್ಟು ವರ್ಷ ನೃತ್ಯ ಕಲಿತಿದ್ದರೂ ಯಾವ ಸರ್ಟಿಫಿಕೇಟ್‌ಗಳನ್ನು ಪಡೆದಿರಲಿಲ್ಲ. ಇದ್ದುದೊಂದೇ ಗುರುಗಳು ಕಲಿಸಿದ ನೃತ್ಯ. ಅವರ ಕಲಿಕೆಯೇ ಅವರ ಅಂಕ ಪಟ್ಟಿ. ಒಮ್ಮೆ ಮತ್ತೆ ನೃತ್ಯ ಮಾಡಲು ಪ್ರಾರಂಭಿಸಿದಾಗ ಕಲಿತ ವಿದ್ಯೆ ತಾನಾಗೇ ಬಂದು ಜತೆಯಾಯಿತು. ಹಲವಾರು ಶಿಷ್ಯರು ಹುಡುಕಿಕೊಂಡು ಬಂದರು. ನೃತ್ಯಶೈಲಿಯ ಶುದ್ಧತೆ ಹಾಗೂ ಅಂಗಶುದ್ಧಿ, ಪರಂಪರೆಯಿಂದ ಬಂದದ್ದನ್ನು ಬಂದ ಹಾಗೆಯೇ ಮುಂದಿನ ತಲೆಮಾರಿಗೆ ದಾಟಿಸಬೇಕೆಂಬ ಹಂಬಲದಲ್ಲಿ ಹಲವಾರು ಶಿಷ್ಯರನ್ನು ತಯಾರು ಮಾಡುತ್ತಿದ್ದಾರೆ. ಇಂದಿಗೂ ಭಾರತದಲ್ಲೂ ಮತ್ತು ಬೇರೆ ಬೇರೆ ದೇಶಗಳಲ್ಲೂ ವಿದ್ಯಾರ್ಥಿಗಳು ಇವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾನಸಾ ಜೋಶಿಯವರು ಇವರ ಶಿಷ್ಯೆ. ಇವರು ನಡೆಸಿದ ಕಥಕ್ ಕಾರ್ಯಾಗಾರಗಳಲ್ಲೂ ಭಾಗವಹಿಸಿದ್ದಾರೆ.

ಮಡಿವಂತಿಕೆ ಬೇಡ

ನೃತ್ಯ, ಅದು ಶಾಸ್ತ್ರೀಯ, ಜಾನಪದ, ಅಥವಾ ಸಿನಿಮಾ ನೃತ್ಯವೇ ಇರಲಿ ಅದು ಒಳ್ಳೆಯದೇ ಆಗಿದೆ. ಕಥಕ್ ನೃತ್ಯ ಕಲಾವಿದೆ ಬಾಲಿವುಡ್ ಸಿನೆಮಾದ ಒಂದು ಒಳ್ಳೆಯ ಹಾಡಿಗೆ ಕಥಕ್ ನೃತ್ಯ ಮಾಡಿದರೆ ಏನೂ ತೊಂದರೆ ಇಲ್ಲ. ಅದು ಖುಷಿಯ ವಿಷಯವೇ. ಆದರೆ ಸರಿಯಾಗಿ ನೃತ್ಯವನ್ನು ಕಲಿಯದೇ ಕಥಕ್ ನ ರೀತಿ ಕಾಣುವ ನೃತ್ಯ ಮಾಡಿ ‘ಇದು ಕಥಕ್ ನೃತ್ಯ’ ಎಂದರೆ ಅದು ಬಹಳ ತಪ್ಪು. ಅದು ಹಲವರನ್ನು ದಾರಿ ತಪ್ಪಿಸುತ್ತದೆ.

ಕಲಿಯುವಾಗ ಯಾವುದರ ನಿರೀಕ್ಷೆ ಇಲ್ಲದೇ ಕಲಿಯಬೇಕು. ಪ್ರದರ್ಶನ ಯಾವಾಗ ಕೊಡುತ್ತೇನೆ, ರಂಗದ ಮೇಲೆ ಯಾವಾಗ ಹೋಗುತ್ತೇನೆ ಎನ್ನುವುದನ್ನು ಬಿಟ್ಟು ಹೇಗೆ ಅಂಗಶುದ್ಧಿಯನ್ನು ಸಾಧಿಸುತ್ತೇನೆ ಎಂಬುದರ ಕಡೆಗೆ ಗಮನ ಇಟ್ಟು ತಾಳ್ಮೆಯಿಂದ ಕಾದರೆ ಎಲ್ಲವೂ ಆಗುತ್ತದೆ. ಗುರಿಯನ್ನು ಸಾಧಿಸಲು ತಾಲೀಮನ್ನು ಬಿಟ್ಟು ಬೇರೆ ದಾರಿ ಇಲ್ಲ. ಪ್ರತಿನಿತ್ಯ ನೃತ್ಯವನ್ನೇ ಧ್ಯಾನಿಸಬೇಕು. ಹಾಗಾದಾಗ ಎಲ್ಲವೂ ಒಲಿದು ಬರುತ್ತದೆ. ಕಲಿಯಲು ಯಾವುದಾದರೂ ಅಡ್ಡಿ ಬಂದಾಗ ಈ ಅಡ್ಡಿಯನ್ನು ಹೇಗೆ ನಿವಾರಿಸಿಕೊಂಡು ಅದರಿಂದ ಹೊರಗೆ ಬರಬೇಕು ಎಂಬುದನ್ನು ಯೋಚಿಸಬೇಕು. ನಮ್ಮ ಕೆಲಸ-ಕಾರ್ಯ, ಇದು ಯಾವುದೂ ಸಾಧನೆಗೆ ‘ನೆಪ’ ಆಗಬಾರದು. ಹೊರಬರಲು ಯಾವುದಾದರೂ ದಾರಿ ಇದ್ದೇ ಇರುತ್ತದೆ ಎನ್ನುತ್ತಾರೆ ಅವರು.

ಯಾವ ಕಲಾವಿದನೂ ಚಪ್ಪಾಳೆಯ ಹಿಂದೆ ಬೀಳಬಾರದು. ಕಥಕ್‌ನಲ್ಲಿ 10 ಅಥವಾ 20 ಚಕ್ಕರ್ (ಸುತ್ತು) ಹಾಕಿ ನಿಂತ ಮೇಲೆ ಖಂಡಿತಾ ಜನರು ಚಪ್ಪಾಳೆ ತಟ್ಟುತ್ತಾರೆ. ಆದರೆ ಅದಕ್ಕೆ ರೂಢಿಯಾಗಬಾರದು. ನರ್ತಕನ ಭಾವ ಪ್ರೇಕ್ಷಕನಿಗೆ ಅಷ್ಟೇ ಉತ್ಕಟವಾಗಿ ತಲುಪಬೇಕು ಆಗ ಅವನ/ಳ ಮನಸ್ಸಿನಲ್ಲಿ ‘ಆಹಾ’! ಎಂದೆನಿಸಿದರೆ ಅದೇ ಗೆಲುವು. ಇಲ್ಲದಿದ್ದರೆ 20 ವರ್ಷಗಳ ನಂತರ ಯಾವ ಜಾಹೀರಾತೂ ಇಲ್ಲದೇ ನೃತ್ಯವನ್ನು ಮತ್ತೆ ಆರಂಭಿಸಿದಾಗ ಮತ್ತೆ ಯಾಕೆ ಜನ ನನ್ನನ್ನೇ ಹುಡುಕಿಕೊಂಡು ಬರಬೇಕು?’ಎಂದು ಅವರು ಕೇಳುವುದರಲ್ಲೇ ಉತ್ತರವೂ ಇದೆ.

ಭಾನುವಾರವೂ ಕಥಕ್‌ ಗುಂಗು

ಚಿಕ್ಕ ವಯಸ್ಸಿನಲ್ಲಿ ಭಾನುವಾರವೂ ಗುರುಗಳು ಅವರ ಮಕ್ಕಳ ಜೊತೆಗೆ ಅವರ ಮನೆಯಲ್ಲಿಯೇ ಕ್ಲಾಸ್ ಮಾಡುತ್ತಿದ್ದರು. ಹಾಗಾಗಿ ಅವರ ಶಿಷ್ಯರೂ ಅವರ ಸ್ವಂತ ಮಕ್ಕಳಂತೆಯೇ ಕಲಿತರು. ನಂತರದಲ್ಲಿ ಭಾನುವಾರವೂ ಅಭ್ಯಾಸ ಮಾಡುವವರಿಗೆ ಅನುಕೂಲವಾಗಲು ಕಥಕ್ ಕೇಂದ್ರದ ಕೊಠಡಿಗಳು ತೆರೆದಿರುವಂತೆ ನೋಡಿಕೊಳ್ಳುತ್ತಿದ್ದರು. ಅವರ ಶಿಷ್ಯಂದಿರಲ್ಲಿ ಒಂದೊಂದಕ್ಕೆ ಒಬ್ಬೊಬ್ಬರ ಉದಾಹರಣೆಯನ್ನು ಕೊಡುತ್ತಿದ್ದರು. ಅಭಿನಯಕ್ಕೆ ಶಾಶ್ವತಿ ಸೇನ್, ಚಕ್ಕರ್( ಕಥಕ್ ನೃತ್ಯದಲ್ಲಿ ತಿರುಗುವ ವಿಶೇಷವಾದ ಪದ್ಧತಿ)ಗೆ ದುರ್ಗಾ ಅವರ ಉದಾಹರಣೆ ಕೊಡುತ್ತಿದ್ದರು. ಒಬ್ಬೊಬ್ಬರು ಉಳಿದವರನ್ನು ನೋಡಿ ಕಲಿಯುತ್ತಿದ್ದುದು ಹೆಚ್ಚು. ಆದರೆ ಅದರಲ್ಲಿ ಈರ್ಷ್ಯೆ ಇರಲಿಲ್ಲ. ದುರ್ಗಾ ಅವರನ್ನು ಗುರುಗಳು ಪ್ರೀತಿಯಿಂದ ‘ಬಿಜಲಿ’ಎಂದು ಕರೆಯುತ್ತಿದ್ದರು. ಅಭ್ಯಾಸ ಮಾಡದೇ ಬಂದಾಗ ಬೈಗುಳಗಳನ್ನೂ ಕೇಳಬೇಕಾಗುತ್ತಿತ್ತು. ನೃತ್ಯವನ್ನು ಎಷ್ಟರಮಟ್ಟಿಗೆ ಧ್ಯಾನಿಸುತ್ತಿದ್ದರೆಂದರೆ, ಒಮ್ಮೊಮ್ಮೆ ರಸ್ತೆ ದಾಟುವಾಗ ಪಡಂತ್ (ನೃತ್ಯ ಮಾಡುವುದಕ್ಕೆ ಹೇಳುವ ಬೋಲ್ ಅಥವಾ ಸೊಲ್ಲುಕಟ್ಟು) ಗಳನ್ನು ತಾಳಗಳನ್ನು ಹಾಕುತ್ತಾ ಮೈಮರೆತು ರಸ್ತೆಯಲ್ಲಿ ಹೋಗುವ ವಾಹನ ಸವಾರರಿಂದ, ಜನಗಳಿಂದ ಬಯ್ಯಿಸಿಕೊಂಡ ಎಷ್ಟೋ ಉದಾಹರಣೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು