ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಂಗಭೂಮಿ ಮತ್ತು ಬೇಸಿಗೆ ಶಿಬಿರ

Last Updated 4 ಮೇ 2019, 14:29 IST
ಅಕ್ಷರ ಗಾತ್ರ

ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗಾಗಿ ಅವರ ಮೈ ಮನಸುಗಳನ್ನು ಉಲ್ಲಸಿತಗೊಳಿಸಲು ಹಲವಾರು ಬಗೆಯ ಬೇಸಿಗೆ ಶಿಬಿರಗಳು ಆರಂಭವಾಗುತ್ತವೆ. ಈ ನೆಲೆಯಲ್ಲಿ ರಂಗಭೂಮಿಯನ್ನು ಮುಖ್ಯ ಕೇಂದ್ರವಾಗಿರಿಸಿಕೊಂಡು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಮತ್ತು ಹೊರನಾಡಿನಲ್ಲೂ ಕೂಡ ನಾಟಕ ಶಿಬಿರಗಳು ಆಯೋಜನೆಗೊಳ್ಳುತ್ತವೆ. ರಜೆಯ ಅವಧಿಯಲ್ಲಿ ಒಂದಿಷ್ಟು ಸಮಯವನ್ನು ನಾಟಕಕ್ಕೆ ಕೊಡಬೇಕು ಎನ್ನುವ ಆಸಕ್ತ ಪೋಷಕರ ಪ್ರೋತ್ಸಾಹದಿಂದ ಬೇಸಿಗೆ ರಜೆಯ ಅವಧಿಯ ನಾಟಕ ಶಿಬಿರಗಳು ಆಯೋಜನೆಗೊಳ್ಳುತ್ತವೆ.

ತುಂಟ ಮಕ್ಕಳ ಕಾಟ ಸಹಿಸಲಾಗದು ಎಂದು ಭಾವಿಸುವ ಪೋಷಕರಿಗೆ ನಾಟಕ ಅಥವಾ ಕಲೆಯ ಮೇಲೆ ಇರುವ ಪ್ರೀತಿ ಮತ್ತು ಆಸಕ್ತಿಗಳು ಈ ಬಗೆಯ ಕಮ್ಮಟಗಳು ನಡೆಯಲು ಮುಖ್ಯ ಕಾರಣವಾಗಿದೆ. ಸಾಕಷ್ಟು ಪಾಲು ಮಕ್ಕಳ ತಂದೆ ತಾಯಂದಿರು ಕಲೆಯಲ್ಲಿ ಆಸಕ್ತಿ ಹೊಂದಿದ್ದರೆ ಈ ಶಿಬಿರಗಳಿಗೆ ಸೇರಿಸುತ್ತಾರೆ. ಕೆಲವು ವಿರಳ ಸಂದರ್ಭಗಳಲ್ಲಿ ಮಕ್ಕಳ ಆಸಕ್ತಿಯೇ ಮುಖ್ಯವಾಗಿರುತ್ತದೆ. ಈ ಶಿಬಿರಗಳು ಹೆಚ್ಚಿನ ಪಾಲು ಹದಿನೈದರಿಂದ ಒಂದು ತಿಂಗಳುಗಳ ಕಾಲ ನಡೆದು, ಕೊನೆಗೆ ಒಂದು ನಾಟಕ ಪ್ರಯೋಗ ಮಾಡುವ ಉದ್ದೇಶವನ್ನು ಹೊಂದಿರುತ್ತವೆ.

ಕೆಲವು ಶಿಬಿರಗಳು ವಾಸ್ತವ್ಯ ಸಮೇತ ನಡೆಯುತ್ತವೆ. ಇದಲ್ಲದೆ ರಂಗಸಂಗೀತ, ಚಿತ್ರಕಲೆ, ರಂಗಾಟಗಳು, ಮಣ್ಣಿನ ಆಟಿಕೆಗಳ ತಯಾರಿ, ಕವನ ಕಥೆ ಇತ್ಯಾದಿ ಸೃಜನಶೀಲ ಕಲಾ ಪ್ರಕಾರಗಳು ರಂಗಭೂಮಿಯ ಆಶಯಕ್ಕೆ ಪೂರಕವಾಗಿ ಶಿಬಿರದ ಭಾಗವಾಗಿರುತ್ತವೆ. ಇದಿಷ್ಟೂ ಶಿಬಿರದ ನಿರ್ದೇಶಕರು ಅಥವಾ ಆಯೋಜನಾ ಸಂಸ್ಥೆ ಪೋಷಕರಿಂದ ಸಂಗ್ರಹಿಸುವ ಸಣ್ಣ ಅಥವಾ ದುಬಾರಿ ಮೊತ್ತದಿಂದ ನಡೆಯುತ್ತವೆ. ರಂಗಭೂಮಿಗೆ ಸಂಬಂಧಿಸದ ಕೆಲ ಸರ್ಕಾರದ ಅಂಗ ಸಂಸ್ಥೆಗಳು ಉಚಿತವಾಗಿ ಮಕ್ಕಳಿಗೆ ಕಮ್ಮಟ ನಡೆಸುತ್ತಿರುವುದನ್ನು ಕೂಡ ಗಮನಿಸಬಹುದು. ಇದೆಲ್ಲದರದ ಒಟ್ಟು ಪ್ರಯೋಜನ ಖಂಡಿತವಾಗಿಯೂ ಕನ್ನಡ ರಂಗಭೂಮಿಗೆ ದಕ್ಕುವಂತದ್ದೇ ಆಗಿದೆ.

ರಂಗಾಸಕ್ತ ಮಕ್ಕಳೊಂದಿಗೆ ನಟನಾ ತಂಡದ ಮಂಡ್ಯ ರಮೇಶ್‌
ರಂಗಾಸಕ್ತ ಮಕ್ಕಳೊಂದಿಗೆ ನಟನಾ ತಂಡದ ಮಂಡ್ಯ ರಮೇಶ್‌

ಕನ್ನಡ ರಂಗಭೂಮಿಯಲ್ಲಿ ಮಕ್ಕಳ ರಂಗಭೂಮಿಯದ್ದು ಮಹತ್ವದ ಕಾರ್ಯಕ್ಷೇತ್ರ. ಶಿಕ್ಷಣದಲ್ಲಿ ರಂಗಭೂಮಿಯ ಅಗತ್ಯ ಮತ್ತು ಅನಿವಾರ್ಯತೆಯ ಚರ್ಚೆ ಬಹಳ ಪುರಾತನವೂ ಮತ್ತು ವರ್ತಮಾನ ಹಾಗೂ ಭವಿಷ್ಯತ್ತಿನ ದಿಕ್ಸೂಚಿಯೂ ಹೌದು. ಮಕ್ಕಳಿಗೆ ಇಂದು ಕೋವಿಗಳ ಆಟಿಕೆಗಳನ್ನು ಕೊಟ್ಟಿದ್ದೇವೆ, ಎಲ್ಲವನ್ನೂ ಹೊಡೆದು ಉರುಳಿಸುವ ಬುಲ್ಡೋಜರ್ ಕೊಡುತ್ತಿದ್ದೇವೆ. ಲೋಕವನ್ನು ಸಂಪೂರ್ಣ ಮರೆಸಿ ಎಳೆಯ ಬೆರಳುಗಳಿಗೆ ಮತ್ತು ಬುದ್ಧಿ ಭಾವಗಳಿಗೆ ಜೋಮು ಹಿಡಿಸುವ ಡಿಜಿಟಲ್ ಉಪಕರಣಗಳನ್ನು ಕೊಟ್ಟುಬಿಟ್ಟಿದ್ದೇವೆ.

ಇದೆಲ್ಲ ಮಕ್ಕಳ ಮನೋವಿಕಾಸಕ್ಕೆ ಏನು ಸಹಾಯ ಮಾಡುತ್ತದೆ ಎನ್ನುವುದನ್ನ ಹಿರಿಯರ ಪ್ರಪಂಚ ಯೋಚಿಸಬೇಕು. ಇನ್ನು ಶಾಲೆಯ ಅವಧಿಯಲ್ಲಿ ಶೈಕ್ಷಣಿಕ ಶಿಸ್ತು ಎಂದು ಅಂಕ ಕೇಂದ್ರಿತವಾಗಿ ಮಕ್ಕಳ ಪೋಷಣೆಯಾಗುತ್ತಿದೆ. ಲೋಕದಲ್ಲಿನ ಬಣ್ಣಗಳನ್ನು, ಧ್ವನಿಗಳನ್ನು ಮತ್ತು ಸುತ್ತ ಮುತ್ತಲಿರುವ ಕಥನವನ್ನು ಕೇಳುತ್ತಾ ನೋಡುತ್ತಾ ಚಲನಶೀಲತೆಯಿಂದ ಕಲಿಯುವಂತಾದರೆ ಮಕ್ಕಳು ವಿಕಾರದ ದಾರಿಯಿಂದ ವಿಕಾಸದ ಹಾದಿಗೆ ಬರುತ್ತಾರೆ. ಸಮೂಹ ಅಥವಾ ಬಳಗದಲ್ಲಿದ್ದುಕೊಂಡು ಬಹುತ್ವವನ್ನು ಕಲಿಯುವ ಸೃಜನಶೀಲ ಪ್ರಕಾರವೆಂದರೆ ಅದು ರಂಗಭೂಮಿ ಮಾತ್ರ. ರಂಗದಲ್ಲಿ ಮಕ್ಕಳ ಗ್ರಹಿಕೆ ಮತ್ತು ಆಲೋಚನಾ ಕ್ರಮ ವಿಸ್ತಾರವಾಗುತ್ತಲೇ ಕೌಶಲ ಮುನ್ನೆಲೆಗೆ ಬರುತ್ತದೆ. ಇದು ಕೇವಲ ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಟನೆ, ಹಾಡು, ಬಣ್ಣ, ಇತ್ಯಾದಿಗಳು ಮಾತ್ರವಲ್ಲದೆ ನಾಯಕತ್ವ, ಸಂಘಟನೆ ಎಲ್ಲರನ್ನೂ ಒಳಗೊಳ್ಳುವ ನಾವು ನಮ್ಮವರು ಎನ್ನುವ ಮನಸ್ಥಿತಿ ಬೆಳೆದುಬಿಡುತ್ತದೆ. ಇಂದು ವ್ಯಕ್ತಿ ಕೇಂದ್ರದಲ್ಲಿ ಬದುಕು ಸಿಲುಕಿ ಬಳಗ ಪ್ರಜ್ಞೆಯನ್ನು ಕಳೆದುಕೊಂಡು ವಿಲ ವಿಲ ಒದ್ದಾಡುತ್ತಿರುವಾಗ ಮಕ್ಕಳಿಗೆ ರಂಗಭೂಮಿಯ ಒಲವು ಮೂಡಿಸುವುದು ಮತ್ತು ರಂಗಭೂಮಿ ಮಕ್ಕಳ ಕಡೆಗೆ ಚಲಿಸುವುದು ಕನ್ನಡ ರಂಗಭೂಮಿಯ ಬಹಳ ಮುಖ್ಯ ಜವಾಬ್ದಾರಿಯಾಗಿದೆ. ಮೌಲ್ಯ, ವೈಚಾರಿಕತೆ, ಪರಂಪರೆ ಎಲ್ಲವನ್ನೂ ಮಕ್ಕಳು ತಾವೇ ವಿವೇಚಿಸಲು ಅನುಕೂಲ ಆಗುವಂತಹ ವಾತಾವರಣವನ್ನು ರಂಗಭೂಮಿ ಹೇಳಿಕೊಡುತ್ತದೆ. ರಂಗಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಮಕ್ಕಳನ್ನು ಮಾನವೀಯವನ್ನಾಗಿಸುವುದಲ್ಲದೇ ಅರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಮುಖ್ಯ ಕಾರಣವಾಗುತ್ತವೆ.

ಮಕ್ಕಳದ ನಾಟಕದ ಒಂದು ದೃಶ್ಯ​
ಮಕ್ಕಳದ ನಾಟಕದ ಒಂದು ದೃಶ್ಯ​

ಮಕ್ಕಳು ಮತ್ತು ರಂಗಭೂಮಿಯ ಆಶಯಕ್ಕೆ ಅನುಗುಣವಾಗಿ ಹಲವಾರು ಆಸಕ್ತ ಮತ್ತು ಬದ್ಧತೆಯುಳ್ಳ ರಂಗಕರ್ಮಿಗಳು ಮತ್ತು ರಂಗತಂಡಗಳು ಬೇಸಿಗೆಯಲ್ಲಿ ಮಕ್ಕಳಿಗೆ ರಂಗಶಾಲೆಯನ್ನು ನಡೆಸುತ್ತಾರೆ. ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಗಮನಿಸಬಹುದು. ಕೋಲಾರದ ಆದಿಮ ಬೆಟ್ಟದಲ್ಲಿ ನಡೆಯುವ ಚುಕ್ಕಿಮೇಳ, ಮಂಡ್ಯ ರಮೇಶ್ ಅವರ ಮೈಸೂರಿನ ನಟನ, ಸಂಚಾರಿಯ ರಂಗಕರ್ಮಿ ಮಂಗಳ ಅವರು ನಡೆಸುವ ರಂಗಶಿಬಿರ, ಶೋಭಾ ವೆಂಕಟೇಶ್ ಅವರ ವಿಜಯನಗರ ಬಿಂಬ, ಪ್ರತಿಭಾ ಎಂ.ವಿ. ಅವರ ಸಾಗರದ ಸ್ಪಂದನ, ದಕ್ಷಿಣ ಕನ್ನಡದಲ್ಲಿ ಪದ್ಮ ಕೊಡಗು ಮತ್ತು ಬಾಸುಮ ಕೊಡಗು ನಡೆಸುವ ಶಿಬಿರಗಳು, ರಾಮನಗರದಲ್ಲಿ ಭೈರೇಗೌಡರ ಮುದ್ದುಶ್ರೀ ದಿಬ್ಬದಲ್ಲಿ ನಡೆಯುವ ಶಿಬಿರಗಳು, ದೆಹಲಿ ಮತ್ತು ಮುಂಬೈ ಕನ್ನಡ ರಂಗಭೂಮಿಯ ಭಾಗವಾಗಿ ಆಯೋಜನೆಗೊಳ್ಳುವ ಶಿಬಿರಗಳು, ಇದಲ್ಲದೆ ಇನ್ನೂ ಅನೇಕ ರಂಗತಂಡಗಳು ಬಡಾವಣೆಯನ್ನು, ತಾಲ್ಲೂಕನ್ನು ಮತ್ತು ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಮಕ್ಕಳಿಗಾಗಿ ರಂಗಶಿಬಿರಗಳನ್ನು ನಡೆಸುತ್ತಿವೆ. ಇದಲ್ಲದೇ ಇತ್ತೀಚೆಗೆ ಕುಪ್ಪಳಿಯಲ್ಲಿ ಆದಿ ಚುಂಚನಗಿರಿ ಮಠ ಮಕ್ಕಳಿಗಾಗಿ ನಾಟಕ ರಚನೆ ಮತ್ತು ಅದರ ಪ್ರಯೋಗವನ್ನು ಕೇಂದ್ರವಾಗಿಸಿಕೊಂಡು ಇಡೀ ರಾಜ್ಯದಿಂದ ನೂರು ಮಕ್ಕಳನ್ನು ಆರಿಸಿ ಮಕ್ಕಳ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ರಂಗಕಮ್ಮಟ ಆಯೋಜಿಸಿತ್ತು. ರಂಗಾಯಣಗಳು ಮತ್ತು ನಾಟಕ ಅಕಾಡೆಮಿ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

ಮಕ್ಕಳ ರಂಗಭೂಮಿ ಎಂದರೆ ಅದು ಬೇಸಿಗೆ ರಜೆಯಯನ್ನು ಮಾತ್ರ ಕೇಂದ್ರೀಕರಿಸದೆ, ಇದರಾಚೆಗೂ ಮಕ್ಕಳನ್ನು ರಂಗಭೂಮಿಯಲ್ಲಿ ತೊಡಗಿಸಲು ಶಾಲಾ ರಂಗಭೂಮಿ ಮತ್ತು ಕಾಲೇಜು ರಂಗಭೂಮಿ ದಿಟ್ಟ ಹೆಜ್ಜೆಯನ್ನಿಡುವ ಅಗತ್ಯವನ್ನು ಕಾಲವೇ ಸೂಚಿಸುತ್ತಿದೆ. ಇದೆಲ್ಲದರ ಆಚೆಗೆ ರಂಗಭೂಮಿಯ ಸವಿಯನ್ನು ಶಿಬಿರಗಳಲ್ಲಿ ಕಂಡುಂಡ ಮಕ್ಕಳು ರಂಗಶಿಬಿರದ ಕಾರಣಕ್ಕೆ ಬೇಸಿಗೆ ರಜೆಯನ್ನು ಕಾಯುತ್ತಾರೆ. ಹಲವಾರು ಬಾಲ ಕಲಾವಿದರು ಶಿಬಿರಗಳಿಂದ ಬಂದು ನಂತರದಲ್ಲಿ ರಂಗಕರ್ಮಿಗಳಾಗಿ ಹೊರಹೊಮ್ಮಿರುವುದು ನಾಟಕರಂಗಕ್ಕೆ ಇಂತಹ ಶಿಬಿರಗಳಿಂದ ದೊರೆತ ಕೊಡುಗೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT