ನೀತೂ ಬದುಕಿನ ನೀತಿ

ಮಂಗಳವಾರ, ಜೂನ್ 25, 2019
22 °C

ನೀತೂ ಬದುಕಿನ ನೀತಿ

Published:
Updated:
Prajavani

ಇದು ತಿರಸ್ಕಾರದ ವಿರುದ್ಧ. ಮನಸ್ಸು ಹಾಗೂ ಭಾವನೆಯ ನಡುವಿನ ಘೋರ ಕದನದ ವಿರುದ್ಧ ಹಾಗೂ ಅಸ್ತಿತ್ವದ ಭೀಕರ ಆಸ್ಫೋಟದ ವಿರುದ್ಧ ಹೋರಾಡಿ ಗೆದ್ದ ಕಥೆ. ಹುಟ್ಟಿನಿಂದ ಗಂಡಾಗಿ ನಂತರ ಹೆಣ್ಣಾಗಿ ಅಸ್ತಿತ್ವ ಕಂಡುಕೊಂಡ ಕಥೆ. ಕಿತ್ತು ತಿನ್ನುವ ಬಡತನದ ವಿರುದ್ಧ ಈಜುತ್ತಲೇ ಮೂರು ಡಜನ್‌ನಷ್ಟು ಜನರಿಗೆ ಉದ್ಯೋಗ ಒದಗಿಸಿದ ಯಶಸ್ಸಿನ ಕಥನ.

ಇದು ಮಂಜುನಾಥ್ ಎಂಬ ಹುಡುಗ ನೀತು ಆಗಿ ಬದಲಾದ ಕಥೆ. ನಾನು ಅವನಲ್ಲ, ಅವಳು ಆದ ಕಥೆ! ವಿಶ್ವದ ಪ್ರಥಮ ತೃತೀಯಲಿಂಗಿ ಟ್ಯಾಟೂ ಕಲಾವಿದೆ ನೀತು ಅವರ ದುರಂತ ಹಾಗೂ ಯಶಸ್ಸಿನ ಕಥೆಯಲ್ಲಿ ಬದುಕಿಗೆ ಬೇಕಾದ ಪಾಠಗಳಿವೆ. ಭಿಕ್ಷಾಟನೆ ಹಾಗೂ ವೇಶ್ಯಾವಾಟಿಕೆ ಕೂಪದಲ್ಲಿಯೇ ಬದುಕನ್ನು ಸಾಗಿಸಿ ಸಾವಿನ ಮನೆ ಸೇರಿ ಬಿಡುವ ಬಹುತೇಕ ತೃತೀಯಲಿಂಗಿಗಳಿಗೆ, ಬಡತನಕ್ಕೆ ಹಣೆಬರಹವನ್ನು ತೆಗಳುತ್ತಲೇ ಬಡತನದಲ್ಲಿಯೇ ಕೊನೆಯುಸಿರೆಳೆಯುವವರಿಗೆ, ಶಿಕ್ಷಣದ ಅಂತಿಮ ಉದ್ದೇಶವೇ ಸರ್ಕಾರಿ ನೌಕರಿ ಎಂದು ಭ್ರಮಿಸಿರುವವರಿಗೆ ನೀತು ಅವರು ಸಾಗಿಸಿದ ಬದುಕು ಒಂದು ಸ್ಪಷ್ಟ ಉತ್ತರದಂತಿದೆ.‌

ನೀತು ಅವರ ಕಥೆ ಪ್ರಾರಂಭವಾಗುಗುವುದು ಗದಗ ಪಟ್ಟಣದಲ್ಲಿ. 1988ರಲ್ಲಿ. ಗಂಡೆಂದು ಭಾವಿಸಿ ಇಟ್ಟ ಹೆಸರು ಮಂಜುನಾಥ್. ಹೆಣ್ಣಿನ ಭಾವನೆ ಹೊತ್ತುಕೊಂಡು ಗೊಂದಲದಲ್ಲಿಯೇ ಸಿ.ಎಸ್. ಪಾಟೀಲ್ ಹೈಸ್ಕೂಲ್ ಹಾಗೂ ವಿಜಯ ಕಾಲ ಮಂದಿರ ಡ್ರಾಯಿಂಗ್ ಕೋರ್ಸ್ ಮುಗಿಸಿದ ನೀತು ನಂತರ ಬೆಂಗಳೂರಿಗೆ ಬಂದರು. ಕೆನ್ ಸ್ಕೂಲ್ ಆಫ್ ಆಟ್ಸ್ ಸಂಸ್ಥೆಯಲ್ಲಿ ಐದು ವರ್ಷದ ವಿಶ್ಯುವಲ್ ಆಟ್ಸ್ ವಿಷಯದಲ್ಲಿ ಪದವಿ ಪಡೆದರು.

ಆರಂಭದ ದಿನಗಳಲ್ಲಿ ಅಣ್ಣನ ಹಾಗೂ ಆತನ ಸ್ನೇಹಿತರ ಜೊತೆಗೆ ಕೊಠಡಿಯಲ್ಲಿ ವಾಸ. ‘ಗಂಡಸರ ಜೊತೆ ವಾಸವಾಗಿರುವುದೇ ಹಿಂಸೆಯಾಗುತ್ತಿತ್ತು’ ಎಂದು ಮನದಾಳ ಬಿಚ್ಚಿಡುತ್ತಾರೆ ನೀತು.

‘ದಿನನಿತ್ಯದ ಬಸ್‌ಪಾಸ್‍ಗಾಗಿ ಅಣ್ಣನಿಂದ ₹ 25 ಪಡೆದು ಅದನ್ನೆ ಸಂಜೆ ₹ 10ಗೆ ಮಾರಿ, ಆ ದುಡ್ಡಿನಿಂದ ಸಿಕ್ಕಿದ್ದನ್ನು ತಿನ್ನುವ ಅನಿವಾರ್ಯತೆ. ಕೆಲವೊಮ್ಮೆ ತಿನ್ನಲು ಏನೂ ಸಿಗದೆ ಹಿಸಿವಿನಿಂದ ದಿನ ದೂಡಿದ ದಿನಗಳಿಗೆ ಲೆಕ್ಕವೂ ಇಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ.

ಅವರಿಗೆ ಮೊದಲಿನಿಂದಲೂ ಟ್ಯಾಟೂ ಕಲೆಯ ಬಗ್ಗೆ ಆಸಕ್ತಿ. ಹಣ ಸಂಪಾದಿಸಲು ಪದವಿಯ ದಿನಗಳಲ್ಲಿಯೇ ಟ್ಯಾಟೂ ಹಾಕತೊಡಗಿದರು. ತಮ್ಮ ಬದ್ಧತೆಯಿಂದಾಗಿ ಕೆಲವೇ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದರು. ಕೊಂಚ ಹಣವೂ ಸಂಗ್ರಹವಾಯಿತು. ಮೂರು ಟ್ಯಾಟ್ಯು ಪಾರ್ಲರ್‌ಗಳನ್ನು ತೆರೆದರು. ಪದವಿ ಶಿಕ್ಷಣಕ್ಕಾಗಿ ₹ 5 ಲಕ್ಷ ಹೊಂದಿಸುವ ಅನಿವಾರ್ಯತೆ. ಇದಕ್ಕಾಗಿ ಹುಟ್ಟುಹಬ್ಬದಂತಹ ಸಂದರ್ಭಗಳಲ್ಲಿ ಟ್ಯಾಟು ಹಾಕುವುದನ್ನು ಆರಂಭಿಸಿದರು. ಇದು ಅವರನ್ನು ಇನ್ನೊಂದು ಲೋಕಕ್ಕೆ ಪರಿಚಯಿಸಿತು. ತಾವೇ ಇವೆಂಟ್ ಮ್ಯಾನೇಜರ್ ಆದರು. ಬತ್‌ಡೇ ಪಾರ್ಟಿ ಆಯೋಜಕಿಯಾಗಿ ಹೊರಹೊಮ್ಮಿದರು. ‘ಚಿಕ್ಕಂದಿನಿಂದಲೂ ಸೌಂದರ್ಯದೆಡೆಗೆ ನನಗೆ ತೀವ್ರ ಸೆಳೆತ. ಹೀಗಾಗಿ, ಬ್ಯೂಟಿ ಪಾರ್ಲರ್ ಕ್ಷೇತ್ರಕ್ಕೆ ಕಾಲಿಟ್ಟೆ. ಪಾರ್ಲರ್ ತೆರೆದೆ’ ಎಂದು ಅಂದಿನ ತಮ್ಮ ಹೋರಾಟದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ.

ನಂತರ ತಮ್ಮ ತಾಯಿ ಹಾಗೂ ತಂಗಿಯನ್ನು ಬೆಂಗಳೂರಿಗೆ ಕರೆತಂದರು. ಹಸಿವಿನಿಂದ ಕಳೆದ ದಿನಗಳು ನೀತು ಅವರನ್ನು ಒಂದು ಸಾಹಸಕ್ಕೆ ಪ್ರೇರೇಪಿಸಿದಂತಿತ್ತು. ಸಾವಿರಾರು ವಿದ್ಯಾರ್ಥಿಗಳು ಕೈಗೆಟುಕುವ ದರದಲ್ಲಿ ಶುಚಿ- ರುಚಿ ಆಹಾರಕ್ಕೆ ಪರದಾಡುತ್ತಿದ್ದುದನ್ನು ಗಮನಿಸಿದ್ದ ಅವರು ಹೋಟೆಲ್ ತೆರೆಯಲು ನಿರ್ಧರಿಸಿದರು. ಈ ಸಾಹಸಕ್ಕೆ ಅವರ ತಾಯಿ ಸಾಥ್ ನೀಡಿದರು. ಅಂದು ಕತ್ರಿಗುಪ್ಪೆಯಲ್ಲಿ ಆರಂಭವಾದ ಅವರ ಹೋಟೆಲ್ ಹೆಸರು ‘ಉತ್ತರ ಕರ್ನಾಟಕ ಘಮ ಘಮ’.

ಅದೇ ಸಮಯಕ್ಕೆ ಮತ್ತೊಂದು ತಿರುವಿಗೆ ನೀತು ಮುಖಾಮುಖಿಯಾಗಿದ್ದರು. ‘ಮಿಸ್ ಟ್ರಾನ್ಸ್ ಡಯಮಂಡ್ 2017’ ಸೌಂದರ್ಯ ಸ್ಪರ್ಧೆ ಬಗ್ಗೆ ತಿಳಿದುಕೊಂಡ ಅವರು ಅದರಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದರು.

‘ಏನೆಲ್ಲಾ ಆದರೂ ನಾನು ನಾನಾಗಿಯೇ ಇರಲಿಲ್ಲ. ನನ್ನೊಳಗೆ ಬೇಗುದಿ ಸುನಾಮಿಯಾಗುತ್ತಲೇ ಇತ್ತು. ಬಡತನದ ದಿನಗಳಲ್ಲಿ ನೈಜತೆಯನ್ನು ಬಹಿರಂಗಪಡಿಸಿದರೇ ಯಾರೂ ನನ್ನನ್ನು ಒಪ್ಪುತ್ತಿರಲಿಲ್ಲ. ಅನಿವಾರ್ಯವಾಗಿ ನನ್ನ ಭಾವನೆಗಳನ್ನೆಲ್ಲ ಅದುಮಿ ಹಿಡಿದಿಟ್ಟುಕೊಳ್ಳಬೇಕಿತ್ತು. ಸೌಂದರ್ಯ ಸ್ಪರ್ಧೆಯ ನಂತರ ಮನಗೆ ಬಂದ ನಂತರ ನನ್ನನ್ನು ನೋಡಿದ ನನ್ನ ಅವ್ವ, ‘ಇವತ್ತು ನೀನು ನಿನ್ನ ತಂಗಿಗಿಂತಲೂ ಚೆನ್ನಾಗಿ ಕಾಣಿಸ್ತಿದ್ದೀಯ’ ಎಂದು ಹೇಳಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಕೆಲವೇ ದಿನಗಳಲ್ಲಿ ಸತ್ಯ ಬಹಿರಂಗ ಪಡಿಸಿದಾಗ ತಾಯಿ ಇದೊಂದು ಜೋಕ್ ಇರಬೇಕೆಂದು ಕೊಂಡರು. ವಿಷಯವನ್ನು ಅರಗಿಸಿಕೊಳ್ಳಲು ಅಣ್ಣ ಹಾಗೂ ತಂಗಿಗೆ ನಾಲ್ಕು ದಿನ ಹಿಡಿದವು. ತೃತೀಯಲಿಂಗಿ ವಿಷಯದ ಬಗ್ಗೆ ವಿವರವಾಗಿ ಹೇಳಿದಾಗ ಅವರು ನೀತು ಅವರನ್ನು ಒಪ್ಪಿ- ಅಪ್ಪಿಕೊಂಡರು’ ಎಂದು ನೆನಪಿಸಿಕೊಳ್ಳಿತ್ತಾರೆ. ನೀತು ಅವರ ತಂದೆ ಸತ್ಯವನ್ನು ಒಪ್ಪಿಕೊಂಡರೂ ಅರಗಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ.

ವಿಪರೀತ ಯಾತನಾಮಯ ಶಸ್ತ್ರಚಿಕಿತ್ಸೆಗೆ ಒಳಗಾದ ನೀತು ಒಂದು ವರ್ಷದ ನಂತರ ಹೆಣ್ಣಾಗಿ ಬದಲಾದಾರು. ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯ ಟ್ಯಾಲೆಂಟ್ 2017 ವಿಜೇತೆ ನೀತು ಮಿಸ್ಟರ್ ಹಾಗೂ ಮಿಸ್ ಬ್ಯೂಟಿ ಜ್ಯೂರಿಯಾಗಿ ಕೆಲಸ ಮಾಡಿದ್ದಾರೆ. ಫ್ಯಾಷನ್ ವೈಬ್ಸ್ 2018 ಟಾಪರ್, ಟೆಸ್ಕೋ ಸರ್ವಿಸಸ್ ಅಚಿವರ್ ಆವಾರ್ಡ್‌, ಸೆಲೆಬ್ರಿಟಿ ಲೈಫ್ ಬ್ಯೂಟಿ ಪಾರ್ಲರ್ ಪ್ರಶಸ್ತಿ ಪಡೆದ ನೀತು ಕಥಕ್ಕಳಿ ಹಾಗೂ ಕ್ಲಾಸಿಕಲ್ ನಾಟ್ಯ ಪ್ರವೀಣೆಯೂ ಹೌದು.

ನೀತು ಕತ್ರಿಗುಪ್ಪೆಯಲ್ಲಿ ಒಂದು ಹೋಟೆಲ್, ಒಂದು ಟ್ಯಾಟೂ ಸ್ಟುಡಿಯೊ, ಒಂದು ಬ್ಯೂಟಿ ಪಾರ್ಲರ್ ಹಾಗೂ ಎಚ್‌ಎಸ್‌ಆರ್ ಲೇಔಟ್‍ನಲ್ಲಿ ಎರಡು ಟ್ಯಾಟೂ ಸ್ಟುಡಿಯೊ ನಡೆಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಖ್ಯೆ 40.

‘ತೃತೀಯಲಿಂಗಿಗಳಿಗೆ ಬೇಕಿರುವುದು ಸಮಾಜ ಸಾಂತ್ವನವಲ್ಲ ಒಪ್ಪಿಗೆ. ಗಂಡು- ಹೆಣ್ಣುಗಳಂತೆ ತೃತೀಯಲಿಂಗಿಗಳೂ ಮನುಷ್ಯರೇ. ನಮ್ಮನ್ನು ಒಪ್ಪಿಕೊಳ್ಳಿ. ಭಿಕ್ಷಾಟನೆ ಹಾಗೂ ವೇಶ್ಯಾವಾಟಿಕೆಯಿಂದ ತೃತೀಯಲಿಂಗಿಗಳು ಹೊರಬರಬೇಕು. ಬದುಕುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !