ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಜಲ ಸಂರಕ್ಷಣೆ: ‘ನಮನ’ದ ನೃತ್ಯ ಜಾಗೃತಿ

Last Updated 24 ಆಗಸ್ಟ್ 2021, 15:26 IST
ಅಕ್ಷರ ಗಾತ್ರ

ನದಿಗಳು ಜನಜೀವನಕ್ಕೆ ಆಧಾರವಾಗಿದ್ದರೂ ಮಾನವನಿಂದ ನದಿಗಳ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ನದಿಗಳ ಶುದ್ಧೀಕರಣಕ್ಕಾಗಿಯೇ ಕೋಟಿಗಟ್ಟಲೆ ಹಣ ನದಿಯೋಪಾದಿಯಲ್ಲೇ ಹರಿಯುತ್ತಿದೆ. ಆದರೆ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಆಶಯ ಇನ್ನೂ ಈಡೇರಿಲ್ಲ.

ಈ ನದಿಗಳ ಮಹತ್ವ ಹಾಗೂ ಅವುಗಳ ಮಾಲಿನ್ಯದಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಭರತನಾಟ್ಯದಲ್ಲಿ ಅಳವಡಿಸಿದ್ದಾರೆ ದಾವಣಗೆರೆಯ ‘ನಮನ ಅಕಾಡೆಮಿ’ಯ ಗುರು ಮಾಧವಿ ಡಿ.ಕೆ. ಈಚೆಗೆ ‘ರಿವರ್ಸ್‌ ಆಫ್‌ ಇಂಡಿಯಾ’ ಎಂಬ ಮ್ಯೂಸಿಕ್‌ ವಿಡಿಯೊಗೆ ಮಾಡಿರುವ ಈ ನೃತ್ಯ ಸಂಯೋಜನೆಯನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು ಸಹೃದಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮದ್ರಾಸ್‌ ಐಐಟಿಯ ‘ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಕ್ಲೀನ್‌ ವಾಟರ್‌’ ಹೊರತಂದಿರುವ ‘ರಿವರ್ಸ್‌ ಆಫ್‌ ಇಂಡಿಯಾ’ ಮ್ಯೂಸಿಕ್‌ ವಿಡಿಯೊದಲ್ಲಿ ದೇಶದ 50ಕ್ಕೂ ಹೆಚ್ಚು ನದಿಗಳ ವಿವರವಿದೆ. ಪ್ರಖ್ಯಾತ ಗಾಯಕರ ದನಿಯಲ್ಲಿ ಮೂಡಿಬಂದಿರುವ ಈ ವಿಡಿಯೊ ಏಪ್ರಿಲ್‌ನಲ್ಲಿ ಭೂಮಿ ದಿನದಂದು ಬಿಡುಗಡೆಯಾಗಿದ್ದು, ಈಗಾಗಲೇ ಜನಪ್ರಿಯಗೊಂಡಿದೆ. ಇದೇ ವಿಡಿಯೊದ ಹಾಡಿಗೆ ಮಾಧವಿ ಅವರು ನೃತ್ಯ ಸಂಯೋಜನೆ ಮಾಡಿ ಪ್ರತ್ಯೇಕ ವಿಡಿಯೊ ಮಾಡಿಸಿದ್ದಾರೆ.

‘ಮಾನವನಿಗೆ ಜೀವಜಲದ ಅವಶ್ಯಕತೆ, ನದಿಗಳ ಮೇಲೆ ಮಾನವನ ದೌರ್ಜನ್ಯ, ಜಲರಕ್ಷಣೆಯ ಅಗತ್ಯ, ಕಲುಷಿತ ನೀರಿನಿಂದ ಆಗುತ್ತಿರುವ ಪರಿಣಾಮಗಳನ್ನು ನೃತ್ಯದಲ್ಲಿ ಬಿಂಬಿಸಲಾಗಿದೆ. ಜಲ ಸಂರಕ್ಷಣೆಯ ಅಗತ್ಯದ ಬಗ್ಗೆ ಜನರಿಗೆ ಅರಿವಾಗಲಿ ಎಂಬುದೇ ಈ ನೃತ್ಯದ ಆಶಯ’ ಎಂದು ಮಾಧವಿ ವಿವರಿಸಿದರು.

ಕೋವಿಡ್‌ ಕಾಲದ ಸವಾಲುಗಳನ್ನು ಎದುರಿಸುತ್ತಲೇ ನಮನ ಅಕಾಡೆಮಿಯು ಇಂಥ ನೃತ್ಯ ವಿಡಿಯೊ ಸಿದ್ಧಪಡಿಸಿದೆ. ಅವರವರ ಮನೆಗಳಲ್ಲೇ ನೃತ್ಯ ಮಾಡಿ ವಿಡಿಯೊ ಚಿತ್ರೀಕರಿಸಿ ನಂತರ ಒಟ್ಟಾಗಿ ಸಂಯೋಜಿಸಲಾಗಿದೆ. ಗುರು ಮಾಧವಿ ಡಿ.ಕೆ. ಹಾಗೂ ವಿದ್ಯಾರ್ಥಿನಿಯರಾದ ರೋಶನಿ ಪ್ರಕಾಶ್, ಪ್ರಿಯಾ ಟಿ., ಭುವಿ ಹಾಗೂ ಋತು ಹಿರೇಮಠ ಈ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ನೃತ್ಯ ಸಂಯೋಜನೆಯ ಮೊದಲು ಇದರಲ್ಲಿ ಬರುವ ನದಿಗಳ ಬಗ್ಗೆ ಗುರು ಹಾಗೂ ವಿದ್ಯಾರ್ಥಿನಿಯರು ಅಧ್ಯಯನ ಮಾಡಿ ಜ್ಞಾನವನ್ನೂ ಪಡೆದುಕೊಂಡಿದ್ದಾರೆ.

ನಮನ ಅಕಾಡೆಮಿಯ ಹಲವು ವಿಕ್ರಮಗಳು: ‘ನಮನ ಅಕಾಡೆಮಿ’ ಕೋವಿಡ್‌ ಆರಂಭದ ಕಾಲದಿಂದಲೂ ಹಮ್ಮಿಕೊಂಡ ಕಾರ್ಯಕ್ರಮಗಳು ಹಲವು. ನೇರ ತರಗತಿಗಳು ನಡೆಯದಿದ್ದರೂ ಆನ್‌ಲೈನ್‌ ತರಗತಿಗಳೊಂದಿಗೆ ಹೊಚ್ಚ ಹೊಸ ವಿಚಾರ ವೈವಿಧ್ಯದ ಕಾರ್ಯಕ್ರಮಗಳನ್ನು ನಡೆಸುತ್ತ ವಿದ್ಯಾರ್ಥಿಗಳಲ್ಲಿ ನವೋತ್ಸಾಹ ತುಂಬಿದೆ. ಅದಕ್ಕೆ ಈಚೆಗಿನ ಉದಾಹರಣೆ ಈ ‘ರಿವರ್ಸ್‌ ಆಫ್‌ ಇಂಡಿಯಾ’ ವಿಡಿಯೊ.

2020ರ ಮಾರ್ಚ್‌ನಲ್ಲಿ ಕೋವಿಡ್‌ ಕಾರಣದಿಂದ ನೇರ ತರಗತಿಗಳು ಸ್ಥಗಿತಗೊಂಡಾಗ ಮೊದಲು ಅಕಾಡೆಮಿ ನಡೆಸಿದ ಕಾರ್ಯಕ್ರಮ ‘ನೃತ್ಯ ಸಂಭ್ರಮ’ ಫೇಸ್‌ಬುಕ್‌ ಲೈವ್‌. ಮೂರು ತಿಂಗಳ ಕಾಲ ಪ್ರತಿ ಭಾನುವಾರ ಈ ಕಾರ್ಯಕ್ರಮ ನಡೆಸಿದ್ದು ಶಾಸ್ತ್ರೀಯ ನೃತ್ಯ ಕಲಾವಿದರ ಹಾಗೂ ಪ್ರೇಕ್ಷಕರ ಮನ ತಣಿಸಿತು. ಇದರಲ್ಲಿ ದಾವಣಗೆರೆಯವರಷ್ಟೇ ಅಲ್ಲದೇ ಹೊರ ಜಿಲ್ಲೆಗಳ ಜನರೂ ಪಾಲ್ಗೊಂಡರು. ಕೋವಿಡ್‌ನಿಂದ ಪಾರಾಗಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆಯೂ ಮಾಧವಿ ಅವರು ನೃತ್ಯ ಸಂಯೋಜಿಸಿ ಜನ ಜಾಗೃತಿ ಮೂಡಿಸಿದ್ದರು. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಹಗಲಿರುಳೂ ಶ್ರಮಿಸಿದ ವೈದ್ಯರು, ನರ್ಸ್‌ ಹಾಗೂ ಕೊರೊನಾ ವಾರಿಯರ್‌ಗಳಿಗೂ ನೃತ್ಯದ ಮೂಲಕವೇ ಕೃತಜ್ಞತೆ ಸಲ್ಲಿಸಿದರು.

ಸರ್ಕಾರದ ಪರವಾನಗಿ ಪಡೆದು ದಾವಣಗೆರೆ ಜಿಲ್ಲೆಯ ಹಾಗೂ ಸುತ್ತಲಿನ ಹಲವು ಪುರಾತನ ದೇಗುಲಗಳಲ್ಲಿ ನೃತ್ಯಗಳನ್ನು ಚಿತ್ರೀಕರಿಸಿ ವಿಡಿಯೊ ಮಾಡಲಾಗಿದ್ದೂ ನಮನ ಅಕಾಡೆಮಿಯ ಸಾಧನೆಗಳಲ್ಲೊಂದು. ದೇಗುಲಗಳ ಹಿನ್ನೆಲೆಯಲ್ಲಿ ಮೂಡಿ ಬಂದ ಶಾಸ್ತ್ರೀಯ ನೃತ್ಯಗಳಿಗೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ದೇವಿ ದುರ್ಗೆಯ ವಿವಿಧ ಅವತಾರಗಳನ್ನು ಅಧ್ಯಯನ ಮಾಡಿ ಅವುಗಳ ಬಗ್ಗೆ ನೃತ್ಯ ಸಂಯೋಜಿಸಿ ಪ್ರಸ್ತುತ ಪಡಿಸಿ ಯಶಸ್ವಿಯಾಗಿದ್ದಾರೆ.

‘ಸದ್ಯಕ್ಕೆ 40–50 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ನೃತ್ಯ ತರಗತಿ ನಡೆಯುತ್ತಿದೆ. ಕೆಲವು ಹಿರಿಯ ವಿದ್ಯಾರ್ಥಿಗಳು ನೇರ ತರಗತಿಗೆ ಬರುತ್ತಿದ್ದಾರೆ. ಹೊರದೇಶದ 3–4 ವಿದ್ಯಾರ್ಥಿಗಳೂ ಆನ್‌ಲೈನ್‌ ಮೂಲಕ ನೃತ್ಯ ಕಲಿಯುತ್ತಿದ್ದಾರೆ. ನೇರವಾಗಿ ಕಲಿಸುವುದರಷ್ಟು ಆನ್‌ಲೈನ್‌ ತರಗತಿಗಳು ಪರಿಣಾಮಕಾರಿಯಲ್ಲ ಆದರೆ ಕೋವಿಡ್‌ ಬಂತೆಂದು ನಮ್ಮ ನೃತ್ಯ ಕಲಾ ಚಟುವಟಿಕೆಗಳಿಗೆ ಬಿಡುವು ನೀಡಲು ಆಗುವುದಿಲ್ಲ. ದಿನದಿನವೂ ಹೊಸ ಚಿಂತನೆ ಮಾಡುವುದೇ ಕಲೆಯ ಉಸಿರು’ ಎಂದು ಮಾಧವಿ ವಿವರಿಸಿದರು.

‘ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸದ್ಯ ಒಂದು ನೃತ್ಯ ರೂಪಕ ಸಿದ್ಧತೆ ಮಾಡಲಾಗುತ್ತಿದೆ. ಅದನ್ನು ಶೀಘ್ರದಲ್ಲೇ ರಂಗಕ್ಕೆ ತರಲಿದ್ದೇವೆ’ ಎಂದು ಅವರು ವಿವರಿಸಿದರು.

‘ರಿವರ್ಸ್‌ ಆಫ್‌ ಇಂಡಿಯಾ’ ನೃತ್ಯ ಸಂಯೋಜನೆಯ ವಿಡಿಯೊ ಇಲ್ಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT