ಬುಧವಾರ, ಆಗಸ್ಟ್ 10, 2022
23 °C

ರಂಗ ಪ್ರವೇಶದ ಹೊಸ ಹಂಗಾಮು!

ವೈ.ಕೆ.ಸಂಧ್ಯಾ ಶರ್ಮ Updated:

ಅಕ್ಷರ ಗಾತ್ರ : | |

Prajavani

ಒಂಬತ್ತು ತಿಂಗಳ ವಿರಾಮದ ಬಳಿಕ ಮತ್ತೆ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿವೆ. ಸಭಾಂಗಣದಲ್ಲಿ ರಂಗ ಪ್ರವೇಶದಂತಹ ಕಾರ್ಯಕ್ರಮಗಳೂ ನಡೆಯುತ್ತಿವೆ. ಮೊದಲಿನ ಸಂಭ್ರಮ ನಿಧಾನವಾಗಿ ಮನೆ ಮಾಡುತ್ತಿದೆ.

ಕಳೆದ ಒಂಬತ್ತು ತಿಂಗಳಿಂದ ಇಡೀ ಜಗತ್ತನ್ನೇ ಆವರಿಸಿರುವ ‘ಕೊರೊನಾ ಗ್ರಹಣ’ ಸಾಂಸ್ಕೃತಿಕ ಲೋಕದಲ್ಲಿ ಉಂಟು ಮಾಡಿರುವ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ಸಂಗೀತ-ನೃತ್ಯ, ನಾಟಕ, ಸಾಹಿತ್ಯ ಸೇರಿದಂತೆ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೂ ಒಮ್ಮೆಲೇ ನಿಂತಾಗ ಉಸಿರುಗಟ್ಟಿದ ಪರಿಸ್ಥಿತಿ. ಸೃಜನಾತ್ಮಕ ಕಲಾ ಚೈತನ್ಯಗಳು ಹಾಗೂ ಹೀಗೂ ಒಂದು ಮೂರ್ನಾಲ್ಕು ತಿಂಗಳು ಅನಿವಾರ್ಯವಾಗಿ ಕೈಕಟ್ಟಿ ಕುಳಿತುಕೊಂಡಿದ್ದು ನಿಜ. ಕಡೆಗೆ ಬೇರೆ ದಾರಿಯಿಲ್ಲದೆ ಪರ್ಯಾಯವಾಗಿ ಹುಡುಕಿಕೊಂಡಿದ್ದು ಅಂತರ್ಜಾಲದ ಮಾಧ್ಯಮವನ್ನು. ಅಲ್ಲಿಂದ ಓತಪ್ರೋತವಾಗಿ ಆನ್ಲೈನ್‌ನಲ್ಲಿ ಸಂಗೀತ-ನೃತ್ಯ ಪಾಠಗಳು, ನೃತ್ಯ ಪ್ರಸ್ತುತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಒಂಬತ್ತು ತಿಂಗಳ ಸುದೀರ್ಘ ಅವಧಿಯ ನಂತರ ಜನ ಮೆಲ್ಲನೆ ನೃತ್ಯಮಂದಿರಗಳಲ್ಲಿ ಸೇರಿ ರಂಗಪ್ರವೇಶದಂತಹ ಮುಖ್ಯ ಕಾರ್ಯಕ್ರಮಗಳು ಶುರುವಾಗಿವೆ.

ಬೆಂಗಳೂರಿನ ಜೆ.ಎಸ್.ಎಸ್. ರಂಗಮಂದಿರದಲ್ಲಿ ಈಚೆಗೆ ವಿದುಷಿ ಪೂರ್ಣಿಮಾ ಮೋಹನ್ ರಾಮ್ ಅವರ ಶಿಷ್ಯೆ ಪ್ರಿಯಾಂಕಾಳ ‘ರಂಗಪ್ರವೇಶ’ ಸುಸೂತ್ರವಾಗಿ ನಡೆಯಿತು. ರಂಗಮಂದಿರದ ಬಾಗಿಲಲ್ಲಿ ‘ಸ್ಯಾನಿಟೈಸರ್’ ಸಿಂಪಡಣೆ ಮಾಡಲಾಗುತ್ತಿತ್ತು. ಮಂದಿರದೊಳಗೆ ಪ್ರತೀ ಆಸನದ ಮಧ್ಯೆ ಒಂದು ಆಸನವನ್ನು ಯಾರೂ ಕೂರದಂತೆ ಸೀಲ್ ಮಾಡಲಾಗಿತ್ತು. ಎಲ್ಲರೂ ಮಾಸ್ಕ್ ಧರಿಸಿದ್ದರು. ಎಲ್ಲ ಮುನ್ನೆಚರಿಕೆಯ ಕ್ರಮಗಳನ್ನು ವಹಿಸಿದ ವೇದಿಕೆಯ ಮೇಲೆ ಗಾಯಕರು, ವಾದ್ಯವೃಂದ ಮತ್ತು ಗುರುಗಳು ಮಾತ್ರ ಮಾಸ್ಕ್‌ರಹಿತರಾಗಿದ್ದರು.

ಪೂರ್ಣಿಮಾ ಮೋಹನರಾಮ್‌ ಅವರ ಶಿಷ್ಯೆ ಪ್ರಿಯಾಂಕ ಪಂಡಿತ್ ಲವಲವಿಕೆಯಿಂದ ಸುಮಾರು ಎರಡೂವರೆ ಗಂಟೆ ಸುಮನೋಹರವಾಗಿ ನರ್ತಿಸಿ ಕಲಾರಸಿಕರನ್ನು ಆನಂದಗೊಳಿಸಿದಳು.

ವರ್ಣಮಯ ಬೃಹತ್ ಮಯೂರದ್ವಯಗಳ ನಡುವೆ ಆಸನರೂಢಳಾಗಿದ್ದ ಸಿಂಹವಾಹಿನಿ ಚಾಮುಂಡೇಶ್ವರಿಯ ಪ್ರಜ್ವಲಮೂರ್ತಿ ಇಡೀ ವಾತಾವರಣವನ್ನು ದೈವೀಕಗೊಳಿಸಿತ್ತು. ವಾದ್ಯವೃಂದದ ಸಂಗೀತ ಕರ್ಣಾನಂದಕರವಾಗಿತ್ತು. ಶುಭಾರಂಭದಲ್ಲಿ ದೇವಾನುದೇವತೆಗಳು, ಗುರುಗಳು, ವಾದ್ಯವೃಂದ ಮತ್ತು ಪ್ರೇಕ್ಷಕರಿಗೆ ನಮನ ಸಲ್ಲಿಸುವ ಆರಭಿ ರಾಗದ ‘ಪುಷ್ಪಾಂಜಲಿ’ಯನ್ನು ಅರ್ಪಿಸಲು ಕಲಾವಿದೆ ನಗುಮೊಗದಿಂದ ರಂಗಮಂಚದ ಮೇಲೆ ಕಾಣಿಸಿಕೊಂಡಳು. ‘ರಂಗಪ್ರವೇಶ’ –ನೃತ್ಯ ಕಲಾವಿದೆಯೊಬ್ಬಳ ಜೀವನದ ಸ್ಮರಣೀಯ ಮೈಲಿಗಲ್ಲು.  ತನ್ನ ಸ್ಫುಟವಾದ ಅಂಗಚಲನೆ, ಬೊಗಸೆ ಕಂಗಳ ಮಿನುಗು ನೋಟದ ಸೊಗಸು ಬೆರೆಸಿ ಮೈಸೂರು ಶೈಲಿಗೆ ವಿಶಿಷ್ಟವಾದ ಸರಸ್ವತಿ ಚೂರ್ಣಿಕೆ ಮತ್ತು ಜತಿಯನ್ನು ಪ್ರಿಯಾಂಕ ಅಂಗಶುದ್ಧಿಯ ಸೊಗಡಿನಲ್ಲಿ ಪ್ರಸ್ತುತಪಡಿಸಿದ್ದು ಪರಿಣಾಮಕಾರಿಯಾಗಿತ್ತು.

ಮುಂದೆ-ಪುರಂದರ ದಾಸರ ದೇವರನಾಮ – ‘ವಂದಿಸುವುದಾದಿಯಲಿ ಗಣನಾಥನ...’ ಕೃತಿಯಲ್ಲಿ ಪ್ರಥಮವಂದಿತ ವಿಘ್ನೇಶ್ವರನಿಗೆ ಮೊದಲಪೂಜೆ ಸಲ್ಲಿಸದಿದ್ದರೆ ಏನಾದೀತು ಎಂಬ ‘ಗೋಕರ್ಣಾಥೇಶ್ವರ ಸ್ಥಳ ಮಹಿಮೆ’ಯ ಕಥಾನಕವನ್ನು ವಿಸ್ತೃತಗೊಳಿಸುವ ಸಂಚಾರಿಯ ಸನ್ನಿವೇಶವನ್ನು ಕಲಾವಿದೆ ನಾಟಕೀಯ ಅಭಿನಯದಿಂದ ಸಾಕಾರಗೊಳಿಸಿದಳು. ತನ್ನ ಖಚಿತ ಹಸ್ತಮುದ್ರೆ ಮತ್ತು ಸ್ಫುಟವಾದ ಹೆಜ್ಜೆಗಳ ಕುಣಿತದ ಲಯದಲ್ಲಿ ವಿಘ್ನನಿವಾರಕನ ವಿಶಿಷ್ಟ ರೂಪ-ಭಂಗಿಗಳನ್ನು ಕಣ್ಮುಂದೆ ತಂದು ನಿಲ್ಲಿಸಿದಳು.

ಭರತನಾಟ್ಯದ ಸಮಗ್ರ ವ್ಯಾಕರಣವನ್ನು ಮೊತ್ತಗೊಳಿಸಿ ಪರಿಪೂರ್ಣತೆಯ ರಂಗಿನಲ್ಲಿ ನಿಖರವಾಗಿ ನಿವೇದಿಸುವ ‘ಜತಿಸ್ವರ’ದ ಪ್ರತಿಯೊಂದು ಅಡವು-ಅಂಗಚಲನೆಯೂ, ಹಸ್ತ ವಿನಿಯೋಗ, ಅರೆಮಂಡಿ, ಆಕಾಶಚಾರಿ, ಕರಣಗಳೂ ಪ್ರಿಯಾಂಕಳ ನಿಷ್ಕೃಷ್ಟ ನರ್ತನದಲ್ಲಿ ಎದ್ದು ಕಂಡಿತು. ಅದಕ್ಕೆ ಪೂರಕವಾಗಿ ಗುರು ಪೂರ್ಣಿಮಾರ ಶಕ್ತಿಶಾಲಿ ನಟುವಾಂಗ ಆಕೆಯಲ್ಲಿ ಸ್ಫೂರ್ತಿ ತುಂಬಿ ಉತ್ತೇಜಿಸಿದ್ದು ದೃಗ್ಗೋಚರವಾಗಿತ್ತು. ಇಡೀ ರಂಗವನ್ನು ಸಮರ್ಥವಾಗಿ ಬಳಸಿ ಪ್ರಿಯಾಂಕ ಚೈತನ್ಯಪೂರ್ಣವಾಗಿ ನರ್ತಿಸಿದಳು.

ಮುಂದಿನ ಪ್ರಮುಖ ಹಂತ ‘ವರ್ಣ’ ನೃತ್ಯದ ಹೃದಯಭಾಗ. ಅಂತೆಯೇ ಕಲಾವಿದೆ ಪ್ರಸ್ತುತಪಡಿಸಿದ ಮುತ್ತಯ್ಯ ಭಾಗವತರ ‘ದರು ವರ್ಣ’ ಅಷ್ಟೇ ಹೃದ್ಯವಾಗಿ ರಸಾನಂದವನ್ನು ನೀಡಿತು. ಲೋಕಕಂಟಕ ಮಹಿಷಾಸುರನನ್ನು ವಧಿಸುವ ಚಾಮುಂಡೇಶ್ವರಿಯ ದಿವ್ಯರೂಪ-ಶಕ್ತಿಗಳ ಪ್ರಭೆಯನ್ನು ಮನಗಾಣಿಸುವ ಪರಿಣಾಮಕಾರಿ ನರ್ತನ ವೈಭವ. ಮೊರೆಯಿಟ್ಟ ಮುನಿಗಳ ನೆರವಿಗೆ ಧಾವಿಸಿದ ದೇವಿಯ ಉಗ್ರ ವೀರನೃತ್ಯ, ಗೂಳಿಯ ಹೂಂಕಾರ, ಅಸುರನೊಡನೆ ನಡೆಸಿದ ಭೀಕರ ಕದನ-ಮರ್ಧನದ ದೃಶ್ಯವನ್ನು ಪ್ರಿಯಾಂಕ ತನ್ನ ಪ್ರಬುದ್ಧ ಅಭಿನಯ ಮತ್ತು ಪಾದರಸದ ಆಂಗಿಕಗಳಿಂದ ಕಟ್ಟಿಕೊಟ್ಟಳು. ಸುದೀರ್ಘ ಬಂಧವಾದ ‘ವರ್ಣ’ದಲ್ಲಿ ಕಲಾವಿದೆಯ ತಾಳ-ಲಯಜ್ಞಾನಗಳು ಸುವ್ಯಕ್ತವಾದವು. ಆಕೆ ಪ್ರದರ್ಶಿಸಿದ ದೇವಿಯ ಒಂದೊಂದು ರೂಪಗಳೂ ಅನುಪಮ. ಭಕ್ತಿಪ್ರಧಾನವಾದ ವರ್ಣದಲ್ಲಿ ‘ಭಕ್ತಪಾಲೆ’ಯ ಸಾತ್ವಿಕ, ಸೌಮ್ಯರೂಪಿಯ ಕಾರುಣ್ಯ, ‘ಸನ್ನುತಾಂಗಿ ಶ್ರೀ’ಯ ನವರಸ ರೂಪಗಳೂ ಹಲವು ನಿದರ್ಶನಗಳ ಮೂಲಕ ಅನಾವರಣಗೊಂಡವು.

ಅನಂತರ- ಅರುಣಾಚಲ ಕವಿಯ ‘ರಾಮನಾಟಕಂ’ನಿಂದ ಆರಿಸಿಕೊಳ್ಳಲಾದ ‘ಪದಂ’- ಶ್ರೀರಾಮ ಮತ್ತು ಸೀತೆಯ ಮೊದಲಭೇಟಿಯ ಸುಂದರ ಪ್ರಸಂಗದ ನಿರೂಪಣೆ. ‘ಯಾರೋ ಇವರ‍್ಯಾರೋ’ ಎಂದು ಸೀತೆ ಮನ್ಮಥ ಸ್ವರೂಪಿ ತರುಣನನ್ನು ಮಿಥಿಲೆಯ ಮಾರ್ಗದಲ್ಲಿ ಕಂಡು ಅಚ್ಚರಿಗೊಳ್ಳುವ ಶೃಂಗಾರಭರಿತ ಸ್ವಗತವನ್ನು ಸಾತ್ವಿಕ ಅಭಿನಯದಲ್ಲಿ, ಪ್ರಿಯಾಂಕ ಕಲಾತ್ಮಕವಾಗಿ ನವಿರಾಗಿ ಚಿತ್ರಿಸಿದಳು.

ಮುಂದೆ- ಆಧ್ಯಾತ್ಮಿಕ ಬೆಳಕನ್ನಿತ್ತು ಎಲ್ಲ ಕಷ್ಟ ಕೋಟಲೆಗಳನ್ನು ಪರಿಹರಿಸುವ ನಟರಾಜ ದೇವನನ್ನು ಸ್ತುತಿಸುವ ಭಕ್ತಿಭಾವದ ಅಭಿವ್ಯಕ್ತಿಯನ್ನು ಕಲಾವಿದೆ ಭಕ್ತಿಯ ತಾದಾತ್ಮ್ಯದಿಂದ ಅಭಿನಯಿಸಿದಳು. ಶ್ರೀ ಶಂಕರಾಚಾರ್ಯರ ‘ಶಿವಾನಂದ ಲಹರಿ’ಯಿಂದ ಆಯ್ದುಕೊಳ್ಳಲಾದ ಸ್ತುತಿಯನ್ನು ಗಾಯಕಿ ಭಾರತೀ ವೇಣುಗೋಪಾಲ್ ಭಾವಪೂರ್ಣ ಸ್ರೋತದಿಂದ ಉದ್ದೀಪನಗೊಳಿಸಿದರು. ಮಂಡಿ ಅಡವು, ಆಕಾಶಚಾರಿಗಳು ಲೀಲಾಜಾಲವಾಗಿ ಹರಿದಾಡಿ ಭಕ್ತೆಯ ಅರ್ಪಣಾಭಾವವನ್ನು ಒರೆಗೆ ಹಚ್ಚಿತು. ಇದೇ ಭಾವಾಭಿವ್ಯಕ್ತಿಯ ಕನಕದಾಸರ ‘ಈಶ ನಿನ್ನ ಚರಣ ಭಜನೆ’ - ಜೀವನ ವೈರಾಗ್ಯದ ಪರಾಕಾಷ್ಠೆಯನ್ನು ಭಕ್ತಿಮಿಳಿತ ದೈನ್ಯತೆಯ ಭಾವದಲ್ಲಿ ಘನೀಕರಿಸಿತು.

ಅಂತ್ಯದ ಬಾಲಮುರಳೀಕೃಷ್ಣ ವಿರಚಿತ ಕುಂತಲವರಾಳಿ ರಾಗದ ‘ತಿಲ್ಲಾನ’ದ ನಿರೂಪಣೆಯಲ್ಲಿ, ಮಿಂಚಿನ ಸಂಚಾರದ ವರ್ಣರಂಜಿತ ನೃತ್ತಗಳ ಓಕುಳಿಯಲ್ಲಿ ಮೀಯುತ್ತ ಕಲಾವಿದೆ ಉಲ್ಲಾಸಪೂರ್ಣವಾಗಿ ನರ್ತಿಸಿ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.

ಭಾರತಿ ವೇಣುಗೋಪಾಲ್ ಅವರ ಭಾವದೀಪ್ತಿಯ ಗಾಯನ, ವಿನಯ್ ನಾಗರಾಜನ್ -ಮೃದಂಗ, ಸ್ಕಂಧಕುಮಾರ್- ವೇಣುವಾದನ, ಶಂಕರರಾಮನ್-ವೀಣೆ ಮತ್ತು ಲಯವಾದ್ಯ ನಿಪುಣ ಡಿ.ವಿ.ಪ್ರಸನ್ನಕುಮಾರ್ ಅವರ ಸುಶ್ರಾವ್ಯ ವಾದ್ಯ ಸಾಂಗತ್ಯ ಮತ್ತು ಪೂರ್ಣಿಮಾರ ಪ್ರೌಢ, ನಿಖರ ಧ್ವನಿಯ ನಟುವಾಂಗ ಕಳೆ ನೀಡಿತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು