ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಆನ್‌ಲೈನ್‌ನಲ್ಲಿ ಈ–ಕಲೆ

Last Updated 23 ಸೆಪ್ಟೆಂಬರ್ 2020, 1:24 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್‌–19 ಕಲಿಸಿದ ಪಾಠಗಳಲ್ಲಿ ಇದೂ ಒಂದು. ಹಿಂದೆಂದಿಗಿಂತಲೂ ಇಂದು ಕಲಾಭ್ಯಾಸದತ್ತ ಒಲವು ಹೆಚ್ಚುತ್ತಿದೆ. ಕಲೆಗೆ ಕೊಡುವ ಸಮಯ ಹಾಗೂ ಗಮನ ಎರಡೂ ಅಧಿಕವಾಗಿವೆ. ಪೋಷಕರು ಕಲೆಯನ್ನು ಮೊದಲಿಗಿಂತಲೂ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಅಂತೆಯೇ ಆನ್‌ಲೈನ್‌ನಲ್ಲಿ ಈ–ಕಲೆಯ ದಾಖಲಾತಿಯೂ ಹೆಚ್ಚುತ್ತಿದೆ…

ಹೌದು, ಶಾಲೆಗಳೆಲ್ಲ ಬಾಗಿಲುಮುಚ್ಚಿ ಆರೇಳು ತಿಂಗಳುಗಳೇ ಗತಿಸಿವೆ. ಆನ್‌ಲೈನ್‌ ಕ್ಲಾಸುಗಳಿಗೆ ಸಮಯದ ಮಿತಿ ಇದೆ. ಶಾಲಾ ಪಠ್ಯೇತರ ಚಟುವಟಿಕೆಗಳು ಮತ್ತು ವಿದ್ಯಾರ್ಥಿ ಪಂದ್ಯಾವಳಿಗಳು, ಆಟೋಟಗಳು ನಿಂತು ಹೋಗಿವೆ. ಪಾಠ ಮುಗಿದು ಉಳಿವ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪೋಷಕರು ಆನ್‌ಲೈನ್‌ ಕಲಾ ತರಗತಿಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಶಾಲಾ ಅವಧಿಯಲ್ಲಿ ಮಿಕ್ಕುವ ಕಡಿಮೆ ಸಮಯದಲ್ಲಿಯೇ ಪೋಷಕರು ಮಕ್ಕಳನ್ನು ಹಲವು ರೀತಿಯ ಚಟುವಟಿಕೆಗಳಲ್ಲಿ ತೂರಿಸಲು ಯತ್ನಿಸುತ್ತಿದ್ದರು. ಆದರೆ ಈಗ ಮನೆಯಲ್ಲಿ ಸಾಕಷ್ಟು ಸಮಯ ಸಿಗುತ್ತಿರುವುದರಿಂದ ಈ ಹೊಸ ವೇಳಾಪಟ್ಟಿಯಲ್ಲಿ ಮಕ್ಕಳ ಕಲಾಪ್ರತಿಭೆಯನ್ನು ಪೋಷಿಸುವ ಸಾಧ್ಯತೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಶಾಲಾ ತರಗತಿಗಳು ಪೂರ್ಣಗೊಂಡ ನಂತರ ಆನ್‌ಲೈನ್‌ನಲ್ಲಿ ನೃತ್ಯ, ಸಂಗೀತ, ಯೋಗ, ಚಿತ್ರಕಲಾ ಕ್ಲಾಸುಗಳಲ್ಲಿ ಮಕ್ಕಳನ್ನು ತೊಡಗಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳು ಮಕ್ಕಳ ಶಾಲಾ ಜೀವನದ ಅವಿಭಾಜ್ಯ ಅಂಶ ಎನ್ನುವುದನ್ನು ಪೋಷಕರು ಮನಗಂಡಿದ್ದಾರೆ. ಕೆಲವರಿಗೆ, ಇದು ಶಾಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುವ ಮೆಟ್ಟಿಲಾದರೆ, ಇನ್ನೂ ಕೆಲವರಿಗೆ ಸಮುದಾಯದಲ್ಲಿ ಗುರುತಿಸಿಕೊಳ್ಳುವ ಖುಷಿಯಾಗಿರಬಹುದು, ಮತ್ತೆ ಕೆಲವರಿಗೆ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಿರಬಹುದು. ಕಾರಣ ಏನೇ ಇದ್ದರೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇಂತಹ ಚಟುವಟಿಕೆಗಳು ಗಮನಾರ್ಹ ಪಾತ್ರ ವಹಿಸುತ್ತವೆ. ಇದರಿಂದ ಮಕ್ಕಳ ಬರವಣಿಗೆ, ಮಾತನಾಡುವ ಮತ್ತು ಸಂಶೋಧನಾ ಕೌಶಲಗಳು ಸುಧಾರಿಸುತ್ತವೆ, ವೈವಿಧ್ಯಮಯ ಹಿನ್ನೆಲೆಯ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ. ಮಕ್ಕಳು ವಿಷಯಗಳನ್ನು ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ವಿಧಾನದ ಮೇಲೂ ಇದು ಪರಿಣಾಮ ಬೀರುತ್ತದೆ.

ಕೋವಿಡ್‌–19ನ ಈ ಅವಧಿಯಲ್ಲಿ ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಸಾಧ್ಯವಾಗುತ್ತಿಲ್ಲ, ಆದರೆ ಆನ್‌ಲೈನ್‌ ಕಲಿಕಾ ಮಾಧ್ಯಮ ಹೊಸ ಸಾಧ್ಯತೆಯಾಗಿ ಬೆಳೆಯುತ್ತಿದೆ. ಇದನ್ನರಿತು ಮಕ್ಕಳಿಗೆ ವಿವಿಧ ರೀತಿಯ ಪಠ್ಯೇತರ ತರಗತಿಗಳನ್ನು ನಡೆಸುತ್ತಿದ್ದ ಹಲವಾರು ಸಂಸ್ಥೆಗಳು ಈಗ ಆನ್‌ಲೈನ್ ಮೋಡ್‌ಗೆ ಬದಲಾಗಿವೆ. ಅಷ್ಟೇ ಅಲ್ಲ ಸಂಬಳದಲ್ಲಿ ಕಡಿತ ಉಂಟಾದ ಅಥವಾ ಉದ್ಯೋಗ ಕಳೆದುಕೊಂಡಿರುವ ಅನೇಕ ಶಿಕ್ಷಕರು, ತರಬೇತುದಾರರು ಮತ್ತು ಕಲಾವಿದರು ಸಹ ಖಾಸಗಿಯಾಗಿ ಆನ್‌ಲೈನ್‌ ಕ್ಲಾಸುಗಳನ್ನು ನಡೆಸುತ್ತಿದ್ದಾರೆ.

ಆನ್‌ಲೈನ್‌ ಕಲಾ ತರಗತಿಗಳ ಇತಿ–ಮಿತಿಗಳ ಬಗ್ಗೆ ಬೆಂಗಳೂರಿನ ‘ನಿದಂ’ ನೃತ್ಯಶಾಲೆಯ ನಿರ್ದೇಶಕಿ, ನಾಟ್ಯಕಲಾವಿದೆ ಪೂರ್ಣಿಮಾರಜಿನಿ ಹೇಳುವುದಿಷ್ಟು–

ಕೋವಿಡ್‌–19 ನಮ್ಮೆಲ್ಲರನ್ನು ಮನೆಯೊಳಗೆ ಬಂಧಿಯಾಗಿಸಿದೆ. ಈ ಸಮಯವನ್ನು ನಾವೀಗ ಅತ್ಯಂತ ಪ್ರೀತಿಯಿಂದ ಮತ್ತು ಹೆಚ್ಚು ಕಾಳಜಿಯಿಂದ ಬಳಸಿಕೊಳ್ಳಬೇಕಿದೆ. ಮಕ್ಕಳ ವಿಷಯದಲ್ಲಿಯಂತೂ ಇದು ಅತ್ಯಂತ ಮುಖ್ಯವಾದ ಮತ್ತು ಅಷ್ಟೇ ಪರಿಣಾಮಕಾರಿಯಾದ ಕಾಲಘಟ್ಟ. ಕೋವಿಡ್‌ ಅನ್ನು ಶಪಿಸುತ್ತ, ಮಕ್ಕಳ ಕೈಗೆ ಟೀವಿ ರಿಮೋಟ್‌, ಟ್ಯಾಬ್‌, ಮೊಬೈಲ್‌ಗಳನ್ನು ಕೊಡುವ ಬದಲು, ಮನೆಯೊಳಗಿನ ಪ್ರತಿ ಕ್ಷಣವನ್ನೂ ಹೇಗೆ ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದು ಎನ್ನುವುದರತ್ತ ಗಮನ ಕೊಡಬೇಕು. ಈ ಬಿಡುವಿನ ವೇಳೆಯಲ್ಲಿ ಮಕ್ಕಳ ಅಮೂಲ್ಯ ಸಮಯಕ್ಕೆ ಒಂದು ಮೌಲ್ಯವನ್ನು ತಂದುಕೊಡಬೇಕಾದುದು ಪೋಷಕರ ಕರ್ತವ್ಯ. ಅನೇಕರು ಇದನ್ನು ಮನಗಂಡಿದ್ದು, ಆನ್‌ಲೈನ್‌ ನೃತ್ಯ–ಸಂಗೀತ–ಯೋಗದಂತಹ ತರಬೇತಿಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು ಉತ್ತಮ ಬೆಳವಣಿಗೆ.

ಕಲಾ ತರಗತಿಗಳ ಭಾಗವಾಗಿ ಪೋಷಕರು

‘ಹಿಂದೆಲ್ಲಾ ಪೋಷಕರಿಗೆ ಇಂತಹ ಅವಕಾಶಗಳು ಇರಲಿಲ್ಲ. ಮಕ್ಕಳನ್ನು ನೃತ್ಯ ತರಗತಿಗೆ ಕಳಿಸಿದರೆಂದರೆ ಆಯ್ತು. ಅಲ್ಲಿ ಏನು ನಡೆಯುತ್ತದೆನ್ನುವುದು ತಿಳಿಯುತ್ತಿರಲಿಲ್ಲ. ಆದರೆ ಆನ್‌ಲೈನ್‌ ತರಗತಿಯಲ್ಲಿ ಮಕ್ಕಳು ಏನು ಕಲಿಯುತ್ತಿದ್ದಾರೆ, ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದೆಲ್ಲಾ ಕಣ್ಣಿಗೇ ಕಾಣುವುದರಿಂದ ಪೋಷಕರ ಸಂತಸ–ಆತ್ಮವಿಶ್ವಾಸ ಎರಡೂ ಇಮ್ಮಡಿಸುತ್ತಿದೆ. ಅಲ್ಲದೇ, ಮನೆಯಲ್ಲಿ ಪುಟ್ಟ–ಪುಟ್ಟ ಮಕ್ಕಳಿದ್ದರೆ ಅವರ ಮೇಲೂ ಕಲೆಯ ನೆರಳು ತಾಗುವುದಲ್ಲದೇ ಆ ಮಕ್ಕಳೂ ನೃತ್ಯ–ಸಂಗೀತದಲ್ಲಿ ಆಸಕ್ತಿ ವಹಿಸುತ್ತಾರೆ.

ಅಷ್ಟಕ್ಕೂ ನೃತ್ಯ ಎಂದರೆ ನೃತ್ಯ ಅಷ್ಟೇ ಅಲ್ಲ, ಅದರಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರಾ, ಶಿಸ್ತು, ಏಕಾಗ್ರತೆಯಂತಹ ಅಧ್ಯಾಯಗಳೂ ಒಳಗೊಂಡಿರುತ್ತವೆ. ಶಿರೋಭೇದ, ಗ್ರೀವಾಭೇದ, ನೇತ್ರಭೇದ, ದೃಷ್ಟಿಭೇದ ಎಂಬಿತ್ಯಾದಿ ಸಂಜ್ಞೆಗಳಿಂದ ವರ್ಣಿಸಲಾಗುವ ನೃತ್ಯದಲ್ಲಿ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮವಿದೆ. ಮುಖ್ಯವಾಗಿ ನೃತ್ಯದ ಒಂದು ಭಾಗವಾಗಿ ಉಸಿರಾಟದ ವ್ಯಾಯಾಮವನ್ನೂ ಮಾಡಿಸುತ್ತೇವೆ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಮಕ್ಕಳ ಕಲಿಕೆಯಲ್ಲಿಯೂ,ವ್ಯಕ್ತಿತ್ವ ವಿಕಸನದಲ್ಲಿಯೂ ಪರಿಣಾಮಕಾರಿ ಬದಲಾವಣೆಗಳನ್ನು ತರುವ ಶಕ್ತಿ ನೃತ್ಯಕ್ಕಿದೆ. ಮಕ್ಕಳಿರುವಾಗಲೇ ಅವರು ತಮ್ಮ ದೇಹ ಹಾಗೂ ಮನಸ್ಸಿನ ಸಮನ್ವಯತೆಯ ಅಗತ್ಯವನ್ನು ಅರ್ಥಮಾಡಿಕೊಂಡು,ಅದಕ್ಕೆ ಬೇಕಾದ ಕ್ರಮಗಳನ್ನು ಅನುಸರಿಸಿದರೆ ನಾಳಿನ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರು ಸಿದ್ಧಗೊಳ್ಳುತ್ತಾರೆ. ಇದು ಒಮ್ಮೆ ಕಲಿತರೆ ಮುಂದೆ ಅದು ಅವರೊಂದಿಗೆ ಬೆಳೆಯುತ್ತ ಹೋಗುತ್ತದೆ’ ಎನ್ನುವುದು ನೃತ್ಯಗುರು ಪೂರ್ಣಿಮಾ ಅವರ ವಿವರಣೆ.

ಅಂತರ್ಮುಖಿ ಮಕ್ಕಳಿಗೂ ಉಪಯುಕ್ತ
‘ಅಂತರ್ಮುಖಿಗಳಾಗಿರುವ ಮತ್ತು ಇತರ ಮಕ್ಕಳೊಂದಿಗೆ ಸುಲಭವಾಗಿ ಬೆರೆಯದ ಮಕ್ಕಳಿಗೆ ಆನ್‌ಲೈನ್‌ ಕಲಾ ತರಗತಿಗಳು ವರದಾನವೆಂದೇ ಹೇಳಬಹುದು. ಆನ್‌ಲೈನ್‌ನಲ್ಲಿ ನಡೆಯುವ ಕ್ಲಾಸುಗಳಲ್ಲಿ ಅವರು ತಮ್ಮನ್ನು ತಾವು ಮುಕ್ತವಾಗಿ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ತುಂಬಾ ನಾಚಿಕೆ ಸ್ವಭಾವ ಹೊಂದಿರುವ ಮಕ್ಕಳೂ ಸಹ ಆನ್‌ಲೈನ್‌ ತರಗತಿಗಳಲ್ಲಿ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದನ್ನು ನಾನು ಕಂಡಿದ್ದೇನೆ. ಅಂಥವರನ್ನು ಗುರುತಿಸಿ, ಭಯವನ್ನು ತೊಡೆದುಹಾಕಿ, ಅವರ ವ್ಯಕ್ತಿತ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಇಲ್ಲಿ ಸಾಧ್ಯವಾಗುತ್ತದೆ.

ಆನ್‌ಲೈನ್‌ ತರಗತಿಗಿರುವ ಒಂದೇ ಒಂದು ಮಿತಿ ಎಂದರೆ; ಗುರು–ಶಿಷ್ಯರ ನಡುವೆ ಇರಬೇಕಾದ ನೇರ ಸಂಪರ್ಕ ತಪ್ಪುತ್ತಿರುವುದು. ಚಿಕ್ಕ ಮಕ್ಕಳಿಗೆ ಆರಂಭಿಕ ಪಾಠಗಳನ್ನು ಮಾಡುವಾಗ ಈ ಕೊರತೆ ಹೆಚ್ಚು ಕಾಡುತ್ತದೆ. ಮೊದಲೇ ಈ ಬಗ್ಗೆ ತಿಳಿದುಕೊಂಡ ಮಕ್ಕಳಿಗೆ ಆನ್‌ಲೈನ್‌ ಪಾಠಗಳು ಸುಲಭ. ಅಂಥವರಿಗೆ ಕಲಿಸುವುದು ನಮಗೂ ಸುಲಭ. ಆದರೆ ಆನ್‌ಲೈನ್‌ ಮೂಲಕವೇ ನೃತ್ಯ ತರಗತಿಗೆ ಸೇರುವ ಚಿಕ್ಕ ಮಗುವಿಗೆ ಕೆಲವು ಮುದ್ರೆಗಳನ್ನು ಹೇಳಿಕೊಡುವುದು ಕಷ್ಟ. ತಪ್ಪಿದಲ್ಲಿ ನಾವೇ ಎದ್ದು ಹೋಗಿ ಅವರ ಕೈ ಹಿಡಿದು ಕಲಿಸುವುದಕ್ಕೂ, ಸ್ಕ್ರೀನ್‌ ಮೂಲಕ ಕಲಿಸುವುದಕ್ಕೂ ವ್ಯತ್ಯಾಸವಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT