ಸೋಮವಾರ, ಮೇ 17, 2021
29 °C

ಟಗರಿಗೆ ಖದರು ತಂದ ರಾಜು

ಅಮೃತ ಕಿರಣ ಬಿ.ಎಂ Updated:

ಅಕ್ಷರ ಗಾತ್ರ : | |

Deccan Herald

ಟಗರು ಬಂತು ಟಗರು... ಶಿವರಾಜ್ ಕುಮಾರ್ ಅವರು ಟಗರು ಸಿನಿಮಾದಲ್ಲಿ ಈ ಹಾಡಿಗೆ ಹಾಕಿದ ಹೆಜ್ಜೆ ಮನೆಮಾತಾಗಿತ್ತು. ಈ ಹಾಡಿಗೆ ಒಳ್ಳೆಯ ಖದರ್ ತದ್ದುಕೊಂಡಿದ್ದು ಡಾನ್ಸ್. ಇದಕ್ಕೆ ನೃತ್ಯ ನಿರ್ದೇಶನ ಮಾಡಿ ಶಿವಣ್ಣ, ಪುನೀತ್ ರಾಜ್‍ಕುಮಾರ್ ಅವರಿಂದ ಸೈ ಎನಿಸಿಕೊಂಡಿದ್ದವರು ಹೊಸ ಪ್ರತಿಭೆ ರಾಜು.

ಈ ಮೊದಲು ‘ಮಂತ್ರಂ’, ‘ನಾನು ಲವ್ವರ್ ಆಫ್ ಜಾನು’ ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದರೂ, ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಟಗರು ಸಿನಿಮಾ. ಇಲ್ಲಿಂದ ಅವರ ವೃತ್ತಿಜೀವನಕ್ಕೆ ಹೊಸ ಹೊಳಹು ಸಿಕ್ಕಿತು. ಕೆಲವು ಆಲ್ಬಂಗಳಿಗೂ ಅವರು ಕೆಲಸ ಮಾಡಿದ್ದಾರೆ.

ಮೂಲತಃ ಬಂಗಾರಪೇಟೆಯವರಾದ ರಾಜು ಚಿತ್ರರಂಗಕ್ಕೆ ಬಂದಿದ್ದು ಇತ್ತೀಚೆಗಾದರೂ, ಸುಮಾರು 15 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ. ನೃತ್ಯ ಕಲಿಗೆ, ತರಬೇತಿ, ದೇಶ-ವಿದೇಶ ಸ್ಪರ್ಧೆಗಳಲ್ಲಿ ಭಾಗವಹಿಸುವುದು.. ಹೀಗೆ ಸಾಗಿದೆ ಅವರ ಪಯಣ.

ನೃತ್ಯ ಕ್ಷೇತ್ರಕ್ಕೆ ಅಡಿಯಿಟ್ಟಿದ್ದು ಆಕಸ್ಮಿಕವೇನಲ್ಲ. ಅಣ್ಣ ಶಂಕರ್ ಹೈದರಾಬಾದಿನಲ್ಲಿ ದೊಡ್ಡ ಡಾನ್ಸರ್. ಲಾರೆನ್ಸ್ ಮಾಸ್ಟರ್ ಅವರ ಕೈಯಲ್ಲಿ ಪಳಗಿದ್ದ
ವರು. ಕೆಲವು ತೆಲುಗು ಚಿತ್ರಗಳಿಗೂ ಕೊರಿಯೊಗ್ರಫಿ ಮಾಡಿದ್ದರು. ‘ನನ್ನಣ್ಣ ಈಗ ಇಲ್ಲದಿದ್ದರೂ ಬಂಗಾರಪೇಟೆಯಲ್ಲಿ ಡಾನ್ಸರ್ ಶಂಕರ್ ಹೆಸರು ಚಿರಸ್ಥಾಯಿಯಾಗಿದೆ’ ಎಂದು ಸ್ಮರಿಸುತ್ತಾರೆ ರಾಜು.

ಶಂಕರ್ ಬಳಿ ಡಾನ್ಸ್ ಕಲಿತ ದೇವರಾಜ್ ಅವರು ರಾಜು ಗುರುಗಳು. ‘ನನ್ನ ಎಲ್ಲ ಏಳಿಗೆಗೆ ಅಣ್ಣ ಶಂಕರ್ ಹಾಗೂ ದೇವರಾಜ್ ಗುರುಗಳೇ ಕಾರಣ’ ಎನ್ನುತ್ತಾರೆ ರಾಜು. ದೇವರಾಜ್ ಅವರ ‘ಹೊಯ್ಸಳ ಡಾನ್ಸ್ ಕ್ಲಾಸ್’ ಇವರಿಗೆ ದಾರಿದೀಪವಾಯಿತು. ‘ಕುಣಿಯೋಣು ಬಾರಾ’ ಸ್ಪರ್ಧೆಯಲ್ಲಿ ಪಾಲ್ಗೊಂಡು ತೀರ್ಪುಗಾರರಿಂದ ಸೈ ಎನಿಸಿಕೊಂಡರು.

ರಾಜು ಮಹತ್ವಾಕಾಂಕ್ಷಿ. ಕಲಿತ ವಿದ್ಯೆಯನ್ನು ಮಕ್ಕಳಿಗೆ ಧಾರೆಯೆರೆಯಲು ಮುಂದಾದರು. ಈ ಕಾರಣಕ್ಕಾಗಿ ಹುಟ್ಟಿದ್ದೇ ‘ರಾಕ್‍ಬ್ರೇಕರ್ಸ್ ಡಾನ್ಸ್ ಅಕಾಡೆಮಿ’. ಇದು ಅಣ್ಣ ಶಂಕರ್ ಇಟ್ಟಿದ್ದ ಹೆಸರಂತೆ. ಬೆಂಗಳೂರಿನ ಸುಬ್ರಮಣ್ಯ ನಗರ, ನಂದಿನಿ ಲೇಔಟ್ ಹಾಗೂ ಸಂಜಯ್ ನಗರದಲ್ಲಿ ಆಕಸ್ತರಿಗೆ ತರಬೇತಿ ನೀಡುತ್ತಿದ್ದಾರೆ. ಇದೇ ನವೆಂಬರ್‌ನಲ್ಲಿ ಕೆನಡಾದಲ್ಲಿ ಡಾನ್ಸ್ ಕ್ಲಾಸ್ ತೆರೆಯುವ ಅದಮ್ಯ ಉತ್ಸಾಹದಲ್ಲಿದ್ದಾರೆ ಅವರು.

ಪತ್ನಿ ಕೇಶಿಕಾ ಕಥಕ್ ಡಾನ್ಸರ್. ನೃತ್ಯ ಶಾಲೆಯಲ್ಲಿ ಮಕ್ಕಳಲ್ಲಿ ಸ್ಫೂರ್ತಿ ತುಂಬಿ, ಡಾನ್ಸ್ ಷೋಗಳಿಗೆ ಅವರನ್ನು ತಯಾರು ಮಾಡುತ್ತಿದ್ದಾರೆ. ಹಿಪ್‍ಹಾಪ್, ಫ್ರೀಸ್ಟೈಲ್, ಕಂಸಾಳೆ ಮೊದಲಾದ ಜನಪದ ಪ್ರಕಾರಗಳನ್ನು ಕಲಿಸಲಾಗುತ್ತಿದೆ. ಮೂರೂ ಶಾಖೆಗಳಲ್ಲಿ ಸುಮಾರು 400 ಮಂದಿ ಭವಿಷ್ಯದ ನೃತ್ಯಪಟುಗಳು ತಯಾರಾಗುತ್ತಿದ್ದಾರೆ. 15ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿದ್ದಾರೆ.

ಇಲ್ಲಿನ ವಿದ್ಯಾರ್ಥಿಗಳು ಯುರೋಪ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಯೂಪ್ರಾ ಡಾನ್ಸ್ ಫೆಸ್ಟಿವಲ್‍ನಲ್ಲಿ ಕಂಸಾಳೆ ಪ್ರದರ್ಶಿಸಿ ಮೊದಲ ಸ್ಥಾನ ಪಡೆದಿದ್ದಾರೆ. ದುಬೈನ ಗ್ಲೋಬಲ್ ವಿಲೇಜ್ ವೆಸ್ಟಿವಲ್‍ನಲ್ಲೂ ರಾಜ್ಯದ ಜನಪದೀಯ ಕಂಪು ಚೆಲ್ಲಿ ಬಂದಿದ್ದಾರೆ.

ಟಗರು ಸಿನಿಮಾದ ಒಂದು ಸಾಂಗ್ ಮಾಡಲು ಕರೆಸಿದ್ದ ನಿರ್ದೇಶಕ ಸೂರಿ, ಅವರು ರಾಜು ಪ್ರತಿಭೆ ಗುರುತಿಸಿ ಮೂರು ಹಾಡುಗಳಿಗೆ ನೃತ್ಯ ನಿರ್ದೇಶಿಸುವಂತೆ ಹೇಳಿದ್ದರು. ‘ಟಗರು ಬಂತು ಟಗರು’, ‘ಮೆಂಟಲ್ ಓಜಾವಾ’, ‘ಹೋಲ್ಡ್ ಆನ್’-ಹಾಡುಗಳಿಗೆ ಇವರು ಸೊಗಸು ತಂದುಕೊಟ್ಟಿದ್ದಾರೆ.
ಸದ್ಯ ರೇಣು ಅವರ ‘ಕಿರಾತಕ-2’ ಸಿನಿಮಾದ ಐದು ಗೀತೆಗಳಿಗೆ ನೃತ್ಯ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಸೂರಿ ಅವರಿಂದ ನಿರ್ದೇಶನದ ಪಟ್ಟುಗಳನ್ನೂ ಕಲಿತಿರುವ ರಾಜು, ತಮ್ಮ ಕಾರ್ಯವ್ಯಾಪ್ತಿ ಹಿಗ್ಗಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ‘ನನ್ನ ಕನಸಿನ ಸಿನಿಮಾ ಮುಂದಿನ ತಿಂಗಳು ಸೆಟ್ಟೇರುತ್ತಿದೆ’ ಎನ್ನುವ ಅವರು ನಿರ್ದೇಶಕನಾಗಿ ಮತ್ತೊಂದು ಮಜಲಿಗೆ ಏರುತ್ತಿದ್ದಾರೆ.

ಕನ್ನಡದವರಿಗೇ ರಾಜ್ಯದಲ್ಲಿ ಬೆಂಬಲವಿಲ್ಲ ಎಂಬ ಆಕ್ಷೇಪ ರಾಜು ಅವರದ್ದು. ವರ್ಷಾನುಗಟ್ಟಲೆ ಅಭ್ಯಾಸ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಟಿವಿ ವಾಹಿನಿಗಳ ನೃತ್ಯ ಕಾರ್ಯಕ್ರಮಗಳು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣ.

ಶಾಲಾ ಮಕ್ಕಳಿಗೆ ಉಚಿತ ತರಬೇತಿ

ಪ್ರತಿಭಾವಂತರಿಗೆ ಇಲ್ಲಿದೆ ಅವಕಾಶ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಬಡವ, ಶ್ರೀಮಂತ ಎಂಬ ತಾರತಮ್ಯ ಅದಕ್ಕಿಲ್ಲ. ಕಲಿಯುವ, ಸಾಧಿಸುವ ಹಂಬಲವಿರುವ ಎಷ್ಟೋ ಮಕ್ಕಳಿಗೆ ಅವಕಾಶವೇ ಇರುವುದಿಲ್ಲ. ಅಂತಹವರಿಗೆ ಅವಕಾಶ ನೀಡುವುದರಲ್ಲಿ ಇವರು ಎಂದೂ ಮುಂದು. ಶ್ರೀರಾಮಪುರದಲ್ಲಿ ಬಡ ಶಾಲಾ ಮಕ್ಕಳಿಗೆ ಉಚಿತವಾಗಿ ನೃತ್ಯ ಹೇಳಿಕೊಡುತ್ತಿದ್ದಾರೆ. ಡಾನ್ಸ್‌ನಲ್ಲಿ ಆಸಕ್ತಿ ಇರುವ, ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ತರಬೇತಿ ನೀಡುವುದಾಗಿ ಅವರು ಹೇಳುತ್ತಾರೆ. ರಾಜು ಸಂಪರ್ಕ ಸಂಖ್ಯೆ 9740050077

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು