ಸೋಮವಾರ, ಮಾರ್ಚ್ 30, 2020
19 °C

ವಿಶಿಷ್ಟ ಕಲೆ, ವೈವಿಧ್ಯಮಯ ಪ್ರತಿಭೆ

ಡಾ. ರಮಾ ವಿ ಬೆಣ್ಣೂರ್ Updated:

ಅಕ್ಷರ ಗಾತ್ರ : | |

Deccan Herald

ತಮ್ಮ ವಿಶಿಷ್ಟ ಕಲೆಗಾರಿಕೆ, ವೈವಿಧ್ಯಮಯ ಪ್ರತಿಭೆಯಿಂದ, ಆಳವಾದ ಅಧ್ಯಯನಶೀಲತೆಯಿಂದ, ನಿಷ್ಟೂರ ವ್ಯಕ್ತಿತ್ವದಿಂದ ಮತ್ತು ಅತ್ಯಂತ ಸಮರ್ಥ ಗುರುವಾಗಿ ಕೆ.ಮುರಳೀಧರರಾಯರು ಅವರ ಅಭಿಮಾನಿಗಳ ಮನದಲ್ಲಿ ಸದಾ ನೆಲೆಸಿರುತ್ತಾರೆ. ಅವರ ಶಿಷ್ಯರಿಗಂತೂ ಅವರು ಪ್ರಾತಸ್ಮರಣೀಯರೆಂದರೆ ಅತಿಶಯೋಕ್ತಿ ಅಲ್ಲ. ತಮ್ಮ ಬದುಕನ್ನೇ ನೃತ್ಯಕ್ಕಾಗಿ ಮೀಸಲಿಟ್ಟ ಅವರು ನೃತ್ಯಲೋಕಕ್ಕೆ ನೀಡಿದ ಕೊಡುಗೆ ಗಣನೀಯವಾದುದೇ. ಅವರ ಶಿಷ್ಯೆಯರು ಮೈಸೂರಿನಲ್ಲಿ ಅಷ್ಟೇ ಅಲ್ಲದೆ ಜಗತ್ತಿನ ವಿವಿಧೆಡೆಗಳಲ್ಲಿ ಅವರು ಕಲಿಸಿದ ‘ಪಂದನಲ್ಲೂರು’ ಶೈಲಿಯ ಭರತನಾಟ್ಯವನ್ನು ಅಚ್ಚುಕಟ್ಟಾಗಿ ಪಸರಿಸುತ್ತಿದ್ದು ತನ್ಮೂಲಕ ಗುರುಗಳನ್ನು ಜೀವಂತವಾಗಿಟ್ಟಿದ್ದಾರೆ.

ಅವರಲ್ಲಿ ಕಲಿತವರಲ್ಲಿ ಮೈಸೂರಿನ ವಿದುಷಿ ಮಿತ್ರಾ ನವೀನ್ ಅವರೂ ಒಬ್ಬರು. ತಮ್ಮ ಗುರುಗಳ 95ನೆಯ ವರ್ಧಂತಿಯನ್ನು ಆಗಸ್ಟ್ 2ರಂದು ನಗರದ ವಾಸುದೇವಾಚಾರ್ಯ ಭವನದಲ್ಲಿ ಗುರುಗಳಿಗೆ ಭಕ್ತಿಪೂರ್ವಕ ‘ಸಮರ್ಪಣ’ ಎಂಬ ನೃತ್ಯ ನಮನ ಅರ್ಪಿಸುವ ಮೂಲಕ ಆಚರಿಸಿದರು. ಎರಡು ಗಂಟೆಗಳಿಗೂ ಮೀರಿದ ಈ ಕಾರ್ಯಕ್ರಮದಲ್ಲಿ ಮಿತ್ರಾ ಅವರು ತಮ್ಮ ನೃತ್ಯ ಪ್ರತಿಭೆಯನ್ನು ಸಮರ್ಥವಾಗಿ ತೋರಿದರು. ಮಾರ್ಗ ಪದ್ಧತಿಯಲ್ಲಿದ್ದ ಈ ಪ್ರಸ್ತುತಿಯು ಕೊನೆಯವರೆಗೂ ಅವರಲ್ಲಿ ಉಳಿದಿದ್ದ ಉತ್ಸಾಹವನ್ನು, ಗುರುಭಕ್ತಿಯನ್ನು ಮತ್ತು ಅವರೊಳಗಿನ ಪ್ರತಿಭೆಯನ್ನು ಚೆನ್ನಾಗಿಯೇ ಪರಿಚಯಿಸಿತು. ಅವರಿಗೆ ನಟುವಾಂಗದಲ್ಲಿ ಅವರ ಗುರುಗಳಾಗಿದ್ದ ವಿದುಷಿ ಕೃಪಾ ಫಡ್ಕೆ, ಗಾಯನದಲ್ಲಿ ವಿದ್ವಾನ್ ನವೀನ್, ಮೃದಂಗದಲ್ಲಿ ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ ಮತ್ತು ಕೊಳಲಿನಲ್ಲಿ ವಿದ್ವಾನ್ ಸಿ.ಎನ್.ತ್ಯಾಗರಾಜು ಅವರು ಸಹಕರಿಸಿದರು.

ಪದ್ಧತಿಯಂತೆ ಪುಷ್ಪಾಂಜಲಿಯಿಂದ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮಿತ್ರಾ ಅವರು ಕಾಳಿದಾಸನ ಶ್ಯಾಮಲಾ ದಂಡಕದ ಒಂದು ಶ್ಲೋಕ ‘ಮಾಣಿಕ್ಯ ವೀಣಾ’ಗೆ ನೃತ್ಯರೂಪ ತೊಡಿಸಿ ಮುಂದೆ ಮುತ್ತುಸ್ವಾಮಿ ದೀಕ್ಷಿತರ ಘನವಾದ ಕೃತಿ, ಸಿಂಹೇಂದ್ರ ಮಧ್ಯಮ ರಾಗದ ‘ಕಾಮಾಕ್ಷಿ ಕಾಮಕೋಟಿ ಪೀಠವಾಸಿನಿ’ಯಲ್ಲಿ ಶ್ರೀಚಕ್ರದ ನವಾವರಣ ಪೂಜೆಯ ಹೊಳಹನ್ನು ತೋರುತ್ತ ದೇವಿಯ ದರ್ಶನವನ್ನು ಮಾಡಿಸಿದರು.

ಅವರೊಳಗಿನ ನೃತ್ಯಪಟು ಸಂಪೂರ್ಣವಾಗಿ ಹೊರಬಂದದ್ದು ಪದವರ್ಣದಲ್ಲಿ. ರಾಗಮಾಲಿಕೆಯ ವರ್ಣ ‘ಸಾಮಿಯೇ ನೀ’ಯಲ್ಲಿ ಮೆರವಣಿಗೆಯಲ್ಲಿ ಶಿವನನ್ನು ನೋಡಿ ಅವನೆಡೆಗೆ ಸೆಳೆಯಲ್ಪಟ್ಟ ಭಕ್ತೆ ದೇವಳದಲ್ಲಿಯೂ ಅವನನ್ನೇ ನೋಡಿದಾಗ ಆಗುವ ರೋಮಾಂಚನವನ್ನು ಮಿತ್ರಾ ಅವರು ತಮ್ಮ ಚೊಕ್ಕವಾಗಿ ಅಭಿನಯಿಸಿ ತೋರಿದರು. ಅದರ ನೃತ್ಯವು ಮಿತ್ರಾ ಅವರದಾಗಿದ್ದು, ಸಾಹಿತ್ಯಕ್ಕೆ ನೃತ್ಯ ಜೋಡಣೆ ಮತ್ತು ಅಭಿನಯವೆಲ್ಲವೂ ಗುರು ಮುರಳೀಧರ ರಾಯರದು. ಬಿಗಿಯಾದ ಅಡವುಗಳು, ಕ್ಲಿಷ್ಟ ಮುಕ್ತಾಯಗಳನ್ನು ಮಿತ್ರಾ ಸರಾಗವಾಗಿ ನಿರ್ವಹಿಸಿದರು. ಶಿವಪರವಾದ ಕೃತಿಯ ಅಡುವುಗಳೂ ಅದಕ್ಕೆ ತಕ್ಕದಾಗಿದ್ದಿತು. ಬೇಕಾದಂತೆ ಬಾಗಬಲ್ಲ ಅವರ ಸಪೂರ ದೇಹವು ನಿರಂತರ ಅಭ್ಯಾಸ ಮಾಡುತ್ತಿರುವುದನ್ನು ಸೂಚಿಸುತ್ತಿತ್ತು.

ಅವರ ಅಭಿನಯ ಸಾಮರ್ಥ್ಯವು ಸಂಪೂರ್ಣವಾಗಿ ಪ್ರಕಟವಾದದ್ದು ದೇವರನಾಮದಲ್ಲಿ. ಪುರಂದರದಾಸರ ‘ಜಗದೋದ್ಧಾರನ’ದೊಳಗಿನ ವಾತ್ಸಲ್ಯ ಭಾವದಲ್ಲಿ ನೋಡುಗರನ್ನು ಅದ್ದಿ ಮುಳುಗಿಸಿದ ಮಿತ್ರಾ ಅವರು ಸಂಚಾರಿಯಲ್ಲಿ ಹಿರಣ್ಯಕಶ್ಯಪು ಸಂಹಾರವನ್ನು ತೋರಿದರು. ಅಷ್ಟಪದಿಯಲ್ಲಿಯೂ ಸಹ ವಿರಹಿಣಿ ರಾಧೆಯ ಅವಸ್ಥೆಯನ್ನು ಅವರ ತಲ್ಲೀನ ಅಭಿನಯವು ಸೊಗಸಾಗಿ ಎತ್ತಿ ತೋರಿತು. ಕೊನೆಯ ತಿಲ್ಲಾನದವರೆಗೆ ಅವರ ಉತ್ಸಾಹವು ಇನಿತೂ ಕುಂದಿರಲಿಲ್ಲ. ಇಡೀ ನೃತ್ಯಕ್ಕೆ ನವೀನ್ ಅವರ ಭಾವಪೂರ್ಣ ಗಾಯನವು ಜೀವ ತುಂಬಿತ್ತು. ಬಿಗಿಯಾದ ನಟುವಾಂಗ, ಸುಮಧುರ ಕೊಳಲು ಮತ್ತು ಮೃದಂಗವು ಒತ್ತಾಸೆಯಾಗಿ ನಿಂತು, ನೃತ್ಯ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿತ್ತು. ಒಟ್ಟಾರೆ, ತಾವೊಬ್ಬ ಸಮರ್ಥ ನರ್ತಕಿ ಎಂಬುದನ್ನು ಮಿತ್ರಾ ಅವರು ನಿರೂಪಿಸಿದ ಕಾರ್ಯಕ್ರಮ ಅದಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು