ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರದಂತೆ ಧಾರೇಶ್ವರ

Last Updated 24 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಯಕ್ಷಗಾನದ ಭಾಗವತ ಎಂದರೆ ಅದು ಕಟ್ಟುವ ಕೈ. ಹೆಣ್ಣುಮಗಳೊಬ್ಬಳು ಅಂದವಾದ ಹೂವುಗಳನ್ನು ಒಪ್ಪವಾದ ದಾರದಿಂದ ಮಾಲೆಕಟ್ಟಿದಂತೆ ಯಕ್ಷಗಾನ ಭಾಗವತರ ಕೆಲಸ. ತನ್ನ ಕೈಯಲ್ಲಿ ಹಿಡಿದ ತಾಳದಿಂದ ಮೃದಂಗದ ಜೊತೆ, ಚೆಂಡೆಯ ಜೊತೆ, ಶ್ರುತಿಯ ಜೊತೆ, ಮುಮ್ಮೇಳದ ಜೊತೆ, ಪ್ರೇಕ್ಷಕರ ಜೊತೆ ಒಂದು ಸುಂದರವಾದ ಮಾಲೆಯನ್ನು ನೇಯುತ್ತಾನೆ. ಅಂತಹ ಕಸುಬುದಾರ ನೇಯ್ಗೆಗಾರ ಬಡಗುತಿಟ್ಟಿನ ಪ್ರಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ. ಅವರು ದಾರದಂತೆ ಕಟ್ಟಿದರು, ಪ್ರಸಂಗವೊಂದು ಜಾರದಂತೆ ನೋಡಿಕೊಂಡರು.

ರಂಗದಲ್ಲಿ ಕುಣಿಯುವ ಪಾತ್ರಧಾರಿಗೆ ತನ್ನ ಪಾತ್ರದ ಚಿಂತೆ ಮಾತ್ರ. ಆ ದಿನ ಅವರು ಕೌರವನಾದರೆ, ಕೀಚಕನಾದರೆ, ಕೃಷ್ಣನಾದರೆ ಆ ಪಾತ್ರವನ್ನು ಅಭಿನಯಿಸಿದರೆ ಸಾಕು. ಶೃಂಗಾರವಾದರೆ ಶೃಂಗಾರ, ದುಃಖವಾದರೆ ದುಃಖ, ಹಾಸ್ಯವಾದರೆ ಹಾಸ್ಯ. ಆದರೆ ಭಾಗವತ ಹಾಗಲ್ಲ. ಅವರಿಗೆ ಎಲ್ಲ ಭಾವಗಳೂ ಬೇಕು. ಕ್ಷಣ ಕ್ಷಣಕ್ಕೂ ಬದಲಾಗಬೇಕು. ಒಮ್ಮೆ ಕೌರವನಾಗಬೇಕು, ಮಗದೊಮ್ಮೆ ಭೀಮನಾಗಬೇಕು, ಮೊಗದೊಮ್ಮೆ ಭೀಷ್ಮನಾಗಬೇಕು. ಎಲ್ಲ ಭಾವ ಮತ್ತು ಎಲ್ಲ ಪಾತ್ರಗಳನ್ನೂ ಮೈಮೇಲೆ ಆಹ್ವಾನಿಸಿಕೊಂಡರೆ ಮಾತ್ರ ಅವರೊಬ್ಬ ಯಶಸ್ವಿ ಭಾಗವತರಾಗುತ್ತಾರೆ. ಆ ಮೂಲಕ ಒಂದು ಸುಂದರ ಯಕ್ಷಗಾನವೆಂಬ ಮಾಲೆಯನ್ನು ಸಮರ್ಪಣೆ ಮಾಡಲು ಸಿದ್ಧರಾಗುತ್ತಾರೆ. ಹಾಗೆ ನಾನು ಹದಗೊಂಡೆ ಎನ್ನುತ್ತಾರೆ ಅವರು.

ಧಾರೇಶ್ವರ ಭಾಗವತರು ಎಂದೇ ಖ್ಯಾತರಾದ ಸುಬ್ರಹ್ಮಣ್ಯ ಧಾರೇಶ್ವರ ಸುಮಾರು 40 ವರ್ಷಗಳಿಂದ ಇಂತಹ ಯಕ್ಷಮಾಲೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಅವರ ಜೊತೆಗೆ ಮಾತನಾಡುವುದೆಂದರೆ ಯಕ್ಷಗಾನದ ಕೊಳದಲ್ಲಿ ಮಿಂದುಬಂದಂತೆ. ಅವರ ನೆನಪಿನ ಬುತ್ತಿಯಲ್ಲಿ ಎಂತೆಂತಹ ಘಟನೆಗಳು ಇವೆ. ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ, ಕಾಳಿಂಗ ನಾವುಡರ ಸಹವರ್ತಿಯಾಗಿ, ಬಡಗುತಿಟ್ಟಿನ ಈ ಕಾಲದ ಬಹುತೇಕ ಎಲ್ಲ ಮಹಾನ್ ನಟರನ್ನು ಕುಣಿಸಿದ ಅವರಿಗೆ ಇನ್ನೂ ದಣಿವಾಗಿಲ್ಲ.

ಹಂಗಾರಕಟ್ಟೆ ಯಕ್ಷಗಾನ ಭಾಗವತಿಗೆ ಕೇಂದ್ರದಲ್ಲಿ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದರೂ ಸುಬ್ರಹ್ಮಣ್ಯ ಧಾರೇಶ್ವರ ಅಮೃತೇಶ್ವರಿ ಯಕ್ಷಗಾನ ಮೇಳವನ್ನು ಸೇರಿದ್ದು ಭಾಗವತರಾಗಿ ಅಲ್ಲ. ಎಲೆಕ್ಟ್ರಿಷಿಯನ್ ಆಗಿ. ಗೋಕರ್ಣದಲ್ಲಿ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದ, ನಾಟಕದ ಸಖ್ಯವನ್ನೂ ಹೊಂದಿದ್ದ ಸುಬ್ರಹ್ಮಣ್ಯ ಒಂದೆರಡು ಹಿಂದೂಸ್ತಾನಿ ರಾಗಗಳ ಪರಿಚಯವನ್ನೂ ಹೊಂದಿದ್ದರು. ಅದೇ ಅವರನ್ನು ಯಕ್ಷಗಾನ ರಂಗಕ್ಕೆ ಕರೆದು ತಂದಿತು.

1980ರಲ್ಲಿ ಎಲೆಕ್ಟ್ರಿಷಿಯನ್ ಆಗಿ ಅಮೃತೇಶ್ವರಿ ಮೇಳ ಸೇರಿದ ಧಾರೇಶ್ವರ ಸಂಗೀತಗಾರನಾಗಿಯೂ ಕೆಲಸ ಮಾಡಬೇಕಿತ್ತು. ಗಣಪತಿ ಪೂಜೆ ಮಾಡಿದ ನಂತರ ಲೈಟಿಂಗ್ ಮತ್ತು ಮೈಕ್ ಜವಾಬ್ದಾರಿ ನೋಡಿಕೊಳ್ಳಬೇಕಿತ್ತು. ‘ಇದಕ್ಕೆ ಮುಖ್ಯ ಕಾರಣ ಸಂಗೀತಗಾರನಿಗಿಂತ ಎಲೆಕ್ಟ್ರಿಷಿಯನ್ ಸಂಬಳ ಜಾಸ್ತಿ ಎನ್ನುವುದಾಗಿತ್ತು’ ಎಂದು ನಗುತ್ತಾರೆ.

ನಾರ್ಣಪ್ಪ ಉಪ್ಪೂರು, ಕಾಳಿಂಗ ನಾವುಡ ಮತ್ತು ಹಿಲ್ಲೂರು ಗಣಪತಿ ಹೆಗಡೆ ಅವರ ಬೆಂಬಲದಿಂದ ತಾವು ಭಾಗವತನಾಗಿ ರೂಪುಗೊಂಡಿದ್ದನ್ನು ನೆನಪಿಸಿಕೊಳ್ಳುವ ಅವರು ನಂತರ ಪ್ರಮುಖ ಭಾಗವತರಾಗಿ ಬೆಳೆದರು. ಪೆರ್ಡೂರು ಮೇಳದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನ ಭಾಗವತರಾಗಿ ನಿಜವಾದ ಅರ್ಥದಲ್ಲಿ ಮೆರೆದರು. ಹೊಸ ಪ್ರಸಂಗಗಳು ಬಂದ ಮೇಲೆ ಅವರು ಇನ್ನಷ್ಟು ಜನಪ್ರಿಯರಾದರು. ಪೌರಾಣಿಕ ಪ್ರಸಂಗದಲ್ಲಿಯೂ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಗೆದ್ದರು. ಹೊಸ ಪ್ರಯೋಗಗಳು ಹೊಸತರಲ್ಲಿ ಪೇಚಾಟಕ್ಕೆ ಕಾರಣವಾಗಿದ್ದೂ ಉಂಟು.

ಒಮ್ಮೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಕೀಚಕ. ಆಗಷ್ಟೇ ಭಾಗವತರಾಗಿ ಗುರುತಿಸಿಕೊಳ್ಳುತ್ತಿದ್ದ ಸುಬ್ರಹ್ಮಣ್ಯ ಒಂದು ಪದ್ಯವನ್ನು ಬೇರೆ ರೀತಿಯಲ್ಲಿ ಎತ್ತುಗಡೆ ಮಾಡಿದರು. ಚಿಟ್ಟಾಣಿಯವರು ಅಭಿನಯ ಮಾಡುತ್ತಲೇ ಬಾಯಿಬಿಟ್ಟುಕೊಂಡು ಭಾಗವತರ ಕಡೆ ತಿರುಗಿದರು. ‘ಓಹೋ ಏನೋ ತಪ್ಪು ಮಾಡಿದ್ದೇನೆ. ಇನ್ನು ಇವರು ನನ್ನನ್ನು ಉಳಿಸಲಿಕ್ಕಿಲ್ಲ’ ಎಂದು ಭಾಗವತರು ತಾಳವನ್ನು ಅಲ್ಲಿಯೇ ಬಿಟ್ಟು ರಂಗದಿಂದ ಎದ್ದು ಓಡಿದರು. ಯಾರಿಗೂ ಸಿಗಬಾರದು ಎಂದು ಮೇಳದ ಡೇರೆಯನ್ನು ದಾಟಿ ಹೊರಗೆ ಇರುವ ಮೋಟರು ಅಡಿಗೆ ಅಡಗಿ ಕುಳಿತರು. ಮದ್ದಳೆಗಾರರಾಗಿದ್ದ ದುರ್ಗಪ್ಪ ಗುಡಿಗಾರ ಅವರು ಭಾಗವತಿಕೆಯನ್ನು ಮಾಡಿ ಮುಗಿಸಿ ಭಾಗವತರು ಎಲ್ಲಿ ಹೋದರು ಎಂದು ಹುಡುಕಲು ಬಂದರು. ಎಲ್ಲ ಕಡೆ ಹುಡುಕಿಯಾದ ನಂತರ ಮೋಟರು ಕೆಳಗೆ ನುಸುಳಿದ್ದ ಭಾಗವತರು ಕಂಡರು. ಭಾಗವತರಿಗೆ ಇನ್ನೂ ಭಯ. ಆದರೆ ದುರ್ಗಪ್ಪ ಗುಡಿಗಾರ ಅವರು ಅವರನ್ನು ಸಂತೈಸಿ ಮತ್ತೆ ರಂಗಕ್ಕೆ ಕರೆತಂದರು. ಆಟ ಮುಗಿದು ಚೌಕಿಗೆ ಬಂದ ಮೇಲೆ ಚಿಟ್ಟಾಣಿಯವರು ‘ಅದ್ಯಾಕೆ ಎದ್ದು ಓಡ್ಯೋದೊ’ ಎಂದು ಕೇಳಿದರು. ‘ನೀವು ಆ ರೀತಿ ಮುಖ ಮಾಡಿಕೊಂಡು ನನ್ನ ಕಡೆ ತಿರುಗಿದರೆ ನಾನು ಏನಂತ ತಿಳಿದುಕೊಳ್ಳುವುದು. ಏನೋ ತಪ್ಪಾಯ್ತು ಎಂದು ಓಡಿ ಹೋದೆ’ ಎಂದು ಇವರು ಉತ್ತರಿಸಿದರು. ‘ಭೋಸುಡ್ಕೆ ನೀನು ಚೆನ್ನಾಗಿ ಹಾಡಿದೆ ಎಂದು ನಿನ್ನ ಕಡೆ ನೋಡಿದ್ನೊ ಮಾರಾಯ’ ಎಂದು ಚಿಟ್ಟಾಣಿ ಬೆನ್ನು ಚಪ್ಪರಿಸಿದಾಗಲೇ ಹೋದ ಜೀವ ವಾಪಸು ಬಂದಿದ್ದು ಭಾಗವತರಿಗೆ. ಹಿಂದೂಸ್ತಾನಿ ರಾಗಗಳ ಪರಿಚಯ ಇದ್ದಿದ್ದರಿಂದ ಹಲವಾರು ಸಾಂಪ್ರದಾಯಿಕ ಹಾಡುಗಳಿಗೆ ಹೊಸ ರಾಗಗಳನ್ನು ಅಳವಡಿಸಿ ಜೈ ಎನಿಸಿಕೊಳ್ಳಲು ಅವರಿಗೆ ಸಾಧ್ಯವಾಯ್ತು.

ತಮ್ಮ ಸಾಧನೆಗೆ ಅವರು ನೆನೆಯುವುದು ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರನ್ನು. ‘ಮೊದಮೊದಲು ಒಡ್ಡೋಲಗದಲ್ಲಿ ಬರುವ ‘ನಂಬಿದವರ ಆನಂದದಿಂದ’ ಪದ್ಯವನ್ನು ಹಾಡಲು ಭಯವಾಗುತ್ತಿತ್ತು. ಪನ್ನಾಗ ತೋಡಿಯಲ್ಲಿ ಅದನ್ನು ಹಾಡಬೇಕು. ಸ್ವಲ್ಪ ವ್ಯತ್ಯಾಸವಾದರೂ ಅದು ನಾದನಾಮ ಕ್ರಿಯ ರಾಗವಾಗುತ್ತದೆ. ಅದಕ್ಕೆ ನಮ್ಮ ಗುರುಗಳು ಒಂದು ದಿನ ‘ಏ ಮಾಣಿ, ಜನರೇಟರಿಂದ ಎಲಿಕ್ಟ್ರಿಕಲ್ ಬೋರ್ಡಿಗೆ ದಪ್ಪ ವೈರ್ ತರುತ್ತೀಯಲ್ಲ ಅದರಂತೆ ಪನ್ನಾಗ ತೋಡಿ. ಎಲೆಕ್ಟ್ರಿಕಲ್ ಬೋರ್ಡಿನಿಂದ ಲೈಟ್ ಗೆ ಹಾಕುತ್ತೀಯಲ್ಲ ಸಣ್ಣ ವೈರ್ ಅದರ ಹಾಗೆ ನಾದನಾಮ ಕ್ರಿಯ. ವೈರ್ ಹೆಚ್ಚು ಕಡ್ಮಿ ಆದ್ರೆ ಎಂತಾ ಆತ್ ಹೇಳು? ಎಲ್ಲ ಹಾಳ್ ಆಪುದಿಲ್ಯ ಹಾಂಗೆಯಾ ರಾಗದಲ್ಲಿ ಒಂದು ಚೂರ್ ಹೆಚ್ಚುಕಮ್ಮಿ ಆದ್ರೂ ಯಕ್ಷಗಾನದ ವಾತಾವರಣವೇ ಹಾಳಾಗ್ತು’ ಎಂದು ಹೇಳಿಕೊಟ್ಟಿದ್ದರು. ಆ ಮಾತು ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ’ ಎಂದು ಅವರು ಸ್ಮರಿಸುತ್ತಾರೆ. ರಂಗದ ಸಂಪೂರ್ಣ ಹೊರೆಯನ್ನು ಹೊರುವುದು ಹೇಗೆ ಎನ್ನುವುದನ್ನು ನಾರ್ಣಪ್ಪ ಉಪ್ಪೂರರಿಂದ ಕಲಿತೆ. ಪ್ರೇಕ್ಷಕರನ್ನು ಮೋಡಿ ಮಾಡುವುದು ಹೇಗೆಂಬುದನ್ನು ಕಾಳಿಂಗ ನಾವುಡರಿಂದ ಕಲಿತೆ. ಹೊಸ ಪ್ರಸಂಗ ಜೈಸುವುದು ಹೇಗೆಂದು ಅನುಭವದಿಂದ ಕಲಿತೆ ಎಂದು ತಮ್ಮ ಅನುಭವ ಬಿಚ್ಚಿಟ್ಟರು.

‘ಹೊಸ ಪ್ರಸಂಗಗಳು ಜನಪ್ರಿಯವಾದಾಗ ನನ್ನ ಮೇಲೆ ಆರೋಪಗಳೂ ಬಂದವು. ಯಕ್ಷಗಾನ ಸಂಪ್ರದಾಯವನ್ನೇ ಹಾಳು ಮಾಡಿದ ಎಂಬ ಆಪಾದನೆಯೂ ಇತ್ತು. ಆದರೆ ಅದಕ್ಕೆ ನನ್ನ ಪ್ರತಿಕ್ರಿಯೆ ಇಷ್ಟೆ. ನನಗೆ ನನ್ನೊಬ್ಬನ ಬದುಕು ಮುಖ್ಯವಾಗಿರಲಿಲ್ಲ. ಮೇಳವನ್ನು ನಂಬಿಕೊಂಡು 70–80 ಜನ ಇದ್ದರು. ಮೇಳದ ಟೆಂಟ್ ಹೊರಗೆ ಸಾಕಷ್ಟು ಮಂದಿ ಅಂಗಡಿಗಳನ್ನು ಇಟ್ಟುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದರು. ಎಲ್ಲರ ತುತ್ತಿನ ಚೀಲವೂ ತುಂಬ ಬೇಕಿತ್ತು. ಪ್ರೇಕ್ಷಕರಿಗೆ ಹೊಸದು ಬೇಕಿತ್ತು. ಅದಕ್ಕೆ ಹೊಸ ಹೊಸ ಶೃಂಗಾರ ಪದ್ಯಗಳು, ಹಾಸ್ಯ ಪದ್ಯಗಳು, ಕೊರವಂಜಿ ಪದ್ಯಗಳೂ ಬಂದವು. ಅದಕ್ಕೆ ತಕ್ಕಂತೆ ಪ್ರಸಂಗಗಳೂ ಬಂದವು. ಮೊದಲೇ ಹೇಳಿದ ಹಾಗೆ ಭಾಗವತನದು ಕಟ್ಟುವ ಕೆಲಸವೇ ವಿನಾ ಕೆಡವುವ ಕೆಲಸ ಅಲ್ಲ. ನಾನು ಕಟ್ಟುತ್ತಾ ಹೋದೆ. ಈಗಲೂ ನನಗೆ ಪೌರಾಣಿಕ ಪ್ರಸಂಗಗಳು ಇಷ್ಟ. ಆದರೆ ಯಕ್ಷಗಾನದ ಹಾದಿಯಲ್ಲಿ ಬಂದಿದ್ದನ್ನು ಸ್ವೀಕರಿಸಿದ್ದೇನೆ. ಉತ್ತಮವಾದದ್ದು ಕೊಟ್ಟಿದ್ದೇನೆ’ ಎಂಬುದು ಅವರ ಸಮರ್ಥನೆ.

‘ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಭಾಗವತಿಗೆ ಮಾಡಿದ ಹಾಗೆ ಗೋಡೆ ನಾರಾಯಣ ಹೆಗಡೆ ಅವರಿಗೆ ಮಾಡಲು ಆಗಲ್ಲ. ಮಹಾಬಲ ಹೆಗಡೆ ಅವರಿಗೆ ಹೇಳಿದ ಹಾಗೆ ಶಂಭು ಹೆಗಡೆ ಅವರಿಗೆ ಪದ್ಯ ಹೇಳಲು ಬರಲ್ಲ. ಶಂಭು ಹೆಗಡೆ ಅವರದ್ದು ನಿಧಾನಗತಿಯಾದರೆ ಚಿಟ್ಟಾಣಿ ಅವರದ್ದು ಆರ್ಭಟ. ಹೀಗೆ ಆಯಾ ಪಾತ್ರಧಾರಿಗಳ ನಡೆಯನ್ನು ನೋಡಿ ಭಾಗವತಿಗೆ ಮಾಡಬೇಕು. ಅವೆಲ್ಲ ಅನುಭವಗಳಿಂದಲೇ ಕಲಿತೆ. ನೆಬ್ಬೂರು ನಾರಾಯಣ ಭಾಗವತರಲ್ಲದೆ ಇನ್ಯಾರೆ ಪದ್ಯ ಹೇಳಿದರೂ ಶಂಭು ಹೆಗಡೆ ಕುಣಿಯುವುದಿಲ್ಲ ಎಂಬ ಮಾತಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಮುಂಬೈಯಲ್ಲಿ ಒಮ್ಮೆ ನಾನು ಅವರಿಗೆ ಬೇಕಾದ ಹಾಗೆಯೇ ಪದ್ಯ ಹೇಳಿ ಅವರನ್ನೂ ಜೊತೆಗೆ ಪ್ರೇಕ್ಷಕರನ್ನೂ ರಂಜಿಸಿದೆ.’

‘ಲೈಟ್, ವೈರ್, ಜನರೇಟರ್ ನಡುವೆ ಕಳೆದು ಹೋಗಬಹುದಾಗಿದ್ದ ನನ್ನ ಬದುಕಿಗೆ ಯಕ್ಷಗಾನ ಬೆಳಕು ನೀಡಿದೆ. ಅದು ನೀಡಿದ ಬೆಳಕಿನಲ್ಲಿ ನಾನು ನಡೆದೆ. ಈಗಲೂ ನಡೆಯುತ್ತಿದ್ದೇನೆ. ಮುಂದೆಯೂ ಕೂಡ’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT