ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚಳಿಯ ಒಡಕಲು ಬಿಂಬಗಳು

Last Updated 22 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ದೆಹಲಿಯ ಚಳಿಯೆಂದರೆ ಪ್ರೇಮಿಗಳಿಗೆ ಪ್ರಶಸ್ತ ಕಾಲವೆನ್ನುವ ಪ್ರತೀತಿಯಿದೆ. ತಣ್ಣಗಿನ ಕುಳಿರ್ ಗಾಳಿಯಲ್ಲಿ ಪಾರಿಜಾತದ ಕಂಪು ಸುಳಿದಂತೆ, ತೆಳುವಾದ ಮಂಜಿನ ಸೆರಗಲ್ಲಿ ಹೂವೊಂದು ನಕ್ಕಂತೆ ನಸುಕು ಹರಿಯದ ಬೆಳಕು ಮೂಡದ ಮುಂಜಾವು. ಸೂರ್ಯೋದಯವೇ ಕಾಣದ ಬೆಳಗು. ಹೊರಗೆ ಮನಸೂರೆಗೊಳ್ಳುವ ಮಂಜಿನ ಹೊಗೆ. ಹಿಮದ ಮುಸುಕಿನತೆರೆ. ಲೋಕವನ್ನೆಲ್ಲಾ ಆವರಿಸಿಕೊಂಡ ಧ್ಯಾನಸ್ಥ ಮಂಜು.

ಆದರೆ ಪ್ರಗತಿಶೀಲ ರಾಷ್ಟ್ರದ ರಾಜಧಾನಿ ದಿಲ್ಲಿಯ ನಿರ್ಗತಿಕರ ಮತ್ತು ಬಡವರ ಪಾಲಿಗೆ ಚಳಿಗಾಲವೆಂಬುದು ಶಾಪ. ಶರತ್ಕಾಲದ ದೀರ್ಘ ಎರಡು ತಿಂಗಳು ದಿಕ್ಕು ದೆಸೆಯಿರದ ವಾಸಕ್ಕೆ ಮನೆಯಿರದ, ತೆರೆದ ಆಕಾಶವೇ ಮನೆಯಾಗಿರುವ ಈ ಬಡ ಪರದೇಸಿಗಳ ಬದುಕು ಕಠೋರ! ಜಗಮಗಿಸುವ ದೆಹಲಿಯೆಂಬ ಮೋಹನಾಂಗಿಯ ಬೆಚ್ಚನೆಯ ತೆಕ್ಕೆಯಲ್ಲಿ ಉಳ್ಳವರು ತಿಂದುಂಡು ಹಾಯಾಗಿ ಮಲಗಿದರೆ, ಕಟಕಟಿಸುವ ಚಳಿಗೆ ಮಲಗಲು ಜಾಗವೂ ಇರದೇ, ಚಳಿಗೆ ನಿದ್ದೆಯೂ ಹತ್ತಿರ ಸುಳಿಯದ, ಹೊದೆಯಲು ಕಂಬಳಿಯೂ ಇರದವರ ಗತಿಯೇನಿರಬಹುದೆಂದು ಯೋಚಿಸಿದರೆ ಎದೆ ನಡುಗುತ್ತದೆ.

ದಿನವೂ ಸಂಜೆ ಜವಾಹರಲಾಲ್ ನೆಹರೂ ಸ್ಟೇಡಿಯಂ ಸುತ್ತಲಿನ ಸರಕಾರಿ ದಫ್ತರುಗಳ ಸಿಬ್ಬಂದಿಗಳನ್ನು ಹೊತ್ತು ಹೊರಡುವ ಬಸ್ಸನ್ನು ನಾನೂ ಹಿಡಿಯುತ್ತಿದ್ದೆ. ನಿಜಾಮುದ್ದೀನ್ ಫ್ಲೈಓವರಿನ ಕೆಳಗೆ, ಫುಟ್‍ಪಾತಿನಲ್ಲಿ, ಗಿಡಮರಗಳಿರುವ ಹಸಿರು ಬಯಲಲ್ಲಿ ಬದುಕು ಹಾಸಿಕೊಂಡ ನಿರಾಶ್ರಿತರು, ನಿರ್ಗತಿಕ ಭಿಕ್ಷುಕರು, ಕಳ್ಳರು, ಖದೀಮರು, ಮೂಗು ಸುರಿಸುವ ಕೊಳೆ ಕೊಳೆಯಾದ ಪುಟ್ಟ ಮಕ್ಕಳು, ದೌರ್ಜನ್ಯ ಶೋಷಣೆಯ ಬುತ್ತಿಯನ್ನು ಸೆರಗಿನಲ್ಲಿ ಕಟ್ಟಿಕೊಂಡು ಬದುಕಬೇಕಾಗಿರುವ ಮಹಿಳೆಯರು, ತಾಯಂದಿರು, ಬಸುರಿಯರು, ನಗರದ ಕ್ರೌರ್ಯ ಕಠೋರತೆಯ ಝಳವುಂಡು ಬದುಕಲು ಕಲಿತ ದೊಡ್ಡ ಮಕ್ಕಳು, ಕೈನೀಗದ ಅಜ್ಜಿಯರು, ಅಜ್ಜಂದಿರು ಮತ್ತು ರೋಗ ರುಜಿನವುಳ್ಳವರು– ಹೀಗೊಂದು ನಿರ್ಲಕ್ಷಿತ ಲೋಕವೇ ಇದೆ ಇಲ್ಲಿ. ಜೀವ ಕಾಳಜಿಯ ಜನರು ನೀಡಿದ ಕಂಬಳಿ, ಉಣ್ಣೆಯ ಕೋಟು, ಟೋಪಿಗಳಲ್ಲಿ ಲೋಕನಾಟಕದ ಪಾತ್ರಕ್ಕೆ ಸಜ್ಜಾದವರಂತೆ ಕಾಣುತ್ತಿದ್ದರು. ಮಹಾನಗರದ ವೈಭವದ ರಂಗಸಜ್ಜಿಕೆಯನ್ನು ಅಣಕಿಸುವಂತೆ ಹಗಲುಗಳ್ಳರು ಕಂಬಳಿಗಳನ್ನು ಚಿಂದಿಗಳನ್ನು ಕದಿಯಬಾರದೆಂದು ಅಡಗಿಸಿಟ್ಟ ಲ್ಯಾವಿಗಂಟುಗಳು ಮರದ ಮರೆಯಿಂದ ಇಣುಕುತ್ತಿದ್ದವು.

ನಗರದ ಬೆಲೆ ಬಾಳುವ ಕಾರುಗಳು ಮುಂಬೆಳಕಿನಲ್ಲಿ ಫಳಫಳ ಮಿರುಗುತ್ತ ಮೆಲ್ಲಗೇ ಸೇತುವೆ, ಮಿನಾರು, ಗುಂಬಜಗಳನ್ನು ದಾಟಿ ಐರಾವತಗಳಂತೆ ನಡೆಯತೊಡಗಿದಾಗ ರಸ್ತೆಬದಿಯ ಜೀವಸಂಕುಲ ಸ್ತಬ್ಧಚಿತ್ರಗಳಾಗುತ್ತವೆ. ಮನೆಯಿಲ್ಲದವರ ಆಶ್ರಯಕ್ಕಾಗಿಯೇ ‘ರೈನ್ ಬಸೇರಾ’ ಎನ್ನುವ ರಾತ್ರಿ ತಂಗುದಾಣಗಳಿವೆ. ದೆಹಲಿ ಸರಕಾರ ಹೆಚ್ಚು ಹೆಚ್ಚು ಈ ರೈನ್ ಬಸೇರಾಗಳನ್ನು ಕಲ್ಪಿಸುವಲ್ಲಿ ವಿಶೇಷ ಕಾಳಜಿವಹಿಸಿದೆ. ಬೆಚ್ಚಗಿನ ಕಂಬಳಿ, ಬಿಸಿ ನೀರು, ಶೌಚಾಲಯ ಇತ್ಯಾದಿ ಸವಲತ್ತುಗಳನ್ನು ಒದಗಿಸುವ ಘೋಷಣೆಗಳು ಕಾರ್ಯರೂಪಕ್ಕೆ ಬಂದಿವೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಸೇವಾ ಮನೋಭಾವದ ಜನ ಗಾಡಿಗಳಲ್ಲಿ ತಿಂಡಿ ತಿನಿಸು, ಆಹಾರ, ಬೆಚ್ಚಗಿನ ಬಟ್ಟೆಬರೆಗಳನ್ನು ಹಂಚುತ್ತಾರೆ. ದಾನಿಗಳು ಕಂಬಲ್ ಸೇವೆ (ರಗ್ಗು, ಕಂಬಳಿ, ರಜಾಯಿ ಹಂಚುವುದು) ಮಾಡುತ್ತಾರೆ.

ಚಳಿಯ ಬೆಳಗಿನಲ್ಲಿ ಸೈಕಲ್‌ ರಿಕ್ಷಾ ಹತ್ತಿ ಸ್ಕೂಲಿಗೆ ಹೋಗುತ್ತಿರುವ ಮಕ್ಕಳು
ಚಳಿಯ ಬೆಳಗಿನಲ್ಲಿ ಸೈಕಲ್‌ ರಿಕ್ಷಾ ಹತ್ತಿ ಸ್ಕೂಲಿಗೆ ಹೋಗುತ್ತಿರುವ ಮಕ್ಕಳು

ಚಲಿಸುವ ಕಾರುಗಳು ನಿಜಾಮುದ್ದೀನ್ ಸರ್ಕಲ್ ಬರುತ್ತಲೂ ನಿಧಾನವಾಗುತ್ತ ಕಿಟಕಿಗಾಜು ಇಳಿದು ತಿಂದು ಸಾಕಾದ ಆಹಾರ ಪದಾರ್ಥದ ಪೊಟ್ಟಣಗಳು ಹೊರಗೆಸೆಯುವುದನ್ನೇ ಹಸಿದ ಕಣ್ಣುಗಳು ಕಾಯುತ್ತವೆ. ಹಸಿದ ಹೊಟ್ಟೆಗಳು ಕಚ್ಚಾಡಿ ತಿನ್ನುತ್ತವೆ. ಈ ನಡುಗುವ ಚಳಿಯಲ್ಲಿ ಒಣಗಿದ ಎಲೆಗಳು, ಕಸ ಕಡ್ಡಿ, ಕಾಗದ ಗುಡ್ದೆಹಾಕಿ ಬೆಂಕಿ ಕಾಯಿಸುವ, ಕಂಬಳಿ ಸುತ್ತಿಕೊಂಡು ಫ್ಲೈ ಓವರಿನ ಕಂಬಗಳಲ್ಲಿ, ಹಾಳುಬಿದ್ದ ಕಟ್ಟಡಗಳ ಮೂಲೆಯಲ್ಲಿ ಮುದುಡಿ ಕುಳಿತ ಪಾರಿವಾಳಗಳಂತೆ ಬೀಡುಬಿಟ್ಟ ಜೀವಗಳನ್ನು ನೋಡುವುದೆಂದರೆ ತೀರಾ ಹಿಂಸೆಯೆನಿಸುತ್ತದೆ.

ಸುಮಾರು 750 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೆಹಲಿಯ ಅಂತರಾಳಕ್ಕಿಳಿದು ನೋಡಿದಂತೆಲ್ಲ ದೆಹಲಿ ಎನ್ನುವುದು ಕುರುಕ್ಷೇತ್ರದಂತೆ ಕಾಣಿಸತೊಡಗುತ್ತದೆ. ‘ದಿಲ್ಲಿ ಎಂದೂ ಕರೆಯುವ ಡೆಲ್ಲಿ’ ಎಂಬ ಪ್ರಸಿದ್ಧ ಲೇಖನದಲ್ಲಿ ‘ಪ್ರಪಂಚದ ಅತ್ಯಂತ ಮೋಹಕ ಮತ್ತು ಕುತ್ಸಿತ ನಾಯಕಸಾನಿ ದಿಲ್ಲಿ’ ಎಂದಿದ್ದಾರೆ ಡಾ. ಲೋಹಿಯಾ. ದೆಹಲಿಯನ್ನು ಆಳಿದವರು ಆಕೆಯನ್ನು ಒಲಿಸಿಕೊಳ್ಳಲು ಹೋಗಲೇ ಇಲ್ಲ. ಮೇಲೆರಗಿ ಅನಾಗರಿಕವಾಗಿ ಹುರಿದುಮುಕ್ಕಿದವರೇ ಎಲ್ಲರೂ. ಅನಗತ್ಯವಾಗಿ ಆಕೆಯನ್ನು ಘಾಸಿಗೊಳಿಸಿ, ವಿರೂಪಗೊಳಿಸಿದವರೇ ಹೆಚ್ಚು ಎನ್ನುತ್ತಾರೆ. ದೆಹಲಿ ಎಂಬ ಮಹಾನಗರ ಜಾಗತಿಕ ಇತಿಹಾಸದ ಅತ್ಯಂತ ಹೃದಯಹೀನ ನಾಯಕಸಾನಿಯಾಗಲು, ಕಾರಣಗಳೇನೆಂದೂ ಅವರು ವಿವರಿಸುತ್ತಾ ಹೋಗುತ್ತಾರೆ. ಲೋಹಿಯಾ ಕಣ್ಣಿಂದ ಕಾಣುವ ದೆಹಲಿಗಿಂತಲೂ ಇಂದಿನ ದೆಹಲಿ ಹೊರಗೆ ಕಾಣುವುದಕ್ಕಿಂತ ಒಳಗೆ ಇನ್ನೂ ಭೀಕರವಾಗಿದೆ. ಇಲ್ಲಿ ಸುಖವಾಗಿರುವವರು ಬಿಳಿ ಕಾಲರಿನ ಐಶ್ವರ್ಯವಂತರು, ಗಣ್ಯಾತಿಗಣ್ಯರು, ರಾಜಕಾರಣಿಗಳು, ಅಧಮರು, ಲೂಟಿಕೋರರು! ಈ ಹೃದಯಹೀನ ನಾಯಕಸಾನಿಗೆ ಜನಸಾಮಾನ್ಯರು, ಬಡವರು ಮತ್ತು ನಿರ್ಗತಿಕರು ಯಾವ ಲೆಕ್ಕಕ್ಕೂ ಇಲ್ಲ!!

ದೆಹಲಿ 16 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, 2011ರ ಜನಗಣತಿಯ ಪ್ರಕಾರ ಭಾರತದ ಇತರ ನಗರಕ್ಕೆ ಹೋಲಿಸಿದರೆ ದೆಹಲಿಯಲ್ಲಿ 46,724 ಜನರು ನಿರಾಶ್ರಿತರಿದ್ದಾರೆ. ನೆಹರೂ ಪ್ಲೇಸಿನ ಎದುರು ಭೈರವ್ ಮಂದಿರ, ಕಾಲಕಾಜಿ ಮಂದಿರ, ಸರಾಯ್ ಕಾಲೇ ಖಾಂ ಫ್ಲೈಓವರ್, ಪುರಾನಾ ಕಿಲ್ಲಾದ ಭೈರವ ಮಂದಿರದ ಆವರಣ, ರೈಲ್ವೆ ನಿಲ್ದಾಣ, ನಿಜಾಮುದ್ದೀನ್ ದರ್ಗಾ ಎಲ್ಲೆಂದರಲ್ಲಿ ನಿರ್ಗತಿಕ ಬಯಲಜೀವಿಗಳ ಬದುಕು ಕಣ್ಣಿಗೆ ರಾಚುತ್ತದೆ. ಸೇತುವೆಗಳ ಅಡಿಯಲ್ಲಿ, ಅಂಡರ್‌ಪಾಸಿನ ಅಡಗುದಾಣಗಳು ಅಪರಾಧ ಮತ್ತು ಡ್ರಗ್ ಮಾಫಿಯಾದ ಅಡ್ಡಾಗಳಾಗಿದ್ದುದೂ ಆತಂಕಕಾರಿ ಸಂಗತಿಯೇ.

‘ಮನೆಯಿಲ್ಲದ, ಆಶ್ರಯಹೀನ ಮಹಿಳೆಯರ ಸಂಕಷ್ಟಗಳು ಇನ್ನೂ ದಾರುಣ. ಅಸುರಕ್ಷಿತ, ಅಭದ್ರ ಬದುಕು ನಾನಾ ರೀತಿಯ ದೌರ್ಜನ್ಯಗಳಿಗೆ ತುತ್ತಾಗಿಸುತ್ತದೆ. ಲೈಂಗಿಕ ಹಿಂಸೆ, ಶೋಷಣೆ ಮತ್ತು ಕಳ್ಳಸಾಗಣೆಗೆ ಗುರಿಯಾಗುತ್ತಾರೆ, ಶೆಲ್ಟರ್ ಹೋಮ್‌ಗಳಲ್ಲಿನ ಲಿಂಗತಾರತಮ್ಯ ಅನುಭವಿಸುವ ಮಹಿಳೆಯರು ಮಾನಸಿಕ ಕ್ಷೋಭೆಗೊಳಗಾಗುತ್ತಾರೆ’ ಎಂದು ದೆಹಲಿಯ ವಸತಿ ಮತ್ತು ಭೂ ಹಕ್ಕುಗಳ ನೆಟ್ವರ್ಕ್‌ನ ಶಿವಾನಿ ಚೌಧರಿ ಅಭಿಪ್ರಾಯಪಡುತ್ತಾರೆ.

ರಸ್ತೆಬದಿಯ ನಿವಾಸಿಗಳಿಗೆ ದೆಹಲಿಯ ಪ್ರಖರವಾದ ಬಿಸಿಲು, ಅತಿಯಾದ ಉಷ್ಣ ಮತ್ತು ಶೀತವನ್ನು ಸಹಿಸಿಕೊಂಡು ಬದುಕುವುದೇ ದೊಡ್ದ ಸವಾಲು. ಶೀತ ಲಹರಿಗೆ ಸಾಯುವವರ ಸಂಖ್ಯೆ ಹೆಚ್ಚು, ಪೊಲೀಸ್ ವರದಿಯ ಪ್ರಕಾರ ಪ್ರತಿವರ್ಷ 3,000ಕ್ಕಿಂತ ಹೆಚ್ಚು ಗುರುತಿಸಲಾಗದ ಅನಾಥ ಶವಗಳನ್ನು ಇಲಾಖೆ ಸಂಗ್ರಹಿಸುತ್ತದಂತೆ. ಮಳೆ ಬಿಸಿಲು ಚಳಿಗೆ ದೇಹವನ್ನೊಡ್ದಿಕೊಂಡು, ಪೌಷ್ಟಿಕ ಆಹಾರದ ಅಭಾವದಲ್ಲಿ ಜೀವಿಸುತ್ತಿರುವವರಲ್ಲಿ ಆರೋಗ್ಯ ಉತ್ತಮ ಮಟ್ಟದಲ್ಲಿರುವುದಿಲ್ಲ. ಅವರಲ್ಲಿ ರೋಗನಿರೋಧಕ ಶಕ್ತಿಯೂ ನಶಿಸಿರುತ್ತದೆ. ಈಗೀಗ ದೆಹಲಿ ಸರಕಾರ ಮತ್ತು ಕೆಲ ಎನ್‌ಜಿಓಗಳು ರಾತ್ರಿ ತಂಗುದಾಣಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿವೆ.

ಅನಾಥ ಜೀವಿಗಳ ದಾರುಣ ಸಾವುಗಳು ಸುಪ್ರೀಂ ಕೋರ್ಟಿನ ಅಂತರಂಗವನ್ನು ಕಲಕಿದ್ದವು. 2010ರಲ್ಲಿ ಸರ್ವೊಚ್ಚ ನ್ಯಾಯಾಲಯ ದೇಶದ ಎಲ್ಲಾ ಮಹಾನಗರಗಳು ಒಟ್ಟು ಜನಸಂಖ್ಯೆಯ ಶೇಕಡಾ 0.1 ರಷ್ಟು ಜನ ಸಮುದಾಯಕ್ಕೆ ವಸತಿಯನ್ನು ಕಲ್ಪಿಸಿಕೊಡಬೇಕು ಎಂದು ಆದೇಶಿಸಿತು. ಈ ನಿಟ್ಟಿನಲ್ಲಿ ದೆಹಲಿ 18,000ಕ್ಕಿಂತಲೂ ಹೆಚ್ಚಿನ ಆಶ್ರಯ ವ್ಯವಸ್ಥೆಯನ್ನು ಒದಗಿಸಿತು. ಆದರೆ ದಿನದಿಂದ ದಿನಕ್ಕೆ ನಿರಾಶ್ರಿತರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಲೇ ಇದ್ದು ಈಗ ಮನೆಯಿಲ್ಲದವರ ಸಂಖ್ಯೆ ಲಕ್ಷಕ್ಕೂ ಮೀರಿದೆಯೆಂದು ದೆಹಲಿಯ ನೀತಿ ಸಂಶೋಧನಾ ಸೆಂಟರಿನಲ್ಲಿ ನಿರಾಶ್ರಿತರ ಕುರಿತು ಸಂಶೋಧನೆ ನಡೆಸಿರುವ ಅಶ್ವಿನ್ ಪರುಲ್ಕರ್ ಅಭಿಪ್ರಾಯಪಡುತ್ತಾರೆ.

ಲೆಕ್ಕವಿಡದಷ್ಟು ಸಾಮಾಜಿಕ ಮತ್ತು ಕಲ್ಯಾಣ ಯೋಜನೆಗಳನ್ನು ಘೋಷಿಸುವ ಪ್ರಭುತ್ವ, ಈ ಮನೆಮಠವಿಲ್ಲದ ನಿರ್ಗತಿಕ ಸಮುದಾಯದತ್ತ ಗಮನ ಕೊಡದಿರುವುದು ಒಂದೇ ಒಂದು ನುಡಿಮುತ್ತನ್ನೂ ಉದುರಿಸದಿದ್ದುದು ಅಚ್ಚರಿಯೆನಿಸುತ್ತದೆ. ಎಲ್ಲಾ ರಾಜ್ಯ ಸರ್ಕಾರ ಮತ್ತು ಅವುಗಳ ಏಜೆನ್ಸಿಗಳಿಗೆ ನಿರಾಶ್ರಿತರಿಗೆ ಆಶ್ರಯ ನೀಡುವ ‘ರೆಹನ್ ಬಸೇರಾ’ಗಳನ್ನು ಒದಗಿಸುವ ಬಗ್ಗೆಯೂ ಇದುವರೆಗೂ ಒಂದೇ ಮಾತನ್ನೂ ಆಡಿಲ್ಲ. ಮಾರಿಷಸ್‍ನ ಒಟ್ಟು ಜನಸಂಖ್ಯೆಗಿಂತ ಹೆಚ್ಚು ನಿರಾಶ್ರಿತರು ಭಾರತದಲ್ಲಿದ್ದಾರೆ. ವಾಸ್ತವವಾಗಿ, ನೀವು ಭಾರತದ ಎಲ್ಲ ನಿರಾಶ್ರಿತ ಜನರನ್ನು ಒಟ್ಟುಗೂಡಿಸಿ ಹೊಸ ದೇಶದಲ್ಲಿ ಅವರನ್ನು ಒಟ್ಟುಗೂಡಿಸಿದರೆ, ಅದರ ಜನಸಂಖ್ಯೆಯು 83 ರಾಷ್ಟ್ರಗಳಿಗಿಂತ ದೊಡ್ಡದಾಗಿರುತ್ತದೆ ಎನ್ನುತ್ತದೆ ಒಂದು ಸಮೀಕ್ಷೆ.

ದೆಹಲಿ ಅರ್ಬನ್ ಆಶ್ರಯ ಸುಧಾರಣೆ ಮಂಡಳಿಯ (DUSIB) ವೆಬ್‌ಸೈಟಿನ ದೈನಂದಿನ ರಾತ್ರಿ ಆಶ್ರಯದ ವರದಿಯ ಪ್ರಕಾರ ರಾಜಧಾನಿಯಲ್ಲಿ ಸುಮಾರು 236 ರಾತ್ರಿ ಆಶ್ರಯಗಳಿವೆ. ಈ ವರ್ಷ ಕೇವಲ 183 ರಾತ್ರಿ ಆಶ್ರಯಗಳನ್ನು ಮಾತ್ರ ಸ್ಥಾಪಿಸಲಾಗಿದ್ದು. ಅವುಗಳಲ್ಲಿ 73 ಶಾಶ್ವತ ರಚನೆಗಳು; 109 ಪೋರ್ಟ್‌- ಕ್ಯಾಬಿನ್‌ಗಳು ಮತ್ತು ಒಂದು ಟೆಂಟ್ ಇದೆ. ಹೆಚ್ಚುವರಿಯಾಗಿ 3,000 ಜನರಿಗೆ ಅವಕಾಶ ಕಲ್ಪಿಸುವ ಒಂದು ಮತ್ತು 70 ತಾತ್ಕಾಲಿಕ ಆಶ್ರಯಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದೇ ನವೆಂಬರ್ 19ರಿಂದ ಎಲ್ಲ ಆಶ್ರಯದಾಣಗಳೂ ಉಚಿತವಾಗಿವೆ ಎಂದೂ DUSIB ಹೇಳಿದೆ.

ದೆಹಲಿ ಸರ್ಕಾರ 15,000 ಕ್ಕೂ ಹೆಚ್ಚು ನಿರಾಶ್ರಿತ ಜನರಿಗೆ ನಗರ ಮನೆಗಳನ್ನು ನಿರ್ಮಿಸಲು ಯೋಜಿಸಿದೆ. ನಗರ ಅಭಿವೃದ್ಧಿ ಇಲಾಖೆ ಬೀದಿಗಳಲ್ಲಿ ವಾಸಿಸುವವರಿಗೆ ಮನೆಗಳನ್ನು ನಿರ್ಮಿಸಲು ನೀತಿಯನ್ನು ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತಾಪದ ಪ್ರಕಾರ, ಸರ್ಕಾರವು ವ್ಯಕ್ತಿಗಳಿಗೆ ಸಾಮಾನ್ಯ ಅಡುಗೆಮನೆ ಮತ್ತು ಒಂದು ಕೋಣೆಯ ಸೌಕರ್ಯಗಳೊಂದಿಗೆ ಹಾಸ್ಟೆಲ್-ರೀತಿಯ ಸೌಲಭ್ಯವನ್ನು ನಿರ್ಮಿಸುತ್ತದೆಯಂತೆ. ಬೀದಿಗಳಲ್ಲಿ ಇರುವವರಿಗಾಗಿ ಬಿಡಿ ಕೊಠಡಿಗಳನ್ನು ಇರಿಸಿಕೊಳ್ಳಲು ಸರ್ಕಾರವು ಯೋಜಿಸುತ್ತಿದೆಯಂತೆ. ಇದೆಲ್ಲ ನಿಜಕ್ಕೂ ಸಂಭವಿಸುತ್ತದೋ ಇಲ್ಲವೋ ಕಾಲವೇ ಹೇಳಬೇಕು.


ಮಧ್ಯರಾತ್ರಿಯ ಹೊತ್ತಿಗೆ ಆಕಾಶದಿಂದ ಬಿಳಿ ತೆರೆಯಂಥ ಮಂಜು ಇಳಿಯತೊಡಗುತ್ತದೆ, ಚಳಿ ಕಾಯಿಸಿಕೊಳ್ಳಲು ಹೊತ್ತಿಸಿದ್ದ ಬೆಂಕಿಯೂ ನಿಧಾನಕ್ಕೆ ನಂದತೊಡಗುತ್ತದೆ. ದೊಡ್ದ ದೊಡ್ದ ಮಹಲುಗಳ ಕಿಟಕಿಗಳನ್ನು ಗಾಳಿ ಸುಳಿಯದಂತೆ ಬಿಗಿಯಾಗಿ ಮುಚ್ಚಿ, ಬಾಗಿಲಿಗೂ ಅಗುಳಿ ಹಾಕಿ, ಕನಸಿನ ತಲೆದಿಂಬಿನ ಮೇಲೆ ಕನಸುಗಳ ಚುಕ್ಕಿಯಿಟ್ಟು ಬೆಚ್ಚಗಿನ ಲೋಕದಲ್ಲಿ ದೆಹಲಿಯ ಜನರು ಸುಖನಿದ್ರೆಯಲ್ಲಿರುವಾಗ ನಿರ್ಜನ ಬೀದಿಗಳಲ್ಲಿ ಮಂಜು ಮುಸುಕಿದ ಚಳಿಯಲ್ಲಿ ಮುದುಡಿ ಮಲಗಿದ ಜೀವಗಳು ಬೆಚ್ಚಗಿನ ಹಗಲು ಇನ್ನೆಷ್ಟು ತಾಸಿಗೋ ಎಂದು ಬೆಳಕುಹರಿವುದನ್ನೇ ಕಾಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT