ಶನಿವಾರ, ನವೆಂಬರ್ 23, 2019
18 °C

ದ್ಯಾಮವ್ವ, ದುರ್ಗೆ: ಹುಬ್ಬಳ್ಳಿ ಕ್ಷೇತ್ರಾಧಿದೇವತೆಯರು

Published:
Updated:
Prajavani

ಹಳೇ ಹುಬ್ಬಳ್ಳಿ, ಕೃಷ್ಣಾಪೂರ, ಅಯೋಧ್ಯಾ ನಗರ, ಮರಿಯನ ತಿಮ್ಮಸಾಗರ ಭಾಗಗಳ ಜನರು ನಡೆದುಕೊಳ್ಳುವ ಗ್ರಾಮದೇವಿಯ ದೇವಸ್ಥಾನ ಹಳೇ ಹುಬ್ಬಳ್ಳಿಯ ಕಿಲ್ಲೆಯಲ್ಲಿ ಇದೆ. ಇಲ್ಲಿ ಮಹಾಲಕ್ಷ್ಮಿ ಸ್ವರೂಪಿಣಿಯಾದ ದ್ಯಾಮವ್ವ ಮತ್ತು ಮಹಾಸರಸ್ವತಿ ಸ್ವರೂಪಿಣಿ ದುರ್ಗೆ ನೆಲೆಸಿದ್ದಾರೆ. ಇವರಿಬ್ಬರೂ ಕ್ಷೇತ್ರಾಧಿದೇವತೆಯರು ಎಂದೇ ಪರಿಗಣಿತರಾಗಿದ್ದಾರೆ.

‘ಈ ದೇವಸ್ಥಾನಕ್ಕೆ ಕನಿಷ್ಠ 350–400 ವರ್ಷಗಳ ಐತಿಹ್ಯವಿದೆ’ ಎನ್ನುತ್ತಾರೆ ಪೂಜಾರಿ ಈರಣ್ಣ ಬಡಿಗೇರ. ಶತಮಾನದಿಂದಲೂ ವಿಶ್ವಕರ್ಮ ಸಮುದಾಯದ ಈ ಬಡಿಗೇರ ಮನೆತನದವರೇ ದೇವಿಯ ಪೂಜೆ ನಡೆಸಿಕೊಂಡು ಬಂದಿದ್ದಾರೆ. ಪೇಶ್ವೆಗಳ ದರ್ಬಾರ ಇದ್ದ ಕಾಲದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

‘ಧರ್ಮದ ಭೇದವಿಲ್ಲದೆ ಎಲ್ಲ ಭಕ್ತರೂ ಈ ದೇವಿಯನ್ನು ಆರಾಧಿಸುತ್ತಾರೆ’ ಎಂದು ಇಲ್ಲಿನ ಭಕ್ತ ಮೋಹನ ಕುಲಕರ್ಣಿ ಹೇಳುತ್ತಾರೆ.

ಗರ್ಭ ಗುಡಿಯಲ್ಲಿ ದ್ಯಾಮವ್ವ ಮತ್ತು ದುರ್ಗೆಯರು ಸಿಂಹಾರೂಢರಾಗಿದ್ದಾರೆ. ಇವೆರಡೂ ಸುಮಾರು ಆರು ಅಡಿ ಎತ್ತರದ ಕಾಷ್ಠ ಮೂರ್ತಿಗಳಾಗಿವೆ. ಕಪ್ಪು ಮಿಶ್ರಿತ ಕೆಂಪುವರ್ಣದ ದ್ಯಾಮವ್ವನ ಮೂರ್ತಿಗೆ ದಶ ಭುಜಗಳಿವೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರವನ್ನು ಚಿತ್ರಿಸಲಾಗಿದೆ. ಹನ್ನೆರಡು ಭುಜಗಳುಳ್ಳ ದುರ್ಗೆಯ ಮೂರ್ತಿಗೆ ಹಸಿರು ಬಣ್ಣ ಲೇಪನ ಮಾಡಲಾಗಿದೆ. ಇದರ ಪ್ರಭಾವಳಿಯಲ್ಲಿ ಅಷ್ಟ ದಿಕ್ಪಾಲಕರನ್ನು ಚಿತ್ರಿಸಲಾಗಿದೆ.

ಎರಡು ಮೂರು ದಶಕಗಳಿಗೊಮ್ಮೆ ದೇವಿಯರ ಮೂರ್ತಿಗಳಿಗೆ ಹೊಸದಾಗಿ ಬಣ್ಣ ಬಳಿದು ಮರು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕೊನೆಯದಾಗಿ 2004ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿ, ಮಾಘ ಕೃಷ್ಣಪಕ್ಷ ಪಂಚಮಿಯಂದು ದೇವಿಯರ ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಈ ವೇಳೆ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಕೂಡ ನೆರವು ನೀಡಿದೆ.

ನವೀಕರಣದ ವೇಳೆ ಟೈಲ್ಸ್ ಬಳಸಲಾಗಿದೆ ಮತ್ತು ಸಿಮೆಂಟ್ ಚಾವಣಿ ನಿರ್ಮಿಸಲಾಗಿದ್ದರೂ, ಹೊರಗಿನ ಎರಡು ಅಂಕಣಗಳ ಕಟ್ಟಿಗೆಯ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಪೂಜೆ ವಿವರಗಳು
ದೇವಿಯರಿಗೆ ನಿತ್ಯ ಪೂಜೆ, ಅಭಿಷೇಕ, ರಾತ್ರಿ ಮಂಗಳಾರತಿ ನಡೆಯುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯಂದು ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಆಷಾಢ ಮಾಸದ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಭಕ್ತರು ಡೊಳ್ಳಿನ ಮಜಲಿನೊಂದಿಗೆ ಬಂದು ದೇವಿಯರಿಗೆ ಉಡಿ ತುಂಬಿ, ಉತ್ತಮ ಫಸಲು, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಶರನ್ನವರಾತ್ರಿಯಲ್ಲಿ ಘಟ ಸ್ಥಾಪನೆ ಮಾಡಿ, ಹತ್ತು ದಿನ ದೇವಿ ಮಹಾತ್ಮೆ ಪಾರಾಯಣ ಮಾಡಲಾಗುತ್ತದೆ. ಯುಗಾದಿ ಹಬ್ಬದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಗೆ ಉಡಿ ತುಂಬುತ್ತಾರೆ. ಮಾಘ ಮಾಸ ಕೃಷ್ಣ ಪಕ್ಷ ಪಂಚಮಿಯಂದು ಚಂಡಿ ಹವನ ಹಾಗೂ ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ ಮಾಡಲಾಗುತ್ತದೆ. ಪ್ರತಿ ವರ್ಷವೂ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಆಚರಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)