ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋತಿ ಸ್ಕರ್ಟ್‌ ಮೇಲೊಂದು ಶ್ರಗ್

Last Updated 23 ಜನವರಿ 2019, 19:45 IST
ಅಕ್ಷರ ಗಾತ್ರ

ಧೋತಿ ಅಥವಾ ಕಚ್ಚೆ ಫ್ಯಾಷನ್‌ ಜಗತ್ತಿನಲ್ಲಿ ರೂಪಾಂತರವಾಗುತ್ತಲೇ ಇದೆ. ಮೂಲ ಸ್ವರೂಪದಿಂದ ಹಿಡಿದು ಸೀರೆಯವರೆಗೂ ಧೋತಿಯ ಟ್ರೆಂಡ್‌ ವಿಸ್ತರಿಸಿಕೊಂಡಿದ್ದನ್ನು ಕಂಡಿದ್ದೇವೆ. ಈಗ ಧೋತಿಗೆ ಸ್ಕರ್ಟ್‌ ರೂಪ ನೀಡಲಾಗಿದೆ.‌ಕೆಲದಿನಗಳ ಹಿಂದೆ ಮುಂಬೈನಲ್ಲಿ ನಡೆದ ‘ಲಯನ್ ಗೋಲ್ಡ್‌ ಅವಾರ್ಡ್ಸ್‌ 2019’ರಲ್ಲಿ ಹಿಂದಿಯ ಕಿರುತೆರೆ ನಟಿ ಜೆನಿಫರ್‌ ವಿಂಗೆಟ್‌ ಧೋತಿ ಸ್ಕರ್ಟ್‌ ಧರಿಸಿ ಎಲ್ಲರ ಗಮನ ಸೆಳೆದರು.

ಫ್ಯಾಷನ್‌, ಟ್ರೆಂಡ್‌ ವಿಚಾರದಲ್ಲಿಹಿಂದಿಯ ಕಿರುತೆರೆ ನಟಿಯರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜೆನಿಫರ್‌ ಕೂಡಾ ಉಡುಗೆ ತೊಡುಗೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಆ ಪ್ರಯೋಗಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿ ತಮ್ಮ ಅಭಿಮಾನಿಗಳ ಮೆಚ್ಚುಗೆಯನ್ನೂ ಗಳಿಸುತ್ತಾರೆ. ಇವೆರಡೂ ಜೆನಿಫರ್‌ಗೆ ಅಚ್ಚುಮೆಚ್ಚಿನ ಹವ್ಯಾಸ. ಜೆನಿಫರ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ಅಭಿಮಾನಿಗಳ ಸಂಖ್ಯೆ 70 ಲಕ್ಷಕ್ಕೂ ಅಧಿಕ! ಧೋತಿ ಸ್ಕರ್ಟ್‌ ಫೋಟೊ ಕೂಡಾ ಜೆನಿಫರ್‌ ಅವರ ಅಭಿಮಾನಿಗಳ ದಿಲ್‌ ಖುಷ್‌ ಮಾಡಿದೆ.

ಹೀಗೆ, ಧೋತಿ ಸ್ಕರ್ಟ್‌ ಫ್ಯಾಷನ್‌ಗೆ ದೊಡ್ಡ ವೇದಿಕೆಯೊಂದರಲ್ಲಿ ಹೊಸ ಸ್ಪರ್ಶ ನೀಡಿದ ಹೆಗ್ಗಳಿಕೆ ಜೆನಿಫರ್‌ಗೆ ಸಲ್ಲಬೇಕು. ಯಾಕೆಂದರೆ, ಆ ಸ್ಕರ್ಟ್‌ ಇನ್ನಷ್ಟು ಮೆರುಗು ಪಡೆದುದು ಅವರು ಧರಿಸಿದ್ದ ಉದ್ದದ ಶ್ರಗ್‌ನಿಂದ. ಜೆನಿಫರ್‌ ಅವರ ಈ ಉಡುಗೆ ಹೊಸದೊಂದು ಸ್ಟೈಲ್‌ ಸ್ಟೇಟ್‌ಮೆಂಟ್‌ ಕೊಟ್ಟಿತು.

ತಿಳಿ ನೇರಳೆ ಮತ್ತು ತಿಳಿಗುಲಾಬಿ ಬಣ್ಣಗಳ ಸಮಪಾಕದಂತಹ ಬಣ್ಣಕ್ಕೆ ಅದೇ ಎರಡು ಬಣ್ಣಗಳ ಗಾಢ ಛಾಯೆಯ ಚಿಕ್‌ ವಿನ್ಯಾಸವುಳ್ಳ ಸ್ಕರ್ಟ್‌ ಮತ್ತು ಶ್ರಗ್‌ ಅದಾಗಿತ್ತು. ಸ್ಟೈಲಿಸ್ಟ್‌ ಕರೀನ್‌ ಪರ್ವಾನ್‌ಅವರ ಕೈಚಳಕದಲ್ಲಿ ಜೆನಿಫರ್‌ ಗೆಟಪ್‌ ಮೂಡಿಬಂದಿತ್ತು.

ಉಡುಗೆಗೆ ಜೋಡಿ ಏನು?

ಧೋತಿ ಸ್ಕರ್ಟ್‌ ಮತ್ತು ಉದ್ದನೆಯ ಶ್ರಗ್‌ ಕೋಟ್‌ ಧರಿಸಿದಾಗ ಒಟ್ಟಾರೆ ನೋಟ ಹೇಗಿರಬೇಕು ಎಂಬುದನ್ನೂ ಜೆನಿಫರ್‌ ತೋರಿಸಿಕೊಟ್ಟಿದ್ದರು. ಸ್ಕರ್ಟ್‌, ಟಾಪ್ ಮತ್ತು ಶ್ರಗ್‌ ಒಂದೇ ಫ್ಯಾಬ್ರಿಕ್‌ನಿಂದ ವಿನ್ಯಾಸ ಮಾಡಿದ್ದುದು ಮತ್ತೊಂದು ಗಮನಾರ್ಹ ಅಂಶ. ಉದ್ದನೆಯ ಡ್ಯಾಂಗ್ಲರ್‌ ಕಿವಿಯೋಲೆ,ಬಂಗಾರದ ಬಣ್ಣದ ಹೈಹೀಲ್ಡ್‌ ಚಪ್ಪಲಿ ಈ ಉಡುಗೆಗೆ ಹೇಳಿಮಾಡಿಸಿದಂತಿತ್ತು.ನಾವು ವಿಭಿನ್ನ ಶೈಲಿಯ ಉಡುಗೆ ತೊಡುಗೆ ಧರಿಸಿದಾಗ ಕೇಶ ಶೈಲಿಯೂ ಒಪ್ಪುವಂತಿರಬೇಕು. ಜೆನಿಫರ್‌ ಕೇಶಶೈಲಿ ಅಂದು ಬನ್‌ ಮಾದರಿಯಲ್ಲಿತ್ತು. ಹೇರ್‌ ಸ್ಟೈಲಿಸ್ಟ್‌ ಶಾರದಾ ಜಾಧವ್‌ ಹಾಕಿದ ಬನ್‌ ಅದಾಗಿತ್ತು. ‌

ಕತ್ತಿನಿಂದ ಕಾಲಿನವರೆಗೂ ದೇಹವನ್ನು ಪೂರ್ತಿಯಾಗಿ ಮುಚ್ಚಿಕೊಂಡ ಉಡುಪು ಧರಿಸಿದಾಗ ಕೂದಲು ಇಳಿಬಿಡುವುದಕ್ಕಿಂತ ಬನ್‌ ಹಾಕುವುದೇ ಸೂಕ್ತ. ಹೇರ್ ಸೆಟ್ಟರ್‌ ಹಾಕಿ ಒಪ್ಪವಾಗಿ ಜೋಡಿಸಿದ ಒಂದೆಳೆ ಕೂದಲನ್ನು ಎರಡೂ ಕಿವಿಗಳ ಬಳಿ ಕತ್ತಿನವರೆಗೂ ಇಳಿಬಿಟ್ಟ ಕಾರಣ ಜೆನಿಫರ್‌ನ ಲುಕ್‌ ವಿಶಿಷ್ಟವಾಗಿತ್ತು.

ಕಣ್ಣುಗಳ ಮೇಕಪ್‌ ಕೂಡಾ ಟ್ರೆಂಡ್‌ ಸೃಷ್ಟಿಸುತ್ತಿದೆ. ತಿಳಿನೇರಳೆ ಬಣ್ಣದ ಉಡುಗೆ ತೊಡುಗೆಗೆ ಸ್ಮೋಕಿ ಐ ಸೂಕ್ತವಾಗಿರುತ್ತದೆ. ಈ ಸೂತ್ರವನ್ನು ಜೆನಿಫರ್‌ ಅವರ ಗೆಟಪ್‌ನಲ್ಲೂ ಕಾಣಬಹುದಾಗಿತ್ತು. ತುಟಿಗೆ ನ್ಯೂಡ್‌ ಲಿಪ್‌ಸ್ಟಿಕ್‌ ಬಳಸಲಾಗಿತ್ತು. ತೀರಾ ಸರಳವಾದ ಮೇಕಪ್‌ನಿಂದಾಗಿ, ಯಾವುದೇ ಪ್ರಸಾಧನ ಬಳಸದ ಸಹಜ ಸುಂದರಿಯಂತೆ ಜೆನಿಫರ್‌ ಕಾಣಿಸುತ್ತಿದ್ದರು.

ಧೋತಿ ಸ್ಕರ್ಟ್‌ ಮತ್ತು ಶ್ರಗ್‌ನ ಜೋಡಿ ಉಡುಗೆ ಧರಿಸಿದಾಗ ಒಟ್ಟಾರೆ ನೋಟ ಹೇಗಿರಬೇಕು ಎಂಬುದಕ್ಕೆ ಜೆನಿಫರ್ ಗೆಟಪ್‌ ಮಾದರಿ. ಹಾಗಿದ್ದರೆ, ಮುಂದಿನ ಬಾರಿ ನೀವು ಈ ಜೋಡಿ ಉಡುಗೆಯನ್ನು ಆರಿಸಿಕೊಂಡಾಗ ಅದೇ ಮಾದರಿ ಅನುಸರಿಸಬಹುದೆನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT