ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಬೆಳಕು | ವಿಪತ್ತು ನಿರ್ವಹಣೆ ಕೌಶಲ ಅರಿಯಿರಿ

Last Updated 20 ಸೆಪ್ಟೆಂಬರ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರಿನ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿತು. ಅರ್ಧ ಗಂಟೆಯಲ್ಲಿ ಬೆಂಕಿಯನ್ನು ನಂದಿಸಲಾಯಿತು. ಜನರಿಗೆ ಏನೂ ತೊಂದರೆಯಾಗಿಲ್ಲ. ಈ ಘಟನೆ ಕುರಿತು ವರದಿಯಾಗಿರುವ ಎರಡು ಪ್ರಮುಖ ವಿಷಯಗಳ ಬಗ್ಗೆ ಚಿಂತಿಸಬೇಕಾಗಿದ್ದು ಅಗತ್ಯ.

ಆ ಕಟ್ಟಡದಲ್ಲಿ ಅದೆಷ್ಟೊ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅವರಲ್ಲಿ ಅನೇಕರು ಗಾಬರಿಗೊಂಡಿದ್ದಾರೆ. ಕೆಲವರು ಅತ್ತು ಬಿಟ್ಟಿದ್ದಾರೆ. ಅವರೆಲ್ಲ ನವತಾರುಣ್ಯದಲ್ಲಿ ಇರುವವರು. ಚುರುಕಾಗಿ ಪ್ರತಿಕ್ರಿಯಿಸಬೇಕಾದವರು. ದೈಹಿಕವಾಗಿ, ಬೌದ್ಧಿಕವಾಗಿ ಕ್ಷಿಪ್ರವಾಗಿ ಸ್ಪಂದಿಸಬಲ್ಲ ಚೈತನ್ಯ ಹೊಂದಿರಬೇಕಾದವರು. ಆದರೆ, ಅವರಲ್ಲಿ ಅನೇಕರು ಗಾಬರಿ ಮತ್ತು ಅಳುವಿನಿಂದ ಏನೂ ಮಾಡಲು ತೋಚದೆ ಉಳಿದುಕೊಂಡರು.

ಎರಡನೇಯದು ಬ್ಯಾಂಕಿನಲ್ಲಿ ಬೆಂಕಿ ಆರಿಸುವ ಉಪಕರಣಗಳಿದ್ದವು. ಆದರೆ, ಅವನ್ನು ಉಪಯೋಗಿಸುವ ರೀತಿ ಸಿಬ್ಬಂದಿಗೆ ಗೊತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅದನ್ನು ಬಳಸುವ ತರಬೇತಿ ಆಗಿರಬೇಕು ಎನ್ನುವುದು ನಿಯಮ. ಹಾಗಿದ್ದರೆ, ಇವರಿಗೆ ತರಬೇತಿ ಆಗಿರಲಿಲ್ಲವೇ, ಅಥವಾ ತರಬೇತಿ ಆಗಿದ್ದಂತೆ ತೋರಿಸಿದ್ದರಾ? ಇಷ್ಟಕ್ಕೂ ಉಪಕರಣದ ಮೇಲೆ ಅದನ್ನು ಬಳಸುವ ರೀತಿ ಕುರಿತು ಸಚಿತ್ರ ವಿವರಣೆ ಇದೆ. ಪ್ರಯತ್ನಿಸಬಹುದಿತ್ತು.

ನನ್ನ ಸ್ನೆಹಿತರ ಮಗಳೊಬ್ಬಳು ಸಂಪಿನಲ್ಲಿ ಬಿದ್ದುಬಿಟ್ಟಳು. ಸಮೀಪದಲ್ಲಿಯೇ ಇದ್ದ ಅವಳ ಏಳು ವರ್ಷದ ಅಣ್ಣ ಕೂಡಲೇ ಅವಳಿಗೆ ಸಾಂತ್ವನ ಹೇಳಿಕೊಂಡು, ಅವಳಿಗೆ ಎಟುಕಿಸುವಂತೆ ಕೈ ಕೊಟ್ಟು ಮೇಲೆ ಬರಲು ನೆರವಾದ. ಅವನ ಸಮಯಪ್ರಜ್ಞೆ ತೋರಿಸದಿದ್ದರೆ, ಅವಳು ಮುಳುಗಿ ಸಾವನ್ನಪ್ಪಬೇಕಿತ್ತು.

ನವತಾರುಣ್ಯದಲ್ಲಿ ಇರುವವರು ವಿಪತ್ತಿನ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅರಿತಿರಬೇಕು. ಬಹಳ ಮುಖ್ಯವಾಗಿ ಗಾಬರಿಯಾಗಬಾರದು. ಭಯ ಚಿಂತನಾಶಕ್ತಿಯನ್ನು ಉಡುಗಿಸಿ ಬಿಡುತ್ತದೆ. ಯಾವ ಯಾವ ವಿಪತ್ತು ಬಂದಾಗ ಯಾವ ರೀತಿಯ ಉಪಾಯಗಳು ಬೇಕಾಗುತ್ತವೆ ಎನ್ನುವುದನ್ನು ಅರಿತಿರಬೇಕು. ಬೆಂಕಿ ಅಪಘಾತದಲ್ಲಿ ಸಹ ವಿದ್ಯುತ್ ಸಂಬಂಧಿತ ಬೆಂಕಿ ಅವಘಡದಲ್ಲಿ ಏನು ಮಾಡಬೇಕು, ರಾಸಾಯನಿಕಗಳಿಂದ ಆಗುವ ಬೆಂಕಿಯನ್ನು ಹೇಗೆ ನಂದಿಸಬೇಕು ಎಂಬುದಕ್ಕೆ ಪ್ರತ್ಯೇಕ ನಿಯಮಗಳಿವೆ.ಪ್ರಥಮ ಚಿಕಿತ್ಸೆ ಕೊಡುವ ಕನಿಷ್ಠ ತಿಳುವಳಿಕೆ ಎಲ್ಲರಿಗೂ ಇರಬೇಕು.

ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಜ್ಞಾನವನ್ನು ನೀವು ಪಡೆಯಬೇಕಾದುದು ಅಗತ್ಯ. ಪಠ್ಯದಲ್ಲಿ ಇವನ್ನು ಅಳವಡಿಸಿಲ್ಲ. ಆದರೆ ಮಾಹಿತಿಗೆ ಆಕರಗಳಿವೆ. ಅವನ್ನು ಬಳಸಿಕೊಂಡು ಎಂತಹ ವಿಪತ್ತು ಸಂಬಂಧಿಸಿದಾಗ ನೀವು ಏನು ಮಾಡಬಹುದು ಎಂದು ಕಲಿತುಕೊಂಡಿರಿ.

ವಿದ್ಯಾರ್ಥಿಗಳಿಗೆ ಕೆಲವು ದೇಶಗಳಲ್ಲಿ ಸರ್ವೈವಲ್ ಟೆಸ್ಟ್ ಮಾಡುವರು. ಅದರಲ್ಲಿ ಇಂತಹ ತರಬೇತಿಗಳನ್ನು ಕೊಡಲಾಗಿರುತ್ತದೆ. ವಿಪತ್ತು ಬಂದಾಗ ಗಾಬರಿಗೊಳ್ಳುವುದು ಆಪತ್ತನ್ನು ಹೆಚ್ಚಿಸುತ್ತದೆ. ಬುದ್ಧಿಯ ಬಳಕೆಯ ಪರಿಹಾರವನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT