ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜತೆಯಾಗಿದ್ದೂ ದೂರ ಇರುವವರು!

ಲಿವಿಂಗ್‌ ಟುಗೆದರ್‌ ಅಪಾರ್ಟ್
Last Updated 5 ಜನವರಿ 2019, 20:00 IST
ಅಕ್ಷರ ಗಾತ್ರ

ಓದು ಮುಗಿಸಿ, ಕೈತುಂಬಾ ಸಂಬಳ; ಏರುಯೌವನದಲ್ಲಿ ಸಹೋದ್ಯೋಗಿಯೊಂದಿಗೆ ಪ್ರೇಮ. ವೀಕೆಂಡಿನಲ್ಲಿ ಊಟ, ಆಫೀಸಿನಲ್ಲಿ ಕಳ್ಳ ನೋಟ, ತಿಂಗಳಿಗೊಂದು ಪುಟ್ಟ ತಿರುಗಾಟ ಎಲ್ಲವೂ ಕನಸಿನಂತೆ. ಎಲ್ಲರೂ ಒಪ್ಪಿ ಮದುವೆಯಾಗಿ ತಮ್ಮದೇ ಮನೆಗೆ ಬಂದಾಗ ಮೊದಲಿಗೆ ರಾಜ-ರಾಣಿಯರ ಸಂಭ್ರಮ.

ನಿಧಾನವಾಗಿ ಅಡುಗೆ, ಪಾತ್ರೆ, ಬಟ್ಟೆ, ಗ್ಯಾಸ್, ಬಿಲ್ಲು, ಬ್ಯಾಂಕು, ಆಫೀಸುಗಳಲ್ಲಿ ಮೈ-ಮನಕ್ಕೆ ದಣಿವು. ಅವಳಿಗೆ ಆತನ ನಿರ್ಲಕ್ಷ್ಯದ ಬಗ್ಗೆ ಅಸಹನೆಯಾದರೆ ಅವನಿಗೆ ಅವಳ ಅತೀ ಸ್ವಚ್ಛತೆ ಬಗ್ಗೆ ಸಿಟ್ಟು. ಪ್ರೀತಿಸಿ ಮದುವೆಯಾದರೂ ಯಾಕೋ ಐಡೆಂಟಿಟಿ ಕಳೆದುಕೊಂಡೆವು ಎಂಬ ಬಗ್ಗೆ ಇಬ್ಬರಿಗೂ ಬೇಸರ. ಜೀವನವೆಂದರೆ ಯಂತ್ರದಂತೆ ಸಾಗುವ ಏಕತಾನತೆ. ಹಾಗಿದ್ದೂ ಇಬ್ಬರಿಗೂ ಮದುವೆ ಮುರಿಯುವ ಮನಸ್ಸಿಲ್ಲ. ಒಂದೇ ಸೂರಿನಡಿಯಲ್ಲಿ ಇರಲೂ ಸಾಧ್ಯವಿಲ್ಲ. ಏನಿದೆ ಪರಿಹಾರ?

ಪತಿ-ಪತ್ನಿ ಇಬ್ಬರೂ ಕಷ್ಟಪಟ್ಟು ಓದಿದವರು, ತಕ್ಕದಾಗಿ ಒಳ್ಳೆಯ ಉದ್ಯೋಗವೂ ಸಿಕ್ಕಿದೆ. ಈಗ ಪತಿಗೆ ದೂರದ ನಗರದಲ್ಲಿ ಪ್ರಮೋಷನ್‌ ದೊರೆತಿದೆ. ಪತ್ನಿಗೆ ಖುಷಿಯಾದರೂ ಆಕೆಗೆ ಅಲ್ಲಿ ಒಳ್ಳೆಯ ಅವಕಾಶವಿಲ್ಲ. ವೃತ್ತಿ ಬದುಕನ್ನು ಬಿಡಲೂ ಕಷ್ಟ, ಹಾಗಂತ ಕುಟುಂಬ ಬೇಡ ಎಂದಲ್ಲ. ಮಾಡುವುದೇನು?

ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯತೆ ಕಂಡು ಭಾರತದ ಮಹಾನಗರಿಗಳಲ್ಲೂ ಕಂಡು ಬರುತ್ತಿರುವ ಹೊಸ ಟ್ರೆಂಡ್‌ ಲಿವಿಂಗ್‌ ಟುಗೆದರ್‌ ಅಪಾರ್ಟ್! ಗಂಡು-ಹೆಣ್ಣು ಅಧಿಕೃತವಾಗಿ ಒಟ್ಟಿಗೆ ವಾಸಿಸಲು ಸಮಾಜ ನೀಡಿದ ಮದುವೆ ಎಂಬ ಒಪ್ಪಿಗೆಯ ಮೊದಲೇ ಒಟ್ಟಿಗೇ ಬದುಕಿ, ಸಾಂಗತ್ಯ ಅನುಭವಿಸುವ ಲಿವ್- ಇನ್ ಸಂಬಂಧಕ್ಕೆ ಭಿನ್ನವಾದ ಮಾರ್ಗವಿದು. ಅಂದರೆ ಮದುವೆಯಾಗಿದ್ದೂ ತಮ್ಮ ಭಾವನೆ, ಬದುಕನ್ನು, ಅಸ್ತಿತ್ವವನ್ನು ಸ್ವತಂತ್ರವಾಗಿ ಉಳಿಸಿಕೊಳ್ಳುವ ವಿಧಾನ ಎನ್ನಲಾಗುತ್ತದೆ.

ಮದುವೆ ಎಂಬ ವ್ಯವಸ್ಥೆಯೇ ಭಿನ್ನ ಹಿನ್ನೆಲೆಯ ಕುಟುಂಬಗಳಿಂದ ಇಬ್ಬರು ವ್ಯಕ್ತಿಗಳು ಪರಸ್ಪರ ಕೂಡಿ, ಗೌರವಿಸಿ, ಹೊಂದಿಕೊಂಡು ಬಾಳುವ ತಳಹದಿಯ ಮೇಲೆ ರೂಪಿತವಾಗಿದೆ. ಹೀಗಿರುವಾಗ ಈ ಸಂಬಂಧ ವಿಚಿತ್ರವೆನಿಸಿದರೂ ದಂಪತಿಯ ಅನುಕೂಲ ಮತ್ತು ಅನಿವಾರ್ಯತೆ ಮುಖ್ಯ ಕಾರಣಗಳಾಗಿವೆ. ಈ ಹಿಂದೆ ಪುರುಷ ಪ್ರಧಾನ ಸಮಾಜದಲ್ಲಿ ಮದುವೆಯ ನಂತರ ಪತಿಯ ವೃತ್ತಿ- ಅನುಕೂಲವನ್ನು ಅನುಸರಿಸಿ ಅದರಂತೆ ನಡೆಯುವುದು ಪತ್ನಿಯ ಸಹಜ ಕರ್ತವ್ಯವಾಗಿತ್ತು.

ಹೊರಗಿನ ವ್ಯವಹಾರಗಳ ಬಗ್ಗೆ ಅಜ್ಞಾನ,ಆರ್ಥಿಕ ಅವಲಂಬನೆ, ಮತ್ತು ಸಮಾಜದ ರೀತಿಗೆ ಬದ್ಧವಾಗಿ ಪತ್ನಿ, ಪತಿಯನ್ನು ಅನುಸರಿಸಲೇಬೇಕಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಹಿಳೆಯ ಶಿಕ್ಷಣದ ಮಟ್ಟ ಹೆಚ್ಚಿದೆ, ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ, ಅಡಿಗೆ ಮನೆಯಷ್ಟೇ ಅಲ್ಲ ಹೊರಗಿನ ಎಲ್ಲಾ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಪತ್ನಿ, ತಾಯಿ, ಉದ್ಯೋಗಸ್ಥ ಮಹಿಳೆ ಹೀಗೆ ಬಹುಪಾತ್ರ ನಿರ್ವಹಣೆಯನ್ನು ಆತ್ಮವಿಶ್ವಾಸದಿಂದ ಮಾಡುತ್ತಿದ್ದಾರೆ.

ಹೀಗಿರುವಾಗ ಒಂದು ಕಡೆ ನೆಲೆಯಾದ ಉದ್ಯೋಗಸ್ಥ ಮಹಿಳೆಯನ್ನು ಏಕಾಏಕಿ ಎಲ್ಲವನ್ನೂ ಬಿಟ್ಟು ಹೊರಡು ಎನ್ನುವುದು ಸುಲಭವಲ್ಲ. ಅತ್ಯಂತ ಸ್ಪರ್ಧಾತ್ಮಕವಾದ ದಿನಗಳಲ್ಲಿ ಅವಕಾಶಗಳನ್ನು ಬಿಟ್ಟರೆ ಮತ್ತೆ ಸಿಗುವುದೂ ಕಷ್ಟವೇ! ಹೀಗಾಗಿ ಬೇರೆ ಬೇರೆ ಊರುಗಳಲ್ಲಿ ಇದ್ದು ಸಂಸಾರ ನಡೆಸುವುದು ಅನುಕೂಲಕರ. ಹಿಂದಿನಿಂದಲೂ ಇದು ಕೆಲವು ಕುಟುಂಬಗಳಲ್ಲಿ ಅನಿವಾರ್ಯತೆಗೆ ಕಂಡುಬರುತ್ತಿತ್ತಾದರೂ ಈಗೀಗ ಉದ್ಯೋಗ, ಉನ್ನತ ಶಿಕ್ಷಣ, ಮಕ್ಕಳ ಜವಾಬ್ದಾರಿ ಹೀಗೆ ಅನೇಕ ಕಾರಣಗಳಿಗೆ ವೈಯಕ್ತಿಕ ಆಯ್ಕೆಯಾಗಿ ಬೇರೆ ಬೇರೆಯಾಗಿ ಇರುವವರ ಸಂಖ್ಯೆ ಹೆಚ್ಚುತ್ತಿದೆ.

ಆಗಾಗ್ಗೆ ಭೇಟಿ, ಮಕ್ಕಳ ಜತೆ ಒಂದಿಷ್ಟು ಸಮಯ ಕಳೆದು, ಮತ್ತೆ ತಮ್ಮ ತಮ್ಮ ನಿತ್ಯದ ಬದುಕಿಗೆ ಒಬ್ಬರೇ ಮರಳುವ ಪ್ರವೃತ್ತಿ ಹೆಚ್ಚುತ್ತಿದೆ. ಅನಿವಾರ್ಯತೆ ಇದು ಅನುಕೂಲವೂ ಆಗಿದೆ. ಏಕೆಂದರೆ ದೂರವಿದ್ದಾಗ ಅನಗತ್ಯ ಜಗಳವಿಲ್ಲ, ಬೇಕಾದಾಗ ಚಾಟ್- ಫೋನ್ ಮಾಡಬಹುದು, ಪರಸ್ಪರ ಸ್ವಾತಂತ್ರ್ಯಕ್ಕೆ ಭಂಗವಿಲ್ಲ ಮತ್ತು ಪ್ರೀತಿಯೂ ಹೆಚ್ಚು ಎನ್ನುವವರೂ ಇದ್ದಾರೆ. ಮದುವೆ ಎಂಬ ಸಂಬಂಧದ ಚೌಕಟ್ಟಿನಲ್ಲಿದ್ದು ಸ್ವತಂತ್ರರಾಗುವ ಅಗತ್ಯ ಇವರಲ್ಲಿ ಕಂಡುಬರುತ್ತದೆ.

ಹಾಗೆಯೇ ಈ ಲಿವಿಂಗ್‌ ಟುಗೆದರ್‌ ಅಪಾರ್ಟ್ ಸಂಬಂಧ ಸಹಬಾಳ್ವೆಯ ಬಿಕ್ಕಟ್ಟನ್ನು ಸರಿಪಡಿಸಬಲ್ಲದು ಎನ್ನಲಾಗುತ್ತದೆ. ಮದುವೆಯಾಗುವ ಮುನ್ನ ಲಿವ್ ಇನ್ ಸಂಬಂಧದಲ್ಲಿ ಪರಸ್ಪರರನ್ನು ಅರಿತುಕೊಳ್ಳಲು ಸಹಾಯಕ. ಅದೇ ರೀತಿ ದಾಂಪತ್ಯದಲ್ಲಿ ಒಟ್ಟಿಗಿದ್ದು ಕಿರಿಕಿರಿ ಆರಂಭವಾದಾಗ ಬೇರೆಯಾಗುವುದು ಪರಿಹಾರ ನಿಜ. ಆದರೆ ಸಂಪೂರ್ಣವಾಗಿ ಸಂಬಂಧ ಕಡಿದುಕೊಳ್ಳುವ ವಿಚ್ಛೇದನದ ಬದಲು ಈ ಜತೆಗಿದ್ದು ದೂರ ಇರುವುದು ಪರ್ಯಾಯ ಮಾರ್ಗವಾಗಿದೆ. ಒಟ್ಟಿಗೇ ಬದುಕಲು ಸಾಧ್ಯವಿಲ್ಲ, ಆದರೆ ಮದುವೆ ಎಂಬ ಸಂಬಂಧ ಬೇಕು, ಅದಕ್ಕೊಂದು ದಾರಿಯಿದು.

ಒಂದೇ ಮನೆಯಲ್ಲಿ ಒಟ್ಟಿಗಿದ್ದು ಮನಸ್ಸುಗಳ ನಡುವೆ ಮೈಲಿ ದೂರದ ಬದಲು, ದೂರವಿದ್ದು ಪ್ರೀತಿ ಸ್ನೇಹದಿಂದ ಇರುವ ಈ ಸಂಬಂಧ ಉತ್ತಮ. ಮದುವೆ ಬೇಕು ಅಥವಾ ಬೇಡ ಎನ್ನುವುದು ಅವರವರ ಆಯ್ಕೆಯಾದರೂ ಪರಸ್ಪರ ಒಂದಿಷ್ಟು ಸಮಯ ದೂರ ಇರುವುದು ವೈಮನಸ್ಸನ್ನು ಕೆಲಮಟ್ಟಿಗೆ ಕಡಿಮೆ ಮಾಡಬಲ್ಲದು ಎಂದು ಕೌಟುಂಬಿಕ ಆಪ್ತ ಸಲಹೆಗಾರರು ಅಭಿಪ್ರಾಯ ಪಡುತ್ತಾರೆ.

ಮದುವೆ ಎಂದರೆ ಇಬ್ಬರು ವ್ಯಕ್ತಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಬೆಸೆಯುವ ಸಂಬಂಧ, ಮಧುರ ಅನುಬಂಧ. ಹಾಗೆಯೇ ಸಂತಾನವನ್ನು ಪಡೆದು, ಪ್ರೀತಿ ಮತ್ತು ಜವಾಬ್ದಾರಿಯಿಂದ ಮಕ್ಕಳನ್ನು ಬೆಳೆಸಿ ಸಮಾಜಕ್ಕೆ ನೀಡುವ ಉದ್ದೇಶವೂ ಅಡಗಿದೆ. ಹೀಗಿರುವಾಗ ಈ ರೀತಿಯ ಸಂಬಂಧ ಸಮಂಜಸವೆ? ಕುಟುಂಬ ಎನ್ನುವ ಮೂಲಭೂತ ಪರಿಕಲ್ಪನೆಗೆ ಇದು ವಿರುದ್ಧವಲ್ಲವೇ ಎನ್ನುವ ಹಲವು ಪ್ರಶ್ನೆಗಳನ್ನು ಈ ಸಂಬಂಧ ಹುಟ್ಟುಹಾಕುತ್ತದೆ. ಮನೋವಿಜ್ಞಾನಿಗಳು ಇಬ್ಬರು ವ್ಯಕ್ತಿಗಳು ಕೂಡಿ ಬಾಳಬೇಕಾದರೆ ಕೆಲಮಟ್ಟಿಗಿನ ಹೊಂದಾಣಿಕೆ, ತ್ಯಾಗ ಅನಿವಾರ್ಯ.

ಅನೇಕ ಬಾರಿ ಮದುವೆ ಇಲ್ಲದಿದ್ದರೇ ಒಳ್ಳೆಯದಿತ್ತು ಅನ್ನಿಸಲೂಬಹುದು. ತಕ್ಕ ಸಂಗಾತಿ, ಮದುವೆಯ ವಯಸ್ಸು, ಮಕ್ಕಳು, ವೃತ್ತಿಎಲ್ಲವೂ ವೈಯಕ್ತಿಕ ಆಯ್ಕೆ. ಆರಂಭದಲ್ಲಿ ಎಲ್ಲವೂ ಕಷ್ಟ ಅನಿಸಿದರೂ ತಾಳ್ಮೆ ಬೇಕು. ಮದುವೆ ಎಂಬುದು ಬಂಧವೇ ಹೊರತು ಬಂಧನವಾಗಬಾರದು. ಸಂಘಜೀವಿಯಾದ ಮಾನವರಿಗೆ ನೋಟ, ಸ್ಪರ್ಶ, ಮಾತು ಎಲ್ಲವೂ ಮುಖ್ಯ. ಮೇಲ್ನೋಟಕ್ಕೆ ದಿನನಿತ್ಯದ ಜಗಳ, ಅಸಮಾಧಾನವನ್ನು ಕಡಿಮೆ ಮಾಡುತ್ತದೆ ಎನಿಸಿದರೂ ಸುಖ-ದುಃಖ ಹಂಚಿಕೊಳ್ಳಲು ನನ್ನವರಿದ್ದಾರೆ ಎಂಬ ಸುರಕ್ಷಿತ ಭಾವನೆಯಿಂದ ವಂಚಿತರನ್ನಾಗಿಸುತ್ತದೆ.

ಸ್ವಾತಂತ್ರ್ಯ ಬೇಕು ಎಂಬುದು ನಿಜವಾದರೂ ಕೂಡಿ ಬಾಳುವುದರಲ್ಲಿ ಸ್ವಂತ ಮತ್ತು ಸಮಾಜದ ಹಿತವೂ ಇದೆ. ಹೀಗಿದ್ದೂ ಪರಿಸ್ಥಿತಿಗೆ ಅನುಗುಣವಾಗಿ ಅನಿವಾರ್ಯತೆ ಇದ್ದಾಗ, ದಾಂಪತ್ಯದಲ್ಲಿ ಬಿರುಕು ಉಂಟಾದಾಗ ಹೀಗೆ ಮಾಡಬಹುದು ಎನ್ನುತ್ತಾರೆ. ಇಂಥ ಸಂಬಂಧದಲ್ಲಿ ಇದ್ದರೂ ಕಾನೂನಿನ ಪ್ರಕಾರ ಅವರು ಪತಿ-ಪತ್ನಿಯರೇ ಆಗಿರುತ್ತಾರೆ. ಹೀಗಾಗಿ ಹಣ, ಆಸ್ತಿ, ಮಕ್ಕಳ ಪೋಷಣೆ ವಿಚಾರದಲ್ಲಿ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಅದರ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಒಟ್ಟಿಗೇ ಇರುವುದು, ಇಲ್ಲ ದೂರವಾಗಿರುವುದು ಅವರವರ ಆಯ್ಕೆ. ಆದರೆ ಇಂಥ ಸಂಬಂಧ ನಿರ್ವಹಿಸಲು ಪರಸ್ಪರ ಬದ್ಧತೆ, ಆರ್ಥಿಕ ಮಟ್ಟ, ಮಕ್ಕಳ ಭಾವನೆಗಳು, ಒಂಟಿಯಾಗಿ ಬದುಕನ್ನು ಎದುರಿಸುವ ಧೈರ್ಯ ಇವೆಲ್ಲವನ್ನೂ ಪರಿಗಣಿಸುವುದು ಮುಖ್ಯ. ಹಾಗೆಯೇ ಈ ರೀತಿ ದೂರವಿರುವುದು ಮಾನಸಿಕ ನೆಮ್ಮದಿ ನೀಡಿ ಅಂದುಕೊಂಡ ಗುರಿ ಸಾಧಿಸಲು ಸಹಾಯಕವೇ ಎಂದು ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT