ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸಿಟ್‌ ಪೋಲ್‌ 2019: ಎಷ್ಟು ನಿಖರ?

Last Updated 20 ಮೇ 2019, 19:40 IST
ಅಕ್ಷರ ಗಾತ್ರ

ರಾಜಕೀಯ ಸಮೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಿದರೆ ಶೇ 99ರಷ್ಟು ನಿಖರ ಫಲಿತಾಂಶ ನೀಡಬಹುದು. ಭಾರತದಲ್ಲಿ ಇದುವರೆಗಿನ ಸಮೀಕ್ಷೆಗಳ ನಿಖರತೆ ಶೇ 84ರಷ್ಟಿದೆ. ಹಾಗಂತ ನಿನ್ನೆಯ ಸಮೀಕ್ಷೆ ಅದೇ ಮಟ್ಟದಲ್ಲಿ ಅಥವಾ ಅಷ್ಟೇ ನಿಖರವಾಗಿದೆ ಎಂದರ್ಥವಲ್ಲ. ಅದನ್ನು ಭವಿಷ್ಯದ ದಿಕ್ಸೂಚಿ ಎಂದು ಭಾವಿಸ ಹಾಗಿಲ್ಲ.

ಏಕೆಂದರೆ ಈ ಸಮೀಕ್ಷೆಗಳು ವಾಸ್ತವ ನೆಲೆಗಟ್ಟಿನ ಹಲವಾರು ಸಮಸ್ಯೆಗಳನ್ನು ಧ್ವನಿಸುತ್ತಿಲ್ಲ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿರಲಿಲ್ಲ. ಮೋದಿ ಅವರ ಅಲೆ ಇತ್ತು ಎಂಬ ಬಗ್ಗೆ ಯಾರ ತಕರಾರು ಇರಲಿಲ್ಲ. ಆದರೆ, ಈ ಬಾರಿ ದೇಶದಲ್ಲಿ2014ರ ರಾಜಕೀಯ ಸ್ಥಿತಿ ಇಲ್ಲ.

ನರೇಂದ್ರ ಮೋದಿ ಅವರ ಆಡಳಿತವನ್ನುಜನರು ಕಂಡಿದ್ದಾರೆ ಮತ್ತು ಅನುಭವಿಸಿದ್ದಾರೆ. ನೋಟು ರದ್ದು, ಜಿಎಸ್‌ಟಿ, ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ, ಹಣದುಬ್ಬರ, ಆಡಳಿತ ವೈಫಲ್ಯಗಳನ್ನು ಕಣ್ಣಾರೆ ಕಂಡಿದ್ದಾರೆ. ಜನರ ನೋವುಗಳನ್ನು ಮತ್ತು ನೆಲಮಟ್ಟದ ಆ ವಾಸ್ತವಗಳನ್ನು ಸಂಪೂರ್ಣವಾಗಿ ಈ ಸಮೀಕ್ಷೆಗಳಲ್ಲಿ ಕಾಣುತ್ತಿಲ್ಲ. ಆದರೆ, ಸಾರಾಸಗಟಾಗಿ ಸಮೀಕ್ಷೆಗಳನ್ನು ತಳ್ಳಿ ಹಾಕುವಂತೆಯೂ ಇಲ್ಲ. ಒಂದು ಟ್ರೆಂಡ್‌ ಹೇಳುತ್ತಿವೆ.
– ಡಾ. ಬಸವರಾಜ ಇಟ್ನಾಳ, ರಾಜಕೀಯ ವಿಶ್ಲೇಷಕ

**
ಸಂದೇಹವಿಲ್ಲ...

ಮತಗಟ್ಟೆ ಸಮೀಕ್ಷೆ ನಿರೀಕ್ಷಿತ. ನಾವು ಕೂಡ ಇದನ್ನೇ ನಿರೀಕ್ಷಿಸಿದ್ದೆವು. ದೇಶದಲ್ಲಿಯ ರಾಜಕೀಯ ವಾತಾವರಣವನ್ನು ಈ ಸಮೀಕ್ಷೆಗಳು ಅನಾವರಣಗೊಳಿಸಿವೆ. ವಿಶ್ವಾಸರ್ಹತೆ ಬಗ್ಗೆ ಸಂದೇಹವಿಲ್ಲ. ಅಪಾರ ಅನುಭವ ಹೊಂದಿರುವ ವೃತ್ತಿಪರ ಸಂಸ್ಥೆಗಳು ಈ ಸಮೀಕ್ಷೆಗಳನ್ನು ನಡೆಸಿರುವ ಕಾರಣ ನಂಬಬಹುದು. ಹೆಚ್ಚು, ಕಡಿಮೆ ಗುರುವಾರದ ಫಲಿತಾಂಶ ಕೂಡ ಮತಗಟ್ಟೆ ಸಮೀಕ್ಷೆಗಳ ರೀತಿಯಲ್ಲಿಯೇ ಇರುತ್ತದೆ. ಎನ್‌ಡಿಎ 300 ಸ್ಥಾನ ಗಳಿಸುವುದರಲ್ಲಿ ಅನುಮಾನ ಇಲ್ಲ.

-ರವೀಂದ್ರನ್‌, ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌

**

ಜ್ಯೋತಿಷಿಗಳೇ?
ಮತಗಟ್ಟೆ ಸಮೀಕ್ಷೆ ನಡೆಸಿದ ಸಂಸ್ಥೆಗಳು ಭವಿಷ್ಯ ನುಡಿಯುವ ಜ್ಯೋತಿಷಿಗಳೇ? ಜನರ ಮನದಲ್ಲಿರುವ ಗುಟ್ಟನ್ನು ಅಷ್ಟು ಸುಲಭವಾಗಿ ಯಾರೂ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಮ್ಮದು ರಹಸ್ಯ ಮತದಾನ ವ್ಯವಸ್ಥೆ. ಇದರಿಂದ ಯಾರು, ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಕರಾರುವಾಕ್ಕಾಗಿ ಹೇಳಲು ಸಾಧ್ಯ? ಮತಗಟ್ಟೆ ಸಮೀಕ್ಷೆಗಳು ಕೇವಲ ಊಹೆ ಮಾತ್ರ. ಗುರುವಾರದವರೆಗೆ ಕಾಯ್ದರೆ ಸಮೀಕ್ಷೆ ನಡೆಸಿದ ಸಂಸ್ಥೆಗಳ ಬಂಡವಾಳ ಗೊತ್ತಾಗುತ್ತದೆ.
-ಪರಶುರಾಮ, ಬೇಲ್‌ಪುರಿ ವರ್ತಕ

**

ಅರ್ಧಸತ್ಯ
ಸಮೀಕ್ಷೆಗಳನ್ನು ನೂರಕ್ಕೆ ನೂರರಷ್ಟು ನಂಬಲು ಆಗದು. ಸಮೀಕ್ಷೆಗಳು ದೇಶದಲ್ಲಿಯ ಜನರ ಮೂಡ್‌ ಮತ್ತು ರಾಜಕೀಯ ಟ್ರೆಂಡ್‌ ಕಟ್ಟಿಕೊಡಬಲ್ಲವು. ಅಂಕಿ, ಸಂಖ್ಯೆಗಳಲ್ಲಿ ಖಂಡಿತ ವ್ಯತ್ಯಾಸವಾಗುತ್ತದೆ. ಸಮೀಕ್ಷೆಗಳು ನಿಖರವಾಗಿಲ್ಲದಿದ್ದರೂ ವಾಸ್ತವತೆಗೆ ಹತ್ತಿರವಾಗಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುತ್ತವೆ. ಈ ಹಿಂದಿನ ಸಮೀಕ್ಷೆಗಳಿಂದ ಇದು ಸಾಬೀತಾಗಿದೆ. ಸಂಸ್ಥೆ, ವೃತ್ತಿಪರತೆ, ಅನುಸರಿಸುವ ಮಾನದಂಡಗಳ ಮೇಲೆ ಸಮೀಕ್ಷೆಗಳ ವಿಶ್ವಾಸರ್ಹತೆಗಳನ್ನು ಅಳೆಯಬಹುದು. ತಟಸ್ಥ ನಿಲುವಿನ ವೃತ್ತಿಪರ ಸಂಸ್ಥೆಗಳು ನಡೆಸುವ ರಾಜಕೀಯ ಸಮೀಕ್ಷೆಗಳನ್ನು ನೂರಕ್ಕೆ ನೂರರಷ್ಟು ನಂಬದಿದ್ದರೂ ಶೇ 50ರಷ್ಟಾದರೂ ನಂಬಬಹುದು.
-ಗೀತಾ ದೇಸಾಯಿ, ಗೃಹಿಣಿ

**

ಫಲಿತಾಂಶದ ಪ್ರತಿಬಿಂಬ
ಒಟ್ಟಾರೆ ಎಲ್ಲ ಮತಗಟ್ಟೆ ಸಮೀಕ್ಷೆಗಳ ಸಾರ ಗುರುವಾರದ ಫಲಿತಾಂಶವನ್ನು ಬಿಂಬಿಸುತ್ತವೆ. ಬಹುತೇಕ ಇದೇ ಫಲಿತಾಂಶ ಹೊರಬೀಳಲಿದೆ. ಸಮೀಕ್ಷೆಗಳ ಅಂಕಿ, ಅಂಶಗಳಲ್ಲಿಯೇಸಾಕಷ್ಟು ಅಂತರ, ವ್ಯತ್ಯಾಸಗಳಿವೆ. ಎಲ್ಲವೂ ಭಿನ್ನ ಧ್ವನಿ ಹೊರಡಿಸುತ್ತವೆ. ಮತಗಟ್ಟೆ ಸಮೀಕ್ಷೆಗಳಿಗೂ ವಾಸ್ತವಕ್ಕೂ 40 ರಿಂದ 50 ಸ್ಥಾನಗಳು ವ್ಯತ್ಯಾಸವಾಗಬಹುದು. ಖಂಡಿತವಾಗಿಯೂ ಬಾಲಾಕೋಟ್‌ ವೈಮಾನಿಕ ದಾಳಿ ಪ್ರಮುಖವಾಗಿ ಈ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಇದರ ಪರಿಣಾಮ ಎದ್ದು ಕಾಣುತ್ತದೆ.
-ನಾಯಕ್‌, ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ, ಅಲಹಾಬಾದ್‌ ಬ್ಯಾಂಕ್‌

**

ಮಾಧ್ಯಮಗಳು ಸುಳ್ಳು ಹೇಳಲು ಸಾಧ್ಯನಾ?
ನಾನೇನು ರಾಜಕೀಯ ಪಂಡಿತನಲ್ಲ. ನಾವೆಲ್ಲ ಪತ್ರಿಕೆ, ಟಿ.ವಿಗಳು ಬಿತ್ತರಿಸುವ ಸುದ್ದಿಗಳನ್ನೇ ನಾವು ನಂಬುತ್ತೇವೆ. ಮಾಧ್ಯಮಗಳು ಸುಳ್ಳು ಹೇಳಲು ಸಾಧ್ಯನಾ? ಒಂದು ವೇಳೆ ಹಾಗೇನಾದರೂ ಆದರೆ, ಹೆಚ್ಚು, ಕಡಿಮೆ ಸಮೀಕ್ಷೆಗಳು ನಿಜವಾಗುವ ಸಾಧ್ಯತೆ ಕಾಣುತ್ತದೆ.
-ರಾಘವ್‌, ಆಟೊ ಚಾಲಕ

**

ಯಾವ ಸಮೀಕ್ಷೆ ನಂಬೋಣ?
ಮತಗಟ್ಟೆ ಸಮೀಕ್ಷೆಗಳು ಶೇ 75–80ರಷ್ಟು ನಿಜವಾಗಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದೊಂದು ಸಮೀಕ್ಷೆ ಒಂದೊಂದು ಥರ ವಿಭಿನ್ನವಾಗಿವೆ. ಪರಸ್ಪರ ಸಮೀಕ್ಷೆಗಳಲ್ಲಿಯೇ ಶೇ 10–20 ರಷ್ಟು ವ್ಯತ್ಯಾಸ ಕಂಡು ಬರುತ್ತದೆ. ಹೀಗಿರುವಾಗ ಯಾವ ಸಂಸ್ಥೆಯ ಸಮೀಕ್ಷೆ ನಂಬುವುದು ಎಂದು ಗೊಂದಲ, ಸಂದೇಹ ಮೂಡುತ್ತದೆ. ಕೆಲವು ಹೆಸರುವಾಸಿ ವೃತ್ತಿಪರ ಸಂಸ್ಥೆಗಳು ನಡೆಸುವ ಸಮೀಕ್ಷೆಗಳು ಸತ್ಯಕ್ಕೆ ಹತ್ತಿರವಾಗಿವೆ ಎಂದು ತೋರುತ್ತದೆ.
-ಶ್ರೀನಿವಾಸನ್‌, ನಿವೃತ್ತ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT