ನಿಮಗೆ ಬೇಕಾಗಿವೆ ಈ ಉಡುಗೊರೆಗಳು

7

ನಿಮಗೆ ಬೇಕಾಗಿವೆ ಈ ಉಡುಗೊರೆಗಳು

Published:
Updated:
Prajavani

ಹೊಸ ವರ್ಷಕ್ಕೆ ಅಡಿಯಿಟ್ಟಾಗಿದೆ. ಹಳೆಯ ವರ್ಷದ ಕೊನೆಯಲ್ಲಿ ಇಡೀ ವರ್ಷದ ನಿಮ್ಮ ದಿನಚರಿಗಳನ್ನು ಸಿಂಹಾವಲೋಕನ ಮಾಡಿದಾಗ, ಅಂದುಕೊಂಡಿದ್ದನ್ನೆಲ್ಲ ಸಾಧಿಸಿದ ತೃಪ್ತಿ ಇರಬಹುದು. ಒಂದಿಷ್ಟು ನಿರಾಸೆಗಳೂ ಆಗಿರಬಹುದು. ಆದರೆ ಈ ‘ಸಾಧನ’ಗಳ ಪಟ್ಟಿಯಲ್ಲಿ ನಿಮಗೆ ನೀವು ಕೊಟ್ಟ ಉಡುಗೊರೆಗಳೆಷ್ಟು? ಅದು ತೃಪ್ತಿಕರವಾಗಿಲ್ಲದಿದ್ದರೆ 2019ರ ದಿನಚರಿಯಲ್ಲಿ ಒಂದಿಷ್ಟು ಕಾಯಂ ಸ್ಥಾನ ಮೀಸಲಿರಿಸಿಬಿಡಿ. 

ಪ್ರತಿನಿತ್ಯದ ಚಟುವಟಿಕೆ, ಕರ್ತವ್ಯ, ಹೊಣೆಗಾರಿಕೆಗಳ ಮಧ್ಯೆ ಸ್ವಂತಕ್ಕೊಂದು, ಸಂತೃಪ್ತಿಗೊಂದಿಷ್ಟು ಜಾಗ ಕೊಡುವುದು ಅತ್ಯಗತ್ಯ. ಹಾಗಿದ್ದರೆ ಪುರುಷರೂ, ಮಹಿಳೆಯರೂ ಏನೇನು ಮಾಡಬಹುದು ನೋಡೋಣ ಬನ್ನಿ.

ಮನಸ್ಸಿಗೊಪ್ಪುವ ಉಡುಗೆ

ದಿನಕ್ಕೊಂದು ಬಗೆ ಉಡುಗೆ ತೊಡುಗೆ ಧರಿಸುವವರ ಮಾತು ಬಿಡಿ. ಏನೋ ಒಂದು ಬಟ್ಟೆ ತೊಟ್ಟರಾಯಿತು ಎಂದು, ಸ್ವಂತದ ಬಗೆಗಿನ ಉಡಾಫೆಯನ್ನು ರೂಢಿಸಿಕೊಂಡವರು ಈ ವರ್ಷವಾದರೂ ಉಡುಗೆ ತೊಡುಗೆ ಬಗ್ಗೆ ಗಮನ ಕೊಡುವ ತೀರ್ಮಾನ ತೆಗೆದುಕೊಳ್ಳಬಹುದು.

ಫ್ಯಾಷನ್‌, ಟ್ರೆಂಡ್‌ಗಳನ್ನು ಆಯಾಕಾಲಕ್ಕೆ ತಪ್ಪದೇ ಪಾಲಿಸುವ ಸೆಲೆಬ್ರಿಟಿಗಳು, ಫ್ಯಾಷನ್‌ ಅಂದರೆ ನಮಗೆ ಖುಷಿಕೊಡುವ ಉಡುಗೆ ತೊಡುಗೆ ಧರಿಸುವುದು ಎಂದೇ ವ್ಯಾಖ್ಯಾನಿಸುತ್ತಾರೆ. ಅಂದರೆ ಕಂಫರ್ಟ್‌ ಆಗಿರುವುದು ಎಂದರ್ಥ. ಬಣ್ಣ, ವಿನ್ಯಾಸ, ಆಕಾರ ಕಂಫರ್ಟ್‌ ಆಗಿರುವ ಉಡುಪು ಧರಿಸಿದರೆ ಮನಸ್ಸೂ ಉಲ್ಲಾಸದಿಂದ ಇರುತ್ತದೆ. ಅಂತಹ ಮನಸ್ಥಿತಿಯಲ್ಲಿ ಇನ್ನಷ್ಟು ಚೈತನ್ಯಪೂರ್ಣವಾಗಿ ಕೆಲಸ ಮಾಡಲು ಸಾಧ್ಯ!

ತಮ್ಮ ಜೀವನಶೈಲಿ ಬಗ್ಗೆ ಪುರುಷರು ಹೆಚ್ಚಾಗಿ ಅಸಡ್ಡೆ ತೋರುತ್ತಾರೆ ಎಂಬ ಸಾಮಾನ್ಯ ಆರೋಪ ಇದೆ. ಇಸ್ತ್ರಿ ಮಾಡಿದ ಬಟ್ಟೆ ಧರಿಸಿದರೂ, ಶೂ ಪಾಲಿಶ್‌ ಮಾಡದಿರುವುದು, ತಲೆ ಕೂದಲು, ಗಡ್ಡ ಮೀಸೆ ನಿಯಮಿತವಾಗಿ ಟ್ರಿಮ್‌ ಮಾಡಿಕೊಳ್ಳದಿರುವುದು, ಹೊಟ್ಟು ಉದುರುತ್ತಿದ್ದರೂ ಕೂದಲಿನ ಆರೈಕೆ ಮಾಡಿಕೊಳ್ಳದಿರುವುದು, ಚರ್ಮದ ಬಗ್ಗೆ ಕಾಳಜಿಯಲ್ಲೂ ಅಸಡ್ಡೆ ಮಾಡುವುದು... ಈ ವರ್ಷ ನಿಮ್ಮ ದಿನಚರಿಯಲ್ಲಿ
ಸ್ವಲ್ಪ ಸಮಯವನ್ನು ನಿಮ್ಮದೇ ಉಪಚಾರಕ್ಕೆ ಮೀಸಲಿಟ್ಟು ನೋಡಿ!

ಆಧುನಿಕ ಜೀವನಶೈಲಿಯನ್ನು ಈ ವರ್ಷದಿಂದಲೇ ಪಾಲಿಸಲು ಶುರು ಮಾಡುತ್ತೀರಾದರೆ ಕೂದಲಿನ ಆರೈಕೆಗೇ ಮೀಸಲಾದ ವಿಲಾಸಿ ಉತ್ಪನ್ನಗಳ ಮೊರೆಹೋಗಬಹುದು. ವ್ಯಾಕ್ಸ್‌, ಸೀರಮ್‌, ಕಂಡಿಶನರ್‌, ಶ್ಯಾಂಪೂ, ಕೂದಲ ಬಣ್ಣ, ಹವಾಮಾನಕ್ಕೆ ಒಗ್ಗುವಂತಹ ಚರ್ಮ ಮತ್ತು ಕೂದಲು ಸಂರಕ್ಷಕ ಮತ್ತು ಪ್ರಸಾಧನಗಳನ್ನು ತಜ್ಞರ ಸಲಹೆ ಪಡೆದು ಬಳಸಿನೋಡಿ. ಸುಗಂಧದ್ರವ್ಯಗಳ ಸುವಾಸನೆ ಮನಸ್ಸಿಗೆ ಹೊಸ ಆಹ್ಲಾದ ನೀಡಬಲ್ಲದು.

ನಿರಂತರವಾಗಿ ಕೆಲಸ ಮಾಡಿ ದಣಿದ ದೇಹಕ್ಕೆ ಉಪಚಾರ ಮಾಡಿದರೆ ದಣಿವು ನಿವಾರಣೆಯಾಗುತ್ತದೆ. ಸ್ಪಾಗಳಲ್ಲಿ ನುರಿತ ಕೈಗಳಿಂದ ಮಸಾಜ್‌ ಮಾಡಿಸಿಕೊಂಡರೆ ಹೊಸತನದೊಂದಿಗೆ ಇನ್ನಷ್ಟು ಕೆಲಸ ಮಾಡಲು ಸಾಧ್ಯವಾದೀತು.

ಮನೆಯ ವಾತಾವರಣವೂ ನಮ್ಮೊಳಗಿನ ಚೈತನ್ಯವನ್ನು ಮರುಪೂರಣ ಮಾಡುವ ತಾಣ. ಹಾಗಾಗಿ ದೂಳು, ಕೊಳೆ ಇಲ್ಲದ, ಗಾಳಿ ಬೆಳಕು ಆಡುವ ಕೋಣೆಯಲ್ಲಿ ಇರುವ ಅವಕಾಶವನ್ನು ಸೃಷ್ಟಿಸಿಕೊಂಡರಾಯಿತು.

ಮನಸ್ಸಿಗೆ ಮುದ ನೀಡುವ ಕಿಟಕಿ ಪರದೆಗಳು, ಒಂದು ಸುಂದರ ಚೌಕಟ್ಟಿನ ಅಥವಾ ವಿನ್ಯಾಸದ ಚಿತ್ರದ ಆಯ್ಕೆಯೂ ಸೂಕ್ತ. ಬಣ್ಣಕ್ಕೂ ಮನಸ್ಸಿನ ಆರೋಗ್ಯಕ್ಕೂ, ಮನೋಲ್ಲಾಸಕ್ಕೂ ನೇರ ನಂಟಿದೆ. ಹಾಗಾಗಿ ನಿಮ್ಮಿಷ್ಟದ ಬಣ್ಣಕ್ಕೆ ಮನೆಯಲ್ಲಿ, ಕೋಣೆಯಲ್ಲಿ ಬಳಸಿ ನೋಡಿ. ವಿಭಿನ್ನ ವಿನ್ಯಾಸದ  ಗಡಿಯಾರವೋ, ಪುರಾತನ ಶೈಲಿಯ ಫೋನ್‌ ಸ್ತಂಭ, ಆಪ್ತರು ನೀಡಿದ ಉಡುಗೊರೆಯೂ ದೈನಂದಿನ ಚಟುವಟಿಕೆಗೆ ಸ್ಫೂರ್ತಿ ತುಂಬಬಹುದು.

ವರ್ಷಪೂರ್ತಿ ಹೀಗಿರಬೇಕು, ಹೀಗೆ ಮಾಡಬೇಕು ಎಂಬ ಆಶಯಗಳ ಪಟ್ಟಿಯಲ್ಲಿ ಸ್ವಂತದ ಉಪಚಾರಗಳನ್ನೂ ಸೇರಿಸಿಕೊಳ್ಳಿ. 2018ರವರೆಗೂ ನೀವು ನಿಮ್ಮ ಬಗ್ಗೆ ತೋರಿದ ಅಸಡ್ಡೆಗಳ ಬಗ್ಗೆ ನಿಮಗೇ ಮುಜುಗರವಾಗದೇ ಇರದು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !