ಗಾಂಧಿ ಸಿನಿಮಾ

7

ಗಾಂಧಿ ಸಿನಿಮಾ

Published:
Updated:

ಇಳಿಬಿದ್ದ ಗಡ್ಡ, ಕೆದರಿದ ಕೂದಲು, ಕೊಳಕು ಬಟ್ಟೆ, ಅರೆಪ್ರಜ್ಞೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಸ್ಟ್ರೆಚರ್‌ನಲ್ಲಿ ತಂದು ಅಲ್ಲಿ ಮಲಗಿಸಲಾಗುತ್ತದೆ. ಅದು ಪೊಲೀಸ್ ಠಾಣೆ. ‘ಗ್ರ್ಯಾಂಟ್‌ ರೋಡ್‌ ರೈಲು ನಿಲ್ದಾಣದ ರಸ್ತೆ ಪಕ್ಕ ಬಿದ್ದುಕೊಂಡಿದ್ದ ಸಾಬ್‌’ ಎನ್ನುತ್ತಾನೆ ಕರೆತಂದ ಕಾನ್‌ಸ್ಟೆಬಲ್‌. ತನಿಖಾಧಿಕಾರಿ ವಿಚಾರಿಸುತ್ತಾನೆ– ‘ಕ್ಯಾ ನಾಮ್‌ ಹೈ ತುಮಾರಾ ಬಾಪ್‌ ಕಾ..?’ ತುಟಿಗಳಷ್ಟೆ ಅಲ್ಲಾಡುತ್ತವೆ, ಮಾತುಗಳು ಹೊರಬರುವುದಿಲ್ಲ. ತನಿಖಾಧಿಕಾರಿ ಗಟ್ಟಿಯಾಗಿ ಹೇಳುತ್ತಾನೆ– ‘ಕೋಶಿಶ್‌ ಕರೋ..’ ಮಲಗಿದ್ದ ವ್ಯಕ್ತಿ ಅಸ್ಪಷ್ಟವಾಗಿ ಹೇಳುತ್ತಾನೆ– ‘ಮಹಾತ್ಮ... ಮಹಾತ್ಮ ಗಾಂ...’ 

–2007ರಲ್ಲಿ ಬಿಡುಗಡೆಯಾದ ‘ಗಾಂಧಿ ಮೈ ಫಾದರ್‌’ ಎನ್ನುವ ಚಿತ್ರದ ಮೊದಲ ದೃಶ್ಯವದು. ಗಾಂಧೀಜಿಯ ಮಗ ಹರಿಲಾಲ್‌ ಪಾತ್ರವದು. (ಅನಿಲ್‌ ಕಪೂರ್‌ ನಿರ್ಮಾಣ, ಫಿರೋಜ್‌ ಅಬ್ಬಾಸ್‌ ಖಾನ್‌ ನಿರ್ದೇಶನ)  ಗಾಂಧೀಜಿಯ ಫೋಟೊಗೆ ಸಂಘಟನೆಯೊಂದರ ನಾಯಕಿ ಬಹಿರಂಗವಾಗಿ ಪಿಸ್ತೂಲ್‌ನಿಂದ ಶೂಟ್‌ ಮಾಡಿ ನೆಲದಲ್ಲಿ ರಕ್ತ ತೊಟ್ಟಿಕ್ಕಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್‌ ಆದ ಬಳಿಕ, ಹಳೆಯ ಸಿನಿಮಾದ ಆ ದೃಶ್ಯ ಮತ್ತೆ ನೆನಪಾಯಿತು. ತಾನು ಬದುಕಿ ಬಾಳಿದ ಇಡೀ ಶತಮಾನವನ್ನು ಪ್ರಭಾವಿಸಿದ ಮಹಾತ್ಮನನ್ನು ಈಗ ಈ ಶತಮಾನವೂ ಪದೇಪದೆ ನೆನಪಿಸಿಕೊಳ್ಳುತ್ತಿದೆ. ಆದರೆ ನೆನಪಿಸಿಕೊಳ್ಳುವ ವಿಧಾನ ಮಾತ್ರ ಬೇರೆ ಬೇರೆ. ಸಬರಮತಿ ಆಶ್ರಮದ ಎದುರು ಗಾಂಧೀಜಿಯ ರಕ್ತ ನೆಲಕ್ಕೆ ತೊಟ್ಟಿಕ್ಕಿ 70 ವರ್ಷಗಳಾದ ಬಳಿಕವೂ ಕೆಲವರಿಗೆ ಗಾಂಧೀಜಿಯ ರಕ್ತವನ್ನು ಮತ್ತೆ ಮತ್ತೆ ನೋಡಬೇಕನ್ನಿಸುತ್ತದೆ. ಆದರೆ ಇಂತಹ ರಕ್ತಮನಸ್ಕತೆಯನ್ನು ಪ್ರತಿರೋಧಿಸುವ ಮನಸ್ಸುಗಳು ಮಾತ್ರ ಇವತ್ತು ಚೆಲ್ಲಾಪಿಲ್ಲಿಯಾಗಿವೆ. ಪ್ರತಿರೋಧದ ಧ್ವನಿಗಳಿದ್ದರೂ ಅದು ಆ ಸಿನಿಮಾದಲ್ಲಿ ಹರಿಲಾಲನ ಧ್ವನಿಯಂತೆ ಅರೆಪ್ರಜ್ಞಾವಸ್ಥೆಯಲ್ಲಿವೆ, ಅಸ್ಪಷ್ಟವಾಗಿವೆ.

ಗಾಂಧೀಜಿಯವರು ಸಿನಿಮಾ ನೋಡ್ತಿದ್ರಾ? ಒಂದು ಸಿನಿಮಾದ ಕೆಲವು ರೀಲ್‌ಗಳನ್ನು ನೋಡಿದ್ದರಂತೆ. 1943ರಲ್ಲಿ ಬಂದ ವಿಜಯ್‌ ಭಟ್‌ ಅವರ ‘ರಾಮ್‌ ರಾಜ್ಯ’ ಎನ್ನುವ ಸಿನಿಮಾವದು. ಸಿನಿಮಾವನ್ನು ಅವರು ‘ಕೆಡುಕು ಉಂಟು ಮಾಡುವ ಮಾಧ್ಯಮ’ ಎಂದು ಭಾವಿಸಿದ್ದರು. ‘ಅದೇನಾದರೂ ಒಳ್ಳೆಯದು ಮಾಡಿದ್ದರೆ ಸಾಬೀತಾಗಬೇಕಾಗಿದೆ’ ಎನ್ನುವ ಅವರ ಅಭಿಪ್ರಾಯವೂ ದಾಖಲಾಗಿದೆ. ಅಪ್ಪನ ಬಳಿ ಸುಳ್ಳು ಹೇಳಿ ಪಶ್ಚಾತ್ತಾಪ ಪಟ್ಟ ಬಳಿಕ, ಅವರು ಬದುಕಿನುದ್ದಕ್ಕೂ ಸತ್ಯವನ್ನೇ ಉಸಿರಾಡಬೇಕೆಂದು ನಿರ್ಧರಿಸಿದ್ದರು. ಸತ್ಯ ಹರಿಶ್ಚಂದ್ರ ಅವರ ಆದರ್ಶವಾಗಿದ್ದ. ಹಾಗಿದ್ದೂ 1913ರಲ್ಲಿ ತೆರೆಗೆ ಬಂದ ಡಿ.ಜಿ. ಫಾಲ್ಕೆಯವರ ಪೌರಾಣಿಕ ‘ರಾಜಾ ಹರಿಶ್ಚಂದ್ರ’ ಸಿನಿಮಾವನ್ನು ನೋಡಲು ಗಾಂಧೀಜಿ ಮನಸ್ಸು ಮಾಡಲಿಲ್ಲ. ‘ನಾನ್ಯಾವತ್ತೂ ಸಿನಿಮಾ ನೋಡಲಿಲ್ಲ. ಹಾಗೆ ಹೊರಗಿನವನಾಗಿದ್ದರೂ ಸಿನಿಮಾ ಮಾಡಿರುವ ಮತ್ತು ಮಾಡುತ್ತಿರುವ ಕೆಡುಕು ಸುಲಭವಾಗಿ ಕಾಣಿಸುತ್ತಿದೆ’ ಎಂದಿದ್ದರು ಗಾಂಧಿ. ಸಿನಿಮಾದ ಕೆಡುಕುಗಳ ಬಗ್ಗೆ ಅವರು ತಮ್ಮ ಹರಿಜನ ಪತ್ರಿಕೆಯಲ್ಲೂ ಹಲವು ಸಲ ಬರೆದಿದ್ದರು.

ಯಂತ್ರಗಳನ್ನು ಗಾಂಧೀಜಿ ಮೆಚ್ಚುತ್ತಿರಲಿಲ್ಲ. ಅವರದ್ದು ಶ್ರಮ ಸಂಸ್ಕೃತಿಯ ಒಲವು. ಸಿನಿಮಾ ಹೊಸ ತಂತ್ರಜ್ಞಾನದ ಕೂಸು. ಶ್ರಮ ಇಲ್ಲವೆಂದಲ್ಲ, ಆದರೆ ತಂತ್ರಜ್ಞಾನದ ಯಜಮಾನಿಕೆಯೇ ಹೆಚ್ಚು. ಈಗ ಗಾಂಧಿಯವರು ಇಲ್ಲವಾಗಿ 70 ವರ್ಷಗಳ ಬಳಿಕ ಹೊಸ ಪೀಳಿಗೆಯವರು ಗಾಂಧಿಯನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮವಾಗಿದೆ. ಹಾಗೆಂದೇ ಸಿನಿಮಾ ನಿರ್ಮಾಪಕ, ನಿರ್ದೇಶಕರು ಒಂದೇ ಸಮನೆ ಗಾಂಧಿಯ ಬೆನ್ನುಹತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಗಾಂಧಿಯ ಕುರಿತು ಸಿನಿಮಾಗಳು ಬಂದಿವೆ, ಬರುತ್ತಿವೆ. ಹಾಗೆ ನೋಡಿದರೆ ಭಾರತೀಯ ನಿರ್ಮಾಪಕರೇ ಇದರಲ್ಲಿ ಒಂದು ಹೆಜ್ಜೆ ಹಿಂದೆ.

ಗಾಂಧಿಯನ್ನು ರೀಲ್‌ಗಳಲ್ಲಿ ಸುತ್ತುವ ಮೊದಲ ಪ್ರಯತ್ನ ನಡೆದದ್ದು ಎ.ಕೆ.ಚಟ್ಟಿಯರ್‌ ಎನ್ನುವ ಚೀನಾದಲ್ಲಿ ನೆಲೆ ಕಂಡುಕೊಂಡಿದ್ದ ಪತ್ರಕರ್ತನಿಂದ. ಗಾಂಧಿಯವರ ಜೀವನ ಮತ್ತು ಸಂದೇಶಗಳಿಂದ ತೀವ್ರ ಪ್ರಭಾವಿತರಾಗಿದ್ದ ಚೆಟ್ಟಿಯರ್, ಗಾಂಧಿಯ ಕುರಿತು ಇದ್ದ ಎಲ್ಲ ದೃಶ್ಯ ಸರಕುಗಳನ್ನು ಒಟ್ಟುಗೂಡಿಸಿದರು. ಕೆಲವು ಹೊಸ ಶಾಟ್‌ಗಳನ್ನು ಚಿತ್ರೀಕರಿಸಿ ಅದಕ್ಕೆ ಹೆಣೆದರು. ಬಹಳ ಹಿಂದೆಯೇ ಅವರು ಕೆಲವು ಅಪರೂಪದ ದೃಶ್ಯಗಳನ್ನು ಸಂಗ್ರಹಿಸಿ ಇಟ್ಟಿದ್ದರಂತೆ. ಆದರೆ ದುರದೃಷ್ಟವಶಾತ್‌ ಪ್ರಿಂಟ್‌ ಮತ್ತು ನೆಗೆಟಿವ್‌ ಎರಡೂ ಕಳೆದುಹೋಯಿತು.

1953ರಲ್ಲಿ ಅಮೆರಿಕದ ನಿರ್ಮಾಣ ಸಂಸ್ಥೆಯೊಂದರ ಸಾಕ್ಷ್ಯಚಿತ್ರ ‘ಮಹಾತ್ಮ ಗಾಂಧಿ: ಟ್ವೆಂಟಿಥ್‌ ಸೆಂಚುರಿ ಪ್ರಾಫೆಟ್‌’ ಬಿಡುಗಡೆ ಕಂಡಿತು. ಅದು ಪೂರ್ಣಸಾಕ್ಷ್ಯ ಚಿತ್ರವಲ್ಲ, ಸಿನಿಮಾ ಅಂಶಗಳೂ ಇದ್ದವು. ಆ ಸಮಯದಲ್ಲೇ ಭಾರತದಲ್ಲೂ ಗಾಂಧೀಜಿ ಕುರಿತು ಸಿನಿಮಾವೊಂದನ್ನು ಮಾಡುವ ಆಲೋಚನೆ ಮೂಡಿತು. ಆದರೆ ಗಾಂಧೀಜಿಯ ಪರಮಶಿಷ್ಯ ಜವಾಹರಲಾಲ್‌ ನೆಹರೂ ಅಧಿಕಾರದಲ್ಲಿದ್ದರೂ ಆ ಆಲೋಚನೆ ಸಾಕಾರವಾಗುವುದಿಲ್ಲ. 1963ರಲ್ಲಿ ಸ್ಟ್ಯಾನ್ಲಿ ವೂಲ್ಪರ್ಟ್‌ ಬರೆದ ‘ನೈನ್‌ ಅವರ್ಸ್‌ ಟು ರಾಮ’ ಎನ್ನುವ ಪುಸ್ತಕ ಆಧಾರಿತ ಸಿನಿಮಾ ತೆರೆಗೆ ಬಂತು. ಮಹಾತ್ಮನ ಹತ್ಯೆಗೆ ಮುನ್ನ ಒಂಬತ್ತು ಗಂಟೆಗಳು ಹೇಗಿದ್ದವು ಎನ್ನುವುದನ್ನು ತೋರಿಸಿದ ‘ಸಿನಿಮಾ’ ಅದು.

 1948ರಲ್ಲಿ ಗಾಂಧೀಜಿಯವರು ಹತ್ಯೆಯಾದ 20 ವರ್ಷಗಳ ಬಳಿಕ ‘ಮಹಾತ್ಮ: ಲೈಫ್‌ ಆಫ್‌ ಗಾಂಧಿ, 1869–1948’ ಎನ್ನುವ ಸುಮಾರು ಐದು ಗಂಟೆಗಳ ಸಾಕ್ಷ್ಯಚಿತ್ರವೊಂದು ತೆರೆಗೆ ಬಂತು. ಗಾಂಧಿ ಸ್ಮಾರಕ ನಿಧಿಯಿಂದ ತಯಾರಾದ ಸಿನಿಮಾವದು. ಭಾರತ ಸರಕಾರದ ಫಿಲಂ ಡಿವಿಷನ್‌ ಕೂಡಾ ಕೈಜೋಡಿಸಿತ್ತು. ನ್ಯೂಸ್‌ ರೀಲ್‌ ಮತ್ತು ಹಳೆಯ ಪ್ರಿಂಟ್‌ಗಳೇ ಹೆಚ್ಚಿದ್ದರೂ ಇದೊಂದು ಸ್ವಗತಾರ್ಹ ಸ್ವದೇಶೀ ಪ್ರಯತ್ನವಾಗಿತ್ತು. ಈ ಸಾಕ್ಷ್ಯಚಿತ್ರದ ವಿವಿಧ ಅವಧಿಯ, ವಿವಿಧ ರೂಪದ ಅವತರಣಿಕೆಗಳು ಬಳಿಕ ವಿವಿಧ ಭಾಷೆಗಳಲ್ಲಿ ಬಂದವು.   

ಇವತ್ತಿಗೂ ಹೆಚ್ಚಿನವರ ಮನಸ್ಸಿನಲ್ಲಿ ಉಳಿದಿರುವ ಎರಡು ಗಾಂಧಿ ಸಿನಿಮಾಗಳೆಂದರೆ, ರಿಚರ್ಡ್‌ ಅಟೆನ್‌ಬರೋ ಅವರ ‘ಗಾಂಧಿ’ (1982) ಮತ್ತು ಶ್ಯಾಮ್‌ ಬೆನೆಗಲ್‌ ನಿರ್ದೇಶನದ ‘ದಿ ಮೇಕಿಂಗ್‌ ಆಫ್‌ ಗಾಂಧಿ’ (1996). ಅಟೆನ್‌ಬರೋ ಅವರ ಚಿತ್ರದಲ್ಲಿ ನಟಿಸಿದ ಬೆನ್‌ ಕಿಂಗ್‌ಸ್ಲೆ ಇವತ್ತಿಗೂ ಹೊಸ ತಲೆಮಾರಿನ ಭಾರತೀಯರ ಚಿತ್ತಭಿತ್ತಿಯಲ್ಲಿ ಸ್ಥಿರವಾಗಿದ್ದಾರೆ. ಗಾಂಧಿಯವರು ಬ್ಯಾರಿಸ್ಟರ್‌ ಆದದ್ದರಿಂದ ಹಿಡಿದು ಮಹಾತ್ಮ ಆದಲ್ಲಿವರೆಗಿನ ಗಾಂಧೀ ಜೀವನವನ್ನು ತೆರೆದಿಟ್ಟ ಶ್ಯಾಮ್‌ ಬೆನೆಗಲ್‌ ಅವರ ಸಿನಿಮಾ ಹಿಂದಿಯಲ್ಲಿ ‘ಗಾಂಧೀ ಸೆ ಮಹಾತ್ಮ ತಕ್‌’ ಎಂಬ ಹೆಸರಿನಲ್ಲಿ ಹೊರಬಂತು.

ಆ ಬಳಿಕ ಗಾಂಧಿಯನ್ನು ಬೆಳ್ಳಿತೆರೆಯ ಮೇಲೆ ತೆರೆದಿಡುವ ಹಲವು ಪ್ರಯತ್ನಗಳು ನಡೆದವು. ನಟ ಮೋಹನ್‌ ಗೋಖಲೆ ಅಭಿನಯದ ‘ಡಾ. ಬಾಬಾಸಾಹೇಬ ಅಂಬೇಡ್ಕರ್‌’ ಸಿನಿಮಾದಲ್ಲಿ ಗಾಂಧಿಯನ್ನು ನೆಗೆಟಿವ್ ನೆರಳಿನಲ್ಲಿ ನೋಡಲಾಯಿತು. ‘ಹೇ ರಾಮ್‌’ ಚಿತ್ರದಲ್ಲಿ ನಾಸಿರುದ್ದೀನ್‌ ಶಾ, ಗಾಂಧಿಯನ್ನು ಅಭಿನಯಿಸಿದರು. ‘ಜಿನ್ನಾ’ ಸಿನಿಮಾದಲ್ಲಿ ಶ್ಯಾಮ್‌ ದಸ್ತೂರ್‌ ಗಾಂಧಿಯನ್ನು ಅನಾವರಣಗೊಳಿಸಿದರು. ‘ಲೆಜೆಂಡ್‌ ಆಫ್‌ ಭಗತ್‌ಸಿಂಗ್‌’, ‘ವೀರ್‌ ಸಾವರ್ಕರ್‌’, ‘ನೇತಾಜಿ ಸುಭಾಶ್‌ಚಂದ್ರ ಬೋಸ್‌: ದಿ ಫಾರ್‌ಗಾಟನ್‌ ಹೀರೊ’, ‘ಸರ್ದಾರ್‌’, ‘ಮೈನೆ ಗಾಂಧಿ ಕೊ ನಹೀ ಮಾರಾ’ ಮಂತಾಗಿ ಹಲವು ಸಿನಿಮಾಗಳಲ್ಲಿ ಗಾಂಧಿ ಮತ್ತೆ ಮತ್ತೆ ಬಂದರು. ಗಾಂಧಿಯಿಲ್ಲದೆ ಈ ಸಿನಿಮಾಗಳು ಪೂರ್ಣಗೊಳ್ಳಲು ಸಾಧ್ಯವಿರಲಿಲ್ಲ ಎನ್ನುವುದು ನಿಜ.

2007ರಲ್ಲಿ ಅನಿಲ್‌ ಕಪೂರ್‌ ನಿರ್ಮಿಸಿದ ‘ಗಾಂಧಿ, ಮೈ ಫಾದರ್‌’, ಮಗ ಹರಿಲಾಲನ ಕಣ್ಣಿನಲ್ಲಿ ಗಾಂಧಿಯನ್ನು ನೋಡಿದ ವಿಭಿನ್ನ ಪ್ರಯತ್ನ. ಬಾಲಿವುಡ್‌ನ ಕಮರ್ಷಿಯಲ್‌ ನಿರ್ದೇಶಕರೂ ಗಾಂಧಿಯ ಪ್ರಭಾವದಿಂದ ಹೊರತಾಗಿಲ್ಲ. ಗಾಂಧಿಗಿರಿಯನ್ನು ಕಮರ್ಷಿಯಲ್‌ ಚೌಕಟ್ಟಿನ ಕಥೆಗಳಲ್ಲಿ ಹೆಣೆದ ‘ಲಗೇ ರಹೊ ಮುನ್ನಾಭಾಯಿ’ ಈ ನಿಟ್ಟಿನಲ್ಲಿ ನೆನಪಿಗೆ ಬರುವ ಚಿತ್ರ.

ಕನ್ನಡದಲ್ಲಿ ಗಾಂಧೀಜಿ ನೆನಪಾಗುವ ಸಿನಿಮಾ ಎಂದರೆ ಗಿರೀಶ ಕಾಸರವಳ್ಳಿಯವರ ‘ಕೂರ್ಮಾವತಾರ.’ ಕುಂವೀ ಅವರ ಕಥೆ ಆಧರಿಸಿದ ಈ ಸಿನಿಮಾ ಗಾಂಧಿಯನ್ನು ನಿಂತು ನೋಡುವ ಅಂಚು ವಿಶಿಷ್ಟವಾದದ್ದು. ನಿವೃತ್ತಿಯ ಅಂಚಿನಲ್ಲಿರುವ ಗುಮಾಸ್ತನೊಬ್ಬ ನಾಟಕದಲ್ಲಿ ಗಾಂಧಿ ಪಾತ್ರವನ್ನು ಅಭಿನಯಿಸಬೇಕಾದ ಅನಿವಾರ್ಯತೆಯ ಚಿತ್ರವದು. ಈ ಸಲದ ಬೆಂಗಳೂರು ಚಿತ್ರೋತ್ಸವದಲ್ಲಿ ಗಾಂಧಿಯನ್ನು ಮುಟ್ಟುವ ಹೊಸ ಪ್ರಯತ್ನವೊಂದು ಪ್ರದರ್ಶನ ಕಾಣುತ್ತಿರುವುದು ಕುತೂಹಲಕರ. ನಿರ್ದೇಶಕ ನಾಗನಾಥ್‌ ಜೋಶಿಯವರ ಇನ್ನೂ ಬಿಡುಗಡೆಯಾಗದ ‘ಗಾಂಧಿ ದೇವಿ’ ಎನ್ನುವ ಈ ಚಿತ್ರದಲ್ಲಿ ಹಿರಿಯ ಸಾಹಿತಿ ಜಿ. ರಾಮಕೃಷ್ಣ ಅವರು ಗಾಂಧಿಯ ಪಾತ್ರವನ್ನು ಮಾಡಿದ್ದಾರೆ! 

ಜಗತ್ತಿಗೇ ಸಿನಿಮಾದ ಹುಚ್ಚು ಹಿಡಿಸಿದ ಚಾರ್ಲಿ ಚಾಪ್ಲಿನ್‌ರನ್ನು ಲಂಡನ್ನಿನಲ್ಲಿ ಎರಡನೇ ದುಂಡುಮೇಜಿನ ಸಭೆಗೆ ಹೋದಾಗ ಗಾಂಧಿ ಭೇಟಿಯಾಗುತ್ತಾರೆ. ಚಾ‍ಪ್ಲಿನ್‌ ಅವರ ‘ಮಾಡರ್ನ್‌ ಟೈಮ್ಸ್‌’ ಯಂತ್ರನಾಗರಿಕತೆಯ ಅಮಾನವೀಯತೆಯನ್ನು ಎತ್ತಿ ತೋರುವ ಸಿನಿಮಾ. ಯಂತ್ರಗಳ ವಿಷಯದಲ್ಲಿ ಇಬ್ಬರಿಗೂ ಸಾಮ್ಯತೆ ಇದೆ ಎನ್ನುವುದು ಕುತೂಹಲಕರ. ಆ ಭೇಟಿಯ ಬಳಿಕ ಚಾಪ್ಲಿನ್‌ ಹೇಳಿದ್ದು– ಗಾಂಧಿಯವರದ್ದು ಶ್ರೇಷ್ಠ ವ್ಯಕ್ತಿತ್ವ. ಅವರೊಬ್ಬ ಶ್ರೇಷ್ಠ ಅಂತರರಾಷ್ಟ್ರೀಯ ವ್ಯಕ್ತಿ. ಅವರೊಬ್ಬ ಅತ್ಯಂತ ನಾಟಕೀಯ ವ್ಯಕ್ತಿಯೂ ಹೌದು.!’  

ಸಿನಿಮಾ ಅಂದರೆ ಡ್ರಾಮಾ. ಸಿನಿಮಾ ಅಂದರೆ ರೋಮಾಂಚನ. ಗಾಂಧೀಜಿಯ ಜೀವನದಲ್ಲಿ ಅದೆಷ್ಟೊಂದು ನಾಟಕೀಯ ಘಟನೆಗಳಿವೆ, ಅದೆಷ್ಟೊಂದು ರೋಮಾಂಚಕ ಸಂಗತಿಗಳಿವೆ. ಹೀಗೆ ನೋಡಿದರೆ ಗಾಂಧಿ ನಮ್ಮ ಚಿತ್ರನಿರ್ದೇಶಕರನ್ನು ಇನ್ನಷ್ಟು ಕಾಡಬೇಕಿತ್ತು. ಭಾರತೀಯ ಭಾಷೆಗಳಲ್ಲಿ ಗಾಂಧಿಯನ್ನು ಕುರಿತು ಸಾಕಷ್ಟು ಸಿನಿಮಾಗಳು ಬಂದಿಲ್ಲವೆಂದೇ ಹೇಳಬೇಕು. ಇಡೀ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯ ಸಿನಿಮಾಗಳನ್ನು ಮಾಡುವ ದೇಶ ನಮ್ಮದು. ಸಾವಿನ ಬಳಿಕವೂ ಇಡೀ ದೇಶದ ಅಂತರಾತ್ಮವನ್ನು ಕಾಡುತ್ತಿರುವ ವ್ಯಕ್ತಿತ್ವವದು. ಪೋಸ್ಟರ್‌ನಿಂದ ಗಾಂಧಿಯ ರಕ್ತ ಸೋರುವ ಕ್ರಿಯೆ ನಮ್ಮನ್ನು ಗಾಢವಾಗಿ ತಟ್ಟದ ಕಾಲಘಟ್ಟವನ್ನು ತಲುಪಿರುವ ನಾವು, ಗಾಂಧಿಯ ಕುರಿತು ಇನ್ನಷ್ಟು ಸಿನಿಮಾಗಳನ್ನು ಮಾಡಬೇಕಾದ ಅಗತ್ಯವಿದೆ. ಹೊಸ ತಲೆಮಾರು ಪ್ರೀತಿಯಿಂದ ಅಪ್ಪಿಕೊಂಡಿರುವ ಹೊಸ ತಂತ್ರಜ್ಞಾನದ ಮೂಲಕ ಗಾಂಧಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳುವುದು ಸುಲಭ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !