ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀವಾದಿಯ ಸ್ವಗತ

Last Updated 18 ಫೆಬ್ರುವರಿ 2019, 12:22 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರ ಹಳ್ಳಿ ಹಳ್ಳಿಗಳಲ್ಲಿ ಸಾರಾಯಿ ನಿಷೇಧ ಮಾಡುತ್ತದೆ ಎಂಬ ಮಾತಿದೆಯಲ್ಲ? ಅದೇನಾಯಿತು? ಇನ್ನೂ ಪ್ರಸ್ತಾವದ ಹಂತದಲ್ಲೇ ಇದೆ. ಅದರ ವಿಚಾರವಾಗಿ ಎಲ್ಲ ಮಾಧ್ಯಮಗಳು ಪ್ರಚಾರ ಮಾಡಬೇಕು.

ಬಿಹಾರದಲ್ಲಿ ನಿತೀಶ್‌ಕುಮಾರ್‌ ಏಕಾಏಕಿ ಸಾರಾಯಿ ನಿಷೇಧ ಮಾಡಿದರು. ನಿಷೇಧ ಮಾಡಿದ ಮೇಲೆ ಸರ್ಕಾರದ ಆದಾಯ ಹೆಚ್ಚಾಗಿದೆ ಎನ್ನುತ್ತಾರೆ ಅವರು. ಜನ ಹಣವನ್ನು ಉಳಿಸುತ್ತಿದ್ದಾರೆ. ಅದರಿಂದ ಬಟ್ಟೆ, ಪಾತ್ರೆ ಖರೀದಿಸುತ್ತಿದ್ದಾರೆ. ಚೆನ್ನಾಗಿ ಊಟ ಮಾಡುತ್ತಿದ್ದಾರೆ. ಅದಕ್ಕೆ ಈಗ ಕಲ್ಯಾಣ ರಾಜ್ಯ (ವೆಲ್‌ಫೇರ್‌ ಸ್ಟೇಟ್‌) ಎಂದು ಹೆಸರಿದೆ. ವೆಲ್‌ಫೇರ್‌ ಎಂದರೆ ಜನರ ಹಿತಚಿಂತನೆ.

ಸಾರಾಯಿ, ಮದ್ಯ ಸೇವನೆಯಿಂದ ಪರಿವಾರಗಳು ಧ್ವಂಸವಾಗುತ್ತವೆ. ಈ ಬಗ್ಗೆ ಬರೆಯೋಣ ಎಂದುಕೊಂಡಿದ್ದೇನೆ. ಹೆಂಡ ಮಾರಿದ ಹಣದಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅದು ಅವರ ತಲೆಗೆ ಹತ್ತುತ್ತದೆಯೇ?

ಎಲ್ಲಕ್ಕಿಂತ ಮೊದಲು ಹೆಂಡ ನಿಲ್ಲಿಸಿದವರು ರಾಜಗೋಪಾಲಾಚಾರಿ. ಪ್ರಶ್ನೆ ಬಂತು– ‘ಹಣವೆಲ್ಲ ಹೋಗುತ್ತದೆಯಲ್ಲಾ?’

‘ನನ್ನ ಬಳಿ ಅದಕ್ಕೆ ವ್ಯವಸ್ಥೆ ಇದೆ’ ಎಂದರವರು.

‘ಎಂಥ ವ್ಯವಸ್ಥೆ ಇದೆ?’

ಅವರು ಹೇಳಿದರು– ‘ನಾನು ಸೇಲ್ಸ್‌ ಟ್ಯಾಕ್ಸ್‌ ಹಾಕ್ತೀನಿ. ಜನ ಬಟ್ಟೆ, ಪಾತ್ರೆ ಖರೀದಿಸಿದರೆ ಸೇಲ್ಸ್ ಟ್ಯಾಕ್ಸ್‌ ಹಾಕ್ತೀನಿ. ಆ ಹಣದಿಂದ ಬೊಕ್ಕಸವನ್ನು ತುಂಬಿಸಿಕೊಳ್ತೀನಿ’ ಎಂದರು. ಹೀಗೆ ಸೇಲ್ಸ್‌ ಟ್ಯಾಕ್ಸ್ ಶುರು ಮಾಡಿದವರು ರಾಜಗೋಪಾಲಚಾರಿ.

ಈಗ, ಆ ಸೇಲ್ಸ್‌ ಟ್ಯಾಕ್ಸ್ ಹಣವನ್ನೂ ತಿನ್ನುತ್ತಿದ್ದಾರೆ, ಹೆಂಡದ ಹಣವೂ ಬೇಕೆನ್ನುತ್ತಿದ್ದಾರೆ! ಜನ ಒಳ್ಳೆಯಆಹಾರ ತಿನ್ನಲಿ. ಉತ್ತಮ ಬಟ್ಟೆ ಧರಿಸಲಿ, ಒಳ್ಳೆಯ ಪುಸ್ತಕಗಳನ್ನು ಓದಲಿ. ಅದರ ಮೂಲಕ ಹಣ, ಆರೋಗ್ಯ ಹೆಚ್ಚಲಿ. ಇದು ಕರ್ನಾಟಕದ ಬಗ್ಗೆ ನನ್ನ ಮುಖ್ಯ ಕಾಳಜಿ.

***

ಸ್ವತಂತ್ರ ಭಾರತದಲ್ಲಿ ಹಿಂಸೆ ಇರಬಾರದು. ಯಾರೂ ಉಪವಾಸ ಮಲಗಬಾರದು. ಪ್ರತಿಯೊಂದು ಕೈಗೂ ಕೆಲಸ ಸಿಗಬೇಕು. ಮದ್ಯಪಾನ ನಿಷೇಧವಾಗಬೇಕು. ಮದ್ಯಪಾನವೆಂದರೆ ಅದೊಂದೇ ಅಲ್ಲ, ಬೀಡಿ, ಸಿಗರೇಟು, ತಂಬಾಕು ಕೂಡ. ಈ ಮಾದಕ ವಸ್ತುಗಳ ಹಾವಳಿಯೂ ಹೆಚ್ಚಿದೆ. ಪೂರ್ತಿ ದೇಶದಲ್ಲಿ ಇವೆಲ್ಲ ನಿಲ್ಲಬೇಕು.

ಪ್ರಪಂಚದಲ್ಲಿ ಭಾರತಕ್ಕೆ ದೊಡ್ಡ ಹೆಸರಿದೆ. ಆದರೆ ಭಾರತದಲ್ಲಿ ಭ್ರಷ್ಟಾಚಾರವಿದೆ ಎಂದು ಎಲ್ಲೆಡೆ ಹೇಳುತ್ತಾರೆ. ಒಬ್ಬ ತಿಂತಾನೆ ಹಣ. ನಮಗೆಲ್ಲ ಕೆಟ್ಟ ಹೆಸರು.

ಗಾಂಧೀ ಕನ್ನಡಕವನ್ನು ಹಾಕಿಕೊಂಡ ಮಾತ್ರಕ್ಕೆ ಭಾರತ ಸ್ವಚ್ಛವಾಗುವುದಿಲ್ಲ ಎಂದು ನಾನು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ.

***

ನಿಮ್ಮ ದಿನಚರಿ ಏನು ಎಂದು ಹಲವರು ಕೇಳುತ್ತಾರೆ. 90ರ ವಯಸ್ಸಿನಲ್ಲಿ ಇಷ್ಟೊಂದು ಚಟುವಟಿಕೆಯಿಂದ ಇರಲು ಏನು ಕಾರಣ, ಯಾವ ಪ್ರೇರಣೆ ಎಂಬುದು ಅವರ ಕುತೂಹಲ.ಮೊದಲು ರೈಲಿನಲ್ಲಿ ಹೇಗೆಂದರೆ ಹಾಗೇ ನುಗ್ಗುತ್ತಿದ್ದೆ. ನಿಂತೇ ಪ್ರಯಾಣಿಸುತ್ತಿದ್ದೆ, ಈಗ ಟಿಕೆಟ್‌ ರಿಸರ್ವ್‌ ಮಾಡಿಸಿ ಹೋಗುತ್ತೇನೆ.

ಆದರೂ ಈ ವಯಸ್ಸಿನಲ್ಲಿ ಇಷ್ಟೊಂದು ಚಟುವಟಿಕೆಯಿಂದ ಇರುವವರು ಬಹಳ ಕಡಿಮೆ ಎಂದು ನನ್ನ ಕಡೆಗೆ ಅಚ್ಚರಿ
ಮತ್ತು ಮೆಚ್ಚುಗೆಯಿಂದ ನೋಡುವವರಿಗೆ ಒಂದು ಮಾತು ಹೇಳುತ್ತೇನೆ. ತೊಂಬತ್ತು ವರ್ಷ ಏನೂ ದೊಡ್ಡದಲ್ಲ. ಶಿವ
ಕುಮಾರ ಸ್ವಾಮೀಜಿ 111 ವರ್ಷ ಬದುಕಿದ್ದರು. ಆರೋಗ್ಯ ತಪಾಸಣೆಗೆ ಚೆನ್ನೈಗೆ ಹೋದಾಗ ಏರ್‌ಪೋರ್ಟ್‌ನಲ್ಲಿ ಗಾಲಿ
ಕುರ್ಚಿ ಬೇಡ ಎಂದ ಸ್ವಾಮೀಜಿ ನಡೆದೇ ಹೋದರಂತೆ.

***

1942ರಲ್ಲಿ ಪೊಲೀಸ್‌ ನನ್ನನ್ನು ಹಿಡ್ಕೊಂಡು ಹೋದ. ಈಗಿನ ಭಾರತ ಸೇವಾದಳ ಆಗ ಹಿಂದೂಸ್ತಾನಿ ಸೇವಾದಳವಾಗಿತ್ತು. ಅದನ್ನು ಬ್ರಿಟಿಷರು ನಿಷೇಧಿಸಿದ್ದರು. 1943ರಲ್ಲಿ ಸೇವಾದಳಕ್ಕೆ ಸೇರಿ ನಿಕ್ಕರ್‌ ಧರಿಸಲು ಆರಂಭಿಸಿದೆ. ಈಗಲೂ ಅದೇ ನನಗೆ
ಅಚ್ಚುಮೆಚ್ಚು. ಒಂದು ಸಾರಿ ಲಂಡನ್‌ಗೆ ಹೋದಾಗ ಮಾತ್ರ ಉಲ್ಲನ್‌ ಪ್ಯಾಂಟ್‌ ಧರಿಸಿ ಹೋಗಿದ್ದೆ. ಅದೇನೂ ಕೆಲಸಕ್ಕೆ ಬರಲಿಲ್ಲ.

ಸಮವಸ್ತ್ರದಲ್ಲಿ ನಿಕ್ಕರ್‌ ಬದಲಿಗೆ ಈಗ ಪ್ಯಾಂಟ್‌ ಬಂದಿದೆ. ಭಾರತ ಸೇವಾದಳ, ಆರ್‌ಎಸ್‌ಎಸ್‌ ಎಲ್ಲವೂ ನಿಕ್ಕರಿನಿಂದ ಪ್ಯಾಂಟಿಗೆ ಬಂದಿವೆ. ನಂದು ಮಾತ್ರ ಹಂಗೇ ನಡೀತಿದೆ. ಅದಕ್ಕೇನೂ ದೊಡ್ಡ ಕಾರಣವಿಲ್ಲ. ಕೂತ್ಕೊಳ್ಳೋಕೆ, ಓಡೋಕೆ, ನಡಿಯೋಕೆ, ಸುಲಭ. ಎಲ್ಲಕ್ಕೂ ಅನುಕೂಲ. ಈಗಷ್ಟೇ ಒಂದು ನಿಕ್ಕರನ್ನು ಒಗೆದು ಒಣಗಲು ಹಾಕಿದೆ.

ಮೊದಲು ನನ್ನ ಪ್ರಯಾಣ ಸಾಮಗ್ರಿ ಬಹಳ ಕಡಿಮೆ ಇರೋದು. ಈಗ ಹೆಚ್ಚಾಗ್ತಿದೆ. ಮೊದಲು ರೈಲ್ವೆಯವರು ‘ಥರ್ಡ್‌ ಕ್ಲಾಸ್‌ ಪಾಸ್‌ ಕೊಡ್ತೀವಿ’ ಎಂದರು. ‘ಆದರೆ ನಿಮ್ಮ ಜೊತೆಗೆ ಒಬ್ಬರು ಇರಬೇಕು’ ಎಂದೂ ಅವರೇ ಹೇಳಿದರು. ‘ನಿಮಗೆ ಥರ್ಡ್‌ ಕ್ಲಾಸ್‌ ಪಾಸ್‌ ಆಗುವುದಿಲ್ಲ. ಫಸ್ಟ್‌ ಕ್ಲಾಸ್‌ ಪಾಸ್‌ ಕೊಡ್ತೀವಿ’ ಎಂದರು. ಅಲ್ಲಿಂದ ಅಭ್ಯಾಸ ಕೆಟ್ಟಿತು.

ನನ್ನ ಜೊತೆಗೆ ಒಂದು ಚೀಲದಲ್ಲಿ ಟೈಪ್‌ರೈಟರ್‌, ಕ್ಯಾಮೆರಾ, ಚರಕಾ ಎಲ್ಲವೂ ಇರ್ತಿದ್ದವು. ಈಗ ಚೀಲಗಳು ಹೆಚ್ಚಾಗಿವೆ. ತುಂಬಾ ಜನ ಈಗ ಕೇಳುತ್ತಾರೆ. ಒಬ್ಬರೇ ಪ್ರಯಾಣಿಸುತ್ತೀರಾ? ನಾನು ಹೇಳುತ್ತೇನೆ. ಅನಂತಪುರದಲ್ಲಿ ರೈಲು ಹತ್ತಿದರೆ ಅಲ್ಲಿ
ಒಂದು ಸಾವಿರ ಜನ ಇರ್ತಾರೆ. ನಾನು ಹೇಗೆ ಒಬ್ಬನೇ ಹೋಗಲಿ? ಆದರೆ, ಬಸ್ಸು, ರೈಲು, ವಿಮಾನ ಹತ್ತುವಾಗ ಮತ್ತು ಇಳಿಯುವಾಗ ಒಬ್ಬರ ಸಹಾಯ ಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇನೆ.

***

ನಾನು ಎಷ್ಟು ದೇಶ ಸುತ್ತಿರಬಹುದು. ಮೊದಲು ಆ ಆಸೆ ಇತ್ತು. ದೇಶಗಳನ್ನು ಸುತ್ತಬೇಕು ಎಂಬ ಆಸೆ. ಇದುವರೆಗೆ ಮೂವತ್ತು ದೇಶಗಳನ್ನು ಸುತ್ತಿರಬಹುದು. ಪ್ರತಿ ವರ್ಷವೂ ನಾನು ಅಮೆರಿಕದಲ್ಲಿ ಗಾಂಧಿ ಯುವ ಶಿಬಿರವನ್ನು ನಡೆಸುತ್ತೇನೆ. ಈಗ ನಡೆಸಬೇಕೆಂದಿರುವುದು ಮೂವತ್ತೈದನೇ ಶಿಬಿರ. ನಮ್ಮ ದೇಶದಲ್ಲಿ ಮಳೆಗಾಲ ಶುರುವಾದರೆ ಅಲ್ಲಿ ನನ್ನ ಶಿಬಿರ ಶುರುವಾಗುತ್ತದೆ. ಇಲ್ಲಿ ನಡೆಸಲು ಆಗುವುದಿಲ್ಲ ಎಂದು ಅಲ್ಲಿ.

ಅಮೆರಿಕದಲ್ಲಿರುವ ನನ್ನ ಅನಿವಾಸಿ ಭಾರತೀಯ ಸ್ನೇಹಿತರು ಶಿಬಿರವನ್ನು ಸಂಘಟಿಸುತ್ತಾರೆ. ನಾನು ಅಲ್ಲಿ ಹೋಗಿ ನೇತೃತ್ವ ವಹಿಸುತ್ತೇನೆ. ಊಟ ಹಾಕಿ, ದಕ್ಷಿಣೆ ಹತ್ತು ಲಕ್ಷ ಗೌರವ ಧನವನ್ನೂ ಕೊಡುತ್ತಾರೆ.

ಇಂಡಿಯಾದಲ್ಲಿ ಆ ಪದ್ಧತಿ ಇಲ್ಲ. ಆದರೆ ಇಲ್ಲಿನ ಕೆಲಸಕ್ಕೆ ಅಲ್ಲಿನ ಹಣವನ್ನು ಬಳಸುತ್ತೇನೆ. ಶಿಬಿರಗಳನ್ನು ನಡೆಸುತ್ತೇನೆ.

***

‘ಅನೇಕತೆಯಲ್ಲಿ ಏಕತೆ’ ಎಂಬುದು ಬರೀ ಆಡುವ ಮಾತಲ್ಲ. ಅನುಭವ ಪಡೆಯಬೇಕು. ನಮ್ಮ ಗಾಂಧಿ ಕ್ಯಾಂಪಿಗೆ ಬಂದು ನೋಡಿದರೆ ಅದು ಗೊತ್ತಾಗುತ್ತದೆ. 4 ಸಾವಿರ ಜನ ಎಲ್ಲ ಧರ್ಮದ ಪ್ರಾರ್ಥನೆಗಳನ್ನು ಏಕಕಾಲಕ್ಕೆ ಮಾಡುತ್ತಾರೆ. ನಾನು ಹಿಂದೂ, ನಾನು ಮುಸಲ್ಮಾನ ಎಂಬ ಗೋಡೆಗಳು ಅಲ್ಲಿ ಮುರಿಯುತ್ತವೆ. ಹದಿನೆಂಟು ಭಾಷೆಗಳ ಕಾರ್ಯಕ್ರಮಗಳು ನಡೆಯುತ್ತವೆ.
ಮರು ಪ್ರಶ್ನೆಯೇ ಇಲ್ಲ. ಭಾರತ ಸ್ವತಂತ್ರಗೊಂಡ ಮೇಲೆ ನಾಲ್ಕು ದೇಶಗಳು ಭಾಷೆಯ ಕಾರಣದಿಂದ ಮುರಿದವು. ಪಾಕಿಸ್ತಾನ, ಸೋವಿಯತ್‌ ರಷ್ಯಾ, ಯುಗೊಸ್ಲಾವಿಯಾ ಮತ್ತು ಝಕೊಸ್ಲವೇಕಿಯಾ. ಒಂದೇ ಒಂದು ದೇಶ ಸೂಡಾನ್‌ ಧರ್ಮಕಾರಣದಿಂದ ಮುರಿಯಿತು. ಭಾರತದಲ್ಲಿ ಧರ್ಮಗಳ ಏಕತೆ ಮಾತ್ರವಲ್ಲ, ಭಾಷೆಗಳ ನೆಲೆಯಿಂದಲೂ ಏಕತೆ ಏರ್ಪಡುವುದು ಅವಶ್ಯ.

ಪಾಕಿಸ್ತಾನದ ಚುನಾಯಿತ ಅಧ್ಯಕ್ಷ ಜುಲ್ಫಿಕರ್‌ ಅಲಿ ಭುಟ್ಟೊ ಅವರನ್ನು ಜೈಲಿಗೆ ಹಾಕಿದ್ದರು. ಗಾಂಧಿ ಜೈಲಿಗೆ ಹೋದರು. ಆತ್ಮಕತೆ ಬರೆದರು. ಆದರೆ, ಬುಟ್ಟೊ ಜೈಲಿಗೆ ಹೋಗಿ ‘ಇಫ್‌ ಐ ಆಮ್‌ ಅಸಾಸಿನೇಟೆಡ್‌’ ಎಂಬ ಪುಸ್ತಕ ಬರೆದರು. ಅದರಲ್ಲಿ ನಿಮಗೂ, ನಮಗೂ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ: ‘ಪಾಕಿಸ್ತಾನಕ್ಕಿಂತಲೂ ಭಾರತವು ವಿವಿಧತೆಗಳಿಂದ ತುಂಬಿರುವ ದೇಶ’. ಎರಡನೇ ಮಾತನ್ನು ನೋವಿನಿಂದ ಹೇಳಿದರು; ‘ಒಂದೇ ಧರ್ಮದ ನನ್ನ ಪಾಕಿಸ್ತಾನ ಎಷ್ಟೊಂದು ತುಂಡಾಯಿತು. ಆದರೆ ಭಾರತದಲ್ಲಿ ಹೊಸ ಧರ್ಮಗಳು ಹುಟ್ಟಿದವು!’

‘ಇಂಡೊನೇಷ್ಯಾ ಬಿಟ್ಟರೆ ಹೆಚ್ಚು ಮುಸಲ್ಮಾನರು ಭಾರತದಲ್ಲಿದ್ದಾರೆ. ಭಾರತ ನಮ್ಮದು ಎಂದು ಹೇಳಲು ಹೊರಟರೆ, ಕ್ರೈಸ್ತರು ಹೆಚ್ಚಿರುವ ನಾಗಾಲ್ಯಾಂಡ್‌ ಮಿಜೋರಾಂ, ಮೇಘಾಲಯ ಕೂಡ ಭಾರತದಲ್ಲೇ ಇವೆ’. ಅವರ ಮೂರನೇ ಮಾತು, ಎಷ್ಟೊಂದು ದುಃಖದಿಂದ ಅವರು ಅದನ್ನು ಹೇಳಿದರು. ‘ಪ್ರಜಾಪ್ರಭುತ್ವದ ಕುರಿತು ಬಡಾಯಿ ಕೊಚ್ಚುತ್ತಲೇ ಭಾರತ ಒಂದಾಗಿದೆ. ನನ್ನ ಪಾಕಿಸ್ತಾನ ತುಂಡಾಯಿತು’. ಭಾರತದಲ್ಲಿ ಪ್ರಜಾಪ್ರಭುತ್ವ ಇದೆ ಎಂಬುದನ್ನು ಭುಟ್ಟೋ ಒಪ್ಪುವುದಿಲ್ಲ.

ಭಾರತದ ಪ್ರತಿಯೊಬ್ಬ ನಾಗರಿಕನ ಮೇಲೆ ಎಷ್ಟೊಂದು ದೊಡ್ಡ ಜವಾಬ್ದಾರಿ ಇದೆ. ಭಾರತದ ಏಕತೆ ಬಂದೂಕಿನಿಂದ ಇರುವುದಿಲ್ಲ. ಬಂದೂಕನ್ನು ಬಳಸದೇ ಇದ್ದಿದ್ದರೆ ಪಾಕಿಸ್ತಾನ ತುಂಡಾಗುತ್ತಿರಲಿಲ್ಲ. ಸಾವಿರಾರು ಬಂಗಾಲಿ ಮುಸಲ್ಮಾನರನ್ನು ಪಾಕಿಸ್ತಾನ ಕೊಂದುಹಾಕಿತು.ಅದಕ್ಕೇ, ನಮ್ಮ ಗಾಂಧಿ ಶಿಬಿರಗಳಲ್ಲಿ ಧಾರ್ಮಿಕ ಏಕತೆ ಮತ್ತು ಭಾಷಾ ಏಕತೆಗೆ ಸಮಾನ ಮಹತ್ವ ಕೊಡುತ್ತೇವೆ.

***

‘ಗಾಂಧಿ ಯುವ ಶಿಬಿರಕ್ಕೆ ಕೊಡುತ್ತಿದ್ದ ಅನುದಾನವನ್ನು ನೀವು ಪ್ರಧಾನಿಯಾದ ಬಳಿಕ ನಿಲ್ಲಿಸಿದಿರಿ’ ಎಂದು ಮೋದಿಯವರಿಗೆ ಪತ್ರ ಬರೆದೆ. ಅವರು ಕಾಳಜಿ ತಗೊಂಡು, ನನ್ನ ಪತ್ರವನ್ನು ನೀತಿ ಆಯೋಗಕ್ಕೆ ಕಳಿಸಿದರು. ‘ಯಾವ ಎನ್‌ಜಿಒಗೂ ಹಣ ಕೊಡಬಾರದು’ ಎಂದು ಆಯೋಗ ಬರೆಯಿತು. ನಾನು ಪ್ರಧಾನಿಗೆ ಮತ್ತೆ ಪತ್ರ ಬರೆದೆ– ‘ನಿಮ್ಮ ಕಾಗದ ಮತ್ತು ನನ್ನ ಕಾಗದ ನೀತಿ ಆಯೋಗದ ಕಸದ ಬುಟ್ಟಿ ಸೇರಿದೆ.’

ಸರ್ಕಾರಕ್ಕೆ ನಾನು ಹೇಳುವುದು ಇಷ್ಟೆ:ದಂಗೆಗಳಾಗುತ್ತವೆ. ಆಮೇಲೆ ಪೊಲೀಸರು ಹೋಗುತ್ತಾರೆ. ಗುಂಡು ಹಾರಿಸುತ್ತಾರೆ. ಹತ್ತು ಜನರನ್ನು ಕೊಲ್ಲುತ್ತಾರೆ. ಆಮೇಲೆ ಶಾಂತಿ ಸ್ಥಾಪನೆಗೆ ಕೋಟಿ ಖರ್ಚು ಮಾಡಲಾಗುತ್ತದೆ. ಆದರೆ ದಂಗೆಗಳು ಏಳದೇ ಇರಲು ಏನು ಮಾಡುತ್ತೀರಿ ನೀವು? ದಂಗೆ ಆದ ಮೇಲೆ ಶಾಂತಿ ಸ್ಥಾಪನೆಗೆ ಹತ್ತು ಕೋಟಿ ಖರ್ಚು ಮಾಡುವ ಸರ್ಕಾರ ದಂಗೆಗೆ ಮುನ್ನ ಹತ್ತು ಲಕ್ಷ ಏಕೆ ಖರ್ಚು ಮಾಡುವುದಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT