ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲದೊಳಡಗಿದೆ ಎಲ್ಲರ ಆರೋಗ್ಯ

Last Updated 28 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಹಳೆಗನ್ನಡ ಮತ್ತು ತೆಲುಗಿನಲ್ಲಿ ‘ಅಲ್ಲ’ ಎಂದರೆ ಶುಂಠಿ. ಬಹುಶಃ ಅದರ ತೀಕ್ಷ್ಣ ಘಾಟು, ಖಾರದ ರುಚಿಗೆ ನಿಷೇಧಾರ್ಥ ಸೂಚಕ ಪದ ‘ಅಲ್ಲ, ಇಲ್ಲ’ ಎಂಬ ಹೆಸರಿಟ್ಟೆವೋ ಏನೋ ನಾನರಿಯೆ! ಅದನ್ನು ಭಾಷಾಪಂಡಿತರೇ ವ್ಯಾಖ್ಯಾನಿಸಬೇಕಷ್ಟೆ. ನಾನು ಈಗ ಹೇಳಹೊರಟಿದ್ದು ಶುಂಠಿಯ ಆರೋಗ್ಯಪುರಾಣ ಮಾತ್ರ.

ಕ್ರಿ.ಶ. 2000ಕ್ಕೆ ಸರ್ವರಿಗೆ ಆರೋಗ್ಯ ಎಂಬ ಘೋಷಣೆ ಹೊರಡಿಸಿದ್ದು ಜಾಗತಿಕ ಆರೋಗ್ಯ ಸಂಸ್ಥೆ. ಆದರೆ ಇದೀಗ 2018 ಮುಗಿಯುತ್ತಿದೆ. ಸರ್ವರಿಗೆ ಆರೋಗ್ಯ ಲಭಿಸಿತೇ? ಆದರೆ ಶುಂಠಿಯಂತಹ ಸಂಬಾರ ಬಳಸುತ್ತ ಸರ್ವರೂ ಆರೋಗ್ಯ ಪಡೆಯಬಹುದಾದ ಸರಳ ಸಂಗತಿ ಇಂದಿಗೆ ಹೆಚ್ಚು ಪ್ರಸ್ತುತ. ಹಾಗಾಗಿಯೇ ಸಂಸ್ಕೃತಭಾಷೆಯ ಒಂದು ಅಪೂರ್ವ ಹೆಸರು ಶುಂಠಿಗೆ ಕೊಡಲಾಗಿದೆ. ‘ವಿಶ್ವಭೇಷಜ’ ಅರ್ಥಾತ್ ‘ಯುನಿವರ್ಸಲ್ ಮೆಡಿಸಿನ್’ ಎಂಬ ಪಟ್ಟ ಶುಂಠಿಯದು.

ಎಲ್ಲ ರೋಗಕ್ಕೂ ಮದ್ದು

ಮಹೌಷಧ ಎಂದರೆ ಇದೇನೇ. ಎಲ್ಲ ಬಗೆಯ ಅನಾರೋಗ್ಯದ ತಡೆ ಮತ್ತು ಚಿಕಿತ್ಸೆಗೆ ಶುಂಠಿ ಬಳಕೆ ಇತ್ತು. ಅದಕ್ಕಾಗಿಯೇ ವಿಶ್ವಭೇಷಜ ಎಂಬ ಹೆಸರು. ಶುಂಠಿಯು ಮನೆಮದ್ದಿನ ಉಪಾಯ ನಿಜ. ಬೆಂಕಿಯು ಮನೆಯನ್ನು ಸುಡಲು ಆರಂಭಿಸುವ ಮುನ್ನ ಕೇವಲ ಕಿಡಿಯ ರೂಪದಲ್ಲಿರುವುದು ತಾನೇ? ಅಂತಹ ಕಿಡಿಯನ್ನೇ ಆರಿಸಿ ಬಿಟ್ಟರೆ ಮನೆ ಸುಡದು. ಅಂತೆಯೇ ಶುಂಠಿಯ ಸಾರ್ವತ್ರಿಕ ಬಳಕೆಯಿಂದ ಕಿಡಿರೂಪದ ಅನಾರೋಗ್ಯವನ್ನು ಪ್ರಥಮ ಹಂತದಲ್ಲಿಯೇ ತಡೆಯಲಾದೀತು. ಅದು ಹೇಗೆ – ನೋಡೋಣ.

ವಿಶ್ವಭೇಷಜ ಎಂಬ ಹೆಸರಿನ ಜೊತೆಗೆ ಇನ್ನೂ ಕೆಲವು ಸಂಸ್ಕೃತಹೆಸರುಗಳು ಶುಂಠಿಗಿವೆ. ಶೃಂಗವೇರ ಎಂಬ ಹೆಸರು ಅದರ ಕೊಂಬಿನಾಕಾರದ ರಚನೆಯನ್ನು ಪರಿಚಯಿಸುತ್ತದೆ. ಆರ್ದ್ರಕ, ಆರ್ದ್ರಿಕ ಹೆಸರುಗಳು ಹಸಿಯದಾಗಿಯೇ ಶುಂಠಿಯನ್ನು ಬಳಸಬಹುದು ಎಂಬುದರ ಸೂಚಕ. ‘ಅದರಖ್’ ಎಂಬ ಹಿಂದಿಯ ಹೆಸರು ಬರಲು ಇದೇ ಮೂಲ. ಕಟುಭದ್ರಾ ಹೆಸರಿನಡಿ ಕಟು ಎಂದರೆ ಖಾರ ಎಂಬ ಅರ್ಥವಿದ್ದರೂ ಶುಭಕರ ಎಂಬ ಸೂಚ್ಯಾರ್ಥವಿದೆ. ಕಟುಕಂದ ಎಂದರೆ ಖಾರದ ಗಡ್ಡೆ ಎಂಬರ್ಥ. ನಾಗರ ಎಂಬ ಹೆಸರಿನ ಸಂಗಡ ಅಪಾ ಶಾಕ ಅಂದರೆ ಬೇಯಿಸದೇ ಬಳಸುವ ತರಕಾರಿ ಎಂಬರ್ಥ ಲಭ್ಯ.

ಯಜುರ್ವೇದದಲ್ಲಿ ಶುಂಠಿ ಬಳಕೆಯ ಸೂಕ್ತಗಳಿವೆ. ಕೌಟಲೀಯ ಅರ್ಥಶಾಸ್ತ್ರದಲ್ಲಿ ಕಾಳು ಮೆಣಸು ಮತ್ತು ಶುಂಠಿಯ ವಾಣಿಜ್ಯ ಬಳಕೆಯ ಉಲ್ಲೇಖ ಇದೆ. ಅಲ್ಲದ ಲ್ಯಾಟಿನ್ ಹೆಸರು ಗಮನಿಸಿರಿ. ಮಲೆಯಾಳ ಮೂಲದ ಇಂಜಿವೇರ್ (ಶುಂಠಿ) ‘ಝಿಂಝಿಬರ್ ಅಫಿಸಿನಾಲಿಸ್’ ಎಂದಾಯಿತು. ಆಂಗ್ಲರು ಜಿಂಜರ್ ಎಂದರು. ವಿದೇಶೀ ವಲಸಿಗರು ಮೊದಲು ಕಾಲಿಟ್ಟಿದ್ದು ಮಲೆಯಾಳದ ಬಂದರುಗಳಿಗೆ ಎಂಬುದನ್ನೂ ಗಮನಿಸಿರಿ. ಹಾಗಾದರೆ ಐದು ನೂರು ವರ್ಷಗಳ ಹಿಂದೆಯೇ ಪಶ್ಚಿಮ ಘಟ್ಟ ಸಾಲಿನ ಶುಂಠಿಯ ಘಾಟು ಯುರೋಪು ಖಂಡದ ವರೆಗೆ ಹಬ್ಬಿತ್ತಲ್ಲ!

ನಿಜ, ಇಂದು ನಾವು ಕೃಷಿ ಮಾಡುವ ಶುಂಠಿಯು ವಾಸ್ತವವಾಗಿ ಕಾಡಿನ ಮೂಲದ್ದು. ಅದರ ಸೋದರ ಅರಿಸಿನದ ಕಥೆಯೂ ಹಾಗೆಯೇ. ಇಂದು ಇವೆರಡನ್ನೂ ಡೊಮೆಸ್ಟಿಕೇಶನ್, ಎಂದರೆ ನಾಡಿನ ಬೆಳೆಯಾಗಿ ಪರಿವರ್ತಿಸಿಕೊಂಡಿದ್ದೇವೆ. ಒಂದು ಐತಿಹ್ಯದ ಪ್ರಕಾರ ಇಂದಿನ ಶೃಂಗೇರಿಯ ಹೆಸರು ಅಲ್ಲಿ ಹೇರಳವಾಗಿ ದೊರಕುತ್ತಿದ್ದ ಕಾಡು ಶುಂಠಿಯ ಜೊತೆಗೆ ತಳುಕು ಹಾಕಿಕೊಂಡಿದೆ. ಘಟ್ಟ ಸಾಲಿನ ಶುಂಠಿ ಮತ್ತು ಕಾಳುಮೆಣಸು ಘಟ್ಟ ಇಳಿದು ಕರಾವಳಿಯ ರೇವುಗಳಿಂದ ಐದುನೂರು ವರ್ಷ ಪೂರ್ವದಲ್ಲಿಯೂ ವಿದೇಶದ ಹಡಗು ಸೇರುತ್ತಿತ್ತು. ಇಂದು ಕಾಡಿನ ನೆಲೆಗಳಲ್ಲಿ ಶುಂಠಿಯ ಮೂಲತಳಿ ಸಂಪೂರ್ಣ ಬರಿದಾಗಿದೆ. ನೆಟ್ಟು ಬೆಳಸಲೂ ಅದೇ ಘಟ್ಟಸಾಲಿನ ಕಾಡುಗಳನ್ನು ಕಡಿದು ಬರಿದು ಮಾಡುವ ಕಸುಬು ಮಾತ್ರ ಪರಿಸರದ ಆರೋಗ್ಯಕ್ಕೆ ಪೂರಕವಾಗಿಲ್ಲ ಎಂಬುದನ್ನು ನೆನಪಿಡೋಣವೆ.

ಇಂದು ಜಾಗತಿಕ ಆರೋಗ್ಯ ಸಂಸ್ಥೆ ಹೊಸ ಘೋಷಣೆ ಹುಟ್ಟುಹಾಕಿದೆ. ಅದು ಒನ್ ಹೆಲ್ತ್ ಎಂಬ ಘೋಷಣೆ. ಪರಿಸರ, ಸಾಕುಪ್ರಾಣಿಗಳು ಮತ್ತು ಮನುಷ್ಯರ ಆರೋಗ್ಯ ಒಂದಕ್ಕೊಂದು ಪೂರಕ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ಘಟ್ಟದ ಕಾಡು ಕಡಿದು ಬರಿದು ಮಾಡಿ ಅಲ್ಲಿ ಶುಂಠಿ ಬೆಳೆದು ಯದ್ವಾ ತದ್ವಾ ಕೀಟನಾಶಕ ಬಳಸಿದ ಶುಂಠಿ ಮಾತ್ರ ಆರೋಗ್ಯಕ್ಕೆ ಪೂರಕ ಅಲ್ಲ ಎಂಬುದನ್ನೂ ನೆನಪಿಡಿರಿ. ಸಾವಯವ ಗೊಬ್ಬರದಲ್ಲಿ ಬೆಳೆಸಿದ ಶುಂಠಿ ಬಳಸಿರಿ. ಮನೆಯ ತಾರಸಿತೋಟಕ್ಕೂ ಸೈ. ಸಾವಯವ ಏರುಮಡಿಯ ಕೃಷಿಗೂ ಜೈ. ಹೀಗೆ ಶುಂಠಿಯ ಕೃಷಿ ಮಾಡಿರಿ. ಅಡುಗೆಗೆ ಮಾತ್ರ ಅಲ್ಲ; ಮನೆಯ ಸುಲಭ ಚಿಕಿತ್ಸೆಗೂ ಬಳಸಿರಿ.

ರಾಮಬಾಣ

ಚರಕಸಂಹಿತೆಯು ಕಫತೊಂದರೆಗೆ ರಾಮಬಾಣ ಎಂದು ಹಸಿ ಶುಂಠಿಯ ಗುಣಗಾನ ಮಾಡಿದೆ. ಒಂದು ಮಾತನ್ನು ನೆನಪಿಡಿರಿ. ಇಂತಹ ಮನೆಯ ಮದ್ದುಗಳು ರೋಗಾರಂಭದ ದಿನಗಳಲ್ಲಿಯೇ ಬಳಕೆಗೆ ಯೋಗ್ಯ. ಕಿಡಿಯಿದ್ದಾಗಲೇ ಬೆಂಕಿಯ ಉರಿ ನಂದಿಸಲಾದೀತು, ಕಿಚ್ಚು ಹೆಚ್ಚಿದಾಗ ಅಲ್ಲ. ಅತಿ ಖಾರದ ಹಸಿ ಶುಂಠಿಯು ದೇಹದೊಳಗೆ ಶೀತಲ ಗುಣ ಪ್ರಕಟಿಸುತ್ತದೆ. ಹೃದಯಕ್ಕೆ ಬಲ ಕೊಡುತ್ತದೆ. ಹೊಟ್ಟೆಯ ಹಸಿವೆಯನ್ನು ಹೆಚ್ಚಿಸುತ್ತದೆ. ದನಿ ಹೆಚ್ಚಿಸಲು ಪೂರಕ. ದೇಹದ ಬಾವು, ಅನಗತ್ಯವಾಗಿ ಸೇರಿದ ನೀರನ್ನು ಹೊರಹಾಕುತ್ತದೆ. ಗಂಟಲಿನ ರೋಗಗಳನ್ನು ಪರಿಹರಿಸುತ್ತದೆ. ಹಸಿ ಶುಂಠಿಗೆ ಆರ್ದ್ರಕ ಮತ್ತು ಒಣಗಿಸಿದ್ದಕ್ಕೆ ನಾಗರ ಎಂಬ ಹೆಸರು ರೂಢಿಯಲ್ಲಿದೆ. ಹಲವೆಡೆ ಹಸಿ ಬಳಕೆಗೆ ಉಲ್ಲೇಖವಿದೆ.

ಕೆಲವೆಡೆ ಒಣಗಿದ್ದೇ ಉತ್ತಮ. ಅಂತಹ ಜಿಜ್ಞಾಸೆ ಓದುಗರಿಗೆ ಬೇಡ. ಒಟ್ಟಿನಲ್ಲಿ ಶುಂಠಿ ಬಳಸಿರಿ. ನಿರೋಗಿಗಳಾಗಿ ನಿರಾಳವಾಗಿ ನೂರ್ಕಾಲ ಬಾಳಿರಿ. ಊಟದ ಮೊದಲ ಭಾಗದಲ್ಲಿ ಸಲಾಡ್ ತಿನ್ನುತ್ತೇವಲ್ಲ. ಹಾಗೆಯೇ ಹಸಿಶುಂಠಿಯ ಬಳಕೆ ಅತ್ಯುತ್ತಮ. ರೂಪಾಯಿ ನಾಣ್ಯ ತೂಕದ ಹಸಿ ಶುಂಠಿಯ ಚಕ್ರಾಕಾರದ ತುಣುಕು ಊಟದ ತಟ್ಟೆಯಲ್ಲಿಡಿರಿ. ಚಿಟಿಕೆ ಉಪ್ಪು ಸಹಿತ ಅಗಿದು ತಿನ್ನಿರಿ. ನಿಮ್ಮ ಲಾಲಾಸ್ರಾವದ ಹೆಚ್ಚಳ ಮತ್ತು ಊಟದ ಸಕಾಲದ ಪಚನಕ್ರಿಯೆ ಶತಸ್ಸಿದ್ಧ.

ಗ್ಯಾಸ್ಟ್ರಿಕ್ ಎಂಬ ಶ್ರೀಸಾಮಾನ್ಯರ ಭೂತೋಚ್ಚಾಟನೆಗೆ ಇದುವೆ ಸುಲಭ ಉಪಾಯ! ಹಳೆಯದಾದ ಕೀಲುಗಂಟು ನೋವಿನ ತೊಂದರೆಗೆ ಶುಂಠಿಯ ಪುಡಿಯನ್ನು ಬೆಲ್ಲದ ಸಂಗಡ ಕಲಸಿ ತಿನ್ನಿಸಬಹುದು. ಕೀಲುಬಾವು, ಉರಿಯೂತ ಮತ್ತು ನೋವು ಪರಿಹಾರಿ. ವಾಂತಿ ಮತ್ತು ವಾಕರಿಕೆಗಳ ಪರಿಹಾರಕ್ಕಿದೆ ಸುಲಭ ಗೃಹ ಚಿಕಿತ್ಸೆ. ಶುಂಠಿ ರಸದ ಜೊತೆಗೆ ಜೇನು ಕೂಡಿಸಿ ನೆಕ್ಕಿಸಿರಿ. ಎಳೆಯ ಮಕ್ಕಳು, ಗರ್ಭಿಣಿಯರು ಬಳಸಲು ಅಡ್ಡಿಯಿಲ್ಲ.

ಹಸಿಶುಂಠಿರಸ ಹಚ್ಚಿದರೆ ಇಸುಬು, ಚರ್ಮದ ಗಾದರಿ, ನವೆ ಪರಿಹಾರ.

ಕಿಶೋರಿಯರ ಮತ್ತು ಮಹಿಳೆಯರ ಋತುಸ್ರಾವದ ಬೆನ್ನುನೋವು, ಹೊಟ್ಟೆನೋವು ಅತಿ ದೊಡ್ಡ ಸಮಸ್ಯೆ. ಹಸಿ ಶುಂಠಿರಸದ ಜೊತೆಗೆ ಬೆಲ್ಲವನ್ನು ಕೂಡಿಸಿ ಕೊಡಿರಿ. ಒಣಗಿದ ಶುಂಠಿ ಪುಡಿಗೆ ಮಜ್ಜಿಗೆ ಸೇರಿಸಿ ಕುಡಿಸಿರಿ; ಮುಟ್ಟಿನ ಶೂಲೆ, ಅಲ್ಪ ಸ್ರಾವದ ತೊಂದರೆ ಮಾಯ. ನಮ್ಮ ಕಾಲದ ದೊಡ್ಡ ಸಮಸ್ಯೆ ಎಂದರೆ ಮಧುಮೇಹ. ಎರಡನೆಯದು ರಕ್ತದ ಕೊಲೆಸ್ಟೆರಾಲ್‌ ಅಂಶದ ಏರಿಕೆ.

ಹದವರಿತ ಹಸಿ ಶುಂಠಿಯ ಸೇವನೆಯಿಂದ ರಕ್ತದ ಸಕ್ಕರೆ ಅಂಶ ಮತ್ತು ಕೊಲೆಸ್ಟರಾಲ್ ಎಂಬ ಕೊಬ್ಬಿನಂಶಕ್ಕೆ ಕಡಿವಾಣ. ಆಯುರ್ವೇದದ ಅನುಸಾರ ಕಾಯ ಅಂದರೆ ಅಗ್ನಿ. ಅದು ಸರಿ ಇದ್ದರೆ ರೋಗ ಬಾರದು. ಕೊನೆಯ ಕಿವಿ ಮಾತು. ಕಡು ಬೇಸಿಗೆಯಲ್ಲಿ ಮತ್ತು ನವರಾತ್ರಿಯ ಶರತ್ಕಾಲದಲ್ಲಿ ಅಲ್ಲ ಬಳಸಲು ಕೊಂಚ ಎಚ್ಚರವಿರಲಿ. ನಿಮ್ಮ ಪ್ರಕೃತಿ ತುಂಬ ಉಷ್ಣದ್ದಾದರೆ ಮಜ್ಜಿಗೆ ಸಂಗಡ ಬಳಸಲಾದೀತು. ಹಿತ–ಮಿತದ ಬಳಕೆ ಇರಲಿ. ಅಲ್ಲ ಬಳಸಿರಿ. ರೋಗದ ಹಾದಿ ಇಲ್ಲವಾಗಿಸಿರಿ.

**

ಮೆಣಸಿನ ಕಾಯಿಯ ಮೂಲ

ನಾವಿಂದು ಬಳಸುವ ಮೆಣಸಿನ ಕಾಯಿ ನಮ್ಮ ದೇಶದ್ದಲ್ಲ. ಸುಮಾರು ಐದು ನೂರು ವರ್ಷ ಪೂರ್ವದ ಸಮಾಚಾರ. ಈ ಮೆಣಸಿನ ಕಾಯಿ ಮೆಕ್ಸಿಕೋ ದೇಶದಿಂದ ಇಡಿಯ ವಿಶ್ವಕ್ಕೆ ಪಸರಿಸಲು ಶುರುವಾಯಿತು. ಹಾಗಾದರೆ ಖಾರದ ರುಚಿ ಅದಕ್ಕೆ ಮೊದಲು ವಿಶ್ವಕ್ಕೆ ಗೊತ್ತಿರಲಿಲ್ಲವೇ? ಖಂಡಿತ ಇತ್ತು. ಕಾಳುಮೆಣಸು, ಶುಂಠಿ, ದುಂಪರಾಶ್ಮೆ ಮುಂತಾದ ಖಾರದ ಸಂಭಾರಗಳೆಲ್ಲ ಆಹಾರೋಪಯೋಗಿಗಳಾಗಿದ್ದವು.

ಆಯುರ್ವೇದದ ಮೂಲಗ್ರಂಥ ಚರಕಸಂಹಿತೆಯು ಅಲ್ಲವನ್ನು ‘ಹರಿತಕ ಶಾಕ’ ಎಂದರೆ ಹಸಿರು ತರಕಾರಿ ಎಂದು ಬಣ್ಣಿಸಿದೆ. ಇದು ಬಾಯಿ ರುಚಿ ಹೆಚ್ಚಿಸುವ ಉತ್ತಮ ಹಸಿ ತರಕಾರಿ. ಲೈಂಗಿಕ ಅವಯವಗಳ ದೃಢತೆ ಮತ್ತು ಕ್ಷಮತೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬರ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ. ವಾತದ ರೋಗಗಳಿಗೆ ಕಡಿವಾಣ ಹಾಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT