ಜನರ ರೊಕ್ಕ ಐಎಂಎ ದೋಖಾ

ಮಂಗಳವಾರ, ಜೂನ್ 18, 2019
29 °C
ಬೆವರಿನ ಹಣ ಕಳೆದುಕೊಂಡವರ ಕಣ್ಣೀರ ಕಹಾನಿ

ಜನರ ರೊಕ್ಕ ಐಎಂಎ ದೋಖಾ

Published:
Updated:
Prajavani

ತಂಗಿಯ ಮದುವೆಗಾಗಿ ಕೂಡಿಟ್ಟ ಐದು ಲಕ್ಷ ರೂಪಾಯಿ ಹಣವನ್ನು ವರ್ಷದ ಹಿಂದೆ ಐಎಂಎ ಜುವೆಲರ್ಸ್‌ನಲ್ಲಿ ಹೂಡಿದ್ದೆ. ಮೂರು ತಿಂಗಳಿಂದ ಬಡ್ಡಿ ಕೊಟ್ಟಿಲ್ಲ. ರಂಜಾನ್‌ ಮುಗಿದ ನಂತರ ಕೊಡುವುದಾಗಿ ಹೇಳಿದ್ದರು. ಈಗ ನೋಡಿದರೆ ಹಣದೊಂದಿಗೆ ಸಂಸ್ಥೆಯ ಮಾಲೀಕ ಪರಾರಿಯಾಗಿದ್ದಾನೆ. ತಂಗಿಯ ಮದುವೆ ಹೇಗೆ ಮಾಡಲಿ ಎಂದು ಹಣ ಕಳೆದುಕೊಂಡ ಮಲಿಕ್‌ ಖಾನ್‌ ನಿಟ್ಟುಸಿರು ಬಿಟ್ಟರು.

ಕೋಲಾರದಲ್ಲಿ ಕಾರು ಚಾಲಕರಾಗಿರುವ ಅವರು ಮೋಸ ಹೋದ ಸುದ್ದಿ ಕೇಳಿ ಸೋಮವಾರ ಬೆಂಗಳೂರಿಗೆ ಬಂದಿದ್ದಾರೆ. ಎರಡು ದಿನದಿಂದ ಊಟ, ನಿದ್ದೆ ಬಿಟ್ಟು ಅಂಗಡಿ ಎದುರು ಕಾಯುತ್ತಿದ್ದಾರೆ. ಹಗಲು, ರಾತ್ರಿ ಬೆವರು ಸುರಿಸಿ ದುಡಿದ ಹಣ ಅದು. ತಂಗಿಯ ಮದುವೆ ಜವಾಬ್ದಾರಿ ಹೊತ್ತಿದ್ದ ನನಗೆ ಈ ರೀತಿ ಆಗಬಾರದಿತ್ತು. ಜೀವನದಲ್ಲಿ ಮೊದಲ ಬಾರಿಗೆ ದೊಡ್ಡ ಪಾಠ ಕಲಿತಿದ್ದೇನೆ. ರಟ್ಟೆಯಲ್ಲಿ ಶಕ್ತಿ ಇದೆ. ದುಡಿದು ಹಣ ಗಳಿಸುತ್ತೇನೆ. ಆದರೆ, ತಂಗಿಯ ಮದುವೆ ಗತಿ ಏನು ಎಂದು ಚಿಂತೆಯಾಗಿದೆ ಎಂದು ಮರುಗಿದರು.

* * *

ಎಂಟು ವರ್ಷದ ಮಗ ಮೂರನೇ ಮಹಡಿಯಿಂದ ಬಿದ್ದು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾನೆ. ಶಸ್ತ್ರಚಿಕಿತ್ಸೆಗೆ ಹಣ ಬೇಕು. ಹಣ ಪಡೆಯಲು ಬಂದರೆ ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿದೆ. ಒಂದೂವರೆ ವರ್ಷದ ಹಿಂದೆ ಮೂರು ಲಕ್ಷ ರೂಪಾಯಿ ಇಟ್ಟಿದ್ದೇನೆ. ಪ್ರತಿ ತಿಂಗಳು ತಪ್ಪದೆ ಹಣ ಬರುತ್ತಿತ್ತು. ಮೂರು ತಿಂಗಳಿಂದ ನಿಂತಿದೆ. ಮಗನ ತಲೆ, ಬೆನ್ನಿಗೆ ಏಟು ಬಿದ್ದಿದೆ. ಅಷ್ಟು ದುಡ್ಡು ಎಲ್ಲಿಂದ ಹೊಂದಿಸಲಿ ಎಂದು ಕೇಳಿದ್ದು ವೆಂಕಟೇಶಪುರದ ಜರೀನಾಬೇಗಂ. 

* * *

ಬಕ್ರೀದ್‌ ನಂತರ ಮಗಳ ಮದುವೆ ನಿಶ್ಚಯವಾಗಿದೆ ಹಣ ಬೇಕು ಎಂದು ಕೇಳಿದಾಗ ರಂಜಾನ್‌ ನಂತರ ಕೊಡುವುದಾಗಿ ಹೇಳಿದ್ದರು. ನನ್ನ ಮೊಣಕಾಲು ಶಸ್ತ್ರಚಿಕಿತ್ಸೆಗೂ ಹಣ ಬೇಕು. ದಿಕ್ಕು ತೋಚುತ್ತಿಲ್ಲ. ಕುಚ್‌ ತೋ ಕರೋ ಸಾಬ್‌.. ಎಂದು ಟ್ಯಾನರಿ ರಸ್ತೆಯ ನಿವಾಸಿ 60 ವರ್ಷದ ಫಾತೀಜಾ ಬೇಗಂ, ಪೊಲೀಸರ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು.

* * *

ಶಿವಾಜಿ ನಗರದ ಐಎಂಎ ಜುವೆಲರ್ಸ್‌ ಎದುರು ಠಿಕಾಣಿ ಹೂಡಿರುವ ನೂರಾರು ಜನರ ಕಥೆ ಇದಕ್ಕಿಂತ ವಿಭಿನ್ನವಾಗಿಲ್ಲ.  

ಮಗಳ ಮದುವೆ, ಮಕ್ಕಳ ಶಾಲೆ ಎಡ್ಮಿಶನ್‌, ತಾಯಿಯ ಆಪರೇಷನ್‌, ಮನೆಯ ಭೋಗ್ಯಕ್ಕೆ ನೀಡಲು ಕೂಡಿಟ್ಟ ಹಣ ಕಳೆದುಕೊಂಡ ಸಾವಿರಾರು ಅಸಹಾಯಕ ಮಹಿಳೆಯರು, ವೃದ್ಧರು, ಯುವಕರು ಮಳಿಗೆ ಎದುರು ಕುಳಿತು ಕಣ್ಣೀರಿಡುತ್ತಿದ್ದಾರೆ. ಅವರೊಂದಿಗೆ ಮಾತಿಗಿಳಿದಾಗ ಇಂತಹ ನೂರಾರು ಕರುಣಾಜನಕ ಕಥೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ.  

ಪ್ರತಿಯೊಬ್ಬರದ್ದೂ ಒಂದೊಂದು ಗೋಳಿನ ಕಥೆ. ಅಲ್ಲಿ ಅವರನ್ನು ಸಂತೈಸುವವರು ಯಾರೂ ಇಲ್ಲ. ಅಲ್ಲಿದ್ದ ಎಲ್ಲರೂ ಮೋಸ ಹೋದವರೆ. ಹೇಗಾದರೂ ಮಾಡಿ ಹಣ ಮರಳಿ ಕೊಡಿಸುವಂತೆ ಕಂಡ, ಕಂಡವರನ್ನು ಅಂಗಲಾಚುತ್ತಿರುವ ದೃಶ್ಯಗಳು ಕರುಳು ಚುರ್‌ ಎನಿಸುತ್ತವೆ. 

ಚಿತ್ರದುರ್ಗ, ದಾವಣಗೆರೆ, ತುಮಕೂರು,ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹೊಸಕೋಟೆ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿಂದ ಬಂದವರು ಅಲ್ಲಿದ್ದರು. ಅದರಲ್ಲಿ ಹೆಚ್ಚಿನವರು ಬಡ ಮುಸ್ಲಿಂ ಮಹಿಳೆಯರು. ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವವರು, ಶಿಕ್ಷಕಿಯರು, ಮನೆಗೆಲಸದವರು, ಆಟೊ ಚಾಲಕರು, ದಿನಗೂಲಿಗಳು, ಪಾರ್ಸೆಲ್‌ ಕಂಪನಿ ಸಿಬ್ಬಂದಿ. ಆಪತ್‌ ಕಾಲಕ್ಕೆ ಆಗಬಹುದು ಎಂದು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನು ಐಎಂಎ ಜುವೆಲರ್ಸ್‌ನಲ್ಲಿ ಹೂಡಿ ಕೈಸುಟ್ಟುಕೊಂಡಿದ್ದಾರೆ.

ಮಹಿಳೆಯರು ಉಳಿತಾಯ ಮಾಡಿದ, ಮಕ್ಕಳ ಶಾಲಾ ಶುಲ್ಕಕ್ಕೆ ಕೂಡಿಟ್ಟಿದ್ದ ಹಣವನ್ನು ಗಂಡನಿಗೆ ಗೊತ್ತಿಲ್ಲದೆ ಹೂಡಿ ಕೈ–ಕೈ ಹಿಸುಕಿಕೊಳ್ಳುತ್ತಿದ್ದಾರೆ. ಶ್ರೀಮಂತರೂ ಇಲ್ಲಿ ಹಣ ಇಟ್ಟಿದ್ದಾರೆ.

‘ಮನೆ ಭೋಗ್ಯಕ್ಕೆ ಪಡೆಯಲು ಏಳು ಲಕ್ಷ ರೂಪಾಯಿ ಹಣ ಕೊಟ್ಟಿದ್ದೆ. ಗಂಡನಿಗೂ ಈ ವಿಷಯ ಗೊತ್ತಿಲ್ಲ. ವಿಷ ಕುಡಿಯುವುದೊಂದೇ ಬಾಕಿ. ಸಚಿವ ಜಮೀರ್‌ ಅಹಮ್ಮದ್‌ ಮತ್ತು ಶಾಸಕ ರೋಷನ್ ಬೇಗ್‌ ನೆರವಿಗೆ ಬರಲಿ’ ಎಂದು ಮಾಗಡಿ ರಸ್ತೆಯ ನಜೀಮಾ ಕೈ ಮುಗಿದು ಅಂಗಲಾಚುತ್ತಿದ್ದರು.

‘ಗಂಡನ ಆರೋಗ್ಯ ಸರಿಯಾಗಿಲ್ಲ. ಕಳೆದ ತಿಂಗಳು ಆಪರೇಷನ್‌ ಆಗಿದೆ. ದುಡಿಯುವ ಶಕ್ತಿ ಇಲ್ಲ. ಹೀಗಾಗಿ ನಾನು ಮನೆಗೆಲಸ ಮಾಡಿ ಉಳಿತಾಯ ಮಾಡಿದ ಹಣವನ್ನು ಇಲ್ಲಿ ಹಾಕಿದ್ದೇನೆ. ಮಕ್ಕಳ ಶಾಲೆಗೆ ಫೀ ಕೊಡಬೇಕಿತ್ತು. ಎರಡು ತಿಂಗಳಿಂದ ಹಣ ನೀಡದೆ ಸತಾಯಿಸುತ್ತಿದ್ದಾರೆ. ಗಂಡನ ಶಸ್ತ್ರಚಿಕಿತ್ಸೆಗೂ ಹಣ ನೀಡಲಿಲ್ಲ ಎಂದು ಚಾಮುಂಡಿ ನಗರದ ಶಬಿನ್‌ ತಾಜ್‌ ಗೋಳು ತೋಡಿಕೊಂಡರು. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಗಂಡ, ಮಕ್ಕಳನ್ನೂ ತಮ್ಮೊಂದಿಗೆ ಕರೆ ತಂದಿದ್ದರು.

ಮನೆ ಬಾಡಿಗೆ ಮತ್ತು ಮಕ್ಕಳ ಸ್ಕೂಲ್‌ ಫೀ ಎಂದು ಎರಡು ಲಕ್ಷ ರೂಪಾಯಿಯನ್ನು ಹೆಂಡತಿಗೆ ಕೊಟ್ಟಿದ್ದೆ. ಹಣವನ್ನು ಇಲ್ಲಿ ಹಾಕಿದ್ದಾಳೆ. ಮಕ್ಕಳನ್ನು ಶಾಲೆಗೆ ಸೇರಿಸುವುದು ಹೇಗೆ ಎಂದು ಲಾರಿ ಚಾಲಕ ಚಾಂದ್‌ ಗಾರ್ಡನ್‌ ನಿವಾಸಿ ಅಲೀಮ್‌ ಪ್ರಶ್ನಿಸಿದರು.

ಚಿನ್ನಪ್ಪ ಗಾರ್ಡನ್‌ ನಿವಾಸಿಯೊಬ್ಬರು ಮನೆ ಮಾರಿ ಬಂದ ₹35 ಲಕ್ಷ ಹಣವನ್ನು ಸಂಸ್ಥೆಯಲ್ಲಿ ಹೂಡಿದ್ದಾರೆ. ‘ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ನನ್ನ ತಪ್ಪಿನಿಂದ ಹೆಂಡತಿ, ಮಕ್ಕಳು ಬೀದಿಗೆ ಬೀಳುವಂತಾಯಿತು. ನೇಣು ಹಾಕಿಕೊಳ್ಳುವುದೊಂದೇ ಬಾಕಿ’ ಎಂದು ಕಣ್ಣೀರಿಟ್ಟರು.

‘ವಿಷ ಕುಡಿಬೇಕು, ಇಲ್ಲ ಮೈ ಮಾರಿಕೊಳ್ಳಬೇಕು...’
‘ಮೂರು ತಿಂಗಳ ಹಿಂದೆ ಗಂಡ ಡೈವೋರ್ಸ್‌ ನೀಡಿದ್ದ. ಆತ ನೀಡಿದ್ದ ಮೂರು ಲಕ್ಷ ರೂಪಾಯಿ ಪರಿಹಾರ ಹಣವನ್ನು ಇಲ್ಲಿಟ್ಟಿದ್ದೆ. ಎರಡು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಈಗ ಗಂಡನೂ ಇಲ್ಲ. ಆತ ಕೊಟ್ಟ ಹಣವೂ ಇಲ್ಲ. ಮಕ್ಕಳೊಂದಿಗೆ ನೇಣು ಹಾಕಿಕೊಳ್ಳಬೇಕು ಅಥವಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮೈ ಮಾರಿಕೊಳ್ಳಬೇಕು. ಸದ್ಯ ನನ್ನ ಮುಂದಿರುವ ಏಕೈಕ ದಾರಿ ಇದೊಂದೆ’ ಎಂದು ಮಹಿಳೆಯೊಬ್ಬರು ಗೋಳು ತೋಡಿಕೊಂಡರು.

‘ಎರಡು ದಿನದಿಂದ ಮಕ್ಕಳೊಂದಿಗೆ ಇಲ್ಲಿಯೇ ಕೂತಿದ್ದೇನೆ. ಊಟ ಮಾಡಲು ಕೂಡ ದುಡ್ಡಿಲ್ಲ. ನನ್ನ ಸ್ಥಿತಿ ತಿಳಿದ ಯಾರೋ ಪುಣ್ಯಾತ್ಮರು ಮಕ್ಕಳಿಗೆ, ನನಗೆ ಊಟ ತಂದು ಕೊಟ್ಟರು’ ಎಂದರು.

ಹರಾಮ್‌ ಅಲ್ಲ, ಹಲಾಲ್‌: ಬಣ್ಣದ ಮಾತಿಗೆ ಮರುಳಾದ ಜನ
‘ಇಸ್ಲಾಂ ಧರ್ಮದಲ್ಲಿ ಬಡ್ಡಿ ಹಣ ಹರಾಮ್. ನಾನು ನೀಡುವುದು ಬಡ್ಡಿ ಅಲ್ಲ. ಅದು ಹಲಾಲ್‌. ಅದು ನಿಮ್ಮ ಪಾಲು. ನೀವು ನನ್ನ ಪಾಲುದಾರರು’ ಎಂದು ಐಎಂಎ ಸಂಸ್ಥೆಯ ಮಾಲೀಕ ತಮ್ಮನ್ನು ನಂಬಿಸಿದ್ದ ಎಂದು ಜನರು ಹೇಳಿದರು.

‘ನಾನು ನಿಮ್ಮ ಹಣಕ್ಕೆ ಮೋಸ ಮಾಡುವುದಿಲ್ಲ ಎಂದು ಅಂಗಡಿಯ ಮಾಲೀಕ ಕುರಾನ್‌ ಮೇಲೆ ಆಣೆ, ಪ್ರಮಾಣ ಮಾಡಿದ್ದ. ಆತನ ಬಣ್ಣದ ಮಾತಿಗೆ ಮೋಸ ಹೋಗಿ ಹಣ ಹೂಡಿಕೆ ಮಾಡಿದೆವು. 15 ವರ್ಷಗಳಿಂದ ಬ್ಯುಸಿನೆಸ್‌ ನಡೆಸುತ್ತಿರುವ ಆತ ಮೋಸ ಮಾಡುತ್ತಾನೆ ಎಂದು ಎಣಿಸಿರಲಿಲ್ಲ’ ಎಂದರು.

‘ಒಂದೂವರೆ ವರ್ಷದಿಂದ ಸರಿಯಾಗಿ ಹಣ ಬರುತ್ತಿತ್ತು. ಮೂರು ತಿಂಗಳ ಹಿಂದಿನಿಂದ ಹಣ ಕೊಡುವುದನ್ನು ನಿಲ್ಲಿಸಿದ್ದ. ರಂಜಾನ್‌ ನಂತರ ನೀಡುವುದಾಗಿ ಭರವಸೆ ನೀಡಿದ್ದರು’ ಎಂದು ಹಣ ಕಳೆದುಕೊಂಡ ಹಿದಾಯತ್‌ ಉಲ್ಲಾ ಹೇಳಿದರು.

‘ಖಾಸಗಿ ಶಾಲೆಯೊಂದರಲ್ಲಿ ತನ್ನ ಪತ್ನಿ ಶಿಕ್ಷಕಿಯಾಗಿದ್ದು, ಶಾಲೆಯ ಮುಖ್ಯೋಪಾಧ್ಯಾಯಿನಿ ಮುಂದೆ ನಿಂತು ಹಣ ಹೂಡಿಸಿದ್ದರು. ಶಾಲೆಯ ಅಷ್ಟೂ ಸಿಬ್ಬಂದಿ ಇಲ್ಲಿ ಹಣ ಹೂಡಿದ್ದಾರೆ. ಆಕರ್ಷಕ ಯೋಜನೆ, ಜಿರೋ ಪರ್ಸೆಂಟ್‌ ವೇಸ್ಟೇಜ್‌ ಮುಂತಾದವು ಕಣ್ಣು ಕುಕ್ಕುತ್ತಿದ್ದವು. ಗೋಣಿ ಚೀಲದಲ್ಲಿ ಚಿನ್ನಾಭರಣ ತಂದು ಹಣ ಪಡೆಯುತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಇದರಿಂದ ನಮ್ಮ ಹಣಕ್ಕೆ ಮೋಸ ಆಗುವುದಿಲ್ಲ ಎಂಬ ವಿಶ್ವಾಸ ಮೂಡಿತ್ತು’ ಎಂದರು.

ತ್ವರಿತವಾಗಿ ಹಣ ಗಳಿಸುವ ದುರಾಸೆ
ಬೇಗ ಹಣ ಗಳಿಸುವ ದುರಾಸೆಯಿಂದ ಜನರು ಶಾರ್ಟ್‌ಕಟ್‌ ಹುಡುಕುತ್ತಾರೆ. ನಿನ್ನೆ, ಮೊನ್ನೆ ಹುಟ್ಟಿದ ಹಣಕಾಸು ಕಂಪನಿಗಳಲ್ಲಿ ಹಣ ಹೂಡುತ್ತಾರೆ. ಹಣ ಗಳಿಸಲು ಜನರು ಶ್ರಮಪಡಲು ತಯಾರಿಲ್ಲ. ಜನರ ಮಾನಸಿಕ ಸ್ಥಿತಿ ಗೊತ್ತಿರುವ ವಂಚಕರು ಆಕರ್ಷಕ ಕೊಡುಗೆ, ಹೆಚ್ಚಿನ ರಿಟರ್ನ್ಸ್‌ ಪ್ರಲೋಭನೆ ಒಡ್ಡಿ ಕೊನೆಗೆ ಹಣದೊಂದಿಗೆ ಪರಾರಿಯಾಗುತ್ತಾರೆ. ಇಂತಹ ಹಲವಾರು ಪ್ರಕರಣ ನಡೆದರೂ ಜನರು ಇನ್ನೂ ಬುದ್ಧಿ ಕಲಿತಿಲ್ಲ. ವಂಚಕರು ಕೂಡ ಹೊಸ ವೇಷದಲ್ಲಿ ಬರುತ್ತಾರೆ. ಹೀಗಾಗಿ ಐಎಂಎ ಜುವೆಲ್ಸ್‌ ಹಣ ವಂಚನೆ ಪ್ರಕರಣ ಮೊದಲು ಅಲ್ಲ, ಕೊನೆಯೂ ಅಲ್ಲ.

ಐಎಂಎ ಸಂಸ್ಥೆ ಕಂಪನಿ ಕಾಯ್ದೆ ಅಡಿ ನೋಂದಣಿ ಆಗಿದೆಯೋ ಅಥವಾ ಸಹಕಾರ ಸಂಘಗಳ ಕಾಯ್ದೆ ಅಡಿ ನೋಂದಣಿ ಆಗಿದೆಯೋ ಎಂಬುವುದರ ಮೇಲೆ ಪ್ರಕರಣ ನಿರ್ಧಾರವಾಗುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ಚಾರ್ಜ್‌ಶಿಟ್‌ ಸಲ್ಲಿಸಿದ ನಂತರ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಸದ್ಯ ಪೊಲೀಸರು ವಂಚಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಹೂಡಿಕೆದಾರರಿಗೆ ಬೇಗ ಹಣ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ.
–ಎಸ್‌.ವಿ. ದೇಸಾಯಿ, ಹೈಕೋರ್ಟ್ ವಕೀಲರು

**

ವೈಟ್‌ ಕಾಲರ್‌ ಅಪರಾಧ
ನಮ್ಮ ದೇಶದಲ್ಲಿ ಇವೆಲ್ಲ ಸಾಮಾನ್ಯ. ‘ಕೊಟ್ಟವ ಕೋಡಂಗಿ, ಇಸಿದುಕೊಂಡವ ವೀರಭದ್ರ’ ಎಂಬ ಮಾತೊಂದಿದೆ. ಇದು ಇಂತಹ ಪ್ರಕರಣಗಳಿಗೆ ಸರಿಯಾಗಿ ಅನ್ವಯಿಸುತ್ತದೆ. ಜನರಿಗೆ ಮೋಸ ಮಾಡುವ ಉದ್ದೇಶದಿಂದಲೇ ಇಂತಹ ನೂರಾರು ಕಂಪನಿಗಳು ರಾತ್ರೋರಾತ್ರಿ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತವೆ. ವಿನಿವಿಂಕ್‌, ಕರೀಂಲಾಲ್‌ ತೇಲಗಿ ಪ್ರಕರಣ ಏನಾದವು? ಯಾರಿಗೆ ಶಿಕ್ಷೆ ಆಯ್ತು? ಯಾವ ಪ್ರಕರಣಗಳೂ ನಿರ್ಣಾಯಕ ಹಂತಕ್ಕೆ ತಲುಪಿಲ್ಲ ಅಥವಾ ಇತ್ಯರ್ಥವಾಗಿಲ್ಲ. ವಂಚಕರು ಜಾಮೀನಿನ ಮೇಲೆ ಹೊರ ಬರುತ್ತಾರೆ ಇಲ್ಲವೇ ಜನರ ದುಡ್ಡಿನೊಂದಿಗೆ ವಿದೇಶಕ್ಕೆ ಹಾರುತ್ತಾರೆ. 

ಜನರು ಕೂಡ ಇಂತಹ ಪ್ರಕರಣಗಳನ್ನು ಬೇಗ ಮರೆತು ಬಿಡುತ್ತಾರೆ. ಸ್ವಲ್ಪ ದಿನದಲ್ಲಿ ಐಎಂಎ ಪ್ರಕರಣ ಕೂಡ ಹತ್ತರಲ್ಲಿ ಹನ್ನೊಂದು ಆಗುತ್ತದೆ.
– ಜೆ.ಎಂ. ಗಂಗಾಧರ್, ಹೈಕೋರ್ಟ್ ವಕೀಲರು

**

ಹಣಕಾಸು ವಂಚನೆ ತಡೆಗೆ ಕಠಿಣ ಕಾನೂನು ಇಲ್ಲ
ಹಣಕಾಸು ವಂಚನೆಗಳನ್ನು ತಡೆಯಲು ನಿರ್ದಿಷ್ಟ ಹಾಗೂ ಕಠಿಣ ಕಾನೂನು ಕಟ್ಟಳೆಗಳಿಲ್ಲ. ಆ ನ್ಯೂನತೆಗಳನ್ನು ಬಳಸಿಕೊಂಡು ವಂಚಕರು ಬ್ಯಾಂಕ್‌ ಮತ್ತು ಸಾರ್ವಜನಿಕರಿಗೆ ಮೋಸ ಎಸಗುತ್ತಾರೆ. ಸಾರ್ವಜನಿಕರಿಂದ ಹಣ ಸಂಗ್ರಹ ನಿಯಂತ್ರಣ ಹೇರಲು ಕಾಯ್ದೆ, ಕಾನೂನಿನಲ್ಲಿ ಮಾರ್ಪಾಡುಗಳಾಗಬೇಕಿದೆ. ಕಂಪನಿ ಕಾಯ್ದೆಯಲ್ಲಿ ಕಠಿಣ ಷರತ್ತುಗಳಿವೆ. ಕಂಪನಿ ಕಾಯ್ದೆ ಅಡಿ ನೋಂದಣಿಯಾದ ಸಂಘ, ಸಂಸ್ಥೆಗಳಿಗೆ ಸುಲಭವಾಗಿ ಜನರಿಂದ ಹಣ ಸಂಗ್ರಹಿಸಿ, ಮೋಸ ಎಸುಗುವುದು ಸಾಧ್ಯವಿಲ್ಲ. ಸಹಕಾರ ಸಂಘಗಳ ಕಾಯ್ದೆ ಅಡಿ ಅನೇಕ ನ್ಯೂನತೆಗಳಿವೆ. ಅದನ್ನು ಬಳಸಿಕೊಂಡು ಜನರಿಂದ ಹಣ ಸಂಗ್ರಹಿಸಿ ಹಣಕಾಸು ಸಂಸ್ಥೆಗಳು ವಂಚನೆ ಮಾಡುತ್ತವೆ. ಆರಂಭದ ಮೂರ‍್ನಾಲ್ಕು ತಿಂಗಳು ನಿಯಮಿತವಾಗಿ ಹಣ ಮರಳಿಸುವ ಕಂಪನಿಗಳು ನಂತರ ರಾತ್ರೋರಾತ್ರಿ ಬಾಗಿಲು ಮುಚ್ಚುತ್ತವೆ. ಪೊಲೀಸರು ಕೂಡ ಅಪರಾಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಹಣಕಾಸು ವಂಚನೆಗಳಿಗೆ ನಿರ್ದಿಷ್ಟ ಕಾಯ್ದೆ ಇಲ್ಲ. ಕರ್ನಾಟಕ ಲೇವಾದೇವಿ ಕಾಯ್ದೆ ಅಡಿ ಶೇ 24ಕ್ಕಿಂತ ಬಡ್ಡಿ ನೀಡುವುದು ಅಪರಾಧ. ಆದರೆ, ಲೇವಾದೇವಿ ವಹಿವಾಟುದಾರರು ಶೇ 30–40ರಷ್ಟು ಬಡ್ಡಿ ಆಮಿಷ ಒಡ್ಡುತ್ತಾರೆ. ಇದು ಕಾನೂನುಬಾಹಿರ.
– ಆಶಿಶ್‌ ಕೊಪ್ಪ, ಲೆಕ್ಕ ಪರಿಶೋಧಕ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !