ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವ ನುಂಗಿ ನಗಬೇಕೆ?: ಮಹಿಳೆಯರ ವಿರುದ್ಧದ ಹಿಂಸೆ ತೊಡೆಯಲು ಅಂತರರಾಷ್ಟ್ರೀಯ ದಿನ

ನವೆಂಬರ್ 25 - ಮಹಿಳೆಯರ ವಿರುದ್ಧದ ಹಿಂಸೆಯನ್ನು ತೊಡೆದುಹಾಕಲು ಅಂತರರಾಷ್ಟ್ರೀಯ ದಿನ
Last Updated 23 ನವೆಂಬರ್ 2018, 19:45 IST
ಅಕ್ಷರ ಗಾತ್ರ

‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದರು ಹೆತ್ತವರು. ಹನ್ನೆರಡು ವರ್ಷ… ಸಾವಿನೊಂದಿಗೆ ಸೆಣಸುತ್ತಲೇ ಬದುಕಿದೆ. ಕಟ್ಟ ಕಡೆಯ ಗಳಿಗೆಯಲ್ಲಿ ನನ್ನ ಕಂದನಿಗಾಗಿ ಅವನನ್ನು ನಿರ್ದಾಕ್ಷಿಣ್ಯವಾಗಿ ತೊರೆದು ಒಬ್ಬಳೇ ಬದುಕುವ ಈ ಗಟ್ಟಿ ನಿರ್ಧಾರಕ್ಕೆ ಬಂದಿದ್ದೇನೆ.’ ಕುತ್ತಿಗೆ ಸೀಳಲು ಬಂದಗಂಡನಿಂದ ತಪ್ಪಿಸಿಕೊಂಡು ಬಂದು ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಆನೇಕಲ್‌ನ ಮಾಧುರಿಯ ನೋವಿನ ನುಡಿಗಳಿವು.

‘ಮಾವನ ಮಗನಿಗೆ ಮದುವೆ ಮಾಡಿಕೊಟ್ಟಾಗ ನನಗೆ ಹದಿನೇಳು ವರ್ಷ. ಐದು ವರ್ಷಗಳಲ್ಲಿ ಪಡಬಾರದ ಹಿಂಸೆ ಪಟ್ಟೆ. ಹೊಡೆತ ಸಹಿಸಿಕೊಳ್ಳಲಾಗದೇ ಅಮ್ಮನ ಮನೆಗೆ ಬಂದಾಗೆಲ್ಲ ನೋವು ನುಂಗಿ ನಕ್ಕೋಂತ ಇರಬೇಕವಾ... ಅನ್ನೊ ಅದೇ ಬುದ್ಧಿವಾದ, ಮತ್ತದೇ ನರಕದ ದಾರಿ… ಸಾಂತ್ವನ ಕೇಂದ್ರಗಳಲ್ಲೂ ಅದೇ ಉಪದೇಶಗಳು... ಪರಿಹಾರ ಕಾಣಲಿಲ್ಲ. ನನ್ನ ದಾರಿ ನಾನೇ ಕಂಡುಕೊಂಡೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿದು ಮಕ್ಕಳನ್ನು ಸಾಕುತ್ತಿದ್ದೇನೆ’ ಎನ್ನುವುದು ವಿಜಾಪುರದ ಹಿಪ್ಪರಗಿಯ ಗೀತಾಳ ಗಟ್ಟಿ ನಿಲುವು.

ಹೀಗೆ ಗಂಡ ಕೊಡುವ ಹಿಂಸೆಯ ವಿರುದ್ಧ ಸೆಟೆದು ನಿಲ್ಲುವ ಹೆಣ್ಮಕ್ಕಳ ಸಂಖ್ಯೆ ತೀರಾ ಕಡಿಮೆಯೇ. ಸಂಸಾರದ ಗುಟ್ಟು ಬಿಟ್ಟು ಕೊಡಬಾರದು, ಏನೇ ಬಂದರೂ ನಗುತ್ತಿರಬೇಕು... ನಮ್ಮ ವ್ಯವಸ್ಥೆಇಂದಿಗೂ ಇದನ್ನೇ ಬಯಸುತ್ತದೆ. ಕುಟುಂಬದ ಘನತೆ–ಗೌರವ, ಹೆಣ್ಣಿನ ಪಾವಿತ್ರ್ಯ, ತಾಳ್ಮೆ–ಸಹನೆ ಎನ್ನುವ ಪದಭಂಡಾರಗಳನ್ನು ಅವಳ ಮೇಲೆಯೇ ಹೇರಿ, ಅವಳು ಹಿಂಸೆಯೊಂದಿಗೇ ಬದುಕಲು ಕಲಿಯಬೇಕೆಂದು ಬಯಸಲಾಗುತ್ತದೆ. ಈ ವ್ಯವಸ್ಥೆ, ಈ ಮನಃಸ್ಥಿತಿಗಳ ವಿರುದ್ಧ ಬಂಡೇಳುವವರು ವಿರಳ. ಅಂಥವರ ಜೊತೆ ನಿಲ್ಲುವವರೂ ಕಡಿಮೆ.

ಇದೇ ಕಾರಣಕ್ಕೆ ಅನೇಕರು ಗಂಡ ನೀಡುವ ಹಿಂಸೆಯನ್ನೂ ಅದೇ ಉದಾರತೆಯಿಂದ ಕ್ಷಮಿಸುತ್ತ, ಸಮರ್ಥಿಸುತ್ತ, ನೋವನ್ನು ನುಂಗಿ ಹೊರಗೆ ನಗು ತೋರುತ್ತ ಬದುಕುತ್ತಾರೆ. ಅಂಥವರೇ ಸಮಾಜದ ಆದರ್ಶ ಮಹಿಳೆಯರೆನ್ನುವ ನಂಬಿಕೆಯೂ ನಮ್ಮಲ್ಲಿ ಬೇರೂರಿದೆ. ಮನೆ ಎಂಬ ಸುರಕ್ಷಿತ ತಾಣದಲ್ಲೂ ಹಿಂಸೆ ಪ್ರಖರ ರೂಪ ತಾಳಲು ಇಂತಹ ಮನೋಭಾವವೇ ಕಾರಣ. ಅನಕ್ಷರಸ್ಥ, ಬಡ ಕುಟುಂಬಗಳಿಗಷ್ಟೇ ಸೀಮಿತವಾಗಿಲ್ಲ ಈ ಪ್ರವೃತ್ತಿ. ಸುಶಿಕ್ಷಿತ, ಶ್ರೀಮಂತ ಕುಟುಂಬಗಳಲ್ಲಿಯೂ ಗಂಡನ ಹೊಡೆತವನ್ನು ಸೈರಿಸಿಕೊಳ್ಳುವ ಜೊತೆಗೆ ಸಮರ್ಥಿಸಿಕೊಳ್ಳುವ ಮಹಿಳೆಯರು ಸಾಕಷ್ಟಿದ್ದಾರೆ.

ಹೌದು, ಮೂರನೇ ಒಂದು ಭಾಗದಷ್ಟು ಮಹಿಳೆಯರು ಇಂದಿಗೂ ಗಂಡ ನೀಡುವ ದೈಹಿಕ ಹಿಂಸೆಯನ್ನು ಮೌನವಾಗಿ ಅನುಭವಿಸುತ್ತಾರೆ. ಹೊಡೆತ–ನಿಂದನೆಯನ್ನು ಒಪ್ಪಿಕೊಂಡು ಸಹಜೀವನ ನಡೆಸುತ್ತಿದ್ದಾರೆ ಎಂಬ ಅಂಶವನ್ನು ಈಚೆಗೆ ನಡೆಸಿದ ಅಧ್ಯಯನವೊಂದು ಬಹಿರಂಗಪಡಿಸಿದೆ.ವಡೋದರಾ ಮೂಲದ ಸ್ವಯಂಸೇವಾ ಸಂಸ್ಥೆ ‘ಸಹಾಜ್’ ನಡೆಸಿದ ಅಧ್ಯಯನ, ಭಾರತೀಯ ಹೆಣ್ಣುಮಕ್ಕಳ ಮನೋಭಾವ, ನಂಬಿಕೆ ಮತ್ತು ಸ್ವಭಾವದ ಮೇಲೆ ಬೆಳಕು ಚೆಲ್ಲಿದೆ.

ಭಾವನಾತ್ಮಕ ಹೊಣೆಗಾರಿಕೆ

ಮನೆಯ ಹೊರಗೆ ನಡೆಯುವ ದೌರ್ಜನ್ಯವನ್ನು ಖಾರವಾಗಿ ಪ್ರಶ್ನಿಸುವ ಮಹಿಳೆಯರು, ಮನೆಯೊಳಗಿನ ಹಿಂಸೆಯನ್ನು ಖಂಡಿಸುವುದಿಲ್ಲ. ‘ಮಕ್ಕಳ ಬಗ್ಗೆ ಯೋಚಿಸು...’, ‘ಮದುವೆಯಾಗುವ ತಂಗಿಯರಿದ್ದಾರೆ...’ ‘ಮನೆತನದ ಗೌರವ ಏನಾಗಬಾರದು...’ ಎನ್ನುವಂತಹ ಭಾವನಾತ್ಮಕ ಹೊಣೆಗಾರಿಕೆಯನ್ನು ಹೇರುವ ಮೂಲಕ ಅವರಲ್ಲಿ ಎಲ್ಲವನ್ನೂ ತಾಳಿಕೊಳ್ಳುವ ಸಹನೆಯನ್ನು ಬೆಳೆಸಲಾಗುತ್ತದೆ.

ಗಂಡ ನೀಡುವ ದೈಹಿಕ–ಮಾನಸಿಕ ಹಿಂಸೆಯನ್ನು ಪ್ರಶ್ನಿಸುವ, ಅದನ್ನು ತಡೆಯಲು ಇತರರ ಸಹಾಯ ಕೋರುವ, ಅದಕ್ಕಾಗಿ ಕಾನೂನು ನೆರವು ಪಡೆಯುವ ಮಹಿಳೆಯರು ವಿರಳ. ತೀರಾ ಗಂಭೀರ ಸ್ವರೂಪ ತಾಳಿದಾಗ ಮಾತ್ರ ನೆರವಿಗೆ ಕೈಚಾಚುವವರೇ ಹೆಚ್ಚು ಎನ್ನುತ್ತದೆ ಅಧ್ಯಯನ.

ಹಿಂಸೆಯನ್ನು ಪ್ರಚೋದಿಸುವವರೂ ಇವರೇ

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿಯೂ (ಎನ್ಎಚ್ಎಫ್-4) ಇದೇ ಅಂಶಗಳಿವೆ. ಮನೆಯೊಳಗಿನ ಹಿಂಸೆಯ ಕರಾಳಮುಖವನ್ನು ಇದು ಅನಾವರಣಗೊಳಿಸಿದೆ. ಶೇ 27ರಷ್ಟು ಮಹಿಳೆಯರು ತಮ್ಮವರಿಂದ, ತಮ್ಮ ಮನೆಗಳಲ್ಲಿಯೇ ದೈಹಿಕ ಹಿಂಸೆಯನ್ನು ಅನುಭವಿಸುತ್ತಾರೆ. ಇದನ್ನು ತಡೆಯುವ ಸಲುವಾಗಿ ಇತರರ ಸಹಾಯಕ್ಕೆ ಕೈಚಾಚುವವರ ಸಂಖ್ಯೆ ಕೇವಲ ಶೇ 14ರಷ್ಟಿದೆ. ಮನೆಯ ಇತರೆ ಮಹಿಳೆಯರು ಇಂತಹ ಹಿಂಸೆಯನ್ನು ಪ್ರಚೋದಿಸುತ್ತಾರೆ. ಈ ಪ್ರವೃತ್ತಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು.

ಗಂಡನಿಂದ ನಿಂದನೆ ಅಥವಾ ದೌರ್ಜನ್ಯಕ್ಕೆ ಒಳಗಾಗಿ ತವರಿನತ್ತ ಹೆಜ್ಜೆ ಹಾಕುವ ಹೆಣ್ಣುಮಕ್ಕಳಿಗೆ ಸಹನೆ–ತಾಳ್ಮೆ–ಸಮಾಧಾನದ ಮಾತು ಹೇಳಿ ಮರಳಿ ಕಳಿಸುವ ಪಾಲಕರು. ಸಮಸ್ಯೆಗೆ ಪರಿಹಾರ ಸೂಚಿಸುವ ಬದಲು ಅದನ್ನು ಮೌನವಾಗಿ ಸಹಿಸುವಂತೆ ಹೇಳುತ್ತಾರೆ. ಆದರೆ ಅಂತಹ ಹಿಂಸೆಯನ್ನು ದಿಟ್ಟವಾಗಿ ಎದುರಿಸುವ ಹಾಗೂ ತನ್ನ ಮನೆಯನ್ನು ತಾನು ಸುರಕ್ಷಿತವಾದ, ನೆಮ್ಮದಿಯ ತಾಣವನ್ನಾಗಿ ಮಾಡಿಕೊಳ್ಳುವ ಜಾಣ್ಮೆಯನ್ನು ಹೆಣ್ಣುಮಕ್ಕಳಲ್ಲಿ ತುಂಬಬೇಕಾದುದು ಇಂದಿನ ಅಗತ್ಯ.

ಮನೆಯ ಹಿರಿಯರ, ಖಾಸಾ ಸ್ನೇಹಿತರ, ಆಪ್ತ ಸಮಾಲೋಚನೆಯ ಅಥವಾ ಕಾನೂನಿನ ನೆರವು ಪಡೆದು ಗಂಡ–ಹೆಂಡಿರ ನಡುವಿನ ಭಿನ್ನಾಭಿಪ್ರಾಯ, ಜಗಳ, ಮನಸ್ತಾಪಗಳನ್ನು ಬಗೆಹರಿಸಿಕೊಳ್ಳುವ ಮತ್ತು ಗಂಡನ ಹಿಂಸಾತ್ಮಕ ಕೃತ್ಯವನ್ನು ತಡೆಯುವ ಪ್ರಯತ್ನ ಮಹಿಳೆಯರಿಂದಲೇ ಆಗಬೇಕು. ಸಹಾಯಕ್ಕೆ ಕೈಚಾಚದ ಹೊರತು ಪರಿಹಾರ ದೊರಕದು.

ಗಂಡನಿಂದ ದೈಹಿಕ ಹಿಂಸೆಗೆ ಒಳಗಾದ ಮಹಿಳೆಯರ ಸಂಖ್ಯೆ(ರಾಜ್ಯವಾರು)

ರಾಜ್ಯ ಶೇಕಡಾ
ಮಣಿಪುರ 43.2
ಆಂಧ್ಯಪ್ರದೇಶ 43.2
ಬಿಹಾರ 43.2
ತಮಿಳುನಾಡು 40.6
ಮಧ್ಯಪ್ರದೇಶ 33
‍ಪಶ್ಚಿಮ ಬಂಗಾಳ 32.8
ಹರಿಯಾಣ 32
ಮಹಾರಾಷ್ಟ್ರ 21
ಕರ್ನಾಟಕ 20
ಗೋವಾ 12
ಸಿಕ್ಕಿಂ 2.6

ಮೂಲ: ಎನ್‌ಎಫ್‌ಎಚ್‌ಎಸ್‌–4 ಸಮೀಕ್ಷೆ

**

ಮನೆಯಲ್ಲೇ ಸುರಕ್ಷತೆ ಇಲ್ಲ

ಭಾರತದಲ್ಲಿ ಇಂದಿಗೂ ಅರ್ಧದಷ್ಟು ಮಹಿಳೆಯರು ಗಂಡನಿಂದಲೇ ಹಿಂಸೆಗೆ ಒಳಗಾಗುತ್ತಿರುವುದು ಸತ್ಯ ಮತ್ತು ವಾಸ್ತವ. ಮಹಿಳಾ ಸಂಘಟನೆಗಳು, ಸಾಂತ್ವನ ಕೇಂದ್ರಗಳು, ದೂರು ಸಮಿತಿಗಳು, ಪಂಚಾಯತ್‌ಗಳು ಸಮಾಜದ ಸಿದ್ಧಸೂತ್ರಗಳ ಮುಖವಾಣಿಯಂತೆ ಕೆಲಸ ಮಾಡುತ್ತಿವೆ. ನೊಂದು ಬಂದ ಹೆಣ್ಣುಮಕ್ಕಳಿಗೆ ಸೂಕ್ತ ಪರಿಹಾರೋಪಾಯಗಳ ಬದಲು ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾತಾಡಿ ಕಳಿಸಲಾಗುತ್ತದೆ.

ಇಂತಹ ಗಂಭೀರ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ಸರಿಯಾದ ತರಬೇತಿ, ಸೌಲಭ್ಯಗಳಿಲ್ಲ. ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಸ್ವಾವಲಂಬನೆಗಷ್ಟೇ ಸೀಮಿತವಾಗಿವೆ. ಎಷ್ಟೊ ಮಹಿಳೆಯರಿಗೆ ಕಾನೂನೇ ಗೊತ್ತಿಲ್ಲ. ಗೊತ್ತಿದ್ದವರಿಗೆ ಕಾನೂನಿನ ಮೇಲೆ ನಂಬಿಕೆ ಉಳಿದಿಲ್ಲ. ಗಂಡನನ್ನು ಬಿಟ್ಟು ಹೊರಗೆ ಬಂದರೆ ಸಮಾಜ ತನ್ನನ್ನು ಹೇಗೆ ನೋಡುತ್ತದೆ ಎಂಬ ಬಗ್ಗೆ ಆತಂಕವಿದೆ. ಮನಸ್ಸುಗಳಲ್ಲಿ, ಕುಟುಂಬಗಳಲ್ಲಿ, ಸಮಾಜದಲ್ಲಿ, ಸಮಿತಿ–ಪಂಚಾಯತ್‌ಗಳಲ್ಲಿ ‌ಬದಲಾವಣೆಗಳಾದರೆ ಮಾತ್ರ ಇದಕ್ಕೆಲ್ಲ ಪರಿಹಾರ.

-ಮಮತಾ ಯಜಮಾನ್‌, ಮಹಿಳಾಪರ ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT