ಬುಧವಾರ, ಏಪ್ರಿಲ್ 21, 2021
25 °C

ಜಾಗೃತ ಜಾಗಗಳು!

ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

ಮಹಾನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರಿಯಾದ, ಸುಸಜ್ಜಿತವಾದ ರಂಗಮಂದಿರಗಳಿಲ್ಲ ಎಂಬ ಕೂಗು ತುಂಬ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಅದರ ನಡುವೆಯೇ ‘ಸುಸಜ್ಜಿತ ಮಂದಿರ’ಗಳ ಹಂಗು ತೊರೆದು, ಕನಿಷ್ಠ ಸೌಲಭ್ಯಗಳಿರುವ ಸಣ್ಣಪುಟ್ಟ ಸ್ಥಳಗಳನ್ನು ಹುಡುಕಿಕೊಂಡು ಅವನ್ನು ಸಾಂಸ್ಕೃತಿಕ ಜಾಗೃತ ಸ್ಥಳಗಳನ್ನಾಗಿ ಮಾರ್ಪಡಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಇಂಥ ಜಾಗಗಳು ಕಿರಿದಾದರೂ ಅವುಗಳ ಕೊಡುಗೆ ಮಾತ್ರ ಹಿರಿದೇ.

ಬೆಂಗಳೂರು ‘ಸಿಲಿಕಾನ್‌ ಸಿಟಿ’ ಎಂಬ ಬಿರುದು ಪಡೆದಿದ್ದರೂ ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೇನೂ ಕಮ್ಮಿಯಿಲ್ಲ. ಜನರು, ಆಹಾರ, ವೇಷಭೂಷಣ ಇವುಗಳಲ್ಲಿ ಇರುವ ವೈವಿಧ್ಯ ಇಲ್ಲಿ ನಡೆಯುವ ಸಾಂಸ್ಕೃತಿ ಚಟುವಟಿಕೆಗಳಲ್ಲಿಯೂ ಇದ್ದೇ ಇದೆ. ಮತ್ತದು ದಿನದಿಂದ ದಿನಕ್ಕೆ ಹೊಸ ಹೊಸ ರೂಪಗಳಲ್ಲಿ ಚಿಗಿತುಕೊಳ್ಳುತ್ತಲೂ ಇದೆ. ನಾಟಕೋತ್ಸವಗಳು, ಸಂಗೀತ ಉತ್ಸವಗಳು, ಕರಗ, ಕಲಾ ಪ್ರದರ್ಶನಗಳು ಹೀಗೆ ಒಂದಿಲ್ಲೊಂದು ಬಗೆಯ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ಇಷ್ಟೊಂದು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸುಸಜ್ಜಿತವಾದ ವೇದಿಕೆಗಳು ಎಷ್ಟಿವೆ? ರವೀಂದ್ರ ಕಲಾಕ್ಷೇತ್ರ, ಎಡಿಎ ರಂಗಮಂದಿರ, ಜಾಗೃತಿ ಥಿಯೇಟರ್‌, ನಯನ ಸಭಾಂಗಣ, ಚೌಡಯ್ಯ ಸ್ಮಾರಕ ಭವನ, ಸಾಹಿತ್ಯ ಪರಿಷತ್ತು, ಕಲಾಗ್ರಾಮ, ನಾಟಕಗಳಿಗೇ ಮೀಸಲಾದ ರಂಗಶಂಕರ ಹೀಗೆ ಒಂದಿಷ್ಟು ಹೆಸರುಗಳಿಗೇ ಮುಗಿದುಹೋಗುತ್ತದೆ. ಆದರೆ ನಗರದಲ್ಲಿ ಕಾರ್ಯನಿರತವಾಗಿರುವ ಹಲವು ನೂರು ಸಾಂಸ್ಕೃತಿಕ ತಂಡಗಳಿಗೆ ಇವು ಯಾವ ಲೆಕ್ಕದಲ್ಲಿಯೂ ಸಾಲುವುದಿಲ್ಲ. ಹಾಗಾಗಿಯೇ ರಂಗಮಂದಿರದ ಲಭ್ಯತೆ ನೋಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕಾದ ಪರಿಸ್ಥಿತಿ ಇದೆ.‌

ಹಾಗೆಂದು ನಗರದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳೇನೂ ಕಮ್ಮಿಯಾಗಿಲ್ಲ. ಬದಲಿಗೆ ಏರುತ್ತಲೇ ಇವೆ. ಹಾಗಾದರೆ ಇವೆಲ್ಲ ನಡೆಯುತ್ತಿರುವುದು ಎಲ್ಲಿ? ಮೇಲೆ ಉಲ್ಲೇಖಿಸಿದ ಮುಖ್ಯವೇದಿಕೆಗಳು ನಗರದ ಸಾಂಸ್ಕೃತಿಕ ಕೇಂದ್ರಗಳಾಗಿವೆ ಎನ್ನುವುದೇನೋ ನಿಜ. ಅವುಗಳನ್ನು ಬಿಟ್ಟೂ ಸಣ್ಣ ಸಣ್ಣ ಜಾಗಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ನಗರದಲ್ಲಿ ಇಂಥ ಅಸಂಖ್ಯಾತ ‘ಸಾಂಸ್ಕೃತಿಕ ಜಾಗೃತ ಸ್ಥಳ’ಗಳು ಇವೆ. ಹೊಸ ಸ್ಥಳಗಳು ಹುಟ್ಟಿಕೊಳ್ಳುತ್ತಲೇ ಇವೆ. ಇಲ್ಲಿ ದಿನದ ಬಾಡಿಗೆ ಪಡೆಯಲು ಸರತಿಯಲ್ಲಿ ಕಾಯಬೇಕಾದ ಅಗತ್ಯ ಇಲ್ಲ. ದೊಡ್ಡ ಮೊತ್ತದ ಬಾಡಿಗೆಯ ಹೊರೆ ಇಲ್ಲ. ಲೈಟಿಂಗ್‌, ಸ್ಟೇಜ್‌ ಮ್ಯಾನೇಜ್‌ಮೆಂಟ್‌, ಧ್ವನಿ ಪರಿಕರಗಳ ನಿರ್ವಹಣೆಯ ಸರ್ಕಸ್‌ ಇರುವುದಿಲ್ಲ. ಅತ್ಯಂಕ ಕನಿಷ್ಠ ಸೌಲಭ್ಯಗಳಲ್ಲಿ ನಿರ್ದಿಷ್ಟ ಪ್ರೇಕ್ಷಕ ಸಮುದಾಯದ ಎದುರು ಕಲಾಭಿವ್ಯಕ್ತಿ ನಡೆಯುತ್ತಿರುತ್ತದೆ. ಸಂವಾದ, ಚರ್ಚೆ, ವಿಚಾರವಿನಿಮಯಗಳು ಜರುಗುತ್ತಿರುತ್ತವೆ. ಇವೊಂದು ಬಗೆಯಲ್ಲಿ ದೊಡ್ಡ ಬಾವಿಗೆ ನೀರು ತಂದಿಕ್ಕುವ ಸಾವಿರಾರು ಕಿರು ಒರತೆಗಳ ಹಾಗೆ ಕೆಲಸ ಮಾಡುತ್ತಿರುತ್ತವೆ. ಅಂಥ ಕೆಲವು ಸ್ಥಳಗಳ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ.

ಸಂಸ ಬಯಲು ರಂಗಮಂದಿರ

ರವೀಂದ್ರ ಕಲಾಕ್ಷೇತ್ರ ದೊಡ್ಡ ಕಟ್ಟಡದ ಹಿಂದೊಂದು ಬಯಲು ರಂಗಮಂದಿರ ಇದೆ. ಮುಕ್ತವಾದ ವಿಶಾಲ ವೇದಿಕೆ ಮತ್ತು ಅದರ ಎದುರಿಗೆ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಮೆಟ್ಟಿಲುಗಳ ರೀತಿಯ ಆಸನ ವ್ಯವಸ್ಥೆ ಇಲ್ಲಿದೆ. ನಾಟಕಗಳ ತಾಲೀಮು, ಪುಸ್ತಕ ಬಿಡುಗಡೆ, ಹೋರಾಟದ ಸಂಘಟನೆಗಳ ಕಾರ್ಯಕ್ರಮಗಳು ಹೀಗೆ ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಸುಲಭಲಭ್ಯ ವೇದಿಕೆಯಾಗಿದೆ. ಒಂದು ಕಾಲಕ್ಕೆ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳು ಅನೌಪಚಾರಿಕ ಗೊಷ್ಠಿಗಳ ತಾಣವಾಗಿತ್ತು. ಈಗ ಸಂಸ ರಂಗಮಂದಿರ ಆ ಕೆಲಸವನ್ನು ಒಂದಿಷ್ಟಾದರೂ ಮಾಡುತ್ತಿದೆ. 

l ಸಂಪರ್ಕ ಸಂಖ್ಯೆ: 080 2224 1325


ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌.

ರಂಗಸ್ಥಳ, ರಂಗೋಲಿ ಮೆಟ್ರೊ ಕಲಾಕೇಂದ್ರ

ಬೆಂಗಳೂರಿಗೆ ಮೆಟ್ರೊ ಬಂದ ಹೊಸತರಲ್ಲಿ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾದ ಕಲಾಕೇಂದ್ರವಿದು. ಮೇಲುಗಡೆ ‘ಹೂವಿನ ಹಾದಿ’ಯಿದ್ದರೆ, ಕೆಳಗಡೆ ಸಣ್ಣ ಸಣ್ಣ ಎರಡು ಸಭಾಂಗಣಗಳಿವೆ. ಅದರ ಆಚೀಚೆಯ ಸ್ಥಳವನ್ನೂ ವಿವಿಧ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಕೆಯಾಗುವ ರೀತಿಯೇ ಸಜ್ಜುಗೊಳಿಸಲಾಗಿದೆ. ವಾರಕ್ಕೊಮ್ಮೆ ಅಲ್ಲಿ ‘ಡ್ರಮ್‌ ಜಾಮ್‌’ ಎಂಬ ವಾದ್ಯಮೇಳವೂ, ವಾರಪೂರ್ತಿ ಒಂದಿಲ್ಲೊಂದು ಕಲಾಪ್ರದರ್ಶನ, ಗೊಂಬೆಯಾಟ, ಪುಸ್ತಕ ಓದು, ಕಲಾವಿದರೊಂದಿಗೆ ಸಂವಾದ ಹೀಗೆ ಹಲವು ಬಗೆಯ ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯುತ್ತಿದ್ದವು. ಈಗಲೂ ಈ ಸ್ಥಳ ಕಿರುಸಮುದಾಯವನ್ನೊಳಗೊಳ್ಳುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತೆಯೇ ಇದೆ. ಸುಸಜ್ಜಿತವಾಗಿಯೂ ಇದೆ. ಆದರೆ ಚಟುವಟಿಕೆಗಳು ಮಾತ್ರ ಸ್ಥಗಿತಗೊಂಡಿವೆ. ಇಲ್ಲಿನ ಕಲಾಕೃತಿಗಳು, ರಂಗಮಂದಿರಗಳು ತಮ್ಮ ಪುನರ್‌ಬಳಕೆಗಾಗಿ ಕಾಯುತ್ತಿವೆ. 

l ಸಂಪರ್ಕ ಸಂಖ್ಯೆ:080 2296 9265

ಶೂನ್ಯ ಕಲಾಕೇಂದ್ರ

ಲಾಲ್‌ಬಾಗ್‌ ರಸ್ತೆಯಲ್ಲಿರುವ ಶೂನ್ಯಕಲಾಕೇಂದ್ರ ವಿವಿಧ ರೀತಿಯ ವಿಭಿನ್ನ ಕಲಾಪ್ರಕಾರಗಳ ಪ್ರದರ್ಶನ ಮತ್ತು ಸಮುದಾಯದ ಒಳಗೊಳ್ಳುವಿಕೆಯ ಉದ್ದೇಶದಿಂದಲೇ ನಿರ್ಮಾಣಗೊಂಡಿದ್ದು. ವಿಶಾಲವಾದ ಸಭಾಂಗಣದ ಒಂದು ಭಾಗದಲ್ಲಿ ಹಸಿರುವ ತೆಂಗಿನ ಗರಿಗಳು ಮೂಗು ತೂರಿಸುತ್ತಿರುತ್ತವೆ. ಸುಸಜ್ಜಿತವಾದ ಧ್ವನಿ ವ್ಯವಸ್ಥೆ, ಕಲಾಪ್ರಕಾರದ ಅನುಕೂಲಕ್ಕೆ ತಕ್ಕ ಹಾಗೆ ವೇದಿಕೆಯನ್ನು ರೂಪಿಸಿಕೊಳ್ಳುವ ಅವಕಾಶ, ಸಾಕಷ್ಟು ನೈಸರ್ಗಿಕ ಬೆಳಕು ಇರುವುದು ಈ ‘ಜಾಗ’ವನ್ನು ಆಪ್ತವೆನ್ನಿಸುವಂತೆ ಮಾಡುತ್ತವೆ. ಇಲ್ಲಿ ನಿರಂತರವಾಗಿ ಬೇರೆ ಬೇರೆ ಕಲಾಪ್ರಕಾರಗಳ ಕಾರ್ಯಾಗಾರಗಳು, ತರಬೇತಿಗಳು, ನಾಟಕ, ಸಿನಿಮಾ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. 

l ಸಂಪರ್ಕ ಸಂಖ್ಯೆ: 077608 32226

ಕೆ.ವಿ. ಸುಬ್ಬಣ್ಣ ಆಪ್ತರಂಗಮಂದಿರ

ಹೆಚ್ಚಾಗಿ ಸಿನಿಮಾ ಪ್ರದರ್ಶನಗಳೇ ನಡೆಯುವ ಈ ಜಾಗದಲ್ಲಿ ಆಗೀಗ ಸಾಹಿತ್ಯ ಚಟುವಟಿಕೆಗಳೂ ನಡೆಯುವುದಿದೆ. ಸಣ್ಣ ಪ್ರೇಕ್ಷಕ ಸಮುದಾಯವೊಂದನ್ನು ಒಳಗೊಂಡು ನಡೆಸುವ ಕಾವ್ಯದ ಓದು, ಸಂವಾದ, ಚರ್ಚೆಗಳನ್ನು ನಡೆಸುವುದಕ್ಕೆ ಯೋಗ್ಯವಾದ ಸ್ಥಳವಿದು. 

l ಸಂಪರ್ಕ ಸಂಖ್ಯೆ: 088927 95666

ಅಟ್ಟಗಲಾಟ್ಟ

ಕೋರಮಂಗಲದ ಅಟ್ಟಗಲಾಟ್ಟ ಮೂಲರೂಪದಲ್ಲಿ ಒಂದು ಪುಸ್ತಕದಂಗಡಿ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಅದು ಒಂದು ಸಾಂಸ್ಕೃತಿಕ ಕೇಂದ್ರ ಎಂದೇ ಜನಪ್ರಿಯಗೊಂಡಿದೆ. ಸಾಲು ಸಾಲು ಜೋಡಿಸಿಟ್ಟ ಪುಸ್ತಕಗಳ ಮಧ್ಯದ ಸಣ್ಣ ಜಾಗದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಈ ಕಟ್ಟಡದ ಕಟ್ಟುವಿಕೆಯಲ್ಲಿಯೇ ಸಾಂಸ್ಕೃತಿಕ ಅಭಿರುಚಿಯ ಛಾಪು ಇರುವುದು ಎದ್ದು ಕಾಣುತ್ತದೆ. ಸಂಗೀತ, ರಂಗಭೂಮಿ, ಸಾಹಿತ್ಯ, ನೃತ್ಯ ಹೀಗೆ ಹಲವು ಕಲಾಪ್ರಕಾರಗಳಿಗೆ ಆಟ್ಟ ಗಲಾಟ್ಟ ವೇದಿಕೆ ಆಗಿದೆ.

l ಅಟ್ಟಗಲಾಟ್ಟ ಸಂಪರ್ಕ ಸಂಖ್ಯೆ: 096325 10126

ಹೀಗೆ ಪುಸ್ತಕದಂಗಡಿ ಸಾಂಸ್ಕೃತಿಕ ಜಾಗೃತಿಸ್ಥಳವಾಗಿರುವುದು ಇದೊಂದೇ ಉದಾಹರಣೆಯೇನಲ್ಲ. ರಾಜಾಜಿನಗರದ ‘ಆಕೃತಿ’ ಪುಸ್ತಕ ಮಳಿಗೆಯಲ್ಲಿಯೂ ಆಗೀಗ ಸಾಹಿತ್ಯದ ಓದು, ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. 

l ಸಂಪರ್ಕಸಂಖ್ಯೆ: 098866 94580

ಶ್ರೀ ಜಯರಾಮ ಸೇವಾ ಮಂಡಳಿ

ಜಯನಗರ 8ನೇ ಬ್ಲಾಕ್‌ನಲ್ಲಿನ ಜಯರಾಮ ಸೇವಾ ಮಂಡಳಿಯ ಕಟ್ಟಡದ ಎರಡನೇ ಮಹಡಿಯಲ್ಲಿ ನಾಡೋಜ ಪ್ರೊ. ವೆಂಕಟಸುಬ್ಬಯ್ಯ ಜನ್ಮಶತಾಬ್ದಿ ಸಭಾಗಂಣವಿದೆ. ಈ ಜಾಗ ರಂಗಭೂಮಿ ಚಟುವಟಿಕೆಗಳಿಗೆ ಅಷ್ಟೊಂದು ಹೇಳಿ ಮಾಡಿಸಿದ ಜಾಗ ಅಲ್ಲದಿದ್ದರೂ ಸಾಹಿತ್ಯ ಚಟುವಟಿಕೆಗಳಿಗೆ, ಸಂವಾದ, ಸಂಗೀತ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘವೂ ಇಂಥದ್ದೇ ಇನ್ನೊಂದು ಜಾಗ. ಡಿ.ವಿ. ಪ್ರಹ್ಲಾದ್‌ ಅವರ ‘ಸಂಚಯ’ ಸಾಹಿತ್ಯ ಪತ್ರಿಕೆಯ ವಾರ್ಷಿಕ ‘ಕವಿದಿನ’ ಇದೇ ಜಾಗದಲ್ಲಿಯೇ ನಡೆಯುತ್ತಿತ್ತು. ಆದರೆ ಸದ್ಯಕ್ಕೆ ಈ ಸಭಾಂಗಣದ ಬಾಗಿಲು ಸಾಹಿತ್ಯ ಚಟುವಟಿಕೆಗಳಿಗೆ ಮುಚ್ಚಿಕೊಂಡಿದೆ.

l ಜಯರಾಮ ಸೇವಾ ಮಂಡಳಿ ಸಂಪರ್ಕ ಸಂಖ್ಯೆ: 080 2244 5232

ಯುವರ್ಸ್‌ ಟ್ರೂಲಿ ಥಿಯೇಟರ್‌

ಇಂದಿರಾನಗರದಲ್ಲಿನ ಈ ಜಾಗ ಮೊದಲು ಬಳಕೆಯಾಗುತ್ತಿದ್ದದ್ದು ತಾಲೀಮಿನ ಸ್ಥಳವಾಗಿ. ಸ್ವತಃ ಕಲಾವಿದರಾದ ನಂದಿನಿ ರಾವ್‌ ಮತ್ತು ರಾಂಜಿ ಡೇವಿಡ್‌ ಅವರು ಈ ಜಾಗವನ್ನು ಈಗ ಒಂದು ಸಂಸ್ಕೃತಿ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಈಗ ಇಲ್ಲೊಂದು ಪುಟಾಣಿ ರಂಗಮಂದಿರವಿದೆ. ನಿರಂತರವಾಗಿ ರಂಗಭೂಮಿ, ಸಂಗೀತ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಯಾಗಾರಗಳು ನಡೆಯುತ್ತಿರುತ್ತವೆ.  

l ಸಂಪರ್ಕ ಸಂಖ್ಯೆ: 098458 53093

ಅಲಾಯನ್ಸ್‌ ಫ್ರಾನ್ಸೆ

ಫ್ರೆಂಚ್‌ ಭಾಷೆ ಮತ್ತು ಸಂಸ್ಕೃತಿಯನ್ನು ಹರಡುವ ಉದ್ದೇಶದಿಂದ ಪ್ರಾರಂಭವಾದ ‘ಅಲಾಯನ್ಸ್‌ ಫ್ರಾನ್ಸ್‌’ ಸಂಸ್ಥೆಯ ಶಾಖೆ ಬೆಂಗಳೂರಿನ ವಸಂತನಗರದಲ್ಲಿದೆ. ನಗರದ ಒಂದು ಜಾಗೃತ ಸಾಂಸ್ಕೃತಿಕ ಕೇಂದ್ರಗಳಲ್ಲಿ ಇದೂ ಒಂದು. ಇಲ್ಲಿ ಕನ್ನಡದ ಕಲರವ ಕೊಂಚ ಕಮ್ಮಿಯೇ. ಆದರೆ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುವುದಂತೂ ನಿಜ. ಪ್ರಶಾಂತವಾದ ಆವರಣದಲ್ಲಿನ ಈ ಕಟ್ಟಡದೊಳಗೆ ಒಂದು ಪುಟಾಣಿ ವೇದಿಕೆ ಮತ್ತು ಸಭಾಂಗಣವೂ ಇದೆ.

l ಸಂಪರ್ಕ ಸಂಖ್ಯೆ: 080 4080 8181

ಸುಚಿತ್ರ ಫಿಲಂ ಸೊಸೈಟಿ

ಬೆಂಗಳೂರಿನ ಹಳೆಯ ಸಾಂಸ್ಕೃತಿಕ ಜಾಗೃತಸ್ಥಳಗಳಲ್ಲಿ ಸುಚಿತ್ರದ ನಾಣಿ ಅಂಗಳವೂ ಒಂದು. ಅತ್ಯಂತ ಸರಳ ಮತ್ತು ಸುಲಭಲಭ್ಯವಾಗಿದ್ದ ಈ ಸ್ಥಳ ಈಗ ಮೊದಲಿನ ಸ್ವರೂಪವನ್ನೂ ಆಪ್ತಗುಣವನ್ನೂ ಕಳೆದುಕೊಂಡಿದೆ. ಆ ಜಾಗದಲ್ಲೀಗ ದೊಡ್ಡ ಕಟ್ಟಡವೆದ್ದಿದೆ. ಈಗಲೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

l ಸಂಪರ್ಕ ಸಂಖ್ಯೆ: 080 2671 1785

ರಂಗಶಂಕರ ಜೆ.ಪಿ. ನಗರದಲ್ಲಿದೆ. ವಿಶೇಷವಾಗಿ ನಿರಂತರ ರಂಗಚಟುವಟಿಕೆಗಳಿಗೆ ಹೆಸರಾಗಿದೆ. ಇಲ್ಲಿ ನಾಡಿನ ಮತ್ತು ದೇಶ ವಿದೇಶಗಳ ಹಲವು ರಂಗಪ್ರಯೋಗಗಳು ನಡೆಯುತ್ತವೆ. ಸುಸಜ್ಜಿತ ಆಡಿಟೋರಿಯಂ ಮತ್ತು ಪ್ರಾಂಗಣ ಹೊಂದಿದೆ.

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ದೊಮ್ಮಲೂರುನಲ್ಲಿದೆ. ಅತ್ಯಾಧುನಿಕ ವ್ಯವಸ್ಥೆಗಳ ನೂತನ ಕಟ್ಟಡ ಹೊಂದಿದೆ. ಸಭಾಂಗಣ, ಆ್ಯಂಪಿ ಥಿಯೇಟರ್‌, ಕಲಾ ಗ್ಯಾಲರಿ ಮತ್ತು ಚರ್ಚಾ ಕೊಠಡಿಗಳಿವೆ. ವಿಶ್ವದರ್ಜೆಯ ತಂತ್ರಜ್ಞಾನ ಹೊಂದಿದ ಧ್ವನಿ, ಬೆಳಕು ವಿನ್ಯಾಸ ವ್ಯವಸ್ಥೆ ಇಲ್ಲಿನ ವಿಶೇಷ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ಚಟುವಟಿಕೆಗಳು, ಕಾರ್ಯಾಗಾರಗಳು ನಡೆಯುವ ಪ್ರಶಸ್ತ ಜಾಗ.

ಇವಿಷ್ಟು ಬೆಂಗಳೂರಿನ ಪರ್ಯಾಯ ಸ್ಥಳಗಳಿಗೆ ಪ್ರಾತಿನಿಧಿಕ ಉದಾಹರಣೆಗಳಷ್ಟೆ. ಇಂಥ ನೂರಾರು ಸ್ಥಳಗಳಲ್ಲಿ ಸಕ್ರಿಯವಾಗಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇವೆ. ‘ಲೋಕಚರಿತ’ ಎಂಬ ಸಮುದಾಯಕೂಟ ಪ್ರತಿ ತಿಂಗಳು ಕಾಡು ಮಲ್ಲೇಶ್ವರ ದೇವಸ್ಥಾನ, ಎಂ.ಇ.ಎಸ್. ಕಾಲೇಜು, ಎ.ಎಸ್‌.ಸಿ. ಕಾಲೇಜು ಹೀಗೆ ಒಂದಿಲ್ಲೊಂದು ಜಾಗ ಶೋಧಿಸಿಕೊಂಡು ಪದ್ಯಗಳ ಓದು, ಸಂವಾದ, ರಂಗಚಟುವಟಿಕೆಗಳನ್ನು ಹಲವು ವರ್ಷಗಳಿಂದ ನಡೆಸುತ್ತಿದೆ. ಇತ್ತೀಚೆಗಿನ ‘ಪದ್ಯ’ ತಂಡ ತಿಂಗಳಿಗೊಂದು ಹೊಸ ‘ಜಾಗ’ ಹುಡುಕಿ ಪದ್ಯ ಓದುವ ಕಾರ್ಯಕ್ರಮ ಆಯೋಜಿಸುತ್ತಿದೆ. ಆರ್ಟ್‌ಪಾರ್ಕ್‌ನಲ್ಲಿ ಕಲೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ನಂ.1 ಶಾಂತಿರೋಡ್‌ನಂಥ ಜಾಗಗಳಲ್ಲಿ ಕಲಾಪ್ರದರ್ಶನಗಳು ಜರುಗುತ್ತಿರುತ್ತವೆ. ಇಂಥ ಎಷ್ಟೋ ಪುಟ್ಟ ಪುಟ್ಟ ಜಾಗಗಳು ಸಾಂಸ್ಕೃತಿಕ ಜೀವದ ನರನಾಡಿಗಳಂತೆಯೇ ಮಹಾನಗರದುದ್ದಕ್ಕೂ ಹರಡಿಕೊಂಡು ಸಾಂಸ್ಕೃತಿಕ ಪ್ರಜ್ಞೆಯ ಪರಿಚಲನೆಯನ್ನು ನಿರಂತರವಾಗಿ ನಡೆಸುತ್ತಲೇ ಇದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು