ಜೈಪುರ ಸಾಹಿತ್ಯೋತ್ಸವ| ಜೈ ಭೀಮ್ ಎಂದು ಹೇಳಲು ಭಯ: ಸೂರಜ್ ಎಂಗಡೆ

ಜೈಪುರ: ‘ಭಾರತದ ಯಾವುದೇ ಕಚೇರಿಗೆ ಹೋಗಿ. ಅಲ್ಲಿ ಜೈ ಶ್ರೀರಾಮ್, ಸಲಾಂ ಅಲೈಕುಂ, ಸತ್ ಶ್ರೀ ಅಕಾಲ್ ಎಂದು ಹೇಳುತ್ತಾರೆ. ಆದರೆ ಜೈ ಭೀಮ್ ಎಂದು ಹೇಳಲು ಭಯವಾಗುತ್ತದೆ. ಇಂತಹ ಭಯ ಸೃಷ್ಟಿಸಿದವರು ಯಾರು’ ಎಂದು ‘ಕಾಸ್ಟ್ ಮ್ಯಾಟರ್ಸ್’ ಕೃತಿಯ ಲೇಖಕ ಸೂರಜ್ ಎಂಗಡೆ ಪ್ರಶ್ನಿಸಿದರು.
ಜೈಪುರ ಸಾಹಿತ್ಯೋತ್ಸವದಲ್ಲಿ ಅವರ ಕೃತಿಯ ಶೀರ್ಷಿಕೆಯದ್ದೇ ಹೆಸರಿನ ಗೋಷ್ಠಿಯಲ್ಲಿ ಭಾನುವಾರ ಅವರು ಸಂವಾದದಲ್ಲಿ ಮಾತನಾಡಿದರು.
ಜೈ ಭೀಮ್ ಎಂದು ಹೇಳಲು ಆಗುತ್ತಿರುವ ಭಯವೇ ಆಧುನಿಕ ಸಮಾಜದ ಭಾರ. ಇದನ್ನು ತೊಡೆಯದಿದ್ದರೆ ಅಂಥ ಸಮಾಜಕ್ಕೆ ಭವಿಷ್ಯವಿಲ್ಲ. ದಲಿತರು ತಮ್ಮನ್ನು ಮುಕ್ತವಾಗಿ ಅಭಿವ್ಯಕ್ತಿಸಿಕೊಳ್ಳಲು ಅವಕಾಶ ಸಿಗಬೇಕಿದೆ ಎಂದು ಪ್ರತಿಪಾದಿಸಿದರು.
‘ಜಾತಿ ಒಂದು ರೂಪಕಾತ್ಮಕ ಸತ್ಯವಲ್ಲ. ಅಡಿಗಡಿಗೂ ಎದುರಾಗುವ ಅವಮಾನ. ದಲಿತರು ಜಾತಿಯ ಕಾರಣಕ್ಕಾಗಿಯೇ ಸಮಾಜದ ವಿವಿಧ ಸ್ತರಗಳಲ್ಲಿ ಅವಕಾಶಗಳನ್ನು ಕಳೆದುಕೊಂಡರು ಮತ್ತು ಇತರರು ಮಾಡಲು ಹೇಸಿಗೆ ಪಟ್ಟುಕೊಂಡಂಥ ಕೆಲಸಗಳಿಗೆ ಅಂಟಿಕೊಂಡರು’ ಎಂದು ಭಾವುಕರಾಗಿ ಹೇಳಿದರು.
ದಲಿತರದು ಮಾನವೀಯತೆಯ ಹೋರಾಟ. ತಮ್ಮನ್ನೂ ಕೂಡ ಒಳಗೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ. ಪ್ರತ್ಯೇಕತೆ ದಲಿತರ ಹೋರಾಟದ ಆದ್ಯತೆಯಲ್ಲ ಎಂದರು. ಸಾಹಿತಿ ಹಾಗೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊಫೆಸರ್ ಸುರೀಂದರ್ ಎಸ್. ಜೋಧ್ಕಾ ಸಂವಾದ ನಡೆಸಿಕೊಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.