ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive l ಬೆಳ್ಗಲ್ಲು: ಬರಿಗೊಡಗಳಿಗೆ ಸಮಾಧಾನ...

Last Updated 4 ಅಕ್ಟೋಬರ್ 2020, 6:27 IST
ಅಕ್ಷರ ಗಾತ್ರ

‘ಬರಿಗೊಡಗಳಿಗೆ ಸಮಾಧಾನ’ ಇದು ಕೆ.ಎಸ್. ನರಸಿಂಹ ಸ್ವಾಮಿ ಅವರ ‘ಶಿಲಾಲತೆ’ (1958) ಸಂಕಲನದ ಪದ್ಯ. ದಾಂಪತ್ಯಗೀತೆಗಳಿಂದಲೇ ಜನಪ್ರಿಯರಾದ ಕನ್ನಡದ ಬಹುಮುಖ್ಯ ಕವಿ ಕೆೆಎಸ್‌ನ ನವ್ಯಕಾಲದಲ್ಲಿದ್ದೂ ಅದರ ಮುಖ್ಯಲಕ್ಷಣಗಳಿಂದ ಭಿನ್ನವಾದ ದಾರಿ ತುಳಿದವರು. ಈ ಪದ್ಯ ಅವರ ಕಾವ್ಯನದಿಯ ಇನ್ನೊಂದು ಕವಲನ್ನು ತೋರಿಸುವ ಹಾಗಿದೆ. ಮೊದಲ ಓದಿಗೆ ಕೆಎಸ್‌ನ ಇಂಥ ಪದ್ಯಗಳನ್ನೆಲ್ಲ ಬರೆದಿದ್ದಾರೆಯೇ ಎಂದು ಅಚ್ಚರಿ ಹುಟ್ಟಿಸುತ್ತದೆ ಆದರೆ ನಂತರದ ಓದುಗಳಲ್ಲಿ ನೀರಲ್ಲಿ ನೆನೆಹಾಕಿದ ಹೆಸರಕಾಳಂತೆ ನಿಧಾನಕ್ಕೆ ಮಿದುವಾಗಿ, ಹಸಿರು ಚೆಲ್ಲಿಯಲ್ಲಿ ಬಿಳೀ ಬಿರುಕು ಮೂಡಿ ಹದವಾಗಿ ಮೊಳಕೆಯೊಡೆದ ಹಾಗೆ ಜೀವಂತಗೊಳ್ಳುತ್ತ ಹೋಗುತ್ತದೆ. ಎದೆಯಲ್ಲಿ ಬೇರೂರಿ ಮಿದುಳಲ್ಲಿ ಚಿಗುರತೊಡಗುತ್ತದೆ.

ಪದ್ಯ ಹೀಗಿದೆ:

ಬರಿಗೊಡಗಳಿಗೆ ಸಮಾಧಾನ

‌ಬರಿಗೊಡಗಳಿಗೆ ಸಮಾಧಾನ ಹೇಳುತಿದೆ ನೀರಿಲ್ಲದ ನಲ್ಲಿ

ಮಟಮಟ ಮಧ್ಯಾಹ್ನದಲ್ಲಿ,

ಬೀದಿಯೊಳಗಾಗಿ ಒಂದು ತಲೆಯಿಲ್ಲ;

ಬಿಸಿಲೇ ಎಲ್ಲ!

ನಿರ್ಜೀವವಾಗಿದೆ ನಿರಂತರ ನಿರ್ಭಾಗ್ಯ ನೀಲಗಗನ.

(ರಾತ್ರಿಯ ಮಾತು ರಾತ್ರಿಗಾಯಿತು; ಈಗ ಹೇಳಿ!)

ಒಂದಾದರೂ ಬಿಳಿಮುಗಿಲೇ, ಶಾಂತಿಯೇ, ರಾಮ ರಾಮ!

ಹತ್ತು ಲಕ್ಷ ಜನದುಸಿರಾಚೆಗೆ, ಊರಾಚೆಗೆ

ಯಾರದೋ ಪಾಳು ಹೊಲದೊಳಗೆ

ತಲೆಯ ತಗ್ಗಿಸಿ ಸುಟ್ಟ ಕೊಳೆಯನು ಮೇಯುತಿವೆ

ಊರ ದನ ಗುಂಪುಗುಂಪಾಗಿ; ನಿಮಿಷದ ಹಿಂದೆ

ಕೊರಳ ಗೆಜ್ಜೆಯ ಇಂಪು ಹರಿದಿತ್ತು ಬೇಲಿಗಳ ಮೇಲೆ.

ಹೊಗೆಯ ಗೋಪುರವೇಳುತಿದೆ ಬಂಡೆಗಳ ಮುಂದೆ,

ತರಗೆಲೆ ರಾಸಿಗಾಗುತಿದೆ ನಿಷ್ಕಾಮದಹನ.

ಗುಡಿಯ ಬಾಗಿಲಲಿ ಬಿಸಿಲ್ಗುದುರೆಗಳ ನೀರವ ನಿರ್ಗಮನಮ.

ಮುತ್ತಿನ ಹಾರವಿಲ್ಲ, ಹತ್ತುವ ದೇವರಿಲ್ಲ,

ಕಚ್ಚುವುದಿಲ್ಲ, ಒದೆಯುವುದಿಲ್ಲ, ಹೆಸರಿಗೆ ಕುದುರೆ!

ಯಾರಿಗೆ ಬೇಕೀ ಗತವೈಭವಗಳ ಪರಂಪರೆ?

ಬೋರೆಯಿಂದ ಬಳಲಿ ಬಂದ ಕುಂಟುಗಾಳಿಗೆ

ಪರ್ವತವಾಗಿದೆ ಮಣ್ಣ ಮಾಳಿಗೆ.

ದೂರ ದಾರಿಯಲಿ ಎದ್ದ ದೂಳಿನಲಿ

ಉಸಿರೆಳೆಯುತ್ತಿದೆ ಲಾರಿ.

ಬಾಂದಳದ ವಿಮಾನ

ಅದೆಷ್ಟು ನಿಧಾನ?

ದಾರವಿಲ್ಲದ ಸೂಜಿ ನಾಟಿದೆ ನೀಲಿಬಟ್ಟೆಯಲ್ಲಿ

ತಲೆಗೆದರಿದ ಗಿಡಬಳ್ಳಿ ಬೆಂಡಾಗಿವೆ ಬಿಸಿಲಲ್ಲಿ.

ಮಣ್ಣಿನ ಬಣ್ಣ ಬಂದಿದೆ ಬೆಲುವಿನ ಕಣ್ಣಿಗೆ;

ನೀರಡಿಕೆಯ ದೀಪವುರಿಯುತಿದೆ; ‌‌

ಕವಿತೆಯ ತುಟಿಗಳಲಿ ಸಣ್ಣಗೆ.

ಇದು ಹಸಿರಿಲ್ಲದ ಕೆಸರಿಲ್ಲದ ಉಸಿರಿಲ್ಲದ ನರಕ.

ಜಳ್ಳಾಗಿದೆ ಈ ಮುದಿಮರವನಕ;

ಹಕ್ಕಿ ತಂಗುವುದಿಲ್ಲ

ಕೋತಿ ಜಗ್ಗುವುದಿಲ್ಲ

ೇನಿದರ ಅಮರ ಭಾವ?

ನೂರು ವಸಂತಗಳ ಹೀರಿ ಕಟ್ಟರೆಯಾಗಿದೆ ಇದರ ಜೀವ;

ಹಾವಿನ ಸಂಸಾರದ ಪೊಟ್ಟರೆಯಾಗಿದೆ ಇದರ ದೇಹ.

ಯಾರಿಗೆ ಬೇಕು ಇದರ ಸ್ನೇಹ?

ಬಿರುಗಾಳಿದಾದರೂ ಬೀಸಿ ‌

ಇದು ಬಿದ್ದರೆ ವಾಸಿ!

ಯಾವ ಬಣ್ಣ ಬಂತಂತೆ ಚೆಲುವಿನ ಕಣ್ಣಿಗೆ?

ಕವಿತೆಯ ತುಟಿಯಲಿ ಉರಿಯುವುದೇನು ಸಣ್ಣಗೆ?

ಹಳೆಯ ಪುಸ್ತಕದಲ್ಲಿ ಹಿಂದೆಯೇ ಬರೆದಿದೆ:

‘ತುಂಬಿದ ಕೊಡ ತುಳುಕುವುದಿಲ್ಲ’

(ಭೇಷಾಗಿದೆ ಬರವಣಿಗೆ)

ಸಾವಿರ ಬೀದಿಗಳಲ್ಲಿ ನಾಳೆ ನಡೆಯಲಿದೆ‌

ಭಾಗೀರಥಿಯ ಮೆರವಣಿಗೆ.

ಬರಿಗೊಡಗಳಿಗೆ ಸಮಾಧಾನ ಹೇಳಿದ್ದೂ ಹೇಳಿದ್ದೆ

ನೀರಿಲ್ಲ ನಲ್ಲಿ

ಮೃದು ಸ್ವರದಲ್ಲಿ:

‘ತುಂಬಿದ ಕೊಡ ತುಳುಕುವುದಿಲ್ಲ’.

ಬರಿಗೊಡವೂ ತುಳುಕುವುದಿಲ್ಲ,

ತುಳುಕಿದರೂ ಚಿಂತೆಯಿಲ್ಲ, ‌

ಎಂದಿಗೆ ಬರುವುದು ನೀರು?

ಉತ್ತರವೇ ಇಲ್ಲ. ಬರಿಗೊಡಗಳಿಗೆ ಸಮಾಧಾನ ಹೇಳುತಿದೆ ನೀರಿಲ್ಲದ ನಲ್ಲಿ.

‘ತುಂಬಿದ ಕೊಡ ತುಳುಕುವುದಿಲ್ಲ’

***

ಮೊದಲಿಗೆ ಈ ಪದ್ಯದ ‘ಓದುಗುಣ’ವನ್ನು ಆಸ್ವಾದಿಸೋಣ. ಪದ್ಯದ ಆರಂಭದ ಪ್ಯಾರಾದಲ್ಲಿ ‘ನಲ್ಲಿ- ಮಧ್ಯಾಹ್ನದಲ್ಲಿ’ ‘ತಲೆಯಿಲ್ಲ- ಬಿಸಿಲೇ ಎಲ್ಲ’ ಹೀಗೆ ಸಾಲಿನ ಕೊನೆಯ ಅಕ್ಷರದ ಪ್ರಾಸದ ಮೂಲಕ ಓದಿಸಿಕೊಳ್ಳುತ್ತದೆ. ಆದರೆ ಇದೇ ಶೈಲಿ ಮುಂದುವರಿಯುವುದಿಲ್ಲ. ಮುಂದಿನ ಪ್ಯಾರಾದ ಮೊದಲ ಸಾಲಿನಲ್ಲಿ “ನಿರ್ಜೀವ ನಿರಂತರ ನಿರ್ಭಾಗ್ಯ ನೀಲ’ ಹೀಗೆ ‘ನಿ’ ಅಕ್ಷರ ಪ್ರತಿಪದದ ಆರಂಭದಲ್ಲಿ ಬಂದು ಸಾಲಿನೊಳಗೇ ಮತ್ತೊಂದು ಲಯವನ್ನು ಪಡೆದುಕೊಳ್ಳುತ್ತದೆ. ಮುಂದಿನ ಕೆಲವು ಸಾಲುಗಳ ನಂತರ ಬರುವ ‘ಮುತ್ತಿನ ಹಾರವಿಲ್ಲ, ಹತ್ತುವ ದೇವರಿಲ್ಲ, ಕಚ್ಚುವುದಿಲ್ಲ, ಒದೆಯುವುದಿಲ್ಲ-ಹೆಸರಿಗೆ ಕುದುರೆ!’ “ದೂರ ದಾರಿಯಲಿ ಎದ್ದ ದೂಳಿನಲಿ’ ಇಂಥ ಸಾಲುಗಳಲ್ಲಿ ಸಾಲಿನೊಳಗೇ ಶಬ್ದಗಳು ಪರಸ್ಪರ ಖೋ ಕೊಟ್ಟುಕೊಂಡು ಜಿಗಿಯುತ್ತಿರುವಂತೆಯೇ ಕಾಣುತ್ತದೆ. ಈ ಪದ್ಯದಲ್ಲಿನ ಓದಿನ ಮಜದ ಕೆಲವು ಉದಾಹರಣೆಗಳನ್ನಷ್ಟೇ ಕೊಟ್ಟೆ. ಇಡೀ ಪದ್ಯ ಒಂದೇ ಲಯಧಾಟಿಯಲ್ಲಿ ರೂಪುಗೊಳ್ಳದೇ ಹೊಸಹೊಸ ಲಯ ಕಟ್ಟಿಕೊಳ್ಳುತ್ತಾ ಅದನ್ನು ತಾನೇ ಮುರಿದುಕೊಳ್ಳುತ್ತಾ ತನ್ನನ್ನು ಹೇಗೆ ಓದಬೇಕು ಎನ್ನುವುದನ್ನು ಓದುಗನಿಗೆ ತಾನೇ ಕಲಿಸಿಕೊಡುತ್ತದೆ. ಒಮ್ಮೆ ಈ ಪದ್ಯವನ್ನು ಗಟ್ಟಿಯಾಗಿ ಓದಿಕೊಂಡರೆ ಈ ಮಾತುಗಳು ಸ್ಪಷ್ಟವಾಗಬಹುದು.

‘ಬರಿಗೊಡಗಳಿಗೆ ಸಮಾಧಾನ’ ಇದು ಎಂದಿನ ಕೆ.ಎಸ್.ನ. ಅವರ ಜನಪ್ರಿಯ ಮಾದರಿಯ ಪದ್ಯ ಅಲ್ಲ. ಈ ಪದ್ಯವನ್ನು ಓದುತ್ತ ಹೋದಂತೆ ನನಗೆ ಚಕ್ಕನೇ ಅಡಿಗರ ನೆನಪಾಗುತ್ತದೆ. ನರಸಿಂಹಸ್ವಾಮಿ ಅವರ ಪದ್ಯಗಳಲ್ಲಿ ಒಂದು ಸಮೃದ್ಧಿ ಇರುತ್ತದೆ. ಅಂದರೆ ನೋವು, ದುಃಖ ಇರುವುದಿಲ್ಲ ಅಂತಲ್ಲ. ಆದರೆ ಆ ನೋವು ದುಃಖಗಳೆಲ್ಲ ಮನುಷ್ಯನ ಮನಸ್ಸಿಗೆ ಸಂಬಂಧಿಸಿದ್ದು. ಮನುಷ್ಯ ಸಂಬಂಧಗಳಿಂದ ಹುಟ್ಟಿದ್ದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸಮೃದ್ಧ ಪರಿಸರದಲ್ಲಿರುವ ಮನುಷ್ಯನ ನೋವುಗಳವು. ಆ ಪರಿಸರ ಶ್ರೀಮಂತಿಕೆ ಎನ್ನವುದು ಕೆ.ಎಸ್.ನರಸಿಂಹಸ್ವಾಮಿ ಅವರ ಬಹುತೇಕ ಜನಪ್ರಿಯ ಪದ್ಯಗಳ ಭಿತ್ತಿಯಲ್ಲಿದೆ. ಆದರೆ ಈ ಪದ್ಯದಲ್ಲಿನ ವಾತಾವರಣ ಈ ಮಾದರಿಗೆ ಸಂಪೂರ್ಣ ವಿರುದ್ಧವಾದದ್ದು. ಪದ್ಯ ಶುರುವಾಗುವುದೇ ಮಟಮಟ ಮಧ್ಯಾಹ್ನದ ಬಿರುಬಿಸಿಲಿನ ನೀರಿಲ್ಲದ ನಲ್ಲಿಯ ಸಮೀಪ ಇಟ್ಟಿರುವ ಖಾಲಿಕೊಡಗಳ ಬರಗಾಲದ ಚಿತ್ರದ ಮೂಲಕ. ಇಡೀ ಪದ್ಯದಲ್ಲಿಯೂ ಒಣ ಮುದಿ ಮರ ಸುಟ್ಟ ಕೊಳೆ, ನಿರ್ಭಾಗ್ಯ ನೀಲಗಗನ, ದೂರ ದಾರಿಯಲಿ ಎದ್ದ ದೂರಿನಲಿ ಉಸಿರೆಳೆಯುತ್ತಿರುವ ಲಾರಿ, ತಲೆಗೆದರಿದ ಗಿಡಬಳ್ಳಿ ಹೀಗೆ “ಹಸಿರಿಲ್ಲದ ಕೆಸರಿಲ್ಲದ ಉಸಿರಿಲ್ಲದ ನರಕ’ದ ಚಹರೆಗಳಲ್ಲಿಯೇ ಪದ್ಯ ಬೆಳೆಯುತ್ತಾ ಹೋಗುತ್ತದೆ. ಈ ವಾತಾವರಣ ಅಡಿಗರ ಅನೇಕ ಪದ್ಯಗಳಲ್ಲಿ ಬರುವ ವಾತಾವರಣಕ್ಕೆ ತೀರ ಹತ್ತಿರವಾದದ್ದು.

ಪದ್ಯದಲ್ಲಿ ಬರುವ “ಬಾಂದಳದ ವಿಮಾನ/ ಅದೆಷ್ಟು ನಿಧಾನ?’ ಇದು ಅಡಿಗರ ಪದ್ಯದಲ್ಲಿ ಬರಬಹುದಾಗಿದ್ದ ಸಾಲು ಅನಿಸುತ್ತದೆ. ಅಲ್ಲದೇ ಈ ಸಾಲುಗಳು ಕಟ್ಟಿಕೊಡುವ ರೂಪಕಚಿತ್ರವೂ ಅಡಿಗರಿಗೆ ಪ್ರಿಯವಾಗಬಹುದಾಗಿದ್ದುದು. ಇದಕ್ಕಿಂತ ಕುತೂಹಲ ಕೆರಳಿಸಿದ ಇನ್ನೊಂದು ಸಾಲು ‘ಮಣ್ಣಿನ ಬಣ್ಣ ಬಂದಿದೆ ಚೆಲುವಿನ ಕಣ್ಣಿಗೆ’ ಎಂಬುದು. ಈ ಸಾಲು ಓದಿದ ತಕ್ಷಣ ಅಡಿಗರ ಮೋಹನ ಮುರಳಿಯ “ನಿನ್ನ ಮಣ್ಣಿನ ಕಣ್ಣನು’ ಎಂಬ ಸಾಲು ನೆನಪಾಗುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಅಡಿಗರು ಮಣ್ಣಿನ ಕಣ್ಣು ಎಂಬುದನ್ನು ಯಾವ ಭಾವಭಿತ್ತಿಯಲ್ಲಿ ಬಳಸಿಕೊಂಡಿದ್ದಾರೋ ಅದಕ್ಕಿಂತ ಪೂರ್ತಿ ಬೇರೆಯದೇ ರೀತಿಯಲ್ಲಿ ಇಲ್ಲಿ ಮಣ್ಣು ಮತ್ತು ಕಣ್ಣು ಎಂಬುದನ್ನು ಬಳಸಿಕೊಳ್ಳಲಾಗಿದೆ. ಅದು ಇನ್ನೂ ಸ್ಪಷ್ಟವಾಗುವುದು ಕವಿತೆಯ ಮುಂದಿನ ಭಾಗದಲ್ಲಿ ‘ಮಣ್ಣಿನ ಬಣ್ಣ ಬಂದಿದೆ ಚೆಲುವಿನ ಕಣ್ಣಿಗೆ’ ಎಂದು ಹೇಳಿದ ಅದೇ ಕವಿ ಮುಂದಿನ ಕೆಲವೇ ಸಾಲುಗಳಲ್ಲಿ ಕೊಂಚ ವ್ಯಂಗ್ಯವೂ ಇದೆಯೋ ಎಂಬಂತೆ ‘ಯಾವ ಬಣ್ಣ ಬಂತಂತೆ ಚೆಲುವಿನ ಕಣ್ಣಿಗೆ?’ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಒಂಥರ ಮಕ್ಕಳಿಗೆ ಉತ್ತರ ಉರುಹೊಡೆಸಿ ಕೊನೆಯಲ್ಲಿ ಮತ್ತೆ ಪ್ರಶ್ನೆ ಕೇಳುತ್ತಾರಲ್ಲ, ಆರೀತಿ. ಅಡಿಗರ ಪದ್ಯದ ವಾತಾವರಣವನ್ನೇ ಬಳಸಿಕೊಂಡು ಅವರಿಗೆ ಟಾಂಗ್ ಕೊಡುವ ತುಂಟತನವೂ ಈ ಪದ್ಯದಲ್ಲಿ ಕೆಲಸ ಮಾಡಿರಬಹುದೇ ಅಂತಲೂ ಅನ್ನಿಸುತ್ತದೆ. ಕನ್ನಡದ ಎರಡು ಪ್ರಮುಖ ಕವಿಗಳ ಪದ್ಯಜಗತ್ತಿನ ನಡುವಣ ಈ ಅಂತರ್‌ ಸಂಬಂಧ ಕೊಡುವ ಖುಷಿಯೇ ಬೇರೆ ಅಲ್ವಾ?

ಭಾಷೆಯೊಂದರಲ್ಲಿ ಇರುವ ಕೆಲವು ನುಡಿಚಿತ್ರಗಳು, ನುಡಿಗಟ್ಟುಗಳನ್ನು ಒಂದೇ ಭಾವ-ಅರ್ಥಕ್ಕಾಗಿ ಬಳಸಿ ಬಳಸಿ ಅವು ಎಷ್ಟು ಜಡ್ಗಡುಟ್ಟಿ ಹೋಗುತ್ತವೆಂಬದರೆ ಕೊಂಚ ಬೇರೆ ಜಾಗದಲ್ಲಿ ಅವುಗಳನ್ನು ಇಟ್ಟಾಗಲೂ ಅದು ದೇವರ ಕೋಣೆಯಲ್ಲಿಟ್ಟ ಮದ್ಯದ ಬಾಟಲಿಯಂತೆ ಅಸಂತವಾಗಿಯೂ ಅಪಚಾರವಾಗಿಯೂ ಕಂಡುಬಿಡುವ ಅಪಾಯವಿರುತ್ತದೆ. ಆದರೆ ಒಳ್ಳೆಯ ಕವಿ ಈ ಜಡ್ಡುಗಟ್ಟಿದ ನುಡಿಗಟ್ಟುಗಳನ್ನೇ ಬಳಸಿಕೊಂಡು ಅದರ ಇನ್ನೊಂದು ಆಯಾಮವನ್ನು ಹೇಳುತ್ತಾನೆ. ಅದೂ ಅಸಂಗತ ಅನ್ನಿಸದ ಹಾಗೆ. ನರಸಿಂಹಸ್ವಾಮಿಯವರ ಈ ಪದ್ಯದಲ್ಲಿಯೂ ಅಂಥ ಅನೇಕ ಉದಾಹರಣೆಗಳು ಕಾಣುತ್ತವೆ. ಅವರು ಈ ಸಿದ್ಧಚೌಕಟ್ಟನ್ನು ಎಷ್ಟು ಗಟ್ಟಿಯಾಗಿ ಒಡೆದುಕಟ್ಟುತ್ತಾರೆಂದರೆ ಅದು ಹಳೇ ಸೈಕಲ್‍ಗೆ ಹಾಕಿದ ಹೊಸ ಸೀಟಿನಂತೇ ಹೊಳೆಯುತ್ತದೆ. ಸಾಮಾನ್ಯವಾಗಿ ಸ್ವಚ್ಛ ಆಕಾಶವನ್ನು ಪ್ರಶಾಂತತೆಗೆ, ನಿರ್ಮಲತೆಗೆ ರೂಪಕವಾಗಿ ಬಳಸುವುದು ವಾಡಿಕೆ. ಆದರೆ ಇಲ್ಲಿ ಕವಿ ‘ನಿರ್ಜೀವವಾಗಿದೆ ನಿರಂತರ ನಿರ್ಭಾಗ್ಯ ನೀಲಗಗನ’ ಎನ್ನುತ್ತಾರೆ. ಇಲ್ಲಿ ನೀಲಗಗನ ನಿರ್ಜೀವ, ನಿರ್ಭಾಗ್ಯ. ಇದಲ್ಲದೇ ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ನುಡಿಗಟ್ಟು ಇಲ್ಲಿ ಬಳಕೆಯಾಗಿರುವುದೂ ಅಸಂಪ್ರದಾಯಿಕವಾಗಿಯೇ.

ಈ ಪದ್ಯ ಕಟ್ಟಿಕೊಡುತ್ತಾ ಹೋಗುವ ಚಿತ್ರಗಳ ಚೌಕಟ್ಟೇ ಆಸಕ್ತಿದಾಯಕವಾದದ್ದು. ನೀರಿಲ್ಲದ ನಲ್ಲಿ ಮತ್ತು ಅದರ ಸುತ್ತ ಇಟ್ಟ ಖಾಲಿ ಕೊಡಗಳು ಹೀಗೆ ಒಂದು ನಿರ್ದಿಷ್ಟ ಜಾಗದ ಚಿತ್ರದೊಂದಿಗೆ ಪದ್ಯ ಶುರುವಾಗುತ್ತದೆ. ಆದರೆ ‘ಬೀದಿಯೊಳಗಾಗಿ ಒಂದು ತಲೆಯಿಲ್ಲ; ಬಿಸಿಲೇ ಎಲ್ಲ!’ ಎಂಬಲ್ಲಿಗೆ ಝೂಮ್ ಔಟ್ ಆಗಿ ಒಂದೀಡೀ ಬೀದಿಗೆ ಚಿತ್ರ ವಿಸ್ತರಿಸಿಕೊಳ್ಳುತ್ತದೆ. ನಂತರದ ಸಾಲುಗಳಲ್ಲಿ ಚಕ್ಕನೇ ನೋಟ ನೆಲದಿಂದ ‘ನಿರ್ಜೀವವಾಗಿದೆ ನಿರಂತರ ನಿರ್ಭಾಗ್ಯ ನೀಲಗಗನ’ಕ್ಕೆ ಹಾರುತ್ತದೆ. ಮತ್ತೆ ಯಾರದೋ ಪಾಳು ಬಿದ್ದಿರುವ ಭೂಮಿಯಲ್ಲಿ ಸುಟ್ಟ ಕೊಳೆಯನ್ನು ಮೇಯುತ್ತಿರುವ ದನಗಳ ಗುಂಪು. ತರಗೆಲೆಗಳಿಗೆ ಇಟ್ಟ ಬೆಂಕಿಯಿಂದ ಎದ್ದ ಹೊಗೆಯ ಉರಿಚಿತ್ರ ಹೀಗೆ ಒಂದೇ ಭಾವವನ್ನು ಬೇರೆ ಬೇರೆ ಚಿತ್ರಗಳ ಮೂಲಕ ಕಟ್ಟಿಕೊಡುತ್ತಾ ಹೋಗುತ್ತಾರೆ. ಮುಂದೆ ಗುಡಿಯ ಬಾಗಿಲಲ್ಲಿನ ಬಿಸಿಲ್ಗುದುರೆಗಳ ಚಿತ್ರದಲ್ಲಿ ಕವಿಗೆಗೆ ಮತ್ತೊಂದೇ ಆಯಾಮ ದಕ್ಕುತ್ತದೆ. ‘ಗುಡಿಯ ಬಾಗಿಲಲಿ ಬಿಸಿಲ್ಗುದುರೆಗಳ ನೀರವ ನಿರ್ಗಮನ:/ ಮುತ್ತಿನ ಹಾರವಿಲ್ಲ, ಹತ್ತುವ ದೇವರಿಲ್ಲ,/ ಕಚ್ಚುವುದಿಲ್ಲ, ಒದೆಯುವುದಿಲ್ಲ- ಹೆಸರಿಗೆ ಕುದುರೆ!/ ಯಾರಿಗೆ ಬೇಕೀ ಗತವೈಭವದ ಪರಂಪರೆ?’ ಈ ಕೊನೆಯ ಸಾಲು ಓದುತ್ತಿದ್ದಂತೆಯೇ ಇಲ್ಲಿಯವರೆಗೆ ಹೇಳಿದ ಬರಗಾಲದ ಹೊರ ಲಕ್ಷಣಗಳನ್ನು ಸೂಚಿಸುವ ಬಿಡಿ ಬಿಡಿ ರೂಪಕಗಳು ಪಟ್ಟನೇ ಒಂದಕ್ಕೊಂದು ಜೋಡಿಸಿಕೊಂಡು ಇಡಿಯಾಗಿ ಬೆರೆಯದೇ ಪ್ರಭೆಯಲ್ಲಿ ಹೊಳೆಯಲಾರಂಭಿಸುತ್ತವೆ. ಮುಂದೆ ‘ಮುದಿಮರವನಕ’ದ ವಿವರಗಳನ್ನು ಹೇಳುವಾಗಲೂ ಕೊನೆಯಲ್ಲಿ ಹೇಳುವ ‘ಬಿರುಗಾಳಿಯಾದರೂ ಬೀಸಿ/ಇದು ಬಿದ್ದರೆ ವಾಸಿ’ ಎಂಬ ಸಾಲುಗಳನ್ನು ಈ ಸಾಲುಗಳ ಜತೆಯಲ್ಲಿಯೇ ಓದಿಕೊಂಡರೆ ಹೊಸದೊಂದು ಹೊಳಹು ಗೋಚರಿಸುತ್ತದೆ.

ಮೊದಲರ್ಧದಲ್ಲಿ ಇಂಥದ್ದೇ ಬರಡು ಚಿತ್ರಗಳನ್ನು ಕಟ್ಟುತ್ತಾ ಹೋಗುವ ಪದ್ಯದ ಗತಿ ‘ಯಾವ ಬಣ್ಣ ಬಂತಂತೆ ಚೆಲುವಿನ ಕಣ್ಣಿಗೆ?’ ಎಂಬ ಪ್ಯಾರಾದಿಂದ ಬದಲಾಗುತ್ತದೆ. ಈ ಸಾಲುಗಳಲ್ಲಿ ಕಂಡೂ ಕಾಣದಂತೇ ಅಡಕವಾಗಿರುವ ವ್ಯಂಗ್ಯದ ಬಗ್ಗೆ ಆಗಲೇ ಗುರ್ತಿಸಿದ್ದೇವೆ. ಇದೇ ವ್ಯಂಗ್ಯ ಇನ್ನಷ್ಟು ಸ್ಪಷ್ಟಗೊಳ್ಳುವುದು ಮುಂದಿನ ಸಾಲುಗಳಲ್ಲಿ ‘ಹಳೆಯ ಪುಸ್ತಕದಲ್ಲಿ ಹಿಂದೆಯೇ ಬರೆದಿದೆ;/ ‘ತುಂಬಿದ ಕೊಡ ತುಳುಕುವುದಿಲ್ಲ’ /(ಭೇಷಾಗಿದೆ ಬರವಣಿಗೆ).’

ಮುಂದಿನ ಸಾಲುಗಳನ್ನೂ ಹಾಗೇ ಸುಮ್ಮನೇ ಒಂದುಸಲ ಓದಿಕೊಳ್ಳೋಣ. ‘ಬರಿಗೊಡಗಳಿಗೆ ಸಮಾಧಾನ ಹೇಳಿದ್ದೂ ಹೇಳಿದ್ದೆ/ ನೀರಿಲ್ಲದ ನಲ್ಲಿ/ ಮೃದು ಸ್ವರದಲ್ಲಿ;/ ‘ತುಂಬಿದ ಕೊಡ ತುಳುಕುವುದಿಲ್ಲ.’ ಎಂಬಲ್ಲಿಗೆ ಈ ತುಂಬಿದ ಕೊಡವು ಪದ್ಯದ ಆರಂಭದಲ್ಲಿನ ನೀರಿಲ್ಲದ ನಲ್ಲಿ ಸುತ್ತಲಿನ ಖಾಲಿ ಕೊಡಗಳಿಗೆ ಮುಖಾಮುಖಿಯಾಗಿಬಿಡುತ್ತದೆ. ಈ ಮುಖಾಮುಖಿಯಲ್ಲಿನ ವಿಚಿತ್ರ ಅಸಂಗತತೆಯನ್ನು ಗಮನಿಸಿ. ಹಾಹಾಕಾರದ ಬರಗಾಲದಲ್ಲಿ ನಲ್ಲಿ ತನ್ನೆದುರಿನ ಖಾಲಿ ಕೊಡಗಳಿಗೆ ಸಮಾಧಾನ ಹೇಳುತ್ತಿದೆ. ಅದೂ ಹೇಗೆ ‘ತುಂಬಿದ ಕೊಡ’ದ ನುಡಿಗಟ್ಟಿನಲ್ಲಿ. ಅದೇನೋ ಅಂಥಾರಲ್ಲ, ಅಜ್ಜಿಗೆ ಅರಿವೆಯ ಚಿಂತೆಯಾದರೆ ಮಗಳಿಗೆ ಮದುವೆಯ ಚಿಂತೆ ಅಂತ. ಹಾಗಾಯ್ತು ಇದು. ಈ ಸಮಾಧಾನಕ್ಕೆ ಪ್ರತಿಕ್ರಿಯೆಯಂತೇ ಬರುವ ಪದ್ಯದ ಮುಂದಿನ ಸಾಲುಗಳನ್ನು ನೋಡಿ. ‘ಬರಿಗೊಡವೂ ತುಳುಕುವುದಿಲ್ಲ,/ ತುಳುಕಿದರೂ ಚಿಂತೆಯಿಲ್ಲ,/ ಎಂದಿಗೆ ಬರುವುದು ನೀರು?’. ಹಸಿದು ಕಂಗಾಲಾಗಿರುವ ಹೊಟ್ಟೆಗಳ ಎದುರು ‘ಸಿಹಿತಿನಿಸು ತಿಂದರೆ ಮಧುಮೇಹ ಬರುತ್ತದೆ. ಕೊಬ್ಬು ಇರುವ ಆಹಾರ ತಿಂದರೆ ಹೃದಯಾಘಾತ ಆಗ್ತದೆ. ಡ್ರೈ ಪುಡ್ಸ್ ಜಾಸ್ತಿ ತಿನ್ನಬೇಕ ಅಂತೆಲ್ಲಾ ಆರೋಗ್ಯ ಶಾಸ್ತ್ರದ ಬಗ್ಗೆ ಉಪದೇಶ ಮಾಡಿದರೆ ಹೇಗಿರುತ್ತದೆ ಹೇಳಿ? “ಮದುಮೇಹ ಬರುವುದು ಅತ್ಲಾಗಿರಲಿ. ಊಟ ಕೊಡಿಸಿ ಸಾಕು’ ಎಂದೆಲ್ಲ ಆರೋಗ್ಯದ ಟಿಪ್ಸ್ ಕೊಟ್ಟರೆ ಹೇಗಿರುತ್ತದೆ? ಹಾಗೆ ಇದು “ತುಳುಕಿದರೂ ಚಿಂತೆಯಿಲ್ಲ,/ ಎಂದಿಗೆ ಬರುವುದು ನೀರು?’

ಇಲ್ಲಿಗೆ ಇಡೀ ಪದ್ಯದಲ್ಲಿ ಎರಡು ಸ್ಥಿತಿಗಳಲ್ಲಿ ವಿಭಾಗವಾಗುತ್ತದೆ. ಒಂದು ಹನಿ ನೀರಿಗಾಗಿ ಕಾದಿರುವ ನಿರೀಕ್ಷೆಯ ಖಾಲಿ ಕೊಡಗಳ ಮನಸ್ಥಿತಿ. ಮತ್ತೊಂದು ಹಾಗೆ ಜೀವ ಹಿಡಿದು ನೀರಿಗಾಗಿ ಕಾದಿರುವ ಕೊಡಗಳೆದುರು ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ನಾಣ್ಣುಡಿಯ ಸಮಾಧಾನ (!?) ಮಾಡುವ ನಲ್ಲಿಯ ಮನಃಸ್ಥಿತಿ. ಈ ಮನಸ್ಥಿತಿಯಲ್ಲಿ ಮತ್ತೆ ಪದ್ಯವನ್ನು ಹಿಂದಿನಿಂದ ಓದುತ್ತಾ ಹೋದರೆ ಹೊಸದೇ ದಾರಿಯಲ್ಲಿ ಕವಿತೆ ಕರೆದೊಯ್ಯುತ್ತದೆ. ಕೊನೆಗೂ ಈ ಎರಡೂ ಮನಸ್ಥಿತಿಗಳ ಉತ್ತರ ಹುಟ್ಟದ ಮುಖಾಮುಖಿಯಲ್ಲಿಯೇ ಕವಿತೆ ಕೊನೆಗೊಳ್ಳುತ್ತದೆ.

ಇಷ್ಟೆಲ್ಲ ಆಟವಾಡಿ ಕೂಡ ‘ಹತ್ತು ಲಕ್ಷ ಜನದುಸಿರಾಚೆಗೆ’ ‘ಸಾವಿರ ಬೀದಿಗಳಲ್ಲಿ ನಾಳೆ ನಡೆಯಲಿದೆ/ಭಾಗೀರಥಿ ಮೆರವಣಿಗೆ’ ಇಂಥ ಕೆಲವು ಸಾಲುಗಳು ಇನ್ನೂ ಗುಟ್ಟು ಬಿಟ್ಟುಕೊಡದೇ ಸತಾಯಿಸುತ್ತಿವೆ. ಮತ್ತೊಮ್ಮೆ ಓದಿನ ಆಟಕ್ಕಿಳಿಯುವಂತೆ ಕರೆಯುತ್ತಿವೆ. ಬಹುಶಃ ಅವುಗಳು ನನ್ನೊಳಗೆ ತೆರೆದುಕೊಳ್ಳುವ ಅದೃಷ್ಟಕ್ಕಾಗಿ ಇನ್ನಷ್ಟು ಓದಿನೊಂದಿಗೆ ಕಾಯಬೇಕೇನೋ. ಒಂದು ಒಳ್ಳೆಯ ಕವಿತೆ ಸುಲಭಕ್ಕೆ ಬಿಚ್ಚಿಕೊಳ್ಳದೇ ಸತಾಯಿಸುತ್ತದೆ. ಸಮಾಧಾನದ ಸಖ್ಯ ಬೇಡುತ್ತದೆ. ಒಂದಷ್ಟು ಬಿಟ್ಟುಕೊಟ್ಟೂ ‘ಎಲ್ಲವನ್ನೂ ತಿಳಿದುಕೊಳ್ಳುತ್ತೇನೆ’ ಎಂಬ ಅಹಂಕಾರವನ್ನು ತಣ್ಣಗೇ ಮುರಿಯುತ್ತದೆ. ಓದುಗನ ಪಾಲಿನ ಒಳ್ಳೆ ಪದ್ಯವಾಗಲು ಇದಕ್ಕಿಂತ ಇನ್ನೇನು ಬೇಕು ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT