ಕಬ್ಬಾಳಮ್ಮ ದೇವಿಯ ಬ್ರಹ್ಮರಥೋತ್ಸವ

ಸೋಮವಾರ, ಮಾರ್ಚ್ 25, 2019
26 °C

ಕಬ್ಬಾಳಮ್ಮ ದೇವಿಯ ಬ್ರಹ್ಮರಥೋತ್ಸವ

Published:
Updated:
Prajavani

ಉತ್ತರಹಳ್ಳಿ ಸಮೀಪದ ಅರೇಹಳ್ಳಿಯ ತಪೋವನಕ್ಷೇತ್ರ ಹನುಮಗಿರಿಯಲ್ಲಿನ ಪ್ರಸಿದ್ಧ ಶ್ರೀ ಕಬ್ಬಾಳಮ್ಮ ದೇವಿಯ ಬ್ರಹ್ಮರಥೋತ್ಸವ, ಜಾತ್ರಾ ಮಹೋತ್ಸವ, ಜಾನಪದ ಉತ್ಸವ ಮಾರ್ಚ್ 14 ಮತ್ತು 15ರಂದು ನಡೆಯಲಿದೆ. ಉತ್ಸವದ ಪ್ರಯುಕ್ತ ತಪೋವನವನ್ನು ಹೂವಿನ ಅಲಂಕಾರ, ವಿದ್ಯುತ್ ದೀಪಗಳಿಂದ ಈಗಾಗಲೇ ಅಲಂಕರಿಸಲಾಗಿದೆ.

ಮಾರ್ಚ್ 14ರ ಗುರುವಾರ ಮುಂಜಾನೆ ಕಬ್ಬಾಳಮ್ಮ ದೇವರಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ದೇವತಾನಾಂದಿ, ರಕ್ಷಾಬಂಧನ, ಅಂಕುರಾರ್ಪಣ, ಮಹಾಮಂಗಳಾರತಿ, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 5.30ಕ್ಕೆ ಲಲಿತಾ ಸಹಸ್ರ ನಾಮಪಾರಾಯಣ, ಮಹಾಮಂಗಳಾರತಿ ನಡೆಯಲಿದೆ.

ಮಾರ್ಚ್ 15ರ ಶುಕ್ರವಾರ ಮುಂಜಾನೆ 6.30ಕ್ಕೆ ಮೂಲದೇವರಿಗೆ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆ, ಮಹಾಗಣಪತಿ ಹೋಮ, ನವಗ್ರಹ, ಮೃತ್ಯುಂಜಯ, ಪುರುಷಸೂಕ್ತ, ಶ್ರೀಸೂಕ್ತ ದುರ್ಗಾಸಹಿತ, ಲಲಿತಾಸಹಸ್ರನಾಮ ಹೋಮ, 11 ಗಂಟೆಗೆ ಪೂರ್ಣಾಹುತಿ, ರಥಕಲಶ, ರಥ  ಸಂಪ್ರೋಕ್ಷಣೆ, ರಥ ಬಲಿ ಹರಣ ನಡೆಯಲಿದೆ.

ಮದ್ಯಾಹ್ನ 12.35ಕ್ಕೆ ಕಬ್ಬಾಳಮ್ಮ ದೇವಿಯ ಬ್ರಹ್ಮರಥೋತ್ಸವ ನಡೆಯಲಿದ್ದು, ಚಿತ್ರದುರ್ಗ ಮತ್ತು ಬಾಗಲಕೋಟೆಯ ಸಿದ್ಧರಾಮೇಶ್ವರ ಭೋವಿ ಗುರುಪೀಠಾಧ್ಯಕ್ಷ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡುವರು.

ತಪೋವನ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿ ಸೇವಾ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಎಂ.ಕೃಷ್ಣಪ್ಪ, ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಬಿಬಿಎಂಪಿ ಸದಸ್ಯ ಹನುಮಂತಯ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ, ಅನ್ನದಾಸೋಹ ಕಾರ್ಯಕ್ರಮಕ್ಕೆ ಮಾಗಡಿ ಶಾಸಕ ಎ.ಮಂಜುನಾಥ್ ಚಾಲನೆ ನೀಡಲಿದ್ದು ರಥೋತ್ಸವ ಸಂದರ್ಭದಲ್ಲಿ ಭಕ್ತರಿಗಾಗಿ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿದೆ ನಡೆಯಲಿದೆ. ಕುಡಿಯುವ ನೀರು, ಕೋಸಂಬರಿ, ಮಜ್ಜಿಗೆ, ಪಾನಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ರಾತ್ರಿ ಪಂಚಮುಖಿ ಗಣಪತಿ, ಕಬ್ಬಾಳಮ್ಮದೇವಿ, ಲಕ್ಷ್ಮಿ ವೆಂಕಟೇಶ್ವರಸ್ವಾಮಿ, ಲಕ್ಷ್ಮಿನರಸಿಂಹ ಸ್ವಾಮಿ ದೇವರುಗಳ ಉತ್ಸವ, ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಪೂಜಾ ಕುಣಿತ, ಕಂಸಾಳೆ, ವೀರಭದ್ರನ ಕುಣಿತ ಸೇರಿದಂತೆ ಜಾನಪದಕಲೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಕ್ಷೇತ್ರದ ಸಂಸ್ಥಾಪಕ ವಿ.ಆಂಜನಪ್ಪ ಮಾತನಾಡಿ, ’‌ನೂರಾರು ವರ್ಷಗಳ ಹಿಂದೆ ಅರೇಹಳ್ಳಿ ಮತ್ತು ಉತ್ತರಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಹನುಮಗಿರಿ ಕ್ಷೇತ್ರದಲ್ಲಿ ವಿವಿಧ ದೇವರುಗಳ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದರು. ಹಲವು ದಶಕಗಳಿಂದ ತಪೋವನ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಸೇರಿಕೊಂಡು ಜಾತ್ರಾಮಹೋತ್ಸವ, ಬ್ರಹ್ಮರಥೋತ್ಸವ ನಡೆಸಿಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ.

ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಯುವ ಜನರು ಗ್ರಾಮೀಣ ಸಂಸ್ಕೃತಿಯನ್ನು ಮರೆಯಬಾರದು ಎಂಬ ಉದ್ದೇಶದಿಂದ ಜಾತ್ರೆಗೆ ವಿಶೇಷ ಮೆರುಗನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !