ಕಮಲಜ್ಜಿ

ಮಂಗಳವಾರ, ಏಪ್ರಿಲ್ 23, 2019
31 °C

ಕಮಲಜ್ಜಿ

Published:
Updated:
Prajavani

ಸಂಗವ್ವನಿಂದ ಬಂದ ಈ ತುರ್ತು ಫೋನ್ ಕಾಲ್ ಪ್ರಕಾಶನ ಎದೆಬಡಿತ ಜಲ್ಲೆನ್ನುವ ಹಾಗೆ ಮಾಡಿತ್ತು. ಅವತ್ತು ರಾತ್ರಿಪಾಳಿ ಕೆಲಸ ಇರುವುದರಿಂದ ಮಧ್ಯಾಹ್ನ ಶೆಡ್‌ನಲ್ಲಿ ಅಂಗಾತ ಮಲಗಿ ಸೂಸುತ್ತಿದ್ದ ಸೂರ್ಯನ ಕಿರಣಗಳ ನಡುವೆ ಹರಿದಾಡುತ್ತಿದ್ದ ಕಸಕಡ್ಡಿಯ ಸಣ್ಣ ಕಣಗಳ ಲೋಕವೊಂದನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದ. ಹಳ್ಳಿಯಲ್ಲಿರುವ ಮನೆ ಮಿಂಚಂತೆ ಕಂಡು ಮಾಯವಾದಂತಾಯಿತು.

ಮಗ ಪ್ರಕಾಶ ಹೆಂಡತಿ, ಮಕ್ಕಳೊಂದಿಗೆ ಊರಿಗೆ ಬರುತ್ತಾನೆ ಎಂಬ ಸುದ್ದಿ ಕಿವಿಗೆ ಬಿದ್ದ ದಿನದಿಂದ ಕಮಲಜ್ಜಿ ಹೊಸ ಹುರುಪಿನೊಂದಿಗೆ ಮನೆಯಲ್ಲಿ ಓಡಾಡಿಕೊಂಡಿದ್ದಳು. ದುಡಿಯಲು ಬೆಂಗಳೂರು ಸೇರಿದ್ದ ಪ್ರಕಾಶ ಒಂದು ವರ್ಷದ ಮೇಲಾದರೂ ಮಸಳಿಪುರ ಕಡೆಗೆ ಮುಖ ಮಾಡಿರಲಿಲ್ಲ. ಮೊನ್ನೆ ಕಮಲಜ್ಜಿಯ ಮೈಯಲ್ಲಿ ಹುಷಾರಿಲ್ಲದ ವಿಷಯ ಗೊತ್ತಾಗಿ ತಕ್ಷಣ ಹೊರಟು ಬರುವೆನೆಂದು ತಿಳಿಸಿದ್ದ. ಹೀಗಾಗಿ, ಕಮಲಜ್ಜಿ ಓಣಿಯಲ್ಲಿ ದೊಡ್ಡವರು, ಸಣ್ಣವರೆನ್ನದೆ ಯಾರೇ ಎದುರಾದರೂ ಮೊಮ್ಮಕ್ಕಳು ಬರುತ್ತಿದ್ದಾರೆಂದು ಖುಷಿ ಖುಷಿಯಿಂದ ಹೇಳಿಕೊಂಡಿದ್ದಳು.

ಮೂರ್ನಾಲ್ಕು ದಿನದಿಂದ ಕಮಲಜ್ಜಿ ಬಳಸುತ್ತಿದ್ದ ಕೋಲು ಮೂಲೆಯಲ್ಲಿ ವಿಶ್ರಾಂತಿ ಪಡೆದಿತ್ತು. ಮೊಮ್ಮಕ್ಕಳೊಡನೆ ಆಟ ಆಡುತ್ತ, ಅಂಗಳದಲ್ಲಿ ಮಲಗಿಸಿಕೊಂಡು ಕಥೆ, ಹಾಡು ಹೇಳುತ್ತಾ ಮಗುವಾಗಿ ಕಳೆಯಬೇಕೆಂಬ ಆಸೆಯಲ್ಲಿ ಪಡಸಾಲೆ ತುಂಬಾ ಕೋಲಿನ ಸಹಾಯವಿಲ್ಲದೆ ಗೋಡೆಗೆ, ಕಂಬಕ್ಕೆ ಹಿಡಿಯುತ್ತ ಮಗುವಿನಂತೆ ನಡೆದಾಡಿಕೊಂಡಿದ್ದಳು. ಮಾಮೂಲಿಯಾಗಿ ಕಂಬಕ್ಕೆ ತಲೆದಿಂಬಿರಿಸಿ ತಂಬಾಕು ತಿನ್ನುತ್ತ ಕೂರುತ್ತಿದ್ದ ಕಮಲಜ್ಜಿ ಮಗ ಬರುವ ಸಂಭ್ರಮದಲ್ಲಿ ಒಳಕೋಣೆ, ಪಡಸಾಲಿ, ಅಂಗಳವನ್ನೆಲ್ಲ ಶುಚಿಗೊಳಿಸಿ ಅಟ್ಟದ ಮೇಲೆ ಇಟ್ಟಿದ್ದ ಪುಟ್ಟ ಮಕ್ಕಳು ಒತ್ತಿಕೊಂಡು ಹೊರಡುವ ಗಾಲಿ ಸೈಕಲ್ ತೆಗೆದು ಮೊಮ್ಮಗನಿಗೆ ನಡೆಸುವುದು ಕಲಿಸಬೇಕೆಂದು ಬಾಜು ಮನೆಯ ಹುಡುಗನನ್ನು ಕರೆದು ಕೆಳಗಿಳಿಸಿದ್ದಳು.

ಸದಾ ಮನೆ ಹೊರಗಿನ ಕಟ್ಟೆಯ ಮೇಲೆ ಕೂತು ಮೊಮ್ಮಕ್ಕಳು ಈಗ ದೊಡ್ಡವರಾಗಿರಬೇಕು. ನನ್ನನ್ನು ಗುರುತಿಸಬಹುದು. ಊರಿಗೆ ಬಂದಾಗ ಅವರಿಗೆಲ್ಲ ಅಂಗಡಿಗೆ ಕರೆದುಕೊಂಡು ಹೋಗಿ ಚಾಕ್ಲೆಟ್, ಬಿಸ್ಕೆಟ್, ಪೆಪ್ಪರಮೆಂಟು ತಿನ್ನಿಸಬೇಕೆಂದು ಎಲೆ– ಅಡಿಕೆ ಇಡುತ್ತಿದ್ದ ಪುಟ್ಟದಾದ ಚೀಲದಲ್ಲಿನ ದುಡ್ಡನ್ನು ಮತ್ತೆ ಮತ್ತೆ ಎಣಿಸುತ್ತಾ ಕೂರುತ್ತಿದ್ದಳು.

ಇದೇ ವಾರದ ಹಿಂದೆ ಕಮಲಜ್ಜಿ ಬೈಲಕಡೆಗೆ ಹೋದಾಗ ಹಂದಿಯೊಂದು ಗುದ್ದಿ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಳು. ತಲೆಯಿಂದ ಸ್ವಲ್ಪ ರಕ್ತವು ಸೋರಿತ್ತು. ಮಗ ಪ್ರಕಾಶ ಹಿಂದೊಮ್ಮೆ ಪೈಖಾನಿ ಕಟ್ಟಿಸಲು ಮುಂದಾದಾಗ ‘ಮನ್ಯಾಗ ಪೈಖಾನಿ ಕಟ್ತಿ ತಲೆಗಿಲೆ ಕೆಟ್ಟಾದೇನು’ ಎಂದು ಬೈದಿದ್ದು ನೆನಪಾಗಿ ತನ್ನನ್ನೇ ಶಪಿಸಿಕೊಂಡ ಕಮಲಜ್ಜಿಗೆ ಅವಮಾನ ಆದಂತಾಯಿತು.

‘ಎಲ್ಲಾ ಹಣೆಬರಹ ಯಾರ ಕೈಯಲ್ಲಿ ಏನಾದ... ಮ್ಯಾಲಿನಂವ ಕರಸಕೊಂಡಾಗ ಶಿವನ ಪಾದ ಸೇರಿದ್ರಾತು’ ಎಂದು ಮನದಲ್ಲಿ ಆಗಾಗ ಪಠಿಸುತ್ತಿದ್ದ ಮಂತ್ರ ಹೇಳಿಕೊಂಡಳು. ಪೆಟ್ಟು ಸ್ವಲ್ಪ ಜೋರಾಗಿಯೇ ಆಗಿದ್ದರಿಂದ ಆಗಾಗ ಜ್ವರ ಕಾಣಿಸಿಕೊಂಡು ಕಮಲಜ್ಜಿಯ ದೇಹವನ್ನು ಹಿಂಡಿ ಹಿಪ್ಪೆ ಮಾಡಿತ್ತು. ಒಬ್ಬಳೇ ಮನೆಯಲ್ಲಿ ಗೊಣಗಾಡುತ್ತ ಪಡಸಾಲೆಯಲ್ಲಿದ್ದ ಮಂಚದ ಮೇಲೆ ಸದಾ ಮಲಗುತ್ತಿರುವುದನ್ನು ಕಂಡ ಬಾಜು ಮನೆಯ ಸಂಗವ್ವ ಕಮಲಜ್ಜಿಯ ಕಷ್ಟ ನೋಡಲಾಗದೆ ಬೆಂಗಳೂರಿನಲ್ಲಿದ್ದ ಪ್ರಕಾಶನಿಗೆ ಫೋನ್ ಮಾಡಿ ಎಲ್ಲವನ್ನೂ ವಿವರಿಸಿ ತುರ್ತಾಗಿ ಬಂದು ತಾಯಿಯ ಆರೋಗ್ಯದ ಕಡೆ ಗಮನಹರಿಸಲು ಹೇಳಿದ್ದಳು.

ಪ್ರಕಾಶ ಡಿಗ್ರಿ ಮುಗಿಸಿದ್ದನಾದರೂ ಓದು ತಲೆಗೆ ಹತ್ತದೆ ಹೊಲ, ಮನೆ ಕೆಲಸ ಮಾಡಿಕೊಂಡಿದ್ದ. ಮದುವೆ ಆದ ಹೊಸತರಲ್ಲಿ ವಿಜಯಪುರದ ಬಟ್ಟೆ ಅಂಗಡಿಯಲ್ಲಿ ಐದಾರು ತಿಂಗಳ ಕೆಲಸ ಮಾಡಿದ್ದನಾದರೂ ತಿಂಗಳಿಗೆ ಕೈಸೇರುತ್ತಿದ್ದ ಐದು ಸಾವಿರ ರೂಪಾಯಿ ಯಾವುದಕ್ಕೂ ಸಾಲದೇ ಬೆಂಗಳೂರು ಸೇರಲು ರೆಡಿಯಾಗಿ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಹೋಗಿಬಿಟ್ಟಿದ್ದ. ಎಲೆಕ್ಟ್ರಾನ್ ಸಿಟಿ ಸಮೀಪವಿರುವ ಖಾಸಗಿ ಕಂಪನಿಯೊಂದರಲ್ಲಿ ವಾಚಮನ್ ಆಗಿ ಕೆಲಸ ಮಾಡುತ್ತ ತಿಂಗಳಿಗೆ ಬರುತ್ತಿದ್ದ ಹತ್ತೆನ್ನೆರಡು ಸಾವಿರ ರೂಪಾಯಿಯಲ್ಲಿಯೇ ತನ್ನ ಪುಟ್ಟ ಸಂಸಾರವನ್ನು ನಡೆಸುತ್ತಿದ್ದ.

ಅಲ್ಲಿಯೇ ಪಕ್ಕದಲ್ಲಿ ನೂರಾರು ಕುಟುಂಬಗಳು ಪುಟ್ಟಪುಟ್ಟದಾಗಿ ತಗಡಿನ ಶೆಡ್‌ಗಳಲ್ಲಿ ವಾಸವಾಗಿದ್ದರು. ಅದರಲ್ಲಿಯೇ ಹರಸಾಹಸಪಟ್ಟು ಪ್ರಕಾಶ ತಾನೊಂದು ಶೆಡ್ ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಸಂಗವ್ವನಿಂದ ಬಂದ ಈ ತುರ್ತು ಫೋನ್ ಕಾಲ್ ಪ್ರಕಾಶನ ಎದೆಬಡಿತ ಜಲ್ಲೆನ್ನುವ ಹಾಗೆ ಮಾಡಿತ್ತು. ಅವತ್ತು ರಾತ್ರಿಪಾಳಿ ಕೆಲಸ ಇರುವುದರಿಂದ ಮಧ್ಯಾಹ್ನ ಶೆಡ್‌ನಲ್ಲಿ ಅಂಗಾತ ಮಲಗಿ ಸೂಸುತ್ತಿದ್ದ ಸೂರ್ಯನ ಕಿರಣಗಳ ನಡುವೆ ಹರಿದಾಡುತ್ತಿದ್ದ ಕಸಕಡ್ಡಿಯ ಸಣ್ಣ ಕಣಗಳ ಲೋಕವೊಂದನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದ. ಹಳ್ಳಿಯಲ್ಲಿರುವ ಮನೆ ಮಿಂಚಂತೆ ಕಂಡು ಮಾಯವಾದಂತಾಯಿತು.

ಸಾಗವಾನಿ ಕಟ್ಟಿಗೆಯಲ್ಲಿ ಬಿಡಿಸಿದ ಚಿತ್ತಾರ, ಸುತ್ತಲೂ ಕಂಬಗಳು, ವಿಶಾಲವಾದ ಪಡಸಾಲಿಗೆ ಅದನ್ನು ಏರಲು ಮುರ್ನಾಲ್ಕು ಪುಟ್ಟ ಪುಟ್ಟ ಮೆಟ್ಟಿಲುಗಳು, ಹಸು, ಎಮ್ಮೆ ಕಟ್ಟಲು ಎಡಗಡೆ ಕೊಟ್ಟಿಗೆ, ಅಟ್ಟದ ಮೇಲೆ ಒಟ್ಟಿದ್ದ ಸಾಮಾನುಗಳು ಮತ್ತು ದೊಡ್ಡದೊಂದು ತಲಬಾಗಿಲು ಒಟ್ಟಾರೆ ಪುಟ್ಟದೊಂದು ಅರಮನೆ ನೋಡಿದ ಹಾಗೆ ಕಾಣುತ್ತಿತ್ತು. ಆದರೆ, ಈಗ ಮನೆಯಲ್ಲಿ ಕಮಲಜ್ಜಿಯ ಹೊರತು ಒಂದು ನರಪಿಳ್ಳೆಯೂ ಓಡಾಡದೆ ಇರುವುದರಿಂದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದಂತಾಗಿತ್ತು.

ಪ್ರಕಾಶನಿಗೆ ಕಮಲಜ್ಜಿಯ ಅನಾರೋಗ್ಯದ ವಿಷಯ ತಿಳಿದ ಮೇಲೆ ಹಳ್ಳಿಗೆ ಹೋಗಲೋ, ಬೇಡವೋ ಎಂಬ ದ್ವಂದ್ವ ಮನದಲ್ಲಿ ಕೊರೆಯುತ್ತಲೇ ಇತ್ತು. ಅಕಸ್ಮಾತ್ ಕೆಲಸ ಅರ್ಧಕ್ಕೆ ನಿಲ್ಲಿಸಿ ಹೋದರೆ ಕೆಲಸ ಕೊಡಿಸಿದ ಏಜೆಂಟ್‌ಗಳ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕು. ಮರಳಿ ಬಂದಾಗ ಈಗಿರುವ ಕೆಲಸ ಇರುವುದೋ ಇಲ್ಲವೋ ಆ ದೇವರಿಗೇ ಗೊತ್ತು. ಮತ್ತೊಂದು ಕೆಲಸ ಹುಡುಕಲು ತಿಂಗಳಾನುಗಟ್ಟಲೆ ಅಲೆಯಬೇಕು. ಈಗಾಗಲೇ, ಇಂತಹ ಹತ್ತಾರು ಪಾಠಗಳನ್ನು ಕಲಿತಿದ್ದ ಪ್ರಕಾಶ ಯಾವ ನಿರ್ಧಾರಕ್ಕೂ ಬರದೆ ಒದ್ದಾಡುತ್ತಲಿದ್ದ. ಮುಂಗಡವಾಗಿ ಹಣ ಪಡೆದಿರುವುದರಿಂದ ಏಜೆಂಟ್ ಹೇಳಿದ ಮಾತನ್ನು ತಳ್ಳುವ ಹಾಗೆ ಇರಲಿಲ್ಲ. ಇಂತಹ ಸಂದಿಗ್ಧತೆಗೆ ಸಿಲುಕಿಕೊಂಡು ನರಳಾಡುತ್ತಿದ್ದ ಪ್ರಕಾಶ ಬಾಜು ಮನೆಯ ಸಂಗವ್ವನ ಮೊಬೈಲ್‌ಗೆ ಫೋನ್ ಮಾಡಿ ತಾಯಿಯ ಜೊತೆ ‘ಯವ್ವಾ... ಹೆಂಗದಿ? ಇನ್ನೊಂದು ವಾರ ಬಿಟ್ಟು ಬರ್ತೀನಿ ಆರಾಮಾಗಿ ಇರು’ ಅಂದಾಗ, ಕಮಲಜ್ಜಿ ಮಲಗಿದಲ್ಲಿಯೇ ‘ಕಾಡ ಬಾ ಅಂತಾದ... ನಾಡ ಹೋಗು ಅಂತಾದೋ ಪ್ರಕಾಶ... ಜಲ್ದೀ ಬಾರೋ... ಮೊಮ್ಮಕ್ಕಳ ಜೀಂವ್ ನೆನಸಾಕತ್ತದ... ಮೈಯಾಗ ಏನೂ ಶಕ್ತಿ ಉಳಿದಿಲ್ಲ’ ಎಂದು ನರಳಾಡಿದ್ದಳು. ಮೊದಲೇ ಹೆಂಗರುಳಿನ ಪ್ರಕಾಶ ಗಡಿಬಿಡಿಯಲ್ಲಿ ಒಂದೆರಡು ದಿನ ಹಗಲು–ರಾತ್ರಿ ಹೆಚ್ಚಿಗೆ ಕೆಲಸ ಮಾಡುತ್ತಾ ಏಜೆಂಟ್‌ನ ಕೈಕಾಲು ಹಿಡಿದು ಅವನ ಮನ ಒಲಿಸಲು ಪ್ರಯತ್ನಿಸುತ್ತಲೇ ಇದ್ದ.

ಇತ್ತೀಚೆಗೆ ಕಮಲಜ್ಜಿಯ ಸುಕ್ಕುಗಟ್ಟಿದ ಮುಖದಲ್ಲಿ ನೂರೆಂಟು ತಾಪತ್ರಯಗಳ ಟಿಪ್ಪಣಿ ಎದ್ದು ಕಾಣುತ್ತಿತ್ತು. ಪ್ರಕಾಶ ಅವರಿವರ ಕೈಯಲ್ಲಿ ಅಷ್ಟಿಷ್ಟು ಹಣ ಕಳಿಸುತ್ತಿದ್ದರಿಂದ ಕಮಲಜ್ಜಿಯ ಹೊಟ್ಟೆಬಟ್ಟೆಗೆ ತೊಂದರೆಯಿಲ್ಲದೆ ಜೀವನ ಹೇಗೋ ಸಾಗಿತ್ತು. ಆದರೆ, ದೊಡ್ಡ ಮನೆಯಲ್ಲಿ ಒಂಟಿಯಾಗಿರುವ ಯಾತನೆಯೇ ಅವಳು ದಿನೇ ದಿನೇ ನರಳುವ ಹಾಗೆ ಮಾಡಿತ್ತು. ಕಮಲಜ್ಜಿಗೆ ಹುಷಾರಿಲ್ಲದ ಸುದ್ದಿ ಆಗಲೇ ಓಣಿಯ ತುಂಬೆಲ್ಲ ಹರಡಿ ಒಬ್ಬೊಬ್ಬರಾಗಿ ಸಕ್ಕರೆ, ಬಿಸ್ಕೆಟ್ ಪಾಕೇಟು, ಕುಡಿಯಲು ಎಳನೀರು ಹಿಡಿದುಕೊಂಡು ಬಂದು ಯೋಗಕ್ಷೇಮ ವಿಚಾರಿಸುತ್ತಲಿದ್ದರು.

ಮುಪ್ಪಿನ ಕಾಲದಲ್ಲಿ ತಾಯಿಯನ್ನು ಬಿಟ್ಟು ಪ್ರಕಾಶ ಊರೂರು ತಿರುಗುತ್ತ ಕೆಲಸದಲ್ಲಿಯೇ ಮುಳುಗಿರುವುದನ್ನು ನೆನಪಿಸಿ, ‘ಹೊಲಮನೆ ಹಿಡಿದುಕೊಂಡು ಊರಲ್ಲಿ ಯಾಕೆ ಇರ್ಬಾರ್ದು?’ ಎಂದು ಬಿಟ್ಟಿ ಸಲಹೆ ನೀಡುತ್ತ ಕಮಲಜ್ಜಿಯ ನೋವನ್ನು ಮತ್ತಷ್ಟೂ ಉಲ್ಬಣಗೊಳಿಸುತ್ತಿದ್ದರು. ಮೊದಮೊದಲು ಇಂತಹ ಕೆಣಕುವ ಮಾತುಗಳಿಗೆಲ್ಲ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಿದ್ದಳು. ಪ್ರಕಾಶ ಶೋಕಿಗೆ ಬಿದ್ದಿದ್ದಾನೆ. ಮದುವೆ ಆದಮೇಲೆ ಬದಲಾಗಿದ್ದಾನೆ ಎಂಬ ಮಾತುಗಳಿಗೆಲ್ಲ ಕೇಳಿ ಕೇಳಿ ಸಾಕಾಗಿ ಎಲ್ಲದಕ್ಕೂ ಹ್ಞೂ ಎಂದು ಗೋಣು ಹಾಕಿ ಸುಮ್ಮನಾಗುತ್ತಿದ್ದಳು.

ಆದರೆ, ಮಗ ಪ್ರಕಾಶ ಊರಲ್ಲಿದ್ದಾಗ ಹೊಲದಲ್ಲಿ ಕತ್ತೆಯಂತೆ ದುಡಿದದ್ದೇ ಬಂತು. ನೈಯಾಪೈಸಾ ಲಾಭ ಆಗಿರಲಿಲ್ಲ. ಕಾಲಕಾಲಕ್ಕೆ ಮಳೆಯಾಗದೆ ಮೂರ್ನಾಲ್ಕು ವರ್ಷ ಬರ ಬಿದ್ದು ಹೊಲದಲ್ಲಿ ಬೆಳೆ ಮಾಡಿ ಮೈತುಂಬ ಸಾಲ ಮಾಡಿಕೊಂಡು ದುಡಿಯಲು ಹೋಗಿರುವ ಮಗನ ನೆನೆದು ಸರಿಯಾದ ನಿರ್ಧಾರವೇ ತೆಗೆದುಕೊಂಡಿದ್ದಾನೆಂದು ಎಲ್ಲರೆದುರು ಮಗನನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಳು. ಆದರೂ, ಮನಸ್ಸಲ್ಲಿ ಮುಪ್ಪಿನ ಕಾಲದಲ್ಲಿ ಮಗ ತನ್ನ ಜೊತೆ ಇರಬೇಕಿತ್ತು ಎಂಬ ಸಣ್ಣ ಆಸೆ ಇದ್ದೇ ಇತ್ತು.

ಪ್ರಕಾಶ ಈ ವರ್ಷದ ನಡುನಡುವೆ ಒಂದೆರಡು ಸಲ ಒಬ್ಬನೇ ಊರಿಗೆ ಬಂದಿದ್ದನಾದರೂ ಮನೆಯಲ್ಲಿ ಒಂದು ದಿನವೂ ಉಳಿಯದೇ ಮರಳಿ ಬೆಂಗಳೂರಿನ ರೈಲು ಹತ್ತಿಬಿಡುತ್ತಿದ್ದ. ಕಮಲಜ್ಜಿ ಮಗನ ಜೊತೆಯಲ್ಲಿ ಒಂದಷ್ಟು ಹೊತ್ತು ಕೂತು ಮಾತನಾಡಬೇಕೆಂದು ಎಷ್ಟೇ ಹಂಬಲಿಸಿದ್ದರೂ ಕಾಲ ಕೂಡಿ ಬಂದಿರಲಿಲ್ಲ. ಪ್ರಕಾಶ ಈ ಹಿಂದೊಮ್ಮೆ ಊರಿಗೆ ಬಂದಾಗ ಇರುವ ಎರಡು ಎಕರೆ ಎರೀ ಹೊಲವನ್ನು ಬೇರೊಬ್ಬರಿಗೆ ಸಮಪಾಲದಂತೆ ಹಾಕಿ ಹೋಗಿದ್ದ. ಇದು ಕಮಲಜ್ಜಿಯ ಸಿಟ್ಟಿಗೆ ಕಾರಣವಾಗಿತ್ತು. ನಾನು ಹೊಲದಲ್ಲಿ ಆದಷ್ಟು ಕೆಲಸ ಮಾಡುತ್ತ ಇರುತ್ತೇನೆ ಎಂದು ಎಷ್ಟೇ ವಿನಂತಿಸಿದ್ದರೂ ‘ವಯಸ್ಸಾಗ್ಯಾದ ಮನ್ಯಾಗ ಆರಾಮ ಇರು’ ಎಂಬ ಪ್ರಕಾಶನ ಹಿತವಚನ ಕಮಲಜ್ಜಿಗೆ ಪಥ್ಯ ಆಗಿರಲಿಲ್ಲ. ತನ್ನ ಮಾತು ಕೇಳದೆ ದುಡುಕಿ ಹೊಲ ಬೇರೊಬ್ಬರಿಗೆ ಉಳುಮೆ ಮಾಡಲು ಒಪ್ಪಂದದಂತೆ ನೀಡಿದ್ದರಿಂದ ಮುನಿಸಿಕೊಂಡು ‘ನಾ ಸತ್ತ ಮರ್ದಿನಾ ಹೊಲ ಮಾರ್ತಾನ... ಭೂಮಿ ತಾಯಿ ಮ್ಯಾಲ ಸ್ವಲ್ಪಾನೂ ಧ್ಯಾನ ಇಲ್ಲ... ಬೆಂಗಳೂರು ಅಂತ ಬೆಂಗಳೂರು ಅಲ್ಲೇನೂ ಮಣ್ಣು ಸಿಗಲ್ಲ ಅಲ್ಲಿ ಹೋಗಿ ದುಡಿಯಾಕತ್ತಾನ್’ ಎಂದು ಸಿಟ್ಟಿನಲ್ಲಿ ಬೈದಿದ್ದಳು.

ವಾರದ ನಂತರ ಪ್ರಕಾಶ ತನ್ನ ಹಿರಿಮಗ ನಾಲ್ಕು ವರ್ಷದ ರವಿಯ ಜೊತೆಗೆ ಊರಿಗೆ ಬಂದುಬಿಟ್ಟಿದ್ದ. ಕಮಲಜ್ಜಿಗೆ ಸೊಸೆ ಮತ್ತು ಸಣ್ಣ ಮೊಮ್ಮಗಳು ಚಿನ್ನಿ ಬರದೇ ಇದ್ದಿದ್ದು ಒಂಚೂರು ನಿರಾಶೆ ಮೂಡಿಸಿತಾದರೂ ಮಗ ಮತ್ತು ತನ್ನ ನೆಚ್ಚಿನ ಮೊಮ್ಮಗ ರವಿ ಬಂದಿರುವುದು ಖುಷಿಯ ಜೊತೆ ಸಮಾಧಾನ ತಂದಿತ್ತು. ಮಗ ಮತ್ತು ಮೊಮ್ಮಗನೊಡನೆ ಒಂದು ವಾರ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮುಗಿದು ಹೋಗಿತ್ತು. ಪ್ರಕಾಶ ಎರಡು ಮೂರು ದಿನ ನಿರಂತರ ವಿಜಯಪುರದ ದವಾಖಾನೆಗೆ ಕರೆದುಕೊಂಡು ಹೋಗಿ ಕಮಲಜ್ಜಿಯ ತಲೆಗೆ ಆದ ಗಾಯಕ್ಕೆ ಚಿಕಿತ್ಸೆ ಕೊಡಿಸಿ ಹಾಸಿಗೆಯಿಂದ ಎದ್ದು ಓಡಾಡುವ ಹಾಗೆ ಮಾಡಿದ್ದ. ದುಡಿದು ತಂದಿದ್ದ ಅಷ್ಟಿಷ್ಟು ಹಣವೆಲ್ಲ ಕಮಲಜ್ಜಿಗೆ ದವಾಖಾನೆ ಖರ್ಚಾಗಿದ್ದರಿಂದ ಮರಳಿ ಬೆಂಗಳೂರಿಗೆ ಹೋಗಲು ಬಸ್ ಚಾರ್ಜಿಗಾಗಿ ಪರಿಚಯಸ್ಥರಿಂದ ಸಾಲ ಪಡೆಯಲು ಓಣಿ ತುಂಬ ಸುತ್ತಿದರೂ ಬೆಂಗಳೂರಿಗೆ ತಲುಪಲು ಮತ್ತಷ್ಟು ಹಣದ ಅವಶ್ಯಕತೆ ಇತ್ತು.

ಮುಂದೇನಾದರೂ ಆಗಲಿ ಮೊದಲು ಹೊರಟುಬಿಡಬೇಕು ಎಂದುಕೊಂಡು ಇಲ್ಲಿದ್ದರೆ ಕೈಯಲ್ಲಿದ್ದ ಹಣ ಸಹ ಖಾಲಿಯಾಗುವ ಆತಂಕದಲ್ಲಿ ಮಗ ರವಿಯೊಂದಿಗೆ ರೆಡಿಯಾಗಿ ನಿಂತಾಗ ಕಮಲಜ್ಜಿಯ ಕಣ್ಣುಗಳು ತೇವಗೊಂಡಿದ್ದವು. ‘ರವಿ ಇಲ್ಲೇ ಸಾಲೀ ಕಲಿತಾನ ನನ್ನ ಕೂಡಾ ಬಿಟ್ಟುಹೋಗೋ ಪ್ರಕಾಶ’ ಎಂದು ಮೊಮ್ಮಗನನ್ನ ತನ್ನ ಜೊತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ‘ಅಲ್ಲಿಯೇ ಎಲ್.ಕೆ.ಜಿ ಹೋಗುತ್ತಿದ್ದಾನೆ. ಇಲ್ಲಿದ್ರೆ ಉಡಾಳ ಆಗ್ತಾನ ಬೇಡ’ ಎಂದು ಪ್ರಕಾಶ ಹೇಳಿದಾಗ ಕಮಲಜ್ಜಿ ನಿರ್ವಾಹವಿಲ್ಲದೆ ಸುಮ್ಮನಾದಳು.

ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಪುಟ್ಟದಾದ ಎಲೆಅಡಿಕೆ ಇಡುತ್ತಿದ್ದ ಸ್ವಿಸ್ ಬ್ಯಾಂಕನಂತಹ ಪುಟ್ಟದಾದ ಚೀಲದಲ್ಲಿದ್ದ ಚಿಲ್ಲರೆ ಹಣ ಮತ್ತು ಒಂದೆರಡು ಹರಿದ ನೂರರ ನೋಟುಗಳು ಮೊಮ್ಮಗ ರವಿಯ ಕಿಸೆಯಲ್ಲಿ ತುರುಕಿ ತಬ್ಬಿಕೊಂಡು ಬೀಳ್ಕೊಟ್ಟಳು. ಬಸ್‌ನಿಲ್ದಾಣ ಹತ್ತಿರ ಬಂದಂತೆ ನಿಟ್ಟುಸಿರು ಬಿಟ್ಟ ಪ್ರಕಾಶ ಮಗ ರವಿ ಕಿಸೆಯಿಂದ ಕಮಲಜ್ಜಿ ಕೊಟ್ಟಿದ್ದ ಹಣ ತೆಗೆದುಕೊಂಡು ಗೆಲುವಿನ ನಗೆ ಬೀರಿದ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !