ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ: ನಿರ್ಗುಣ ಕಾಗುಣಿತ

Last Updated 17 ನವೆಂಬರ್ 2018, 19:30 IST
ಅಕ್ಷರ ಗಾತ್ರ

ನಾನು ನನ್ನ ಎರಡನೇ ವರ್ಷದ ಪೀಯೂಸಿಯನ್ನು ಮಂಗಳೂರಿನ ‘ಸೇಂಟ್ ಅಲಾಷಿಯಸ್’ನಲ್ಲಿ ಓದಿದೆ. ಆ ದಿನಗಳಲ್ಲಿ, ನನ್ನ (ದಕ್ಷಿಣ ಕನ್ನಡದ) ಓರಗೆಯವರ ನಡುವೆ ಹೀಗೊಂದು ನಗೆಚಟಾಕಿ ಚಾಲ್ತಿಯಲ್ಲಿತ್ತು: ಇಂಗ್ಲಿಷಿನಲ್ಲಿ ‘ಹೋರಿಬುಲ್‘ ಅಂತ ಉಂಟಲ್ಲ- ಹೋರಿ ಅಂದರೂ ಬುಲ್ಲೇ, ಬುಲ್ಲ್ ಅಂದರೂ ಹೋರಿಯೇ ಅಲ್ಲವೋ?! ಈ ಮಾತನ್ನು, ಪಕ್ಕಾ ಮಂಗಳೂರು-‘ಮಾಣಿ’ಯೊಬ್ಬ ಹೇಳಿದ್ದೇ ತಡ, ಅದಿಬದಿಯ ‘ಮಾಣಿಗಳೆಲ್ಲ’ ಅಡ್ಡಾದಿಡ್ಡಿ ನಕ್ಕು ನಲಿದು ಖುಷಿಸುವುದಿತ್ತು! ನನಗೆ ಬಲು ವಿಚಿತ್ರವೆನಿಸುತ್ತಿತ್ತು! ನಾನಾದರೂ ಮಂಗಳೂರಿನ ಹೊರಗಿನ ಆಸಾಮಿ. ಇಂಗ್ಲಿಷಿನ ‘horrible’ ಎಂಬುದನ್ನು, ಕನ್ನಡದಲ್ಲಿ ‘ಹಾರಿಬಲ್’ ಎಂದು ಬರೆದು ಕಲಿತವ. ಅದನ್ನು ಈ ‘ಹಾರಿಬಲ್’ ಮಾಣಿಗಳು ‘ಹೋರಿಬುಲ್’ ಅನ್ನುವುದೇ...ಅಂದುಕೊಳ್ಳುತ್ತಿದ್ದೆ! ಕರಾವಳಿಯ ತುಳುಗನ್ನಡದವರ ನಡುವೆ ನಾಡಿನ ಇನ್ನೊಂದು ‘ಎಡೆ’ಗನ್ನಡದ ಅಲ್ಪಸಂಖ್ಯಾತನಾಗಿ ಕಣ್ಕಣ್ಣು ಬಿಡುತ್ತಿದ್ದೆ!

ಇನ್ನೂ ಗಮ್ಮತ್ತಿನ ಸಂಗತಿಯೆಂದರೆ, ನಾನು ‘ಕಾಲೇಜ್’ ಎಂದು ಬರೆದು ಪರಿಗಣಿಸುವ ‘ಕಲಿಕೆ’ಯ ಜಾಗವು, ಮಂಗಳೂರಿನ ಸಹಪಾಠಿಗಳಿಗೆ ‘ಕೋಲೇಜ್’ ಆಗಿರುತ್ತಿತ್ತು! ‘ಆಫೀಸ್’ ಎಂಬ ನನ್ನ ಆಡೆಣಿಕೆಯು ‘ಓಫೀಸ್’ ಆಗಿರುತ್ತಿತ್ತು! ‘ಕಾಲ್ಗೇಟ್’ ಎಂಬುದು ‘ಕೋಲ್ಗೇಟ್’ ಆಗಿ ವಿಭ್ರಮಿಸುತ್ತಿತ್ತು! ‘ಆಪೊರ್ಚುನಿಟಿ’ಯಂತೂ ‘ಒಪರ್ಚುನಿಟಿ’ಯಾಗಿ ಬದಲಿಬಿಡುತ್ತಿತ್ತು!

ಈ ‘ಕೋಲ್ಗೇಟ್- ಓಫೀಸ್’ಗಳ ಸಮಕ್ಕೇ ನನ್ನನ್ನು ಅಟ್ಟಾಡಿಸಿದ್ದು, ಹುಬ್ಬಳ್ಳಿ- ಧಾರವಾಡ ಸೀಮೆಯಲ್ಲಿ ಕಾಣಸಿಗುವ ‘ಬೋರ‍್ಡು’ಗನ್ನಡ; ಅಂದರೆ ಅಂಗಡಿ- ಮುಂಗಟ್ಟುಗಳ ಫಲಕಗಳಲ್ಲಿ ರಾರಾಜಿಸುವ ‘ಓದು’ಗನ್ನಡ! ನಾನು ಕನ್ನಡದಲ್ಲಿ ಏನೂ ಬರೆದಿದ್ದಿರದ, ಮುಂದೊಮ್ಮೆ ಬರೆದೇನೆಂದೂ ಯೋಚಿಸಿದ್ದಿರದ ದಿನಗಳಲ್ಲಿ- ಹುಬ್ಬಳ್ಳಿಯ ಬಸ್‍ಸ್ಟ್ಯಾಂಡಿನಲ್ಲಿ ತಾತ್ಕಾಲಿಕವಾಗಿ ಇಳಿಯುತ್ತಲೇ ಕಾಣಸಿಗುವ ಸಾಲುಸಾಲು ‘ಲಾಜ’ಗಳನ್ನು ನೋಡಿದ್ದೇ, ‘ಅರರೇ... ಇದೇನಿದು ವಿಚಿತ್ರ?! ಹೀಗಂದರೇನು?’ ಎಂದೆಲ್ಲ ತಿಣಿಕಾಡಿದ್ದೆ, ‘ಲಾಜ’ ಅಂದರೆ ಕನ್ನಡದ ‘ದಕ್ಷಿಣ‘ಪ್ರಾಂತ್ಯದಲ್ಲಿ ಬರೆಯುವ ‘ಲಾಡ್ಜ್’ ಎಂಬುದರ ‘ಅಪಭ್ರಂಶ’ವೆಂದು ತಿಳಿದಾಗ- ಹೊಟ್ಟೆಬಿರಿಯ ನಕ್ಕುಕೊಂಡಿದ್ದೆ! ಮತ್ತೆ ಬಸ್ಸೇರಿ ಮುಂದುವರೆಯುವಾಗ, ನಮ್ಮ ಕಡೆಯ ‘ಮಾರ್ಟ್’ಗಳೆಲ್ಲ ಈ ಸೀಮೆಯಲ್ಲಿ ‘ಮಾರ್ಟ’ ಆಗುತ್ತವೆಂದು ಅರಿತು, ಈ ಪರಿಹಾಸ್ಯವನ್ನು ಮತ್ತಷ್ಟು ಮುಂದುವರೆಸಿದ್ದೆ. ಹಾಗೆಯೇ, ‘ಶಾಪ್’ಗಳೆಲ್ಲ ‘ಶಾಪ’ಗಳಾಗುವ ಪರಿಗೆ ಹೌಹಾರಿದ್ದೆ! ಈ ಮಂದಿಗೆ ಕನ್ನಡದ ಕಾಗುಣಿತವೇ ಗೊತ್ತಿಲ್ಲವೇ... ಎಂದೆಲ್ಲ ಶಾಪವೆರಚಿದ್ದೆ!

ನನಗೆ, ಈ ರೀತಿಯದೇ ‘ಇನ್ನೊಂದು’ ವೈಚಿತ್ರ್ಯವೆದುರಾಗಿದ್ದು, ನಾನೊಬ್ಬ ಬರಹಗಾರನಾಗಿ ಕನ್ನಡಕ್ಕೆ ಒದಗಿಕೊಂಡಾಗ. ಅಸಲಿನಲ್ಲಿ ನನ್ನಲ್ಲಿ ಬರೆಯುವ ಉಮೇದುಂಟಾಗಿದ್ದೇ, ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ಓದಿದ ಮೇಲೆ; ಆ ಬಳಿಕ ಅವರದೇ ಒಂದೆರಡು ಪುಸ್ತಕಗಳನ್ನು ಓದಿದ ಮೇಲೆ. ಜಯಂತರನ್ನು ದಾಟಿ ವಿವೇಕರನ್ನೂ, ವಿವೇಕರಿಂದ ಅಶೋಕ ಹೆಗಡೆಯನ್ನೂ, ಹೆಗಡೆಯಿಂದ ಇನ್ನೊಂದೆಂದು... ಇವೊತ್ತಿನ ಕರ್ಕಿಕೃಷ್ಣಮೂರ್ತಿಯವರೆಗೂ ‘ರಿಲೇ’ಗೊಂಡು ಮುಂದುವರೆಯುತ್ತಿರುವ ದಿವಸಗಳಲ್ಲಿ- ಈ ಉತ್ತರ ಕನ್ನಡದ ಬರಹಗಾರರು, ‘ಸೈಕಲ್’ ಎಂಬುದನ್ನು ‘ಸಾಯಿಕಲ್’ ಎಂದೇಕೆ ಕಾಗುಣಿಸುವುದೆಂದು ಆಶ್ಚರ್ಯಪಟ್ಟಿದ್ದೆ! ‘ಸೈಕಾಲೊಜಿ’ಯನ್ನು ‘ಸಾಯಿಕಾಲಜಿ’ ಅನ್ನುವುದೇ? ‘ಸೈನ್ಸ್’ ಎಂಬ ಸೈನ್ಸು ಸಹ ‘ಸಾಯಿನ್ಸ್’ ಆಗುತ್ತದಲ್ಲ... ಕರ್ಮ ಕರ್ಮ!ಕ್ರಮೇಣವಾಗಿ ಈ ಪರಿ ‘ಬರವಣಿಗೆ’ಗೆ ಮನಸೊಪ್ಪಿಸಿದ್ದೆ. ಸುಮಾರು ಕಾಲದ ಬಳಿಕ, ‘ಥಿಯೇಟರಿನಲ್ಲಿ’ ಎಂಬುದನ್ನು ‘ಥೇಟರಿನಲ್ಲಿ’ ಅನ್ನುವ ‘ಕಾಗುಣಿತ’ ನನಗೆ ಒಗ್ಗಿಬಂದಿತು. ‘ಪಾಯಜಾಮ’ವು ‘ಪೈಜಾಮ’ದಷ್ಟೇ ಸರಿ ಅನಿಸತೊಡಗಿತು. ‘ತಿಕೇಟು’ ನಾನು ಕಲಿತಿರುವ ‘ಟಿಕೆಟ್’ಗಿಂತಲೂ ಚೆನ್ನನಿಸಿತು. ‘ರೆಸ್ಟೋರೆಂಟ್’ ಬದಲಿಗೆ ‘ರೆಸ್ತುರ’ವೇ ನೇರ್ಪನಿಸಿಬಿಟ್ಟಿತು!

ಈ ಉದಾಹರಣೆಗಳಲ್ಲಿ ನಾನು ಮುಟ್ಟುತ್ತಿರುವ ‘ಹಾಸ್ಯ’ವೇನೇ ಇರಲಿ, ಇಂಗ್ಲಿಷ್-ಮೂಲದ ಪದಗಳನ್ನು ‘ಕನ್ನಡ’ದಲ್ಲಿ ಬರೆಯುವಾಗ- ಹೇಗೆ ಬರೆಯುವುದೆನ್ನುವುದೇ ನನ್ನ ಸಂದಿಗ್ಧವಾಗಿಬಿಟ್ಟಿದೆ. ಇವುಗಳನ್ನು ಬಾಯಾರೆ ಹೇಳುವಂತೆ, ಕಿವಿಯಾರೆ ಕೇಳುವಂತೆ ಬರೆಯುವುದೋ, ಇಲ್ಲಾ ಇನ್ನೊಂದಾಗಿಯೋ... ಎಂಬುದು ನನ್ನ ಎಚ್ಚರವನ್ನು ಆಗೀಗ ಹೊಂಚುತ್ತದೆ. ಕನ್ನಡ ನಾಡಿನಲ್ಲಿ ‘ಕನ್ನಡ’ದ್ದೇ ‘ಬಗೆ ಬಗೆ’ ಬಗೆಗಳಿವೆಯಲ್ಲ, ಅಷ್ಟೇ ಬಗೆ ಬಗೆಯ ‘ಇಂಗ್ಲಿಷೂ’ ಇದೆಯೆ... ಎಂದೂ ಯೋಚನೆಯಾಗುತ್ತದೆ. ಅಥವಾ, ಪರದೇಸೀ (ಅದರಲ್ಲೂ ಇಂಗ್ಲಿಷ್) ಪದಗಳನ್ನು ಕನ್ನಡದಲ್ಲಿ ‘ಕಾಗುಣಿಸು’ವಲ್ಲಿ ‘ಕನ್ನಡ’ದ ಛಾಪು ಹಚ್ಚದೆ ಹೇಳುವುದು ಹೇಗೆ? ಅವುಗಳ ಮೇಲೆ ಕನ್ನಡದ ಸೊಗಡುಡಿಸದೆ ಆಡುವುದು ಹೇಗೆ? ಇಂಗ್ಲಿಷನ್ನು ಕನ್ನಡದಲ್ಲಿ ಬರೆಯುವಾಗ ಬಳಸುವ ಕಾಗುಣಿತದಿಂದ ‘ಕನ್ನಡ’ದ ಗುಣಧರ್ಮವನ್ನು ಕಳೆಯಬಹುದಲ್ಲವೆ? ನೀಗಬಹುದಲ್ಲವೆ? ಹೀಗೊಂದು ನಿರ್ಗುಣ ಕಾಗುಣಿತ ಸಾಧ್ಯವೇ? ಮತ್ತು ಸಾಧುವೇ?!

*

ಇತ್ತೀಚೆಗಷ್ಟೇ ಓದಿದ ಗುರುಪ್ರಸಾದ ಕಾಗಿನೆಲೆಯವರ ಕತೆಯಲ್ಲೊಂದು ಪಾತ್ರವು ಹೀಗೊಂದು ಮಾತು ಹೇಳುತ್ತದೆ: ‘ಅಯಾಮ್ ನಾಟ್ ಬೀಯಿಂಗ್ನಾಯಿವ್...’ ಇದನ್ನು ಓದಿದ್ದೇ ನನ್ನ ಬುದ್ಧಿಸಮಸ್ತವೂ ಎದ್ದು ಜಾಗೃತಗೊಂಡಿದ್ದು ಹೌದು! ಈ ‘ನಾಯಿವ್’ ಅಂದರೇನು? ನನ್ನಂತಹ ನನಗೇ ‘ಕೇಳಿ’ ಗೊತ್ತಿರದ ಈ ‘ಪದಾರ್ಥ’ವಾದರೂ ಎಂಥದು? ಒಂದೇ ಸಮ ತಿಣಿಕಿದ್ದಾಯಿತು! ಇದು ‘naive’ ಎಂಬ ಇಂಗ್ಲಿಷ್ ಪದದ ಲಿಪ್ಯಂತರವೆಂದು ತಿಳಿಯುವ ಹೊತ್ತಿಗೆ ನನ್ನ ತಲೆಯೊಳಗಿನ ಸರಕೆಲ್ಲ ಖಾಲಿಯಾಗಿತ್ತು! ಈ ಕಾಗಿನೆಲೆ ಮಹಾನುಭಾವ ‘ನಾಯಿವ್’ ಎಂದು ಬರೆದು, ಇದ್ದಕ್ಕಿದ್ದಂತೆ ‘ಕಾಯ್ಕಿಣೀ’ ಸೀಮೆಯಲ್ಲಿ ಲಂಘಿಸಿಬಿಡುವುದೇ… ಎಂದು ನನಗೆ ನಾನೇ ನಕ್ಕೆ!
‘naive’-ಅನ್ನು ‘ನಾಯಿವ್’ ಎಂದು ಬರೆಯಬಹುದಾದರೆ, ‘dairy’ಯನ್ನು ಹೇಗೆ ಬರೆಯುವುದು? ಈ `naive’-ಶಬ್ದದ ಉಲುಹಿನಲ್ಲಿ-‘dairy’-ಯಲ್ಲಿ ಅಡಕವಿರುವಂಥದೇ ‘ಏ’ ಅಥವಾ ‘ಐ’-ಕಾರದ ಉಚ್ಚಾರವಿದೆಯಷ್ಟೆ? ಹಾಗಾದರೆ, ‘ನಾಯಿವ್’ ಎಷ್ಟು ಸರಿ? ಇದನ್ನು ‘ನೈವ್’ ಅಂತಲೋ, ‘ನೇವ್’ ಅಂತಲೋ ಬರೆಯಬೇಕಲ್ಲವೆ? ಇನ್ನು, ‘dairy’ಯನ್ನೇ ತಕ್ಕೊಂಡರೆ, ಇದರ ಬಗೆಗಿನ ನನ್ನ ಸಮಸ್ಯೆಯಾದರೂ- ನಾನು ವ್ಯವಹರಿಸುವ ‘ಬೆಂಗಳೂರಿನಲ್ಲಿ’ ಕಳೆದ ಮೂವತ್ತು ವರ್ಷಗಳಿಂದ ದಿನೇ ದಿನೇ ಉಲ್ಬಣಗೊಂಡಿದೆ!

ಈ ‘dairy’-ಯನ್ನು, ನಾನು ಚಿಕ್ಕಂದಿನಿಂದ ಕನ್ನಡದಲ್ಲಿ ಬರೆಯುತ್ತಿರುವ ಹಾಗೆ ‘ಡೈರಿ’ ಎಂದಾಗಿಸಿ, ಮಾಮೂಲಿಯಾಗಿ ಎಲ್ಲರಂತೆ ‘ಡಯ್ರಿ’ ಎಂದು ಉಚ್ಚರಿಸುವಾಗ- ಇಲ್ಲಿ ಬೆಂಗಳೂರಿನಲ್ಲಿ ಹುಟ್ಟಾಕಟ್ಟಾ ಇಂಗ್ಲಿಷ್ ಕಲಿತು, ‘ಅದರಲ್ಲೇ’ ಅನವರತ ಮುಳುಗಿರುವ ಓರಗೆಯವರೆಲ್ಲ, ಒಂದೇ ಸಮ ನಗೆಯಾಡುತ್ತಾರೆ! ‘ಡೂಡ್... ಡಯ್ರಿಯಲ್ಲ ಡೇರಿ... ಡೇರಿ...’ ಎಂದು ಮಾತುಮಾತಿಗೂ ನನ್ನ ‘ಮಾತು’ ತಿದ್ದುತ್ತಾರೆ. ಇನ್ನು, ನಾರ್ತಿಂಡಿಯಾದ ‘ಇಂಗ್ಲಿಷ್’ ಮಂದಿಯಂತೂ ಇದು ಅತ್ಯಪ್ಪಟ ‘ಮದ್ರಾಸೀ’ತನವೆಂದು ಗೇಲಿಗೇ ತೊಡಗಿಬಿಡುತ್ತಾರೆ.

ಉತ್ತರ ಭಾರತೀಯರು, ‘ಐ’ಯನ್ನು ನಾವು ಹೇಳುವ ಹಾಗೆ- ‘ಅಯ್’ ಅನ್ನುವುದಿಲ್ಲ. ‘ಅದು ಸ್ವರ; ಯ-ಕಾರ ಹುಟ್ಟಬಾರದು...’ ಎಂದು ವಿವರಿಸಿ, ಸ್ವರಕ್ಕೂ ವ್ಯಂಜನಕ್ಕೂ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡುತ್ತಾರೆ. ನನ್ನ ಕಾಲೇಜು ದಿನಗಳಲ್ಲಿನ ಗೆಳತಿಯರು, ಇಂಗ್ಲಿಷಿನ ‘A’ ನಮ್ಮಲ್ಲಿನ ‘ಎ’ಯೇ ಹೊರತು ‘ಯೆ’ ಅಲ್ಲವೆಂದು ತಿಳಿಹೇಳಿದ್ದಾರೆ.`M’- ಅಕ್ಷರವು ‘ಎಮ್’; ‘ಯೆಮ್’ ಅಲ್ಲವೆಂದೂ ಕಲಿಸಿಕೊಟ್ಟಿದ್ದಾರೆ. ಇದೇ ವಾದಾನುಸಾರವಾಗಿ, ಯಾರಾದರೂ ‘ಎದೆ ತುಂಬಿ ಹಾಡುವ’ ಭರದಲ್ಲಿ- ‘ಯೆದೆ’ಭರಿಸಿ ಹಾಡಿದರೆ ನಾನಂತೂ ಕಂಗಾಲಾಗುತ್ತೇನೆ! ‘ಯದೆ-ವಡೆದು’ ಸತ್ತೇ ಹೋಗುತ್ತೇನೆ!!

ಕೆಲವೊಮ್ಮೆ, ನಾನು (ಸ್ವರಶುದ್ಧವಾಗಿ ಮತ್ತು ಸ್ವರಬದ್ಧವಾಗಿ) ಯೋಚಿಸುವಾಗ- ನಾವು ‘ರೈಲು’ ಎಂದು ಬರೆದು, ‘ರಯ್ಲು’ ಅಂತನ್ನುವುದೂ ತಪ್ಪನಿಸುತ್ತದೆ. ಹಾಗೇ, ನಮ್ಮ ಆಡುಪದ್ಧತಿಯಲ್ಲಿನ ‘‘ಔ’ತ್ವೋಚ್ಚಾರದಲ್ಲೂ ದೋಷವಿದೆ ಅನಿಸುತ್ತದೆ; ‘ಔಷಧ’ವನ್ನು ‘ಅವ್ಷಧ’ವೆನ್ನುತ್ತೇವಲ್ಲ ಹಾಗೆ. ಉತ್ತರ ಭಾರತದ ಮಂದಿ ಈ ‘ಔ’ವನ್ನು ‘ಅವ್’ ಅನಿಸಗೊಡದೆ, ‘ಓ’ವನ್ನು ತುಸು ಮುಂದಕ್ಕೆಳೆದು- ಕನ್ನಡದಲ್ಲಿ ಬರೆಯಲಾಗದ ಇನ್ನೊಂದು ಸ್ವರವನ್ನು ಹುಟ್ಟಿಸುತ್ತಾರೆ. ಇದೇ ಮೇರೆಗೆ, ಇಂಗ್ಲಿಷಿನ `mould’- ಇದನ್ನು (ಈ ಪದವಿಲ್ಲದೆ ನನ್ನ ವೃತ್ತಿ ಜರುಗುವುದೇ ಇಲ್ಲವಷ್ಟೆ?) ‘ಮೌಲ್ಡ್’ ಎಂದು ‘ಕನ್ನಡ’ದಲ್ಲಿ ಬರೆದು, ‘ಮವ್-ಲ್ಡ್’ ಎಂದು ‘ಕನ್ನಡ’ಬದ್ಧವಾಗಿ ಉಚ್ಚರಿಸುವುದನ್ನು, ನನ್ನ ಓರಗೆ ಆರ್ಕಿಟೆಕ್ಟುಗಳೆಲ್ಲ ಹೀಯಾಳಿಸುತ್ತಾರೆ! ವೃತ್ತಿ ನಿಮಿತ್ತವಾಗಿ (ಮತ್ತು ಅಷ್ಟೇ ಅನಿವಾರ್ಯವಾಗಿ) ನಾನು ಇನ್ನಿಲ್ಲದ ‘ಸ್ವರ’ಶುದ್ಧಿಯನ್ನು ರೂಢಿಸಿಕೊಂಡಿದ್ದೇನೆ. ‘ಮೋಲ್ಡ್’ ಅಂತಂದು ತೇಲಿಸಿಬಿಡುತ್ತೇನೆ.

ಈ ರೀತಿಯ ‘ಸ್ವರ’ಶೋಧನೆಯು ನನ್ನ ಎಚ್ಚರದಲ್ಲೊಂದು ದೊಡ್ಡ ಭಾಗವೇ ಆಗಿಬಿಟ್ಟಿದೆ. ಕನ್ನಡ ‘ವೇದಿಕೆ’ಗಳಲ್ಲಿಯೂ ನಾನು ಇದೇ ಸ್ವರಬದ್ಧತೆಯನ್ನು ಪಾಲಿಸುತ್ತೇನೆ. ನಾನು ಮಾತಿಗಿಳಿದರೆ ಸಾಕು, ಎದುರಿರುವ ಕೇಳುಗಮಂದಿ, ‘ಆಹಾಹ... ಕನ್ನಡವನ್ನೂ ಇಂಗ್ಲಿಷಿನಲ್ಲಿ ಆಡೋದು ನೋಡು!’ ಎಂದು ಮೂದಲಿಸಿದ್ದಿದೆ. ‘ಈ ಮನುಷ್ಯನ ಹೆಂಡತಿ ಕನ್ನಡವನ್ನು (ಬಟ್ಟೆಯ ಹಾಗೆ) ಒಗೆದು ಆಡಿದರೆ, ಮಹಾಶಯ, ಇಸ್ತ್ರಿ ಮಾಡಿ ಆಡುತ್ತಾನೆ!’ ಎಂದೆಲ್ಲ ಪರಾಕೊಪ್ಪಿಸಿದ್ದೂ ಇದೆ!!

*

ನಾವು ‘point’-ಅನ್ನು ‘ಪಾಯಿಂಟ್’ ಎಂದು ಬರೆಯುತ್ತೇವೆ. ಹಾಗೇ ‘dear’ ಎಂಬುದನ್ನು ‘ಡಿಯರ್’ ಆಗಿಸಿ ಕಾಗುಣಿಸುತ್ತೇವೆ. ಇವೆರಡರ ‘ಹೇಳಿಕೆ’ಯನ್ನೊಮ್ಮೆ ಕಿವಿಗೊಟ್ಟು ಆಲಿಸಿಕೊಂಡು ಗಮನಿಸಿ...ಇವೆರಡರ ಮೂಲೋಚ್ಚಾರದಲ್ಲಿ ಅಂದರೆ ಇಂಗ್ಲಿಷಿನ ಆಡಿಕೆಯಲ್ಲಿ ‘ಯ’ಕಾರವಿಲ್ಲ. ಪಾಯಿಂಟ್, ಡಿಯರ್, ಬಿಯರ್, ಚಿಯರ್ಸ್... ಇವುಗಳನ್ನು ಬರೆಯುವಾಗ ಬರುವ ‘ಯ’-ತ್ವ ‘ನಿಜವಾದ’ ಇಂಗ್ಲಿಷ್ ಮಾತುಗಳಲ್ಲಿ ಕೇಳಸಿಗುವುದಿಲ್ಲ! ಅಸಲಿನಲ್ಲಿ ಇವು- ಪಾಇಂಟ್, ಡಿಅರ್, ಬಿಅರ್ ಮತ್ತು ಚಿಅರ್ಸ್! ಹಾಗಂತ ಪೂರ್ತಿ ಅ-ಕಾರವೂ ಇವುಗಳಲ್ಲಿಲ್ಲ; ಅಷ್ಟೇ ಯ-ಕಾರವೂ ಇಲ್ಲ. ಗಮನಿಸಿ: ಇವೆರಡರ ನಡುವಿನ ಇನ್ನೊಂದೇ ‘ಸ್ವರ’ ಅದು! ಈ ಸ್ವರವನ್ನು ಕನ್ನಡದಲ್ಲಿ ಬರೆಯಲಾಗುವುದಿಲ್ಲ! ಇನ್ನು, ‘point’-ಅನ್ನು, ನಾನು ಸದಾ ಕಾಗುಣಿಸುವ ಹಾಗೆ- ‘ಪಾಇಂಟ್’ ಎಂದು ಬರೆಯುವುದು ಕನ್ನಡದ ‘ಪದ’ ಪ್ರಕೃತಿಗೆ ಹೊಂದಿಬರುವುದಿಲ್ಲ. ಯಾಕೆಂದರೆ ಕನ್ನಡ ಶಬ್ದಗಳ ನಡುವೆಲ್ಲೂ ‘ಸ್ವರ’ವೊಂದು ಸ್ವತಂತ್ರವಾಗಿ ಬರೆಯಲ್ಪಡುವುದಿಲ್ಲ!

‘ಕಾಫಿ’ ಎಂದು ಹೇಳುವಾಗ ಆ‘ಕಾ’ರದಲ್ಲಿರುವ ‘ಕಾ’ ಹಚ್ಚಿ ಹೇಳುವುದು ಸರಿಯೆ? ಅಥವಾ, ಇಂಗ್ಲಿಷ್‍ನವರು (ಅಂದರೆ ಇಂಗ್ಲಿಷನ್ನು ಇಂಗ್ಲಿಷ್‍ನಲ್ಲಿಯೇ ಓದಿ ಕಲಿತವರು) ಹೇಳುವ `coffee’ ಸರಿಯೆ? ‘ಆಫೀಸ್’ ಅನ್ನುವಾಗ, ಅದೇ ‘ಆ’ಕಾರದ ಆದಿಯಲ್ಲಿರುವ ‘ಆ’-ಕಾರ ಹಚ್ಚುವುದೆ? ಅಥವಾ- ಇತ್ತ ಆ-ಕಾರವೂ ಅಲ್ಲದ, ತೀರಾ ‘ಓ’ಕಾರವೂ ಅಲ್ಲದ ನಡುವಿನ ಇನ್ನೊಂದು ಸ್ವರವನ್ನೇ? ಹೀಗೊಂದು ಸ್ವರವಿರುವ ಪಕ್ಷಕ್ಕೆ, ಸದರಿ ಸ್ವರವನ್ನು ಧ್ವನಿಸತಕ್ಕ ‘ವರ್ಣ’ವೊಂದನ್ನು ನಾವು- ಕನ್ನಡವಾಡುವ ಮತ್ತು ಬರೆಯುವ ಸಾಹಿತ್ಯಿಕ ಮಂದಿ, ಈ ಇಪ್ಪತ್ತೊಂದನೇ ಶತಮಾನದಲ್ಲೂ ಹುಟ್ಟಿಸಲಿಲ್ಲವೇಕೆ? `Biology’ಯನ್ನು ಹೇಗೆ ಬರೆಯುವುದು ಸರಿ? ಹೆಚ್ಚು ಸರಿ? ಬಯಾಲಜಿಯೇ? ಬಯೋಲಜಿಯೇ? ಬಯೋಲೊಜಿಯೇ? ಯಾವುದು ಸರಿ? ‘ಸೈಲೆನ್ಸರ್’ ಸರಿಯೇ? ಅಥವಾ, ‘ಸಾಯಿ’ಲೆನ್ಸರೇ?!

ಹಾಗೇ, ‘Zero’ದಲ್ಲಿರುವ ‘Z’-ಸದ್ದಿಗೊಂದು ಕನ್ನಡವಿದೆಯೆ? ಅದನ್ನು ಕನ್ನಡಿಸಲುಂಟೆ? ನಾವು ಟಂಕಿಸಿಕೊಂಡಿರುವ ಜ಼-ಕಾರವು ಈ ‘ಝೀರೋ’ವನ್ನು ಸರಿಸಮ ಹೇಳುತ್ತದೆಯೆ? ಅಥವಾ ಝೇಂಕಾರದಲ್ಲಿರುವಂತಹ ‘ಝ’ದ ಸದ್ದು ಸಮರ್ಪಕವೆ? ‘Z-tv’ಯೆ? ಝೀಟಿವಿಯೆ? ‘Xerox’ ಎಂಬುದನ್ನು ಬರೆಯುವುದು ಹೇಗೆ? ಈ ಉಚ್ಚಾರದ ಕಾಗುಣಿತವೇನು?! ಡಿಸ್ಕಷನ್ ಸರಿಯೆ? ಅಥವಾ ಡಿಸ್ಕಶನ್ನೇ? ಡಿಕಾಕ್ಷನ್ನೇ? ಡಿಕಾಕ್ಶನೇ? ಎಲ್ಲಕ್ಕಿಂತ ಇಂಗ್ಲಿಷ್ ಸರಿಯೇ? ಇಂಗ್ಲಿಶ್ ಸರಿಯೇ?

ಹೋಗಲಿ... ಈ ಪರಿಯ ಕಾಗುಣಿತವೇನು ವೈಯಕ್ತಿಕವಾದುದೆ? ಅಂದರೆ ಬಗೆಬಗೆ ‘ಕನ್ನಡ’ವಿರುವಂತೆಯೇ ಬಗೆಬಗೆಯ ಪ್ರಾಂತೀಯ ಬರಹವೂ ಉಂಟೆ? ಬೇಕೆ? ಅಕ್ಷರಗಳ ಆಯ್ಕೆಯನ್ನು ಅಕ್ಷರಸ್ಥನಿಗೇ ಬಿಡುವುದೇ? ನಮ್ಮ ನಡುವೆ ಬಲುಕಾಲದಿಂದ ಬಳಕೆಯಲ್ಲಿದ್ದು, ‘ಆಲ್ಮೋಸ್ಟ್’ ಕನ್ನಡವೇ ಆಗಿಬಿಟ್ಟಿರುವ ಇಂಗ್ಲಿಷ್ ಪದಗಳಿಗಾದರೂ- ಸಮಸ್ತ ಕರ್ನಾಟಕವೇ ಒಕ್ಕೊರಲಿಟ್ಟು ಅಹುದೆನ್ನಬಲ್ ಲಕಾಗುಣಿತವನ್ನು ನಾವು, ಈಗಲಾದರೂ ಬರೆಯಬಾರದೇಕೆ? ಇದು ಸಾಧ್ಯವೇ? ಹೀಗೆ ಮಾಡಿದ ಪಕ್ಷಕ್ಕೆ ಕನ್ನಡವಾಡುವ ಎಲ್ಲೆಡೆಯ ಮಂದಿಯೂ ಒಂದೇ ಥರವಾಗಿ ‘ಆಫೀಸ್’ ಅನ್ನಬಹುದೆ? ಎಲ್ಲೆಡೆಯ ‘ಸೈನ್ಸು-ಮ್ಯಾತ್ಸು’ ಒಂದೇ ಥರವಾಗಿರಬಹುದಲ್ಲವೆ? ಇಂಗ್ಲಿಷನ್ನು ಲಿಪ್ಯಂತರದ ಮೇರೆಗೆ ಕನ್ನಡಕ್ಕೆ ತಂದುಕೊಳ್ಳುವಾಗ, ಕನ್ನಡದ ಗುಣವಿಲ್ಲದ ಪರಮ ನಿರ್ಗುಣ ಕಾಗುಣಿತವಾದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT