ಕೀಕಿ ಟು, ಟುರ್ರ್ ಬ್ಯಾ...

7

ಕೀಕಿ ಟು, ಟುರ್ರ್ ಬ್ಯಾ...

Published:
Updated:

ನಾನು, ಪ್ರಭ್ಯಾ, ಪಕ್ಯಾನ ಚಹಾದ ಅಂಗಡ್ಯಾಗ್  ಬಿಸಿ ಬಿಸಿ ಚಹಾ ಕುಡ್ಕೊಂತ ಉತ್ತರ ಕರ್ನಾಟಕ ಬಂದ್‌ ಬಗ್ಗೆ ಮಾತಾಡ್ತಾ ಕುಂತಿದ್ವಿ. ‘ನಾಳೆ ಬಂದ್ ಐತಿ, ಬಜಾರ್ ಬಂದ್ ಮಾಡಿ ಬೆಂಬಲಿಸಿ, ಮರಿಬ್ಯಾಡ್ರಿ’ ಅಂತ ಮೈಕ್ ನ್ಯಾಗ್ ಒದರಕೋತ್ ಗುಂಪೊಂದು ಅಂಗಡಿ ಮುಂದ ಹಾದ್ ಹೋಯ್ತು. ಕಪ್‌ನ್ಯಾಗಿನ ಚಹಾದ ಇನ್ನೊಂದು ಗುಟ್ಕು ಕುಡ್ದು ಮುಗ್ಸೋದ್ರ ಒಳ್ಗ, ‘ನಾಳೆ ಬಂದ್‌ ಮಾಡಬ್ಯಾಡ್ರೊ. ಅಖಂಡ ಕರ್ನಾಟಕ ಬೇಕ್‌ ಅನ್ನಾವ್ರು ಬಂದ್‌ ಮಾಡಬ್ಯಾಡ್ರಿ. ಬಂದ್‌ ಗಿಂದ್‌ ಮಾಡಿದ್ರ ಹುಷಾರ್‌’ ಅಂತ ಇನ್ನೊಂದು ಗುಂಪು ಲೌಡ್‌ಸ್ಪೀಕರ್‌ನ್ಯಾಗ್‌ ಹೇಳ್ಕೋತ್‌ ಹೋಯ್ತು. ‘ಪಕ್ಯಾ, ನಾಳೆ ಅಂಗ್ಡಿ ಬಂದ್ ಮಾಡ್ತಿಏನಪಾ ಅಂತ’ ಪ್ರಭ್ಯಾ ಕೇಳ್ದ. ‘ನಂಗೇನ್ ಹುಚ್ ಹಿಡಿದಿಲ್ಲ. ಅಡ್ಡಕಸಬಿಗೋಳು ತಮ್ಮ ಬ್ಯಾಳಿ ಬೇಯ್ಸಿಕೊಳ್ಳಾಕ್ ಬಂದ್‌ ನಾಟ್ಕಾ ಮಾಡಾಕತ್ತಾರ್‌. ಯಾಂವ್‌ ಬಂದ್ರೂ ಉತ್ತರ ಕರ್ನಾಟಕ ಉದ್ಧಾರ್‌ ಆಗೂದಿಲ್ಲ. ಬೇಕಾದ್ರ ಬರ‍್ಕೊ’ ಅಂತ ಜೋರ್‌ ಮಾಡ್ದ. ‘ಹಿಂಗ್ಯಾಕ್‌ ಆಡ್ತಿಯೋ. ಮೈಮ್ಯಾಲೆ ಕುಮಾರಣ್ಣ ಹೊಕ್ಕಾನೇನ್‌’ ಎಂದು ಪ್ರಭ್ಯಾ ಕೆಣಕಿದ.

‘ಪ್ರತ್ಯೇಕ ಉತ್ತರ ಕರ್ನಾಟಕದ ಸಿ.ಎಂ ಆಗಾಕ್‌ ಕತ್ತಿನೂ ಕನಸು ಕಾಣಾಕ್‌ ಸಿದ್ಧ...  ಅಂತ ನಾನು ಮಾತ್‌ ಪೂರ್ಣಗೊಳಿಸುವುದರ ಒಳ್ಗ, ಪಕ್ಯಾ, ‘ಹ್ಞಾ, ಏನಂದಿ. ಕತ್ತಿಗೂ ಸಿ.ಎಂ ಆಗೋ ಯೋಗ್‌ ಐತ್ಯಾ’ ಎಂದ ಗಾಬರಿಯಿಂದ.

‘ಹ್ಞೂನಪಾ, ಸಾಂದರ್ಭಿಕ ಶಿಶು ಸಿ.ಎಂ ಆಗುವಾಗ, ಕತ್ತಿಯಾಕ್‌ ಆಗಬಾರ‍್ದು ಆಂತೀನಿ. ಬಿಜೆಪಿ ಮುಖಂಡ ಉಮೇಶ್‌ ಕತ್ತಿ, ನಾಕ್‌ ವರ್ಷದ ಹಿಂದ್‌s ಹಿಂಗ್‌ ಹೇಳಿದ್ರು. ಅಖಂಡ ಕರ್ನಾಟಕದ ಸಿಎಂ ಆಗಬೇಕೆಂಬ ಆಸೆ ಅದ. ಅದು ಆಗದಿದ್ರ ಇಂದಲ್ಲ ನಾಳೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗ್ತದ. ಅದ್ಕ ಸಿ.ಎಂ ಆಗೇ ಆಗ್ತೀನಿ ಅಂತಿದ್ರು. ಅಂಥವ್ರ ಹಗಲುಗನ್ಸು ಖರೆ ಮಾಡಾಕ್‌ ಕೆಲವ್ರು ಹೊಂಟಾರ್‌. ಕೂಸು ಹುಟ್ಟು ಮೊದ್ಲಕುಂಚಿ ಹೊಲ್ದಂಗ್‌, ಚುನಾವಣೆ ಮೊದ್ಲ ಭಾವಿ ಉಪಮುಖ್ಯಮಂತ್ರಿ ಅಂತ ಹೇಳ್ಕೊಂಡ್‌ ತಿರುಗಿದ್ದ ಶ್ರೀರಾಮುಲು ಕನ್ಸೂ ಹಾಳಾಗೇದ್‌. ಹಾಳೂರಿಗೆ ಉಳಿದವನೆ ಗೌಡ ಅನ್ನು ಹಂಗ, ಉ.ಕ ರಾಜ್ಯಕ್ಕಾದರೂ ಡೆಪ್ಯುಟಿ ಸಿ.ಎಂ ಆಗು ಕನಸ್‌ ಕಂಡು ಬೆಂಬಲ ನೀಡಿದಂವ, ಪಕ್ಷದವ್ರು ಕಿವಿ ಹಿಂಡಿಂದ್‌ ಉಲ್ಟಾ ಹೊಡ್ದಾನ್‌. ಇದು ಬಂದ್‌
ರಾಜಕೀಯ...  ಅಂತ ಹೇಳಾಕತ್ತಿದ್ಯಾ. ಅಷ್ಟರಾಗ್‌ ಮನಿಯಿಂದ  ಫೋನ್‌ ಬಂತು. ‘ರೀ... ನಾಳೆ ಬಂದ್‌ ಐತಿ.

ಮನ್ಯಾಗ್‌ ಸಾಮಾನ್‌ ಮುಗದಾವ್‌. ಬಜಾರ‍್ದಾಗ್ ಇದ್ರ ಮರೀಲಾದ್ರ ತಗೊಂಡ್‌ ಬರ‍್ರೀ’ ಅಂತ ಹೆಂಡ್ತಿ ಹೇಳ್ತಿದ್ಹಂಗ್‌, ‘ತಡಿ ಮಾರಾಯ್ತಿ, ಇನ್ನ ಬಂದ್‌s ನಕ್ಕಿ ಆಗಿಲ್ಲ. ಬಂದ್‌ ಮಾಡ್ಬೇಕೊ, ಬ್ಯಾಡ್ವೊ ಅಂತ  ಇನ್ನೂ ಹೊಯ್ದಾಟ್ ನಡ್ದದ. ಅದ್ಕೂ ಎಡಬಿಡಂಗಿ ಥರಾ ಮಾತಾಡೋ ರಾಜಕಾರಣಿಗಳ ಗಾಳಿ ಶಕಾ ಬಡ್ದದ’ ಎಂದೆ.‘ಏನಾರ್‌ ಮಾಡ್ಕೊಳ್ಳಿ, ಸಾಮಾನ್‌ ತರ್ಲಿಲ್ಲಂದ್ರ ನಾಳಿ ನಿಮ್ಗ ಉಪವಾಸನ ಗತಿ’ ಅಂತ ಹೇಳಿ ಫೋನ್‌ ಕಟ್‌ ಮಾಡಿದಳು. ‘ಸಾಕ್‌ ಮಾಡೋ ನಿನ್ನ ಬಂದ್‌ ಗೊಳ್‌ ಪುರಾಣ. ಫೋನ್‌ ಬರ್ಲಿಲ್ಲಂದ್ರ ನಿನ್‌ ಬಾಯಿ ಬಂದ್‌ ಆಗ್ತಿದಿಲ್ಲ ನೋಡ್‌’ ಅಂತ ಪ್ರಭ್ಯಾ ಕಿಚಾಯಿಸಿದ.

ಅದೇ ಹೊತ್ತಿಗೆ ಬೈಕ್‌ನಾಗ್‌ ಬಂದ ಮೋನ್ಯಾ, ಗಾಡಿ ನಿಲ್ಸಿ, ಮೈಯ್ಯಾಗ್‌ ಡ್ರೇಕ್‌ ಹೊಕ್ಕಂಗ್ಹ,  ‘ಕೀಕಿ, ಡು ಯು ಲವ್‌ ಮಿ’ ಅಂತ ಸ್ಟೈಲಾಗಿ ಹಾಡ್‌ ಹೇಳ್ತಾ, ಕೈಕಾಲು ಆಡಿಸ್ತಾ ಒಳಗ್‌ ಬಂದಿದ್ದನ್ನು ನೋಡಿ, ಪ್ರಭ್ಯಾ, ‘ರಸ್ತ್ಯಾ
ಗಿನ ಗುಂಡಿ ನೋಡ್ಕೋಂಡ್‌ ಕುಣಿ ಮಗ್ನ. ಇಲ್ಲಂದ್ರ ಕೈ ಕಾಲು ಮುರಕೊಂಡಿ ಜ್ವಾಕಿ’ ಎಂದು ಎಚ್ಚರಿಸಿದ. ‘ಮೊದ್ಲ ಕ ಕಾ ಕಿ ಕೀ... ಗಳನ್ನ ಅಚ್ಚ ಕನ್ನಡದಾಗ್‌ ಬರೆಯೋದನ್ನ, ಉಚ್ಚರಿಸೋದನ್ನ ಕಲಿಯೋ ಕಮಂಗಿ. ಆಮ್ಯಾಲೆ ಕೀಕಿ... ಅಂತ ಮೈ ಕುಣಿಸು’ ಅಂತ ನಾನೂ ದಬಾಯಿಸಿದೆ.

‘ಇಬ್ರೂ ಭಾಳ್‌ ಧಿಮಾಕಿನಿಂದ ಮಾತಾಡಬ್ಯಾಡ್ರಿ. ದಮ್‌ ಇದ್ರ ಸವಾಲ್ನ ಒಪ್ಕೊಳ್ರಿ’ ಅಂದ ಮೋನ್ಯಾ.

‘ಮೋದಿ ಸಾಹೇಬ್ರೂ ಕೂಡ ವಿರಾಟ್‌ ಕೊಹ್ಲಿಯ ಫಿಟ್ನೆಸ್‌ ಸವಾಲ್‌ ಒಪ್ಗೊಂಡು ಕುಮಾರಣ್ಣಗ್‌ ಸವಾಲ್‌ ಹಾಕಿದ್ರು. ಆಮ್ಯಾಲೆ ಆ ಸವಾಲ್‌ ಎಲ್ಲಿ ಹೋಯ್ತೊ ಗೊತ್ತಿಲ್ಲ. ಪೋಲಿಸ್ರು ಆವಾಜ್‌ ಹಾಕುತ್ತಿದ್ಹಂಗ್‌ ಕೀಕಿ.. ಸವಾಲೂ ಮೂಲೆಗುಂಪ್‌ ಆಗೇದ್‌. ಚಲ್‌ ಚಲ್‌ ಚಲ್‌ ಮೇರೆ ಸಾಥಿ ಓ ಮೇರೆ ಹಾಥಿ... ಅಂತ ರಾಜೇಶ್‌ ಖನ್ನಾ, ಹಾತಿ ಮೇರೆ ಸಾಥಿ ಚಿತ್ರದ ಒಳ್ಗ, ಶಿವಣ್ಣ, ‘ಜನುಮದ ಜೋಡಿ’ ಒಳ್ಗ, ‘ಮಣಿ ಮಣಿ ಮಣಿ ಮಣಿಗೊಂದು ದಾರ... ಅಂತ ಕಾರ್‌, ಎತ್ತಿನಬಂಡ್ಯಾಗ್ ಹಾಡ್‌ ಹೇಳ್ಕೊಂಡಿದ್ದು ನೆನಪ್‌ ಮಾಡ್ಕೊ’ ಎಂದೆ.

‘ಹಾಡಿದ್ದೆ ಹಾಡೊ ಕಿಸಬಾಯಿ ದಾಸ್‌ನ್ಹಂಗ್‌ ಕೀಕಿ..ಹಾಡೋದ್ನ ಬಿಡು. ಈಗೇನಿದ್ರೂ ರಾಜ್ಯದಾಗ ‘ಹಳ್ಳಿ ಹಕ್ಕಿ ಹಾಡು’ ಜಬರ್‌ದಸ್ತ್‌ನ್ಯಾಗ್ ಕೇಳಿ ಬರಾಕತ್ತದ.  ಹಕ್ಕಿ ಹಾಡಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ರಾಮಣ್ಣ ಸೋ ಅಂತಾರ, ಏನ್‌ ನೋ ಅಂತಾರೋ ನೋಡಬೇಕು.

‘ಇನ್‌ ಮ್ಯಾಲೆ ಐತಿ ನೋಡಲೇ ಮಜಾ. ಕಾಂಗ್ರೆಸ್‌ ಟಗರ‍್ನ ಎದುರಿಸಲು ಜೆಡಿಎಸ್‌ ಕೂಡ ಮೈಸೂರಿನ ಹಳೆ ಟಗರ‍್ನ ಕಣದಾಗ್‌ ಬಿಟ್ಟದ. ಒಂದ್‌ ಟಗರ್‌, ಎರಡು ಹೆಜ್ಜೆ ಹಿಂದ್‌ ಇಟ್ಟಿತ್ತು..., ಈಗ ಕಣಕ್ಕ ಇನ್ನೊಂದು ಟಗರ್‌ ಇಳದದ. ರಿಂಗ್ ಮಾಸ್ಟರ್‌ ದ್ಯಾವೇಗೌಡ್ರ ಗರಡಿ ಒಳಗ್‌ ಪಳಗಿದ ಹಳೆ ಟಗರು, ಆರೋಗ್ಯ ಸರಿ ಇಲ್ಲ ಅಂದ್ರೂ ಹಿರ‍್ಯಾರು ಹೇಳ್ಯಾರ್‌ ಅಂತ ಮೈಕೊಡವಿಕೊಂಡು  ರಣರಂಗಕ್ಕೆ ಇಳಿದಿರೋ ಹೊಸ ಟಗರ್‌  ಕಾಳಗ ಮಸ್ತ ಮಜಾಕೊಡ್ತದಲೇ. ಭರ್ಜರಿ ಮನರಂಜನೆ ಕಾದೈತಿ’ ಎಂದೆ.

ನನ್ನ ಮಾತ್‌ ಕೇಳಿ ಪ್ರಭ್ಯಾಗ ಅದೇನ್‌ ಹುಕಿ ಬಂತೋ ಗೊತ್ತಿಲ್ಲ.  ಕವಿರತ್ನ ಕಾಳಿದಾಸ ಚಿತ್ರದ ಟುರ‍್ರ್ ಬ್ಯಾ... ಬೆಳ್ಳಿ ಮೂಡಿತೋ ಕೋಳಿ ಕೂಗಿತು... ಓ ಬೀರ, ಓ ಮಾರ ಓ ನಂಜ ಓ ಕೆಂಪ ಬರ‍್ರಲೇ ಒತ್ತಾಯಿತು ...ಅಂತ ಹಾಡು ಹೇಳ್ತಾ ಹೊಂಟ. ಮೋನ್ಯಾ ಮತ್‌, ಕೀಕಿ, ಡು ಯು ಲವ್‌ ಮೀ ಅಂತ ಗುನುಗುನಿಸುತ್ತ ಬೈಕ್‌ ಚಾಲು ಮಾಡ್ದ. ಹೆಂಡ್ತಿ ಮಾತ್‌ ನೆನಪಾಗಿ ನಾ ಬಜಾರ್ ಕಡೆ ಹೆಜ್ಜೆ ಹಾಕಿದೆ. ಹೊರಗ್‌ ಓಡಿ ಬಂದ ಪಕ್ಯಾ, ‘ಏಯ್‌ ಬಿಕನಾಸಿಗಳಾ, ಬಜೆಟ್‌ನಾಗ್‌ ಅನ್ಯಾಯ ಮಾಡಿದ್ಹಂಗ್‌, ಬಂದ್‌ ನೆಪದಾಗ ಬಿಟ್ಟಿ ಚಹಾ ಕುಡ್ದು ಬಿಲ್ ಕೊಡ್ದ ಹೊಂಟಿರಲ್ಲ, ನಾಳೆ ಬರ‍್ರೀ ಮಕ್ಳಾ’ ಅಂತ ಬೈಕೋತ್‌ ಒಳ್ಗ ಹೋದ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !