ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದಾರ್ಥವಿಹಾರಿ ಕಿಟೆಲ್

Last Updated 6 ಜನವರಿ 2019, 4:28 IST
ಅಕ್ಷರ ಗಾತ್ರ

ಕ್ರೈಸ್ತ ಸುವಾರ್ತಾ ಪ್ರಚಾರಕ್ಕಾಗಿ ದೂರದ ಬಾಸೆಲ್‌ನಿಂದ ಬಂದ ಕಿಟೆಲರು ಬಂದಿಳಿದದ್ದೇ ಧಾರವಾಡದಲ್ಲಿ (1853). ಮೊದಲು ಮಾಡಿದ ಕೆಲಸ ರೆ. ವೈಗಲ್ ಹಾಗೂ ರೆ. ಮೊರಿಕೆಯವರಿಂದ ಕನ್ನಡ ಕಲಿತದ್ದು. ಬಲುಬೇಗನೆ ಕನ್ನಡ ಭಾಷೆಯನ್ನು ತನ್ನೊಳಗು ಮಾಡಿಕೊಂಡರು. ಕನ್ನಡ ಕಾವ್ಯ, ಶಾಸ್ತ್ರಗಳಲ್ಲಿ ಪರಿಣತಿ ಪಡೆದರು.

ಅವರ ನಿರ್ಭೀತ ಸ್ವತಂತ್ರ ಮನಸ್ಸು ಸುವಾರ್ತಾಪ್ರಚಾರದಲ್ಲಿ ಭಾರತೀಯತೆಯನ್ನು ಅಳವಡಿಸಿಕೊಳ್ಳಲು ಹಾತೊರೆಯುತ್ತಿತ್ತು. ‘ನನ್ನ ಮನೆ, ನಾಡು ಇರುವುದು ಬ್ರದರ‍್ಸ್‌ಗಳನಡುವೆ ಅಲ್ಲ. ಕ್ರೈಸ್ತೇತರರ ನಡುವೆ ಎಂದರು. ಅಂತೆಯೇ ಧಾರವಾಡದ ಹೊರವಲಯದಲ್ಲಿ ಸ್ವತಂತ್ರವಾಗಿ ನೆಲೆಸಿದರು. ಮತಪ್ರಚಾರದ ಹಿನ್ನೆಲೆಯಲ್ಲಿ ಊರೂರು ಸುತ್ತಬೇಕು, ಜನಬದುಕನ್ನು ಗ್ರಹಿಸಬೇಕು, ಆರ್ತರಿಗೆ ಸಹಾಯಹಸ್ತ ನೀಡಬೇಕು ಎನ್ನುವುದು ಅವರ ಒಳಗಿನ ಆಸೆಯಾಗಿತ್ತು.

ಧರ್ಮಪ್ರಚಾರಕ್ಕಿಂತ ಭಾರತೀಯ ಬದುಕನ್ನು ಹತ್ತಿರದಿಂದ ಗಮನಿಸುತ್ತಾ ರೈತರು ಕಣಮಾಡುವುದು, ಗ್ರಾಮೀಣ ಜನರು ನೀರಿಗಾಗಿ ಪರದಾಡುತ್ತಿರುವುದು, ಹಳ್ಳಿ ಮನೆಗಳ ರಚನಾವಿನ್ಯಾಸ, ಸ್ಥಳೀಯ ಜನರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಧಾರವಾಡ ಪರಿಸರದ ಪಶುಪಕ್ಷಿ ಪ್ರಾಣಿ, ಇರುವೆಗಳ ಚರ‍್ಯೆ, ಅಲ್ಲಿನ ಊರುಗಳ ಭೌಗೋಳಿಕ ಸ್ವರೂಪ, ಸೂರ್ಯೋದಯ, ಸೂರ‍್ಯಾಸ್ತಗಳ ಸೊಬಗನ್ನು ತಾನು ಸವಿದ ಬಗೆಯನ್ನು ಕುರಿತು ತಮ್ಮ ತ್ರೈಮಾಸಿಕ ವರದಿಗಳಲ್ಲಿ ಬರೆದರು.

ಮಿಷನ್ ಬಳಗದಿಂದ ಗ್ರಾಮೀಣ ಜನರಿಗೆ ಏನು ನೆರವು ನೀಡಬಹುದೆಂದು ಚಿಂತಿಸಿದರು. ಮತಪ್ರಚಾರ ಮಾಡಿದರೂ ಮತಾಂತರ ಕೆಲಸ ನಿರ್ವಹಿಸದೆ ಹೋದರು. ಕಿಟೆಲರ ಈ ಬಗೆಯ ವರದಿಗಳಿಂದ ಬಾಸೆಲ್ ಮಿಷನ್ ಅಧಿಕಾರಿಗಳಿಗೆ ಕಿಟೆಲರ ಬಗೆಗೆ ಅಸಹನೆ ಏರ್ಪಟ್ಟಿತು. ಸಹವಂದಿಗ ಬ್ರದರ‍್ಸ್‌ರು ಕಿಟೆಲರ ಮಾನವೀಯ ಅಂತಃಕರಣದ ನಿಲುವನ್ನು ತಪ್ಪಾಗಿ ತಿಳಿದು ಪ್ರಚಾರದಲ್ಲಿ ಆಸ್ಥೆ ತೋರದಿರುವುದು, ಕನ್ನಡ ನುಡಿ ಜನ ಸಂಸ್ಕೃತಿಯಲ್ಲಿ ಆಸಕ್ತಿ ವಹಿಸುತ್ತಿರುವುದು, ಮಿಷನ್ ನೀತಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಜೊತೆಗಿದ್ದವರೇ ಮೇಲಧಿಕಾರಿಗಳಿಗೆ ಚುಚ್ಚಿಕೊಟ್ಟರು.

ಹೀಗೆ ಕನ್ನಡ ನುಡಿಕಾಯಕವನ್ನು ಅಡಗಿಸುವ ಒಂದು ಬಗೆಯ ಜುಲುಮೆಯ ವರ್ತನೆಯನ್ನು ಕಿಟೆಲರ ವಿರುದ್ಧ ಮೇಲಧಿಕಾರಿಗಳಿಂದ ನಡೆಯಿತು. ಇದರಿಂದ ಹತಾಶರಾಗದ ಕಿಟೆಲರು ಧಾರವಾಡದ ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ಅಲ್ಲಿನ ನತಜನರ ಕಣ್ಣೀರು ಒರೆಸುವ ಕೆಲಸಗಳಲ್ಲಿ ತೊಡಗಿದರು. ಹಾಗೆಂದು ಅವರನ್ನು ಮತಾಂತರಿಸುವುದರಲ್ಲಿ ಆಸಕ್ತಿ ತೋರಲಿಲ್ಲ.

ಹೀಗೆ ಸುವಾರ್ತಾ ಪ್ರಚಾರದ ತಂತ್ರಗಾರಿಕೆಯಲ್ಲಿ ಕಿಟೆಲರು ಸೋತರು. ಸಹಬಳಗದ ನಡುವೆ ಇದ್ದೂ ಒಂಟಿಯಾದರು. ಹೀಗೆ ಸುವಾರ್ತಾ ಪ್ರಚಾರಕಾರ್ಯದಲ್ಲಿ ಕಿಟೆಲ್ ಸೋತರೂ ಕನ್ನಡವನ್ನು ಅರಗಿಸಿಕೊಳ್ಳುವ, ಪದಸಂಪತ್ತಿಯನ್ನು ಪಳಗಿಸಿಕೊಳ್ಳುವ ಕೆಲಸದಲ್ಲಿ ದೊಡ್ಡ ಗೆಲುವನ್ನು ಕಂಡರು. ಅವರ ಭಾಷಾಧ್ಯಯನ ನೈಪುಣ್ಯ ಯಾರಿಗಾದರೂ ಬೆರಗು ತರುವಂತಹದು. ಈ ಮೂಲಕ ಕಿಟೆಲ್ ಧಾರವಾಡದಲ್ಲಿ ಹೊರಗಿನವರಾಗದೆ ಒಳಗಿನವರಾಗುವುದು ಸಾಧ್ಯವಾಯಿತು.

ಮುಂದೆ ಅವರು ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟಿಗೆ ಆರೂಡ ಕಟ್ಟುವ ಕೆಲಸ ಉತ್ತರ ಕರ್ನಾಟಕದ ರಾಣಿಬೆನ್ನೂರು, ಮಲ್ಲಸಂದ್ರ, ದೇವರಗುಡ್ಡ, ರಾಜನಾಳ, ಲಿಂಗನಕೊಪ್ಪ, ಗಾದ್ರಿಜಾಲ ಮುಂತಾದೆಡೆ ಅವರು ನಡೆಸಿದ ಸುವಾರ್ತಾ ಪ್ರಚಾರದ ಸಂದರ್ಭದಲ್ಲಿ ನಡೆಯಿತು. ಧಾರವಾಡ ಕಿಟೆಲರಿಗೆ ಕನ್ನಡ ಭಾಷಾಭ್ಯಾಸದ ಗರಡಿಮನೆಯಾಯಿತು. ಭಾರತೀಯ ವಾತಾವರಣದಲ್ಲಿ ಭಾರತೀಯರ ನಡುವೆ ಭಾರತೀಯ ಕ್ರಿಶ್ಚಿಯನ್ ಆಗಿ ಬಾಳಬೇಕೆಂಬ ಅವರ ಸಂಕಲ್ಪ ಸಾಕಾರಗೊಂಡುದು ಧಾರವಾಡದಲ್ಲಿ. ಧಾರವಾಡದ ಮಣ್ಣು ಅವರಿಗೆ ಭಾರತೀಯ ಸಂಸ್ಕೃತಿಯ ಬಹುಳತೆಯನ್ನು ಅರ್ಥೈಸಿಕೊಳ್ಳಲು ಅನುಕೂಲವಾಯಿತು.

ಕಿಟೆಲ್ ಧಾರವಾಡದಲ್ಲಿ ಸುವಾರ್ತಾ ಪ್ರಚಾರಕನಾಗುವ ಬದಲು ಭಾರತೀಯ ಸಂಸ್ಕೃತಿ, ಭಾಷೆ, ವ್ಯಾಕರಣ, ಛಂದಸ್ಸಿನ ಶೋಧಕರಾಗುತ್ತಿರುವುದನ್ನು ಬಾಸೆಲ್‌ನ ಮೇಲಧಿಕಾರಿಗಳು ಅವರನ್ನು ಧಾರವಾಡದಿಂದ ನೀಲಗಿರಿಯ ಕೇಟಿಗೆ ವರ್ಗಾವಣೆ ಮಾಡಿದರು. (1857) ಧಾರವಾಡದಲ್ಲಿದ್ದಷ್ಟು ದಿನ ಕಿಟೆಲರು ನಿಘಂಟು ರಚನೆಗೆ ಬೇಕಾದ ಆಕರ ಸಾಮಗ್ರಿಗಳ ಸಂಗ್ರಹಕ್ಕೆ ತೊಡಗಿದ್ದರು. ಮುಂದೆ ಮಂಗಳೂರು, ಮಡಿಕೇರಿ, ಧಾರವಾಡ, ಜರ್ಮನಿಯಲ್ಲಿದ್ದಾಗಲೆಲ್ಲ ಕಿಟೆಲ್ ನಿಘಂಟು ರಚನಾಕಾರ್ಯದಲ್ಲಿ ಮುಳುಗಿದರು. ಕಿಟೆಲರನ್ನು ಸುವಾರ್ತಾ ಪ್ರಚಾರದಲ್ಲಿ ಬಲವಂತವಾಗಿ ತೊಡಗಿಸುವ ಬದಲು ಅವರ ಪ್ರೀತಿಯ ನಿಘಂಟು ರಚನೆಯಲ್ಲೇ ಪೂರ್ಣಕಾಲಾವಧಿಗೆ ತೊಡಗಿಸುವುದು ಸಮ್ಮತವೆಂದು ಮೋಗ್ಲಿಂಗ್ ಭಾವಿಸಿದರು.

ಬ್ರಿಟಿಷ್ ಸರಕಾರದ ಆರ್ಥಿಕ ನೆರವನ್ನು ಪಡೆದು ಕನ್ನಡ-ಇಂಗ್ಲಿಷ್ ನಿಘಂಟು ಕೆಲಸಕ್ಕೆ ಕಿಟೆಲರನ್ನು ಪೂರ್ಣಕಾಲಾವಧಿಗೆ ನಿಯುಕ್ತಿಗೊಳಿಸಲಾಯಿತು. ಉತ್ತರ ಕರ್ನಾಟಕದ ಜನರ ಆಡುಮಾತಿಗೂ ತುಂಗಭದ್ರೆಯ ಕೆಳಗಿನ ದಕ್ಷಿಣ ಕರ್ನಾಟಕದ ಆಡುನುಡಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ನಿಘಂಟಿನಲ್ಲಿ ಉತ್ತರ ಕರ್ನಾಟಕದ ಜನಭಾಷೆಗೆ ಸೂಕ್ತ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿ ಬ್ರಿಟಿಷ್ ಅಧಿಕಾರಿಯಿಂದ ಸೂಚನೆ ಬಂದಿತು. ಅದಕ್ಕೆ ಪ್ರತಿಕ್ರಿಯಿಸಿದ ಕಿಟೆಲರು ಸಾಮಾನ್ಯವಾಗಿ ಇಂಗ್ಲಿಷ್ ನಿಘಂಟುಗಳಲ್ಲಿ ಸ್ಥಳೀಯ ಆಡುಮಾತಿನ ಪದಗಳಿಗೆ ಅವಕಾಶವಿಲ್ಲ. ಆದರೆ ನಾನು ಕನ್ನಡ ನಿಘಂಟಿನಲ್ಲಿ ಮೊದಲ ಬಾರಿಗೆ ಆಡುಮಾತಿಗೆ ಒತ್ತು ನೀಡುವುದಲ್ಲದೆ ದಕ್ಷಿಣ-ಉತ್ತರ ಕರ್ನಾಟಕದ ಎಲ್ಲಾ ಭಾಗಗಳ ಪದಕೋಶಗಳಿಗೆ ತಾನು ರಚಿಸುವ ನಿಘಂಟಿನೊಳಗೆ ಸ್ಥಾನ ನೀಡುವುದಾಗಿ ಬರೆದರು.

‘ಕನ್ನಡದ ಪ್ರಾದೇಶಿಕ ಭಿನ್ನ ಸ್ವರೂಪವನ್ನು ಒಪ್ಪಿಕೊಂಡು ಕನ್ನಡದ ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳ ಗ್ರಂಥಗಳ ಸ್ವರೂಪದಲ್ಲಿ ದಕ್ಷಿಣ, ಉತ್ತರ ಎಂಬ ಭೇದ ಅಷ್ಟಾಗಿ ಇಲ್ಲ’ ಎಂದು ಹೇಳಿದ ಕಿಟೆಲರು ಲಿಖಿತರೂಪದ ಕನ್ನಡದ ಸಮಷ್ಟಿ ರೂಪವನ್ನು ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಸಿದರು. ಪ್ರಮಾಣ ಕನ್ನಡದ ಶೋಧದ ಉದ್ದೇಶವಿದ್ದರೂ ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳ ವ್ಯುತ್ಪತ್ತಿಯನ್ನು ಕುರಿತಂತೆ ದ್ರಾವಿಡ ಭಾಷೆಗಳಿಂದ ಸಂಸ್ಕೃತ ಎಷ್ಟರ ಮಟ್ಟಿನ ದೇಣಿಗೆಯನ್ನು ಪಡೆದು ಶ್ರೀಮಂತವಾಗಿದೆ ಎನ್ನುವುದನ್ನು ನಿಘಂಟುರಚನೆಯ ಸಂದರ್ಭದಲ್ಲಿ ಪರಿಶೀಲಿಸಬೇಕಾಗಿದೆ ಎಂದು ಬರೆದರು.

ಬ್ರಿಟಿಷ್ ಸರಕಾರ ಮಾಡಿಕೊಂಡ ಕರಾರಿನಂತೆ (1877) ಕಿಟೆಲರು ಮೂರು ವರ್ಷಗಳಲ್ಲಿ ನಿಘಂಟು ರಚನೆಯ ಕೆಲಸವನ್ನು ಪೂರ್ಣಗೊಳಿಸಬೇಕಾಗಿತ್ತು. ಆ ಕಾಲಕ್ಕೆ ಪ್ರಕಟವಾಗಿದ್ದ ಮುದ್ರಿತ ಗ್ರಂಥಗಳನ್ನು ತಾಡವೋಲೆಗ್ರಂಥಗಳನ್ನು ಸಂಗ್ರಹಿಸಿ ಅವುಗಳಿಂದ ನಿಘಂಟಿಗೆ ಬೇಕಾದ ನಮೂದುಗಳನ್ನು ಆಯಬೇಕು. ಸಂಬಂಧಪಟ್ಟ ಕೂಡುನುಡಿಗಳನ್ನು, ಸಮಾಸಪದಗಳನ್ನು, ಗಾದೆಯ ಮಾತುಗಳನ್ನು, ವಾಗ್ರೂಢಿಗಳನ್ನು ನಾಲಗೆಯಿಂದ ಸಂಗ್ರಹಿಸಬೇಕು.

ಜ್ಞಾತಿಪದಗಳನ್ನು ಅನ್ಯಭಾಷಾ ಪರಿಣತರ ನೆರವಿನಿಂದ ತಾಳೆನೋಡಬೇಕು, ಮೇಲಾಗಿ ಕನ್ನಡ ಪದಗಳಿಗೆ ಸೂಕ್ತವಾದ ಇಂಗ್ಲಿಷ್ ಅರ್ಥವನ್ನು ನಿರ್ಣಯಿಸಬೇಕು. ಆ ಬಳಿಕ ಮುದ್ರಣಾಲಯದಲ್ಲಿ ಅಕ್ಷರಜೋಡಣೆ ಮಾಡಬೇಕು. ಅಕ್ಷರಮೊಳೆಗಳನ್ನು ಜೋಡಿಸುವ ಸಾಹಸ ಹಾಗೂ ಕರಡು ತಿದ್ದುವ ಪರಿಶ್ರಮ ಎಲ್ಲವೂ ಕಿಟೆಲರ ಒಂಟಿಸಾಧನೆ. ಹೀಗಾಗಿ ಸುಮಾರು ಹದಿನೇಳು ವರ್ಷಗಳ ದೀರ್ಘ ತಪಸ್ಸಿನ ಬಳಿಕ ನಿಘಂಟು ಪೂರ್ಣಾಕಾರಗೊಂಡು ಹೊರಬಂದಿತು (1894).

ಈ ಮಧ್ಯೆ 1877 ರಿಂದ 1883ರ ನಡುವಣ ಆರುವರ್ಷಗಳ ಕಾಲ ಕಿಟೆಲ್ ತನ್ನ ಹುಟ್ಟೂರು ಜರ್ಮನಿಯಲ್ಲಿ ನೆಲಸಿದರು. ತಾನು ಕೊಂಡೊಯ್ದಿದ್ದ ನಿಘಂಟು ರಚನೆಯ ಎಲ್ಲ ಆಕರ ಸಾಮಗ್ರಿಗಳನ್ನು ಬಳಸಿ ನಿಘಂಟಿನ ಕರಡು ಪ್ರತಿಯನ್ನು ಸಿದ್ಧಗೊಳಿಸಿದರು. ನಿಘಂಟುರಚನೆ ಪೂರ್ಣಗೊಳ್ಳಬೇಕಾದರೆ ತಾನು ಭಾರತಕ್ಕೆ ಹೋಗುವುದು ಅನಿವಾರ‍್ಯ ಎಂಬ ಕೋರಿಕೆಯನ್ನು ಮಿಷನ್‌ಗೆ ಸಲ್ಲಿಸಿದರು. ಕಿಟೆಲ್ ಭಾರತದಲ್ಲಿ ಮಿಷನ್‌ಗೆ ‘ವ್ಯರ್ಥಭಾರ ಎಂದು ಬಗೆದ ಮೇಲಧಿಕಾರಿಗಳು ಮೊದಲಿಗೆ ಒಪ್ಪಿಗೆ ನಿರಾಕರಿಸಿದರು.

ಬಳಿಕ ಮಿಷನ್ ಸಮಿತಿ ಮತಕ್ಕೆ ಹಾಕಿದಾಗ 5/1 ಮತಗಳಿಂದ ಕಿಟೆಲ್ ಭಾರತಕ್ಕೆ ತೆರಳುವುದು ಸಮ್ಮತವೆಂಬ ಅಭಿಪ್ರಾಯ ಮೂಡಿಬಂದಿತು. ಕಿಟೆಲರಿಗೆ ಕೆಲವೊಂದು ಷರತ್ತುಗಳನ್ನು ಒಡ್ಡಿ ಭಾರತಕ್ಕೆ ಮರಳಲು ಅನುಮತಿ ನೀಡಲಾಯಿತು. ಕಿಟೆಲ್ ಭಾರತದಲ್ಲಿ ಯಾವುದೇ ಮಿಷನರಿ ಚಟುವಟಿಕೆ ನಡೆಸಬಾರದು. ನಿಘಂಟು ರಚಿಸುವ ಹಿನ್ನೆಲೆಯಲ್ಲಿ ಕನಿಷ್ಠ ಒಂದು ವರ್ಷ ದಕ್ಷಿಣ ಮರಾಠ (ಧಾರವಾಡದ ಸುತ್ತಮುತ್ತ) ಪ್ರದೇಶದಲ್ಲಿ ವಾಸಿಸಬೇಕು. ಆ ಬಳಿಕ ಮಂಗಳೂರಲ್ಲಿ ನೆಲಸಬೇಕೆಂದು ತಾಕೀತು ಮಾಡಲಾಯಿತು. ಆ ಷರತ್ತಿನಂತೆ ಕಿಟೆಲರು ಜರ್ಮನಿಯಿಂದ ನೇರ ಧಾರವಾಡಕ್ಕೆ ಬಂದು ಅಲ್ಲಿನ ಬಾಸೆಲ್ ಮಿಷನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು.

ಧಾರವಾಡದಲ್ಲಿ ಮತ್ತೆ ಬಂದು ನೆಲಸಿದ ಕಿಟೆಲರು ಪದಸಂಗ್ರಹಕ್ಕಾಗಿ ಅನೇಕ ದೇಶೀಯ ಪಂಡಿತರನ್ನು ನೇಮಿಸಿಕೊಂಡಿದ್ದರು. ಅವರಲ್ಲಿ ‘ಅಯ್ಯ ವಸ್ತ್ರದ ಶಿವಲಿಂಗಪ್ಪ (1883) ಪ್ರಮುಖರು. ಕಿಟೆಲರು ಪಂಡಿತ ಶಿವಲಿಂಗಪ್ಪನವರ ಜತೆ ಹುಬ್ಬಳ್ಳಿ-ಧಾರವಾಡಗಳ ಬೀದಿ ಬೀದಿಗಳಲ್ಲಿ, ಸಂತೆಗಳಲ್ಲಿ ಸಂಚರಿಸಿ ಕೈಮುಟ್ಟ ಪದಸಂಗ್ರಹಮಾಡಿದರಂತೆ. ಮನೆಮನೆಗಳಿಗೆ ತೆರಳಿ ದೇಸೀ ಅಡುಗೆಯ ವೈವಿಧ್ಯಗಳನ್ನು ದಾಖಲಿಸಿಕೊಂಡರಂತೆ. ಲಿಂಗಾಯತ ಧರ್ಮವನ್ನು ಕುರಿತಂತೆ ಮೂರು ಸುದೀರ್ಘಲೇಖನಗಳನ್ನು ಬರೆವ ಹಿನ್ನೆಲೆಯಲ್ಲಿ ಧಾರವಾಡದ ಸುತ್ತಲಿನ ವೀರಶೈವ ಮಠಗಳ ಜೊತೆಗೆ ಒಡನಾಟ ಏರ್ಪಟ್ಟಿತ್ತು.

ಲಿಂಗಾಯತ ಮಠಗಳಿಗೆ ಭೇಟಿಕೊಟ್ಟ ಮಾಹಿತಿಗಳು ಸಿಗುತ್ತವೆ. ಅಲ್ಲಿನ ಮಠಗಳಲ್ಲಿ ದೊರೆತ ಅನೇಕ ತಾಡವೋಲೆ ಹಸ್ತಪ್ರತಿಗಳನ್ನು ಅವರು ‘ಶಬ್ದಮಣಿದರ್ಪಣ ಹಾಗೂ ನಾಗವರ್ಮನ ‘ಛಂದೋಂಬುಧಿಯ ಗ್ರಂಥಸಂಪಾದನ ಕಾರ್ಯದಲ್ಲಿ ಬಳಸಿಕೊಂಡಿದ್ದಾರೆ. ಕಿಟೆಲರ ‘A Grammer Of Kannada Language' ಕನ್ನಡ ವ್ಯಾಕರಣ ಅಧ್ಯಯನದ ಮೈಲಿಗಲ್ಲು (1903). ಈ ಗ್ರಂಥದ ಮುನ್ನುಡಿಯಲ್ಲಿ ಕಿಟೆಲರು ಧಾರವಾಡದ ಮಹಾನ್ ಪಂಡಿತ ಛಂದೋ ನರಸಿಂಹ ಮುಳಬಾಗಲು ಅವರ ‘ಶಾಲಾವ್ಯಾಕರಣ ನುಡಿಗಟ್ಟು’ ಕೃತಿಯಿಂದ ತಾನು ಉಪಕೃತನಾಗಿರುವುದಾಗಿ ಬರೆಯುತ್ತಾರೆ.

19ನೆಯ ಶತಮಾನದ ಉತ್ತರಾರ್ಧದಲ್ಲಿ ಜರ್ಮನ್-ಭಾರತ (ಕನ್ನಡ) ಸಂಸ್ಕೃತಿಗಳ ನಡುವೆ ಒಂದು ಕೊಂಡಿಯಂತೆ ಕೆಲಸಮಾಡಿದ ಕಿಟೆಲರ ಸಿದ್ಧಿ ಸಾಧನೆಗಳ ಬಗೆಗೆ ಒಂದು ಬಗೆಯ ವಿಸ್ಮೃತಿ ಏರ್ಪಟ್ಟಿರುವುದು ಒಂದು ನೋವಿನ ಸಂಗತಿ. ಜರ್ಮನಿಯ ಬಾಸೆಲ್ ಮಿಷನ್ ಬಳಗದವರಿಗೆ ಕಿಟೆಲ್ ಒಬ್ಬ ತುಂಟ ಹುಡುಗ, ವಿದ್ರೋಹಿಯಾಗಿಯೇ ಕಾಣಿಸಿಕೊಂಡಿದ್ದರು. ಕನ್ನಡಿಗರು ಅವರನ್ನು ನಿಘಂಟು ರಚಕನೆಂದಷ್ಟೇ ತಿಳಿದರು.

ವಯ್ಯಾಕರಣಿಯಾಗಿ, ಸಾಹಿತ್ಯಚರಿತ್ರಕಾರರಾಗಿ, ಗ್ರಂಥಸಂಪಾದನಕಾರರಾಗಿ, ನಿಘಂಟಿಗನಾಗಿ, ಸೃಜನಶೀಲಕವಿಯಾಗಿ, ಪಠ್ಯಪುಸ್ತಕರಚಕರಾಗಿ, ಅನುವಾದಕರಾಗಿ, ಶಾಸನತಜ್ಞರಾಗಿ, ಸಂಸ್ಕೃತಿ ಚಿಂತಕರಾಗಿ, ಸಂಸ್ಕೃತವೇದಪಂಡಿತರಾಗಿ, ಲಿಂಗಾ ಯತ ಅಧ್ಯಯನಕಾರನಾಗಿ, ಸಂಗೀತಜ್ಞನಾಗಿ ಎಲ್ಲಕ್ಕಿಂತ ಮೇಲಾಗಿ ‘ಭಾರತೀಯ ಚಿಂತನೆಯನ್ನು ನೆಲದಲ್ಲಿ ಬಿತ್ತಿದ ಕಿಟೆಲರ ಬಹುಮುಖಿ ಬಹುಶ್ರುತತ್ವವನ್ನು ಜರ್ಮನ್ ಭಾಷೆಯ ಮೂಲ ಆಕರಗಳನ್ನು ಶೋಧಿಸಿ ಪುನಾರಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT