ದೆಹಲಿಯೆಡೆಗೆ ಅರಿವಿನ ಪಯಣ

7

ದೆಹಲಿಯೆಡೆಗೆ ಅರಿವಿನ ಪಯಣ

Published:
Updated:

ಮಹಿಳೆಯೊಬ್ಬರು ಬೈಕ್‌ ಸವಾರಿ ಮಾಡಿದರೆ ಜನರು ಕಣ್ಣು ಬಾಯಿ ಮುಚ್ಚದೇ ನೋಡುತ್ತಾರೆ! ನಗರಗಳಲ್ಲಿ ಈ ಭಾವನೆ ಬದಲಾಗಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆಯ ಗಾಳಿಯಿನ್ನೂ ಬೀಸಿಲ್ಲ.

ಆರು ಮಂದಿ ದಿಟ್ಟ ಮಹಿಳೆಯರು (ಫೆಡರಲ್‌ ಏಂಜಲ್ಸ್‌) ದೇಶದಾದ್ಯಂತ ಬುಲೆಟ್‌ನಲ್ಲಿ ಸವಾರಿ ಮಾಡುವ ಮೂಲಕ ಮಹಿಳಾ ಸಬಲೀಕರಣ ಬಗ್ಗೆ ಅರಿವು ಮೂಡಿಸುತ್ತಾ, ಮಹಿಳೆಯರು ತಮ್ಮ ಕನಸಿನ ಬೆನ್ನತ್ತಿ ಹೋಗುವಂತೆ ಪ್ರೋತ್ಸಾಹಿಸಲು ಮುಂದಾಗಿದ್ದಾರೆ. ಈ ಮೂಲಕ ಸಮಾನತೆಯ ಆಶಯವನ್ನು ಹಳ್ಳಿ ಹಳ್ಳಿಗಳಲ್ಲಿ ಸಾರುವ ಪ್ರಯತ್ನಕ್ಕೆ ಅಡಿಗಾಲಿಟ್ಟಿದ್ದಾರೆ.


ಫೆಡೆರಲ್‌ ಏಂಜಲ್ಸ್‌ ತಂಡವನ್ನು ಬೆಂಗಳೂರಿನ ಫೆಡೆರಲ್‌ ಬ್ಯಾಂಕ್‌ ಸಿಬ್ಬಂದಿಗಳು ಹೂಗುಚ್ಚ ನೀಡಿ, ಆರತಿ ಮಾಡಿ ಸ್ವಾಗತಿಸಿದರು

ಫೆಡರೆಲ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕ್‌ ಮುಂದಾಗಿದ್ದು, ಇದೇ ಮೊದಲ ಬಾರಿಗೆ ಇಂತಹ ವಿಭಿನ್ನ ರೀತಿಯ ಯೋಜನೆಯೊಂದನ್ನು ಜಾರಿಮಾಡಿದೆ. ಈ ಬಾರಿ ಮಹಿಳೆಯರು ‘ಕೇರಳದಿಂದ ದೆಹಲಿವರೆಗೆ’ ಬುಲೆಟ್‌ ಸವಾರಿ ಮಾಡುತ್ತಿದ್ದು, ಪ್ರತಿ ಊರಿನಲ್ಲೂ ಅರಿವಿನ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.

ಆಗಸ್ಟ್ 1ರಂದು ಕೊಚ್ಚಿಯಲ್ಲಿ ಆರಂಭಗೊಂಡ ಈ ಸವಾರಿಯನ್ನು ಪ್ರತಿ ಊರಿನಲ್ಲಿ ಫೆಡರಲ್‌ ಬ್ಯಾಂಕ್‌ನ ಸಿಬ್ಬಂದಿ ಪ್ರೀತಿಯಿಂದ ಬರಮಾಡಿಕೊಂಡು ಸ್ಥಳೀಯವಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

ಕೊಚ್ಚಿನ್‌, ಕೊಯಮತ್ತೂರು, ಸೇಲಂ ಮಾರ್ಗದ ಮೂಲಕ ಆಗಸ್ಟ್‌ 5 ರಂದು ಬೆಂಗಳೂರು ತಲುಪಿದ ಸವಾರರನ್ನು ಹೂ ನೀಡಿ, ಆರತಿ ಮಾಡಿ ಬರಮಾಡಿಕೊಂಡ ಫೆಡರಲ್‌ ಬ್ಯಾಂಕ್‌ನ ಬೆಂಗಳೂರಿನ ಸಿಬ್ಬಂದಿ ಸೇಂಟ್‌ ಮಾರ್ಕ್‌ ಹೋಟೆಲ್‌ನಲ್ಲಿ ಈ ತಂಡದವರಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಸವಾರರು ಬೈಕ್‌ ಸವಾರಿಯ ಅನುಭವವನ್ನು ಹಂಚಿಕೊಂಡರು.


ಚಿತ್ರದುರ್ಗ ಕೋಟೆಗೆ ಭೇಟಿ ನೀಡಿದ ತಂಡ

ನಮಗೆ ಬೈಕ್‌ ಎಂದರೆ ತುಂಬಾ ಇಷ್ಟ. ಬೈಕ್ ಸವಾರಿ ಮಾಡಬೇಕು ಎಂಬುದು ಚಿಕ್ಕಂದಿನಿಂದಲೂ ನಮ್ಮ ಕನಸು. ಮನೆಯಿಂದ ಆಫೀಸಿಗೆ ಬೈಕ್‌ ಸವಾರಿ ಮಾಡುವುದನ್ನು ಕಲಿತಿದ್ದ ನಾವು, ಇದೇ ಮೊದಲ ಬಾರಿಗೆ 3,000 ಕಿ.ಮೀ.ಗಳಷ್ಟು ದೂರವನ್ನು ಬುಲೆಟ್‌ನಲ್ಲಿ ಪಯಣಿಸಲು ಫೆಡರಲ್‌ ಬ್ಯಾಂಕ್‌ ಅವಕಾಶ ನೀಡಿದೆ ಎಂದು ಒಕ್ಕೊರಲಿನಿಂದಲೇ ಹೇಳುತ್ತಾರೆ ಫೆಡರಲ್‌ ಏಂಜಲ್ಸ್‌ ತಂಡದವರು.

‘ಈ ಸವಾರಿ ನಮಗೆ ಪಯಣದ ಸಂತೋಷವನ್ನು ಕೊಟ್ಟಿದೆ. ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಭಿನ್ನ ವರ್ಗದ ಜನರನ್ನು, ಸಂಸ್ಕೃತಿಯನ್ನು ಅಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ಅರಿಯಲು ಸಹಕಾರಿಯಾಗಿದೆ. ಇದರಿಂದ ನಾವು ಕಲಿಯುತ್ತಿದ್ದೇವೆ’ ಎನ್ನುತ್ತಾರೆ ಫೆಡರಲ್‌ ಏಂಜಲ್ಸ್‌ ತಂಡದ ಸದಸ್ಯೆ ಲಾವಣ್ಯ.

‘ನನಗೆ ಚಿಕ್ಕಂದಿನಿಂದಲೂ ಬೈಕ್ ಓಡಿಸುವ ಆಸೆಯಿತ್ತು. ಕಾಲೇಜು ದಿನಗಳಲ್ಲಿ ಹಠ ಮಾಡಿ ಬೈಕ್‌ ಓಡಿಸುವುದು ಕಲಿತೆ. ಮೊದಮೊದಲು ಬೈಕ್ ಸವಾರಿ ಮಾಡುವಾಗ ಹಿಂಜರಿಕೆಯಾಗುತ್ತಿತ್ತು. ಜನರು ನಮ್ಮನ್ನು ನೋಡುವ ರೀತಿ ಮುಜುಗರ ಉಂಟು ಮಾಡುತ್ತಿತ್ತು. ಈಗ ಕಾಲ ಬದಲಾಗಿದೆ. ನಾನು ಬುಲೆಟ್ ಓಡಿಸುವ ಬಗ್ಗೆ ನನಗೆ ಹೆಮ್ಮೆ ಇದೆ. ಖುಷಿಯಿಂದಲೇ ಬೈಕ್ ಸವಾರಿ ಮಾಡುತ್ತೇನೆ’ ಎಂದು ಬೈಕ್‌ ಕಲಿತ ಬಗೆಯನ್ನು ವಿವರಿಸುತ್ತಾರೆ ಅವರು.


ಕೊಯಿಮತ್ತೂರಿನ ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದ ಫೆಡೆರಲ್‌ ಏಂಜಲ್ಸ್‌ ತಂಡ

‘ಇದೇ ಮೊದಲ ಬಾರಿ ನಾನು ಇಂತಹ ದೀರ್ಘಪಯಣ ಮಾಡುತ್ತಿರುವುದು. ಬೈಕ್ ಸವಾರಿ ಬರುತ್ತಿತ್ತೇ ವಿನಃ ಇಲ್ಲಿಯವರೆಗೂ ಎಂದಿಗೂ ಹೀಗೆ ದೂರ ಪಯಣಿಸಿರಲಿಲ್ಲ. ನಾನು ಆಯ್ಕೆಯಾದಾಗ ತುಂಬಾ ಖುಷಿಯಾಯಿತು. ಮನೆಯವರು ಕೂಡ ಹಿಂಜರಿಕೆಯೊಂದಿಗೆ ಸಮ್ಮತಿ ನೀಡಿದರು. ಇದು ನನ್ನ ಹುಮ್ಮಸ್ಸನ್ನು ಹಿಮ್ಮಡಿಗೊಳಿಸಿತು. ಫೆಡರಲ್ ಬ್ಯಾಂಕ್‌ನ ಸಿಬ್ಬಂದಿಗಳಲ್ಲಿ  ಶೇ 40ರಷ್ಟು ಮಹಿಳೆಯರೇ ಇದ್ದಾರೆ. ಬೆಂಗಳೂರಿನಲ್ಲಿ ಶೇ 60ರಷ್ಟು ಮಂದಿ ಮಹಿಳಾ ಉದ್ಯೋಗಿಗಳಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಹೊಸ ರೀತಿಯ ಅರಿವಿನ ಜಾಥಾ ಆರಂಭಿಸಿದ್ದಾರೆ. ಮಹಿಳೆಯರು ನಮಗೆ ಕೆಲವು ರಿಯಾಯಿತಿ ಕೊಡಿ ಎಂದು ಕೇಳುವುದನ್ನು ನಿಲ್ಲಿಸಿ. ನಾವೆಲ್ಲರೂ ಸಬಲರಾಗಬೇಕು’ ಎನ್ನುತ್ತಾರೆ ತಂಡದ ಹಿರಿಯ ಸದಸ್ಯೆ ಸೀತಾ ವಿ. ನಾಯರ್‌.

‘ನನಗೆ ಓದಲು, ಬೈಕ್‌ ಓಡಿಸಲು ಇಷ್ಟ ಆದರೆ ಮನೆಯಲ್ಲಿ ಬಿಡುವುದಿಲ್ಲ. ಇವೆಲ್ಲವೂ ಸಮಸ್ಯೆ ಎನಿಸಬಹುದು. ಆದರೆ ಇವನ್ನೇ ಸವಾಲಾಗಿ ಸ್ವೀಕರಿಸಿ. ಧೈರ್ಯವಾಗಿ ಎದುರಿಸಿದರೆ ಪ್ರತಿಫಲ ದೊರೆಯುತ್ತದೆ. ನಾವು ಇಂತಹ ಸಂಘರ್ಷಗಳನ್ನು ಎದುರಿಸಿಯೇ ಇಂದು ನಿಮ್ಮ ಮುಂದೆ ಇರುವುದು. ಕಲಿಕೆ ನಮ್ಮ ಆಸಕ್ತಿಯಾಗಲಿ, ಅಭಿರುಚಿಯಾಗಲಿ’ ಎಂದು ಆತ್ಮವಿಶ್ವಾಸವನ್ನು ನೀಡುತ್ತಾರೆ ತಂಡದ ನಾಯಕಿ ಮರ್ಲಿನ್‌.

‘ಪ್ರತಿದಿನ ಬೆಳಿಗ್ಗೆ 8ಗಂಟೆಗೆ ಆರಂಭವಾಗುವ ಸವಾರಿಯು ಸಂಜೆ 7 ಗಂಟೆಗೆ ಕೊನೆಗೊಳ್ಳುತ್ತದೆ. ಈ ಪ್ರಯಾಣದ ಬಗ್ಗೆ ಒಂದು ತಿಂಗಳ ಮೊದಲ ಯೋಜನೆ ತಯಾರಾಗಿತ್ತು. ಹಾಗಾಗಿ ಪ್ರತಿದಿನ ಸುಮಾರು 200 ಕಿ.ಮೀ ಪ್ರಯಾಣ ಮಾಡುತ್ತೇವೆ. ಇದರ ಜೊತೆಗೆ ಕೆಲವು ಆಯ್ದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಕೊಯಮತ್ತೂರಿನ ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣದ ಕುರಿತು ಜಾಗೃತಿಯನ್ನು ಮೂಡಿಸಿದೆವು. ಹುಡುಗಿಯರೆಲ್ಲರೂ ಬೈಕ್‌ ಕಲಿಯುವುದಾಗಿ’ ಅವರು ತಿಳಿಸಿದರು.

ಬೆಂಗಳೂರಿನಿಂದ ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ ಪುಣೆ, ಮುಂಬೈ, ಅಹಮದಾಬಾದ್‌ ಜೈಪುರ ಮಾರ್ಗದಲ್ಲಿ ಇದೇ ತಿಂಗಳ 20ರಂದು ದೆಹಲಿಯನ್ನು ತಲುಪಲಿದೆ


ಫೆಡೆರಲ್‌ ಏಂಜಲ್ಸ್‌ ಬೈಕ್‌ ಸವಾರಿ

**

ಸ್ತ್ರೀ ಸಬಲೀಕರಣ ಜಾಗೃತಿ ಅಭಿಯಾನ

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಫೆಡರಲ್‌ ಬ್ಯಾಂಕ್‌, ಮಹಿಳಾ ಸಬಲೀಕರಣದ ಬಗ್ಗೆ ಗಮನಹರಿಸಬೇಕು, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರೆಯಬೇಕು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು ಎಂದು ಮಹಿಳಾ ಉದ್ಯೋಗಿಗಳಿಗೆ ‘ಕೇರಳ ಟು ದೆಹಲಿ’ ಬೈಕ್‌ ಸವಾರಿ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !