ಮಕ್ಕಳಿಗೊಂದು ಹೊಸ ಭಾಷೆ

7

ಮಕ್ಕಳಿಗೊಂದು ಹೊಸ ಭಾಷೆ

Published:
Updated:

ಭಾಷೆಯೇ ಸರ್ವಸ್ವ ಅಲ್ಲ. ಜೀವನ ಕ್ರಮಗಳಿಂದ ಭಾಷೆ ಹುಟ್ಟಿದೆಯೇ ವಿನಾ ಭಾಷೆಯಿಂದ ಮನುಷ್ಯ ಬೆಳೆದಿಲ್ಲ. ಭಾಷೆಗಳನ್ನು ಮನುಷ್ಯ ಬೆಳೆಸುತ್ತ ಬಂದಿದ್ದಾನೆ. ಜೀವನ ಕ್ರಮಗಳಿಂದ ಭಾಷೆಯ ಅಳಿವು ಉಳಿವು ತೀರ್ಮಾನವಾಗುತ್ತದೆಯೇ ವಿನಾ ಒಂದು ಭಾಷೆಯಿಂದ ಇನ್ನೊಂದು ಭಾಷೆ ನಶಿಸುತ್ತದೆ ಎಂಬುದು ಸುಳ್ಳು.

ಭಾಷೆ ಒಂದು ಜೈವಿಕ ಸಂಗತಿ. ಅದು ಜೀವ ವೈವಿಧ್ಯದಂತಿರುವ ಅಭಿವ್ಯಕ್ತಿ ಮಾಧ್ಯಮ. ಅಭಿವ್ಯಕ್ತಿ ಮುಖ್ಯವೇ ವಿನಾ ಆ ಅಭಿವ್ಯಕ್ತಿಯ ವಾಹಕವಾಗಿರುವ ಭಾಷೆ ಒಂದು ವ್ಯವಸ್ಥೆ ಅಷ್ಟೇ. ತಾಯಿಯನ್ನು ಮರೆಯಲು ಸಾಧ್ಯವಿಲ್ಲ. ತಾಯಿ ಒಂದು ಜೈವಿಕ ಸ್ಥಿತಿ. ಹಾಗೆಯೇ ಮಾತೃಭಾಷೆ ಕೂಡ. ಜಗತ್ತಿನ ಎಲ್ಲರಿಗೂ ಒಂದೇ ಭಾಷೆ ಇದೆ. ಚಾಂಘ್ಸುಕಿ ಇದನ್ನು ವಿಶ್ವಾತ್ಮಕ ಭಾಷೆ ಎಂದು ಕರೆದಿದ್ದಾರೆ. ಈ ವಿಶ್ವಾತ್ಮಕ ಮಾನವ ಅಭಿವ್ಯಕ್ತಿಗೆ ಎಷ್ಟು ಶಕ್ತಿ ಇದೆ ಎಂದರೆ; ಅನ್ಯಗ್ರಹಗಳ ಮಾನವರೆದ್ದು ಬಂದರೆ ಅವರ ಜೊತೆಯೂ ಸಂವಹನ ಮಾಡಬಲ್ಲಷ್ಟು ಸಮರ್ಥವಾಗಿದೆ.

ಭಾಷೆಯ ಜೈವಿಕ ಸಾಮರ್ಥ್ಯ ಅಪಾರವಾದದ್ದು. ಅದನ್ನು ಸಂಕುಚಿತವಾಗಿ ಗ್ರಹಿಸಲಾಗಿದೆ. ಭಾಷೆ ಒಂದು ಅಭಿವ್ಯಕ್ತಿ ಮಾಧ್ಯಮ ಅಷ್ಟೇ. ಎಲ್ಲ ಭಾಷೆಗಳೂ ಅದನ್ನೇ ಮಾಡುವುದು. ಮನುಷ್ಯರ ಅಭಿವ್ಯಕ್ತಿ ಪ್ರಜ್ಞೆ ಜೀವಜಾಲದಲ್ಲಿ ಬೇರೆ ಬೇರೆಯಾಗಿ ವ್ಯಕ್ತವಾಗುತ್ತ ಬಂದಿದೆ. ಅದು ವಿಶ್ವಾತ್ಮಕ ಭಾಷೆಯ ಮೂಲ ಗುಣ. ಅದು ಸದಾ ಭಾಷೆಗಳನ್ನು ಬೆಳೆಸುತ್ತಲೇ ಸಾಗುತ್ತದೆ. ಅದು ಅದರ ನೈಸರ್ಗಿಕ ಗುಣ. ಮತ್ತೆ ಮತ್ತೆ ತಾಯಂದಿರು ರೂಪುಗೊಳ್ಳುವಂತೆ ಭಾಷೆ ಕಾಲಕಾಲಕ್ಕೆ ಬೇರೆಯಾಗುತ್ತ ನಾಳಿನವರತ್ತ ನಡೆಯುತ್ತದೆ. ಪಂಪನ ಕನ್ನಡ ಈಗ ನಮ್ಮ ಕನ್ನಡ ಅಲ್ಲ. ಮುಖ್ಯ ಯಾವುದು ಎಂದರೆ; ಆ ಭಾಷೆಯ ಜೀವನ ಮೌಲ್ಯಗಳು. ಜೀವನ ತತ್ವದಲ್ಲೇ ಜ್ಞಾನವಿದೆ. ಅದನ್ನೇ ಅಭಿವ್ಯಕ್ತಿಸುತ್ತ ಬದುಕುವುದಿದೆ. ಇದನ್ನೆಲ್ಲ ಸಂಸ್ಕೃತಿ ಎಂದು ಕರೆಯುತ್ತೇವೆ. ಆದರೆ ಈ ಭಾಷೆಯಲ್ಲಿ ನುಡಿವ ನಡತೆಯನ್ನು ಸದಾ ಸುಧಾರಿಸುತ್ತಲೇ ಹೋಗಬೇಕು.

ಕನ್ನಡ ಭಾಷೆಯಿಂದಲೇ ಎಲ್ಲ ಸಿಕ್ಕಿಬಿಡುವುದಿಲ್ಲ. ಹುಟ್ಟಿನಿಂದ ಬೆಳೆದ ಪರಿಸರದಿಂದ ಕಲಿತ ಭಾಷೆಯೂ ಒಂದು ಆಕಸ್ಮಿಕ ಆಯ್ಕೆ. ಹಾಗೆಯೇ ಶಿಕ್ಷಣ ಕಾಲದಲ್ಲಿ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳುವುದು ಕೂಡ ಒಂದು ಆಯ್ಕೆ. ಮೂಲ ಭಾಷೆಯಿಂದಲೇ ಇನ್ನೆಲ್ಲ ಭಾಷೆಗಳನ್ನು ನಾವು ಕಲಿಯುವುದು ಮತ್ತು ಆ ಮೂಲ ಮಾತಿನಿಂದಲೇ ಇನ್ನೊಂದು ಭಾಷೆಯ ಮಾತನ್ನು ಪುನರ್ ಸೃಷ್ಟಿಸಿ ನುಡಿಯುವುದು. ನುಡಿಯುವ ಈ ಕ್ರಿಯೆ ತುಂಬ ಮುಖ್ಯವಾದದ್ದು.

ಕನ್ನಡ ಮಾಧ್ಯಮದಿಂದ ಕನ್ನಡ ಭಾಷೆ ಉಳಿಯಲಾರದು. ಇಷ್ಟು ಕಾಲ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ನಾವೆಲ್ಲ ವಿಶ್ವರಹಸ್ಯ ಅರೆದು ಕುಡಿದಿದ್ದೇವೆಯೇ? ಕನ್ನಡ ಭಾಷೆಗೂ ಮಿತಿಗಳಿವೆ. ಜಾತಿ, ಧರ್ಮ, ಲಿಂಗಭೇದಗಳ ತಾರತಮ್ಯಗಳು ಕನ್ನಡ ಭಾಷೆಯಲ್ಲಿ ಇಲ್ಲವೇ? ಭಾಷೆಗಳು ಮತೀಯವಾದಿ ಆದಂತೆಲ್ಲ ಅವು ನಾಶವಾಗುತ್ತವೆ. ಸಂಸ್ಕೃತ ಅಂತಹ ತಪ್ಪು ಮಾಡಿತು. ಆ ಸಂಸ್ಕೃತ ರೂಪಾಂತರಗೊಂಡು ತನ್ನ ಮೌಲ್ಯಗಳನ್ನೆಲ್ಲ...

ಸ್ಥಳೀಯವಾಗಿ ಭಾರತದ ಎಲ್ಲ ಭಾಷೆಗಳಿಗೂ ಹಂಚಿತು. ಕನ್ನಡ ಮಾಧ್ಯಮದ ಒತ್ತಾಯವೂ ಮತೀಯ ಸ್ವರೂಪದಲ್ಲಿದೆ.

ಭಾಷೆಗಳು ಜಾತ್ಯತೀತ ಆದಾಗ ಅವುಗಳ ಸಾಧ್ಯತೆ ವಿಶಾಲವಾಗುತ್ತದೆ. ಇಂಗ್ಲಿಷ್ ಆ ಮಟ್ಟಿಗೆ ಜಾಗತಿಕವಾಗಿ ಜಾತ್ಯತೀತವಾದ ಸಂವಹನ ಸಾಧ್ಯತೆಯನ್ನು ನಾಗರಿಕತೆಗಳಿಗೆ ತಂದುಕೊಟ್ಟಿರುವ ವಿಶ್ವಾತ್ಮಕ ಭಾಷೆಯ ಜಾಡು ಹಿಡಿದಿರುವ ಒಂದು ಭಾಷೆ. ಮೆಕಾಲೆಯ ಇಂಗ್ಲಿಷ್ ಹೇರಿಕೆಯಿಂದ ಭಾರತೀಯ ಭಾಷೆಗಳು ಆಧುನೀಕರಣಗೊಂಡಿವೆ. ಕನ್ನಡವು ಜಗತ್ತಿನಲ್ಲಿ ಅನ್ನದ ಭಾಷೆಯಾಗಲು ಸಾಧ್ಯವಾಗಿರುವುದು ವಸಾಹತುಶಾಹಿ ಶಿಕ್ಷಣದಿಂದ. ಕನ್ನಡ ಭಾಷೆ ತಾಯ ಎದೆಹಾಲು ನಿಜ; ಅದು ನಮ್ಮ ಸಂವೇದನೆಯ ಅಮೃತ ನಿಜ. ಅದು ಎಂದೂ ನಶಿಸದು. ಆದರೆ ಕನ್ನಡವು ಇಂದಿನ, ನಾಳಿನ ಮಕ್ಕಳಿಗೆ ಅನ್ನದ ಮಾರ್ಗವಾಗಬೇಕಾದಲ್ಲಿ ಅದು ಇಂಗ್ಲಿಷ್ ಎಂಬ ಸಾಕು ತಾಯಿಯ ವರದ ನೆರವಿನಿಂದ ತನ್ನ ಗತಕಾಲದ ಕಂದಾಚಾರಗಳನ್ನು ಬಿಟ್ಟುಕೊಡಬೇಕಾಗಿದೆ.

ಶಿಕ್ಷಣ ಮಾಧ್ಯಮವು ಶಾಲೆಯ ಸಂದರ್ಭದ ಒಂದು ಸಂಗತಿ. ಅದೊಂದು ಕಲಿಕಾ ಉಪಾಯ. ಹೊಸ ಚಹರೆಗಳಿಗೆ ರೂಪಾಂತರಗೊಳ್ಳಬೇಕಾದ ಒಂದು ಪ್ರಕ್ರಿಯೆ. ವಾಸ್ತವ ಏನೆಂದರೆ, ಈಗ ಒಂದೇ ಕನ್ನಡ ಮಾಧ್ಯಮದಲ್ಲಿ ಬಿದ್ದಿರುವ ಮಕ್ಕಳು ಯಾರೆದರೆ; ದಮನಿತರ ಮಕ್ಕಳು. ಆ ದಮನಿತ ಹಳ್ಳಿ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಅಷ್ಟರ ಮಟ್ಟಿಗೆ ಆಯಾಯ ಸೀಮೆಯ ಕನ್ನಡಗಳು ವಿಮೋಚನೆಗೆ ಒಳಗಾಗುತ್ತವೆ.

ಕನ್ನಡ ಭಾಷೆಯಲ್ಲೇ ಹಲವು ಪ್ರಭೇದಗಳಿವೆ. ಅವೆಲ್ಲ ಮನೆಯ ತಾಯ ಕರುಳ ಬಳ್ಳಿಯ ನುಡಿಗಳು. ಕಲಿತ ಮಾಧ್ಯಮ ಗೌಣವಾಗಲೂಬಹುದು. ಈ ಕರುಳ ನುಡಿ ಕಡೆಯಾಗದು. ಕಲಿಕಾ ಮಾಧ್ಯಮದಿಂದ ನಮ್ಮ ಮಕ್ಕಳು ನಮ್ಮ ಕನ್ನಡ ಮರೆಯುತ್ತವೆ ಎಂಬ ಆರೋಪ ಯೋಗ್ಯವಾದದ್ದಲ್ಲ. ಇದು ಇಬ್ಬಂದಿ ನೀತಿ. ಕಲಿಕಾ ಮಾಧ್ಯಮ ಬೇರೆ; ಜೀವನ ವಿಧಾನದ ಮಾತೃ ಮಾಧ್ಯಮ ಬೇರೆ. ಇವೆರಡಕ್ಕೂ ಅಂತರ್ಗತ ಸಂಬಂಧವಿದೆ. ಇವನ್ನು ವೈರುಧ್ಯ ಮಾಡಬಾರದು. ಕಲಿಕಾ ಮಾಧ್ಯಮ ತಾಂತ್ರಿಕವಾದದ್ದು. ಜೀವನ ಮಾಧ್ಯಮವೇ ಮುಖ್ಯ. ಶಿಕ್ಷಣದಲ್ಲಿ ಕಲಿಸುವುದು ಕೇವಲ ಕೆಲವೇ ಸಂಗತಿಗಳನ್ನು. ಯಾವ ಭಾಷೆಯಲ್ಲಿ ಕಲಿಸಿದರು ಎಂಬುದು ಮುಖ್ಯ ಅಲ್ಲ. ಅಲ್ಲಿ ಏನನ್ನು ನಾಳಿನ ಕಾಲಕ್ಕೆ, ನಾಡಿಗೆ, ದೇಶಕ್ಕೆ, ಆಯಾ ಕುಟುಂಬಗಳಿಗೆ, ಆಯಾ ವ್ಯಕ್ತಿತ್ವಕ್ಕೆ ಕಲಿಸಿದರು ಎಂಬುದು ಮುಖ್ಯ.

ಜೀವನ ಕಲಿಕೆಯೇ ಮುಖ್ಯ. ಅದರ ಮಾಧ್ಯಮವು ಜಗತ್ತಿನ ಎಲ್ಲೆಡೆ ಮಾತೃಭಾಷೆಯಲ್ಲೇ ಆಗುತ್ತದೆ. ಕೃತಕ ಶಾಲಾ ಕಲಿಕೆಯೇ ಒಂದು ಮಿತಿ. ಅಲ್ಲಿ ಇಂಗ್ಲಿಷ್ ಮಾಧ್ಯಮ ಒಂದು ಲೋಕೋಪಾಯ ಅಷ್ಟೇ. ಇಂಗ್ಲಿಷ್ ಮಾಧ್ಯಮ ನಮ್ಮ ಶತ್ರು ಅಲ್ಲ. ಏಕೀಕರಣವಾಗಿದ್ದರೂ ಭಾಷೆಗಳು ವಿಮೋಚನೆಗೊಂಡಿಲ್ಲ. ಹಿಂದುತ್ವದ ಹಿಡಿತದಿಂದ ಭಾರತೀಯ ಭಾಷೆಗಳು ಗಾಯಗೊಂಡಿವೆ. ಆ ಗಾಯಗಳ ಬಾಧೆಯಿಂದಲೇ ಅವು ಇಂಗ್ಲಿಷ್ ಮಾಧ್ಯಮದತ್ತ ಮುಖಮಾಡಿವೆ. ಸಾಮ್ರಾಜ್ಯಶಾಹಿ ಇಂಗ್ಲಿಷ್ ಭಾಷೆ ತನಗೇ ಗೊತ್ತಿಲ್ಲದೆ ನಮಗೆ ಕೊಟ್ಟಿರುವ ಬೃಹತ್ ಬಹುಮಾನ ಏನೆಂದರೆ; ಇಂಗ್ಲಿಷ್ ಮೂಲಕ ಕಲಿತ ಗಾಂಧಿ, ಅಂಬೇಡ್ಕರ್ ಎಂಬ ಸೂರ್ಯ–ಚಂದ್ರರು!

ತೆಳುವಾದ ಭಾಷಾ ಪಂಡಿತರ, ಸಾಹಿತಿಗಳ ಅಭಿಪ್ರಾಯ ಒಂದೆಡೆಗಿರಲಿ. ಇಂಗ್ಲಿಷನ್ನು ನಾವು ಆರಂಭಿಕ ಹಂತದ ಕಲಿಕಾ ದಾರಿಯಿಂದಲೇ ಮಕ್ಕಳ ಸಂಪರ್ಕಕ್ಕೆ ತಂದರೆ ಅಷ್ಟರ ಮಟ್ಟಿಗೆ ಜ್ಞಾನ ವೃದ್ಧಿಯಾಗುತ್ತದೆ. ಭಾರತದ ಅಪಾರ ಗ್ರಾಮೀಣ ಮಾನವ ಸಂಪತ್ತಿಗೆ ಇಂಗ್ಲಿಷ್ ಒಂದು ವರವಾಗುವ ಭಾಷೆ. ಮಕ್ಕಳಿಗೆ ಮಾತ್ರ ಅಲ್ಲ; ಇಡೀ ಹಳ್ಳಿಯ ಎಲ್ಲ ಹೆಣ್ಣುಮಕ್ಕಳು ಇಂಗ್ಲಿಷನ್ನು ಒಂದು ಪ್ರತಿಭಟನಾ ಮಾಧ್ಯಮವನ್ನಾಗಿ ಪರಿವರ್ತಿಸಿಕೊಂಡರೆ ಹೇಗಿರಬಹುದು...? ದಮನಿತ ಭಾರತೀಯರೆಲ್ಲ ಇಂಗ್ಲಿಷನ್ನು ಒಂದು ಪ್ರತಿರೋಧದ ಆಯುಧವಾಗಿ ಬಳಸಬೇಕು.

ಅಂಬೇಡ್ಕರ್ ಅವರು ಹಾಗೆ ಮಾಡಿದ್ದರಿಂದ ಭಾರತೀಯ ದಮನಿತರ ದನಿ ಪಸರಿಸಿತು. ಭಾರತದ ಭಾಷೆಗಳು ಪುನರುಜ್ಜೀವನಗೊಳ್ಳಲು ಇಂಗ್ಲಿಷ್ ಮಾಧ್ಯಮ ಒಂದು ಉಪಾಯ. ಈ ಉಪಾಯ ಪ್ರಜಾಪ್ರಭುತ್ವವಾದಿ. ಇಂಗ್ಲಿಷ್ ಈಗ ಅನ್ಯಭಾಷೆ ಅಲ್ಲ. ಸಂವಿಧಾನ ಬದ್ಧವಾಗಿ ಅದು ಒಂದು ಭಾರತೀಯ ಭಾಷೆ. ಬಹುಭಾಷೆಗಳ ದೇಶದಲ್ಲಿ ಒಂದು ಸಮನ್ವಯ ಮಾಧ್ಯಮವಾಗಿ ಇಂಗ್ಲಿಷ್ ಭಾಷೆ ಈಗಾಗಲೇ ಸಮಾಜಗಳ ಜೊತೆ ಸಂಬಂಧ ಮಾಡಿ ಆಗಿದೆ. ಈಗ ಇದನ್ನು ಮುರಿಯಬಾರದು. ಆಫ್ರಿಕಾದ ಕಪ್ಪು ಲೇಖಕರು ಇಂಗ್ಲಿಷನ್ನು ಸಾಹಿತ್ಯದ ಮಾಧ್ಯಮ ಮಾಡಿಕೊಂಡರು. ಟ್ಯಾಗೋರ್ ಅವರು ಬಂಗಾಳಿ ಬಿಟ್ಟು ಇಂಗ್ಲಿಷಿನಲ್ಲಿ ಬರೆದು ದೊಡ್ಡವರಾದರು. ನಮ್ಮ ಮಿದುಳಿನ ಕೇಂದ್ರದಲ್ಲಿ ಒಂದೇ ನಿರ್ದಿಷ್ಟ ಭಾಷೆ ಇರುವುದಿಲ್ಲ. ಯಾವುದೇ ವ್ಯಕ್ತಿ ಎಲ್ಲಿಯೇ ಹುಟ್ಟಲಿ, ಅಲ್ಲಿಯದೇ ಭಾಷೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬಲ್ಲ.

ಇಂಗ್ಲಿಷ್ ಮಾಧ್ಯಮ ಅಲ್ಲ ನಮ್ಮ ಸಮಸ್ಯೆ... ನಮ್ಮ ಸಮಾಜಗಳ ಮಾನವ ಸಂಬಂಧಗಳು ಮನುಷ್ಯತ್ವದಲ್ಲಿ ಎಷ್ಟು ದೂರ ಸಾಗಿವೆ... ನಮ್ಮ ಮಾತೃಭಾಷೆಯಲ್ಲೊ; ಇನ್ನೊಂದು ಭಾಷೆಯಲ್ಲೊ ನಾವದನ್ನು ಎಷ್ಟು ಕಲಿಸಿದ್ದೇವೆ ಎನ್ನುವುದೇ ನಮ್ಮ ನಡೆಯ ಏಳಿಗೆಯ ಮಾನದಂಡವಾಗಬೇಕು. ಅಂತಃಕರಣವನ್ನು ನಮ್ಮ ಮಾತೃಭಾಷಾ ಶಿಕ್ಷಣ ಮಕ್ಕಳಿಗೆ ಕಲಿಸಿದೆಯೇ ಎಂದರೆ ನಿರಾಶೆಯಾಗುತ್ತದೆ. ಜೀವನದಲ್ಲಿ ಕಲಿತದ್ದೇ ಭಾಷೆಯಲ್ಲಿ ಉಳಿಯುವುದು. ಕನ್ನಡ ಜೀವನ; ಶಾಲಾ ಶಿಕ್ಷಣದ ಇಂಗ್ಲಿಷ್ ಮಾಧ್ಯಮ ಎರಡನ್ನೂ ಸಮನಾಗಿ ಕಲಿಸುವ ಜೀವನಪಠ್ಯ ಮುಖ್ಯವಾಗಬೇಕು; ಕಲಿಸುವವರಿಗೆ ತಕ್ಕ ತರಬೇತಿ ನೀಡಬೇಕು. ಸೂಕ್ತ ಪಠ್ಯ ರೂಪಿಸಬೇಕು. ಶಿಕ್ಷಣ ಮಾಧ್ಯಮವು ಭಾಷಾ ಗುಲಾಮಗಿರಿ ಆಗಬಾರದು.

ಬಹುಭಾಷಾ ಸಮಾಜಗಳಲ್ಲಿ ಭಾಷೆಗಳು ಸಮನ್ವಯ ಸಾಧಿಸಬೇಕೇ ಹೊರತು ಯಜಮಾನಿಕೆ ಮಾಡಬಾರದು. ಭಾರತ ಇಷ್ಟು ಹಿಂದೆ ಬಿದ್ದಿರಲು ಮುಖ್ಯ ಕಾರಣ ತನ್ನ ಸಮಾಜಗಳಿಗೆ ಜೀವನ ಶಿಕ್ಷಣ ಕಲಿಸದೇ ಸುಮ್ಮನೆ ಏನೇನೊ ವ್ಯರ್ಥ ಪಾಠಗಳನ್ನು ಹೇಳಿದ್ದು. ಶಿಕ್ಷಣವೇ ಬೇರೆ; ಜೀವನವೇ ಬೇರೆ ಎಂಬ ವಿಪರ್ಯಾಸವಿದೆ. ಇಂಗ್ಲಿಷ್ ಎಂಬುದು ಬದುಕುಳಿಯಲು ದಮನಿತ ಭಾರತೀಯರಿಗೆ ಒಂದು ಕೊಂಡಿ. ಅದನ್ನು ಭಾಷೆಯ ನೆಪದಲ್ಲಿ ತಪ್ಪಿಸಬಾರದು.

ಮಾಧ್ಯಮ ಯಾವುದೇ ಆಗಿರಲಿ; ಮಕ್ಕಳಿಗೆ ಮನೆಯಲ್ಲಿ ಬೆಳೆಸಿ ಕಲಿಸಿರುವ ಸ್ವಭಾವವೇ ಪ್ರಧಾನ ಅಲ್ಲವೇ...? ಇದನ್ನೇ ಇಂಗ್ಲಿಷ್ ಬದಲಾಯಿಸುವುದು. ಅಮಾನವೀಯತೆಯನ್ನು ಸ್ಥಾಪಿಸುವ ಯಾವುದೇ ಭಾಷೆ ಅಳಿದರೂ ನನಗೆ ಚಿಂತೆ ಇಲ್ಲ. ಆದರೆ, ಮನುಷ್ಯತ್ವದ ಕೊಂಡಿಯಾದ ಯವುದೇ ಭಾಷೆಯ ಶಿಕ್ಷಣ ಮಾಧ್ಯಮವನ್ನು ನಾನು ನಿರಾಕರಿಸಲಾರೆ. ಇಂಗ್ಲಿಷ್ ಒಂದು ಜಾತ್ಯತೀತ ಮಾಧ್ಯಮ. ಅದೇ ಭಾರತದ ಶಿಕ್ಷಣ ಮಾಧ್ಯಮವಾಗಿರಲಿ. ಅಂತೆಯೇ ನಮ್ಮ ಮಾತೃಭಾಷೆಗಳು ಇನ್ನಾದರೂ ಅಮಾನವೀಯ ನಡತೆಯಿಂದ ವಿಮೋಚನೆಗೊಳ್ಳಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !