ಶುಕ್ರವಾರ, ಏಪ್ರಿಲ್ 10, 2020
19 °C

ಯೂ ಟೂ ಎಂದ ಅಪ್ಪ!!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಆ ದಿನ ಹುಚ್ಚು ಧೈರ್ಯ ಮಾಡಿಕೊಂಡು ಒಂದು ಪಫ್ ಎಳೆದೇ ಬಿಟ್ಟೆ. ನಾಸಿಕ ನಾಳದಲ್ಲಿ ಹೊಗೆ ಉಚ್ಛಾಟಿಸುವ ಶತಮಾನದ ಬಯಕೆಗೆ ಕಿಚ್ಚು ಕೊಟ್ಟು ಅಲ್ಪ ವಾಯುವನ್ನು ಬಾಯಿಗೆ ತುರುಕಿಕೊಂಡು ಮೂಗಿನಲ್ಲಿ ಬಿಡಬೇಕೆನ್ನುವ ಆ ಸುಮೋಹನ ಘಳಿಗೆಯಲ್ಲಿ ತಲೆಬುರುಡೆ ಕಳಚಿ ಬೀಳುವಂತೆ ಒಂದು ವಿಸ್ಫೋಟನೆ ಜರುಗಿತು. ಹೊರಹಾಕಬೇಕಿದ್ದ ಹೊಗೆ ತಲೆಯಲ್ಲೇ ಹೊರಳಾಡುತ್ತಿತ್ತು.

‘ಅದೇನು ಮಹಾ, ಬಹಳ ಸರಳ, ಬೀಡಿಯ ಹೊಗೆಯನ್ನು ಬಾಯಿಯಲ್ಲಿ ತುಂಬಿಸಿ, ತುಟಿಯನ್ನು ಅದುಮಿ ಮೂಗಿನಿಂದ ವಾಯು ದೂಡಿದರಾಯಿತು’ ಎಂದು ಶಾಲೆಯಲ್ಲಿ ತರಗತಿಗಳೆಡೆಯಲ್ಲಿ ಗುಸುಗುಸು ಮಾಡಿ. ಇಂತಹಾ ಮಹತ್ಕಾರ್ಯಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಮ್ಮುವಿಗೆ ಎರಡು ವರ್ಷಕ್ಕಾಗುವಷ್ಟು ಶಾಪ ಹಾಕಿ ಬಾಪ ಕೊಟ್ಟ ಗರಿಗರಿ ಬೀಡಿಯನ್ನು, ಮೂರ್ತಿ ಮಾತ್ರ ಚಿಕ್ಕದಿರುವ ಅತಿಮಾನುಷ ಶಕ್ತಿಯ ಒಡೆಯ ಕಣಪ್ಪ ನೀನೆಂದು ಮನದಲ್ಲಿ ಜಪಿಸುತ್ತಾ ಅವನ ಕೈಗಿಟ್ಟು ಅವಸರಿಸಿ ಹಿಂದಿರುಗಿದೆ. ಮಾತಿನ ಮಾಯಾಲೋಕದಲ್ಲಿ ವಿಹರಿಸುತ್ತಿದ್ದ ಅಪ್ಪನಿಗೆ ನನ್ನ ಕಣ್ಣುಗಳು ಕೆಂಡವಾಗಿ, ಮುಖ ವಿವರ್ಣವಾದದ್ದು ಗಮನಕ್ಕೆ ಬರಲಿಲ್ಲವೆಂದು ನಿಟ್ಟುಸಿರುಬಿಟ್ಟೆ.

ಅದೆಷ್ಟೋ ದಿನಗಳಿಂದ ಇಂಥದೊಂದು ಆಸೆ ಹುಟ್ಟಿಕೊಂಡಿತು. ಶಿವಣ್ಣನ ಅಂಗಡಿ ದಿಣ್ಣೆಯಲ್ಲಿ ಕೂತು ಡೋಳು ಹೊಟ್ಟೆಯ ನೀಳ ದಾಡಿಯ ಪೇಕಿ ಸಾಹೇಬ ಬೀಡಿ ಹೊಗೆಯನ್ನು ಮೂಗಿನಲ್ಲಿ ಬಿಡುತ್ತಿದ್ದರೆ ಅಮ್ಮು ಮತ್ತು ನಾನು ಆಸ್ಥೆಯಿಂದ ನೋಡುತ್ತಿದ್ದೆವು. ಸಾಹೇಬನ ತುಟಿಯ ನೇರ ಕೆಳಭಾಗದ ಒಂದಿಷ್ಟು ಬಿಳಿ ದಾಡಿ ಬೀಡಿಯ ಹೊಗೆ ಬಡಿದು ಕಂದು ಬಣ್ಣಕ್ಕೆ ತಿರುಗಿದ್ದು ಅಚ್ಚರಿ ಅನಿಸುತ್ತಿತ್ತು. ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತಿದ್ದ ಅವನ ಕೌಶಲ್ಯ ನಮ್ಮ ನಿದ್ರೆಗೆಡಿಸಿತ್ತು. ಅವನೆಂತಹಾ ಗ್ರೇಟ್ ಅಲ್ಲವಾ! ಎಂದು ನಾವು ನಾವೇ ಮಾತನಾಡಿಕೊಳ್ಳುತ್ತಿದ್ದೆವು.

ಅಪ್ಪ ಕೆಲವೊಮ್ಮೆ ಬೀಡಿ ಹಚ್ಚಲು ಕೊಡುತ್ತಿದ್ದ. ಒಲೆಯ ಬಾಯಿಯಿಂದ ಕೆಂಡ ಹೊರಗೆಳೆದು ಅದರ ಮೈಗಿಟ್ಟು ಊದಿದರೆ ಬೀಡಿ ಹಚ್ಚಿಕೊಳ್ಳುತ್ತಿತ್ತು. ಮನೆಗೆ ಬಂದವರ ಜೊತೆ ಪಟ್ಟಾಂಗಕ್ಕೆ ಕೂತರೆ ಮಧ್ಯೆ ಬೀಡಿ ಏರಿಸುವುದು, ಟೀ ಹೀರುವುದು, ಬೆಟ್ಟ ಹತ್ತಿದರೂ ಅವನನ್ನು ಬಿಡದ ಹವ್ಯಾಸ. ಪುಟ್ಟ ಮಕ್ಕಳು ಹೊಸದಾಗಿ ಕೊಡಿಸಿದ ಬೊಂಬೆಯನ್ನು ತಕ್ಕೈಸಿಕೊಂಡು ಮಲಗುವಂತೆ ಅಪ್ಪನಿಗೂ ಬೀಡಿ ಕೂಡೆಯೇ ಬೇಕು. ಅವನ ದೊಗಲೆ ಅಂಗಿಯ ಜೇಬಿನಲ್ಲಿ ಎದೆಗೆ ಮುತ್ತಿಡುವ ಎದೆಗಾರಿಕೆ ಬೀಡಿಗೆ ಮಾತ್ರ ದಕ್ಕಿರುವ ಭಾಗ್ಯ. ಬೀಡಿ ಅವನದೇ ಸ್ವಂತ.

ಬಾಲ್ಯದ ದಿನಗಳು ಅಪ್ಪನನ್ನು ಕುತೂಹಲದ ಕಾದಂಬರಿಯಾಗಿ ತೆರೆದು ಕೊಡುತ್ತಿತ್ತು. ಅಲ್ಲಿ ಅಪ್ಪನೇ ನಾಯಕ. ಶಾಲೆಯ ಸಹವಾಸ ಮಾಡದ ಅಪ್ಪ, ಮಾತನಾಡುವ ಶೈಲಿ, ಬಳಸುವ ಉಪಮೆ, ತಾಳುವ ನಿರ್ಧಾರ, ಕೆಲಸದ ಮೇಲಿನ ಬದ್ಧತೆ, ಸೇದುವ ಬೀಡಿ, ಲೆಕ್ಕವಿಲ್ಲದಷ್ಟು ಬಾರಿ ಕುಡಿಯುವ ಸುಲೇಮಾನ್ ಟೀ, ಇಂತಿಷ್ಟೇ ನಿದ್ದೆ, ಉಡುವ ಉಡುಪು, ಪ್ರತಿಯೊಂದೂ ವಿಸ್ಮಯವಾಗಿ ಕಾಣುತ್ತಿದ್ದ ಕಾಲ. ಅಮ್ಮನ ಸೂಪಿನಲ್ಲಿ ತುಳುಕಾಡುವ ಬೀಡಿಯಿದ್ದರೆ, ಈಯಪ್ಪ ಅಂಗಡಿಯಿಂದ ದುಡ್ಡು ಕೊಟ್ಟು ತರಿಸುತ್ತಾನಲ್ಲಾ! ಏಕಿರಬಹುದೆಂದು ಸಂದೇಹವಾಗುತ್ತಿತ್ತು. ಒಂದು ದಿನ ಗಟ್ಟಿಮನಸ್ಸಿನಿಂದ ಕೇಳಿದೆ. ಅಮ್ಮನ ಸೂಪಿನಲ್ಲಿರುವುದು ಹಸಿ ಬೀಡಿಯೆಂದೂ, ಅದು ಸಿಗಡಿಯಾಗಿ ನಂತರ ಪ್ಯಾಕಾಗಿ ಬರುತ್ತದೆಂದೂ ಹೇಳಿದ್ದನಾದರೂ ನನಗೆ ಚೂರೂ ಅರ್ಥವಾಗಿರಲಿಲ್ಲ.

ಮುಂದೊಂದು ದಿನ ನಮ್ಮ ಮನೆಯಿಂದ ಹತ್ತಾರು ಕಿಲೋಮೀಟರ್ ದೂರವಿರುವ ಬೀಡಿ ಕಂಪನಿಗೆ ಕೊಂಡೊಯ್ದು ತೋರಿಸಿದ್ದ. ಬೀಡಿಗೆ ಕಚ್ಚಾವಸ್ತು ಸಂಗ್ರಹ ಮಾಡುವವರು, ಸಾಗಾಣಿಸುವವರು, ಆ ತೆಂಡು ಎಲೆ, ತಂಬಾಕು, ನೂಲುಗಳನ್ನು ಕಾರ್ಮಿಕರಿಗೆ ನೀಡುವವರು, ಅದು ಮತ್ತೆ ಬೀಡಿಯ ರೂಪ ತಾಳಿ ಕಾರ್ಖಾನೆ ಸೇರಿ ಸಿಗಡಿಯಾಗಿ, ಪ್ಯಾಕಾಗಿ ಮಾರುಕಟ್ಟೆ ಪ್ರವೇಶಿಸುವುದು ಸುದೀರ್ಘವಾದ ಒಂದು ಪ್ರಕ್ರಿಯೆ. ಅದೆಷ್ಟು ಕಾರ್ಮಿಕರ ಹೊಟ್ಟೆ ತುಂಬಿಸಿದೆ ಈ ಬೀಡಿ ಎನ್ನುವಾಗ ಹೆಮ್ಮೆಯೆನಿಸುತ್ತದೆ. ಅದು ಹೊತ್ತು ತರುವ ರೋಗಗಳನ್ನು ನೆನೆದರೆ ಸಂಕಟ ಹುಟ್ಟುತ್ತದೆ.

ಅಪ್ಪನಿಗೆ ಸೇದುವ ಬೀಡಿಯ ಮೇಲೆ ಅಪಾರ ನಂಬಿಕೆ. ಜೇಬು ಬರಿದಾದರೆ, ಬೀಡಿಗೆ ಬೆಂಕಿ ಹಚ್ಚುತ್ತಾನೆ. ಅತ್ತಿತ್ತ ಅಡ್ಡಾಡುತ್ತಾನೆ. ಅಂಗಿ ತೊಟ್ಟು ಲುಂಗಿ ಕಟ್ಟಿ ಪೇಟೆಗೆ ಹೋಗಿ ಬಂದರೆ ಮತ್ತೆ ಮುಖ ಪ್ರಸನ್ನವಾಗುತ್ತದೆ. ಅಪ್ಪನ ನೋವಿಗೆ ಪರಿಹಾರದ ಕೀಲಿಕೈ 'ಬೀಡಿ'. ನೊಂದಾಗ ಹೆಗಲಿಗೆ ಕೈಯಿಡುವ, ಸೋತಾಗಲೂ ಜೊತೆಗೆ ನಡೆಯುವ ಜೊತೆಗಾರ. ಪ್ರಾರಬ್ಧಗಳು ಬಂದಾಗ ಅವನ ಸೇರುವ ಬಲಿಷ್ಠ ಆಯುಧವದು. ಅಕ್ಕನ ಮದುವೆಯ ದಿನಾಂಕ ಹತ್ತಿರವಾದಾಗಲಂತೂ ಅಪ್ಪ ವಿಪರೀತ ಸೇದುತ್ತಿದ್ದ. ಅಮ್ಮ ಹೆರಿಗೆ ಕೋಣೆಗೆ ಹೋದಾಗ ಅದೆಷ್ಟು ಹೊಗೆ ಕುಡಿದಿದ್ದನೋ ಏನೋ..!

ನಾನು ಚಿಕ್ಕವನಿದ್ದಾಗ ಒಂದು ಕಟ್ಟು ಬೀಡಿಗೆ ಮೂರೂವರೆ ರೂಪಾಯಿ ಇರುತ್ತಿತ್ತು. ಅಮ್ಮ ಬೀಡಿ ಕಟ್ಟುತ್ತಿದ್ದರೆ, ಅಪ್ಪ ಬಿಡುವಾದಾಗ ನೂಲು ಹಾಕಿ ಕೊಡುತ್ತಿದ್ದ. ಅಪ್ಪನಿಗೂ ಬೀಡಿ ಕಟ್ಟಲು ಬರುತ್ತಿತ್ತು. ನನ್ನ ಮಾವಂದಿರೆಲ್ಲರೂ ಬೀಡಿ ಸುರುಟುವುದರಲ್ಲಿ ನಿಪುಣರು. ಬೀಡಿ ಕಟ್ಟಿ ಬದುಕು ದೂಡಿದ ಕುಟುಂಬದಿಂದ ಬಂದವರಿಗೆ ಅದನ್ನು ಮರೆಯಲಾದೀತೆ? ಸಾಮಾನು ತರಲು ಅಂಗಡಿಗೆ ಹೋದಾಗಲೆಲ್ಲ ಒಂದು ಕಟ್ಟು ಬೀಡಿ ತಪ್ಪದೆ ತರುತ್ತಿದ್ದ. ಚಿಲ್ಲರೆ ಉಳಿದರೆ ನಾವು ಚಾಕೊಲೇಟ್ ಕೇಳುವಂತೆ ‘ಬೀಡಿ ಕೊರ್ಲೆ’ ಅನ್ನುತ್ತಿದ್ದ. ತಲೆನೋವಾದರೆ ಅವನು ಕುಡಿಯುವ ಅನಾಸಿನ್ ಗುಳಿಗೆಯದು. ಹೆಚ್ ಎಸ್ ಬೀಡಿ ಸೇದುತ್ತಿದ್ದ ಅಪ್ಪ ಬೇರೆ ಬೀಡಿ ತಂದರೆ, ಇದು ಖಾರವಿಲ್ಲ, ಬರಿಯ ಹೊಗೆ ಮಾತ್ರ ಥೆಕ್ ಎಂದು ಗೊಣಗುತ್ತಿದ್ದ. ಶೌಚಕ್ಕೆ ಹೋಗುವಾಗಲಂತೂ ಕೈಯಲ್ಲೊಂದು ಬೀಡಿ ಅಗತ್ಯ. ನೀರಿಲ್ಲದಿದ್ದರೂ ಹೋಗಿಯಾನು ಬೀಡಿ ಇಲ್ಲದಿದ್ದರೆ ಚಡಪಡಿಸುತ್ತಿದ್ದ! ಊಟ ತಿಂದ ಬೆನ್ನಿಗೆ, ಟೀ ಹೀರಿದ ಕೂಡಲೇ ಒಂದು ಬೀಡಿ ಅದು ದಿನಚರಿಯ ಭಾಗ.

ಅಜ್ಜನ ಮುಂದೆ ಅಪ್ಪ ಬೀಡಿ ಸೇದುತ್ತಿರಲಿಲ್ಲ. ಮನೆಯ ಹಿತ್ತಲಿಗೆ ಹೋಗಿ ಬೀಸಬೀಸ ಸೇದಿ ಬಾಯಿ ಮುಕ್ಕಳಿಸಿಕೊಂಡು ಬರುತ್ತಿದ್ದ. ಅಪ್ಪನ ಮೆಚ್ಚಿನ ಪದಾರ್ಥ, ಪಾಯಸ, ಹವ್ಯಾಸವೆಲ್ಲವೂ ಅಮ್ಮನಿಗೂ ಪ್ರಿಯವಾದದ್ದು ಅವನು ಸೇದುವ ಬೀಡಿಯ ಹೊರತು. ಬೀಡಿಯ ಜೊತೆಗಿನ ಗೆಳೆತನ ಮುರಿಯುವುದು ಸಿದ್ಧಾಂತವನ್ನು ಬಿಟ್ಟಂತೆ ಎಂಬುದಾಗಿತ್ತು ಅವನ ನಿಲುವು. ವಿದೇಶದಿಂದ ಮಾವನವರು ಬಂದರೆ ಅಮ್ಮನಿಗೆ ಗೊತ್ತಾಗದಂತೆ ಒಂದು ಪ್ಯಾಕೆಟ್ ಸಿಗರೇಟು ಒಪ್ಪಿಸುತ್ತಿದ್ದರು. ಅದು ಮುಗಿಸಲು ತಿಂಗಳುಗಳು ತೆಗೆದುಕೊಳ್ಳುತ್ತಿದ್ದ ಅಪ್ಪ, ಬೀಡಿಯಾದರೆ ಸಲೀಸಾಗಿ ದಿನಕ್ಕೊಂದು ಕಟ್ಟು ಮುಗಿಸಿಬಿಡುತ್ತಿದ್ದ. ಎಪೆಂಡಿಕ್ಸ್ ಬಂದು ಆಸ್ಪತ್ರೆಯಲ್ಲಿರುವ ದಿನಗಳು ಬೀಡಿ ಸೇದದೆ ಅಪ್ಪ ಸೊರಗಿ ಹೋದದ್ದು ಕಾಣಿಸುತಲಿತ್ತು. ಅವನು ಕಳಚಿಟ್ಟ ಅಂಗಿ, ಅವನ ಬೆವರು, ಬೀಡಿಯದೇ ಘಮಲು ಪಸರಿಸುತ್ತದೆ.

ನಾವು ದೊಡ್ಡವರಾದ ಮೇಲೆ ಅಪ್ಪನಿಂದ ಬೀಡಿ ಬಿಡಿಸುವ ಜವಾಬ್ದಾರಿ ನಮ್ಮದಾಯಿತು. ಅದು ತರುವ ದೊಡ್ಡ ರೋಗಗಳಿಗೆ ಅಪ್ಪನನ್ನು ಬಿಟ್ಟುಕೊಡಲು ನಾವು ಸಿದ್ಧರಿರಲಿಲ್ಲ. ಗೂಗಲ್ ಜಾಲಾಡಿ, ಯೂಟೂಬ್‌ನಲ್ಲಿ ಹೆಕ್ಕಿ ಒಂದಿಷ್ಟು ವಿಚಾರಗಳನ್ನು ಮನನ ಮಾಡಿಸಲು ಪ್ರಯತ್ನಿಸಿದೆನಾದರೂ ಒಂದೆರಡು ದಿನಗಳ ನಂತರ ಅಪ್ಪ ಮತ್ತೆ ಡೊಂಕಾಗುತ್ತಿದ್ದ. ಈ ಕಂದರ ಏರಿಬರುವ ದಾರಿ ಸುಳುವಾದಂತೆ ಕಾಣುತ್ತಿರಲಿಲ್ಲ. ಅವನ ಕೈಗಳಿಗೆ ಬೀಡಿ ದಕ್ಕದಂತೆ ಮಾಡುವ ದಿಕ್ಕು ತೋರದಾಗಲೆಲ್ಲ ಅಪಜಯ ಅಣಕಿಸುತಲಿತ್ತು.

ಬೀಡಿ ಇಂಚಿಂಚಾಗಿ ಕೊಲ್ಲುತ್ತದೆನ್ನುವ ನನಗೆ ‘ಅದು ಬರಿ ಓಳು, ನಾನು ಇಷ್ಟು ವರ್ಷಗಳಿಂದ ಸೇದುತ್ತಿಲ್ಲವಾ! ನನ್ನಪ್ಪ, ಅಜ್ಜ ನೂರು ಜನ ಸೇದುವಷ್ಟು ಸೇದಿದವರು ಅವರೆಷ್ಟು ಗಟ್ಟಿಮುಟ್ಟಾಗಿದ್ದರು’ ಎಂದು ವಕೀಲನಾಗುತ್ತಿದ್ದ. ‘ನಾಲ್ಕು ದಿನ ಹೆಚ್ಚು ಆರೋಗ್ಯ ಕಾಪಾಡಿಕೊಂಡರೆ ಹೆಚ್ಚೆಚ್ಚು ನಮಾಝ್ ಮಾಡಬಹುದು, ಅಜ್ಮೀರ್ ಮುತ್ತುಪೇಟೆ ಸುತ್ತಾಡಿಕೊಂಡು ಬರಬಹುದು ತಾನೆ?’ ಎಂದು ಭಾವನಾತ್ಮಕ ದಾಳಿ ನಡೆಸುತ್ತಿದ್ದರೆ ಮಾತ್ರ ಮೌನಿಯಾಗಿ ಕೂರುತ್ತಿದ್ದ. ಆರೋಗ್ಯ ಹದಗೆಡಿಸುವ ಬೀಡಿ ನೀವು ಸ್ವಲಾತ್ ಹೇಳುವ ನೆಬಿಶ್ರೇಷ್ಠರಿಗೂ ಇಷ್ಟವಲ್ಲವೆಂದು ಹುಟ್ಟು ಆಸ್ತಿಕನೂ ಸಂಪ್ರದಾಯವನ್ನೇ ಮೈಗೂಡಿಸಿಕೊಂಡಿರುವವರೂ ಆದ ಅಪ್ಪನಿಗೆ ಬಲೆ ಬೀಸುತಲಿದ್ದೆ.

ಈದ್ ಮುಗಿದ ಮಾರನೆ ದಿನ ಸಂಜೆ ಎಲ್ಲರೂ ಕೂತು ಚಹಾ ಕುಡಿಯುತ್ತಿರಬೇಕಾದರೆ ಅಪ್ಪನ ಕೈಯಲ್ಲಿ ಬೀಡಿ. ನಾನು ತಗಾದೆ ತೆಗೆದು ಅಪ್ಪನ ಚಟದ ಬಗ್ಗೆ ಅತೃಪ್ತಿ ತೋರ್ಪಡಿಸಿದೆ. ಎಲ್ಲರೂ ಅಪ್ಪನನ್ನು ಓಲೈಸುವ ತರಾತುರಿಯಲ್ಲಿದ್ದರು. ಅವನಿಗದು ಕಿರಿಕಿರಿ ಅನಿಸಿರಬೇಕು. ನನ್ನ ಕಡೆಗೆ ನೋಡಿ ತಾತ್ಸಾರದಿಂದ ನಕ್ಕು ‘ನೀನು ಬಹಳ ಹೊತ್ತಿನಿಂದ ಬೀಗುತ್ತಿದ್ದೀಯಾ, ಮೀಸೆ ಚಿಗುರುವ ಹೊತ್ತಿಗೆ ನಾನು ಹಚ್ಚಲು ಕೊಡುತ್ತಿದ್ದ ಬೀಡಿಯ ರುಚಿ ನೋಡಿದವನು ನೀನು’ ಎಂದು ನನ್ನ ನೇರಕ್ಕೆ ಫಿರಂಗಿ ಸಿಡಿಸಿದ. ಎಲ್ಲರೂ ನಕ್ಕರು. ಸುಮಾರು ಹತ್ತು ವರ್ಷಗಳ ನಂತರ ಅಪ್ಪ ಬಿಚ್ಚಿಟ್ಟ ಸತ್ಯ ಮೀಟೂ ಅಭಿಯಾನದ ಕಿಡಿಯೆಂದು ತಂಗಿ ಕುಣಿದಾಡಿದಳು. ನನಗೆ ಅಪ್ಪನಲ್ಲಿ ಕಾರಂತರ ಕಾಲಜ್ಞಾನಿ ಮೂಕಜ್ಜಿಯನ್ನು ಕಂಡಂತಾಗಿ ಸುಮ್ಮನಾದೆ. ಅಪ್ಪ ನಿಶ್ಚಿಂತೆಯಿಂದ ಎರಡನೇ ಬೀಡಿ ಹಚ್ಚಿದ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)