ಬುಧವಾರ, ಮಾರ್ಚ್ 3, 2021
19 °C

ಇರಲೊಂದು ಪ್ರೇಮ ಪಾರ್ಕು; ಎದೆಯ ಹಾಡಿಗೆ, ಪ್ರೀತಿ ಮಾತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಡಿಕೆ ಹೊಸದಲ್ಲ. ಹಳೆಯದು. ಮನುಷ್ಯ ಹುಟ್ಟಿದಂದಿನಿಂದ ಪ್ರೇಮ ಜೀವಜಲದಂತೆ ಬದುಕನ್ನು ಕಾಪಿಡುತ್ತಲೇ ಬಂದಿದೆ. ಆದರೆ, ಪ್ರೀತಿ ನಂಬಿದವರು, ಪ್ರೀತಿಸಿದ ಪ್ರೇಮಿಗಳು ಮಾತ್ರ ಸಹಜವಾಗಿ ಉಸಿರಾಡುವುದೇ ಕಷ್ಟವಾಗಿದೆ. ಇತಿಹಾಸವೇ ಇದೆ. ಲೈಲಾ–ಮಜನೂ, ಸಲೀಂ–ಅನಾರ್‌ಕಲಿ, ಚಂದಾ–ಸೂರಜ್‌, ಹೀರ್‌–ರಾಂಝಾ, ರೋಮಿಯೊ–ಜ್ಯೂಲಿಯೆಟ್‌, ನಳ–ದಮಯಂತಿ.. ನಮ್ಮನೆ, ಪಕ್ಕದ್ಮನೆ, ಏರಿಯಾದಲ್ಲಿ ಇವರೆಲ್ಲ ಮತ್ತೆ ಹುಟ್ಟುತ್ತಲೇ ಇರುತ್ತಾರೆ. ಹುಟ್ಟಿದ್ದಾರೆ. ಕಷ್ಟ ಎದುರಿಸುತ್ತಾರೆ. ಕನಿಷ್ಠ ಪ್ರೀತಿ ಮಾತುಗಳು, ಎದೆಯ ತುಡಿತಗಳನ್ನು ಹೇಳಿಕೊಳ್ಳಲು, ಪರಸ್ಪರ ಕೂತು ಮಾತಾಡಲು ಒಂದು ಆಪ್ತ ವಾತಾವರಣವಿಲ್ಲದೇ ಪ್ರೇಮಜೀವಿಗಳು ಬದುಕುವುದಾದರೂ ಹೇಗೆ?

ಮನೆ, ಗಲ್ಲಿ, ಮನೆಗೆ ಸಮೀಪದ ಪಬ್ಲಿಕ್‌ ಸ್ಪೇಸ್‌ನಲ್ಲಿ, ರೆಸ್ಟೊರೆಂಟ್‌ಗಳಲ್ಲಿ ಪ್ರೀತಿ ಪ್ರೇಮದ ಮಾತುಗಳ ಅದೆಷ್ಟು ಹೊತ್ತು ಹಂಚಿಕೊಳ್ಳಬಹುದು. ಚಾಟ್‌ರೂಮಿನಲ್ಲಿ ಅದೆಷ್ಟು ಹೊತ್ತು ಚಡಪಡಿಸುವುದು? ಮೊಬೈಲ್‌ ಕೀಲಿ ಮಣೆಯಲ್ಲಿ ಅದೇಸೊಂದು ಅಕ್ಷರಗಳ ಕುಟ್ಟಿ ಪ್ರೀತಿಪಾತ್ರರ ಎದೆ ತಟ್ಟಬಹುದು? ಸಿನಿಮಾ ಹಾಲ್‌ಗಳಲ್ಲಿ ಮೂರು ಗಂಟೆಯ ಸಿನಿಮಾ ಅವಧಿಯಲ್ಲಿ ಪ್ರೀತಿ ಪಿಸುಮಾತು ಅಬ್ಬರದ ಹಾಡಿನಲ್ಲಿ ಸಿಂಕ್‌ ಆಗಿ ಹೊರ ಬಂದಾಗ ಮತ್ತದೇ ಖಾಲಿತನ. ಎಲ್ಲೆಡೆ ಜನ ಜನ. ಕೆಕ್ಕರಿಸುವ, ಕೆಂಪೇರುವ ನೂರು ಕಣ್ಣುಗಳು. ಸಾಂಸ್ಕೃತಿಕ ಪೊಲೀಸ್‌ಗಿರಿ. ಎಲ್ಲ ಸೇರಿ ಪ್ರೇಮಿಗಳ ಬದುಕನ್ನೇ ಚಪ್ಪರಿಸಬಹುದು. ಪ್ರೀತಿಗ್ಯಾರ ಪರ್ಮಿಟ್‌? 

ನಗರ ಪ್ರದೇಶದಲ್ಲಿ ಪ್ರೇಮಿಗಳ ಪಾಡು ಅವರಿಗೇ ಗೊತ್ತು. ಒಂದಷ್ಟು ಅವರದೇ ಖಾಸಗಿ ಬದುಕಿಗೆ ಪರದಾಡಬೇಕಾದ ಸಂದಿಗ್ಧತೆ ಅವರಿಗೇ ತಿಳಿಯಬಹುದಾದ ನರಕ. ಹೀಗೆ ಒಂದಷ್ಟು ಪ್ರಶ್ನೆಗಳಿಗಾದರೂ ಸಮಾಧಾನ ಬೇಕು. ಪ್ರೇಮ ಬದುಕಿಗೊಂದು ತಂಪಾದ ಜಾಗ ಬೇಕು. ತಂಗಾಳಿ ಸುಳಿಯುವಂತಿರಬೇಕು. ಬಾಕ್‌ ಮೇಲೆ ಕೂತು ಪ್ರೀತಿ ಮಾತುಗಳ ಹಂಚಿಕೊಂದು ಮನಸು ಬೆಚ್ಚಗಾಗಬೇಕು. ಅಲ್ಲಲ್ಲಿ ಅಮರ ಪ್ರೇಮಿಗಳ ಪ್ರತಿಮೆಗಳು ಎದೆಯ ಹಾಡಿಗೆ, ಪ್ರೀತಿ ಬಾಳಿಗೆ ಪ್ರೇರಣೆಯಾಗುವಂತಿರಬೇಕು. ಬೇಕು ಇಂಥದೊಂದು ಪ್ರೇಮಿಗಳ ಪಾರ್ಕ್‌. ಲಾಲ್‌ ಬಾಗ್‌ನ ಹಾಗೊಂದು ಪ್ರೇಮ ಬಾಗ್‌. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು