ಮಜಾ ತಿಂಡಿ ಮಜಾ

7

ಮಜಾ ತಿಂಡಿ ಮಜಾ

Published:
Updated:
Deccan Herald

ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ಎಂಜಿನಿಯರಿಂಗ್‌ ಮುಗಿಸಿ, ಕೆಲಸಕ್ಕೂ ಸೇರಿದರು. ಬೆಳಗಿನ ತಿಂಡಿಗೇನು ಎಂಬ ಪ್ರಶ್ನೆ ಮೂವರಿಗೂ ಕಾಡುತ್ತಿತ್ತು.

ಅದೆಷ್ಟು ದಿನ ಹೋಟೆಲ್‌ ಊಟ ಸವಿಯೆನಿಸೀತು? ಕ್ಯಾಂಟೀನ್‌ ರುಚಿ ಹಿತವೆನಿಸೀತು? ಅಡುಗೆ ಹಾಗೂ ಉಣಿಸುವುದು, ಉಣಬಡಿಸುವುದು ಇವರ ಪ್ಯಾಷನ್‌ ಆಗಿತ್ತು. ಅದನ್ನೇ ಕಾಯಕವಾಗಿಸಿಕೊಂಡರೆ ಹೇಗೆ? ಎಂಬ ಯೋಚನೆ ಬಂದೊಡನೆ ಕೆಲಸಕ್ಕೆ ತಿಲಾಂಜಲಿ ಇತ್ತರು.

ವಿದ್ಯಾರಣ್ಯಪುರದಲ್ಲಿ ಒಂದು ಸಣ್ಣ ಜಾಗದಲ್ಲಿ ‘ಮಜಾ ತಿಂಡಿ’ ಹೆಸರಿನ ಔಟ್‌ಲೆಟ್‌ ಆರಂಭಿಸಿದರು. ಹೆಸರಿನಷ್ಟೇ ಮಜವಾಗಿತ್ತು ಇವರಿಗೆ ಬಂದ ಪ್ರಕ್ರಿಯೆ. ನಿಂಗೊಂದು ಮಜಾ ಕೊಡ್ತೀನಿ ಅಂದಾಗ ಅಲ್ಲೊಂದು ಸಣ್ಣ ಕುತೂಹಲವಿರುವುದಿಲ್ಲವೇ..? ರುಚಿರುಚಿಯಾಗಿದ್ದರೆ ಮಜಾ ಬಂತು ಎನ್ನುವುದಿಲ್ಲವೇ ಹಾಗೆ.. ಆ ಮಜಾ ಅನ್ನು ಕೊಡಲೆಂದೇ ಮಜಾ ತಿಂಡಿ ಎಂದು ಹೆಸರಿಟ್ಟರು.

ಸಾಂಪ್ರದಾಯಿಕವಾಗಿ ನೀಡಲಾಗುವ ಇಡ್ಲಿ ಸಾಂಬರ್‌, ವಡೆ ಸಾಂಬರ್‌ ಜೊತೆಗೆ ರುಚಿಕರ ಚಟ್ನಿ, ಮೆದುವಾದ ಉಪ್ಪಿಟ್ಟು, ಅದಕ್ಕೆ ಜೊತೆಯಾಗಿ ಕೇಸರಿಭಾತು ಸೇರಿಸಿದ ಚೌಚೌ ಭಾತು ಹಾಗೂ ಶ್ಯಾವಿಗೆ ಈ ಮೂರನ್ನೇ ಮೊದಲು ಪರಿಚಯಿಸಿದರು.

ಯಾವ ವಯಸ್ಸಿಗಾದರೂ ಇಷ್ಟವಾಗುವ ರುಚಿರುಚಿಯಾದ ಇಡ್ಲಿವಡೆ, ಮಧ್ಯಾಹ್ನ ಊಟ ತಡವಾದರೂ ಚಿಂತೆಯಿಲ್ಲ ಎನ್ನುವವರಿಗಾಗಿಯೇ ಚೌಚೌಭಾತು, ಒಂದು ಬದಲಾವಣೆ ಇರಲಿ ಎಂದು ಬಯಸುವವರಿಗಾಗಿ ಶ್ಯಾವಿಗೆ ಭಾತು ಮೆನುಗೆ ಸೇರಿಸಲಾಗಿತ್ತು. ರುಚಿ ಹಾಗೂ ನೈರ್ಮಲ್ಯ ನೋಡಿ ಜನರು ಬರುವುದು ಹೆಚ್ಚಾಗತೊಡಗಿತು. ಜೊತೆಗೊಂದು ದೋಸೆಯೂ ಮಾಡಬಾರದೇ.. ಎಂಬ ಮಾತು ಅನೇಕ ಗ್ರಾಹಕರಿಂದ ಕೇಳಿಬರಲಾರಂಭಿಸಿತು.

ಆಗ ದೋಸೆಯನ್ನು ಆರಂಭಿಸಲಾಯಿತು. ಬೆಣ್ಣೆ ಖಾಲಿ ದೋಸೆ, ಮಿನಿ ಮಸಾಲಾ ದೋಸೆ ಸಹ ಮೆನುವಿಗೆ ಸೇರಿದವು. ಇದಿಷ್ಟಾದ ನಂತರ ಮಜಾ ತಿಂಡಿ ಈ ಪ್ರದೇಶದ ಖ್ಯಾತ ಈಟೌಟ್ಸ್‌ಗಳಲ್ಲಿ ಒಂದಾಯಿತು. ವಾಕ್‌ಗೆ ಬಂದವರು ಒಂದು ಲೋಟ ಫಿಲ್ಟರ್‌ ಕಾಫಿ ಹೀರಲು ಬರುವುದು ಸಾಮಾನ್ಯವಾಯಿತು. ಟೇಕ್‌ ಅವೇ ಸಂಖ್ಯೆಗಳೂ ಹೆಚ್ಚಾದವು. ಬೆಳಗ್ಗೆ ತಿಂಡಿಗೆ ಬಂದವರಿಗೆ ಇಳಿಸಂಜೆಯ ಮಳೆ ಜಾದೂ ಮಾಡಲಾರಂಭಿಸಿತ್ತು. ಚಾಟ್‌ ಆರಂಭಿಸಬಾರದೇ ಎಂದು ಕೇಳಿದರು..? ಇನ್ನೇನು ಚಾಟ್‌ ಮಳಿಗೆಯನ್ನೂ ಆರಂಭಿಸಿಯೇ ಬಿಟ್ಟರು.

ಸಾಂಪ್ರದಾಯಿಕವಾದ ಮಸಾಲಾ ಪುರಿ, ಸಮೋಸಾ, ಕಚೋರಿ, ಭೇಲ್‌ಪುರಿ, ಪಾನಿಪುರಿಗಳು ಲಭ್ಯ. ಬೆಳಗಿನ ಬಿಸಿಬಿಸಿ ಫಿಲ್ಟರ್‌ ಕಾಫಿಯಿಂದಾರಂಭಿಸಿ, ಸಂಜೆಯ ಗರಿಗರಿ ಚಾಟ್‌ಗಳವರೆಗೂ ಮಜಾ ತಿಂಡಿ ಗ್ರಾಹಕರ ಬೇಡಿಕೆಯನ್ನು ಈಡೇರಿಸುತ್ತಿದೆ.

ಕೈತುಂಬ ಕಾಸು ಬರುತ್ತಿದ್ದ ಸಂಬಳದ ಕೆಲಸ ಬಿಟ್ಟ ಹರಿಪ್ರಸಾದ್‌, ನಿಕುಂಜ್‌ ಹಾಗೂ ಬಾಲಾಜಿ ಎಂಬ ಮೂವರು ಯುವಕರು, ಇದೀಗ ಹೊಟ್ಟೆತುಂಬಿಸುವ ಕಾಯಕದಲ್ಲಿ ಸಫರಾಗಿದ್ದು, ಯಶಸ್ಸಿನ ಮುಗುಳ್ನಗೆ ಬೀರುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !