ಸ್ವಾತಂತ್ರ್ಯದ ಸವಿ!

ಗುರುವಾರ , ಏಪ್ರಿಲ್ 25, 2019
26 °C

ಸ್ವಾತಂತ್ರ್ಯದ ಸವಿ!

Published:
Updated:

ಸಾಹುಕಾರನ ಮನೆಯಲ್ಲಿ ಉಂಡು–ತಿಂದು ಬೆಳೆದಿದ್ದ ನಾಯಿಯೊಂದು ಒಮ್ಮೆ ಮನೆಯಿಂದ ತಪ್ಪಿಸಿಕೊಂಡು ದೂರದ ಕಾಡಿನ ದಾರಿ ಹಿಡಿಯಿತು. ಅದು ಕಾಡಿನ ಅಂಚನ್ನು ತಲುಪುವ ಸಮಯಕ್ಕೆ ಸಂಜೆ ಕತ್ತಲು ಆವರಿಸ ತೊಡಗಿತು. ಹಿಂತಿರುಗುವ ದಾರಿ ಕಾಣದೆ ಒಂದು ಕ್ಷಣ ಅದಕ್ಕೆ ಭಯವಾಯಿತು. ‘ನಾನು ಸಾಹುಕಾರನ ಮನೆ ಬಿಟ್ಟು ಬರಬಾರದಿತ್ತು. ಎಂಥ ಕೆಲಸ ಮಾಡಿಬಿಟ್ಟೆ’ ಎಂದು ಪರಿತಪಿಸಲು ಆರಂಭಿಸಿತು.

ಅಷ್ಟರೊಳಗೆ ದೂರದಿಂದ ಕಾಡು ನಾಯಿಯೊಂದು ಬರುವುದು ಅದಕ್ಕೆ ಕಾಣಿಸಿತು. ಆ ಕಾಡಿನಲ್ಲೂ ನಾಯಿಯೊಂದು ಕಾಣಿಸಿತಲ್ಲಾ ಎಂದು ಸಾಹುಕಾರನ ನಾಯಿಗೆ ಖುಷಿಯಾಯಿತು. ‘ನನಗೆ ಒಬ್ಬ ಗೆಳೆಯ ಸಿಕ್ಕಂತಾಯಿತು’ ಎಂದುಕೊಳ್ಳುತ್ತಾ, ಕಾಡಿನ ನಾಯಿಯ ಎದುರಿಗೆ ಹೋಗಿ ತನ್ನ ಪರಿಚಯ ಮಾಡಿಕೊಂಡಿತು. ‘ಅಣ್ಣಾ, ನಾನು ಊರಿನ ಸಾಹುಕಾರರ ನಾಯಿ. ಮನೆಯಲ್ಲೇ ಇದ್ದು ಬೇಜಾರಾಗಿ ಹೀಗೇ ಹೊರಟು ಬಂದುಬಿಟ್ಟೆ. ಈ ಕಾಡಿಗೆ ಬಂದ ನಂತರ ತಿಳಿಯಿತು, ನಾನು ಬಂದದ್ದೇ ತಪ್ಪಾಯಿತು. ಬೆಳಗಿನಿಂದ ನಾನು ಏನೂ ತಿಂದಿಲ್ಲ. ಹೊಟ್ಟೆ ಬೇರೆ ಹಸಿಯುತ್ತಿದೆ. ಚಳಿ ತಾಳಲಾರದೆ ನಡುಗುತ್ತಿದ್ದೇನೆ’ ಎಂದಿತು.

ಕಾಡು ನಾಯಿ ಊರ ನಾಯಿಯನ್ನು ಕಂಡು ಮರುಕದಿಂದ, ‘ತಮ್ಮಾ, ಹೆದರಬೇಡ, ನಾನು ನಿನ್ನ ಸ್ನೇಹಿತ ಎಂದು ತಿಳಿ. ಈ ರಾತ್ರಿ ನನ್ನ ಜೊತೆಯಲ್ಲೇ ಇರುವಿಯಂತೆ. ನಿನ್ನ ಹಸಿವೆ ನಿವಾರಿಸಲು ಬೇಕಾದಷ್ಟು ಊಟ ಕೊಡುತ್ತೇನೆ. ಬೆಚ್ಚಗೆ ಮಲಗಲು ಪೊದೆಯೊಂದರಲ್ಲಿ ಜಾಗ ಕೊಡುತ್ತೇನೆ’ ಎಂದು ಸಾಂತ್ವನ ಹೇಳಿತು.

ಎರಡೂ ನಾಯಿಗಳು ಕಾಡಿನ ದಾರಿಯಲ್ಲಿ ಮಾತನಾಡುತ್ತಾ ಹೊರಟವು. ದಾರಿಯಲ್ಲಿ ಕಾಡು ನಾಯಿಯು ಊರ ನಾಯಿಯನ್ನು ಕುರಿತು, ‘ನಿನ್ನ ನಿತ್ಯದ ದಿನಚರಿ ಹೇಗೆ ನಡೆಯುತ್ತೆ? ಸಾಹುಕಾರ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೋ’ ಎಂದು ಕೇಳಿತು. ಅದಕ್ಕೆ ಊರ ನಾಯಿ, ‘ಅಣ್ಣಾ, ಸಾಹುಕಾರ ತುಂಬಾ ಒಳ್ಳೆಯವರು. ನನಗಾಗಿ ಮನೆ ಕಟ್ಟಿಸಿದ್ದಾನೆ. ಪ್ರತಿನಿತ್ಯ ಆಹಾರ ನೀಡುತ್ತಾನೆ. ನನಗೆ ಯಾವ ಕೊರತೆಯೂ ಇಲ್ಲದಂತೆ ನೋಡಿಕೊಳ್ಳುತ್ತಾನೆ. ಆದರೆ ನನ್ನ ಕೊರಳಿಗೆ ಸರಪಳಿ ಹಾಕುತ್ತಾನೆ. ಬೆಳಗಿನ ಸಮಯದಲ್ಲಿ ಅವನೊಂದಿಗೆ ವಾಯುವಿಹಾರಕ್ಕೆ ಹೋಗಬೇಕು. ಮನೆಗೆ ಬಂದ ಕೂಡಲೇ ನನ್ನನ್ನು ಕಟ್ಟಿ ಹಾಕುತ್ತಾನೆ. ನಾನೆಲ್ಲೂ ಓಡಾಡುವಂತಿಲ್ಲ. ರಾತ್ರಿ ಸಮಯದಲ್ಲಿ ಮಾತ್ರ ನನ್ನನ್ನು ಸರಪಳಿಯಿಂದ ಮುಕ್ತಿಗೊಳಿಸುತ್ತಾನೆ. ಕಳ್ಳಕಾರರು ಬಂದರೆ ಬೆದರಿಸಿ ಓಡಿಸಬೇಕಾಗುತ್ತದೆ’ ಎಂದಿತು.

‘ತಮ್ಮಾ, ನನ್ನ ದಿನಚರಿ ಕೇಳು. ಇಲ್ಲಿ ನನ್ನನ್ನು ಹೇಳುವವರು– ಕೇಳುವವರು ಯಾರೂ ಇಲ್ಲ. ಎಲ್ಲಿ ಬೇಕಾದರೂ ಸ್ವಚ್ಛಂದವಾಗಿ ಓಡಾಡಬಹುದು. ದಟ್ಟವಾದ ಕಾಡು, ಹಸಿರು ತುಂಬಿದ ಮರ, ಗಿಡಗಳು, ಶುದ್ಧ ಗಾಳಿ, ಮನಸ್ಸಾದಾಗ ಏಳುತ್ತೇನೆ. ನನಗೆ ಬೇಕಾಗುವಷ್ಟು ಆಹಾರ ಕಾಡಿನಲ್ಲಿ ಸಿಗುತ್ತೆ. ಕಾಡಿನ ತೊರೆಗಳಲ್ಲಿ ಹರಿಯುವ ನೀರು ಕುಡಿದು, ಹಾಯಾಗಿ ಗೊರಕೆ ತೆಗೆಯುತ್ತೇನೆ. ನನಗೆ ಯಾರ ಹಂಗೂ ಇಲ್ಲ, ನಾನು ಯಾರ ಮನೆಯನ್ನೂ ಕಾಯಬೇಕಿಲ್ಲ. ಸ್ವತಂತ್ರವಾಗಿ ಓಡಾಡಿಕೊಂಡಿದ್ದೇನೆ’ ಎಂದು ಖುಷಿಯಿಂದ ಕಾಡು ನಾಯಿ ಹೇಳಿಕೊಂಡಿತು.

ಗೆಳೆಯನ ಮಾತುಗಳನ್ನು ಕೇಳಿದ ಊರಿನ ನಾಯಿ, ‘ಅಬ್ಬಬ್ಬಾ! ಈ ರೀತಿ ಬದುಕಲು ನನ್ನಿಂದ ಸಾಧ್ಯವಿಲ್ಲಪ್ಪ. ನನಗೆ ಆಹಾರ ಹುಡುಕುವ ತೊಂದರೆ ಇಲ್ಲ. ಚಳಿ, ಮಳೆ, ಗಾಳಿಗೆ ನಾನು ಹೆದರಬೇಕಾಗಿಲ್ಲ. ನನ್ನ ಕೆಲಸವೂ ಸುಲಭ. ಆರಾಮವಾಗಿ ಇದ್ದೇನೆ’ ಎಂದಿತು.

‌‘ಥೂ! ನೀನೊಬ್ಬ ಶುದ್ಧ ಸೋಮಾರಿ. ನಮ್ಮ ಆಹಾರ ನಾವೇ ಗಳಿಸಿಕೊಳ್ಳುವುದರಲ್ಲಿ ಎಂಥ ಖುಷಿ ಇದೆ ಗೊತ್ತಾ? ಸಾಹುಕಾರ ಹಾಕಿದ ಆಹಾರವನ್ನಷ್ಟೇ ನೀನು ತಿನ್ನಬೇಕು. ನನಗಾದರೋ ಬಗೆಬಗೆಯ ಆಹಾರ ಸಿಗುತ್ತದೆ. ಸೋಮಾರಿಯಾಗಿ ಕಾಲ ಕಳೆಯಲು ನಿನಗೆ ಹೇಸಿಗೆಯಾಗುವುದಿಲ್ಲವೇ? ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಬದುಕುವುದರಲ್ಲಿರುವ ಖುಷಿ ನಿನಗೆಲ್ಲಿ ತಿಳಿಯಬೇಕು? ಸ್ವತಂತ್ರವಾಗಿ ಬದುಕುವುದರಿಂದ ಸಿಗುವ ನೆಮ್ಮದಿ ಆ ನಿನ್ನ ಸಾಹುಕಾರನಿಂದ ದೊರೆಯುತ್ತದೆಯೇ?’ ಎಂದು ಹೇಳಿ ಸುಮ್ಮನಾಯಿತು ಕಾಡಿನ ನಾಯಿ.

ಈ ಮಾತುಗಳನ್ನು ಕೇಳಿದ ಸಾಹುಕಾರನ ನಾಯಿ,  ಗೆಳೆಯನ ನುಡಿಗಳ ಬಗ್ಗೆಯೇ ಆಲೋಚಿಸುತ್ತ ನಡೆಯತೊಡಗಿತು.  ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಒಂದಷ್ಟು ಜನ ಕೈಯಲ್ಲಿ ಪಂಜು ಹಿಡಿದುಕೊಂಡು ‘ಆಹಾ! ಓಹೋ!’ ಎಂದು ಅಬ್ಬರಿಸುತ್ತಾ ತಮ್ಮತ್ತಲೇ ಓಡಿ ಬರುವುದು ಕಾಣಿಸಿತು. ಬರುತ್ತಿರುವವರು ಯಾರು ಎಂಬುದನ್ನು ಅರಿತ ಸಾಹುಕಾರನ ನಾಯಿಯು, ‘ಅಣ್ಣಾ, ಸಾಹುಕಾರ ಹಾಗೂ ಅವನ ಸಂಗಡಿಗರು ನನ್ನನ್ನೇ ಹುಡುಕಿಕೊಂಡು ಬಂದಿರುತ್ತಾರೆಂದು ಕಾಣುತ್ತದೆ. ಅವರ ದೊಣ್ಣೆ ಏಟುಗಳಿಂದ ತಪ್ಪಿಸಿಕೊಳ್ಳಬೇಕು’. ಒಂದು ಕ್ಷಣವೂ ನಿಲ್ಲದೆ ಸಾಹುಕಾರನ ನಾಯಿ, ಊರ ದಾರಿ ಅರಸುತ್ತಾ ಅಲ್ಲಿಂದ ಪೇರಿ ಕಿತ್ತಿತು.

ಅದರ ಅವಸ್ಥೆ ಕಂಡು ಕಾಡಿನ ನಾಯಿ ಪಕಪಕನೆ ನಗುತ್ತಾ, ‘ನಿನಗೆ ತಿಳಿಯದು, ಸ್ವತಂತ್ರ ಬದುಕು. ಅದನ್ನು ಅನುಭವಿಸಿಯೇ ತಿಳಿಯಬೇಕು. ಓಡು, ಓಡು’ ಎಂದು ಹೇಳಿಕೊಳ್ಳುತ್ತಾ ತನ್ನ ದಾರಿ ಹಿಡಿಯಿತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !