ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಅಸ್ವಸ್ಥತೆ, ಆರೋಗ್ಯ ಮತ್ತು ನಾವು

Last Updated 9 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನಸ್ಸು ತುಂಬ ಚಂಚಲ. ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಸ್ವಾರ್ಥವನ್ನೇ ಬಯಸುತ್ತದೆ. ಅತಿಯಾದಾಗ ತನ್ನ ಸ್ಥಿಮಿತವನ್ನು ಕಳೆದುಕೊಂಡು ಮಾನಸಿಕ ವ್ಯಾಧಿಗಳಿಗೆ ತುತ್ತಾಗಬಹುದು. ಯಾವುದೇ ವೃತ್ತಿಯಲ್ಲಿ ವಾದ, ವಿವಾದ, ಚರ್ಚೆ, ಕೊನೆಗೆ ಸಿಟ್ಟು, ಕೋಪ, ದ್ವೇಷ, ಅಸೂಯೆ, ತಿರಸ್ಕಾರ, ಮನಸ್ಸಿನಲ್ಲಿ ಮನೆ ಮಾಡಿಬಿಡುತ್ತವೆ.

ಇದರಿಂದ ನಾವು ಮಾಡುವಂಥ ಯಾವುದೇ ಕೆಲಸದಲ್ಲಿ ಮಾನಸಿಕ ಕಿರಿಕಿರಿಯನ್ನು ಅನುಭವಿಸುತ್ತಿದ್ದೇವೆ. ಪ್ರತಿಯೊಬ್ಬರು ಮಾನಸಿಕ ಆರೋಗ್ಯದ ಜೊತೆಗೆ ಘನತೆಯನ್ನು ಹೊಂದಿರಬೇಕು.

ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಒಂದು ದೇಹಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಷ್ಟೇ ಮುಖ್ಯ. ಒಂದರ ಸಮತೋಲನ ಇನ್ನೊಂದನ್ನು ಆವಲಂಬಿಸಿರುತ್ತದೆ. ಮಾನಸಿಕ ಒತ್ತಡ, ಸಮಸ್ಯೆಗಳಿಗೆ ಆಸ್ಪದ ಕೊಡದೇ, ಅವುಗಳನ್ನು ನಿಭಾಯಿಸುವ ಮತ್ತು ನಿಯಂತ್ರಿಸುವುದನ್ನು ತಿಳಿದಿರಬೇಕು. ಮಾನಸಿಕ ಕಾಯಿಲೆಗಳಿಗೆ ಮಾಟ, ಮಂತ್ರ, ಮದ್ದು ಬೇಕಾಗಿಲ್ಲ.

ಅದಕ್ಕೆ ಅಗತ್ಯವಾಗಿರುವುದು ಪರಿಣತ ಮನೋವೈದ್ಯರ ಸೂಕ್ತ ಚಿಕಿತ್ಸೆ ಮತ್ತು ಔಷೋಧೋಪಚಾರ. ಇಂದು ಹಲವಾರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಮನೋವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಮಾನಸಿಕ ಕಾಯಿಲೆಗೊಳಗಾದವರಿಗೆ ಅವರ ಸಂಬಂಧಿಕರು ಯಾವ ಸಂಕೋಚವಿಲ್ಲದೇ ಮುಂದೆ ಬಂದು ಚಿಕಿತ್ಸೆಯನ್ನು ಕೊಡಿಸಬಹುದು ಮತ್ತು ಕೊಡಿಸಲೇಬೇಕು.ಮಾ

ನಸಿಕ ಅಸ್ವಸ್ಥತೆ

ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಪರಿಹರಿಸಿಕೊಳ್ಳಲು ನಮ್ಮಲ್ಲಿ ಆತ್ಮವಿಶ್ವಾಸ ಅತೀ ಅವಶ್ಯಕ. ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ, ಧೈರ್ಯ ಇಲ್ಲದೇ ಹೋದಾಗ ನಾವು ಮಾಡುವಂಥ ಕೆಲಸದಲ್ಲಿ, ಸಮಸ್ಯೆಗಳು ಒತ್ತಡಗಳು ಆಕ್ರಮಿಸುತ್ತವೆ. ಮಾನಸಿಕ ಕಾಯಿಲೆಯು ನಮ್ಮ ಭಾವನೆಯನ್ನು ಒಳಗೊಂಡಿರುತ್ತದೆ.

ನಮ್ಮ ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಅಸಮತೋಲನವಾದಾಗ ಖಿನ್ನತೆಯು ಕಾಣಿಸಿಕೊಳ್ಳುತ್ತದೆ. ಮತ್ತು ನಮ್ಮ ಮಿದುಳಿನಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆ. ಅಂದರೆ ನರವಾಹಕಗಳಾದ ಡೊಪೆಮಿನ್, ಸೆರೋಟೊನಿನ್ ಪ್ರಮಾಣ ಕಡಿಮೆ ಆದಾಗ ಖಿನ್ನತೆಯು ಉಂಟಾಗುತ್ತದೆ. ಇದು ನಕಾರಾತ್ಮಕ ಭಾವನೆಯನ್ನು ಹೆಚ್ಚಾಗಿ ಹೊಂದಿರುತ್ತದೆ. ಮಾನಸಿಕ ಕಾಯಿಲೆಯು ಯಾವುದೇ ಜನರನ್ನು ಬಿಟ್ಟಿಲ್ಲ. ಅದಕ್ಕೆ ಜಾತಿ ಅಂತಸ್ತಿನ ಪರಿವೇ ಇಲ್ಲ.

ಯಾವುದೇ ಅಧಿಕಾರಿ, ಉನ್ನತ ಅಥವಾ ಕೆಳಮಟ್ಟದ ಹುದ್ದೆಯಲ್ಲಿರುಬಹುದು. ಆ ವ್ಯಕ್ತಿಯ ಮಿದುಳಿನಲ್ಲಿ ಆಗುವಂಥ ರಾಸಾಯನಿಕ ರಸದೂತಗಳ ಏರುಪೇರಿನಿಂದ ಮಾನಸಿಕ ಕಾಯಿಲೆ ಕಂಡು ಬರುತ್ತದೆ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಅನುವಂಶೀಯತೆ, ಸುತ್ತಮುತ್ತಲಿನ ವಾತಾವರಣ, ಉದ್ಯೋಗ ಸ್ಥಳದಲ್ಲಿಯ ಕಾರ್ಯದ ಒತ್ತಡ, ಸಹೋದ್ಯೋಗಿಗಳ ಅಸಹಕಾರ ಕೂಡ ವ್ಯಕ್ತಿಯನ್ನು ಮಾನಸಿಕ ವ್ಯಾಕುಲತೆಯಲ್ಲಿ ಸಿಲುಕಿಸುತ್ತದೆ.

ಮಾನಸಿಕ ಒತ್ತಡ ನಮ್ಮನ್ನು ಯಾವಾಗ ಆವರಿಸುತ್ತದೆಂದರೆ ಅವಮಾನಿತರಾದರೆ ಪರೀಕ್ಷೆಯಲ್ಲಿ ಫೇಲಾದರೆ, ಕಾಯಿಲೆ ವಾಸಿಯಾಗದಿದ್ದಾಗ ಪ್ರೀತಿ ಪ್ರೇಮದಿಂದ ವಂಚಿತರಾದಾಗ, ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದರೆ ವೃತ್ತಿಯಲ್ಲಿ ಸಮಸ್ಯೆ, ಅನಾಥರಿದ್ದಲ್ಲಿ, ಅತ್ಯಾಚಾರಕ್ಕೆ ಒಳಗಾಗಿದ್ದಲ್ಲಿ, ದಾಂಪತ್ಯದ ವಿರಸವಿದ್ದಾಗ, ಮಹಿಳೆಯರ ಮುಟ್ಟಿನ ಸಂದರ್ಭದಲ್ಲಿ, ಋತುಬಂಧದ ಸಮಯದಲ್ಲಿ, ಮಕ್ಕಳಾಗದೇ ಇದ್ದಲ್ಲಿ, ವೃದ್ಧಾಪ್ಯದಲ್ಲಿ, ಪಾಪಪ್ರಜ್ಞೆ ಅನುಭವಿಸುವರಲ್ಲಿ, ಇನ್ನೂ ಹಲವಾರು ಸಮಸ್ಯೆಗಳಿಂದ ಮಾನಸಿಕ ಒತ್ತಡವನ್ನು ಎದುರಿಸುತ್ತಾರೆ.

ಮಹಿಳೆಯರು ಮನೆಯಲ್ಲಿ, ಉದ್ಯೋಗ ಕ್ಷೇತ್ರಗಳಲ್ಲಿ, ಸಮಾಜದಲ್ಲಿ, ಎಷ್ಟೋ ಸಮಸ್ಯೆಗಳಿಗೆ ಒಳಗಾಗಿ ಮಾನಸಿಕ ಒತ್ತಡದಲ್ಲಿ ಸಿಲುಕಿದ್ದಾಳೆ. ನಮ್ಮ ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಅಸಮತೋಲನವಾದಾಗ ನಮ್ಮ ಮಿದುಳಿನಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಯಿಂದ ಮಾನಸಿಕ ಕಾಯಿಲೆಯಿಂದ ಬಳಲುವಂತೆ ಮಾಡುತ್ತದೆ.

ಮಾನಸಿಕ ಒತ್ತಡದಿಂದ ಉಂಟಾಗಬಹುದಾದ ತೊಂದರೆಗಳಿಗೆ ಇಂದು ಅನೇಕ ವಿಧವಾದ ಪರಿಹಾರಗಳಿವೆ. ಚಿಕಿತ್ಸೆಗಳಿವೆ. ಉದ್ವೇಗ ಆತಂಕ, ಖಿನ್ನತೆ ಮುಂತಾದ ಮಾನಸಿಕ ತೊಂದರೆಗಳಿಗೆ ಮನೋವೈದ್ಯಕೀಯ ಚಿಕಿತ್ಸೆ, ಸಮಾಲೋಚನೆಯ ಜೊತೆಗೆ ನಮ್ಮ ಕೈಯ ಲ್ಲಿಯೇ ಇರುವಂಥ ಪರಿಹಾರಗಳು ಕೂಡಾ ಇವೆ. ಒತ್ತಡಕ್ಕೆ ಒಳಗಾಗಿ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಒತ್ತಡಕ್ಕೆ ಆಸ್ಪದಕೊಡದೇ ಜೀವನ ನಡೆಯುವುದರಲ್ಲಿ ಜಾಣತನವಿದೆ.

* ಮುಖದಲ್ಲಿನ ಮುಗುಳ್ನಗೆ ಸಮಸ್ಯೆಗಳನ್ನು ಎದುರಿಸುವಂಥ ಒಂದು ಉತ್ತಮ ಔಷಧ. ನಗು ಮತ್ತು ಬಾಂಧವ್ಯವು ಪ್ರೀತಿ, ಆಸಕ್ತಿ, ಉತ್ಸಾಹಗಳನ್ನು ಬೆಳೆಸುತ್ತದೆ. ಮನಸ್ಸನ್ನು ಉಲ್ಲಸಿತವಾಗಿಸುತ್ತದೆ. ಅದರಿಂದ ಉತ್ತಮ ಆಲೋಚನೆಗಳು ಹೊರಡುತ್ತವೆ. ನಕ್ಕು ನಗಿಸಿದಾಗ ನಕಾರಾತ್ಮಕ ಆಲೋಚನೆಗಳಿಗೆ ದಾರಿಯೇ ಇರುವುದಿಲ್ಲ.

* ಸಮಯ ಅತ್ಯಮೂಲ್ಯವಾದದ್ದು. ನಿಗದಿತ ಸಮಯಕ್ಕೆ ತಕ್ಕಂತೆ ನಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ಒತ್ತಡವು ನಮ್ಮನ್ನು ಆವರಿಸಲಾರದು. ಅದೇ ರೀತಿ ಸರಿಯಾದ ನಿದ್ದೆ, ಶುಚಿಯಾದ, ಪೌಷ್ಟಿಕ ಆಹಾರ, ನಿಗದಿತ ಸಮಯಕ್ಕೆ ಬೆಳಿಗ್ಗೆ ಏಳುವುದು-ಮಲಗುವುದು ಅತೀ ಅವಶ್ಯಕ. ನೆಮ್ಮದಿಯ ನಿದ್ದೆ ಮನಸ್ಸನ್ನು ಶಾಂತವಾಗಿರಿಸುತ್ತದೆ.

* ದಣಿದ ದೇಹಕ್ಕೆ ವಿಶ್ರಾಂತಿ ಬೇಕು. ಜೊತೆಗೆ ಇಂಪಾದ ಸಂಗೀತ, ಸ್ನೇಹಿತರ, ಸಾಕುಪ್ರಾಣಿಗಳ ಜೊತೆ ಒಡನಾಟ, ಚಿಕ್ಕ ಚಿಕ್ಕ ಮುದನೀಡುವ ಪ್ರವಾಸ, ಒಳ್ಳೆಯ ಪುಸ್ತಕಗಳ ಓದಿನ ಹವ್ಯಾಸ, ಇನ್ನು ಮುಂತಾದವುಗಳಿಂದ ಮನಸ್ಸಿಗೆ ನೆಮ್ಮದಿಯನ್ನು ಪಡೆಯಬಹುದು.

* ನಮ್ಮನ್ನು ನಾವು ಗೌರವಿಸಿಕೊಂಡಾಗ, ಸ್ವಾಭಿಮಾನ ಹೆಚ್ಚಾಗುತ್ತದೆ. ಧೀರತನ ದಿಟ್ಟ ವಾಗುತ್ತದೆ. ಅಸೂಯೇ, ದ್ವೇಷ, ಕೀಳರಿಮೆಗೆ ಸ್ಥಳವೇ ಇರುವುದಿಲ್ಲ. ಸಮಸ್ಯೆಗಳಿಗೆ ಮಾರ್ಗ ಸರಳವಾಗುತ್ತದೆ. ಸಂತೋಷ ಬೇರೂ ರುತ್ತದೆ. ಪ್ರಾಮಾಣಿಕತೆ, ಸ್ನೇಹಪೂರ್ವ ಗೌರವಯುತ ನಡ ವಳಿಕೆಯಿಂದ ಸ್ವಗೌರವ ಇಮ್ಮಡಿಸುತ್ತದೆ.

* ಕುಟುಂಬ ಮತ್ತು ವೃತ್ತಿ ಮಹಿಳೆಯರಿಗೆ ಮುಖ್ಯ ಘಟ್ಟಗಳು. ಇಲ್ಲಿ ವಾಸ್ತವಿಕತೆಯ ಸಮಯವನ್ನು ಅರಿತು, ಶಾಂತಚಿತ್ತ ಜಾಣ್ಮೆಯಿಂದ ಸಮಸ್ಯೆಗಳನ್ನು ಅರಿತು ವೃತ್ತಿಯನ್ನು ನಿರ್ವಹಿಸಬೇಕಾಗುತ್ತದೆ.

* ಭಾವನೆಗಳನ್ನು ಹತ್ತಿಕ್ಕಿಕೊಳ್ಳುವುದು ಬೇಡ. ಹಂಚಿಕೊಳ್ಳಿ. ಸಮಸ್ಯೆಗಳನ್ನು ಬಲಿತುಕೊಳ್ಳಲು ಬಿಡಬೇಡಿ. ಎಂದಿಗೂ ನಿರಾಶಾವಾದ ಬೇಡ. ಬದುಕನ್ನು ಸ್ವಚ್ಛಂದವಾಗಿ, ಇತರರಿಗೂ ಸಹಕಾರಿಯಾಗಿ ಬದುಕಿರಿ.

* ಯಾವಾಗಲೂ ಒಂದಿಲ್ಲ ಒಂದು ಚಟುವಟಿಕೆಯಲ್ಲಿ ಭಾಗಿಯಾದಾಗಆಲಸ್ಯ, ಉದಾಸೀನತೆ ತನ್ನಿಂದ ತಾನೆ ದೂರವಾಗು ತ್ತದೆ. ನಿತ್ಯದ ವಾಸ್ತವಿಕತೆಯನ್ನು ಅಂಗೀಕರಿ ಸಬೇಕಾಗುತ್ತದೆ. ನಾವು ನಿರ್ವಹಿಸಿದಂತೆ ನಮ್ಮ ವೃತ್ತಿ, ನಮ್ಮ ಮಾನಸಿಕ ಆರೋಗ್ಯ ಇರಲಿದೆ.

* ನಮ್ಮ ಯೋಚನಾ ವಿಧದಲ್ಲಿ ಬದಲಾವಣೆ ಮಾಡಿಕೊಂಡು ಸಮಸ್ಯೆಗೆ ತಕ್ಕಂತೆ ಅಲ್ಲಿಯೇ ಪರಿಹಾರ ಹುಡುಕುವುದು. ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟು ಆಶಾವಾದಿಯಾಗಿರುವುದು

* ‘ನಾವು ಜೀವಿಸುತ್ತಿರುವಂತೆ ನಮ್ಮ ನಿತ್ಯದ ಜೀವನ ಶೈಲಿಯಲ್ಲಿ ಬದಲಾವಣೆಯಾಗಬೇಕು. ನಮ್ಮ ದೇಹಕ್ಕೆ ಹೊಂದುವಂಥ ದಿನನಿತ್ಯ ಯೋಗ ವ್ಯಾಯಾಮಗಳಲ್ಲಿ ತೊಡಗಬೇಕು. ಒತ್ತಡ ನಿರ್ವಹಣೆಗೆ ವ್ಯಾಯಾಮದ ಜೊತೆಗೆ ಮಿತಿಯಾದ ಆಹಾರ, ದೇಹಕ್ಕೆ ಸಾಕಷ್ಟು ನೀರು ಬೇಕು. ಸಿಟ್ಟು, ಆಸಹನೆ, ಜುಗುಪ್ಸೆ ನಮ್ಮಲ್ಲಿ ಬೇರೂರಲು ಬಿಡಬಾರದು. ಕೋಪ ನಮ್ಮ ನಿಯಂತ್ರಣದಲ್ಲಿರಬೇಕು. ಜೀವನದಲ್ಲಿ ಉತ್ಸಾಹ ಮನೋಭಾವ ತುಂಬಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT