ಶುಕ್ರವಾರ, ಏಪ್ರಿಲ್ 10, 2020
19 °C

ಗೋದೂಳಿಗೆ ಹೊಂಬೆಳಕಿನ ಸಿಂಚನ

ಕೆ.ಎಸ್.ರಾಜಾರಾಮ್ Updated:

ಅಕ್ಷರ ಗಾತ್ರ : | |

Deccan Herald

ಇಂತಹದ್ದೊಂದು ಗೋದೂಳಿಯ ಸಮಯದ ಸುಂದರ ದೃಶ್ಯ ಹಳ್ಳಿಗಾಡಿನ ಮಂದಿಗೆ ಹೊಸದೇನಲ್ಲ. ಕುರಿಮಂದೆ, ದನಕರುಗಳ ಹಿಂಡು ದಿನವಿಡೀ ಒಣ ಗದ್ದೆ- ಹಸಿ ಮೈದಾನಗಳಲ್ಲಿ ಅಡ್ಡಾಡಿ, ಹುಲ್ಲು ಮೇಯ್ದು, ಒಡೆಯ ಅಥವಾ ಒಡತಿ ಸಂಜೆ ಬಂದೊಡನೇ ವಾಪಸ್ಸು ಹಟ್ಟಿಯೆಡೆಗೆ ಹೆಜ್ಜೆಹಾಕುವುದು ಸಾಮಾನ್ಯ.

ಅಲ್ಲಲ್ಲಿ ನಗರದ ಅಂಚಿನಲ್ಲಿ ಅಳಿದುಳಿದ ಹಳ್ಳಿ ಜೀವನ ಸಾಗುತ್ತಲೇ ಇದೆ. ಇತ್ತೀಚೆಗೊಂದು ಗೋದೂಳಿಯ ಸಮಯದಲ್ಲಿ ನಗರದ ಮಾಗಡಿ ರಸ್ತೆಯ ಬಲಗಡೆ ತುಮಕೂರು ರಸ್ತೆಯೆಡೆ ಸಾಗುವ ಲಿಂಕ್ ರಸ್ತೆ ಬದಿ ಈ ಟಗರು-ಮಂದೆಯನ್ನು ಅಟ್ಟುತ್ತಾ ಹಟ್ಟಿಯೆಡೆ ಮರಳಿ ಸಾಗುತ್ತಿರುವ ಕುರಿಗಾಹಿಯ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು, ನಾಗಸಂದ್ರದ ಸೌಂದರ್ಯ ಬಡಾವಣೆಯ ವಿವೇಕ್ ಹೆಗಡೆ.

ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ವೃತ್ತಿಪರ ಛಾಯಾಗ್ರಾಹಕರಾದ ಅವರು ಎಂಟು ವರ್ಷಗಳಿಂದ ಪೋರ್ಟ್ರೈಟ್, ಭಾವನಾತ್ಮಕ, ಪ್ರಕೃತಿ, ವನ್ಯಜೀವಿ, ಪ್ರಿ- ವೆಡ್ಡಿಂಗ್ ಕ್ಯಾಂಡಿಡ್, ಪೋರ್ಟ್ ಫೋಲಿಯೊ ಇತ್ಯಾದಿ ವಿಭಾಗಗಳಲ್ಲಿ ಪರಿಣತಿ ಪಡೆದಿದ್ದು, ಬಳಸಿದ ಕ್ಯಾಮೆರಾ, ಕೆನಾನ್ 600 ಡಿ, ಜೊತೆಗೆ 55– 250 ಎಂ.ಎಂ. ಜೂಮ್ ಲೆನ್ಸ್. ಅವರ ಕ್ಯಾಮೆರಾ ಎಕ್ಸ್‌ಪೋಷರ್ ವಿವರ ಇಂತಿವೆ: 163 ಎಂ.ಎಂ. ಫೋಕಲ್ ಲೆಂಗ್ತ್‌ನಲ್ಲಿ ಅಪರ್ಚರ್ ಎಫ್ 5.6 ಶಟರ್ ವೇಗ 1/2000 ಸೆಕೆಂಡ್, ಐ.ಎಸ್.ಒ 800. ಫ್ಲಾಶ್ ಮತ್ತು ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

* ಇಳಿ ಸಂಜೆಯ ಎದುರು ಸೂರ್ಯ ಬೆಳಕಿನ ಛಾಯಾಗ್ರಹಣ ತಾಂತ್ರಿಕವಾಗಿ ಕ್ಲಿಷ್ಟದ ಪ್ರಯತ್ನವೇ. ಕ್ಯಾಮೆರಾದ ಹಿಡಿತಗಳೆಲ್ಲವೂ ಸಮರ್ಪಕವಾಗಿರಲೇ ಬೇಕಾದದ್ದು ಅವಶ್ಯಕ. ಎದುರು ಬೆಳಕು ಕ್ಯಾಮೆರಾದ ಲೆನ್ಸ್ ಮೇಲೆ ಸ್ವಲ್ಪವೂ ಬೀಳದಂತೆ ಎಚ್ಚರವಹಿಸುವುದೂ ಅಗತ್ಯ. ಈ ಚಿತ್ರದ ಎಕ್ಸ್‌ಪೋಷರ್‌ನ ಎಲ್ಲ ಅಂಶಗಳೂ ಸರಿಯಾಗಿವೆ.

* ಚಿತ್ರದ ವಸ್ತುಗಳೆಲ್ಲವೂ ಚಲನೆಯಲ್ಲಿರುವ ದೆಸೆಯಿಂದ, ಅದಕ್ಕನುಗುಣವಾಗಿ ಪ್ರಥಮವಾಗಿ ಅತಿ ಹೆಚ್ಚಿನ ಶಟರ್ ವೇಗದ ಅಳವಡಿಕೆ ಅಗತ್ಯ. ಕುರಿಗಾಹಿ ಮಹಿಳೆ, ಕುರಿಗಳ ಹೆಜ್ಜೆಗಳ ಭಾಗಗಳು ಮತ್ತು ಮೇಲೇಳುತ್ತಿರುವ ದೂಳು ಸ್ಪುಟವಾಗಿ ಕೇಂದ್ರೀಕೃತವಾಗಿ (ಫೋಕಸ್) ಹಿನ್ನೆಲೆಯ ಪರಿಸರದ ದೃಶ್ಯಗಳು ಮಂದವಾಗಿ ಮೂಡಿದಾಗ, ಮುಖ್ಯ ವಸ್ತುಗಳ ಪ್ರಭಾವ ಹೆಚ್ಚಿ ಚಿತ್ರದ ಮೌಲ್ಯವನ್ನು ಇಮ್ಮಡಿಗೊಳಿಸುತ್ತವೆ. ವಸ್ತುವಿಗೆ ದೂರದಿಂದ 163 ಎಂ.ಎಂ. ಜೂಮ್‌ನಲ್ಲಿ, ದೊಡ್ಡ ಅಳತೆಯ ಅಪರ್ಚರ್ ಎಫ್ 5.6 ಇಟ್ಟುಕೊಳ್ಳುವುದರಿಂದ ಸಂಗಮ ವಲಯವು (ನ್ಯಾರೋ ಡೆಪ್ತ್ ಆಫ್ ಫೀಲ್ಡ್) ಇಲ್ಲಿನಂತೆ ಸಂಕುಚಿತಗೊಳ್ಳುವುದು ಸಾಧ್ಯವಾಗುತ್ತದೆ.

* ಬದಲಿಗೆ ವಿಸ್ತಾರ ಮಸೂರವನ್ನು (ವೈಡ್ ಆ್ಯಂಗಲ್) ಅಳವಡಿಸಿ, ಅದಕ್ಕೆ ಪೂರಕವಾದ ಕಿರಿದಾದ ಅಪರ್ಚರ್ ಅಳವಡಿಸಿದ್ದಿದ್ದರೆ, ಮುನ್ನೆಲೆಯ ಮತ್ತು ಹಿನ್ನೆಲೆಯ ಎಲ್ಲಾ ದೃಶ್ಯಗಳೂ ಚೆನ್ನಾಗಿ ಸ್ಪುಟಗೊಂಡು, ನೆರಳು– ಹೊಂಬೆಳಕಿನ ಮೋಹಕ ಭಾಗಗಳ ಪ್ರಾಮುಖ್ಯತೆ ಕಣ್ಣಿಗೆ ನಾಟದೇ, ಇಡೀ ಚಿತ್ರವೇ ದಾಖಲೆಗೆ ಮಾತ್ರ ಸೀಮಿತವಾಗಿ ಬಿಡಬಹುದಿತ್ತು.

* ಗ್ರಾಮೀಣ ಜೀವನ ದೃಶ್ಯಗಳ ಸೊಬಗನ್ನು ಸಹಜವಾದ ಪರಿಸರದಲ್ಲಿ ಮುಂಜಾನೆಯ ಅಥವಾ ಇಳಿಸಂಜೆಯ ಸೂರ್ಯ ಬೆಳಕಿನ ಹರವಿನಲ್ಲಿ ನೋಡುವುದು ಮತ್ತು ಭಾವಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕೂಡಾ ಒಂದು ಕಲೆ. ನಗರಗಳ ಆಜುಬಾಜುವಿನಲ್ಲೂ ಅಂತಹ ಸಂದರ್ಭ ಇಲ್ಲಿನಂತೆ ಸಿಕ್ಕುವುದೂ ಅಪೂರ್ವವೇ. ಅದನ್ನು ಗುರುತಿಸಿ ಸಾಧಿಸಲು ಛಾಯಾಗ್ರಾಹಕರಿಗೆ ಪರಿಣಿತಿ ಮತ್ತು ಸದಾ ಸೃಜನಶೀಲವಾದ ಆಸಕ್ತಿ ಎಚ್ಚರವಿರುವುದೂ ಅಗತ್ಯ.

* ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ, ಕೆಳ ಮಟ್ಟದ ಕ್ಯಾಮೆರಾ ಕೋನ (ಲೋ ಆ್ಯಂಗಲ್ ಆಫ್ ಶೂಟಿಂಗ್). ಅದರ ದೆಸೆಯಿಂದ ಮಹಿಳೆಯ ಹಾವ ಭಾವ, ಟಗರುಗಳ ಸ್ಪುಟವಾದ ಮೈ- ಕಾಲಿನ ಭಾಗಗಳು ಮತ್ತು ಮೇಲೇಳುತ್ತಿರುವ ಧೂಳಿನ ಮಾಟ ಉದ್ದೀಪನಗೊಂಡಿರುವುದು. ಅಂತೆಯೇ ಈ ಚೌಕಟ್ಟನ್ನೊಂದು ಕಲಾಕೃತಿಯನ್ನಾಗಿಸಿರುವುದೂ ಛಾಯಾಚಿತ್ರಕಾರರ ಪರಿಣತಿಗೆ ಕನ್ನಡಿಯಾಗಿದೆ.


ವಿವೇಕ್ ಹೆಗಡೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)