ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಫೋನ್ ಕಾಲದ ಜಾಹೀರಾತು

Last Updated 20 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಪಂಡಿತ್ ಭೀಮಸೇನ ಜೋಶಿಯವರ ಬಾಲ್ಯಕಾಲದ ಒಂದು ಪ್ರಸಂಗ: ಶಾಲೆಯಿಂದ ದಿನವೂ ತಡವಾಗಿ ಮನೆಗೆ ಬರುತ್ತಿದ್ದ ಬಾಲಕ ಭೀಮಸೇನನನ್ನು ಯಾಕೆ ತಡವಾಯಿತು ಎಂದು ಎಷ್ಟು ಕೇಳಿದರೂ ಅವನು ಬಾಯಿಬಿಡುತ್ತಿರಲಿಲ್ಲ. ಅದೇ ಊರಿನಲ್ಲಿ ಗ್ರಾಮಾಫೋನ್ ರಿಕಾರ್ಡುಗಳ ಒಂದು ಅಂಗಡಿಯಿತ್ತು. ಒಂದು ದಿನ ಆ ಅಂಗಡಿಯ ಮಾಲೀಕರು ಭೀಮಸೇನನ ತಂದೆ ಗುರುರಾಜ ಜೋಶಿಯವರನ್ನು ಕರೆದು, ‘ನಿಮ್ಮ ಹುಡುಗ ಛಂದ ಹಾಡತಾನ್ರಿ ಮಾಸ್ತರ. ನೀವು ಕೇಳಿಲ್ಲೇನ್ರಿ? ಸಾಲಿ ಬಿಟ್ಟ ಗಳಿಗ್ಗೆ ಇಲ್ಲೆ ಬಂದು ಕೂಡತಾನ. ನಾನೂ ಅಂವಗ ಭಾಗವತರ ‘ಆಡಿಸಿದಳೆಶೋದಾ’ ರಿಕಾರ್ಡು ಹಚ್ಚಿ ಕೇಳಸ್ತೀನಿ. ಕೇಳಿ ಕೇಳಿ ಈಗ ಆ ಹಾಡ ಪೂರ್ತಿ ಇದ್ದಕ್ಕಿದ್ಹಾಂಗ ಅಂದು ತೋರಿಸತಾನ್ರಿ’ ಎಂದು ಮೆಚ್ಚುಗೆಯಿಂದ ಹೇಳಿದರು. ಮುಂದೊಂದು ದಿನ ಬಾಲಕ ಭೀಮಸೇನನ ತಾಯಿ ಅದೇ ಹಾಡನ್ನು ಹಾಡಿದಾಗ ಅವನು ‘ಹಂಗಲ್ಲವ್ವ ಈ ಹಾಡನ್ನ ಹಾಡುವದು, ನಾನು ಅಂದು ತೋರಿಸುತ್ತೇನೆ ನೋಡು’ ಎಂದು ಆ ರಿಕಾರ್ಡಿನಲ್ಲಿದ್ದ ಹಾಗೆಯೇ ಹಾಡಿ ತೋರಿಸಿದನಂತೆ.

ಹೀಗೆ ಭೀಮಸೇನರಿಗೆ ಸಂಗೀತ ಕಲಿಯಬೇಕೆಂಬ ಹುಚ್ಚು ಹತ್ತಿಸಿದ, ಕಲಿಸುವ ಗುರುವಿಗಾಗಿಯೇ ಅವರನ್ನು ದೇಶದಾದ್ಯಂತ ಅಲೆದಾಡಿಸಿದ ಗ್ರಾಮಾಫೋನ್ ರಿಕಾರ್ಡುಗಳಿಗೆ ಅಂಥ ದೀರ್ಘ ಇತಿಹಾಸವೇನೂ ಇಲ್ಲ. 1850ರ ದಶಕದಲ್ಲಿ ಎದುವರ್ದ್–ಲಿಯೋನ್ ಸ್ಕಾಟ್ ದ ಮಾರ್ತಿನ್‍ವಿಲ್ ಎಂಬ ಫ್ರೆಂಚ್ ವಿಜ್ಞಾನಿ ಮೊತ್ತಮೊದಲು ಧ್ವನಿಯನ್ನು ಮುದ್ರಿಸಿಕೊಳ್ಳಬಲ್ಲ ‘ಫೋನಾಟೋಗ್ರಾಫ್’ ಯಂತ್ರವನ್ನು ಕಂಡುಹಿಡಿದ. ಅದರಿಂದ ಪ್ರಭಾವಿತನಾದ ಅಮೆರಿಕನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ‘ಸಿಲಿಂಡರ್ ಫೋನೋಗ್ರಾಫ್’ ಎಂಬ ಯಂತ್ರವನ್ನು ಆವಿಷ್ಕರಿಸಿದ. ಆಮೇಲೆ ಎಮಿಲ್ ಬರ್ಲಿನರ್ (1851-1929) ಎಂಬ ಜರ್ಮನ್–ಅಮೆರಿಕನ್ ಅನ್ವೇಷಕ ಫೋನೋಗ್ರಾಫ್‍ನ ಮೇಲೆ ತಿರುಗಬಲ್ಲ ಚಪ್ಪಟೆಯಾದ ವರ್ಟಿಕಲ್–ಕಟ್ ತಟ್ಟೆಯನ್ನು ಕಂಡುಹಿಡಿದ. ಹೀಗೆ ಆವಿಷ್ಕಾರಗೊಂಡದ್ದು ಗ್ರಾಮಾಫೋನ್ ರಿಕಾರ್ಡು.

ನಿಮ್ಮಲ್ಲಿ ಕೆಲವರಾದರೂ ಗ್ರಾಮಾಫೋನ್ ತಟ್ಟೆಗಳು, ಗ್ರಾಮಾಫೋನ್ ಪ್ಲೇಟುಗಳು, ಗಾನಮುದ್ರಿಕೆಗಳು, ಧ್ವನಿಮುದ್ರಿಕೆಗಳು, ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿದ್ದ ರಿಕಾರ್ಡುಗಳ ಮೇಲೆ ವೃತ್ತಾಕಾರದ, ಬಹುಮಟ್ಟಿಗೆ ಕೆಂಪು ಬಣ್ಣದಲ್ಲಿರುವ ಸ್ಟಿಕ್ಕರುಗಳನ್ನು ನೋಡಿರಲಿಕ್ಕೆ ಸಾಕು. ಅದರಲ್ಲಿ ಹಾಡುಗಾರರ ಹೆಸರು, ಹಾಡು, ತಯಾರಿಕಾ ಕಂಪನಿ ಇತ್ಯಾದಿ ವಿವರಗಳ ಜೊತೆ ಗಾಯನವನ್ನು ಆಲಿಸುತ್ತಿರುವ ಒಂದು ನಾಯಿಯ ಚಿತ್ರವೂ ಇರುತ್ತಿತ್ತು. 1899ರಲ್ಲಿ ಎಮಿಲ್ ಬರ್ಲಿನರ್ ತನ್ನ ಲಂಡನ್ ಶಾಖೆಗೆ ಹೋದಾಗ ಅಲ್ಲಿ ನಾಯಿಯೊಂದು ಜಾನ್ಸನ್ ಗ್ರಾಮಾಫೋನ್ ಯಂತ್ರದ ಮುಂದೆ ಆಲಿಸುತ್ತಿರುವಂತೆ ಕುಳಿತಿರುವ ಒಂದು ಪೇಂಟಿಂಗ್ ನೋಡಿದ. ಅದು ಫ್ರಾನ್ಸಿಸ್ ಬರಾದ್ ಎಂಬ ಇಂಗ್ಲಿಷ್ ಕಲಾವಿದ ಚಿತ್ರಿಸಿದ ‘ನಿಪ್ಪರ್’ ಎಂಬ ಅವನದೇ ನಾಯಿಯ ಚಿತ್ರ. ಮುಂದೆ ಅದೇ ಚಿತ್ರ ಹೆಚ್‍ಎಂವಿ ಗಾನಮುದ್ರಿಕೆಗಳ ಟ್ರೇಡ್‍ಮಾರ್ಕ್ ಆಯಿತು. (ಕ್ರಮೇಣ ಈ ‘ಹಿಸ್ ಮಾಸ್ಟರ್ಸ್ ವಾಯ್ಸ್’ ಎಂಬುದು ಸ್ವಂತ ಅಭಿಪ್ರಾಯವಿಲ್ಲದವರಿಗೆ, ಧಣಿಯ ಮಾತೇ ವೇದವಾಕ್ಯ ಎಂದು ನಂಬಿದವರಿಗೆ ಅನ್ವಯವಾಯಿತು. ನಮ್ಮ ಕಾಲದಲ್ಲಿ ಟಿ.ವಿ.ಯಲ್ಲಿ ಕಾಣಿಸಿಕೊಂಡು ಅರಚಾಡುವ ರಾಜಕೀಯ ಪಕ್ಷಗಳ ವಕ್ತಾರರಿಗೆ ಅನ್ವಯಿಸಬಹುದಾದ ಮಾತಿದು).

1907ರಲ್ಲಿ ಗ್ರಾಮಾಫೋನ್ ಕಂಪೆನಿ ಹೊರಡಿಸಿದ ಜಾಹೀರಾತು ನೋಡಿ. ಇದರಲ್ಲಿ ಬಂಗಾಳಿ ಮಧ್ಯಮ ವರ್ಗದ ಒಂದು ಮನೆ. ನಡುಮನೆಯಲ್ಲಿ ಆಕರ್ಷಣೆಯ ಕೇಂದ್ರವಾಗಿರುವ ಗ್ರಾಮಾಫೋನ್ ಆ ಮನೆಯ ಯಜಮಾನನ ಸ್ಥಾನಮಾನದ (ಸ್ಟೇಟಸ್) ಕುರುಹಾಗಿರುವುದನ್ನು ಗಮನಿಸಿ. ಗ್ರಾಮಾಫೋನಿನ ಬದಿಯಲ್ಲೇ ನಿಂತುಕೊಂಡಿರುವ ಆತ ತನ್ನ ಕುಟುಂಬದವರಿಗೋ ಬಂಧುಗಳಿಗೋ ಗ್ರಾಮಾಫೋನಿನ ಮಹತ್ವವನ್ನು ವಿವರಿಸುತ್ತಿರುವಂತಿದೆ. ಇನ್ನೊಂದು ಬದಿಯಲ್ಲಿ ನಿಂತಿರುವ ಅವನ ಹೆಂಡತಿ ಮನೆಗೆ ಬಂದಿರುವ ಆ ಅಮೂಲ್ಯ ಯಂತ್ರವನ್ನು ನೋಡಿ ಸಂತೋಷಗೊಂಡಂತಿದೆ. ಬೆಂಚಿನ ಮೇಲೆ ಕುಳಿತಿರುವ ಹುಡುಗ, ಹುಡುಗಿ ಇಬ್ಬರೂ ಸಂಗೀತವನ್ನು ಆಲಿಸುತ್ತಿದ್ದಾರೆ. ವಯಸ್ಸಾದವರೊಬ್ಬರು, ಅಂದರೆ ಮನೆಯ ಯಜಮಾನನ ತಂದೆಯೋ ಅಜ್ಜನೋ, ಇನ್ನೊಬ್ಬ ಬಂಧುವಿನ ಜೊತೆ ಸಂಗೀತವನ್ನು ಆಲಿಸುತ್ತಾ ಕುಳಿತಿದ್ದಾರೆ. ಧೋತಿಯುಟ್ಟುಕೊಂಡಿರುವ ಒಬ್ಬ ಸೇವಕ ನೆಲದ ಮೇಲಿದ್ದಾನೆ. ಎಚ್‍ಎಂವಿಯ ನಾಯಿ ಗ್ರಾಮಾಫೋನಿನ ಅಡಿಯಲ್ಲೇ ಕುಳಿತಿದೆ. ಆ ಕಾಲದಲ್ಲಿ ನಾಯಿಯನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ, ನಿಜ. ಆದರೆ ಒಂದು ಟ್ರೇಡ್‍ಮಾರ್ಕ್ ಆಗಿರುವ ಈ ನಾಯಿಗೆ ಅಂಥ ನಿಷೇಧವಿರಲಿಲ್ಲ!

ಒಂದು ಕಾಲದಲ್ಲಿ ಗ್ರಾಮಾಫೋನು ರಿಕಾರ್ಡುಗಳಲ್ಲಿದ್ದ ಹಾಡುಗಳ ಪುಟ್ಟ ಪುಟ್ಟ ಪುಸ್ತಕಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಅದು ಹೇಗೋ ನನ್ನಲ್ಲಿನ್ನೂ ಉಳಿದುಬಿಟ್ಟಿರುವ ಅಂಥದೊಂದು ಪುಸ್ತಕ ‘ಹೊಸ ಗ್ರಾಮಾಫೋನ್ ಕೀರ್ತನೆಗಳು’. 1938ರಲ್ಲಿ ಮುದ್ರಿಸಲಾದ, ನಾಲ್ಕಾಣೆ ಬೆಲೆಯ, 32 ಪುಟಗಳ ಈ ಪುಸ್ತಕದಲ್ಲಿ ಕೀರ್ತನೆಗಳ ಜೊತೆಗೆ ಅವುಗಳನ್ನು ಹಾಡಿರುವವರ ಕಪ್ಪು ಬಿಳುಪು ಫೋಟೊಗಳೂ ಇವೆ. ಬಿ.ಎಸ್.ರಾಜ ಅಯ್ಯಂಗಾರ್, ವೇಮೂರಿ ಗಗ್ಗಯ್ಯಗಾರು, ಬೆಜವಾಡ ಬಾಲು ಬ್ರದರ್ಸ್, ಹೆಚ್.ಸುಬ್ರಮಣ್ಯಮ್, ಮೈಸೂರು, ಪ್ರೊಫೆಸರ್ ಸಾಂಬಮೂರ್ತಿ, ಮದ್ರಾಸು, ವಿದುಷಿಯರಾದ ಕೆ.ಅಶ್ವತ್ಥಮ್ಮ, ಕೆ.ವಿ.ರಮಣಮ್ಮ, ಇ.ವಿ. ಗೌರಿಅಮ್ಮಾಳ್, ಚೆಲ್ಲಂ ವೆಂಕಟರಾಮಯ್ಯರ್, ಪಿ.ಕೆ.ಮೀನಾಂಬಾಳ್, ಕೆ.ವೆಂಕಟಲಕ್ಷ್ಮಮ್ಮ, ಆರ್.ಬೃಹದಾಂಬಾಳ್, ದುರ್ಗಾ ಕುಮಾರಿ, ಬೇಬಿ ಸರಸ್ವತಿ.... ಹೀಗೆ ಈಗಾಗಲೇ ಮರವೆಗೆ ಸರಿದಿರುವ ಅದೆಷ್ಟು ಮಂದಿ ಗಾಯಕ ಗಾಯಕಿಯರು! ಪುಸ್ತಕದ ಕೊನೆಯಲ್ಲಿ ಹೀಗೊಂದು ಜಾಹೀರಾತು:

3 ವರ್ಷಗಳಿಂದಲೂ ನಿರೀಕ್ಷಿಸಿದ ಅಮೋಘವಾದ ಹೊಸ ರಿಕಾರ್ಡುಗಳು:

ಶ್ರೀ ನವಗ್ರಹ ಸ್ತೋತ್ರಂ 2 ರಿಕಾರ್ಡುಗಳು ಬೆಲೆ 4-8-0

ಶ್ರೀ ಜಗಜ್ಯೋತಿ ಬಸವೇಶ್ವರ ಜನನ 1 ರಿಕಾರ್ಡು ಬೆಲೆ 2-4-0

ಸುಭದ್ರಾ ಪರಿಣಯ 3 ರಿಕಾರ್ಡುಗಳು ಬೆಲೆ 6-12-0

ಈ ಪುಸ್ತಕವನ್ನು ಪ್ರಕಟಿಸಿದವರು ‘ಡಿ.ಎನ್.ಸೀತಾರಾಮ ಶೆಟ್ಟಿ, ಸೀತಾಫೋನ್ ಕಂಪೆನಿ, ಅವಿನ್ಯೂ ರೋಡು, ಬೆಂಗಳೂರು ಸಿಟಿ’. ಆ ಅಂಗಡಿಯಲ್ಲಿ ರಿಕಾರ್ಡುಗಳ ಜೊತೆಗೆ ಗ್ರಾಮಾಫೋನುಗಳು ಕೂಡ ಮಾರಾಟವಾಗುತ್ತಿದ್ದವು. ಆ ಕಾಲದಲ್ಲಿ ಅವುಗಳ ಬೆಲೆ ರೂ. 15ರಿಂದ ರೂ 150ರವರೆಗೂ ಇರುತ್ತಿತ್ತು.

ಗ್ರಾಮಾಫೋನನ್ನು ಆವಿಷ್ಕರಿಸಿದ ಪಾಶ್ಚಾತ್ಯರು ಅದು ಹೇಗೆ ನಮ್ಮದೇ ಸಂಗೀತವನ್ನು ಮುದ್ರಿಸಿ ನಮಗೇ ಮಾರತೊಡಗಿದರು?

ಇಂಗ್ಲೆಂಡಿನ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ‘ಇಂಡಿಯನ್ ಮ್ಯೂಸಿಕ್ ಅಂಡ್ ದಿ ವೆಸ್ಟ್’ ಈ ಬಗ್ಗೆ ಅಪರೂಪದ ಮಾಹಿತಿಯನ್ನು ಒಳಗೊಂಡಿರುವ ಗ್ರಂಥ. ಇದರಲ್ಲಿ ಲೇಖಕ ಗೆರ್‍ರಿ ಫ್ಯಾರೆಲ್, ವಸಾಹತು ಸಂದರ್ಭದಲ್ಲಿ ಭಾರತೀಯ ಸಂಗೀತಕ್ಕಿದ್ದ ಸ್ಥಾನ, ಆಗ ಪಾಶ್ಚಾತ್ಯ ಜನಪ್ರಿಯ ಹಾಡುಗಳಲ್ಲೂ ರಂಗಭೂಮಿಯ ಮೇಲೂ ಕಾಣಿಸುತ್ತಿದ್ದ ಭಾರತೀಯ ಪ್ರತಿಮೆಗಳು, ಭಾರತದಲ್ಲಿ ಗ್ರಾಮಾಫೋನಿನ ಪ್ರಾರಂಭದ ದಿನಗಳು ಇತ್ಯಾದಿ ವಿವರಗಳನ್ನು ದಾಖಲಿಸಿದ್ದಾನೆ. ಅವನು ಹೆಸರಿಸಿರುವ ಫ್ರೆಡೆರಿಕ್ ವಿಲಿಯಂ ಗೇಸ್‍ಬರ್ಗ್ (1873-1951) ಒಬ್ಬ ಅಮೆರಿಕನ್ ಸಂಗೀತಗಾರ. 1898ರಲ್ಲಿ ಇಂಗ್ಲೆಂಡಿನ ಗ್ರಾಮಾಫೋನ್ ಕಂಪೆನಿಯ ಮೊದಲ ರಿಕಾರ್ಡಿಂಗ್‌ ಎಂಜಿನಿಯರ್ ಆಗಿ ನೇಮಕಗೊಂಡ ಈತ ನಮ್ಮ ಶಾಸ್ತ್ರೀಯ ಸಂಗೀತವನ್ನು ಮೊತ್ತಮೊದಲು ಗ್ರಾಮಾಫೋನ್ ರಿಕಾರ್ಡುಗಳಿಗಾಗಿ ಅಳವಡಿಸಿದವನು; ಭಾರತದಲ್ಲಿ ಸಂಚರಿಸಿ ಹೊಸ ಹೊಸ ಸಂಗೀತಗಾರರನ್ನು ಹುಡುಕಿ ಹಾಡಿಸಿದವನು. ಹಾಗೆ ಅವನು ಹಾಡಿಸಿದ ಮೊದಲಿಗರಲ್ಲಿ ಬಹುಬೇಗ ವಿಖ್ಯಾತಳಾದವಳು ಗೋಹರ್ ಜಾನ್ (1873–1930).

ಅಲಹಾಬಾದಿನಲ್ಲಿ ಹುಟ್ಟಿದ ಗೋಹರ್‌ ಜಾನ್, ಪಟಿಯಾಲಾದ ಕಲು ಉಸ್ತಾದ್, ರಾಂಪುರದ ವಜೀರ್ ಖಾನ್, ಅಲಿ ಭಕ್ಷ್ ಮತ್ತು ಬೃಂದಾದಿನ್ ಮಹಾರಾಜ್ ಅವರಿಂದ ನೃತ್ಯ ಮತ್ತು ಸಂಗೀತವನ್ನು ಕಲಿತಳು. 1887ರಲ್ಲಿ ತನ್ನ 12ನೆಯ ವಯಸ್ಸಿನಲ್ಲಿ ದರ್ಭಾಂಗದ ಮಹಾರಾಜನ ಆಸ್ಥಾನದಲ್ಲಿ ಮೊತ್ತಮೊದಲು ಹಾಡಿ ನರ್ತಿಸಿದಳು. ಮೂರು ನಿಮಿಷ ಹಾಡಿ ಕಡೆಯಲ್ಲಿ ತನ್ನ ಹೆಸರನ್ನು ಘೋಷಿಸಿಕೊಳ್ಳುವುದಕ್ಕೆ ಆಕೆ ಗ್ರಾಮಾಫೋನ್ ಕಂಪನಿಯಿಂದ ಪಡೆದ ಹಣ ₹ 3,000. ಆ ಕಾಲದಲ್ಲದು ಬಹು ದೊಡ್ಡ ಮೊತ್ತ.

ಗ್ರಾಮಾಫೋನ್ ಕಂಪನಿ 1902ರಿಂದ 1920ರ ಅವಧಿಯಲ್ಲಿ ಗೋಹರ್‌ ಜಾನ್ ಒಬ್ಬಳಿಂದಲೇ 600ಕ್ಕೂ ಹೆಚ್ಚು ಹಾಡುಗಳನ್ನು ಹಾಡಿಸಿ ಮುದ್ರಿಸಿಕೊಂಡಿತೆಂದರೆ ಆಗ ಗ್ರಾಮಾಫೋನ್ ಹಾಡುಗಳಿಗೆ ಎಷ್ಟೆಲ್ಲ ಬೇಡಿಕೆಯಿತ್ತೆಂದು ಊಹಿಸಿಕೊಳ್ಳಬಹುದು. ಹಾಡಿದವರು ನಮ್ಮವರು, ಹಾಡುಗಳು ನಮ್ಮವು. ಅವುಗಳನ್ನು ಹುಲುಮಾನವರಷ್ಟೇ ಅಲ್ಲ, ನಮ್ಮ ದೇವತೆಯರೂ ಆಲಿಸುತ್ತಾರೆಂದರು ಗ್ರಾಮಾಫೋನ್ ಕಂಪೆನಿಯವರು. ಉದಾಹರಣೆಗೆ, 1906ರ ಜಾಹೀರಾತಿನಲ್ಲಿರುವ ನಮ್ಮ ಸರಸ್ವತಿಯನ್ನು ನೋಡಿ. ಜ್ಞಾನ, ವಿವೇಕ, ವಿದ್ಯೆ, ವಾಕ್ಕು, ವಿಜ್ಞಾನ, ಸಂಗೀತ ಮೊದಲಾದವುಗಳ ಅಧಿದೇವತೆಯೆನಿಸಿದ ಸರಸ್ವತಿ ಸಂಸ್ಕೃತ ಭಾಷೆಯನ್ನು, ದೇವನಾಗರಿ ವರ್ಣಮಾಲೆಯನ್ನು ಕಂಡುಹಿಡಿದವಳು.

ಈ ಜಾಹೀರಾತಿನಲ್ಲಿರುವ ಸರಸ್ವತಿಯೂ, ರವಿವರ್ಮ ಚಿತ್ರಿಸಿದಂತೆಯೇ, ಸರೋವರದ ನಡುವೆ ಒಂದು ತಾವರೆಯ ಮೇಲೆ ಕುಳಿತಿದ್ದಾಳೆ. ಅವಳ ತೊಡೆಯ ಮೇಲೊಂದು ವೀಣೆಯಿದೆ. ಬದಿಯಲ್ಲಿರುವ ಇನ್ನೊಂದು ಬೃಹತ್ ತಾವರೆ ಹೂವಿನ ಮೇಲೆ ವೀಣೆಯ ಇನ್ನೊಂದು ಬುರುಡೆಗೆ ಬದಲಾಗಿ ಗ್ರಾಮಾಫೋನ್ ಪೆಟ್ಟಿಗೆ ಇದೆ! ಆಕೆಯ ಎಡಗೈಯ ಬೆರಳುಗಳು ವೀಣೆಯ ತಂತಿಗಳನ್ನು ಮೀಟುತ್ತಿದ್ದರೆ ಬಲಗೈಯ ಬೆರಳುಗಳು ಗ್ರಾಮಾಫೋನ್ ರಿಕಾರ್ಡಿಗೆ ಮುಳ್ಳು ಹಚ್ಚುತ್ತಿವೆ. ಹಿನ್ನೆಲೆ ಮುನ್ನೆಲೆಗಳಲ್ಲಿರುವ ಮೀನು, ಮೊಸಳೆ, ಕಪ್ಪೆ, ಆಮೆ, ಸರ್ಪ, ಹಂಸ ಎಲ್ಲವೂ ಗ್ರಾಮಾಫೋನ್ ಹೊಮ್ಮಿಸುತ್ತಿರುವ ಸಂಗೀತವನ್ನು ಆಲಿಸುತ್ತಿವೆ.

ಈಗ 1907ರಲ್ಲಿ ಪ್ರಚಲಿತವಾಗಿದ್ದ ಇನ್ನೊಂದು ಜಾಹೀರಾತು: ಇದರಲ್ಲಿರುವವಳು ದುರ್ಗಾದೇವಿ. ಆಕೆ ದುಷ್ಟಶಕ್ತಿಗಳನ್ನು ಸಂಹರಿಸುವ ಕಾಳಿ; ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ನಮ್ಮ ರಾಷ್ಟ್ರೀಯತೆಗೊಂದು ಧಾರ್ಮಿಕ ಸಂಕೇತವಾಗಿದ್ದವಳು. ಆದರೆ ಈ ಜಾಹೀರಾತಿನಲ್ಲಿ ದುರ್ಗೆಯ ಪಕ್ಕದಲ್ಲೇ ಒಂದು ಸಣ್ಣಬಂಡೆಯ ಮೇಲೆ ಗ್ರಾಮಾಫೋನ್ ಯಂತ್ರವಿದೆ. ದುರ್ಗೆಯನ್ನು ಹುಲಿ, ಸಿಂಹ, ಹೆಬ್ಬಾವು ಮುಂತಾದ ವನ್ಯಮೃಗಗಳು ಸುತ್ತುವರಿದಿದ್ದು ಅವು ತಮ್ಮ ರೌದ್ರ ಸ್ವರೂಪ, ಸ್ವಭಾವಗಳನ್ನು ಮರೆತು ಸಂಗೀತವನ್ನು ಕೇಳುವುದರಲ್ಲಿ ತಲ್ಲೀನವಾಗಿವೆ. ಇಂಥ ಅಸಾಧ್ಯ ಕಲ್ಪನೆಯನ್ನು ಚಿತ್ರರೂಪಕ್ಕಿಳಿಸಿದ ಕಲಾವಿದರ ಹೆಸರು ಜಿ.ಎನ್.ಮುಖರ್ಜಿ.

ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದ ಕಾಲದಲ್ಲಿ ದೊಡ್ಡ ಕುಳವೆಂದು ಹೆಸರಾಗಿದ್ದ ಜಮೀನ್ದಾರರೊಬ್ಬರ ಮನೆ ದೇವನಹಳ್ಳಿಯ ಕೋಟೆಯೊಳಗಿತ್ತು. ಒಂದೊಂದು ದಿನ ಸಂಜೆಯ ಹೊತ್ತು ಆ ಮನೆಯ ಆಳು ಮನೆಯೊಳಗಿಂದ ಹೊರ ಜಗಲಿಯ ಮೇಲೆ ಒಂದು ಗ್ರಾಮಾಫೋನ್ ತಂದಿಡುತ್ತಿದ್ದ. ಆರಾಮ ಕುರ್ಚಿಯಲ್ಲಿನ ಜಮೀನ್ದಾರರು ಮೂರು ಮೂರು ನಿಮಿಷಕ್ಕೊಮ್ಮೆ ಗ್ರಾಮಾಫೋನಿಗೆ ರಿಕಾರ್ಡು ಹಚ್ಚುವುದನ್ನೂ, ಅದರಿಂದ ಹಾಡುಗಳು ಹೊಮ್ಮುವುದನ್ನೂ ನೋಡುವುದು ಕೇಳುವುದು ಎಂದರೆ ನಮಗೆ ಎಲ್ಲಿಲ್ಲದ ಹಿಗ್ಗು.

ನಾನು ಮೊದಲ ಬಾರಿಗೆ ಗ್ರಾಮಾಫೋನ್ ರಿಕಾರ್ಡನ್ನು ಕೈಯಿಂದ ಮುಟ್ಟಿನೋಡಿದ್ದು 1976ರಲ್ಲಿ. ಆ ವರ್ಷ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸುಮಾರು ಎರಡು ತಿಂಗಳು ಕೆಲಸಮಾಡಿದೆ, ಪಂಡಿತ್ ವಸಂತ ಕವಲಿ ಅವರಿಗೆ ಸಹಾಯಕನಾಗಿ. ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದ ಅವರು ಹಿಂದೂಸ್ತಾನಿ ಸಂಗೀತಗಾರರು; ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ ಶಿಷ್ಯರಲ್ಲೊಬ್ಬರು. ಅದೆಲ್ಲಿಂದಲೋ ಅವರು ಮೂರು ನಿಮಿಷದ ಅವಧಿಯ ನೂರಾರು ರಿಕಾರ್ಡುಗಳನ್ನು ತಂದಿದ್ದರು. ಅವುಗಳನ್ನು ಗ್ರಾಮಾಫೋನಿಗೆ ಹಚ್ಚಿ, ಅವುಗಳಿಂದ ಹೊಮ್ಮಿದ ಹಾಡುಗಳನ್ನು ಮ್ಯಾಗ್ನೆಟಿಕ್ ಟೇಪ್‍ಗೆ ವರ್ಗಾಯಿಸುವ ಕೆಲಸ ನನಗೆ. ನಾನು ಇಂಥ ರಿಕಾರ್ಡುಗಳನ್ನು ಗ್ರಾಮಾಫೋನಿಗೆ ಹಚ್ಚಿ ಕೊಟ್ಟೂರಪ್ಪ, ಗುಬ್ಬಿ ವೀರಣ್ಣ, ಮಹಮದ್ ಪೀರ್, ಮಳವಳ್ಳಿ ಸುಂದರಮ್ಮ ಮೊದಲಾದ ರಂಗ ನಟನಟಿಯರ ಹಾಗೂ ಅಬ್ದುಲ್ ಕರೀಂಖಾನ್, ಸವಾಯ್ ಗಂಧರ್ವ, ಬಿಡಾರಂ ಕೃಷ್ಣಪ್ಪ, ಅರಿಯಕುಡಿ ರಾಮಾನುಜಯ್ಯಂಗಾರ್ ಮೊದಲಾದ ಸಂಗೀತಗಾರರ ಹಾಡುಗಳನ್ನು ಕೇಳುತ್ತಾ ಕಳೆದ ಶತಮಾನದ ಮೊದಲ ದಶಕಗಳಿಗೆ ಹಿಂತಿರುಗಿಬಿಟ್ಟದ್ದುಂಟು. ಆ ದಶಕಗಳಲ್ಲಿ ಜನರು ಹೇಗೆಲ್ಲ ಗ್ರಾಮಾಫೋನುಗಳಿಗೆ ಮುಗಿಬೀಳುತ್ತಿದ್ದರೆಂಬುದನ್ನು ಗ್ರಾಮಾಫೋನ್ ಕಂಪೆನಿಯ ಕೆಲವು ಜಾಹೀರಾತುಗಳೇ ಸ್ಪಷ್ಟಪಡಿಸುವಂತಿವೆ. ಉದಾಹರಣೆಗೆ 1905ರ, ‘ದಿ ಗ್ರಾಮಾಫೋನ್ ಇನ್ ದಿ ಕೋರ್ಟ್ ಆಫ್ ಜಹಾಂಗೀರ್ ದಿ ಮ್ಯಾಗ್ನಿಫಿಸೆಂಟ್’ ಎಂಬ ಶೀರ್ಷಿಕೆಯುಳ್ಳ ಜಾಹೀರಾತು. ಮೊಘಲ್ ದೊರೆ ಜಹಾಂಗೀರ್ 1605ರಿಂದ 1627ರವರೆಗೆ ಆಳಿದವನು.

ಆದರೆ ಮೊಘಲರ ಆಸ್ಥಾನ ತನ್ನೆಲ್ಲ ವೈಭವದಿಂದ ರಾರಾಜಿಸುತ್ತಿರುವ ಚಿತ್ರಣದ ಈ ಜಾಹೀರಾತಿನಲ್ಲಿ ದರ್ಬಾರಿನಲ್ಲಿರುವ ಎಲ್ಲರನ್ನೂ ಪರವಶಗೊಳಿಸಿಬಿಟ್ಟಿದೆ ಒಂದು ಗ್ರಾಮಾಫೋನ್! 1902ರಲ್ಲಿ ಕಲ್ಕತ್ತಾದಲ್ಲಿ ಗ್ರಾಮಾಫೋನ್ ಕಂಪನಿಯ ಏಜೆಂಟಾಗಿದ್ದ ಜಾನ್ ವ್ಯಾಟ್ಸನ್ ಹಾಡ್ ತಾನು ದೆಹಲಿ ದರ್ಬಾರಿನಲ್ಲಿ ಗ್ರಾಮಾಫೋನುಗಳನ್ನು ಪ್ರದರ್ಶಿಸಬಯಸುವುದಾಗಿ ಬರೆದಿದ್ದ, ನಿಜ. ಆದರೆ ಹದಿನೇಳನೆ ಶತಮಾನದಲ್ಲೇ (ಗ್ರಾಮಾಫೋನ್ ಇನ್ನೂ ಆವಿಷ್ಕಾರವಾಗದಿದ್ದ ಕಾಲದಲ್ಲೇ) ದೊರೆ ಜಹಾಂಗೀರನನ್ನು ಸಂತುಷ್ಟಗೊಳಿಸುವುದಕ್ಕಾಗಿ ಅವನಿಗೆ ಆ ಯಂತ್ರವನ್ನೊಂದು ಕೊಡುಗೆಯಾಗಿ ಕೊಡುವುದೆಂದರೆ! ಚಿತ್ರದಲ್ಲಿ ಗ್ರಾಮಾಫೋನಿನ ಪಕ್ಕ ನಿಂತಿರುವವನು ವಿಧೇಯನಾದ ಸೇವಕನೇನಲ್ಲ. ಅವನು
ಶಸ್ತ್ರಸಜ್ಜಿತನಾದ ಕಾವಲುಗಾರ. ಜಹಾಂಗೀರನ ಕಾಲದಲ್ಲಿ ಗ್ರಾಮಾಫೋನುಗಳಿದ್ದಿದ್ದರೆ ಆ ದೊರೆಯೂ ಒಂದು ಗ್ರಾಮಾಫೋನಿಗಾಗಿ ಹಂಬಲಿಸುತ್ತಿದ್ದ ಎಂಬುದೇ ಈ ಜಾಹೀರಾತಿನ ಸಂದೇಶ. ಇದೆಲ್ಲ ಹಳೆಯ ಕತೆ. ಈಗ ಗ್ರಾಮಾಫೋನು ಕಣ್ಣಿಗೆ ಬೀಳುವುದೇ ಅಪರೂಪ. ಕಣ್ಣಿಗೆ
ಬಿದ್ದರೂ ಅದು ಮ್ಯೂಸಿಯಮ್ಮುಗಳಲ್ಲಿ ಅಥವಾ ಗುಜರಿ ಅಂಗಡಿಗಳಲ್ಲಿ ಮಾತ್ರ. ಅಥವಾ ಶ್ರೀಮಂತರು ಕೆಲವರ ಭವ್ಯ ಭವನಗಳ ಪಡಸಾಲೆಗಳಲ್ಲಿ ಅಲಂಕರಣ ವಸ್ತುವಾಗಿ ಕೂತಿರಬಹುದೋ ಏನೊ. ಹಿಂದೊಂದು ಕಾಲದಲ್ಲಿ ಹೇಳಿದ್ದನ್ನೇ ಹೇಳುವ ಭಾಷಣಕಾರರಿಗೆ ‘ಪ್ಲೇಟು
ಹಾಕಿಬಿಟ್ಟರು’ ಎನ್ನುತ್ತಿದ್ದರು. ಈಗ, ಧ್ವನಿತಟ್ಟೆಯಲ್ಲಿ ಹಾಡಿನ ಜಾಡು ಕೊರೆದಿದೆ/ ಕಂಪಿಸುವ ಮುಳ್ಳು/ತಟ್ಟೆ ತಿರುಗಿದಂತೆಲ್ಲ ಅದೇ ಜಾಡುಗಳಲ್ಲಿ ಮುಳ್ಳು ಚಲಿಸಿ/ ಎದೆ ಗೀರಿ ಸೀಳಿ ಹೊಮ್ಮುವ ಹಾಡು... ಮುಳ್ಳು, ಕಂಪನ ಮತ್ತು ಎದೆಯ ಗಾಯವಿರದೆ/ ಹಾಡು ಹೊಮ್ಮೀತು ಹೇಗೆ?
ಎಂಬ ಗೋವಿಂದ ಹೆಗಡೆಯವರ ಕವನವನ್ನಾಗಲೀ, ರಾಮಚಂದ್ರ ಶರ್ಮರ ‘ಮುಳ್ಳು ಜಾಡಿಗೆ ಸಿಕ್ಕಿತ್ತು’ ಎಂಬ ಕತೆಯಲ್ಲಿರುವ ‘ಗ್ರಾಮಾಫೋನ್ ತಟ್ಟೆಯ ಮೇಲೆ ದಾರಿ ಮರೆತ ಮುಳ್ಳು ತುಳಿದ ದಾರಿಯನ್ನೇ ತುಳಿಯುತ್ತಿತ್ತು’ ಎಂಬ ವಾಕ್ಯವನ್ನಾಗಲೀ ಓದಿದಾಗ ‘ಪ್ಲೇಟು ಹಳೆಯದೇ. ಆದರೆ ಸ್ವಲ್ಪ ಒರೆಸಿ ಹಾಕಬೇಕಿತ್ತು’ ಎನ್ನಿಸುವುದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT