ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀವಿಂಗ್ ವಾಯ್ಸಸ್‌’.. ನಾದ ನೇಯ್ಗೆಯ ಮಾಯಾಜಾಲ: ಪ್ರತಿಭಾ ನಂದಕುಮಾರ್ ಲೇಖನ

Last Updated 15 ಅಕ್ಟೋಬರ್ 2022, 23:45 IST
ಅಕ್ಷರ ಗಾತ್ರ

‘ಹಲವು ವಿಭಿನ್ನ ಧ್ವನಿಗಳನ್ನು ಹೆಣೆಯುವುದೇ ‘ವೀವಿಂಗ್ ವಾಯ್ಸಸ್‌’ನ ಮೂಲ ಪರಿಕಲ್ಪನೆ. ಈ ಕಲಾವಿದರೆಲ್ಲರೂ ತಮ್ಮ ಧ್ವನಿಯೊಂದಿಗೆ ನಾದದ ಪ್ರಯಾಣ ಮಾಡುತ್ತಾ ಬಂದಿದ್ದಾರೆ. ಧ್ವನಿಗಳನ್ನು ಹೆಣೆಯುವ ಪ್ರಕ್ರಿಯೆ ಈ ಷೋನಲ್ಲಿ ಹಲವು ಮಟ್ಟಗಳಲ್ಲಿ ನಡೆಯುತ್ತದೆ. ಇಲ್ಲಿ ವಯಲಿನ್ ಕೂಡಾ ಒಂದು ಧ್ವನಿಯೇ. ತಬಲಾ, ಕೊಳಲುಗಳೂ ಧ್ವನಿಗಳೇ. ಹೆಣಿಗೆ ಎಂದರೆ ಎಲ್ಲರೂ ತಮ್ಮ ವೈಯಕ್ತಿಕ ಧ್ವನಿಗಳನ್ನು ಉಳಿಸಿಕೊಳ್ಳುತ್ತಲೇ ಇತರ ಧ್ವನಿಗಳೊಂದಿಗೆ ಸೇರಿ ಒಂದು ಕಲೆಕ್ಟಿವ್ ಧ್ವನಿಯಾಗಿ ಹೊಮ್ಮುತ್ತಾರೆ. ಹಾಗಂತ ಹೇಳಿದರೆ ನಿಮಗೆ ಏನಾದರೂ ಅರ್ಥವಾಗುತ್ತಿದೆಯೇ?’ ಎಂದು ವಿವರಿಸಲು ಯತ್ನಿಸಿದರು ಕಲಾವಿದ ರಾಯ್ ಸ್ಟೆನ್ ಏಬೆಲ್.

ರಾಯ್ ಸ್ಟೆನ್ ಅವರ ಹೆಚ್ಚಿನ ಪ್ರಯೋಗಗಳು ಹೀಗೆಯೇ - ಪದಗಳಲ್ಲಿ ವರ್ಣಿಸುವುದು ಕಷ್ಟಸಾಧ್ಯ. ಆದರೆ, ಅನುಭವದಲ್ಲಿ ಮಾಂತ್ರಿಕ ಜಾಲ. ‘ವೀವಿಂಗ್ ವಾಯ್ಸಸ್’ ಅವರ ಹೊಸ ಪ್ರಯೋಗದಲ್ಲಿ ಸಂಗೀತ, ನಾಟಕ, ದೃಶ್ಯ ಸಂಭ್ರಮ ಎಲ್ಲವೂ ಮೇಳೈಸಿ ಅಭೂತಪೂರ್ವ ಅನುಭವ ನೀಡುತ್ತದೆ.

ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದು, ನಾಟಕ ಕ್ಷೇತ್ರದಲ್ಲಿ ಧ್ರುವತಾರೆ ಎಂದೇ ಜನಪ್ರಿಯರಾದ ರಾಯ್ ಸ್ಟೆನ್ ಏಬೆಲ್ ಮತ್ತು ಬೆಂಗಳೂರಿನ ಸಂಬಂಧ ನಿಕಟವಾದುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಅವರ ‘ಫ್ಲವರ್ಸ್’, ‘ಒಥೆಲೋ ಇನ್ ಬ್ಲ್ಯಾಕ್ ಅಂಡ್ ವೈಟ್’, ‘ಎ ಹಂಡ್ರೆಡ್ ಸ್ನೇಕ್ ಚಾರ್ಮರ್ಸ್’ ಮತ್ತು ‘ಮಾಂಗಣಿಯಾರ್‌ ಸೆಡಕ್ಷನ್’ ನಾಟಕಗಳು ಜೊತೆಗೆ ‘ಕಿಚನ್’ ‘ಮಾಂಗಣಿಯಾರ್‌ ಕ್ಲಾಸ್ ರೂಮ್’ ಮುಂತಾದ ಪ್ರಯೋಗಗಳು ಬೆಂಗಳೂರಿನ ರಸಿಕರ ಮನಸೆಳೆದದ್ದು ಹಳೆಯ ಮಾತು. ಈಗ ರಾಯ್ ಮತ್ತೆ ಒಂದು ಹೊಸಾ ಪ್ರಯೋಗದೊಂದಿಗೆ ಬರುತ್ತಿದ್ದಾರೆ. ‘ವೀವಿಂಗ್ ವಾಯ್ಸಸ್’ - ಧ್ವನಿಗಳನ್ನು ಹೆಣೆಯುವುದು ಒಂದು ವಿಶಿಷ್ಟ ಪರಿಕಲ್ಪನೆ. ದೇಶದ ಅತ್ಯುನ್ನತ ಕಲಾವಿದರನ್ನು ಜೊತೆಗೂಡಿಸಿಕೊಂಡು ಧ್ವನಿಯ ಯಾನದಲ್ಲಿ ಒಂದು ಮಾಂತ್ರಿಕ ಅನುಭವ ನೀಡಲು ಸಿದ್ಧರಾಗಿದ್ದಾರೆ.

ಭೂಮಿಜಾ ಸಂಸ್ಥೆ ಏರ್ಪಡಿಸಿರುವ ಈ ವಿಶೇಷ ಕಾರ್ಯಾಕ್ರಮದಲ್ಲಿ ರಾಯ್ ಸ್ಟೆನ್ ಜೊತೆ, ವಿಭಿನ್ನ ಸಂಗೀತ ಶೈಲಿಗಳಲ್ಲಿ ವಿಶ್ವವಿಖ್ಯಾತ ಕಲಾವಿದರಾದ ಬಾಂಬೆ ಜಯಶ್ರೀ, ಉದಯ್ ಭವಲ್ಕರ್, ಎಂ.ಡಿ. ಪಲ್ಲವಿ, ದಿಯು ಖಾನ್ ಮಾಂಗಣಿಯಾರ್, ರಸಿಕಾ ಶೇಖರ್, ಅಪೂರ್ವ ಕೃಷ್ಣ, ಸುಮೇಶ್ ನಾರಾಯಣನ್ ಮತ್ತು ಎಂ.ಟಿ. ಆದಿತ್ಯ ಶ್ರೀನಿವಾಸನ್ ಇದ್ದಾರೆ. ಧ್ವನಿ ವಿನ್ಯಾಸ ಆಸ್ಕರ್ ಪ್ರಶಸ್ತಿ ಪುರಸ್ಕೃತ ರಸೂಲ್ ಪೂಕುಟ್ಟಿ ಅವರದು. ಪೂಕುಟ್ಟಿ ಅವರ ಪ್ರಕಾರ ‘ಧ್ವನಿಯನ್ನು ಹೆಚ್ಚಿನ ವೇಳೆ ಶಬ್ದ, ಗಲಾಟೆ ಎಂದು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ಈ ಪ್ರಯೋಗದಲ್ಲಿ ಈ ಸಾಮೂಹಿಕ ಧ್ವನಿಗಳ ನಡುವೆಯೇ ಹುದುಗಿಕೊಂಡಿರುವ ನನ್ನ ಭಾವನಾತ್ಮಕ ಅಭಿವ್ಯಕ್ತಿಯನ್ನು ಆಲಿಸುವ ‘ಆಯ್ಕೆಯ ಆಲಿಕೆ’ಯನ್ನು (ಸೆಲೆಕ್ಟಿವ್ ಲಿಸನಿಂಗ್) ನಾನು ಆರಿಸಿಕೊಂಡಿದ್ದೇನೆ’.

ಹಾಡುಗಾರಿಕೆ ಮಾತ್ರವಲ್ಲದೇ ದೃಶ್ಯ ವಾದ್ಯ ವೈಭವವೂ ಇದರಲ್ಲಿ ಸೇರಿಕೊಂಡಿದೆ. ವಿನ್ಯಾಸ ಅಮರದೀಪ್ ಬೆಹಲ್, ವಸ್ತ್ರಾಲಂಕಾರ ಸಾರಾ ಇಪೆನ್. ನಿರ್ದೇಶಕ ಕೆ.ಎಂ. ಚೈತನ್ಯ ಹಿನ್ನೆಲೆಯ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಧ್ವನಿಯನ್ನು ಹೆಣೆಯುವುದು ಅಂದರೇನು? ಅದು ಪರಸ್ಪರ ಹೇಗೆ ಅನುಸಂಧಾನಗೊಳ್ಳುತ್ತದೆ? ಇದು ಎಂದಿನಂತೆ ಜುಗಲ್ ಬಂದಿಯಾಗಿಬಿಡುತ್ತದೆಯೇ? ಅಥವಾ ಕಲಾವಿದರು ತಮ್ಮ ತಮ್ಮ ಸಂಗೀತವನ್ನು ಹರಿಯಬಿಡುತ್ತಾ ಅವುಗಳು ಸಮಾನಾಂತರದಲ್ಲೇ ಸಾಗುವಂತೆ ಮಾಡುತ್ತಾರೆಯೇ? ಕೊನೆಗೆ ಅದರ ನಿರೀಕ್ಷಿತ ಫಲಿತಾಂಶ ಏನು ಇತ್ಯಾದಿ ಪ್ರಶ್ನೆಗಳನ್ನು ರಾಯ್ ಸ್ಟೆನ್ ಅವರ ಮುಂದಿಟ್ಟೆ. ಉತ್ಕೃಷ್ಟ ಕಲಾವಿದನಿಗೆ ತನ್ನ ಕಲೆಯನ್ನು ವಿವರಿಸಬೇಕಾದ ಅನಿವಾರ್ಯತೆಒದಗಿದಾಗ ಉಂಟಾಗುವ ಮುಜುಗರದಂತಾಗಿ ಜೋರಾಗಿ ನಕ್ಕು ಅವರು ಅರ್ಥ ಮಾಡಿಸಲು ಯತ್ನಿಸಿದರು.

‘ಈ ಧ್ವನಿ ವಿನ್ಯಾಸ ದ್ರುಪದ್ ಹಾಡುಗಾರಿಕೆಯ ರಚನೆಯ ಬಂಧವನ್ನು ಅನುಸರಿಸಿದೆ. ಅಥವಾ ಪಾಶ್ಚಾತ್ಯ ಆರ್ಕೆಸ್ಟ್ರಾದ ರಚನೆ ಅನ್ನಿ. ಇಡೀ ಬ್ರಹ್ಮಾಂಡವೇ ನಿಶ್ಚಿತ ರಚನೆಯ ಲಯವನ್ನು ಹೊಂದಿದೆ. ಈ ಪ್ರಖ್ಯಾತ ಕಲಾವಿದರು ಈ ಬಂಧದೊಳಗೆ ತೊಡಗಿಸಿಕೊಂಡೇ ತಮ್ಮ ಸಂಗೀತ ಯಾನವನ್ನು ಅನಾವರಣಗೊಳಿಸುತ್ತಾರೆ. ಇವೆಲ್ಲವೂ ಪ್ರಧಾನವಾಗಿ ಬೇಹಾಗ್, ಮೇಘ್ ಮತ್ತು ಖಾಮಾಚ್ ರಾಗಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಾ, ಹೆಣೆಯುತ್ತಾ ಬೇರೊಂದು ಜಗತ್ತನ್ನು ಸೃಷ್ಟಿಸುತ್ತವೆ. ಅದರ ಫಲಿತಾಂಶ ಪೂರ್ವ ನಿರ್ಧಾರಿತವಲ್ಲ. ಏನು ಘಟಿಸಬೇಕೋ ಅದು ಘಟಿಸುತ್ತದೆ!’ ಎನ್ನುತ್ತಾರೆ ರಾಯ್ ಸ್ಟೆನ್.

ಇದೊಂದು ಟಿಪಿಕಲ್ ರಾಯ್ ಸ್ಟೆನ್ ಹೇಳಿಕೆ. ಅಭಿನೇತರು, ಸಂಗೀತಗಾರರು, ಸರ್ಕಸ್ಸಿನ ಆಕ್ರೋಬ್ಯಾಟ್‌ಗಳು, ಜಗ್ಲರ್‌ಗಳು, ಐಂದ್ರಜಾಲದವರು, ಗೊಂಬೆಯಾಟದವರು ಹೀಗೆ ಹಲವು ಹತ್ತು ವಿಶಿಷ್ಟ ರೀತಿಯ ಜನರ ಜೊತೆ ಕೆಲಸ ಮಾಡುವ ರಾಯ್ ಸದಾ ಹೊಸತರ ಹುಡುಕಾಟದಲ್ಲಿರುತ್ತಾರೆ. ಈ ಬಾರಿ ಧ್ವನಿಗಳನ್ನು ಹೆಣೆಯುವ ಮಾಂತ್ರಿಕತೆಗೆ ಕೈ ಹಾಕಿದ್ದಾರೆ. ಪ್ರತಿಯೊಬ್ಬ ಕಲಾವಿದರ ಹಿಂದೆ ಎಲ್‌ಇಡಿ ಸ್ಕ್ರೀನ್ ಇದ್ದು ಅದರಲ್ಲಿ ಆಯಾ ಕಲಾವಿದರ ವೈಯಕ್ತಿಕ ಸಂಗೀತ ಯಾನದ ಪರಿಚಯವಾಗುತ್ತದೆ. ಜೊತೆಗೇ ಮತ್ತೊಂದು ಭಾವನಾತ್ಮಕ ಟ್ರ್ಯಾಕ್ ಕೂಡಾ ಇದ್ದು, ಅವರ ಬದುಕಿನ ಹಲವು ಹಂತಗಳ ಹುಡುಕಾಟ ಹೋರಾಟಗಳನ್ನು ಪರಿಚಯಿಸುತ್ತದೆ.

ರಾಯ್ ಸ್ಟೆನ್‌ಗೆ ಜುಗಲ್ ಬಂದಿಯಲ್ಲಿ ನಂಬಿಕೆ ಇಲ್ಲ. ‘ಧ್ವನಿಗಳು ಪರಸ್ಪರ ಅನುರಣನಗೊಳ್ಳುತ್ತವೆ – ರೆಸೊನೆನ್ಸ್ - ಆಗುತ್ತದೆ ಅನ್ನಿ. ವ್ಯೋಮದಲ್ಲಿ ಶಬ್ದಗಳು ಹೀಗೆ ಸದಾ ಅನುರಣನಗೊಳ್ಳುತ್ತಿರುತ್ತವೆ. ಅದು ಸದಾ ನಮ್ಮ ಮನದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ನಮ್ಮ ಪ್ರಯೋಗದಲ್ಲಿ ಏನಾಗುತ್ತದೆ, ಹೇಗಾಗುತ್ತದೆ ಅನ್ನುವುದು ನನಗೆ ಖಚಿತವಾಗಿ ಗೊತ್ತಿಲ್ಲ. ಅದನ್ನು ಪ್ರಯತ್ನಪೂರ್ವಕವಾಗಿ ಸಾಧಿಸಲು ನಾವು ಯತ್ನಿಸುವುದಿಲ್ಲ. ಅದರ ಕಡೆಗೆ ಸಾಗಲು ಬಯಸುತ್ತೇವೆ, ನಿಜ. ಹೀಗೆಲ್ಲಾ ಹೇಳಿ ನಾನು ಇದನ್ನು ಬಹಳ ಬೌದ್ಧಿಕಗೊಳಿಸುತ್ತಿದ್ದೇನೆ ಅಂದುಕೊಳ್ಳಬೇಡಿ. ಅದೊಂದು ಉತ್ತರವೂ ಅಲ್ಲ, ಅಥವಾ ಹೇಳಿಕೆಯೂ ಅಲ್ಲ. ಇದು ಪ್ರಧಾನವಾಗಿ ಅನುಭವಕ್ಕೆ ಸಂಬಂಧಪಟ್ಟ ಸಂಗತಿ. ಆ ನಾದದ ಮಾಂತ್ರಿಕತೆಗೆ ಒಡ್ಡಿಕೊಳ್ಳಬೇಕಾದರೆ ವೀವಿಂಗ್ ವಾಯ್ಸಸ್‌ನ ಸಾಕ್ಷಾತ್ ಅನುಭವ ಆಗಬೇಕು ಎನ್ನುವುದು ಅವರ ಅಭಿಪ್ರಾಯ.

‘ವೀವಿಂಗ್ ವಾಯ್ಸಸ್’ ಇದೇ 21 ಮತ್ತು 22ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ದೇಶದಾದ್ಯಂತ ನೇಕಾರರ ಜೊತೆ ತೊಡಗಿಕೊಂಡಿರುವ ತನೈರ ಸಂಸ್ಥೆಯ ಸಹಯೋಗವಿದೆ.

ಶಬ್ದನಾದ

ಕನ್ನಡದಲ್ಲಿ ‘ಶಬ್ದ’ ಎನ್ನುವುದೊಂದು ಅನುಭವ. ಬಸವಣ್ಣ ‘ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು’ ಎನ್ನುತ್ತಾನೆ. ಅಲ್ಲಮಪ್ರಭು ‘ಶಬ್ದ ಸೂತಕವೆಂಬರು ಶಬ್ದಕ್ಕೆ ಸೂತಕವುಂಟೇ’ ಎಂದು ಪ್ರಶ್ನಿಸುತ್ತಾನೆ.

ಇಂಗ್ಲಿಷಿನ ‘ವಾಯ್ಸ್’ ಎನ್ನುವ ಪದಕ್ಕೆ ಕನ್ನಡದಲ್ಲಿ ಧ್ವನಿ, ಶಬ್ದ, ಸದ್ದು, ಉಚ್ಚಾರ ಇತ್ಯಾದಿ ಸಂವಾದಿ ಪದಗಳನ್ನು ಬಳಸುತ್ತೇವೆ. ಆದರೆ, ‘ಧ್ವನಿ’ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ. ಆನಂದವರ್ಧನ ‘ಧ್ವನ್ಯಾಲೋಕ’ದಲ್ಲಿ ಧ್ವನಿಯೇ ಕಾವ್ಯದ ಆತ್ಮ ಎಂದು ಹೇಳಿದ್ದಾನೆ. ‘ಬಳಕೆಯ ವ್ಯವಹಾರದಲ್ಲಿ ಕಾಣದ, ಶಾಸ್ತ್ರದ ಪಂಕ್ತಿಗಳಲ್ಲಿ ದೊರೆಯದ, ಆದರೆ ಉತ್ತಮ ಕಾವ್ಯದಲ್ಲಿ ತಪ್ಪದೆ ಇದ್ದೇ ತೀರುವ ಅರ್ಥವಾವುದೋ ಅದೇ ಕಾವ್ಯದ ತಿರುಳು’ ಎಂದು ವ್ಯಾಖ್ಯಾನಿಸಿ ಅದಕ್ಕೆ ‘ಧ್ವನಿ’ ಎನ್ನುವ ಅಪೂರ್ವ, ಅನ್ವರ್ಥಕ ಹೆಸರನ್ನೂ ಕೊಟ್ಟ. ಇದು ಕಾವ್ಯದಲ್ಲಿ ಮಾತ್ರವಲ್ಲದೆ ಸಂಗೀತದಲ್ಲೂ ಕಾರ್ಯಾಚರಿಸುತ್ತದೆ.

ಪೂರ್ವದಲ್ಲಿ ‘ವಾಕ್’ ಎನ್ನುವ ಪರಿಕಲ್ಪನೆ ಬಳಕೆಯಲ್ಲಿತ್ತು. ‘ವಾಕ್’ ಅಂದರೆ ‘ಮಾತು’ ಎನ್ನುವ ಅರ್ಥವೂ ಇದೆ. ಋಗ್ವೇದದ ಹತ್ತನೆಯ ಮಂಡಲದಲ್ಲಿನ 125ನೇ ಸೂಕ್ತ 'ವಾಕ್ ಸೂಕ್ತ'ದಲ್ಲಿ, ವಾಕ್ ಜಡಕ್ಕೆ ಚಲನೆಯನ್ನು ಕೊಡುವ ಸೃಷ್ಟಿಯ ಚಲನಶೀಲತೆಯ ಸ್ವರೂಪಿಣಿ, ಅಂತಃಸತ್ವ ಎಂದು ಹೇಳಿದೆ. ಹಾಗೆಯೇ ಪ್ರಣವ-ಓಂಕಾರ–ಮೂಲಾಕ್ಷರ-ಬೀಜಾಕ್ಷರ ಮಂತ್ರವ್ಯೋಮದಲ್ಲಿ ಹುಟ್ಟಿದ್ದು ಎನ್ನುತ್ತಾರೆ. ಇದರಿಂದಲೇ ಮೊದಲು ‘ವರ್ಣ’ಗಳು ಹುಟ್ಟಿದ್ದು. ನಂತರ ಮಾತು, ಧ್ವನಿ, ಉಚ್ಚಾರ. ಕೊನೆಗೆ ಸಂಗೀತ ಒಂದು ಪರಾಕಾಷ್ಠೆ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT