ಮಂಗಳವಾರ, ಸೆಪ್ಟೆಂಬರ್ 28, 2021
22 °C

ಕೇಳ್ರಿ... ಸಂಗೀತ ಪುಸ್ತಕ!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಓದಲೇಬೇಕೆಂದು ಖರೀದಿಸಿ ತಂದ ಅದೆಷ್ಟೋ ಪುಸ್ತಕಗಳು ಬೀರುವಿನೊಳಗೆ ಬಂದಿಯಾಗಿವೆ. ಧಾವಂತದ ನಡುವೆ ಒತ್ತಡ, ಓಟವೇ ಬದುಕಾಗಿದ್ದು ಶಾಂತಿ, ವಿಶ್ರಾಂತಿ ವಾರಾಂತ್ಯಕ್ಕೆ ಮಾತ್ರ ಎಂಬಂತಾಗಿದೆ. ಹೀಗಿರುವಾಗ ಓದಿನ ವಾತಾವರಣ ಸೃಷ್ಟಿ ಇನ್ನೆಲ್ಲಿ? ತಾಳ್ಮೆ ಕುಗ್ಗುತ್ತಿರುವ ಹೊತ್ತಿನಲ್ಲಿ ‘ಕೇಳ್ಮೆ’ ಮುನ್ನೆಲೆಗೆ ಬರುತ್ತಿದೆ. ಓದುವುದಕ್ಕೆ ಸಮಯವಿಲ್ಲದಿದ್ದರೂ ಕೇಳಿಸಿಕೊಳ್ಳುವುದಕ್ಕೆ ಅಲ್ಲಲ್ಲಿ ಬಿಡುವು ಸಿಗುತ್ತದೆ. ಟ್ರಾಫಿಕ್‌ ಜಾಮಿನಲ್ಲಿ, ಸಾರಿಗೆ ಬಸ್ಸಿನಲ್ಲಿ, ಪಯಣದ ಹಾದಿಯಲ್ಲಿ ಸಿಕ್ಕ ಸಣ್ಣ ಹೊತ್ತು ಓದಿನಷ್ಟೇ ಆಪ್ಯಾಯಮಾನವಾದ ‘ಕೇಳುವ ಸುಖ’ ನೀಡುತ್ತಿದೆ. ಕೇಳುವ ಸುಖಕ್ಕಾಗಿ ಹಾತೊರೆಯುವ ಮನಸ್ಸುಗಳಿಗೆ ‘ಆಡಿಯೊ ಪುಸ್ತಕ’ಗಳು ಕಿವಿಗಡಚುತ್ತಿವೆ.

ಹಲವು ಸಾಹಿತ್ಯ ಕೃತಿಗಳು ಆಡಿಯೊ ಪುಸ್ತಕ ರೂಪದಲ್ಲಿ ಸಾಹಿತ್ಯಾಸಕ್ತರ ಕಿವಿಗಿಳಿಯುತ್ತಿದ್ದು ಕನ್ನಡ ಡಿಜಿಟಲ್‌ ಗ್ರಂಥಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಂಗ್ಲಿಷ್‌ ಸಾಹಿತ್ಯಕ್ಕೆ ಆಡಿಯೊ ಬುಕ್‌ ಹಳೆಯದಾದರೂ ಕನ್ನಡಕ್ಕಿದು ಹೊಚ್ಚಹೊಸತು.

ಆಡಿಯೊ ಬುಕ್‌ ಆ್ಯಪ್‌ಗಳಲ್ಲಿ ಹಲವು ಪ್ರಕಾರದ ಸಾಹಿತ್ಯ ದೊರೆಯುತ್ತಿದ್ದರೂ ಇಲ್ಲಿಯವರೆಗೆ ಸಂಗೀತ ಕುರಿತಾದ ಧ್ವನಿ ಪುಸ್ತಕ ಬಂದಿರಲಿಲ್ಲ. ಇತ್ತೀಚಿಗಷ್ಟೇ ‘ಮೈಲ್ಯಾಂಗ್‌’ (MyLang) ಆ್ಯಪ್‌ನಲ್ಲಿ ಮೊತ್ತಮೊದಲ ಸಂಗೀತ ಆಡಿಯೊ ಪುಸ್ತಕವೊಂದು ಬಿಡುಗಡೆಯಾಗಿದ್ದು ಸಂಗೀತಾಸಕ್ತರ ಮನತಣಿಸುತ್ತಿದೆ. 2015ರಲ್ಲಿ ಪ್ರೊ.ಗೀತಾ ಶ್ರೀನಿವಾಸನ್‌, ವಿದುಷಿ ಕೃತಿಕಾ ಶ್ರೀನಿವಾಸನ್‌ ಅವರು ಬರೆದಿರುವ ‘ಅಲ್ಪಾಯುಷಿ ಮಹಾನ್‌ ಸಾಧಕರು–ಸಂಗೀತಗಾರರು’ ಕೃತಿಗೆ ಆಡಿಯೊ ಪುಸ್ತಕರೂಪ ನೀಡಲಾಗಿದೆ. ಇದು ಜೂನ್‌ 19ರಿಂದ ಮೈಲ್ಯಾಂಗ್‌ ಆ್ಯಪ್‌ನಲ್ಲಿ ದೊರೆಯುತ್ತಿದೆ.

4 ಗಂಟೆ 22 ನಿಮಿಷದ ಆಡಿಯೊ ಪುಸ್ತಕಕ್ಕೆ ಬೆಂಗಳೂರು ಆಕಾಶವಾಣಿಯ ನಿವೃತ್ತ ಕಾರ್ಯನಿರ್ವಾಹಕರಾದ ರಮಾ ಹಿರೇಮಠ ಧ್ವನಿ ನೀಡಿದ್ದಾರೆ. ಕಿರು ಆಯುಷ್ಯದಲ್ಲಿ ಹಿರಿದಾದ ಸಾಧನೆ ಮಾಡಿ ಅಮರರಾಗಿರುವ ಸಂಗೀತ ಸಾಧಕರ ರಚನೆಗಳಿಗೆ ಧ್ವನಿ ಪುಸ್ತಕದಲ್ಲಿ ರೂಪ ನೀಡಲಾಗಿದೆ. ವಾಗ್ಗೇಯಕಾರರು, ವಚನಕಾರರ ಬದುಕಿನ ಯಾತ್ರೆ, ಅವರು ಬೆಳೆದುಬಂದ ಹಾದಿಯ ವರ್ಣನೆ ಕೇಳುಗರಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಅವರು ಬದುಕಿದ್ದ ಕಾಲಘಟ್ಟ, ಅವರು ಸಂಗೀತಕ್ಕೆ ನೀಡಿರುವ ಕೊಡುಗೆಗಳನ್ನು ಸಂಕ್ಷಿಪ್ತ ರೂಪದಲ್ಲಿ ಕಟ್ಟಿಕೊಡಲಾಗಿದೆ.

ಧ್ವನಿ ಪುಸ್ತಕದಲ್ಲಿ 17 ಅಧ್ಯಾಯಗಳಿದ್ದು ವರ್ಣ, ಕೃತಿ, ಕೀರ್ತನೆ, ವಚನ, ಕವಿತೆ, ಉಗಾಭೋಗಗಳ ರಾಗ ರಂಜನೆ ಕೇಳುಗರು ತಲೆದೂಗುವಂತೆ ಮಾಡುತ್ತವೆ. ಲೇಖಕಿಯೂ ಆಗಿರುವ ವಿದುಷಿ ಕೃತಿಕಾ ಶ್ರೀನಿವಾಸನ್‌ ಅವರ ಸೊಗಸಾದ ಗಾಯನ ವಾಗ್ಗೇಯಕಾರರ ಜೀವನದ ಜೊತೆ ಮಿಳಿತಗೊಂಡಿದ್ದು ಕೇಳುಗರಲ್ಲಿ ಹೊಸ ಅನುಭವ ಸೃಷ್ಟಿಸುತ್ತದೆ.

ಪ್ರತಿಯೊಂದು ರಚನೆಯ ಅರ್ಥವಿವರಣೆ ನೀಡಲಾಗಿದ್ದು ಅದರ ಭಾವಾರ್ಥ ಸರಳವಾಗಿ ಮನಸ್ಸಿಗಿಳಿಯುತ್ತದೆ. ಮಾಹಿತಿಯ ಆಧಾರ ಪ್ರಸ್ತುತಿ, ಆಕರ ಗ್ರಂಥಗಳ ಮಾಹಿತಿಯನ್ನೂ ನೀಡಲಾಗಿದೆ. ಪ್ರತೀ ಅಧ್ಯಾಯದ ಕೊನೆಯಲ್ಲಿ ಆಯಾ ಸಂಗೀತಗಾರರ ರಚನೆಗಳ ಗಾಯನ ಪ್ರಸ್ತುತಿ ಇದ್ದು ಧ್ವನಿ ಪುಸ್ತಕಕ್ಕೆ ರಾಗ, ತಾಳ, ಮೇಳದ ಬಣ್ಣ ತುಂಬಲಾಗಿದೆ.

ಅಕ್ಕಮಹಾದೇವಿ ಉಡುತಡಿಯಲ್ಲಿ ಹುಟ್ಟಿ ಶ್ರೀಶೈಲದ ಕದಳಿವನದಲ್ಲಿ ಲಿಂಗೈಕ್ಯಳಾದವರೆಗಿನ ಹಾದಿಯನ್ನು ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ. ಚನ್ನಮಲ್ಲಿಕಾರ್ಜುನನ ಮೇಲಿನ ಭಕ್ತಿಯಲ್ಲಿ ಮೂಡಿದ ವಚನಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಅಕ್ಕನನ್ನೇ ಹೋಲುವ ಮೀರಾಬಾಯಿ ಕತೆಯನ್ನೂ ಹೋಲಿಕೆ ಮಾಡಿರುವುದು ವಿಶೇಷ ಎನಿಸುತ್ತದೆ. ಕೊನೆಗೆ ಮಾಯೆಯನ್ನು ವಿವರಿಸುವ, ಮಿಶ್ರ ಮಾಲ್‌ಕೌಂಸ್‌ ರಾಗಕ್ಕೆ ನಿಬದ್ಧಿತವಾದ ಅಕ್ಕನ ವಚನ ಕೇಳುಗರ ಮನಸೂರೆಗೊಳ್ಳುತ್ತದೆ.

ಮೈಸೂರು ಅರಸರು ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಇನ್ನೊಂದು ಅಧ್ಯಾಯದಲ್ಲಿದೆ.

ಮೂಕರಾಗಿದ್ದ ಬಹುಭಾಷಾ ಪಂಡಿತ ಇಮ್ಮಡಿ ಕಂಠೀರವ ನರಸರಾಜ ಒಡೆಯರ್‌ ಸಂಗೀತ ಕ್ಷೇತ್ರಕ್ಕೆ ನೀಡಿರುವ ಮಾಹಿತಿ ಧ್ವನಿಯಲ್ಲಿದೆ. ಕೊನೆಯಲ್ಲಿ ಚಿಕ್ಕದೇವರಾಜ ಒಡೆಯರ್‌ ರಚನೆ, ವಿದ್ವಾನ್‌ ಚಿತ್ರವೀಣಾ ಎನ್‌. ರವಿಕಿರಣ್‌ ಅವರ ಸಂಯೋಜನೆ, ಕಾಂಭೋಜಿಯಲ್ಲಿರುವ ಕೃತಿ ಕೇಳುಗರಲ್ಲಿ ರಸಾನುಭವ ಮೂಡಿಸುತ್ತದೆ. 15 ನಿಮಿಷದ ಮಾಹಿತಿ ಹಾಗೂ ಗಾಯನ ಪ್ರಸ್ತುತಿ ವಿಶೇಷವಾಗಿದೆ.

ಹರಿದಾಸ ಮಾರ್ಗದರ್ಶಿ ಗೋಪಾಲದಾಸರ ಪದಂ ಚಿತ್ರಣ ಧ್ವನಿ ಪುಸ್ತಕಕ್ಕೆ ಹರಿಭಕ್ತಿಯ ಸ್ಪರ್ಶ ನೀಡಿದೆ. ಚಾರುಕೇಶಿ ನಿಬದ್ಧಿತ ‘ಜಯತು ಜಗದಾಧಾರ’ ರಚನೆಯಲ್ಲಿ ವಿದುಷಿ ಕೃತಿಕಾ ಅವರ ಮಂದ್ರಸ್ಥಾಯಿಯ ಆಲಾಪ ರಾಗದ ಛಾಯೆಯನ್ನು ಅನಾವರಣಗೊಳಿಸುತ್ತದೆ. ಹರಿದಾಸೋತ್ತಮ ಮೋಹನದಾಸರ ಉಗಾಭೋಗ ‘ಉಡುಪಿಯ ಕೃಷ್ಣನೇ ಸಡಗರ ನಿನಗ್ಯಾಕೆ’ ರಾಗ ಮಾಲಿಕೆ ಮುಸ್ಸಂಜೆಯ ಕೇಳ್ಮೆಗೆ ಬಣ್ಣ ತುಂಬುತ್ತದೆ.

ಖಗೋಳ ವಿಜ್ಞಾನ ಕ್ಷೇತ್ರದಲ್ಲೂ ಸಾಧನೆಗೈದಿರುವ ತಿರುವಾಂಕೂರು ರಾಜಮನೆತನದ ಮಹಾರಾಜ ಸ್ವಾತಿ ತಿರುನಾಳ್‌ ಅವರು ಸಂಗೀತಲೋಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ತಾನ ವರ್ಣ, ಪದಂ, ಜಾವಳಿ ತಿಲ್ಲಾನಗಳ ಕೊಡುಗೆಯನ್ನು 22 ನಿಮಿಷದ ಧ್ವನಿಯ ಮೂಲಕ ಕಟ್ಟಿಕೊಡಲಾಗಿದೆ. ಬಿಲಹರಿ ರಾಗದ ‘ಸಂತತಂ ಭಜಾಮಿಹಂ’ ಕೃತಿ ಮಹಾವಿಷ್ಣುವಿನ ಭಕ್ತಿಯ ಮಹಿಮೆಯನ್ನು ಸಾರುತ್ತದೆ.

ಪಲ್ಲವಿ ದೊರೈಸ್ವಾಮಿ ಅಯ್ಯರ್‌, ಸರ್ಪಭೂಷಣ ಶಿವಯೋಗಿ ಸ್ವಾಮಿ, ವಡಿವೇಲು, ಕರೂರ್‌ ಚಿನ್ನ ದೇವುಡು, ಅಣ್ಣಮಲೈ ರೆಡ್ಡಿಯಾರ್‌, ಶರಭಾ ಶಾಸ್ತ್ರಿ, ತಿರುಪತಿ ನಾರಾಯಣಸ್ವಾಮಿ ನಾಯ್ಡು, ಅಂಬಾಬಾಯಿ, ಬೆಳೆಗೆರೆ ಜಾನಕಮ್ಮ, ಜಿ.ಹರಿಶಂಕರ್‌ ಅವರ ಮಾಹಿತಿ ಹಾಗೂ ರಚನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ಕೊನೆಯ ಅಧ್ಯಾಯ 88 ನಿಮಿಷವಿದ್ದು ಹೊಸ ತಲೆಮಾರಿನ ಸಾಧಕರ ಚಿತ್ರಣವಿದೆ. ಕೊನೇರಿರಾಜಪುರಂ ವೈದ್ಯಾನಾಥ ಅಯ್ಯರ್‌, ಮಧುರೈ ಪುಷ್ಪವನಂ, ಎನ್‌.ಸಿ.ವಸಂತ ಕೋಕಿಲಂ, ಜಾನ್‌ ಬಿ ಹಿಗ್ಗಿನ್ಸ್‌ ಭಾಗವತರ್‌, ಮಾಂಡಲಿನ್‌ ಯು ಶ್ರೀನಿವಾಸ್‌, ಕೃಷ್ಣಪ್ರಿಯೆ ರಂಜನಿ ಹೆಬ್ಬಾರ್‌ ಅವರ ಸಾಧನೆಯ ಸ್ಫೂರ್ತಿ ಇದೆ. ಕಡೆಯಲ್ಲಿ ಮಧುರೈ ಪುಷ್ಪವನಂ ಪ್ರಸಿದ್ಧಿಗೊಳಿಸಿದ ತ್ಯಾಗರಾಜರ ಕೃತಿ, ಆಭೇರಿ ರಾಗ ನಿಬದ್ಧಿತ ‘ನಗುಮೋಮು ಗನಲೇನಿ’ ಕೃತಿಯೊಂದಿಗೆ ಆಡಿಯೊ ಪುಸ್ತಕ ಸಂಪನ್ನಗೊಳ್ಳುತ್ತದೆ.

ಪಕ್ಕವಾದ್ಯ ಸಹಕಾರದಲ್ಲಿ ವಿದ್ವಾಂಸರಾದ ಆನೂರು ಅನಂತಕೃಷ್ಣ ಶರ್ಮಾ, ವಿಶ್ವಜಿತ್‌ ಮತ್ತೂರ್‌, ದೀಪಿಕಾ ಶ್ರೀನಿವಾಸನ್‌, ಕಾರ್ತಿಕ್‌ ಭಟ್‌, ತೇಜಸ್ವಿ ರಘುನಾಥ್‌,  ಪ್ರಣವ್‌ ದತ್‌, ಸುನಾದ್‌ ಆನೂರು ಇದ್ದಾರೆ.

‘ಧ್ವನಿಯೊಂದು ಮಾಹಿತಿ–ಪ್ರುಸ್ತುತಿ ಹಲವು’ ಎಂಬಂತಿರುವ ಆಡಿಯೊ ಪುಸ್ತಕ ಹೊಸ ತಲೆಮಾರಿನ ಯುವಜರಿಗೆ ಜ್ಞಾನದ ಧಾರೆಯಾಗಬಲ್ಲದು.  ಮೈಲ್ಯಾಂಗ್‌ ಆ್ಯಪ್‌ನ ಬಲಕೊಂಡಿಯಲ್ಲಿರುವ ‘ನನ್ನ ಪುಸ್ತಕಗಳು’ ವಿಭಾಗದಲ್ಲಿ ಈ ಪುಸ್ತಕವನ್ನು ಡೌನ್‌ಲೋನ್‌ ಮಾಡಿಕೊಂಡು ಆಲಿಸಬಹುದು. ಈ ಧ್ವನಿ ಪುಸ್ತಕದ ಬೆಲೆ ₹ 149.

ಆಡಿಯೊ ಬುಕ್‌ ಲಿಂಕ್‌ (ಭಾರತ): https://mylang.in/products/alpayushi-mahan-sadhakaru-audiobook-inr
ಆಡಿಯೊ ಬುಕ್‌ ಲಿಂಕ್‌ (ವಿದೇಶ): https://mylangbooks.com/products/alpayushi-mahan-sadhakaru-audiobook-usd

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು