ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಯಾನದ ಪರಯಾನ

Last Updated 16 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್. ‘ಪದ್ಯಾಣ’ ಎನ್ನುವುದು ಮನೆತನ. ಯಾರದ್ದೇ ಪ್ರತಿಯಾಗದ ಹಾಡುಗಾರಿಕೆ. ಸ್ವಂತದ್ದಾದ ‘ಪದ್ಯಾಣ ಶೈಲಿ’ಯ ರೂಪೀಕರಣ. ಯಕ್ಷಲೋಕದಲ್ಲಿ ಒಂಟಿಸಲಗದಂತೆ ಪಯಣ. ಯಕ್ಷರಂಗವೇ ಬೆರಗಾದ ಶಾರೀರ. ಸರ್ವಾದರಣೀಯ ಭಾಗವತ. ಈಚೆಗೆ ರಂಗದಿಂದ ನಿವೃತ್ತರಾಗಿದ್ದರು. ಪದ್ಯಾಣರ ಪದಯಾನವು ಅಕ್ಟೋಬರ್ 12ರಂದು ಮೌನವಾಯಿತು.

***

ನನಗೆ ಆಗಿನ್ನೂ ಯಕ್ಷಗಾನ ಅಂಟದ ದಿನಗಳು. ನನ್ನೂರು ಪೆರಾಜೆಯಲ್ಲಿ ಯಕ್ಷಗುರು ಪ್ರಕಾಶ್‌ಚಂದ್ರ ಬಾಯಾರು ಅವರಿಂದ ರೂಪುಗೊಂಡ ಯಕ್ಷಗಾನದ ತಂಡ ಸಕ್ರಿಯವಾಗಿತ್ತು. ಪ್ರದರ್ಶನ ನೀಡಲು ‘ಸಣ್ಣ ಮೇಳ’ವೂ ಸಕ್ರಿಯವಾಗಿತ್ತು. ಆಗ ಭಾಗವತ ದಾಸರಬೈಲು ಚನಿಯ ನಾಯ್ಕರು ಭಾಗವತರಾಗಿದ್ದರು. ಸುಳ್ಯ-ಕಲ್ಮಡ್ಕ ಗೋಳ್ತಾಜೆಯ ಸ್ಫುರದ್ರೂಪಿ ಯುವಕ ಗಣಪತಿ ಭಟ್ಟರು ಮದ್ದಳೆ-ಚೆಂಡೆ ವಾದಕರಾಗಿದ್ದರು. ಸರಳ ಉಡುಗೆ. ಮುದುಡಿ ಮುದ್ದೆಯಾಗುವ ಸ್ವಭಾವ.

ಒಂದಷ್ಟು ಸಮಯದ ಬಳಿಕ ನನಗೆ ಯಕ್ಷಗಾನ ಅಂಟಿತು. ಮೇಳಗಳ ಆಟಗಳನ್ನು ನೋಡುವ ಪರಿಪಾಟ ರೂಢಿಸಿಕೊಂಡೆ. ಆ ಹೊತ್ತಲ್ಲಿ ಸುರತ್ಕಲ್ ಮೇಳವು ಮಂಗಳೂರಿನ ನೆಹರೂ ಮೈದಾನದಲ್ಲಿ ಟೆಂಟ್ ಊರಿತ್ತು. ಐದು ರೂಪಾಯಿಯ ಟಿಕೆಟ್ ತೆಗೆದು ಟೆಂಟಿನೊಳಗೆ ಪ್ರವೇಶಿಸುವಾಗ ರಂಗದ ಪಡಿಮಂಚದಲ್ಲಿ ಗಣಪತಿ ಭಟ್ಟರು ಭಾಗವತಿಕೆ ಮಾಡುತ್ತಿದ್ದರು. ಅವರ ಹಾಡನ್ನು ಕೇಳುತ್ತಾ ಬೆರಗಿನಲ್ಲೇ ಬೆಳಗು ಮಾಡಿದ್ದೆ. ಇವೆಲ್ಲಾ ನಾಲ್ಕು ದಶಕದ ಹಿಂದಿನ ದಿನಮಾನಗಳು.

ನಾನು ಕಂಡ ಆ ಯುವಕ ನೆಚ್ಚಿಕೊಂಡ ಆಸಕ್ತಿಯು ಮುಂದೆ ಮನೆತನವೊಂದಕ್ಕೆ ಪರ್ಯಾಯ ಹೆಸರಾಗಿ ರೂಪುಗೊಂಡ ಬಗೆ ಅನನ್ಯ. ಅಂದಿನ ಗಣಪತಿ ಭಟ್, ಮುಂದೆ ಪದ್ಯಾಣ ಗಣಪತಿ ಭಟ್ಟರಾದರು. ಯಕ್ಷಗಾನದ ಮೇರು ಭಾಗವತನಾಗಿ ರೂಪುಗೊಂಡರು.

ಸ್ವ-ನಿರ್ಮಿತ ಗಟ್ಟಿ ಯಕ್ಷಧ್ವನಿಯಲ್ಲಿ ರಂಗವಲ್ಲದೆ ಪ್ರೇಕ್ಷಕರನ್ನು ಕೂಡಾ ತೆಕ್ಕೆಗೆ ಸೇರಿಸಿಕೊಳ್ಳುವಷ್ಟು ಗಾಢತೆಯಿತ್ತು. ಹಿರಿಯರೊಂದಿಗೆ ಪಳಗಿದ ಪ್ರತಿಭೆ. ಅಬ್ಬಾ.. ಅದೇನು ಸ್ವರ. ಯಕ್ಷರಾತ್ರಿಗಳ ಅಬ್ಬರಕ್ಕೆ ಸೊಗಸನ್ನು ತಂದರು. ಸ್ವರ ಮಾತ್ರದಿಂದಲೇ ಆ ರಾತ್ರಿಗಳ ಸೊಬಗಿಗೂ ಕಾರಣರಾದರು.

ಹಿರಿಯರ ಹಿಡಿತಕ್ಕೆ ಸಿಕ್ಕದ ಬಾಲ್ಯ. ಔದಾಸೀನ್ಯದ ಶಾಲಾ ಕಲಿಕೆ. ಮನೆಯವರಿಗಿಂತಲೂ ಆಪ್ತ-ಸ್ನೇಹಿತರತ್ತ ಚಿತ್ತ. ಇಡೀ ಗ್ರಾಮವೇ ಗುರುತು ಮಾಡುವಂತಹ ಚಾಲಾಕಿ. ಬಾಲ್ಯದ ಬದುಕಿನಲ್ಲಿ ಗುರುತು ಹಿಡಿದ ರೀತಿಯೇ ಬೇರೆ. ನಂತರ ನೋಡುವ ಮನಃಸ್ಥಿತಿಯೇ ಬೇರೆ. ಇದಕ್ಕೆ ಕಾರಣ, ಗುರು ಮಾಂಬಾಡಿ ನಾರಾಯಣ ಭಾಗವತರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಭಾಗವತಿಕೆಯನ್ನು ಕಲಿತರು. ಚೆಂಡೆ, ಮದ್ದಳೆಯ ಕಲಿಕೆಯನ್ನು ಆರ್ಜಿಸಿದರು. ಮುಂದೆ ‘ಭಾಗವತ’ರಾದರು.

ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ನಾಲ್ಕು ದಶಕಕ್ಕೂ ಮಿಕ್ಕಿದ ವ್ಯವಸಾಯ ಮಾಡಿದರು. ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್ ಮೊದಲಾದ ಹಿರಿಯರ ಸಂಸರ್ಗದಿಂದ ಪರಿಪಕ್ವಗೊಂಡ ಪದ್ಯಾಣರ ಶಾರೀರ ಯಕ್ಷಗಾನ ಕಂಡ ಅಪೂರ್ವ ಧ್ವನಿಯಾಗಿ ಹೊರಹೊಮ್ಮಿತು. ಯಾರದ್ದೇ ಅನುಕರಣೆಗೊಳ್ಳದ ಹಾಡುಗಾರಿಕೆ. ಗಣಪತಿ ಭಟ್ಟರು ಯಕ್ಷರಂಗದಲ್ಲಿ ಬೆಳೆಯುತ್ತಿದ್ದಂತೆ ಅವರನ್ನು ದೂರದಿಂದ ನೋಡಿ ವಿಸ್ಮಯಪಟ್ಟವರೆಷ್ಟೋ! ಒಂಟಿಸಲಗನಂತೆ ಸಾಗಿದರು. ಈ ಬೀಸು ನಡೆಯು ಪದ್ಯಾಣರನ್ನು ಭಾಗವತಿಕೆಯಲ್ಲಿ ಪಕ್ವನನ್ನಾಗಿ ಮಾಡಿತು.

ಪದ್ಯಾಣ ಮತ್ತು ಸುರತ್ಕಲ್ ಮೇಳ – ಎರಡನ್ನೂ ಬಿಡಿಬಿಡಿಯಾಗಿ ನೋಡುವಂತಿಲ್ಲ. ಅವೆರಡೂ ಮಿಳಿತವಾದ ಪದಗಳು. ರಾಜಾ ಯಯಾತಿ, ನಾಟ್ಯರಾಣಿ ಶಾಂತಲಾ, ಕಡುಗಲಿ ಕುಮಾರರಾಮ, ಸತಿ ಶೀಲವತಿ, ಪಾಪಣ್ಣ ವಿಜಯ.. ಮೊದಲಾದ ಭಾವಸ್ಪರ್ಶದ, ಮನಸ್ಪರ್ಶದ ಕಥಾನಕಗಳ ಯಶದ ಹಿಂದೆ ಪದ್ಯಾಣದ ಕಾಣದ ಜಾಣ್ಮೆಯಿದೆ. ಅಜ್ಞಾತ ಆಧುನಿಕ ಪ್ರಸಂಗಗಳಿಗೆ ಪೌರಾಣಿಕದ ಅಚ್ಚಿನಲ್ಲಿ ಹೊಸ ವಿನ್ಯಾಸ ನೀಡಿದ ಮೇಳದ ಎಲ್ಲಾ ಕಲಾವಿದರ ಶ್ರಮ. ಸುರತ್ಕಲ್ ಮೇಳ ಹೋದಲ್ಲೆಲ್ಲಾ ಟೆಂಟ್ ಭರ್ತಿ. ಕೋಶವೂ ಭರ್ತಿ. ಮುಗಿಬೀಳುವ ಪ್ರೇಕ್ಷಕರು.. ಇವೆಲ್ಲಾ ಈಗ ಇತಿಹಾಸ.

ಪದ್ಯಾಣರ ಹಾಡಿನೊಳಗೆ ಬರೇ ಸಾಹಿತ್ಯವಲ್ಲ. ಅದರೊಳಗಿದೆ - ಪ್ರಸಂಗ, ಪಾತ್ರ, ಪಾತ್ರದ ಮನಸ್ಸು, ಸಂದರ್ಭ. ಇದನ್ನು ಗ್ರಹಿಸಿ ಹಾಡುತ್ತಿದ್ದದ್ದು ಅವರ ವಿಶೇಷತೆ. ರಾಗಗಳ ಸಂಚಾರ, ಅದು ಉಂಟುಮಾಡುವ ಪರಿಣಾಮ, ಸಾಹಿತ್ಯ ಸ್ಪಷ್ಟತೆ, ಶಾರೀರದ ಮಾಧುರ‍್ಯ.. ಇವೆಲ್ಲಾ ಪ್ರೇಕ್ಷಕರನ್ನು ಹುಚ್ಚುಕಟ್ಟಿಸಿದವು. ಪದ್ಯಾಣರು ಮಾತ್ರ ಈ ಹುಚ್ಚಿನಿಂದ ದೂರವಿದ್ದರು. ಹಾಗಾಗಿ ನೋಡಿ ಪದ್ಯಾಣರು ಅಂದು, ಇಂದು, ಎಂದೆಂದೂ ಮಾನ್ಯರು, ಸರ್ವಾದರಣೀಯರು.

ಈಚೆಗೆ ವಿಧಿವಶರಾದ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಪದ್ಯಾಣರು ಬಳಸುತ್ತಿದ್ದ ರಾಗಗಳ ಕುರಿತು ಗಮನಸೆಳೆದಿದ್ದರು: ‘ಪೌರಾಣಿಕ ಅಲ್ಲದೆ ಸಾಮಾಜಿಕ, ತುಳು ಪ್ರಸಂಗಗಳಲ್ಲಿ ಕೆಲವು ಅಪೂರ್ವ ರಾಗಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿ ಜನಪ್ರಿಯಗೊಳಿಸಿದ್ದಾರೆ. ಸರಸ್ವತೀ, ಸಿಂಹೇಂದ್ರ ಮಧ್ಯಮ, ಸಾರಮತಿ, ಅಮೃತವರ್ಷಿಣಿ, ರೀತಿಗೌಳ, ಬಹುಧಾರಿ, ವಾಸಂತಿ... ಮೊದಲಾದ ಯಕ್ಷಗಾನಕ್ಕೆ ಹೊಸತೆನಿಸಿದ ರಾಗಗಳನ್ನು ದಿವಂಗತ ದಾಮೋದರ ಮಂಡೆಚ್ಚರು ಬಳಸುತ್ತಿದ್ದರೂ, ಗಣಪಣ್ಣನವರು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿ ಆ ರಾಗಗಳನ್ನು ಜನಪ್ರಿಯಗೊಳಿಸಿದರು. ಹೊಸ ಪೀಳಿಗೆಯ ಭಾಗವತರು ಇಂಥ ಅಪೂರ್ವ ರಾಗಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ’ ಎಂದಿದ್ದರು.

ಅವರಿಗೆ ಯಕ್ಷಗಾನ ವೃತ್ತಿಯಲ್ಲ, ಬದುಕು. ಈ ಬದುಕು ಹೊಟ್ಟೆಪಾಡಿನದ್ದಲ್ಲ. ಹಾಗೆಂತ ಅಲ್ವೋ....? ಹೌದು... ಯಕ್ಷಗಾನಕ್ಕೆ ಸಮರ್ಪಿತ ಬದುಕು. ಯಕ್ಷಗಾನವೇ ಸರ್ವಸ್ವ. ಇದರೊಳಗಿತ್ತು, ಸ್ವಂತಕ್ಕಿಂತ - ಆಸೆ, ನಿರೀಕ್ಷೆ, ಕುಟುಂಬ, ಹೆಂಡತಿ, ಮಕ್ಕಳು, ಬಂಧುಗಳು, ಪುರಸ್ಕಾರ, ರಾಜಕೀಯ, ಲೋಕಸುದ್ದಿಗಳು - ಹೊರತಾದ ತ್ಯಾಗ. ಉಣ್ಣಲು ಅನ್ನವಿತ್ತು. ಉಡಲು ವಸ್ತ್ರ, ಪವಡಿಸಲು ಸೂರಿತ್ತು. ಹರಟಲು ಸ್ನೇಹವಲಯವಿತ್ತು. ಆದರೆ ‘ಮನುಷ್ಯತ್ವ’ಕ್ಕೆ ಏರಿಸಿದ ಕಲೆಗೆ ಅವರದು ಮೊದಲ ಮಣೆ, ಆರಾಧನೆ ಆಗಿತ್ತು.

ನಾಲ್ಕೈದು ವರ್ಷಗಳ ಹಿಂದೆ ಪದ್ಯಾಣರನ್ನು ಅವರ ಅಭಿನಂದನಾ ಗ್ರಂಥ ‘ಪದಯಾನ’ಕ್ಕಾಗಿ ಮಾತನಾಡಿಸಿದ್ದೆ. ಯಕ್ಷಗಾನ ರಂಗ ಹೊರತುಪಡಿಸಿ ಮಿಕ್ಕ ‘ಋಣಾತ್ಮಕ’ ವಿಚಾರ, ಯೋಚನೆಗಳಿಗೆ ಅಷ್ಟೊಂದು ಮಹತ್ವ ಕೊಡದ ಪದ್ಯಾಣರ ಯಕ್ಷ ಯಾನದ ಸುತ್ತ ‘ಸಮರ್ಪಿತ ಬದುಕು’ ಒಂದು ಸುಳಿದಾಡುತ್ತಿತ್ತು. ಯಕ್ಷಗಾನಕ್ಕೆ ಸಂಪೂರ್ಣ ತೊಡಗಿಸಿದ್ದರಿಂದಲೇ ಪದ್ಯಾಣರು ಉನ್ನತ ಸ್ಥಾನವನ್ನು ಪಡೆಯುವಂತಾಯಿತು.

ಮಗುವಿನ ಸ್ವಭಾವದ ಮುಗ್ಧ. ಕೊಡುಗೈ ಮನಸ್ಸಿನ ಧಾರಾಳಿ. ಕಣ್ಣೀರಿಗೆ ಶರಣಾಗುವ ವ್ಯಕ್ತಿತ್ವ. ಸ್ವ-ನಿರ್ಮಿತ ಜೀವನ ಶೈಲಿ - ಇವೆಲ್ಲವೂ ಪದ್ಯಾಣರ ವೃತ್ತಿ ಬದುಕಿಗೆ ಶೋಭೆ ತಂದಿದ್ದವು. ಮಡದಿ ಶೀಲಾಶಂಕರಿ ಗಂಡನ ಏಳ್ಗೆಯ ಹಿಂದಿನ ತ್ಯಾಗಮಯಿ. ಮಕ್ಕಳಾದ ಸ್ವಸ್ತಿಕ್, ಕಾರ್ತಿಕೇಯ ಇಬ್ಬರೂ ಉದ್ಯೋಗಸ್ಥರು. ಅಪ್ಪನ ಭಾಗವತಿಕೆಯ ಅಭಿಮಾನಿಗಳು. ಇಡೀ ಪದ್ಯಾಣ ಕುಟುಂಬವು ಗಣಪತಿ ಭಟ್ಟರನ್ನು ಸದಾ ಅಭಿನಂದಿಸಿರುವುದು ಕಲೆಗೆ ಸಂದ ಮಾನ.

ಗಣಪತಿ ಭಟ್ಟರು 2021 ಅಕ್ಟೋಬರ್ 12ರಂದು ಮರಣಿಸುವಾಗ ಅವರಿಗೆ ಅರುವತ್ತಾರು ವರುಷ. ಅಲ್ಪಕಾಲಿಕ ಅನಾರೋಗ್ಯ ಬಾಧಿಸದೇ ಇರುತ್ತಿದ್ದರೆ ಇನ್ನೂ ಹತ್ತು ವರುಷ ಯಕ್ಷರಂಗದಲ್ಲಿ ಅವರನ್ನು ಕಾಣಬಹುದಾಗಿತ್ತು. ‘ಬದುಕು ಸಾಕು ಅಂತ ಆಗಲಿಲ್ಲ. ಯಕ್ಷಗಾನದ ವ್ಯವಸಾಯ ಸಾಕು’ ಎಂದು ನಾಲ್ಕೈದು ತಿಂಗಳ ಹಿಂದೆ ಹೇಳಿದ್ದ ಪದ್ಯಾಣರು, ಬದುಕನ್ನೇ ಮುಗಿಸಿ, ಕೀರ್ತಿಯನ್ನು ಬಿಟ್ಟು ಹೋದರು. ಆ ಕೀರ್ತಿಯನ್ನು ಗೌರವಿಸುವುದು ಪದ್ಯಾಣರಿಗೆ ಸಲ್ಲಿಸುವ ಗೌರವ ಹಾಗೂ ನುಡಿ ನಮನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT