ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ | ಬದುಕಿನ ಪಾಡು ಹಾಡಾಗುವಾಗ...

Last Updated 28 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಹಾಡ್ತಿದ್ವಿ. ಹಾಡ್ಕೊಂತ ಕೆಲಸ ಮಾಡ್ತಿದ್ವಿ. ಹಿಂಗ ಹಾಡೂದ್ರಿಂದ ಮನಸು ಉಲ್ಲಾಸದಿಂದ ಇರ್ತಿತ್ತು. ದಣಿವು ಗೊತ್ತಾಗ್ತಿರಲಿಲ್ಲ. ಹಾಡೂದ್ರಿಂದ ಕಸುವು ಹೆಚ್ಚಾಗ್ತದ ತಾಯಿ...

ಪಾರ್ವತೆವ್ವ ಹೊಂಗಲ್‌, ತಮ್ಮ ಗಾನಯಾನದ ಬಗ್ಗೆ ಹೇಳುತ್ತಿದ್ದರು. ಇದೀಗ 65ರ ಹರೆಯ, ಸಾವಿರಗಟ್ಟಲೆ ಹಾಡುಗಳಿವೆ ಅವರ ಸಂಚಿಯಲ್ಲಿ. ಅಷ್ಟೇ ರಾಗಗಳೂ ಅದರಷ್ಟೇ ವಿಷಯ ವೈವಿಧ್ಯಗಳೂ.

ಬದುಕಿನ ಪಾಡನ್ನು ಹಾಡಿನೊಂದಿಗೆ ಹಗುರವಾಗಿಸುವ ಬಗೆಯನ್ನು ನೆನಪಿನ ಬುತ್ತಿಯಂತೆ ಬಿಚ್ಚಿಡುತ್ತಿದ್ದರು. ಬರಗಾಲದಾಗ ಕೂಲಿಗೆ ಹೋಗ್ತಿದ್ವಿ. ಸಸಿ ನೆಡಾಕ ಅಗಿ ತೋಡಬೇಕಿತ್ತು. ಹಂಗ ಗುಂಡಿ ತೋಡುಮುಂದ ಹಾಡ್ತಿದ್ವಿ. ಕೈ ಬಿರುಸಾದ್ವು. ಆದ್ರ ಮನಸು ಹಗುರ ಆಗ್ತಿತ್ತು.

ಹಾಡು ನಮಗೊಂದು ಪರಿಚಯ ತಂದುಕೊಡ್ತು. ಹೋದಲ್ಲೆಲ್ಲ ಪಾರ್ವತೆವ್ವ ಹಾಡು ಹೇಳವಾ ಅಂದ್ರ ಸಂದರ್ಭಕ್ಕ ತಕ್ಕಂಗ ಹಾಡ್ತಿದ್ವಿ. ಕೆಲವೊಮ್ಮೆ ಬೆಳತನಾ ಹಾಡಿದ್ದದ. ಯಾರರೆ ಹಾಡಿದ್ರ ಅದು ಲಗೂನೆ ತಿಳೀತಿತ್ತು. ಓದಿದ್ದಲ್ಲ, ಉರುವು ಹಚ್ಚಿದ್ದಲ್ಲ. ನಮ್ಮದೇನಿದ್ರೂ ಕೇಳಿದ್ದನ್ನ ಹಾಡೂದು. ಮತ್ತ ಹಾಡೂದು, ಹಾಡ್ಕೊಂತ ಅದನ್ನ ಕಲಿಯೂದು. ಹಿಂಗ ಒಂದೆರಡಲ್ಲ ಈಗ ಎಣಸಾಕ ಆಗೂದಿಲ್ಲ ಬಿಡ್ರಿ... ಅಷ್ಟು ಹಾಡದಾವ.

ಹೇಳಿಕೇಳಿ ಜನಪದ ಹಾಡುಗಳಿವು. ಪ್ರಾದೇಶಿಕವಾಗಿ ಬದಲಾಗ್ತಾವ. ಕೆಲವೊಮ್ಮೆ ವೀರಭದ್ರನ ನೆನಸಿದ್ರ, ಇನ್ನು ಕೆಲವೊಮ್ಮೆ ಬಸವಣ್ಣನನ್ನು. ಅವರವರ ಇಷ್ಟದೈವ, ಕುಲದೈವಕ್ಕ ತಕ್ಕಂಗ ಹಾಡು ಬದಲಾಗ್ತಾವ. ಮೊದಲೆಲ್ಲ ಹಾಡುಗಳಲ್ಲಿ ಹೆಣ್ಮಕ್ಕಳು ಹೆಂಗಿರಬೇಕು ಅನ್ನೂದೆ ಹೆಚ್ಚು ಪ್ರಚಾರದಲ್ಲಿದ್ದವು. ಆದ್ರ ಗಂಡುಮಕ್ಕಳು, ಬಸುರಿನ್ನ ಹೆಂಗ ನೋಡಬೇಕು, ಕಾಳಜಿ ಮಾಡಬೇಕು ಅಂತನೂ ಹಾಡದಾವ. ಆದ್ರ ಅವು ಹೆಚ್ಗಿ ಬೆಳಕಿಗೆ ಬರಲಿಲ್ಲ. ಕಳ್ಳಕುಬಸದಾಗ (ಮೊದಲ ಮೂರು ತಿಂಗಳ ಗರ್ಭಿಣಿಗೆ ಮನೆಯಲ್ಲಿಯೇ ಮಾಡುವ ಸೀಮಂತ. ಇದಕ್ಕೆ ಯಾರನ್ನೂ ಆಹ್ವಾನಿಸದೇ ಇರುವುದರಿಂದ ಕಳ್ಳಕುಬಸ ಅಂತ ಕರೀತಾರೆ) ಇಂಥಾವು ಹಾಡ್ತೇವಿ.

ಮಾತಿನ ಜಗದಾಗ ಮೂಕಳಾಗಿ ಬದುಕು ತಂಗಿ ಅಂತ ಒಂದು ಸಾಲು ಬರ್ತದ. ಅಲ್ಲಿ ತಂಗಿಯಾದ್ರೇನು, ತಮ್ಮ ಆದ್ರೇನು? ಬರೇ ಮಾತುಗಳು ವಾದ, ಜಗಳಕ್ಕ ಹೋದ್ರ ಮೂಕರಾಗಬೇಕು ಅಂತ. ಹಾಡುಗಳು ತಿಳಕೊಂಡಂಗ ಇರ್ತಾವ. ಬದುಕು ಸಹನೀಯಗೊಳಿಸಾಕ, ಸಂತಸದಿಂದ ಇರಾಕ ಹಾಡ್ತೇವಿ. ಅವೇ ನೀತಿ, ನಿಯಮ ಅಂತನ್ನೂದಕ್ಕಿಂತ ಅವು ಅಂತಃಕರುಣೆಯ ಹಾಡು ಅಂತನ್ಕೊಬೇಕು.

ಒಂದಿಪ್ಪತ್ತು ವರ್ಷಗಳ ಹಿಂದ ನಮಗ ಬೆಂಗಳೂರಿಗೆ ಕರಿಸಿಕೊಂಡು ಹಾಡು ಹೇಳಿಸಿದ್ರು. ಕ್ಯಾಸಿಟ್‌ ಮಾಡಿದ್ರು. ಬೆಂಗಳೂರು ತೋರಿಸಿದ್ರು. ಊರಿಗೆ ಕಳಿಸಿದ್ರು. ಆಮೇಲೆ ಎಲ್ಲಾ ಕಡೆ ನಾವು ಹಾಡಿದ ಕ್ಯಾಸೆಟ್‌ ಹಚ್ತಿದ್ರು. ಅಯ್ಯ ನಾವೇ ಹಾಡಿದ್ದು, ನಮ್ಮ ಬಾಯಿ ಮುಚ್ದಂಗ ಮಾಡಿದ್ವು ಅಂತನಿಸಿತ್ತು. ಆದ್ರ ಮುಂದಿನ ಕ್ಷಣ, ನಾವು ಸತ್ತು ಹೋದ್ರ, ಹಿಂಗರೆ, ಇಷ್ಟರೆ ಹಾಡು ಉಳೀತಾವಲ್ಲ ಅಂತನೂ ಅನಿಸ್ತು.

ರಾಜ್ಯ ಸರ್ಕಾರ ಪ್ರಶಸ್ತಿ ಕೊಟ್ಟು ಗೌರವಿಸಿತು. ನನ್ಮಗ ಬಸೂ (ಪತ್ರಕರ್ತ ಬಸವರಾಜ ಹೊಂಗಲ್‌) ಎಲ್ಲ ಹಾಡುಗಳನ್ನು ಬರದು, ಸಂಗ್ರಹಿಸಿದ. ನನ್ನ ಮಗಳು, ಸೊಸಿ, ಮೊಮ್ಮಗಳು ಹಾಡು ಕಲೀತಾರ. ಹಾಡ್ತಾರ. ವರ್ಷಾನುಗಟ್ಟಲೆ ಈ ಹಾಡು ನಮ್ಮ ಜೊತಿಗೆ ಬಾಳೆ ಮಾಡ್ಕೊಂತ ಬಂದಾವ. ನಮ್ಕೂಡ ಮುಗಿಯೂದಿಲ್ಲ. ನಾವ್ಹೆಂಗ ನಮ್ಮ ಮಕ್ಕಳ ಜೀವದಾಗ ಬದುಕ್ತೇವಿ.. ಹಂಗ ಇವುನು.

ಹಿಂಗ ಮಾತಾಡ್ಕೊಂತ ಪಾರ್ವತೆಮ್ಮ ನಮ್ಮ ಊಟದ ತಾಟಿಗೆ ಹಕ್ಕರಕಿ (ಹೊಲದ ಬದುವಿನಲ್ಲಿ ಬೆಳೆಯುವ ಸೊಪ್ಪು) ಪಚಡಿ ನೀಡಿದ್ರು. ರೊಟ್ಟಿ ಮುರುದು ಹಾಕಿದ್ರು. (ಉಣ್ಣುವಾಗ ಎಣಿಸಬಾರದೆಂಬ ಕಾಳಜಿ. ಹೊಟ್ಟಿ ಹಿಡಿದಷ್ಟು ಉಣ್ಣಬೇಕು. ಲೆಕ್ಕಹಾಕಿ ಉಣ್ಣಬಾರದು ಎಂದು ಈ ಕಡೆಯೆಲ್ಲ ಊಟಕ್ಕೆ ಕುಳಿತಾಗ, ರೊಟ್ಟಿ, ಚಪಾತಿ ಹರಿದು ಹಾಕುತ್ತಾರೆ) ಹೊಟ್ಟಿ ತುಂಬಿತ್ತು. ಮನಸೂನು. ಆದ್ರ ಹಾಡುಗಳಿನ್ನಾ ಖಾಲಿ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT