ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಘರಾಣೆಯ ಖಾನ್‌ ಸಾಹೇಬರು

Last Updated 9 ಜನವರಿ 2021, 19:30 IST
ಅಕ್ಷರ ಗಾತ್ರ

ಸಿತಾರ್‌ ಅನ್ನೇ ಉಸಿರಾಗಿಸಿಕೊಂಡ ಕುಟುಂಬವೊಂದು ಇಂದೋರ್‌ನಿಂದ ಧಾರವಾಡಕ್ಕೆ ಬಂದು ನೆಲೆಸಿ ನೂರಾರು ಶಿಷ್ಯರನ್ನು ಸಜ್ಜುಗೊಳಿಸಿದ್ದು ಮಾತ್ರವಲ್ಲ, ‘ಧಾರವಾಡ ಘರಾಣ’ ಹುಟ್ಟಿಗೂ ಕಾರಣವಾಗಿದೆ. ಆ ಕುಟುಂಬದ ಕಣ್ಮಣಿಯೇ ಘರಾಣೆಯಿಂದ ಧಾರವಾಡದ ಸಂಗೀತ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ‘ಸಿತಾರ್ ರತ್ನ’ ರಹಿಮತ್ ಖಾನ್. ಖಾನ್‌ ಸಾಹೇಬರ ಸ್ಮರಣೆಯಲ್ಲಿ ಧಾರವಾಡದಲ್ಲಿ ಇಂದು ಸಂಗೀತೋತ್ಸವ ನಡೆಯುತ್ತಿದೆ.

1912ರ ಕಾಲಘಟ್ಟವದು. ಮೈಸೂರಿನ ಅರಮನೆಯಲ್ಲಿ ಕಾರ್ಯಕ್ರಮ ನೀಡಿದ ಸಿತಾರ್ ವಾದಕ ರಹಿಮತ್ ಖಾನ್‌, ‘ಸಿತಾರ್ ರತ್ನ’ ಬಿರುದು ಪಡೆದು ಸಂಭ್ರಮದೊಂದಿಗೆ ತಮ್ಮೂರಿಗೆ ಹಿಂದಿರುಗುತ್ತಿದ್ದರು.ಮಾರ್ಗಮಧ್ಯದಲ್ಲಿ ಮಲೆನಾಡ ಸೊಬಗಿನ ಧಾರವಾಡದ ಪರಿಸರಕ್ಕೆ ಮಾರುಹೋದ ಅವರು ಅಲ್ಲಿಯೇ ನೆಲೆ ನಿಲ್ಲಲು ನಿರ್ಧರಿಸಿದರು. ಸಾಂಸ್ಕೃತಿಕ ರಾಜಧಾನಿ ಧಾರವಾಡದಲ್ಲೇ ಉಳಿದ ಅವರು, ಸಿತಾರ್ ಕಲಿಯಲು ಬರುವವರ ಜಾತಿ–ಅಂತಸ್ತು ನೋಡದೆ ಸಿತಾರ್ ಪಾಠ ಹೇಳಿಕೊಡುತ್ತ ತಮ್ಮ ಶಿಷ್ಯ ಬಳಗವನ್ನು ಹೆಚ್ಚಿಸಿಕೊಂಡರು.

ಇಂದೋರ್‌ನ ಸಿತಾರ್ ವಾದಕ ಉಸ್ತಾದ್ ದೌಲತ್ ಖಾನ್‌ ಅವರ ಮಗ ರಹಿಮತ್ ಖಾನ್. ಉತ್ತರದಲ್ಲಿ ಪ್ರಚಲಿತದಲ್ಲಿದ್ದ ಹಿಂದೂಸ್ತಾನಿ ಸಂಗೀತ ಪ್ರಕಾರದಲ್ಲಿನ ಸಿತಾರ್ ವಾದನವನ್ನು ದಕ್ಷಿಣದ ಗಡಿ ಧಾರವಾಡಕ್ಕೆ ತಂದು ನೆಲೆ ನಿಲ್ಲಿಸಿದವರುಇವರು. ಇಂದಿಗೂ ಅವರ ಶಿಷ್ಯಪಡೆ ಬೆಳೆಯುತ್ತಲೇ ಇದೆ. ಜತೆಗೆ ಅವರ ಅಭಿಮಾನಿ ಬಳಗ ಪ್ರತಿ ವರ್ಷ ಆಚರಿಸುವ ಸಂಗೀತೋತ್ಸವ ಒಂದು ಮೇರು ಪರಂಪರೆಯಾಗಿ ಇಡೀ ರಾಷ್ಟ್ರದ ಸಂಗೀತಾಸಕ್ತರ ಗಮನ ಸೆಳೆದಿದೆ.

ಈ ಸಿತಾರ್ ಕುಟುಂಬದ ಏಳನೇ ತಲೆಮಾರು ಧಾರವಾಡ ಘರಾಣೆ ಪ್ರತಿಪಾದಿಸುವಲ್ಲಿ ನಿರಂತರ ಯತ್ನದಲ್ಲಿದೆ.ಹಿಂದೂಸ್ತಾನಿ ಸಂಗೀತವನ್ನು, ಸಿತಾರ್‌ ವಾದನದ ಹಿರಿಮೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಆರಂಭವಾದ ಭಾರತೀಯ ಸಂಗೀತ ವಿದ್ಯಾಲಯದಂತೆಯೇ, ರಹಿಮತ್ ಖಾನ್ ಅವರ ಅಭಿಮಾನಿಗಳು ಆರಂಭಿಸಿದ ಸಿತಾರ್ ರತ್ನ ಸಮಿತಿಯೂ ಅಷ್ಟೇ ಆಸ್ಥೆಯಿಂದ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಬಂದಿದೆ. ಎರಡೂ ಸಂಸ್ಥೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡುತ್ತಿವೆ.

ಅಚ್ಚುಕಟ್ಟಾದ ಆಯೋಜನೆಯಿಂದಾಗಿ ದಶಕಗಳಿಂದಲೂ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸಂಗೀತದಲ್ಲಿ ಅಪಾರ ಆಸಕ್ತಿಯುಳ್ಳ ರಾಘವೇಂದ್ರ ಆಯಿ ಈ ಸಮಿತಿಯ ಅಧ್ಯಕ್ಷರು. 1971ರಲ್ಲಿ ಎಲ್‌ಐಸಿ ನೌಕರಿಗಾಗಿ ಧಾರವಾಡಕ್ಕೆ ಬಂದ ಇವರು, ಸ್ಟೇಷನ್ ರಸ್ತೆ ಮಾರ್ಗದಲ್ಲಿ ನಿತ್ಯ ಕೇಳಿಸುವ ಸಿತಾರ್ ನಿನಾದಕ್ಕೆ ಮಾರುಹೋದರು. ನಾದವನ್ನು ಹಿಂಬಾಲಿಸಿ ನೇರವಾಗಿ ಈ ಸರಸ್ವತಿ ಆರಾಧಕರ ಮನೆ ಪ್ರವೇಶಿಸಿದರು. ರಹಿಮತ್ ಖಾನ್ ಅವರ ಮೊಮ್ಮಗ ಉಸ್ತಾದ್ ಬಾಲೇಖಾನ್ ಅವರ ಸ್ನೇಹದ ಮೂಲಕ ಈ ಸಮಿತಿಯ ಭಾಗವಾದವರು.ಸದಾನಂದ ಕನವಳ್ಳಿ, ಬಾಲೇಖಾನ್ ಅವರಂತಹ ಹಿರಿಯರ ನೇತೃತ್ವವೂ ಈ ಸಮಿತಿಗೆ ಸಿಕ್ಕಿದೆ.

1982ಕ್ಕೂ ಪೂರ್ವದಲ್ಲಿ ಒಂದು ದಿನಕ್ಕೆ ಸೀಮಿತವಾಗಿದ್ದಈ ಕಾರ್ಯಕ್ರಮ ನಂತರ ಮೂರು ದಿನಗಳಿಗೆ ವಿಸ್ತರಣೆಗೊಂಡಿತು. ರಾಜಾಶ್ರಯಕ್ಕೆ ಮಾತ್ರ ಸೀಮಿತವಾಗಿದ್ದ ಸಂಗೀತ ಎಲ್ಲರಿಗೂ ಮುಕ್ತವಾಗಬೇಕು ಎಂಬುದು ಈ ಸಂಗೀತೋತ್ಸವದ ಪ್ರಮುಖ ಆಶಯ. ಇಲ್ಲಿ ಕೇಳುಗರಿಗೆ ಯಾವುದೇ ಶುಲ್ಕವಿಲ್ಲ. ಈ ವೇದಿಕೆಯಲ್ಲಿ ಸಂಗೀತದ ರಸದೌತಣ ನೀಡುವ ಕಲಾವಿದರೂ ಪ್ರತಿಫಲಾಪೇಕ್ಷೆ ಇಲ್ಲದೇ ಕಾರ್ಯಕ್ರಮ ನೀಡುತ್ತಾರೆ. ಕಳೆದ 66 ವರ್ಷಗಳಿಂದ ನಿರಂತರವಾಗಿನಡೆಯುತ್ತಿದೆ. ರಹಿಮತ್‌ ಖಾನ್‌ ಅವರಿಗೆ ಗೌರವ ಸಲ್ಲಿಸುವ ಈ ಪರಿ ಅನನ್ಯವಾಗಿದೆ.

ರಹಿಮತ್‌ ಖಾನ್‌ ಅವರಿಂದ (ಮಧ್ಯದಲ್ಲಿರುವವರು) ಮಹಾರಾಷ್ಟ್ರದ ವಸಂತ ಪವಾರರಿಗೆ ಸಂಗೀತ ಪಾಠ
ರಹಿಮತ್‌ ಖಾನ್‌ ಅವರಿಂದ (ಮಧ್ಯದಲ್ಲಿರುವವರು) ಮಹಾರಾಷ್ಟ್ರದ ವಸಂತ ಪವಾರರಿಗೆ ಸಂಗೀತ ಪಾಠ

ರಹಿಮತ್ ಖಾನ್ ಅವರ ಮಗ ಕರೀಂ ಖಾನ್ ಅವರು ಮುಂಬೈ ಆಕಾಶವಾಣಿಯಲ್ಲಿ ನೌಕರಿಗೆ ಸೇರಿದ ನಂತರ ಅಲ್ಲಿಯೇ ನೆಲೆಸಿದ ಕಾರಣ ಆರು ವರ್ಷ ಪುಣೆಯಲ್ಲಿ ಸಂಗೀತೋತ್ಸವ ಆಯೋಜಿಸಲಾಗಿತ್ತು.ಆದರೆ ಮುಳಾಮಠ ನದಿಯ ಪ್ರವಾಹದಿಂದ ಪುಣೆ ಜಲಾವೃತಗೊಂಡ ಸಂದರ್ಭದಲ್ಲಿ ಕರೀಂ ಖಾನ್ ಮತ್ತು ಅವರ ಮಗ ಬಾಲೇಖಾನ್ ಧಾರವಾಡಕ್ಕೆ ಬಂದು ನೆಲೆಸಿದರು. ‘ಒಬ್ಬ ಜನಸಾಮಾನ್ಯನಿಗೂ ಸಂಗೀತ ಕಲಿಯುವ ಹಕ್ಕು ಇದೆ’ ಎಂಬ ರಹಿಮತ್ ಖಾನ್ ಅವರ ಧ್ಯೇಯನುಡಿಯನ್ನು ಚಾಚೂತಪ್ಪದೆ ಪಾಲಿಸಿದ ಅವರ ಮೊಮ್ಮಗ ಬಾಲೇಖಾನ್, ಸಂಗೀತೋತ್ಸವದಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮುಕುಟಮಣಿಗಳು ಎಂದೇ ಖ್ಯಾತರಾದ ಪಂಡಿತ್ ಮಲ್ಲಿಕಾರ್ಜುನ ಮನಸೂರ, ಪಂಡಿತ್ ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್‌, ಪಂಡಿತ್‌ ಬಸವರಾಜ ರಾಜಗುರು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲಾಗಿತ್ತು. ವಿಮರ್ಶಕ ಮೋಹನ ನಾಡಕರ್ಣಿ, ಸಾಹಿತಿ ಎಸ್.ಎಲ್‌.ಭೈರಪ್ಪ ಹಾಗೂ ಕಲಾಸಕ್ತ ರಾಜಕಾರಣಿ ಎಸ್‌.ಬಂಗಾರಪ್ಪ ಅವರನ್ನು ಆಹ್ವಾನಿಸಿ ಸಮಿತಿ ಸನ್ಮಾನಿಸಿತ್ತು.

ಧಾರವಾಡ ಘರಾಣೆಯನ್ನು ಹುಟ್ಟುಹಾಕಿದ ಕುಟುಂಬದಲ್ಲಿಇವರ ಸೋದರ ಸತೀಶ ಕುಮಾರ್‌ (ಗುಲಾಂ ಖಾದರ್‌ ಖಾನ್‌) ದೆಹಲಿಯ ಆಕಾಶವಾಣಿ ಕೇಂದ್ರ ನಿಲಯ ಸಿತಾರ್‌ ವಾದಕ, ಮತ್ತೊಬ್ಬರು ಉಸ್ತಾದ್‌ ದಸ್ತಗೀರ್‌ ಖಾನ್ ಸಿತಾರ್‌ ವಾದಕರಾಗಿದ್ದರು.ಇವರ ನಂತರದಲ್ಲಿ ಅಬ್ದುಲ್‌ ಕರೀಮ್‌ ಖಾನ್‌ ಅವರ ಒಂಬತ್ತು ಜನ ಪುತ್ರರಾದ ಉಸ್ಮಾನ್‌ ಖಾನ್‌, ಬಾಲೇ ಖಾನ್‌, ಮೆಹಬೂಬ್‌ ಖಾನ್‌, ನಜೀರ್ ಖಾನ್, ಮೆಹಮುದ್‌ ಖಾನ್‌, ಹೈಮದ್ ಖಾನ್‌, ಚೋಟೆ ರಹಿಮತ್ ಖಾನ್‌, ರಫೀಕ್‌ ಖಾನ್, ಶಫೀಕ್‌ ಖಾನ್ ಎಲ್ಲರೂ ಸಿತಾರ್‌ ವಾದಕರು. ರಹಿಮತ್‌ ಖಾನ್‌ ಅವರ ಕುಟುಂಬದ ನಾಲ್ಕನೇ ತಲೆಮಾರಿನ ರಯೀಸ್‌ ಖಾನ್, ಹಫೀಜ್‌ ಖಾನ್‌, ಹಮೀದ್‌ ಖಾನ್‌, ಅವರ ಮಕ್ಕಳಾದ ಮೊಹಸಿನ್‌ ಖಾನ್‌ ಸಿತಾರ್‌ ಪರಂಪರೆಯ ಜತೆಗೆ ಧಾರವಾಡ ಘರಾಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸಂಗೀತೋತ್ಸವದಲ್ಲಿಸಂಗೀತಾಸಕ್ತರು ಹಾಗೂ ಸಂಗೀತಗಾರರ ನಡುವೆ ನೇರ ಹಾಗೂ ಮುಕ್ತವಾಗಿ ಬೆರೆಯುವ ಅವಕಾಶವಿರುವುದರಿಂದ ಕೆಲವೊಮ್ಮೆ ಜಾಗವಿಲ್ಲದೆ ಸಂಗೀತಗಾರರ ಪಕ್ಕದಲ್ಲೇ ವೇದಿಕೆಯಲ್ಲೇ ಕುಳಿತು ಸಂಗೀತ ಆಲಿಸಿರುವ ಉದಾಹರಣೆಗಳೂ ಇವೆ. ಇಲ್ಲಿ ಅಪ್ಪಟ ಸಂಗೀತವಲ್ಲದೆ ಬೇರೇನೂ ಇರದು. ಸಂಗೀತಾಸಕ್ತರೂ ಸಂಗೀತವನ್ನಲ್ಲದೆ ಬೇರೇನನ್ನೂ ಬಯಸರು.

ಎಂ. ವೆಂಕಟೇಶ ಕುಮಾರ, ರುಕಿಯಾ ಖಾನ್ ದೇಶಮುಖ, ಮಧ್ಯಮಿ ದೇಶಮುಖ್‌
ಎಂ. ವೆಂಕಟೇಶ ಕುಮಾರ, ರುಕಿಯಾ ಖಾನ್ ದೇಶಮುಖ, ಮಧ್ಯಮಿ ದೇಶಮುಖ್‌

‘ಪ್ರಜಾವಾಣಿ’ ಆನ್‌ಲೈನ್‌ನಲ್ಲಿ ನೇರ ಪ್ರಸಾರ
ಸಿತಾರ್‌ ರತ್ನ ರಹಿಮತ್ ಖಾನ್ ಅವರ 66ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಇಂದು (ಭಾನುವಾರ)ಪಂಡಿತ್ ಎಂ. ವೆಂಕಟೇಶ ಕುಮಾರ ಅವರ ಸಂಗೀತ ಕಾರ್ಯಕ್ರಮ ಜರುಗಲಿದೆ. ಇದಕ್ಕೂ ಪೂರ್ವದಲ್ಲಿ ರುಕಿಯಾ ಖಾನ್ ದೇಶಮುಖ ಹಾಗೂ ಮಧ್ಯಮಿ ದೇಶಮುಖ ಅವರ ದ್ವಂದ್ವ ಸಿತಾರ್ ವಾದನ ಜರುಗಲಿದೆ. ಸಂಜೆ 5.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದ ನೇರ ಪ್ರಸಾರವನ್ನು facebook.com/prajavani.net ಮೂಲಕ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT