ಗುರುವಾರ , ಜನವರಿ 28, 2021
15 °C

ರಂಗಸಂಗೀತದ ಪಾರಿಜಾತ

ಅಣ್ಣಾಜಿ ಕೃಷ್ಣಾರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಸರಳ ಸಜ್ಜಿನಿಕೆಯ ಆರ್.ಪರಮಶಿವನ್ ನಾಡು ಕಂಡ ಅಪರೂಪದ ಕಲಾವಿದ. ನಡೆ-ನುಡಿಗಳೊಂದಿಗೆ ಏಕತೆಯನ್ನು ಹೊಂದಿ ಬಾಳಿನುದ್ದಕ್ಕೂ ಸಂಗೀತ ಮತ್ತು ನಾಟಕವನ್ನು ತಮ್ಮ ಉಸಿರಾಗಿಸಿಕೊಂಡವರು. ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಅನೇಕ ಹೊಸ ದಾಖಲೆಗಳನ್ನು ನಿರ್ಮಿಸಿ, ಸಂಗೀತ ಮತ್ತು ವೃತ್ತಿರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ವೃತ್ತಿ ರಂಗಭೂಮಿಯಲ್ಲಿ ಬಹಳಷ್ಟು ಹಾಡುಗಳಿಗೆ ಸಂಗೀತ ಸಂಯೋಜಿಸಿದವರು.

ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಬಹುರೂಪವಾಗಿ ಸೇವೆಯನ್ನು ಸಲ್ಲಿಸಿದವರು. ಸಂಗೀತ ಸಿದ್ಧಿಯನ್ನು ಪಡೆದಿದ್ದ ಅವರು, ವೃತ್ತಿ ರಂಗಭೂಮಿ ಮೂಲಕ ಕಲಾರಾಧನೆಯನ್ನು ಮಾಡಿದವರು. ಗಾಯಕರಾಗಿ, ವಾದಕರಾಗಿ, ನಾಟಕ ನಿರ್ದೇಶಕರಾಗಿ, ಸಂಘಟಕರಾಗಿ, ಸಂಗೀತ ಸಂಯೋಜಕರಾಗಿ, ಹೊಸರಾಗಗಳ ಅನ್ವೇಷಕರಾಗಿ ಪರಮಶಿವನ್‌ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು.

ಪರಮಶಿವನ್ ಅವರು (1931ರ ಸೆಪ್ಟೆಂಬರ್‌ 29) ಮೈಸೂರಿನಲ್ಲಿ ಜನಿಸಿದರು. ತಂದೆ ರಾಮಕೃಷ್ಣ, ತಾಯಿ ರುಕ್ಮಿಣಮ್ಮ. ಬಡತನ ಈ ಕುಟುಂಬವನ್ನು ಕಾಡುತ್ತಿತ್ತು. ಪರಮಶಿವನ್‌ ಅವರು ಓದಿದ್ದು ಪಿಯುಸಿವರೆಗೆ. ವಾದ್ಯಗಳನ್ನು ನುಡಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಉಮೇದು. ಆಸ್ಥಾನ ವಿದ್ವಾನ್ ದೇವೇಂದ್ರಪ್ಪನವರ ಬಳಿ ಸಂಗೀತ ಶಿಕ್ಷಣವನ್ನು ಪಡೆದರು. ಹಾಗೆಯೇ ಶಿವಪ್ಪ ಎಂಬ ಇನ್ನೊಬ್ಬ ಶಿಕ್ಷಕರಲ್ಲೂ ಸಂಗೀತ ಕಲಿತರು. ನಾಟಕ ಕಂಪನಿಗಳಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಹಿರಿಯ ಕಲಾವಿದರ ನೆರವಿನಲ್ಲಿ ತಮ್ಮ ವಿದ್ಯೆಗೆ ಸಾಣೆ ಹಿಡಿದರು. ಹಾಡುಗಾರಿಕೆಯಲ್ಲಿ, ವೀಣೆ ಮತ್ತು ಪಿಟೀಲು ವಾದನದಲ್ಲಿ ವಿದ್ವತ್ ಪದವಿಯನ್ನು ಪೂರೈಸಿದರು.

ಪರಮಶಿವನ್‌ ಅವರ ಹಾಡುಗಾರಿಕೆಯನ್ನು ಮೆಚ್ಚಿ, ಮದ್ರಾಸ್ ಆಕಾಶವಾಣಿ ಕೇಂದ್ರದವರು ಇವರಿಗೆ ಕಾರ್ಯಕ್ರಮ ನೀಡಲು ಅವಕಾಶ ನೀಡಿದ್ದರು. ನಂತರ 1952ರಿಂದ ಮೈಸೂರು ಆಕಾಶವಾಣಿ, ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕೂಡ ಅವರು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದರು. 1970ರಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಗೆ ಸೇರಿದ ಅವರು 1994ರಲ್ಲಿ ನಿವೃತ್ತಿಯನ್ನು ಹೊಂದಿದರು. 

ಪರಮಶಿವನ್ ಅವರು ಒಂದೇ ನಿರ್ದಿಷ್ಟ ಶೈಲಿಗೆ ಅಂಟಿಕೊಂಡವರಲ್ಲ. ಅವರು ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ರಂಗಸಂಗೀತ, ಸುಗಮಸಂಗೀತ, ಜನಪದ ಸಂಗೀತದ ಗಾಯಕ, ನಟ, ಹಾರ್ಮೋನಿಯಂ, ಪಿಟೀಲು ವಾದಕ, ವೀಣೆಯ ವೈಣಿಕ, ಸಂಗೀತ ನಿರ್ದೇಶಕ, ಸಂಗೀತ ಶಿಕ್ಷಕ, ಹೊಸ ರಾಗಗಳ ಸಂಯೋಜಕ... ಹೀಗೆ ರಂಗಭೂಮಿ ಮತ್ತು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.      

1948ರಲ್ಲಿ ರಾಜ್‍ಕುಮಾರ್‌ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು, ಮಕ್ಕಳೊಂದಿಗೆ ಕನಕಪುರದ ಗುರಿಕಾರರ ಮನೆಯಲ್ಲಿ ವಾಸವಾಗಿದ್ದರು. ಆ ದಿನಗಳಲ್ಲಿ ಗುರಿಕಾರರು ಕೊಟ್ಟ ರಾಗಿ ಹಿಟ್ಟನ್ನು ಮುದ್ದೆಮಾಡಿ ಪರಮಶಿವನ್, ಮುತ್ತುರಾಜು (ಡಾ.ರಾಜ್), ವರದರಾಜು, ಶಾರದಾ ಇವರೊಡನೆ ಒಟ್ಟಿಗೆ ಕುಳಿತು ‘ಹಂಚಿ ತಿನ್ನುವುದರಲ್ಲಿ ಆನಂದವಿರುತ್ತೆ ಕೂಸೇ’ ಎಂದು ಇವರಿಗೂ ಒಂದು ಪಾಲು ಕೊಟ್ಟು ತಿನ್ನಿಸುತ್ತಿದ್ದರಂತೆ. ಅಂದಿನಿಂದಲೂ ಪರಮಶಿವನ್ ಮತ್ತು ರಾಜ್‍ಕುಮಾರ್ ಗೆಳೆತನ ಇತ್ತು. ಕೊನೆಯವರೆಗೂ ಅವರ ಸ್ನೇಹ ಮುಕ್ಕಾಗದೆ ಉಳಿದಿತ್ತು.

ರಂಗಭೂಮಿಗಾಗಿಯೇ ಜನಿಸಿದ್ದರು ಎನ್ನುವಂತೆ ರಂಗಾಭಿನಯದ ಪ್ರಾಚೀನ ಪವಿತ್ರ ಪರಂಪರೆಯನ್ನು ಉಳಿಸಿ ಬೆಳಸಿದ ಹಿರಿಯ ಕಲಾವಿದರಾದ ಕೊಟ್ಟೂರಪ್ಪ, ಆರ್. ನಾಗೇಂದ್ರರಾವ್, ಸಿ.ಬಿ. ಮಲ್ಲಪ್ಪ, ಎಂ.ಎನ್. ಗಂಗಾಧರರಾವ್, ಎಂ. ಸುಬ್ಬರಾವ್, ಗುಬ್ಬಿ ವೀರಣ್ಣ, ಎಂ.ವಿ. ಸುಬ್ಬಯ್ಯನಾಯ್ಡು, ಸಿ. ಹೊನ್ನಪ್ಪ ಭಾಗವತರ್, ಜಿ. ನಾಗೇಶರಾವ್, ಕೆ. ಹಿರಣ್ಣಯ್ಯ, ಹೊಳಲಿ ಸುಬ್ರಹ್ಮಣ್ಯ ಶಾಸ್ತ್ರಿ ಶ್ರೀಕಂಠಮೂರ್ತಿ, ಬಿ. ಜಯಮ್ಮ, ಮಳವಳ್ಳಿ ಸುಂದರಮ್ಮ, ಬಳ್ಳಾರಿ ಲಲಿತಮ್ಮ ಮತ್ತು ಮಾಲತಮ್ಮನವರೇ ಮೊದಲಾದ ಕಂಚಿನ ಕಂಠದ ರಂಗಗೀತ ಸುಗಂಧ ಸಿಂಚನದ ಕಲಾನಿಧಿಗಳ ಸನ್ನಿಧಿಯಲ್ಲಿ, ಅವರ ರಂಗಗೀತ ಮಾಧುರ್ಯವನ್ನು ಪರಮಶಿವನ್ ಅನುಭವಿಸಿ ಆನಂದಿಸಿದ್ದರು. ಅವರ ಸಂಗಡ ಬಹು ಧೈರ್ಯದಿಂದ ಬಾಲ ಪಾತ್ರಗಳನ್ನು ಅಭಿನಯಿಸಿ, ಎಲ್ಲರ ಮನ ಗೆದ್ದಿದ್ದರು.

ಕರ್ನಾಟಕ ವೃತ್ತಿ ರಂಗಭೂಮಿಯ ಪ್ರಾಚೀನ ಪರಂಪರೆಯ ಸುಮೇರು ಸಂಸ್ಕೃತಿಯ ರಂಗಗೀತೆಗಳ ಪವಿತ್ರ ಪುಷ್ಪಮಾಲಿಕೆಯಲ್ಲಿ, ರಂಗಗೀತಗಾಯನದ ಪರಿಮಳದ ಪಾರಿಜಾತದಂತೆ ಕಂಗೊಳಿಸಿದವರು ಪರಮಶಿವನ್. ಅವರ ಸಂಗೀತ ಸಾಧನೆಯನ್ನು ಮೆಚ್ಚಿ, ಅವರ ಅಭಿಮಾನಿಗಳು ಅಭಿನಂದನಾ ಗ್ರಂಥವನ್ನೂ ಹೊರತಂದಿದ್ದಾರೆ. ಇದು ಆತ್ಮಕಥೆಯೂ ಹೌದು. ಲೇಖನಗಳ ಸಂಗ್ರಹವೂ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು